ಬೆಂಗಳೂರು | ಜನರ ಬಲಿಗಾಗಿ ಕಾದು ಕುಳಿತ ನರಭಕ್ಷಕ ರಸ್ತೆ ಗುಂಡಿಗಳು

Date:

  • ಕೋಲ್ಡ್ ಮಿಕ್ಸ್ ಡಾಂಬರು ಯಂತ್ರಗಳ ಬಳಕೆಯಿಲ್ಲದೆ ನಿರ್ವಹಿಸಬಹುದು
  • ಮೆಟ್ರೊ ಕಾಮಗಾರಿಯಿಂದ ರಸ್ತೆಗಳು ದೊಡ್ಡ ಗುಂಡಿಗಳಿಂದ ತುಂಬಿವೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಗಾಲಕ್ಕೂ ಮುನ್ನವೇ ಮಳೆ ಸುರಿಯುತ್ತಿದ್ದು, ನಗರದಲ್ಲಿ ಎಲ್ಲೆಂದರಲ್ಲಿ ಬಿದ್ದ ರಸ್ತೆಗುಂಡಿಗಳು ಜನರ ಬಲಿಗಾಗಿ ಕಾಯುತ್ತಿವೆ. ಕಳೆದ ಕೆಲವು ದಿನಗಳ ಹಿಂದೆ ರಸ್ತೆಗುಂಡಿ ಸಮಸ್ಯೆಯಿಂದ ಹಲವು ಜನ ಪ್ರಾಣ ಕಳೆದುಕೊಂಡಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೀಗ ನಗರದಲ್ಲಿರುವ ರಸ್ತೆಗುಂಡಿಗಳನ್ನು ಮುಚ್ಚಲು ಹರಸಾಹಸ ಪಡುವಂತಾಗಿದೆ. ಮುಂಗಾರು ಸಮೀಪಿಸುತ್ತಿದ್ದು, ರಸ್ತೆಗುಂಡಿ ಮುಚ್ಚಲು ಸಮಯಾವಕಾಶ ಕಡಿಮೆಯಿದೆ. ಮಳೆ ಸಂದರ್ಭದಲ್ಲಿ ರಸ್ತೆಗುಂಡಿಗಳು ನೀರಿನಿಂದ ತುಂಬಿಕೊಂಡು ವಾಹನ ಸವಾರರಿಗೆ ಪ್ರಾಣಾಪಾಯ ತಂದೊಡ್ಡಬಹುದು ಅಥವಾ ಅಪಘಾತಗಳಿಗೆ ಕಾರಣವಾಗಬಹುದು.

ಬೆಂಗಳೂರಿನಲ್ಲಿ ಮೆಟ್ರೊ ಕಾಮಗಾರಿಯಿಂದ ಹಲವಾರು ಪ್ರಮುಖ ರಸ್ತೆಗಳು ದೊಡ್ಡ ಗುಂಡಿಗಳಿಂದ ತುಂಬಿವೆ. ಚರಂಡಿ ಕಾಮಗಾರಿಗಳಿಂದ ನಗರದ ಹಲವು ರಸ್ತೆಗಳು ಹಾಳಾಗಿವೆ. ಮಳೆಯಾದರೆ ಈ ಗುಂಡಿಗಳಲ್ಲಿ ಮಳೆ ನೀರು ತುಂಬಿ ಅಪಘಾತಗಳು ಸಂಭವಿಸುತ್ತವೆ. ಬಿಬಿಎಂಪಿ ಇವಾಗಲೇ ಕಾರ್ಯೋನ್ಮುಖವಾಗದಿದ್ದಲ್ಲಿ, ಅಪಘಾತಗಳು ಸಂಭವಿಸಲಿವೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಬೆಂಗಳೂರಿನ ಗೋವಿಂದರಾಜನಗರದ ಒಂದನೇ ಮುಖ್ಯ ರಸ್ತೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಒಳಚರಂಡಿ ನಿರ್ಮಾಣಕ್ಕಾಗಿ ದೊಡ್ಡ ದೊಡ್ಡ ಪೈಪ್‌ಗಳನ್ನು ಹಾಕಿ, ಟಾರು ಹಾಕಿದ್ದಾರೆ. ಆದರೆ, ಕೇವಲ ಒಂದೇ ತಿಂಗಳಿಗೆ ರಸ್ತೆ ಮಧ್ಯೆ ದೊಡ್ಡ ಗುಂಡಿ ಬಿದ್ದಿದ್ದು, ವಾಹನ ಸಂಚಾರಕ್ಕೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಳೆದ ಒಂದು ವಾರದ ಹಿಂದೆ ರಸ್ತೆಯ ಮಧ್ಯೆ ಈ ಗುಂಡಿ ಬಿದ್ದಿದ್ದರೂ ಸಹ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ” ಎಂದು ಗೋವಿಂದರಾಜನಗರದ ನಿವಾಸಿ ರಂಗನಾಥ ಈ ದಿನ.ಕಾಮ್‌ಗೆ ಹೇಳಿದರು.  

“ಮಳೆಯಿಂದಾಗಿ ರಸ್ತೆ ಗುಂಡಿಗಳು ನಿರ್ಮಾಣವಾಗಿದ್ದು, ನಾಲ್ಕು ಚಕ್ರದ ವಾಹನಗಳು ಸಹ ಈ ರಸ್ತೆಗಳಲ್ಲಿ ಸಂಚರಿಸಲು ಕಷ್ಟವಾಗುತ್ತಿದೆ. ವಿಪರ್ಯಾಸವೆಂದರೆ ಈ ರಸ್ತೆಯು ಬೆಂಗಳೂರು ದಕ್ಷಿಣ ಸಂಸದ (ಲೋಕಸಭೆ) ತೇಜಸ್ವಿ ಸೂರ್ಯ ಅವರ ಕಚೇರಿಯ ಸಮೀಪದಲ್ಲಿದೆ. ಆದರೆ, ಮುಂಗಾರು ಪೂರ್ವ ಮಳೆಯಿಂದಾಗಿ ರಸ್ತೆಗಳನ್ನು ಡಾಂಬರೀಕರಣಗೊಳಿಸಲು ಬಿಬಿಎಂಪಿ ವಿಳಂಬ ಮಾಡುತ್ತಿದೆ. ದೊಡ್ಡ ಸಿಮೆಂಟ್ ಪೈಪುಗಳನ್ನು ಅಳವಡಿಸಲು ರಸ್ತೆಗಳನ್ನು ಅಗೆದು ನಂತರ ರಸ್ತೆಗಳಿಗೆ ಡಾಂಬರೀಕರಣ ಮಾಡಿಲ್ಲ” ಎಂದು ಜಯನಗರ 5ನೇ ಬ್ಲಾಕ್ ನಿವಾಸಿ ರಾಜಗೋಪಾಲ್ ಎ. ಹೇಳಿದರು.

“ಹೆಮ್ಮಿಗೆಪುರ ವಾರ್ಡ್‌ನ ವಸತಿ ಬಡಾವಣೆಗಳ ಒಳಗಿನ ರಸ್ತೆಗಳ ಡಾಂಬರೀಕರಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ರಸ್ತೆಗಳ ಗುಣಮಟ್ಟ ತೀರಾ ಕಳಪೆಯಾಗಿದ್ದು, ಮಳೆಯನ್ನು ತಡೆದುಕೊಳ್ಳಲು ಶಕ್ತಿ ಕೂಡ ರಸ್ತೆಗಳಿಗಿಲ್ಲ” ಎಂದು ಬನಶಂಕರಿ 6ನೇ ಹಂತದ ನಿವಾಸಿ ವಾಜಪೇಯಂ ಶ್ರೀವತ್ಸ ಆರೋಪಿಸಿದರು.

“ಮಾನ್ಸೂನ್ ಸಮಯದಲ್ಲಿ ರಸ್ತೆ ಗುಂಡಿಗಳು ನೀರಿನಿಂದ ತುಂಬುತ್ತವೆ. ಬಿಬಿಎಂಪಿ ಅಧಿಕಾರಿಗಳು ಬಿಡಿಎ ಕಡೆಗೆ ಬೆರಳು ಮಾಡಿ ತೋರಿಸುತ್ತಾರೆ. ಲೇಔಟ್ ಅಭಿವೃದ್ಧಿಯಾಗುತ್ತಿದ್ದಂತೆ ಹೊಸದಾಗಿ ಡಾಂಬರೀಕರಣ ಮಾಡುವಾಗ ಗುಂಡಿಗಳನ್ನು ಸರಿಪಡಿಸಲಾಗುವುದು ಎಂದು ಬಿಡಿಎ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿವಾಸಿಗಳು ತೊಂದರೆ ಅನುಭವಿಸಬೇಕಾಗಿದೆ” ಎಂದರು.

ಕೆಂಗೇರಿ ಸ್ಯಾಟಲೈಟ್‌ ಟೌನ್‌ನ ಬಂಡೆ ಮಠದ ನಿವಾಸಿ ಪವಿತ್ರಾ ಪವಾರ್‌ ಮಾತನಾಡಿ, “ಅಭಿವೃದ್ಧಿಯಾಗದ ಬಡಾವಣೆಯಲ್ಲಿ ಗುಂಡಿಗಳು ತುಂಬಿವೆ. ಸೈಕ್ಲಿಂಗ್ ಮಾಡುವ ಮಕ್ಕಳು ಆಗಾಗ್ಗೆ ಸ್ಕಿಡ್ ಆಗಿ ಬೀಳುತ್ತಾರೆ. ಹಲವು ವರ್ಷಗಳಿಂದ ರಸ್ತೆಯ ಸ್ಥಿತಿ ಇದೇ ರೀತಿ ಇದ್ದು, ಈ ಜಾಗವನ್ನು ಬಿಬಿಎಂಪಿಗೆ ಹಸ್ತಾಂತರಿಸಿದರೂ ಪರಿಸ್ಥಿತಿ ಬದಲಾಗಿಲ್ಲ. ಮಳೆಯ ಸಮಯದಲ್ಲಿ, ಅನೇಕ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವುದು ಸಾಧ್ಯವಾಗುವುದಿಲ್ಲ. ನಿವಾಸಿಗಳು ತಮ್ಮ ವಾಹನಗಳನ್ನು ಈ ರಸ್ತೆಗಳಲ್ಲಿ ಬಳಸುವ ಮೊದಲು ಎರಡು ಬಾರಿ ಯೋಚಿಸಿ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರಿಗೆ ಅಗತ್ಯವಿದೆ 658 ಕಿ.ಮೀ ಒಳಚರಂಡಿ

ಕಳೆದ ವರ್ಷ ರಸ್ತೆ ಗುಂಡಿಗಳಿಂದ ನಗರದಲ್ಲಿ ಮೂವರು ಸಾವನ್ನಪ್ಪಿದ್ದರು. ಬಳಿಕ ಬಿಬಿಎಂಪಿಯನ್ನು ಸರ್ಕಾರ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಪೌರಕಾರ್ಮಿಕರು ಗುಂಡಿಗಳಿಗೆ ತೇಪೆ ಕಾರ್ಯ ಆರಂಭಿಸಿದರು. ಗುಂಡಿ ಸರಿಪಡಿಸುವುದು ನಿರಂತರ ಪ್ರಕ್ರಿಯೆ ಎಂದು ಬಿಬಿಎಂಪಿ ಹೇಳುತ್ತಿದ್ದು, ಫಿಕ್ಸ್‌ ಮೈ ಸ್ಟ್ರೀಟ್ ಆಪ್‌ನಲ್ಲಿ ದೂರು ಬಂದಾಗ, ಕಾರ್ಮಿಕರು ಗುಂಡಿಗಳನ್ನು ತುಂಬುತ್ತಾರೆ.

ಬಿಬಿಎಂಪಿಯ ಮುಖ್ಯ ಇಂಜಿನಿಯರ್ (ರಸ್ತೆ ಮೂಲಸೌಕರ್ಯ) ಬಿ.ಎಸ್. ಪ್ರಹ್ಲಾದ್ ಮಾತನಾಡಿ, “ರಸ್ತೆಗುಂಡಿ ಮುಚ್ಚುವುದು ವರ್ಷಪೂರ್ತಿ ಮಾಡುವಂತಹ ಸಾಮಾನ್ಯ ಕೆಲಸವಾಗಿದೆ. ಪಾಲಿಕೆಯೂ ಕೋಲ್ಡ್ ಮಿಕ್ಸ್ ಡಾಂಬರೀಕರಣ ತಂತ್ರಜ್ಞಾನದೊಂದಿಗೆ ಬಂದಿದೆ. ಕೋಲ್ಡ್ ಮಿಕ್ಸ್ ಡಾಂಬರು ಯಂತ್ರಗಳ ಬಳಕೆಯಿಲ್ಲದೆ ನಿರ್ವಹಿಸಬಹುದು. ಬಿಬಿಎಂಪಿಯು ಕೋಲ್ಡ್ ಮಿಕ್ಸ್ ಪ್ಲಾಂಟ್ ಅನ್ನು ಸಹ ಸ್ಥಾಪಿಸಿದ್ದು, ಮಳೆ ಮತ್ತು ಗಾಳಿಯಿಂದ ರಕ್ಷಿಸಲು ಶೀಘ್ರದಲ್ಲೇ ಶೆಲ್ಟರ್ ನಿರ್ಮಿಸಲಾಗುವುದು” ಎಂದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು |ತಲಾ ₹1 ಲಕ್ಷ ದಂಡ ಬಾಕಿ ಉಳಿಸಿಕೊಂಡಿವೆ 123 ವಾಹನಗಳು

ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿ, ಹೆಚ್ಚು ದಂಡಕ್ಕೆ ಗುರಿಯಾಗಿರುವ ವಾಹನಗಳನ್ನು...

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಡೀ ದಿನ ಕಳೆದೆ ಎಂದು ಸುಳ್ಳು ಹೇಳಿದ ಯೂಟ್ಯೂಬರ್‌ ಬಂಧನ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿ ವಿಡಿಯೋ ರೆಕಾರ್ಡ್ ಮಾಡಿ...

ಯಾವುದೇ ಆಮೀಷ, ಪ್ರೇರೇಪಣೆಗಳಿಗೆ ಒಳಗಾಗದೆ ಮತ ಚಲಾಯಿಸಿ: ತುಷಾರ್ ಗಿರಿನಾಥ್

ಪ್ರತಿಯೊಬ್ಬ ಯುವ ಮತದಾರರು ಚುಣಾವಣಾ ರಾಯಭಾರಿಗಳಾಗಿದ್ದು, ಯಾವುದೇ ಆಮೀಷ, ಪ್ರೇರೇಪಣೆಗಳಿಗೆ ಒಳಗಾಗದೆ...

ಬೆಂಗಳೂರು | ಕೈಬಿಟ್ಟ 1,412 ವಾಹನಗಳ ಪೈಕಿ 918 ವಾಹನಗಳ ವಿಲೇವಾರಿ

ರಾಜ್ಯ ರಾಜಧಾನಿ ಬೆಂಗಳೂರಿನ ಸಂಚಾರ ಪೊಲೀಸ್ ಠಾಣೆಗಳಲ್ಲಿ ರಚಿಸಲಾದ ವಿಶೇಷ ತಂಡಗಳು...