ವಿಧಾನಸಭಾ ಚುನಾವಣೆಯಲ್ಲಿ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧನಕ್ಕೊಳಗಾಗಿ ಸಿಸಿಬಿ ಪೊಲೀಸರ ವಿಚಾರಣೆ ಎದುರಿಸುತ್ತಿರುವ ಆರೋಪಿ ಚೈತ್ರಾ ಕುಂದಾಪುರ ವಿರುದ್ಧ ಬ್ರಹ್ಮಾವರ ತಾಲ್ಲೂಕಿನ ಕೋಟ ಠಾಣೆಯಲ್ಲಿ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ.
ಸುದಿನ ಎಂಬುವವರು ದೂರು ನೀಡಿದ ವ್ಯಕ್ತಿ. ಇವರು ಮೂಲತಃ ಬ್ರಹ್ಮಾವರ ತಾಲೂಕು ಕೋಡಿ ನಿವಾಸಿ. ಇವರು ಮೀನು ವ್ಯಾಪಾರವನ್ನು ನಡೆಸುತ್ತಿದ್ದರು.
ಆರೋಪಿ ಚೈತ್ರಾ ಕುಂದಾಪುರ ಸುದಿನ ಅವರಿಂದ ₹5 ಲಕ್ಷ ಪಡೆದು ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ನಂಬಿಸಿದ್ದಾರೆ. ಬಳಿಕ ಬಟ್ಟೆ ಅಂಗಡಿಯನ್ನು ಹಾಕಿಕೊಡದೆ, ಹಣವನ್ನು ಹಿಂತಿರುಗಿಸದೆ ಜೀವ ಬೆದರಿಕೆ ಹಾಕಿ ವಂಚಿಸಿದ್ದಾರೆ ಎಂದು ದೂರಲಾಗಿದೆ.
ದೂರು ನೀಡಿದ ಸುದಿನ
ಸುದಿನ ಎಂಬವರಿಗೆ ಬಟ್ಟೆ ಅಂಗಡಿ ಹಾಕಿಕೊಡುವುದಾಗಿ ನಂಬಿಸಿ, ಸುಮಾರು ಐದು ಲಕ್ಷ ರೂ. ಪಡೆದು ಬಟ್ಟೆ ಅಂಗಡಿಯನ್ನು ಹಾಕಿ ಕೊಡದೆ ಹಣವನ್ನು ಮರಳಿಸದೆ, ಜೀವ ಬೆದರಿಕೆ ಹಾಕಿ ವಂಚಿಸಿ, ವಿಶ್ವಾಸ ದ್ರೋಹ ಎಸಗಿರುವುದಾಗಿ ದೂರಲಾಗಿದೆ.
ಸುದಿನ ಎಂಬುವವರಿಗೆ 2015ರಲ್ಲಿ ಚೈತ್ರಾ ಕುಂದಾಪುರ ಪರಿಚಯವಾಗಿತ್ತು. ಸುದಿನ ಅವರು ಕೂಡ ಬಿಜೆಪಿ ಕಾರ್ಯಕರ್ತ ಎಂದು ತಿಳಿದುಬಂದಿದೆ. ಚೈತ್ರಾ ಸುದಿನ ಬಳಿ ತಾನು ಬಿಜೆಪಿ ಪಕ್ಷದ ಉನ್ನತ ಸ್ಥಾನದಲ್ಲಿದ್ದೇನೆ. ನನಗೆ ಹಲವು ಮಂತ್ರಿಗಳು, ಸಚಿವರು ಹಾಗೂ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೊಂಡಿದ್ದಳು.
“ಚೈತ್ರಾ ಕುಂದಾಪುರ ಉಡುಪಿ ಹಾಗೂ ಕೋಟದಲ್ಲಿ ಬಟ್ಟೆ ಅಂಗಡಿ ಹಾಕಿಕೊಡುವುದಾಗಿ ಸುದಿನಗೆ ತಿಳಿಸಿದ್ದಳು. ನಂತರ 2018 ರಿಂದ 2023ರವರೆಗೆ ಪದೇಪದೆ ಕರೆ ಮಾಡಿ ಸುದಿನ ಅವರಿಂದ ಸುಮಾರು ₹5 ಲಕ್ಷ ಪಡೆದಿದ್ದಾಳೆ. ಈ ಹಣವನ್ನು ಸುದಿನ ಅವರು ತಮ್ಮ ವಿಜಯವಾಡ ಶಾಖೆಯ ಕೋಟಕ್ ಮಹಿಂದ್ರ ಬ್ಯಾಂಕ್ ಹಾಗೂ ಕರ್ಣಾಟಕ ಬ್ಯಾಂಕ್ ಸಾಸ್ತಾನ ಶಾಖೆಯ ಖಾತೆಯಿಂದ ಸುಮಾರು ₹3 ಲಕ್ಷ ಹಣವನ್ನು ಚೈತ್ರಾಳಿಗೆ ವರ್ಗಾವಣೆ ಮಾಡಿದ್ದು, ಇನ್ನುಳಿದ ₹2 ಲಕ್ಷ ಹಣವನ್ನು ನಗದು ರೂಪದಲ್ಲಿ 2023ರ ವರೆಗೆ ಚೈತ್ರಾಳಿಗೆ ನೀಡಿದ್ದೇನೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ.
“ಅಂಗಡಿ ಬಗ್ಗೆ ಚೈತ್ರಾಳ ಬಳಿ ಕೇಳಿದಾಗ ಪ್ರತಿ ಬಾರಿಯೂ ಸ್ಥಳೀಯ ಮುಖಂಡರಲ್ಲಿ ಮಾತುಕತೆ ನಡೆದಿದೆ. ಅಂತಿಮ ಹಂತದಲ್ಲಿದೆ ಎಂದು ಹೇಳಿ ನಂಬಿಸಿದ್ದಳು. ಬಳಿಕ ಚೈತ್ರಾ ಚುನಾವಣಾ ಪ್ರಚಾರ, ನಾನಾ ಕಡೆ ಭಾಷಣ-ಪ್ರವಚನ, ಕಾರ್ಯಕಾರಿಣಿ ಸಭೆ, ಪಕ್ಷದ ಮುಖಂಡರ ಭೇಟಿ ಇವೆಲ್ಲವನ್ನು ನೆಪವಾಗಿ ಮುಂದಿಟ್ಟು, ದಿನಗಳನ್ನು ಮುಂದೂಡುತ್ತಾ ಬಂದರು. ಮತ್ತೆ ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 553 ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ಗಳ ಮೇಲೆ ದಾಳಿ ನಡೆಸಿದ ಸಿಸಿಬಿ
ಇಷ್ಟು ದಿನ ಕಳೆದರೂ ಚೈತ್ರಾ ಅಂಗಡಿ ಹಾಕಿಸಿ ಕೊಡಲಿಲ್ಲ. ಇದರಿಂದ ಅವರ ಮೇಲೆ ಅನುಮಾನಗೊಂಡು ನನಗೆ ಬಟ್ಟೆ ಅಂಗಡಿ ಹಾಕಿಸಿಕೊಡುವಂತೆ ಕೇಳಿದೆ. ಅಂಗಡಿ ಹಾಕಿಕೊಡದಿದ್ದರೆ, ನೀಡಿದ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದೆ. ಆದರೆ, ಚೈತ್ರಾ ಅವರು ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ, ಗೂಂಡಾಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರು. ಕೆಲವು ದಿನಗಳ ಹಿಂದೆ ಚೈತ್ರಾ ಇನ್ನಷ್ಟು ಜನರಿಗೆ ವಂಚನೆ ಮಾಡಿದ ಬಗ್ಗೆ ಮಾಧ್ಯಮದಲ್ಲಿ ನೋಡಿದೆ. ಚೈತ್ರಾ ನನಗೂ ಕೂಡ ಮೋಸ ಮಾಡಿ, ಹಣವನ್ನು ಲಪಟಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.