ನಮ್ ಜನ | ಸಕಲೆಂಟು ಸಾಮಾನು ಮಾರುವ ಸೈಕಲ್ ಸಿದ್ದೇಗೌಡ್ರು

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)

ಜೀವವಿಲ್ಲದ ಸೈಕಲ್‌ಗೂ ಜೀವ ಬರಿಸುವ ವ್ಯಕ್ತಿ ಸೈಕಲ್ ಸಿದ್ದೇಗೌಡರು. ದೊಗಳೆ ಪ್ಯಾಂಟು-ಶರಟು ತೊಟ್ಟು, ಕಾಲಿಗೆ ಚಪ್ಪಲಿ ಧರಿಸಿ, ಕೊರಳಿಗೊಂದು ಟವಲ್ ಹಾಕಿಕೊಂಡು, ಕೈಯಲ್ಲಿ ಸೈಕಲ್ ಹ್ಯಾಂಡಲ್ ಹಿಡಿದು ನಡೆದರೆ – ಅವರಿರುವ ಆಳ್ತನಕ್ಕೂ ಮೀರಿದ ಕೀರಲು ದನಿಯಲ್ಲಿ ಕೂಗಿದರೆ – ಮನೆಯೊಳಗಿರುವ ಮಹಿಳೆಯರು ಬೀದಿಗೆ ಬರುತ್ತಾರೆ. ತಪ್ಪದೆ ಸೊಪ್ಪು ಕೊಳ್ಳುತ್ತಾರೆ.

“ಸೊಪ್ಪೋ… ಕಾಸಿ ಸೊಪ್ಪೊ, ಅಗಸೆ ಸೊಪ್ಪೊ, ನುಗ್ಗೇ ಸೊಪ್ಪೊ…” ಕೀರಲು ಧ್ವನಿ ಕೇಳುಗರಿಗೆ ಕೊಂಚ ಕಿರಿಕಿರಿ ಎನಿಸಿದರೂ, ಇರುವ ಕೆಲಸ ಬಿಟ್ಟು ಕೂಗು ಬಂದ ಕಡೆ ನೋಡಬೇಕೆನಿಸುತ್ತದೆ. ನೋಡಿದರೆ, ರಸ್ತೆಯಲ್ಲಿ ಜೀವವಿಲ್ಲದ ಸೈಕಲ್ ತಳ್ಳಿಕೊಂಡು ಹೋಗುತ್ತಿರುವ, ಸೈಕಲ್‌ನಂತೆಯೇ ಇರುವ ವ್ಯಕ್ತಿ ಕಾಣಿಸುತ್ತಾರೆ. ಚೈನು ಕಳಚಿಕೊಂಡಿದೆ, ಪೆಡಲ್ ಮುರಿದಿದೆ, ತುಕ್ಕು ಹಿಡಿದಿದೆ. ತಿರುಗಲು ಎರಡು ಚಕ್ರ ಮತ್ತು ಹಿಡಿಯಲು ಹ್ಯಾಂಡಲ್ ಬಿಟ್ಟರೆ ಬೇರೇನೂ ಇಲ್ಲದಾಗಿದೆ. ಅಂತಹ ಜೀವವಿಲ್ಲದ ಸೈಕಲ್‌ಗೂ ಜೀವ ಬರಿಸುವ ವ್ಯಕ್ತಿ ಸೈಕಲ್ ಸಿದ್ದೇಗೌಡರು. ದೊಗಳೆ ಪ್ಯಾಂಟು-ಶರಟು ತೊಟ್ಟು, ಕಾಲಿಗೆ ಚಪ್ಪಲಿ ಧರಿಸಿ, ಕೊರಳಿಗೊಂದು ಟವಲ್ ಹಾಕಿಕೊಂಡು, ಕೈಯಲ್ಲಿ ಸೈಕಲ್ ಹ್ಯಾಂಡಲ್ ಹಿಡಿದು ನಡೆದರೆ – ಅವರಿರುವ ಆಳ್ತನಕ್ಕೂ ಮೀರಿದ ಕೀರಲು ದನಿಯಲ್ಲಿ ಕೂಗಿದರೆ – ಮನೆಯೊಳಗಿರುವ ಮಹಿಳೆಯರು ಬೀದಿಗೆ ಬರುತ್ತಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಿದ್ದೇಗೌಡರ ಸೈಕಲ್ಲಿನಲ್ಲಿ ಸಿಗದ ಸಾಮಾನೇ ಇಲ್ಲ. ಎರಡು ಹ್ಯಾಂಡಲ್‌ಗಳಿಗೆ ದೊಡ್ಡದಾದ ಆರು ಪ್ಲಾಸ್ಟಿಕ್ ಬ್ಯಾಗ್ ತೂಗು ಹಾಕಿರುತ್ತಾರೆ. ಆ ಬ್ಯಾಗ್‌ಗಳಲ್ಲಿ, ಹಸಿ ಮೆಣಸಿನಕಾಯಿ, ನಿಂಬೇಹಣ್ಣು, ಶುಂಠಿ, ಕರಿಬೇವು, ಕೊತ್ತಂಬರಿ, ಪುದೀನ ಸೊಪ್ಪುಗಳಿವೆ. ಮತ್ತೊಂದು ಕಡೆ, ರೋಜಾ, ಸೇವಂತಿಗೆ, ಜಾಜಿ, ಮಲ್ಲಿಗೆ, ಕನಕಾಂಬರ ಬಿಡಿ ಹೂವುಗಳಿವೆ. ಸೈಕಲ್ ಮುಂದಿನ ಬುಟ್ಟಿಯಲ್ಲಿ ಬೇವಿನ ಸೊಪ್ಪಿದೆ. ಜೊತೆಗೆ ಒಂದಷ್ಟು ಪ್ಲಾಸ್ಟಿಕ್ ಬ್ಯಾಗ್‌ಗಳಿವೆ. ಒಂದು ಬಾಟಲ್ ನೀರಿದೆ. ಸೊಪ್ಪು ಮತ್ತು ಹೂಗಳ ಮೇಲೆ ಆಗಾಗ ನೀರು ಚುಮುಕಿಸಿ ಫ್ರೆಷ್ ಆಗಿ ಕಾಣುವಂತೆ ಮಾಡುತ್ತಾರೆ. ಹಿಂದಿನ ಕ್ಯಾರಿಯರ್ ನಲ್ಲಿ ದೊಡ್ಡದಾದ ಮರದ ತಾಟಿನಲ್ಲಿ ಎಲ್ಲಿಯೂ ಸಿಗದ ಅಪರೂಪದ ಕಾಸಿ, ಅಗಸೆ, ಒಂದೆಲೆಗ, ಚಕ್ಕೋತ, ನುಗ್ಗೆ ಸೊಪ್ಪುಗಳಿದ್ದು, ಅದರ ಮೇಲೆ ಗೋಣಿ ತಾಟು ಮುಚ್ಚಲಾಗಿದೆ. ಮತ್ತೊಂದು ಮಗ್ಗುಲಿಗೆ ಅರಿವೆ, ದಂಟು, ಸಬ್ಬಕ್ಕಿ, ಮೆಂತ್ಯ, ಪಾಲಾಕು ಸೊಪ್ಪುಗಳಿವೆ.

ಇವೆಲ್ಲವೂ ಮಹಿಳೆಯರಿಗೆ ಬೇಕಾದ, ಪ್ರತಿದಿನದ ಅಡುಗೆಯಲ್ಲಿ ಬಳಕೆಯಾಗುವ ವಸ್ತುಗಳು. ಮನೆ ಬಿಟ್ಟು ಹೋಗಲಿಕ್ಕಾಗದ ಹೆಂಗಸರು, ಮಗುವಿರುವ ಬಾಣಂತಿ ಮಹಿಳೆಯರು, ವಯಸ್ಸಾದ ವೃದ್ಧರು, ಅಂಗಡಿಗೆ ಹೋಗಲಾಗದವರು, ಆನ್ ಲೈನ್ ಗೊತ್ತಿಲ್ಲದವರು ಮನೆ ಬಾಗಿಲಿಗೇ ಬರುವ ಸಿದ್ದೇಗೌಡರಿಗಾಗಿ ಕಾದು ಕೂತಿರುತ್ತಾರೆ.

ಸಿದ್ದೇಗೌಡರ ಕೀರಲು ದನಿ ಕೇಳಿ, ಅವರ ಮಾತು ಮತ್ತು ವರ್ತನೆಗೆ ಮರುಳಾಗಿ ಮನೆಯಿಂದ ಹೊರಬಂದು ರಸ್ತೆಗಿಳಿದವರು ಬರಿಗೈನಲ್ಲಿ ಹೋಗಿದ್ದೇ ಇಲ್ಲ. ಸಿದ್ದೇಗೌಡರ ಸೊಪ್ಪಿನ ವ್ಯಾಪಾರ ಶ್ರೀಮಂತರಿಗಲ್ಲ, ಅವರು ಬಂದು ಖರೀದಿಸಿದರೆ ಬೇಡವೆನ್ನುವುದಿಲ್ಲ. ಗೌಡರ ಗಿರಾಕಿಗಳು ಬಡ-ಮಧ್ಯಮ ವರ್ಗದವರು, ಅವನ್ನೆಂದೂ ಬಿಡುವುದಿಲ್ಲ. ಆ ಕಾರಣಕ್ಕಾಗಿ ಅವರು ಐದು ರೂಪಾಯಿಗೊಂದು ಕಟ್ಟಿನಂತೆ, ಸಣ್ಣ-ಸಣ್ಣ ಕಟ್ಟು ಕಟ್ಟಿರುತ್ತಾರೆ. ಮಹಿಳೆಯರು ಸಾಮಾನ್ಯವಾಗಿ ಚೌಕಾಸಿ ಮಾಡುವ ಸ್ವಭಾವದವರಾದ್ದರಿಂದ, ಐದು ರೂಪಾಯಿಗೆ ಶುಂಠಿ ಕೇಳಿದರೂ ಕೊಡುತ್ತಾರೆ.

ಸಿದ್ದೇಗೌಡ್ರು ನಮ್ ಜನ ಬಸವರಾಜು ಮೇಗಲಕೇರಿ

“ಯಾಪಾರ ಮುಖ್ಯ. ಆದ್ರೆ ಅದ್ಕಿಂತ್ಲು ನಾನ್ ಬತ್ತಿನಿ ಅಂತ ಕಾಯ್ತರಲ್ಲ, ಆ ನಂಬ್ಕೆ ಮುಖ್ಯ. ಅದ್ಕೆ ಏನ್ ಕೊಟ್ರು ಸಾಲ್ದು ಬುಡಿ,” ಎನ್ನುತ್ತಾರೆ.

47ರ ಹರೆಯದ ಸಿದ್ದೇಗೌಡರದು ಕನಕಪುರ ತಾಲೂಕಿನ ಕುರುಬರಹಳ್ಳಿ. ಊರಲ್ಲಿ ಮನೆಯಿದೆ, ಒಂದೆಕರೆ ಜಮೀನಿದೆ. ಆದರೆ ನೀರಿಲ್ಲ, ಬೆಳೆ ಬರುವುದಿಲ್ಲ. ಎಸ್ಎಸ್ಎಲ್ಸಿವರೆಗೆ ಓದಿರುವ ಸಿದ್ದೇಗೌಡರು, ಓದುವಾಗಲೇ ಅಪ್ಪನ ಹಳ್ಳಿ ಹೋಟೆಲಿನಲ್ಲಿ ಬಾಲಕಾರ್ಮಿಕನಾಗಿ ದುಡಿದವರು. “ಹತ್ ಪೈಸ್ಕೊಂದ್ ಬೋಂಡ, ನಾಕಾಣಿಗೊಂದು ದ್ವಾಸೆ ಉಯ್ತಿದ್ದೋ… ಅಪ್ಪ ತೀರೋದ್ರು, ಹೋಟ್ಲು ಮುಚ್ಕತ್ತು,” ಎನ್ನುವ ಸಿದ್ದೇಗೌಡರು, ಅಲ್ಲಿಂದ ಮನೆಯ ಜವಾಬ್ದಾರಿ ಹೊರುವ ಮನೆಮಗನಾದರು. “ಕೂಲಿಗೆ ಹೋಗನ ಅಂದ್ರೆ, ದಿನಕ್ಕೆ ಹದಿನೈದರಿಂದ ಇಪ್ಪತ್ತು ರೂಪಾಯಿ ಸಿಗ್ತಿತ್ತು. ಅದರಲ್ಲಿ ಏನ್ಮಾಡಿರಾ?” ಎಂದು ಪ್ರಶ್ನೆ ಹಾಕಿದರು.

ಇದರ ನಡುವೆಯೇ ಸಿದ್ದೇಗೌಡರು, ಇದ್ದೊಬ್ಬ ತಂಗಿಗೆ ಮದುವೆ ಮಾಡಲು ನೋಡಿದರು. ಕೈಯಲ್ಲಿ ಕಾಸಿರಲಿಲ್ಲ, ಸಾಲ ಮಾಡಿದರು. ಬಡ್ಡಿ ಬೆಳೆಯುತ್ತ ಹೋದಾಗ ಊರು ಬಿಟ್ಟರು. ಉದ್ಯೋಗ ಅರಸಿ ಬೆಂಗಳೂರಿಗೆ ಬಂದರು.

“ಊರ್ ಬುಟ್ ಬಂದೆ, ಕೆಲ್ಸಿಲ್ಲ. ಪರಿಚಯದೋರ ಮನೇಲಿ ಉಂಡು, ಹಂಗೇ ತಿರಗಾಡ್ಕಂಡು ಹೊಂಟೆ. ಅಲ್ಲೊಂದು ಅಣ್ ಅಂಗಡಿ ಕಾಣುಸ್ತು. ಅಣ್ ಅಂಗ್ಡಿ ಇಟ್ರೆ ಹ್ಯಂಗೆ ಅಂತ ಯೋಚ್ನೆ ಬಂತು. ಜೋಬಲ್ಲಿ ನೂರ್ ರೂಪಾಯಿ ದುಡ್ಡಿತ್ತು. ಒಂದ್ ಬುಟ್ಟಿ ಅಣ್ ತಂದು ರಸ್ತೆ ಬದಿನಲ್ಲಿ ಕುಂತೆ,” ಎನ್ನುವ ಸಿದ್ದೇಗೌಡರು, ಕಷ್ಟಪಟ್ಟು ಇಟ್ಟುಮಡುವಿನಲ್ಲೊಂದು ಜಾಗ ಗುರುತಿಸಿ, ಹಣ್ಣಿನ ಗಾಡಿ ಮಾಡಿದರು.

ಸಿಟಿ ಮಾರ್ಕೆಟ್ಟಿನಿಂದ ಖರೀದಿಸಿದರೆ ಸಾರಿಗೆ ಎಲ್ಲ ಸೇರಿ, ಬೆಲೆ ಹೆಚ್ಚಾಗಿ ಕೊಳ್ಳುವವರಿಗೆ ಕಷ್ಟವಾಗುತ್ತದೆ ಎಂದು ಭಾವಿಸಿ, ಹಳ್ಳಿ ಕಡೆ ಹೊರಟರು. ಅಲ್ಲಿ ಸಿಗುವ ಸೀಬೆ, ದಾಳಿಂಬೆ, ಪಪ್ಪಾಯಿ, ಸಪೋಟ, ಮಾವು, ನೇರಳೆ ಹಣ್ಣುಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ತಂದು ಮಾರಾಟ ಮಾಡತೊಡಗಿದರು.

ಸುಮಾರು ಇಪ್ಪತ್ತು ವರ್ಷಗಳ ಕಾಲ, ನಿದ್ದೆ, ಮನರಂಜನೆ, ವೈಯಕ್ತಿಕ ತೆವಲುಗಳನ್ನು ತೆಗೆದು ಪಕ್ಕಕ್ಕೆ ಇಟ್ಟು ಹಣ್ಣಿನ ವ್ಯಾಪಾರದ ಕಡೆ ಗಮನ ಕೊಟ್ಟರು. ಸಣ್ಣದಾಗಿ ಶುರು ಮಾಡಿದ ಬುಟ್ಟಿ ವ್ಯಾಪಾರ, ಅಂಗಡಿಯ ಮಟ್ಟಕ್ಕೆ ಬೆಳೆಯಿತು. ಸಿದ್ದೇಗೌಡರ ಹಣ್ಣಿನ ಅಂಗಡಿ ಎಂದರೆ ಭಾರೀ ವ್ಯಾಪಾರದ ಮಳಿಗೆಯಲ್ಲ, ರಸ್ತೆ ಪಕ್ಕದಲ್ಲೊಂದು ಗಾಡಿ. ಅದನ್ನು ಅವರೇ ಅಂಗಡಿಯನ್ನಾಗಿ ರೂಪಿಸಿದ್ದರು. ಸುಮಾರು ವರ್ಷಗಳ ಕಾಲ ಕೂತು ವ್ಯಾಪಾರ ಮಾಡಿದ್ದರಿಂದ, ಸ್ಥಳೀಯರ ಪರಿಚಯವಾಗಿತ್ತು. ವ್ಯಾಪಾರ ಜೋರಾಗಿ ತಂಗಿ ಮದುವೆಗೆ ಮಾಡಿದ್ದ ಸಾಲ ತೀರಿತು.

ಸಿದ್ದೇಗೌಡ್ರು ನಮ್ ಜನ ಬಸವರಾಜು ಮೇಗಲಕೇರಿ

“ಸಾಲ ತೀರಿಸದ್ನಲಾ… ಆಗ ನಮ್ಮೂರ್ ಜನ್ರ ಕಣ್ಗೆ ಈ ಸಿದ್ದೇಗೌಡ ಬಿದ್ದ. ಅಲ್ಲೀವರ್ಗೂ ಊರ್‍ಗೋದ್ರೆ, ತಿಕ ತಿರಿಗಿಸ್ಕಡ್ ಹೋಯ್ತಿದ್ದೋರು, ಮಾತಾಡಸ್ದೇನು, ಮನಿಗ್ ಕರೆಯದೇನು…” ಎಂದರು. ಅಂದರೆ, ಸಿದ್ದೇಗೌಡರ ಕೈಯಲ್ಲಿ ಕಾಸು ಓಡಾಡುತ್ತಿದ್ದಂತೆ, ಜನರ ಮನಸ್ಥಿತಿಯೂ ಬದಲಾಯಿತು. ಆಗ ಊರಿನ ಕಡೆಯ ಜನ ಸಂಬಂಧ ಕುದುರಿಸಲು, ಹೆಣ್ಣು ತೋರಿಸಲು ಮುಂದೆ ಬಂದರು…”

“…ಅಲ್ಲೀವರ್‍ಗೂ ನನ್ನ ಮನ್ಷ ಅಂತಲೇ ಅಂದ್ಕಡಿತ್ತಿಲ್ಲ. ಕೆಲ್ಸ ಮತ್ತು ದುಡ್ಡು ನನ್ನ ಮನ್ಷನನ್ನಾಗಿ ಮಾಡ್ದೊ. ಮದುವೆನೂ ಆಯ್ತು. ಇಟ್ ಮಡುನಲ್ಲಿ ಒಂದು ಸಿಂಗಲ್ ಬೆಡ್ ರೂಮಿನ ಬಾಡಿಗೆ ಮನೆ ಮಾಡ್ದೆ. ಎರಡು ಹೆಣ್ಮಕ್ಕಳು ಆದೊ. ಅವರು ದೊಡ್ಡೋರಾಗ್ತಿದ್ದಂಗೆ ಸ್ಕೂಲಿಗೆ ಕಳಿಸ್ದೆ, ಒಬ್ಬಳು ಎಸ್ಸೆಸ್ಸೆಲ್ಸಿ ಓದುದ್ಲು, ಅವಳಿಗೆ ಮದುವೆ ಮಾಡಿ ಕಳಸ್ದೆ, ಇನ್ನೊಬ್ಳು ಬಿಎಸ್ಸಿ ಓದಿ ಬ್ಯಾಂಕಿಗೆ ಕೆಲ್ಸಕ್ಕೋಯ್ತಾವ್ಳೆ. ನನ್ ಹೆಂಡ್ತಿನೂ ಮನೆ ಕೆಲ್ಸಕ್ಕೆ ಹೋಯ್ತಳೆ,” ಎಂದು ತಮ್ಮ ಬದುಕಿನ ಪಯಣದ ಇಪ್ಪತ್ತು ವರ್ಷಗಳನ್ನು, ಮನೆಯ ಆರ್ಥಿಕ ಸ್ಥಿತಿಗತಿಯನ್ನು ಇಪ್ಪತ್ತು ಮಾತುಗಳಲ್ಲಿ ಮುಗಿಸಿದರು.

“ಅದ್ಸರಿ ಗೌಡ್ರೆ… ಈಗ ಈ ಸೈಕಲ್ಲು, ಸೊಪ್ಪು ಸರಿ; ಹಣ್ಣಿನ ವ್ಯಾಪಾರ ಏನಾಯ್ತು?”

“ಅಯ್ಯೋ ಅದೊಂದು ದೊಡ್ ಕತೆ ಬುಡಿ. ಅಣ್ ಯಾಪಾರ ಮಾಡ್ತಿದ್ನಲ್ಲ, ಆಗ ಕೈಯಲ್ಲಿ ಒಂಚೂರು ದುಡ್ ಓಡಾಡ್ತಿತ್ತು. ಊರಲ್ಲಿ ಮನೆ ಮುರ್‍ದುಬಿದ್ದಿತ್ತು. ಕೆಡವಿ ವಸ್ದು ಕಟ್ಟಸನಾ ಅಂತ ಆ ಕಡಿಕೆ ತಿರಗ್ದೆ… ನನ್ ಹೆಂಡ್ತಿಮಕ್ಳಿಗೆ ಯಾಪಾರ ಗೊತ್ತಿರಲಿಲ್ಲ. ಅಂಗಡಿಗೆ ಬೀಗ ಬಿತ್ತು. ಹಿಂಗೇ ಸುಮಾರ್ ದಿನ ಆಯ್ತಲ್ಲ… ಆಮ್ಯಾಲೋಗಿ ನೋಡ್ತಿನಿ, ಅಂಗಡಿನೇ ಇಲ್ಲ,” ಎಂದು ನಗಾಡಿದರು.

“ಮತ್ತೆ ಜೀವನ ಹ್ಯಂಗೆ ಗೌಡ್ರೆ?”

“ಇನ್ನೇನ್ ಮಾಡದು, ಸೈಕಲ್ಲಿತ್ತು, ಕೈಕಾಲ್ ಗಟ್ಟಿ ಇತ್ತು. ನೀರಿಗಿಳದಾಗದೆ, ಅಣ್ಣಾದ್ರೇನು, ಸಪ್ಪಾದ್ರೇನು? ಸೈಕಲ್ ನೂಕಂಡ್ ಹೊಂಟೆ,” ಎಂದು ಸೊಪ್ಪಿನ ವ್ಯಾಪಾರ, ಅದಕ್ಕೆ ಸೈಕಲ್ ಸಾಥ್ ಕೊಟ್ಟ ಕತೆಯನ್ನು ಬಿಚ್ಚಿಟ್ಟರು.

ಸಿದ್ದೇಗೌಡರು ಪ್ರತಿದಿನ ಬೆಳಗಿನ ಜಾವ 2.30ಕ್ಕೆ ಏಳುತ್ತಾರೆ. ಮಳೆ-ಚಳಿ ಲೆಕ್ಕಿಸದೆ, ಸಿಟಿ ಮಾರ್ಕೆಟ್ಟಿಗೆ ಹೋಗಿ ಸೊಪ್ಪು, ಹೂವು ಖರೀದಿಸುತ್ತಾರೆ. ಬೆಳಗಿನ ಜಾವದ ಸಕ್ಕರೆ ನಿದ್ದೆ ಎನ್ನುತ್ತಾರಲ್ಲ, ಅದನ್ನು ಅವರು ಅದೆಷ್ಟೋ ವರ್ಷಗಳಿಂದ ಅನುಭವಿಸಿಯೇ ಇಲ್ಲ. ಆದರೂ ಅವರಿಗೆ ಬೇಸರವಿಲ್ಲ. ಕೇಳಿದರೆ, “ಏನ್ಮಾಡ್ತಿರಾ, ನಮ್ ಅಣೇಬರ…” ಎನ್ನುತ್ತಾರೆ.

ಮಾರ್ಕೆಟ್ಟಿನಿಂದ ಆಟೋ ಹಿಡಿದು ಮನೆಗೆ ಬರುವ ಗೌಡರು, ಮುಖ ತೊಳೆದು, ಕಾಫಿ ಕುಡಿದು ಸೊಪ್ಪನ್ನು ಸೋಸಲು, ಸಣ್ಣ-ಸಣ್ಣ ಕಟ್ಟುಗಳನ್ನಾಗಿ ಕಟ್ಟಲು ಕೂರುತ್ತಾರೆ. ಹೂವನ್ನು ಮನೆಯವರಿಗೆ ಕೊಟ್ಟು ಮಾಲೆ ಕಟ್ಟಿಸುತ್ತಾರೆ. ಮಿಕ್ಕಿದ್ದನ್ನು ಹಾಗೆಯೇ ಬಿಡಿ ಹೂನಂತೆ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಕೊಳ್ಳುತ್ತಾರೆ. ಎಲ್ಲವೂ ಸಿದ್ಧ ಮಾಡಿಕೊಂಡು ರಸ್ತೆಗಿಳಿಯುವಷ್ಟೊತ್ತಿಗೆ ಬೆಳಕು ಹರಿದಿರುತ್ತದೆ.

ಸಿದ್ದೇಗೌಡ್ರು ನಮ್ ಜನ ಬಸವರಾಜು ಮೇಗಲಕೇರಿ
ಸಿದ್ದೇಗೌಡ್ರ ಜೊತೆ ಲೇಖಕರು

ಸಿದ್ದೇಗೌಡರ ಸರಹದ್ದು ಹೊಸಕೆರೆಹಳ್ಳಿ, ಕತ್ತರಿಗುಪ್ಪೆ, ಕಾಮಾಕ್ಯ, ಭುವನೇಶ್ವರಿನಗರ ಮಾತ್ರ. ಈ ಏರಿಯಾಗಳಲ್ಲಿ ಸುತ್ತಾಡುವಷ್ಟರಲ್ಲಿ ಹನ್ನೊಂದು ಗಂಟೆಯಾಗಿರುತ್ತದೆ. ಅಷ್ಟೊತ್ತಿಗೆ ಸರಕೂ ಖಾಲಿಯಾಗಿರುತ್ತದೆ. ಸುತ್ತಾಟಕ್ಕೆ ಸುಸ್ತಾಗಿರುತ್ತದೆ. ಮನೆಗೆ ಹೋಗಿ ಸ್ನಾನ ಮಾಡಿ, ಊಟ ಮಾಡಿ ನಿದ್ದೆಗೆ ಜಾರುತ್ತಾರೆ.

“ದಿನಕ್ಕೆ ಎಷ್ಟು ವ್ಯಾಪಾರ ಆಗ್ತದೆ…”

“ಅಯ್ಯೋ… ನಮ್ ಯಾಪಾರ ಏನ್ ಕೇಳಿರ ಬುಡಿ. ನಾನ್ ಅಂತ ದೊಡ್ ಯಾಪಾರಸ್ಥನಲ್ಲ. ಇಪ್ಪತ್ತೈದ್ ವ‍ರ್ಷದಿಂದ ಮಾರ್ಕೆಟ್ಗೆ ಹೋಯ್ತಿದೀನಿ. ಎಲ್ಲಿ ಯಾವ್ದು ಕಮ್ಮಿಗೆ ಸಿಕ್ತದೆ ಅಂತ ಗೊತ್ತು. ಆದಷ್ಟು ಕಡಿಮೆ ಇರದ್ನೆ ತತ್ತಿನಿ. ಎಲ್ಲಾ ಸೇರಿ ಏಳ್ನೂರ್ ಎಂಟ್ನೂರ್ ಆಯ್ತದೆ. ನನ್ ಪೆಷಾಲಿಟಿ ಇರದು… ಕಾಸಿ ಸಪ್ಪು ಅಗಸೆ ಸಪ್ಪು, ಬೇವಿನ ಸಪ್ಪು, ನುಗ್ಗೇ ಸಪ್ಪು. ಇದು ಇದ್ದೇ ಇರ್ತದೆ ನನ್ನತ್ರ. ಹಬ್ಬ ಬಂದಾಗ ಬಿಲ್ಪತ್ರೆ, ಜವ್ನಾ, ತುಳಸಿ ತತ್ತಿನಿ. ಒಂದೆಲೆಗಕ್ಕೆ ಕಾಯ್ದು ಕೇಳೋ ಜನವೂ ಅವ್ರೆ. ಯಾವ್ದು ಜಾಸ್ತಿಯಿಲ್ಲ, ಐದು ಕಟ್ಟು, ಹೆಚ್ಕೆ ಅಂದ್ರೆ ಅದ್ನೈದು ಕಟ್ಟು. ಪಾಲಾಕ್ ಜಾಸ್ತಿ ಹೋಯ್ತದೆ. ನಿಂಬೇಹಣ್ಣು, ಶುಂಠಿ, ಹಸಿಮೆಣಸಿನಕಾಯಿ, ಕೊತ್ತಂಬರಿ, ಪುದೀನ ಪೂರ್ತಿ ಖರ್ಚಾಯ್ತದೆ. ಎಲ್ಲಾ ಸೇರಿ ದಿನಕ್ಕೆ ಒಂದೂವರ್ ಸಾವ್ರ ಅಂತಿಟ್ಕಳಿ,” ಎಂದು ತಮ್ಮ ವ್ಯಾಪಾರದ ಗುಟ್ಟನ್ನು ಬಿಚ್ಚಿಟ್ಟರು.

“ತೆವಲು ಗಿವಲು ಏನಾರ ಉಂಟ ಗೌಡ್ರೆ?”

“ಮನ್ಷ ಅಂದ್ಮೇಲೆ ತೆವಲು ಇಲ್ಲಾಂದ್ರೆ ಹ್ಯಂಗೆ… ಯಾಪಾರ ಮಾಡ್ತಿದ್ದಾಗ ಬೀಡಿ-ಸಿಗರೇಟು ಸೇದ್ತಿನಿ. ಸಂಜೆ ಒಂದ್ ಕ್ವಾಟ್ರು ಹೊಡ್ದು ಮನಿಕತ್ತಿನಿ.”

“ಸಾಲ ಗೀಲ ನಿಲ್ಲಸ್ತರಾ ಗೌಡ್ರೆ?”

“ನಾನೇ ಬಡವ, ನನ್ ಅತ್ರ ಸಾಲ ಕೇಳದಾ?” ಎಂದು ನಗಾಡಿದರು. “ಅಂತೋರು ಯಾರು ಇಲ್ಲ ಬುಡಿ. ಇವತ್ತಿಲ್ಲಾಂದ್ರು ನಾಳಿಕ್ ಕೊಡ್ತರೆ. ಎಲ್ಲ ಹೆಂಗಸ್ರೆ, ಅವ್ರಿಗೆ ಇಷ್ಟ ಆಗೋದ್ನ ತತ್ತಿನಿ, ನಾನ್ ಕೇಳ್ದಷ್ಟು ಕೊಡ್ತರೆ. ಈ ಸಪ್ ಯಾಪಾರಕ್ಕಿಡ್ದು ಏಳೊರ್ಷ ಆಯ್ತು, ಸಾಲ ಕೊಟ್ಟಿದ್ದೂ ಇಲ್ಲ, ಲಾಸ್ ಆಗಿದ್ದೂ ಇಲ್ಲ,” ಎಂದರು.

ಸಿದ್ದೇಗೌಡರು ವ್ಯಾಪಾರವನ್ನೇ ಮಾಡಿದರೂ, ಅವರಿಗೇ ಗೊತ್ತಿಲ್ಲದಂತೆ ಆ ಅಪರೂಪದ ಸೊಪ್ಪುಗಳಿಂದ ಆ ಮನೆಗಳ ಆರೋಗ್ಯ ಕಾಪಾಡಿದ್ದಾರೆ. ಆ ಮಹಿಳೆಯರು ಆ ಸೊಪ್ಪುಗಳನ್ನು ಕಾಸು ಕೊಟ್ಟು ಖರೀದಿಸಿದರೂ, ಅವರಿಗೇ ಗೊತ್ತಿಲ್ಲದಂತೆ ಸಿದ್ದೇಗೌಡರ ಬದುಕಿನ ಬಂಡಿಯನ್ನು ನೂಕಿದ್ದಾರೆ. ಕೊಡು-ಕೊಳ್ಳುವ ಕ್ರಿಯೆಯಲ್ಲಿ ಬದುಕಿನ ವ್ಯಾಪಾರವೂ ನಡೆಯುತ್ತಿದೆ.

“ಊರ್ ಬುಟ್ ಬಂದಾಗಿಂದ ಬಾಡಿಗೆ ಮನ್ಲೆ ಇದ್ದೀನಿ, ಅಣ್ಣು-ಸಪ್ಪು ಮಾರ್‍ಕಂಡೇ ಮನೆ ಕಟ್ಟಿದೀನಿ, ಮಗಳ್ ಮದ್ವೆ ಮಾಡಿದೀನಿ, ಇದ್ಕಿಂತ ಇನ್ನೇನು ಬೇಕೇಳಿ. ಅಂಗೇ ಇನ್ನೊಬ್ಳುನ್ನು ಮದ್ವೆ ಮಾಡಬುಟ್ರೆ, ಅಲ್ಗೆ ನನ್ ಜವಾಬ್ದಾರಿ ಮುಗೀತದೆ. ಆಮ್ಯಾಲೆ ಸಿವಾ-ನಾರಾಯಣ ಅಂತ ಕಣ್ಮುಚ್ಕಬಹುದು,” ಎನ್ನುವ ಸಿದ್ದೇಗೌಡರದು ದುರಾಸೆಯೇ ಇಲ್ಲದ ದೊಡ್ಡ ಜೀವ. ಕಡು ಕಷ್ಟದ ಕಾಲದಲ್ಲೂ ಸರಳವಾಗಿ ಬದುಕುತ್ತಿರುವ ಬಡ ಜೀವ. ಇದು ಸಿದ್ದೇಗೌಡರ ಜೀವನ, ಇವರು ನಮ್ ಜನ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮನಸ್ಸಿನ ಕತೆಗಳು – 20 | ಡಿವೋರ್ಸ್‌ವರೆಗೂ ಮುಂದುವರಿದಿದ್ದ ಗರ್ಭಿಣಿ ಹರಿಣಿಯ ಕತೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...