ನೀಗೊನಿ | ಬಾಡು ಕುಯ್ಕಂಡು ಹಟ್ಟಿ ಕಡ್ಗೆ ಬರೋತ್ತಿಗೆ ಎಲ್ರೂ ಮೈಯಾಗ ರೈತರಾಮಾಣ್ಯ

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌)
ಸೂರಪ್ಪನ ಸೆಂದ್ರುನ ಮೊದ್ಲು ಹುಟ್ಟುಸ್ದೊರು ನಮ್ಮ ತಾತ ಜಾಂಬವ ಎಂಬ ದನಿ ಊರಿನ ತುಂಬೆಲ್ಲಾ ಕೇಳುಸ್ತಿತ್ತು. ಹೆಂಗುಸ್ರ ಹಾಡ್ಗಳ ಜೊತ್ಗೆ ಕದ್ರಯ್ಯನ ಹಸೆಯೂ ಸೇರಿ ದೊಡ್ಡೀರಿ ಕೋಡಿನ ಬದ್ಕಿಗೆ ಅಣಿಗೊಳುಸ್ತಿತ್ತು. ಮೂರು, ನಾಲ್ಕು, ಐದು, ಆರು, ಏಳು, ಎಂಟು, ಒಂಬತ್ತು ಹಸೆಗಳ್ನ ಬರ್ದು ಕದ್ರಪ್ಪ ಮೂಲಾದಿಗ್ಳ ಪರ್ವಾಗಿ ಲಗ್ಣಕ್ಕೆ ತಯಾರು ಮಾಡ್ತಿದ್ದ…

ಸಂಚಿಕೆ: 10

ಈಟೆಲ್ಲಾ ಆಗ್ವಾಗ ಬೈಗಾತು. ನಾಳ್ಗೆನೇ ಲಗ್ಣ. ಕೆಲ್ಸ ಇನ್ನೂ ಸ್ಯಾನೇನೇ ಐತೆ ಅಂತ ಯಜ್ಮಾನ್ಕದುರಪ್ಪ ಗಂಡುಸ್ರಿಗೆಲ್ಲಾ ಕ್ಯಾಮೇ ಹಂಚ್ತಿದ್ದ. ಕಲ್ಲುನೀರು ಕರ್ಗೋವಟ್ಟತ್ಗೆ ಕ್ವಾಣ್ವ ಕೂದು ಬಾಡ್ತರಕ್ಕೆ ಕುಂಭಿಗೆ ವಯ್ಸಿ ಅದ್ರ ವಜನ್ನ ಕಳ್ಕಂಡ ಕದುರಪ್ಪ. ಕುಂಭಿ ಕ್ವಾಣನ ವಜನ್ ಹೊತ್ಕಂಡು ಏಳೆಂಟು ಆಳ್ಗಳ ಜೊತ್ಗಿಟ್ಕಂಡು ಕ್ವಾಣಕುಯ್ಯೋಬಂಡೆ ಕಡೆ ವಲ್ಟ್ರು. ಎಲ್ರೂ ಕೈಲೂ ಸೂರಿ, ಮಚ್ಚು, ತುಂಡ್ಗಳಿದ್ವು. ಮೂರಾಳ್ ಹೊರೊವಷ್ಟಿದ್ದ ಕ್ವಾಣನ ಸಣ್ಣೀರ ಹೊಡ್ಕಂಡು ಬತ್ತಿದ್ದ. ಕ್ವಾಣ ಕುಯ್ಯೋ ಬಂಡೆ ಹತ್ರುಕ್ಕೆ ಬಂದಾಗ ಕ್ವಾಣನ ಕೆಡುವ್ಕ್ಕೊಂಡು ಕುಂಭಿನೇ ಕ್ವಾಣನ ಕುತ್ಗೆಕೆಳ್ಕೆ ಸರಸರನೇ ಕೊಯ್ದು ಜೀವ ಕಳ್ದ. ಕಾಲ್ನ ಕಟ್ಟಿ, ಆ ಕಡೆ ಈ ಕಡೆ ವದ್ಲಾಡ್ದಂಗೆ ಎಲ್ರೂ ಇಡ್ಕಂಡಿದ್ರುನೂ ಕ್ವಾಣ ವದ್ಲಾಡಿ ವದ್ಲಾಡಿ ಜೀವ ಬಿಡ್ತು. ಕ್ವಾಣದ ಕುತ್ಗೆ ಹತ್ರ ಬೋಣಿ ಇಡ್ದು ರೈತನ್ನೆಲ್ಲ ಅದ್ರಾಗೆ ತುಂಬುಸ್ಕಂಡು ಚೆಲ್ದಂಗೆ ದೂರ ಇಟ್ರು.

ಜೀವೋದ್ಮೇಲೆ ಅದ್ನ ಕರುಪ್ಡಿ ಮಾಡಕ್ಕೆ ಸಿದ್ವಾದ್ರು. ಕುಂಭಿನೇ ಸೆರ್ಮ ಬಿಡುಸ್ದ. ಒಬ್ಬೊಬ್ರೆ ಸೇರ್ಕಂಡು ಅದ್ರ ಗ್ವಾಮಳೇ ತಾವಿಂದ ಬಾಲುತಂಕ ಸೆರ್ಮ ಬಿಡುಸ್ತಿದ್ರು. ಕೆಲುವ್ರು ಚೂರಿ ಮಸ್ಕಳ್ತಾ ಸಬ್ದ ಮಾಡ್ತಿದ್ರೆ, ಮತ್ಕೆಲುವ್ರು ಮಚ್ಚಿಂದ ಕ್ವಾಣ್ದ ಕುತ್ಗೆತವ ಮೂಳೆನೆ ಕಡಿತಿದ್ರು. ತೊಡೆ ಕೂದು ಆ ಬಂಡೆ ಮ್ಯಾಕೆ ಎಸಿತಿದ್ರು. ಅದೆಲ್ಲಾ ಮುಗಿದ್ಮೇಲೆ ಹೊಟ್ಟೆ, ಕಳ್ಳೆಸ್ರು, ಪಚ್ಚಿ, ಹೀರಿ, ದೊಮ್ಮೆಗಳ್ನ ಬಿಡುಸ್ತಿದ್ರು. ಎಲ್ಲಾನು ಆ ಬಂಡೆ ಮ್ಯಾಕೆ ಹಾಕ್ತಾ ದೊಡ್ಡ ಬಾಡ್ನ ರಾಸಿನೇ ಕಾಣ್ತಾ, “ಹಟ್ಟೇರ್ಗೆಲ್ಲಾ ಆತತೆ ಬಿಡು,” ಅಂದ್ಕಂಡ ಕುಂಭಿ. ಬೆಟ್ದಂಗೆ ಬಿದ್ದಿದ್ದ ಆ ಬಾಡ್ನ ಅಲ್ಲೊಂದು ಗುಂಪು ಕುಕ್ಕುರುಗಾಲಲ್ಲೆ ಕೂತು ತುಂಡಾಗ್ತಿತ್ತು. ಒಂದ್ಕಡೆ ಮೂಳೆನ ತುಂಡಾಕ್ತಿದ್ರೆ, ಇನ್ನೊಂದ್ಕಡೆ ಬಾಡ್ಗುಡ್ಡೆನ ಸಣ್ಣ-ಸಣ್ಣ ತುಂಡು ಮಾಡ್ತಿದ್ರು. ಅಲ್ಲೆ ಮುಂದ್ಕೆ ಹೊಗೆ ಆಡುಸ್ತಾ ಕಾಲು ಸೀಸ್ತಾ, ಉಜ್ತಾ ಇದ್ರೆ ಸಿವ್ಡ ಹೀರಿನ ಬೆಂಕಿಗಾಡುಸ್ತಾ ಕರುಕ್ಲಾದ್ಮೇಲೆ ಅಲ್ಲೆ ಬಾಡು ಕುಯ್ತಿದ್ದರೆಲ್ರಿಗೂ ಬಾಯ್ಗೊಂದಿಷ್ಟು ಇಟ್ಟು ಬರ್ತಿದ್ದ. ಬಾಯ್ ಸೆಪ್ರುಸ್ತಾ ಒಳಕ್ಕೆ ಕಳುಸ್ತಿದ್ರು. ಅದು ಇದು ಮಾಡವಷ್ಟತ್ಗೆ ಬೆಳ್ಕು ಹರ್ದೆ ಬಿಡ್ತು. ದೊಡ್ಡ-ದೊಡ್ಡ ಬಾನೆಗೆ, ಮಂಕ್ರಿಗೆ ಹೊತ್ಕಂಡು ಸೆರ್ಮನ ಹೊಂಗೆಸೊಪ್ಪಲ್ಲಿ ಸುತ್ಕಂಡು ಹಟ್ಟಿ ಕಡ್ಗೆ ಬಂದ್ರು. ಎಲ್ರೂ ಮೈಯಾಗ ರೈತರಾಮಾಣ್ಯ. ಯಾವ್ದೋ ಯುದ್ಧ ಮುಗುಸ್ಕಂಡು ಬಂದಂಗೆ ಕಾಣ್ತಿದ್ರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಗ ಲಗ್ಣದ್ಜಿನ ಬಂದೇ ಬಿಡ್ತು. ವತ್ತಾರೆನೇ ಯಜ್ಮಾನ್ಮದ್ರುಪ್ಪ ಅದಾಗುದೆಗೆ ಓಡಾಡ್ತಿದ್ದ – ಆಗ್ಲೇ ಬೆಳ್ಕರಿತಿದೆ ಇಳೇಸಾಸ್ತ್ರ ಮಾಡ್ಬೇಕು ಅಂತ. ಕ್ವಾಣನ ಕೊಯ್ಯಕ್ಕೋಗಿರೋರ್ರನ್ನ ಕಾಯಕ್ಕಾಗಲ್ಲ ಅಂತ ಅಲ್ಲೇ ಇದ್ದ ಅಟ್ಟಣ್ತಂದೀರ್ನ ಇಳೇಸಾಸ್ತ್ರಕ್ಕೆ ಕೂರ್ಸಿರು. ಯಜ್ಮಾನ ಕದುರಪ್ಪ ತನ್ನ ಹೆಗ್ಲ ಮ್ಯಾಲಿನ ಕೆಂಪ್ವಸ್ತ್ರ ತಗ್ದು ನಾಲ್ಕು ಮೂಲೆ ಮಡ್ಚಿ ಮೂಡ್ಲು ಕಡ್ಕೆ ಹಾಸಿ, ಕಣ್ಮುಚ್ಕಂಡು ಸೂರಪ್ಪನ ಕಡೆ ಕೈ ಮುಗ್ದು ಏನೇನೋ ಹೇಳ್ಕಂಡು ಹಾಗೇ ಕೆಂಪ್ವಸ್ತ್ರದ ಮ್ಯಾಲೆ ಈಭತ್ತಿಯಿಂದ ಸೂರಪ್ಪ, ಸೆಂದ್ರರನು ಮೂಡ್ಸಿರು. ಅದಾದ ಮ್ಯಾಲೆ ಗೆರ್ಗೆಗಳು ಕೆಂಪ್ವಸ್ತ್ರ ತುಂಬೆಲ್ಲಾ ಆಕಾರ ತಾಳ್ಕಂತ ಹರುಡ್ಕಂಡ್ವು. ಆ ಗೆರೆನಾಗೆ ಗಲ್ಲೆಬಾನಿ, ರಮ್ಕೆ, ಕಬ್ಣುದ ಕೊಡ್ಲಿ, ಚಮ್ಮಾಳ್ಗೆ, ನವ್ಲು, ಮೊಟ್ಟೆ, ಚೂರಿ ಇನ್ನೂ ಏನೇನೋ ಆಕಾರ ಪಡ್ಕಂಡ್ವು. ಆಮ್ಯಾಕೆ ಕುಟ್ಟಿದ ಬತ್ತನ ತಗಂಡು ಗೆರ್ಗೆಳ್ಗೆ ತುಂಬ್ಕಂತಾ ಹೋದ್ರು. ಅಲ್ಲಿದ್ದ ಹಟ್ಟಿಯೆಂಗುಸ್ರು ತಾತ ಜಾಂಬವಯ್ಯನ ಲೋಕ ಹುಟ್ಟುಸ್ದ ಹಾಡೇಳ್ತಿದ್ರು. ಸೂರಪ್ಪನ ಸೆಂದ್ರುನ ಮೊದ್ಲು ಹುಟ್ಟುಸ್ದೊರು ನಮ್ಮ ತಾತ ಜಾಂಬವ ಎಂಬ ದನಿ ಊರಿನ ತುಂಬೆಲ್ಲಾ ಕೇಳುಸ್ತಿತ್ತು. ಹೆಂಗುಸ್ರ ಹಾಡ್ಗಳ ಜೊತ್ಗೆ ಕದ್ರಯ್ಯನ ಹಸೆಯೂ ಸೇರಿ ದೊಡ್ಡೀರಿ ಕೋಡಿನ ಬದ್ಕಿಗೆ ಅಣಿಗೊಳುಸ್ತಿತ್ತು. ಮೂರು, ನಾಲ್ಕು, ಐದು, ಆರು, ಏಳು, ಎಂಟು, ಒಂಬತ್ತು ಹಸೆಗಳ್ನ ಬರ್ದು ಕದ್ರಪ್ಪ ಮೂಲಾದಿಗ್ಳ ಪರ್ವಾಗಿ ಲಗ್ಣಕ್ಕೆ ತಯಾರು ಮಾಡ್ತಿದ್ದ.

ದೊಡ್ಡೀರಿ ತಲೆತುಂಬ ಮೊಕ ಕಾಣ್ದಂಗೆ ಹೂವ್ಗಳ್ನ ಮುಡ್ಕಂಡು, ಕಾಡ್ಮಲ್ಗೆ ಮಾಲೆನ ಕೈಗೂ ಕಾಲ್ಗೂ ಸುತ್ಕಂಡು ಹಣೆ ಮ್ಯೇಲೆ ಬಾಸಿಂಗ ಕಟ್ಕಂಡು ಧಾರೆಸೀರೆ ಉಟ್ಕಂಡು ಸುಂದ್ರುವಾಗಿ ಕಾಣ್ತಿದ್ಳು. ಕೋಡಿನೂ ಬಿಳಿ ಅರ್ವೆನ ಸೊಂಟ್ಕೆ ಕಟ್ಕಂಡು ಮೈಯ್ನಾಗೆ ಏನೇನೋ ಬಣ್ಣಬಣ್ಣದ ಚಿತ್ರ ಬರ್ಕಂಡು ಎಡ್ಗಡೆ ಎದೆಮ್ಯಾಲೆ ಸೂರಪ್ಪ, ಬಲ್ಗಡೆ ಎದೆಮ್ಯಾಲೆ ಸೆಂದ್ರ, ಮಧ್ಯದಾಗೆ ಮರ್ದಚಿತ್ರ, ಬಳ್ಳಿಗಳಂತೆ ಕೈಗೂ ಕಾಲ್ಗೂ ಬರ್ದು, ನೀಲಿ ಬಣ್ದಿಂದ ಅವ್ನನ್ನು ತುಂಬಿಸ್ಬಿಟ್ಟಿದ್ರು. ಹಣೆ ಮ್ಯಾಲೆ ನೀಳಕ್ಕೆ ನಾಮ ಬರ್ದು, ಆ ಕಡೆ ಈ ಕಡೆ ಕಿವ್ಗೆ ನೇತಾಡೋ ಜುಮ್ಕಿ, ಕತ್ಗೆ ಕರಿದಾರ ಕಟ್ಟಿ, ಎಡ್ಗಾಲ್ಗೆ ಕುರಿದಾರ ಎಡ್ಗೈಗೆ ಕತ್ತಿ ಕೊಟ್ಟು ನಡುಸ್ಕಂಡು ಬಂದು ಧಾರೆ ಕಂಬುದತ್ರ ನಿಲ್ಸಿದ್ರು. ಆ ಕಡೆ ದೋಡ್ಡಿರಿ, ಈ ಕಡೆ ಕೋಡಿ; ನಡುಮಂತ್ರ ನೇರ್ಳೆ ಗಿಡ ನಿಂತಿತು. ಯಜ್ಮಾನ ಕದುರಪ್ಪ ನೇರ್ಳೆ ಮರ್ದ ಕೊಂಬೆನ ತರ್ಸಿ ಅದ್ರ ಸುತ್ತ ಈಳ್ಯದೆಲೆಯಿಂದ ಪೂಣೇಜ್ನ ಮಾಡ್ಸಿದ್ದ. ಆ ನೇರ್ಳೆ ಗಿಡ್ಕೆ ಗಂಡೆಣ್ಗಳಿಂದ ಪೂಜೆ ಮಾಡ್ಸಿ ಹಾಲುಯ್ಸಿ ನಮಸ್ಕರ್ಸದ. ಆಮ್ಯಾಕೆ ಮೂಲಾದಿಗಳ ಸಾಕ್ಸಿಯಾಗಿ ದೊಡ್ಡೀರಿಗೆ ಕೋಡಿಯಿಂದ ತಾಳಿ ಕಟ್ಸಿ ಗಂಡಯೆಂಡ್ತಿರನ್ನಾಗಿ ಮಾಡ್ದ ಕದ್ರಪ್ಪ. ನೀಗೊನಿಯ ಕೋಡಿ ಕರಿವಂಗಲ್ದ ಅಳ್ಯ ಆಗ್ಬಿಟ್ಟ.

ಆಗ್ಲೇ ತೇಲಾಡ್ತಿದ್ದ ಜನ್ರೆಲ್ಲಾ ಬಾಡ್ನ ಮಡ್ಕೆ ಕಡೆ ಓಡಿರು. ಕುಂಭಿ ಸುತ್ಮತ್ಗೆ ಹಬ್ಬಂಗೆ ಬಾಡ್ನೆಸ್ರುನ್ನ ಕುದುಸ್ತಿದ್ದ. ತಲ್ಮಿದ್ಲು ಹಲ್ಲಿಲ್ದೋರ ಪಾಲಾಗ್ತಿತ್ತು. ಗಂಟುಮೂಳೆ ದೊಡ್ಡ ಬಾನಿಲಿ ಕುದಿತಾ ನೋಡೋರ ಕಣ್ಣೆಸ್ರು ಆಗಂಗೆ ಆಗೋಯ್ತು. ಕಳ್ಳುಪಚ್ಚಿ ಒಂದ್ಬಾನೆಗೆ ಬೇಯ್ತಿತ್ತು. ಆ ವಾಸ್ನೆ ಎಲ್ರುನ್ನೂ ಒಂದ್ಮಾಡಿತ್ತು. ಆದ್ರೆ ಯಾಕೋ ಮೋಟ್ರಂಗ ಬಂದಾಗ್ನಿಂದ ಸಿಡಿಮಿಡಿ ಅಂತಿದ್ದ. ನಾನು ಈ ಹಟ್ಗೆ ದೊಡ್ಡಳ್ಯ ನನ್ನ ಏನೂ ಕೇಳ್ದೆ ಗಂಡುಡ್ಕಿ ಲಗ್ಣ ಮಾಡ್ತಾವ್ರೆ. ನಾನು ಯಾರ್ಗೂ ಬೇಡ್ದೋನು ಆಗ್ಬಿಟ್ಟೆ. ಅಂತ ಗೊಣುಗ್ತ ಅಲ್ಲಲ್ಲೇ ಹೊರಗಾಕ್ತಿದ್ದ. ಘಟೆಪೂಜಿ ಹೆಂಡ ಇಳುಸ್ಕಂಡ್ಮೇಲಂತೂ ರಾಜರೋಸ್ವಾಗಿ ಎಲ್ರೂ ಮುಂದೆ ಕಕ್ದ. ಇದ್ಕೆಲ್ಲಾ ಯಾರು ತಲೆಕೆಡ್ಸಕ್ಕಿಂಡಿರ್ಲಿಲ್ಲ. ಅವನ್ದು ಯಾವಾಗ್ಲೂ ಇಂಗೆಯಾ? ಅಂದ್ಕಂಡು ತಮ್ಪಾಡ್ಗೆ ತಾವಿದ್ರು. ಲಗ್ಣ ಮುಗ್ದು ಎಲ್ರೂ ಬಾಡ್ನಸ್ರು ಗಮ್ಲಿಗೆ ಓಡ್ಬಂದ್ರು. ಎಲ್ಲಿ ಜಾಗ ಆಗುತ್ತೋ ಅಲ್ಲಿ ಕೂಕಂಡ್ರು.

ಸುಳ್ಪಟೆಲೆನಾಗೆ ಹಿಟ್ಟಿಕ್ಕಂಡು ಹೋಗ್ತಾ ಇದ್ರು. ಕುಂಭಿನೇ ಬಾಡ್ನೆಸ್ರು ಬಿಡೋ ಜಬಾಬ್ದಾರಿ ಹೊತ್ತಿದ್ದ. ಎಲ್ರೂಗೂ ಬಾಡಾಕಂಡು ಹೆಸ್ರು ಬಿಡ್ಕಂಡು ದಡಬಡಿ ನಡಿತಿದ್ದ. ಮೋಟ್ರಂಗನ ಅಗ್ಲು ಬಂದಾಗ ಕುಂಭಿ ಮರ್ದಸೌಟಿಂದ ಮುಳುಗ್ಸಿ ಸಾರ್ನ ಎತ್ತಿ ಅಗ್ಲಿಗೆ ಬೀಳ್ವಾಗ ದೊಡ್ಮೂಳೆ ವಾಪಸ್ಸು ಸಾರ್ನ ಮಡ್ಕೆಗೆ ಬಿದ್ಬಿಟ್ತು. ಕುಂಭಿ ಮುಂದುಕ್ಕು ನಡ್ದ. ಮೊದ್ಲೇ ರೇಗಿದ್ದ ಮೋಟ್ರಂಗುಂಗೆ ಇದ್ನ ಬೇಕಂತ್ಲೇ ಮಾಡಿರೋದು ಅಂತ ತಗ್ದಿದ್ದೇ ಅಗ್ಲುನ್ನ ಆಚ್ಗೆ ಕೊಡುವ್ದ. “ನಿನ್ನಕ್ಕನ್ ನಿನಾಕೋ ಎಲ್ಡ್ ಬಾಡು ತುಂಡ್ಗೆ ಗತ್ಗೆಟ್ಟು ಬಂದಿವ್ನ ನಾನು,” ಅಂತ ಎದ್ದ. ಕುಂಭಿ “ಅಯ್ಯೋ ಬಿಡೋ ಮೋಟ… ಅದೆಲ್ಲೋ ಬಿದ್ದೈತೆ. ಬೇರೆದು ಹಾಕ್ತೀನಿ,” ಎಂದ್ರೂ ಕೇಳ್ದೆ, ಆ ಬಾಡ್ನೆಸ್ರು ಸಮೇತ ಕುಂಬಿ ಕೂದ್ಲಿಡ್ದು ಎಳ್ದ. ವಜನ್ನಾಗಿದ್ದ ಬಾಡ್ನ ಮಡ್ಕೆ ಸಮೇತ ಮೋಟ್ರಂಗ ಎಳ್ದ ಬಿರ್ಸಿಗೆ ಕುಂಬಿ ದೊಪ್ಪನೇ ಕೆಳುಕ್ಕು ಬಿದ್ದು ಬಾಡ್ನ ಮಡ್ಕೆ ಬೂಮ್ತಾಯಿ ಪಾಲಾಯ್ತು. ಹೆಸ್ರೆಲ್ಲಾ ಹರ್ದು ದಾರಿ ಮಾಡ್ಕಂಡು ಸಿಕ್ಸಿಕ್ಕಿತ್ತಾ ಕಡೆ ಹರಿತಿತ್ತು. ಆ ಮಡ್ಕೆ ತುಂಬಿದ್ದ ಬಾಡು ಬೆಂದು ರಾಶಿಯಾಗಿ ಗುಪ್ಟೆಯಂಗೆ ಬಿದ್ದಿತ್ತು. ಅಲ್ಲೆ ಕುಂತಿದ್ದ ಜನ್ವೆಲ್ಲಾ ಓಡ್ಬಂದು ತಮ್ಗೆ ಎಷ್ಟಾಗುತ್ತೋ ಅಷ್ಟುನ್ನಾ ದೋರ್ಕಂಡು, ಬಾಯ್ಗೆ ಹಾಕಂಡು ಸೆಪ್ಪುರ್ಸಕಂಡು ತಮ್ಮ ಅಗ್ಲಿಗೆ ಹಾಕೋಳೋದ್ರಲ್ಲಿ ಮುಳ್ಗಿದ್ರು. ಮೋಟ್ರಂಗುಂಗೆ ನನ್ ಮಾತು ಯಾರ್ಗೂ ಕೇಳ್ತಿಲ್ಲ ಅಂದ್ಕಂಡು ಮತ್ತೂ ಜೋರಾಗೆ ಕೂಗ್ದ. ಕುಂಭಿಯೇನು ಸಾಮಾನ್ಯದ ಆಳಲ್ಲ. ಅವ್ನು ಮೋಟ್ರಂಗುನ್ನ ಎತ್ತಿ ಕುಕ್ಕಿದ. ಕುಕ್ಕಿದೇಟ್ಗೆ ಕುಡ್ದಿದ್ದೆಲ್ಲಾ ಇಳ್ದೋಯ್ತು. ಇದೇನೋ ಆಗ್ತಿದೆ ಅಂತ ಯಜ್ಮಾನ ಕದುರಪ್ಪ ದಡದಡ ಓಡ್ಬಂದ. ಏನು ಏನ್ಕತೆ ಅಂತ ಕದುರಪ್ಪಂಗೆ ಅರುವಾಗೋಯ್ತು.

ಚಿಕ್ಕಯ್ಯಂಗೆ ಮೂರ್ಜನವೂ ಯೆಣ್ಮಕ್ಳೆ ಆಗಿರೋದ್ರಿಂದ ನಾನೇ ಈ ಮನ್ಗೆ ಯಜ್ಮಾನ ಅಂತ ಮೋಟ್ರಂಗ ಬೀಗ್ತಿದ್ದ. ಮಾವಂದು ಎಲ್ಲಾನು ನಂಗೆ ಬತ್ತದೆ; ಅದಲ್ದೆ ದೊಡ್ಡಿರಿನೂ ನಂಗೆ ಕೊಟ್ಟು ಲಗ್ಣ ಮಾಡ್ತರೆ ಅಂತ ಹೇಳ್ಕಂಡು ತಿರುಗ್ತಿದ್ದ. ಊರ್ನ ಕುಲ್ವಾಡಕೆನೂ ಚಿಕ್ಕಯ್ನಿಂದ ನಂಗೇ ಬತ್ತದೆ ಅಂದ್ಕಂಡಿದ್ದ. ಆದ್ರೆ ಇವನ್ಯಾರೋ ಅನಾಪರ್ದೇಸಿ ಬಂದು ನಂಗೆ ಬರೋವ್ನೆಲ್ಲ ಕಿತ್ಕಬಿಟ್ನಲ್ಲ ಅಂದ್ಕಂಡು ರಾಂಗ್ ಆಗಿದ್ದ. ಅದ್ನೆಲ್ಲಾ ಸರಿ ಮಾಡೋವಷ್ಟತ್ಗೆ ಬೈಗೆ ಆಗೋಗಿತ್ತು. ಬಾಡ್ನ ಮಣ್ಪಾಲು ಮಾಡ್ಬಿಟ್ನಲ್ಲ ಅಂಬೋ ಸಿಟ್ನಾಗೆ ನಾಕೈದು ಜನ ಮೋಟ್ರಂಗುಂಗೆ ನವ್ವೆತ್ತಿದ್ರು. ನವ್ವಿಂದ ನರುಳ್ತಾ ಮೋಟ್ರಂಗ ಹಣ್ಗಾಯಿ ನೀರ್ಗಾಯಾದ. ಆವಾಗ್ಲೇ ಗೊತ್ತಾಗಿದ್ದು ಮೋಟ್ರಂಗುಂಗೆ – ಕೋಡಿ ಈ ಹಟ್ಟಿ ಬಿಟ್ಟು ಅವ್ನೂರ್ಗೆ ಹೋಗ್ತಾನೇ ಅಂತ. ಅದೂ ದೂರನೇ ಐತೆ. ಈ ಕಡ್ಕೆ ಬರಲ್ಲ. ಈ ಹಟ್ಟಿ ಯಜ್ಮಾನ್ಕೆ ನಂಗೆ ಬತ್ತದೆ ಅಂತ ಎಲ್ಲ ಮುಗುದ್ಮೇಲೆ ಗೊತ್ತಾಗಿತ್ತು. ಈ ರಾಮಾಣ್ಯ ಮುಗುದ್ಮೇಲೆ ಬಾಯ್ಗೆ ಸಿಗ್ದೆ ಮಣ್ಣಾದ ಬಾಡ್ನ ನೆನುಸ್ಕಂಡು ಮತ್ತೆಲ್ಡು ಕ್ವಾಣನ ಕುಯ್ಯೋಕೆ ಹಟ್ಟಿಅಣ್ತಂದೀರು ಹೊರುಟ್ರು. ಇಡೀ ಹಟ್ಟಿ ಕ್ವಾಣ ಕಡ್ದು ತೇಲಿ ಮುಳ್ಗಿತು. ಘಟೆ ಪೂಜೆ ಮಾಡಿ ಈಚ್ಲು ಹೆಂಡದ ಹೊಳೆಯೇ ಹರಿತು. ಹಟ್ಟಿಗೆ ಹಟ್ಟಿಯೇ ಮೂರ್ನಾಲ್ಕು ದಿನ ಉಂಡು ಮಲ್ಗಿತು. ತನ್ಗೆ ಯಾರೂ ಇಲ್ದಿದ್ರಿಂದ ಕೋಡಿ ತನ್ನ ಲಗ್ಣದ ಇಚಾರನ ನೀಗೋನಿಯರ್ಗೆ ತಿಳ್ಸಿರ್ಲಿಲ್ಲ. ಅಯ್ಯಾರೆಲ್ಲಿ ಬತ್ತಾರೆ ಅಂತ ಅವ್ರಿಗೂ ಹೇಳ್ಲಿಲ್ಲ. ಗಂಡಿನ ಕಡೆ ಅವನೊಬ್ಬನೇ. ಲಗ್ಣ ಮುಗಿತು.

ಲಗ್ಣ ಆಗಿ ಒನ್ದ ವಾರ ಕಳ್ದ ಮ್ಯಾಲೆ ಕೋಡಿಗೆ ನೀಗೊನಿ ನೆನ್ಪಾಯ್ತು. “ದೊಡ್ಡೀರಿ ಕರ್ಕಂಡು ನೀಗೊನಿಗೋಯ್ತಿನಿ,” ಎಂದು ಚಿಕ್ಕಯ್ಯಂಗೆ ಹೇಳ್ದ. ಚಿಕ್ಕಯ್ಯ, “ಇಲ್ಲೇ ಇರು… ಹ್ಯಂಗೂ ಅಲ್ಲೂ ನಿಂಗೇ ಯಾರೂ ಇಲ್ಲ. ನಂಗೂ ಗಂಡ್ಮಕ್ಕಳಿಲ್ಲ. ನಂಗೆ ಗಂಡ್ಮಗನಾಗೇ ಇಲ್ಲಿರು,” ಎಂದು ಸಾರ್ಸಾರಿ ಹೇಳ್ದ. ಆದ್ರೇ ಕೋಡಿ, “ಇಲ್ಲ… ನಮ್ಮೂರ್ಗೋಯ್ತಿನಿ,” ಎಂದ. ಒಲ್ದ ಮನ್ಸಿಂದ ಚಿಕ್ಕಯ್ಯ ಒಪ್ಕೊಂಡ. ಮಗ್ಳನ್ನು ಅಳಿಯನ್ನೂ ಕರ್ಕೊಂಡು ನೀಗೊನಿಗೆ ಬಿಟ್ಟುಬರಕ್ಕೆ ವಲ್ಟ. ಹಟ್ಯಾದ ಹಟ್ಟಿಲ್ಲಾ ಮಡ್ಲಕ್ಕಿ ಕಟ್ಟಿ ಇಬ್ರನ್ನೂ ನೀಗೊನಿಗೆ ಕಳುಸ್ಕೊಟ್ತು. ಚಿಕ್ಕಯ್ಯ ಆ ದಾರಿಲಿ ಇಬ್ರುನ್ನೂ ಬಿಟ್ಟು ಬರಲಾಗ್ದೆ ಮೊದ್ಲಸತ್ಗೆ ನೀಗೊನಿಗೆ ಹ್ವಾದ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ರವಿಕುಮಾರ್ ನೀಹ
ರವಿಕುಮಾರ್ ನೀಹ
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿಯವರು. ಕನ್ನಡ ಮೇಷ್ಟ್ರು. ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ಪರಿಭಾಷೆಗಳನ್ನು ಜೋಡಿಸಿದ ಗಮನಾರ್ಹ ವಿಮರ್ಶಕ. ಇತ್ತೀಚೆಗೆ ಬಿಡುಗಡೆಯಾದ 'ಅರಸು ಕುರನ್ಗರಾಯ' ಕೃತಿ ಇವರ ಸಂಶೋಧನಾ ಆಸಕ್ತಿಯನ್ನು ಮತ್ತು ನಿಜವಾದ ನೆಲಮೂಲದ ಸಂಶೋಧನೆಗಳು ಸಾಗಬೇಕಾದ ಹಾದಿಯನ್ನು ಸಾರುವ ಅಪೂರ್ವ ದಾಖಲೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...