ನಮ್ ಜನ | ಒಂಟಿ ಕಣ್ಣಿನ ಒಬ್ಬಂಟಿ ಬದುಕಿನ ಆಟೋ ಗೌಸ್ ಸಾಹೇಬ್ರು

Date:

ಟಿ ಆರ್ ಶಾಮಣ್ಣ ಪಾರ್ವತಿಪುರ ಕಾರ್ಪೊರೇಟರ್ ಆಗಿದ್ದಾಗ, ಒಂದ್ಸಲ ರಾತ್ರಿ ಮೂರ್ನಾಲ್ಕ್ ಜನ ಸೇರಿ ನನ್ ಮರ್ಡರ್ ಮಾಡಕ್ಕೆ ಪ್ಲಾನ್ ಮಾಡಿದ್ರು. ನಾನು ಶಾಮಣ್ಣೋರಿಗೆ ಫೋನ್ ಮಾಡ್ದೆ. ನಿಮ್ಗೆ ಗೊತ್ತಿಲ್ಲ... ರಾತ್ರಿ ಹತ್ತೂವರೆ, ಆಟೋ ಹತ್ಕೊಂಡ್ ಬಂದೇಬಿಟ್ರು!

ಬಸವನಗುಡಿಯ ಮಹಮಡನ್ ಬ್ಲಾಕ್‌ನ ಬಿಲಾಲ್ ಮಸೀದಿ ರಸ್ತೆಯ ತಿರುವಿನಲ್ಲಿ, ಕಸದ ರಾಶಿಯ ಪಕ್ಕದಲ್ಲಿ ಆಟೋವೊಂದು ನಿಂತಿತ್ತು. ಅದರೊಳಗೆ ವಯಸ್ಸಾದ ಇಬ್ಬರು ಕೂತು ಮಾತನಾಡುತ್ತಿದ್ದರು. ಒಬ್ಬರು ಆಟೋ ಮಾಲೀಕರು – ಸೈಯದ್ ಗೌಸ್. ಮತ್ತೊಬ್ಬರು ಅವರ ಗೆಳೆಯ ಸಿರಾಜ್ ಅಹಮದ್.

ಕುಗ್ಗಿದ ದೇಹ, ಖಾಕಿ ಡ್ರೆಸ್, ಹವಾಯಿ ಸ್ಲಿಪ್ಪರ್, ಮಂಡಿಯುದ್ದ ಪ್ಯಾಂಟು, ಮೊಳದುದ್ದ ಬಿಳಿಗಡ್ಡ, ತಲೆಯ ಮೇಲೊಂದು ಪುಟ್ಟ ಟೋಪಿ ಧರಿಸಿದ್ದ ಆಟೋ ಮಾಲೀಕ ಕಮ್ ಚಾಲಕ ಸೈಯದ್ ಗೌಸ್‌ರಿಗೆ ಈಗ 80 ವರ್ಷ. ಯಾರಬ್ ನಗರದ ಪುಟ್ಟ ಮನೆಯಲ್ಲಿ ವಾಸ. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ, ನಮಾಜ್ ಮಾಡಿ ಬನ್ ತಿಂದು, ಟೀ ಕುಡಿದು, ಆಟೋ ಹತ್ತಿ ನೇರವಾಗಿ ಮಹಮಡನ್ ಬ್ಲಾಕ್‌ಗೆ ಬರುತ್ತಾರೆ. ಗೆಳೆಯ ಸಿರಾಜ್‌ರೊಂದಿಗೆ ಕೂತು ಮನದಣಿಯೆ ಮಾತನಾಡುತ್ತಾರೆ. ಟೀ ಕುಡಿಯುತ್ತಾರೆ. ಸಿರಾಜ್ ಮನೆಯತ್ತ ಕಾಲು ಹಾಕಿದರೆ, ಗೌಸ್ ಗಿರಾಕಿಗಳನ್ನು ಅರಸಿ ರಸ್ತೆಗಿಳಿಯುತ್ತಾರೆ.

ಇವತ್ತಿನ ನಮ್ಮ ಹೀರೋ ಗೌಸ್‌ರಿಗೆ, “ನಮಸ್ಕಾರ… ಹೇಗಿದೆ ದುಡಿಮೆ?” ಎಂದೆ.

ಜೇಬಿನಿಂದ ಪುಟ್ಟ ಪಾಕೆಟ್ ಡೈರಿ ತೆಗೆದು ಪುಟ ತಿರುವಿದರು. ಪ್ರತೀ ಪುಟದಲ್ಲೂ ದಿನಾಂಕ, ದುಡಿಮೆ, ಖರ್ಚು, ಉಳಿಕೆಯ ಉದ್ದನೆ ಲೆಕ್ಕ. “ಇಷ್ಟೇ ನೋಡಿ ನಮ್ದು…” ಎಂದರು. ದೇಶದಲ್ಲಿರುವ ಜನರೆಲ್ಲ ಈ ರೀತಿ ಲೆಕ್ಕ ಇಟ್ಟರೆ, ತೆರೆದು ತೋರಿದರೆ, ಐಟಿ-ಇಡಿ-ಸಿಬಿಐಗಳಿಗೆ ಕೆಲಸವೇ ಇರುವುದಿಲ್ಲ ಎನಿಸಿತು. “ದಿನಕ್ಕೆ ಏಳ್ನೂರ್ ದುಡಿತಿನಿ… ಮುನ್ನೂರೈವತ್ ಗ್ಯಾಸ್‌ಗೆ. ಮುನ್ನೂರೈವತ್ ನನ್ ಖರ್ಚಿಗೆ. ಊಟ-ತಿಂಡಿ-ಟೀ-ಬನ್ನಿಗೆ ಅಂತ ಹೋಗಿ ನೂರ್ ಉಳಿತದೆ, ಅದು ದಾನ-ಧರ್ಮಕ್ಕೆ,” ಎಂದರು. ಸುಮ್ಮನೆ ಅವರ ಮುಖ ನೋಡಿದೆ. “ನಮ್ದೇನಿದೆ? ಎಲ್ಲ ಅವ್ನು ಕೊಟ್ಟಿದ್ದು, ಕೊಟ್ ಹೋಗ್ತಿರಬೇಕು ಅಷ್ಟೆ…” ಎಂದರು.

ಈ ಲೇಖನ ಓದಿದ್ದೀರಾ?: ನಮ್ ಜನ | ಜಗದೊಳಗಿದ್ದೂ ಜಲಗಾರರಾಗದ ಪೋತಲಪ್ಪ ದಂಪತಿ

ಯಾರಬ್ ನಗರದಲ್ಲಿ ಗೂಡಿನಂತಹ ಮನೆ. ಐವರು ಮಕ್ಕಳು – ಎರಡು ಗಂಡು, ಮೂರು ಹೆಣ್ಣು. ಎಲ್ಲರಿಗೂ ಮದುವೆಯಾಗಿದೆ. “ಯಾರೂ ನನ್ ಜೊತೆ ಇಲ್ಲ. ಹಕ್ಕಿ ಥರ ಗೂಡು ಕಟ್ಟಿ, ರೆಕ್ಕೆ ಪುಕ್ಕ ಬಲ್ತ ಮೇಲೆ ಗೂಡಲ್ಲಿರು ಅಂದ್ರೆ ಆಗ್ತದಾ? ಮರಿಗಳನ್ನು ಬಿಟ್ಟುಕೊಡುವ ಹಕ್ಕಿನೇ ಆರಾಮಾಗಿರುವಾಗ ನಾವ್ ನರಳದು ಸರೀನಾ?” ಎಂದರು. ಮಾಗಿದ ವಯಸ್ಸು ಸಂತನಂತೆ ಮಾಡಿತ್ತು. “ಮನೆಯವ್ರು ಇದಾರಲ್ಲ ಬಿಡಿ…” ಅಂದೆ. “ಅವರೂ ಇಲ್ಲ… ಇದೇ ರಮ್ಜಾನ್‌ ಟೈಮಲ್ಲಿ, ಐದ್ ವರ್ಷದ್ ಕೆಳ್ಗೆ, ಕ್ಯಾನ್ಸರ್‌ನಿಂದ ತೀರಿಕೊಂಡ್ರು. ಈಗ ನಾನೊಬ್ನೆ. ನನ್ ಜೊತೆ ಆಟೋ ಇದೆ, ಸಿರಾಜ್ ಸಿಕ್ತಾರೆ… ಇನ್ನೇನ್ ಬೇಕು?” ಎಂದರು.

ಕಿಷ್ಕಿಂಧೆಯಂತಹ ಯಾರಬ್ ನಗರದಲ್ಲಿ ಹುಟ್ಟಿ ಬೆಳೆದ ಸೈಯದ್ ಗೌಸ್, ಯೌವನದ ದಿನಗಳಲ್ಲಿ ಕಟ್ಟುಮಸ್ತಾಗಿದ್ರು. ಬೆಳಗ್ಗೆಯಿಂದ ಸಂಜೆತನಕ ಕುಡೀತಿದ್ರು. ಕುಡಿದಾಗ ಜಗಳ-ಹೊಡೆದಾಟಕ್ಕೆ ಬೀಳ್ತಿದ್ರು. ಹಾಗಾಗಿ, ಗೌಸ್‌ಗೆ ರೌಡಿ ಎಂಬ ಹಣೆಪಟ್ಟಿ ಅಂಟಿಕೊಂಡಿತ್ತು. ಅದಕ್ಕೆ ರಾಜಕಾರಣವೂ ತಳುಕು ಹಾಕಿಕೊಂಡಿತ್ತು. “ನಿಮ್ಗೆ ಟಿ ಆರ್ ಶಾಮಣ್ಣ ಗೊತ್ತಾ? ಕಾರ್ಪೊರೇಟರ್, ಎಂಎಲ್ಎ, ಎಂಪಿ ಆಗಿದ್ದೋರು; ಆಟೋದಲ್ಲಿ ಓಡಾಡ್ತಿದ್ರು, ಹಂಚಿನ ಮನೆನಲ್ಲಿದ್ರು. ಅವ್ರು ನಮ್ ಗುರುಗಳು. ಪಾರ್ವತಿಪುರ ಕಾರ್ಪೊರೇಟರ್ ಆಗಿದ್ದಾಗ, ಒಂದ್ಸಲ ರಾತ್ರಿ ಮೂರ್ನಾಲ್ಕ್ ಜನ ಸೇರಿ ನನ್ ಮರ್ಡರ್ ಮಾಡಕ್ಕೆ ಪ್ಲಾನ್ ಮಾಡಿದ್ರು. ನಾನು ಶಾಮಣ್ಣೋರಿಗೆ ಫೋನ್ ಮಾಡ್ದೆ. ನಿಮ್ಗೆ ಗೊತ್ತಿಲ್ಲ… ರಾತ್ರಿ ಹತ್ತೂವರೆ, ಆಟೋ ಹತ್ಕೊಂಡ್ ಬಂದೇಬಿಟ್ರು! ಜೀವ ಉಳ್ಸಿದ್ ಪುಣ್ಮಾತ್ಮ ಅವ್ರು. ಆ ಕಾಲದ ಮೇಯರ್ ನಾಗಣ್ಣ, ಬಿ ಟಿ ಸೋಮಣ್ಣ, ದೇವ್ರಾಜ್ ಅರಸು… ಎಂಥಾ ಮನುಷ್ರು!” ಎಂದು ಮರೆತುಹೋದ ಮಹನೀಯರನ್ನು ನೆನಪಿಸಿಕೊಂಡರು.  

ಗೆಳೆಯ ಸಿರಾಜ್ ಅಹಮದ್ ಅವರೊಂದಿಗೆ ಗೌಸ್

ಈ ನಮ್ಮ ಗೌಸ್ ಸಾಹೇಬ್ರಿಗೆ ರಾಜಕಾರಣದ ಹುಚ್ಚಿತ್ತು. ಅದಕ್ಕೆ ತಕ್ಕಂತೆ, ಆಗಿನ ಪ್ರಭಾವಿ ರಾಜಕಾರಣಿ ಎಸ್ ರಮೇಶ್ (ಸ್ಲಂ ರಮೇಶ್) ಗೌಸ್‌ರನ್ನು ಜೊತೆಗಿಟ್ಟುಕೊಂಡು ಓಡಾಡುತ್ತಿದ್ದರು. “ದೇವರಂತೋರು… ಬಡವ್ರು ಬಗ್ಗೆ ಬಾರೀ ಕನಿಕರ. ಬ್ರಾಹ್ಮಣ್ರು. ಅಪ್ಪ ಸಿಕ್ಕಾಪಟ್ಟೆ ಸ್ಟ್ರಿಕ್ಟು. ಮಗನ ನಡತೆ ಸರಿ ಇಲ್ಲ ಅಂತ ಮನೆಯಿಂದ ಹೊರಗೆ ಹಾಕ್ದಾಗ, ಬೀದಿ ಬದಿ ತೊಟ್ಟಿ ಅನ್ನ ತಿಂದಿದ್ರಂತೆ. ‘ಹಸಿದವರ ಕತೆ ನನ್ಗೆ ಗೊತ್ತು ಕಣೋ…’ ಅಂತಿದ್ರು. ನನ್ಗೆ ಡೆಲ್ಲಿಗೆ ಕರಕಂಡೋಗಿದ್ರು, ರಾಜೀವ್ ಗಾಂಧೀನ ತೋರಿಸಿದ್ರು. ನಮ್ ಯಾರಬ್ ನಗರದ ಜನಕ್ಕೆ ಮನೆ ಮಾಡ್ಕೊಟ್ರು. ನನ್ಗೆ ಮನೆಗೆ ಕರಕಂಡೋಗಿ ಊಟ ಹಾಕ್ತಿದ್ರು. ಕುಡಿಯದ್ ಬಿಡು ಅಂತಿದ್ರು. ರಾಜಕೀಯ ನಿಂಗೆ ಲಾಯಕ್ಕಲ್ಲ ಅಂತ ಅವ್ರೆ ಮುಂದೆ ನಿಂತು ಆಟೋ ತಕ್ಕೊಟ್ರು. ಕೂಲಿ ಮಾಡಿ ಜೀವನ ಮಾಡು ಅಂದ್ರು. ಅವ್ರು ಸತ್ತೋದ್ರು… ನಾವೂ ಸತ್ತೋದೋ…” ಎಂದು ಮೌನವಾದರು.

ರೌಡಿ-ಕುಡುಕರಾಗಿದ್ದ ಗೌಸ್, ತಮ್ಮ ಮೂವತ್ತನೇ ವಯಸ್ಸಿಗೆ ಆಟೋ ಡ್ರೈವರ್ ಆದರು. ಬಾಡಿಗೆಗಾಗಿ ಹಗಲು-ರಾತ್ರಿ ಎನ್ನದೆ ಬೆಂಗಳೂರಿನ ಬೀದಿಗಳನ್ನು ಸುತ್ತತೊಡಗಿದರು. ಪುಟ್ಟ ಮನೆ, ಮನೆ ತುಂಬಾ ಮಕ್ಕಳು, ಕಷ್ಟದ ಬದುಕು. ಅದರಲ್ಲಿಯೇ ಎದ್ದು-ಬಿದ್ದು ಎಲ್ಲರಿಗೂ ಮದುವೆ ಮಾಡಿ, ಎಲ್ಲರ ಬದುಕನ್ನು ನೇರೂಪು ಮಾಡಿದರು. ಗಂಡು ಮಕ್ಕಳಿಬ್ಬರು ಮರಗೆಲಸ ಕಲಿತು, ಮನೆ ಮಾಡಿಕೊಂಡು ಬೇರೆಯಾದರು. ಗೌಸ್‌ ಯಥಾಪ್ರಕಾರ ಆಟೋ ಓಡಿಸುತ್ತ, ಕೂತ ಗಿರಾಕಿಗಳೊಂದಿಗೆ ಕಲಿಯುತ್ತ, ವಯಸ್ಸು ಕಳೆಯುತ್ತ, ಮಡದಿಯ ತಾಳ್ಮೆಗೆ ತಣ್ಣಗಾಗ್ತಾ ಮನುಷ್ಯರಾದರು. “ನನ್ನ ಹೆಂಡ್ತಿ ಶಮಾ ಬಾನು. ಆಕೆ ನನ್ ಲೈಫ್ ಚೇಂಜ್ ಮಾಡದ್ಲು. ಎಪ್ಪತ್ತು ಮಕ್ಕಳಿಗೆ ಖುರಾನ್ ಓದುಸ್ತಿದ್ಲು. ಒಂದೇ ಒಂದ್ ಮಗೂಗು ಹೊಡ್ದೋಳಲ್ಲ. ಆಕೆಯ ನಮಾಜ್, ಖುರಾನ್ ಓದು ನನ್ನನ್ನು ಬದಲಿಸಿತು. ಕುಡಿತ ಬಿಡಿಸಿತು. ಮನುಷ್ಯನನ್ನಾಗಿ ಮಾಡಿತು. ಒಂದೇ ಒಂದ್ ಬೇಜಾರ್ ಅಂದ್ರೆ, ಕ್ಯಾನ್ಸರ್ ಇದೆ ಅಂತ ಕೊನೆವರ್ಗೂ ಹೇಳ್ಲೇ ಇಲ್ಲ. ಮನೆ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಅವರಿವರ ಕೈ-ಕಾಲ್ ಹಿಡ್ದು ಉಳಸ್ಕೊತಿದ್ದೆ… ಆದ್ರೆ ಅವಕಾಶಾನೇ ಕೊಡಲಿಲ್ಲ…” ಎಂದು ಮಂಕಾದರು.

ಈ ಲೇಖನ ಓದಿದ್ದೀರಾ?: ಹಳ್ಳಿ ದಾರಿ | ಉದ್ಯೋಗ ಖಾತರಿ ಹೋರಾಟದ ವೇಳೆ ದಿಲ್ಲಿಯಲ್ಲಿ ಕಂಡ ಎರಡು ಪ್ರಪಂಚ

ಮಡದಿಯ ಸಾವಿನ ನಂತರ ಬಾರದ ವಿಮೆ ಹಣಕ್ಕಾಗಿ ಈಗಲೂ ಅಲೆಯುತ್ತಿರುವ ಗೌಸ್ ಸಾಹೇಬರು, ಬದುಕಿನ ಏರಿಳಿತಗಳನ್ನೆಲ್ಲ ಹೇಳಿಕೊಂಡು ದುಃಖಿತರಾದರು. ಅವರನ್ನು ಆ ಮನಸ್ಥಿತಿಯಿಂದ ಹೊರತರಲು, “ಬೆಂಗಳೂರಿನ ರಸ್ತೆಗಳಲ್ಲಿ ಆಟೋ ಓಡುಸ್ತಾನೆ 50 ವರ್ಷ ಕಳೆದುಬಿಟ್ರಿ… ಹೇಗಿತ್ತು ನಿಮ್ಮ ಪ್ರಯಾಣ?” ಎಂದೆ. “ಈ ರಸ್ತೆ ಇದ್ಯಲ್ಲ… ಹರಿಯೋ ನದಿ ಥರ. ನದಿ ಹರೀತದೆ, ರಸ್ತೆ ಕರೀತದೆ. ಮನುಷ್ರು ಏನ್ಮಾಡುದ್ರೂ ಅವರೆಡೂ ಹಂಗೇ ಇರ್ತವೆ. ಅವುಗಳಿಂದ ಮನುಷ್ಯ ಕಲಿಯೋದು ಭಾರೀ ಇದೆ. ನನ್ ಲೈಫ್ನಲ್ಲಿ ಬೇಕಾದಷ್ಟು ಜನಾನ ನೋಡುಬಿಟ್ಟೆ. ನನ್ಗೆ ಸಿಕ್ದೋರೆಲ್ಲ ಒಳ್ಳೇರೆ. ಈ ವಯಸ್ನಲ್ಲೂ ದುಡಿತಿದಿಯಲ್ಲಪ್ಪ ಅಂತ ಮೀಟರ್ ಮೇಲೆ ಇನ್ನೊಂದ್ ಸ್ವಲ್ಪ ಜಾಸ್ತಿ ಕೊಟ್ಟು ಕೈ ಮುಗೀತರೆ. ಟ್ರಾಫಿಕ್ ಇನ್ಸ್‌ಪೆಕ್ಟರ್ ಸೆಲ್ಯೂಟ್ ಹೊಡಿತರೆ. ಒಂದ್ಸಲ ಜಯನಗರ ಸೆವೆಂಥ್ ಬ್ಲಾಕಲ್ಲಿ ಎದುರ್ಗಡೆಯಿಂದ ಸ್ಕೂಟರ್‌ನಲ್ಲಿ ಬಂದ ಕಾಲೇಜ್ ಹುಡುಗಿ ನನ್ ಆಟೋಗೆ ಗುದ್ಬುಟ್ಳು. ಅವ್ಳು ಗುದ್ದಿದ್ ಫೋರ್ಸಿಗೆ ನನ್ ಆಟೋ ಫ್ರಂಟ್ ಗ್ಲಾಸ್ ಚೂರ್-ಚೂರ್ ಆಗೋಯ್ತು. ಗಾಡಿ-ಬಾಡಿ ಎರಡೂ ಜಖಂ ಆಗಿವೆ. ಜನ ಓಡ್ಬಂದು ಎತ್ತಿ ರಸ್ತೆ ಪಕ್ದಲ್ಲಿ ಕೂರ್‍ಸಿದಾರೆ, ನನ್ ಎಡಗಣ್ಣಿಗೆ ಏಟು ಬಿದ್ದಿದೆ. ಹುಡ್ಗಿ… ‘ಸ್ಸಾರಿ ತಾತಾ…’ ಅಂತ ಅಳ್ತಾ ನಿಂತ್ಕಂತು. ಅವತ್ತು ಮೊಹಮ್ಮದ್ ಪೈಗಂಬರ್ ಹುಟ್ಟಿದ ದಿನ. ನನಗದೇನಾಯ್ತೊ ಗೊತ್ತಿಲ್ಲ… ‘ಇರ್‍ಲಿ ಹೋಗಮ್ಮ…’ ಅಂದೆ. ಆಕ್ಸಿಡೆಂಟ್ ಅಲ್ವಾ… ಪೊಲೀಸ್ ಕೇಸಾಯ್ತು. ‘ಬೇಡ ಬುಟ್ಬುಡಿ ಸಾರ್’ ಅಂದೆ. ಡಾಕ್ಟ್ರು-ಪೊಲೀಸ್ನೋರು ಇಬ್ರೂ, ‘ಏನ್ ಮನುಷ್ಯನಯ್ಯ ನೀನು!’ ಅಂತ ತಬ್ಕೊಂಡ್ರು. ಸಾಕಲ್ವಾ ಸಾರ್? ಆ ಡಾಕ್ಟ್ರು, ‘ನಿನ್ಗೆ ಫ್ರೀಯಾಗಿ ಆಪರೇಷನ್ ಮಾಡ್ತೀನಿ ನಮ್ ಆಸ್ಪತ್ರೆಗೆ ಬಾ’ ಅಂದ್ರು. ಬತ್ತೀನಿ ಅಂದೋನು ಕೊನೆಗೆ ಹೋಗಲೇ ಇಲ್ಲ. ಇವತ್ತಿಗೂ ಈ ಎಡಗಣ್ಣು ಕಾಣಲ್ಲ. ಅದರಲ್ಲೇ ಆಟೋ ಓಡುಸ್ತಿದೀನಿ… ಏನೂ ಆಗಿಲ್ಲ,” ಎಂದರು.

ಲೇಖಕರೊಂದಿಗೆ ಗೌಸ್

“80ನೇ ವಯಸ್ಸಿನಲ್ಲಿ ಇವತ್ತಿನ ಬೆಂಗಳೂರಿನ ಟ್ರಾಫಿಕ್ಕಿನಲ್ಲಿ, ಒಂದೇ ಕಣ್ಣಿನಲ್ಲಿ ಆಟೋ ಓಡಿಸೋದು ಕಷ್ಟ ಅಲ್ವೇ?” ಅಂದರೆ, “ಕಷ್ಟ ಯಾವ್ದಿಲ್ಲ? ಆಟೋಗೂ ಕಷ್ಟ ಇದೆ, ನನ್ಗೂ ಕಷ್ಟ ಇದೆ. ಆಟೋದಲ್ಲಿ ಕೂರೋ ಜನರ ಕಷ್ಟ ಕೇಳೋದು ಮುಖ್ಯ. ಅವ್ರು-ನಾವು ಕೂಡಿ ಮಾಡೋ ಪ್ರಯಾಣ ಇದೆಯಲ್ಲ, ಅದೊಂಥರಾ ಸಂಸಾರ. ಸರಿದೂಗಸ್ಕಂಡ್ ಹೋಗ್ಬೇಕು. ನಮ್ ಸಂಬಂಧ ಒಳ್ಳೆದಾಗಿದ್ರೆ ಉಳೀತದೆ, ಕೆಟ್ದಾಗಿದ್ರೆ ಕರಗೋಗ್ತದೆ. ನಿಮ್ಗೆ ಗೌರಿ ಲಂಕೇಶ್ ಗೊತ್ತಾ? ಅವರು ಸಾಯೋಕೆ ಮುಂಚೆ, ಮೂರು ತಿಂಗಳಿರಬೇಕಾದ್ರೆ ನನ್ ಆಟೋದಲ್ಲಿ ಕೂತಿದ್ರು. ನನ್ ನೋಡಿ, ‘ಏನಪ್ಪಾ… ಈ ವಯಸ್ನಲ್ಲೂ ಓಡಿಸ್ತಿದೀರಾ! ಮನೆ-ಮಕ್ಕಳು ಎಲ್ಲ ಹೇಗಿದಾರೆ? ನಮ್ ದೇಶದಲ್ಲಿ ಮುಸಲ್ಮಾನರು ಬದುಕೋದು ಕಷ್ಟ ಆಗಿದೆಯಪ್ಪ’ ಅಂತ ಹೇಳಿ ಐನೂರೂಪಾಯಿ ಕೊಟ್ಟಿದ್ರು. ಅವರ್‍ನ ಇನ್ನೊಂದ್ ಸಲ ಕೂರಸ್ಕಂಡ್ ಋಣ ತೀರಿಸ್ಬೇಕು ಅಂದ್ಕೊಂಡಿದ್ದೆ, ಅನ್ಯಾಯವಾಗಿ ಹೊಡ್ದಾಕ್ಬುಟ್ರು,” ಎಂದು ತುಂಬಾನೇ ಬೇಜಾರು ಮಾಡಿಕೊಂಡರು. ಆ ಬೇಜಾರಿನಿಂದ ಹೊರಬರಲು ಅವರೇ ಒಂದು ಹಾಡು ಹಾಡಿದರು. “ಓ ಹಿಂದೂ ಬನೇಗಾ, ಯಾ ಮುಸಲ್ಮಾನ ಬನೇಗಾ, ಇನ್ಸಾನ್ ಕಿ ಔಲಾದ್ ಹೈ ಇನ್ಸಾನ್ ಬನೇಗಾ… ನಿಮ್ಮಂಗೆ ಯಾರೋ ಒಬ್ಬರು ಲೇಡಿ ಬಂದು, ವಿಡಿಯೋ ಮಾಡ್ತೀನಿ ಹಾಡಿ ತಾತಾ ಅಂದ್ರು ಆಗ ಹಾಡಿದ್ದು. ಇದು ಯಾಕೆ ಹೇಳ್ದೆ ಅಂದ್ರೆ, ಒಂದ್ಸಲ ಎಂಟನೇ ಮೈಲಿ ಕೈಲ್ ಹತ್ರ ನನ್ ಆಟೋ ಆಕ್ಸಿಡೆಂಟ್ ಆಯ್ತು. ರೋಡ್ ಡಿವೈಡರ್‌ಗೆ ಹೊಡೆದಿದ್ದೆ. ಸ್ಕೂಟರ್‌ನಲ್ಲಿ ಹೋಗ್ತಿದ್ದ ಗಂಡ-ಹೆಂಡತಿ ನಿಲ್ಲಿಸಿ, ನನ್ನ-ಆಟೋನ ಎತ್ತಿ ಕೂರಿಸಿ, ನಾನ್ ಹೋಗಬೇಕಾಗಿದ್ದ ನೆಲಮಂಗಲದ ಇಸ್ಲಾಂಪುರದವರೆಗೂ ಬಂದು, ಬಿಟ್ಟು ಹೋಗಿದ್ರು. ಅವರ್‍ಗೆ ನಾನ್ ಏನ್ ಮಾಡಿದ್ದೆ, ಯಾಕೆ ಬಂದು ಬಿಟ್ಟೋದ್ರು, ಇದು ಸಾರ್ ನಮ್ ದೇಶ…” ಎಂದು ಎರಡೂ ಕೈ ಮೇಲೆತ್ತಿ ಅಲ್ಲಾನತ್ತ ನೋಡಿದರು. “ಅಲ್ಲಾ ಟೈಮ್ ಕೊಟ್ಟಿದಾನೆ, ಇದೀನಿ… ಕರೆದ್ರೆ ಹೋಗ್ತಿನಿ,” ಎಂದರು.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

1 COMMENT

  1. This is very great story manushyana baduku yestu sundara adare yestu viparyasaallava vayassu bahala anubavavannu kottubiduthade Kathe keli kanninali niru banthu danyavdagalu 😩

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ ಜನ | ಅಮಾವಾಸ್ಯೆ ರಾತ್ರಿಯಲ್ಲಿ ಆಂಬುಲೆನ್ಸ್ ಮಂಜುನಾಥನೊಂದಿಗೆ ಮಾತುಕತೆ

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...

ಗಾಯ ಗಾರುಡಿ | ಮಾತು ಮರಣಿಸುತ್ತಿರುವ ಕಾಲದಲ್ಲಿ ಮಾತುಗಳೇ ಸಂಜೀವಿನಿಯಾಗುವ ಸೋಜಿಗ

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...

ರೈತರ ಆತ್ಮಹತ್ಯೆ ಬೆಂಕಿ ಕಾರ್ಪೊರೇಟುಗಳನ್ನು ಸುಟ್ಟೀತು!

ರೈತರ ಆತ್ಮಹತ್ಯಾ ಸರಣಿಯ ಬೇರುಗಳಿರುವುದು1991ರಲ್ಲಿ ಪರಿಚಯಿಸಿದ ಹೊಸ ಆರ್ಥಿಕ ನೀತಿ ಮತ್ತು...