ಮೈಕ್ರೋಸ್ಕೋಪು | ಓಹ್… ಹೋದಲ್ಲೆಲ್ಲ ನಾವು ಡಿಎನ್‌ಎ ಗುರುತು ಬಿಟ್ಟುಬರುತ್ತಿದ್ದೇವೆಯೇ?

Date:

ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಈ ತಂತ್ರಜ್ಞಾನ ಯಶಸ್ಸು ಕಂಡರೆ, ನಾವು ಎಲ್ಲೆಲ್ಲಿ ಇದ್ದೆವು, ಏನೇನು ಮಾಡಿದ್ದೆವು, ಎಂತೆಂತಹ ರೋಗ ನಮಗೆ ತಾಕಿತ್ತು ಎನ್ನುವುದೆಲ್ಲವನ್ನೂ ನಮಗೇ ಗೊತ್ತಿಲ್ಲದಂತೆ ವೈದ್ಯರೋ, ಪೊಲೀಸರೋ ಅಥವಾ ಕಿಡಿಗೇಡಿಗಳೋ ಸುಲಭವಾಗಿ ಪತ್ತೆ ಮಾಡಿಬಿಡಬಹುದು!

ಎಷ್ಟೋ ವರ್ಷಗಳ ಹಿಂದೆ ದೆಹಲಿಗೆ ಹೋಗಿದ್ದಾಗ ಹಾದಿಯಲ್ಲಿ ಯಾವುದೋ ಗೊತ್ತು ಗುರುತಿಲ್ಲದ ಸ್ಥಳದಲ್ಲಿ ಇದ್ದೆ ಎಂದು ಯಾರಾದರೂ ಹೇಳಿದರೆ ಏನನ್ನಿಸೀತು? ನಮಗೇ ನೆನಪಿಲ್ಲದ ಸ್ಥಳವಾಗಿದ್ದಲ್ಲಿ ಇನ್ನೂ ಅಚ್ಚರಿ ಆಗಬಹುದಲ್ಲವೇ? ನಮಗೇ ಗೊತ್ತಿಲ್ಲದೆ ನಾವು ನಮ್ಮ ಗುರುತುಗಳನ್ನು ಬಿಟ್ಟು ಹೋಗಿರಬಹುದು. ಅವನ್ನು ಪತ್ತೆ ಮಾಡಬಹುದಂತೆ. “ಅದೇನು ವಿಶೇ಼ಷ. ಎಲ್ಲ ಕಡೆಯೂ ಆಧಾರ್‌ ಕಾರ್ಡು ಕೊಡುತ್ತೇವಲ್ಲ?” ಎಂದಿರಾ… ಇದು ಆಧಾರ್‌ ಕಾರ್ಡು, ಫೋನು ನಂಬರಿನ ವಿಷಯವಲ್ಲ. ಗೊತ್ತಿದ್ದೂ ಕೊಡುವ ಮಾಹಿತಿಯದ್ದಲ್ಲ. ನಮ್ಮ ಸ್ವಂತ ವ್ಯಕ್ತಿತ್ವದ ಕುರುಹು – ಡಿಎನ್‌ಎ. ನಾವು ಹೋದೆಡೆಯಲ್ಲೆಲ್ಲ ನಮ್ಮ ಡಿಎನ್‌ಎಯನ್ನು ಗೊತ್ತಿಲ್ಲದೆಯೇ ಬಿಟ್ಟು ಹೋಗುತ್ತೇವಂತೆ. ಅವನ್ನು ಪತ್ತೆ ಮಾಡಿ, ಇಂತಹವರೇ ಇದು ಎಂದು ಹೇಳುವಷ್ಟು ಡಿಎನ್‌ಎ ತಂತ್ರಜ್ಞಾನ ಸುಧಾರಿಸಿದೆಯಂತೆ. ಹಾಗೆಂದು ‘ನೇಚರ್‌ ಇಕಾಲಜಿ ಅಂಡ್‌ ಇವೊಲ್ಯೂಶನ್‌’ ಪತ್ರಿಕೆ ಸುದ್ದಿ ಪ್ರಕಟಿಸಿದೆ. ನಮ್ಮ ಖಾಸಗಿತನ ಬಟಾಬಯಲಾಗುತ್ತಿರುವುದಕ್ಕೆ ಇದು ಇನ್ನೊಂದು ಉದಾಹರಣೆ ಎನ್ನಬಹುದು.

ಖಾಸಗಿತನದ ಅಥವಾ ಪ್ರೈವಸಿಯ ರಕ್ಷಣೆ ಎನ್ನುವುದು ಇತ್ತೀಚೆಗೆ ಸುದ್ದಿಯಲ್ಲಿದೆ. ತಂತ್ರಜ್ಞಾನ ಸುಧಾರಿಸಿದಂತೆಲ್ಲ ಖಾಸಗಿತನ ಕಡಿಮೆಯಾಗುತ್ತಿದೆ. ನಮ್ಮ ಖಾಸಗಿ ವಿಷಯಗಳೂ ಜಗಜ್ಜಾಹೀರಾಗುತ್ತಿವೆ ಎಂದು ಗೊಣಗುತ್ತೇವಷ್ಟೆ. ಮದುವೆಮನೆಯಲ್ಲಿ ಎಲ್ಲರೂ ಊಟ ಮಾಡುವ ಫೋಟೊದಲ್ಲಿ ನಾವು ಕೆಟ್ಟದಾಗಿ ಬಾಯಿ ತೆಗೆದುಕೊಂಡು ಕುಳಿತಿರುವ ಫೋಟೊ ಕಂಡಾಗ ಹೇಗನ್ನಿಸೀತು ಹೇಳಿ? ನಮ್ಮ ಖಾಸಗಿ ಚಟುವಟಿಕೆಗಳು ಸಾರ್ವಜನಿಕವಾಗಿ ನಗೆಗೀಡಾಗುವುದು, ಇಲ್ಲವೇ ನೋವುಂಟು ಮಾಡುವ ಸಂಗತಿಯಾಗುವುದು ಯಾರಿಗೂ ಬೇಕಿಲ್ಲವಷ್ಟೆ. ಆದರೂ, ಇತ್ತೀಚೆಗೆ ತಂತ್ರಜ್ಞಾನ ನಮ್ಮ ಎಲ್ಲ ನಡವಳಿಕೆಗಳನ್ನೂ ಗಮನಿಸುವುದು ಹೆಚ್ಚಾಗಿದೆ. ಹಾಗಂತ ಈ ಮಾಹಿತಿ ಎಲ್ಲರಿಗೂ ಸಿಗುತ್ತದೆ ಅಂತಲ್ಲ. ಆದರೂ ನಿಮ್ಮ ವೈಯಕ್ತಿಕ, ಗುಟ್ಟಾಗಿರಬೇಕಾದ ವಿಷಯ ಯಾರ್ಯಾರ ಕೈಗೋ ಸಿಗಬಹುದಲ್ಲ ಎನ್ನುವ ಭಯ ಇದ್ದೇ ಇದೆ. ಈ ಭಯವನ್ನು ಹೆಚ್ಚಿಸುವ ಸುದ್ದಿಯೇ ‘ನೇಚರ್‌ ಇಕಾಲಜಿ ಅಂಡ್‌ ಇವೊಲ್ಯೂಶನ್‌’ ಪತ್ರಿಕೆಯಲ್ಲಿ ಬಂದಿದೆ.

ಈ ಆಡಿಯೊ ಕೇಳಿದ್ದೀರಾ?: ನೀಗೊನಿ | ‘ನೀಗೊನಿ’ ಅನ್ತ ಯಾರಾದ್ರೂ ಊರಿಗೆ ಹೆಸ್ರು ಕಟ್ತಾರಾ?

ಖಾಸಗಿತನವನ್ನು ಕಾಪಾಡಿಕೊಳ್ಳುವ ಚರ್ಚೆ ಇತ್ತೀಚೆಗೆ ಸ್ವಲ್ಪ ಗಾಢವಾಗಿದೆ ಎನ್ನಬೇಕು. ಕೆಲವು ದಿನಗಳ ಹಿಂದೆ ಬ್ಯಾಂಕ್‌ ಖಾತೆಗಳ ಜೊತೆಗೆ ಆಧಾರ್‌ ತಳುಕಿಸಲೇಬೇಕು ಎನ್ನುವ ಒಂದು ಗುಲ್ಲು ಎದ್ದಿತ್ತು. ಮಾರ್ಚ್‌ ಮೂವತ್ತರೊಳಗೆ ಹಾಗೆ ಮಾಡದಿದ್ದರೆ ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ ಎಂಬ ಬೆದರಿಕೆಯ ಸುದ್ದಿಯೂ ಹಬ್ಬಿತ್ತು. ಇದು ಕರ್ನಾಟಕದಲ್ಲಿ ನಡೆದ ಚುನಾವಣೆಯ ಅಸ್ತ್ರವೂ ಆಗಿತ್ತು ಎನ್ನಿ. ಇದನ್ನು ಸಾಕಷ್ಟು ಜನ ವಿರೋಧಿಸಿದರು. ಕೆಲವರು ದಂಡ ಕಟ್ಟಬೇಕಾಗುತ್ತದೆ ಎನ್ನುವುದನ್ನು ಬೇಡ ಎಂದರು. ಇನ್ನು ಕೆಲವರು ಇದು ಈಗಾಗಲೇ ಬಯಲಾಗಿರುವ ಖಾಸಗಿತನವನ್ನು ಇನ್ನಷ್ಟು ತೆರೆದಿಡುತ್ತದೆ. ನಮ್ಮ ಹಣಕಾಸಿನ ವ್ಯವಹಾರವನ್ನು ಎಲ್ಲರಿಗೂ ತಿಳೀಯುವಂತೆ ಮಾಡಿ ಬಿಡುತ್ತದೆ ಎಂದು ಭಯಪಟ್ಟರು. ಇನ್ನು ಕೆಲವರು, ಇದು ನಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳುವ ಹಕ್ಕನ್ನು ಕಸಿಯುತ್ತಿದೆ ಎಂದು ಕಾನೂನು ಮಾತನಾಡಿದರು. ಅದೇನೇ ಇರಲಿ, ಒಟ್ಟಾರೆ ಈ ಸುದ್ದಿಯು, ನಮ್ಮ ಸುದ್ದಿ ಬಟಾಬಯಲಾಗುತ್ತದೆ ಎಂದು ಭಯಪಡುವಂತಹ ಸುದ್ದಿಯಾಯಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಿಜ ಹೇಳಬೇಕೆಂದರೆ, ಖಾಸಗಿತನ ಎನ್ನುವುದು ಈಗ ಉಳಿದೇ ಇಲ್ಲ. ರಿಲಯನ್ಸ್‌ ಅಂಗಡಿಗೋ, ಫ್ಯಾಬ್‌ ಇಂಡಿಯಾಗೋ ಹೋಗಿ ನಮಗೆ ಬೇಕಾದ ವಸ್ತುವನ್ನು ಖರೀದಿಸಿ ಬಿಲ್‌ ಪಾವತಿಸುವಾಗ ಅವರು ಫೋನು ನಂಬರು ಕೇಳುವುದುಂಟು. ಈ ಹಿಂದೆ ಹೀಗೆ ಫೋನು ನಂಬರು ಕೇಳುವುದಕ್ಕೆ ಮುಂದಿನ ಖರೀದಿಯಲ್ಲಿ ಡಿಸ್ಕೌಂಟು ಸಿಗುತ್ತದೆ ಎಂತಲೋ, ಕೆಲವು ಕ್ರೆಡಿಟ್‌ ಪಾಯಿಂಟುಗಳನ್ನು ಕೊಡುತ್ತೇವೆ ಎಂತಲೋ ಆಮಿಷವನ್ನು ಒಡ್ಡುತ್ತಿದ್ದರು. ಈಗ ಅದುವೂ ಇಲ್ಲವೆನ್ನಿ. ಆದರೆ, ಬಿಲ್‌ ಪಾವತಿಸುವಾಗ ಕೊಟ್ಟ ಫೋನು ನಂಬರಿನ ಆಧಾರದ ಮೇಲೆ ಆ ಫೋನು ತಳುಕಿಕೊಂಡಿರುವ ಎಲ್ಲ ಸಾಮಾಜಿಕ ಮಾಧ್ಯಮಗಳ ಮೂಲಕವೂ ನಾವು ಕೊಂಡ ವಸ್ತುವಿಗೆ ಸಂಬಂಧಿಸಿದ ವಸ್ತುಗಳ ಜಾಹೀರಾತು ಕಾಣೀಸಿಕೊಳ್ಳುತ್ತದೆ. ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮೊದಲಾದ ಇ-ಕಾಮರ್ಸ್‌ ಅಂಗಡಿಗಳಲ್ಲಿ ಆನ್‌ಲೈನ್‌ ವ್ಯಾಪಾರ ಮಾಡಿದೆವೆನ್ನಿ. ಮರುಕ್ಷಣವೇ ನಾವು ಅಲ್ಲಿ ಕೊಂಡ ಅಥವಾ ಕೊಳ್ಳಬಹುದೋ ಎಂದು ಹುಡುಕಾಡಿದ ವಸ್ತುಗಳ ಕುರಿತಾದ ಜಾಹೀರಾತು ನಮ್ಮ ಫೇಸ್‌ಬುಕ್‌ ಪುಟದಲ್ಲಿ ಕಾಣಿಸಿಕೊಳ್ಳುತ್ತದೆ. ಗೂಗಲ್‌ ಸರ್ಚ್‌ ಮಾಡುವಾಗ ಒಂದು ಬದಿಯಲ್ಲಿ ಇಂತಹ ಜಾಹೀರಾತುಗಳು ಇರುವುದನ್ನೂ ನಾವು ಕಾಣಬಹುದು.

ಡಿಎನ್ಎ
ಸಾಂದರ್ಭಿಕ ಚಿತ್ರ | ಕೃಪೆ: ನೇಹಾ

ಇವೆಲ್ಲ ನಮ್ಮ ಖಾಸಗಿ ಬದುಕು ಸಾರ್ವಜನಿಕವಾಗಿಬಿಟ್ಟಿರುವುದರ ಕುರುಹು. ನಮ್ಮ ಖರೀದಿ, ಗೂಗಲ್ಲಿನಲ್ಲಿ ನಾವು ಹುಡುಕಿದ ವಿಷಯದ ಬಗ್ಗೆ ನಮಗಿರುವ ಆಸಕ್ತಿ ಇವೆಲ್ಲವನ್ನೂ ಗುರುತಿಸುವುದಷ್ಟೆ ಅಲ್ಲ, ಆಯಾ ಸಾಮಾಜಿಕ ಮಾಧ್ಯಮದ ಜೊತೆಗೆ ತಳುಕಿಕೊಂಡಿರುವ ಫೋನು ನಂಬರು ಇಲ್ಲವೇ ಇಮೇಲಿನ ವಿಳಾಸವನ್ನು ಗುರುತಿಸಿ, ನೇರವಾಗಿ ನಮಗೇ ಆ ಜಾಹೀರಾತನ್ನು ತಲುಪಿಸುತ್ತವೆ. ಅಂದರೆ, ನಮ್ಮ ವಿಳಾಸ, ಇರುವು ಎಲ್ಲವೂ ಇನ್ಯಾರಿಗೋ ತಿಳಿದಂತಾಯಿತಷ್ಟೆ. ಗೂಗಲ್‌ ಅಂತೂ ನಾವು ಯಾವ ಹೋಟೆಲ್ಲಿಗೆ ಹೋಗಿದ್ದಿರಿ ಎನ್ನುವುದನ್ನೂ ನಾವು ಪಾವತಿಸಿದ ಬಿಲ್ಲಿನಿಂದ ಗುರುತಿಸಬಲ್ಲದು. ಆ ಹೋಟೆಲ್ಲಿನ ತಿಂಡಿ, ತಿನಿಸು ಚೆನ್ನಾಗಿತ್ತೇ ಎಂದು ಬಹಳ ಸೌಜನ್ಯದಿಂದ ಪ್ರಶ್ನಿಸಿ, ನಮ್ಮ ಬೆನ್ನು ಹತ್ತಿದ್ದನ್ನು ಸೂಚಿಸುತ್ತದೆ. ಗೂಗಲ್‌ ಮ್ಯಾಪಿನಲ್ಲಿ ಎಲ್ಲೆಲ್ಲ ಅಡ್ಡಾಡಿದ್ದಿರಿ ಎನ್ನುವುದನ್ನೂ ನೀವೇ ನೋಡಿಕೊಳ್ಳಬಹುದು.

“ಅಯ್ಯೋ ಬಿಡಿ… ಇವೆಲ್ಲ ಆಗುತ್ತವೆ ಅಂತ ಗೊತ್ತಿತ್ತು. ಗೊತ್ತಿದ್ದರೂ ನಾವೇ ಫೋನು ನಂಬರು, ಇಮೇಲು ಎಲ್ಲ ಕೊಟ್ಟಿದ್ದೆವು. ಅದರಿಂದ ಇವೆಲ್ಲ ಗೊತ್ತಾಯಿತು. ಇನ್ಮೇಲೆ ಕೊಡದೆ ಇದ್ದರೆ ಆಯಿತು,” ಎಂದಿರಾ? ತಾಳಿ… ಡಿಎನ್‌ಎ ತಂತ್ರಜ್ಞಾನ ಬಳಸಿದಾಗ ಆಗುವ ಕತೆಯೇ ಬೇರೆ. ನಾವು ಗೊತ್ತಿದ್ದೇ ನಮ್ಮ ಗುರುತನ್ನು ತಿಳಿಸಬೇಕಿಲ್ಲ. ಫೋನು ನಂಬರು, ಆಧಾರ್‌, ಪ್ಯಾನ್ ಕಾರ್ಡು ಇದ್ಯಾವುದನ್ನೂ ಕೊಡಬೇಕಿಲ್ಲ. ಮುಖದ ಚಿತ್ರ ತೋರಿಸಬೇಕಿಲ್ಲ. ನಾವು ಅಲ್ಲಿ ಇರಲೇಬೇಕಿಲ್ಲ. ಹಾಗಿದ್ದೂ ನಾವು ಅಲ್ಲಿ ಇದ್ದೆವು ಎನ್ನುವುದನ್ನು ಪತ್ತೆಹಚ್ಚಬಹುದಂತೆ. ಪರಿಸರದಲ್ಲಿ ನಾವು ಹೀಗೆ ನಮ್ಮ ಗುರುತುಗಳನ್ನು ಕ್ಷಣಕ್ಷಣವೂ ನಮಗೇ ಗೊತ್ತಿಲ್ಲದಂತೆ ಉಳಿಸಿಹೋಗುತ್ತಿದ್ದೇವೆ ಎನ್ನುತ್ತದೆ – ‘ನೇಚರ್‌ ಇಕಾಲಜಿ ಅಂಡ್‌ ಇವೊಲ್ಯೂಶನ್‌’ ಪತ್ರಿಕೆಯಲ್ಲಿ ಫ್ಲಾರಿಡಾ ವಿಶ್ವವಿದ್ಯಾನಿಲಯದ ವಿಟ್ನೀ ಸಾಗರಜೀವಿಗಳು ಮತ್ತು ಕಡಲಾಮೆಗಳ ಸಂಶೋಧನಾಲಯದ ಜೀವಿವಿಜ್ಞಾನಿ ಡೇವಿಡ್‌ ಡಫಿ ಮತ್ತು ಸಂಗಡಿಗರು ಪ್ರಕಟಿಸಿರುವ ಸಂಶೋಧನೆ.

ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು | ಪುನೀತ್ ರಾಜಕುಮಾರ್ ಅಭಿಮಾನಿಯೊಬ್ಬರ ಪ್ಯಾನಿಕ್ ಅಟ್ಯಾಕ್‌ ಕತೆ

‘ಪರಿಸರ ಡಿಎನ್‌ಎ ತಂತ್ರಜ್ಞಾನ’ ಎಂದು ವಿಜ್ಞಾನಿಗಳು ಹೆಸರಿಸುವ ತಂತ್ರಜ್ಞಾನದಲ್ಲಿನ ಸಂಶೋಧನೆಯ ವಿವರಗಳು ಈ ಸುದ್ದಿಯಲ್ಲಿವೆ. ಪರಿಸರ ಡಿಎನ್‌ಎ ಅಥವಾ ಎನ್ವಿರಾನ್‌ಮೆಂಟಲ್‌ ಡಿಎನ್‌ಎ ತಂತ್ರಜ್ಞಾನ ಎಂದರೆ ಇನ್ನೇನಲ್ಲ; ಪರಿಸರದಲ್ಲಿ ಉಳಿದಿರುವ ಡಿಎನ್‌ಎ ತುಣುಕುಗಳನ್ನು ಹೆಕ್ಕಿ, ಗುರುತಿಸುವ ತಂತ್ರಜ್ಞಾನ. ನಮ್ಮ ಪ್ರಾಣಿಗಳು ಮತ್ತು ಸಸ್ಯಗಳ ಜೀವಕೋಶಗಳಲ್ಲಿ ಡಿಎನ್‌ಎ ಇರುತ್ತದಷ್ಟೆ. ಇದು ಪ್ರತೀ ವ್ಯಕ್ತಿಯಲ್ಲಿಯೂ ಬೇರೆ-ಬೇರೆಯೇ ಎನ್ನಬಹುದು. ಇಂತಹ ಡಿಎನ್‌ಎ ಬಳಸಿ, ವ್ಯಕ್ತಿಯ ಗುರುತನ್ನು ಪತ್ತೆ ಮಾಡಲು ಜೀನೋಮ್‌ ವಿಶ್ಲೇಷಣಾ ತಂತ್ರಗಳನ್ನು ಬಳಸುತ್ತಾರೆ. ಸರಳವಾಗಿ ಹೇಳಬೇಕೆಂದರೆ, ಪರಿಸರದಲ್ಲಿ ಇರುವ ಡಿಎನ್‌ಎ ಉಳಿಕೆಯನ್ನು ಹೆಕ್ಕಿ, ಅದರ ಪ್ರಮಾಣವನ್ನು ಹೆಚ್ಚಿಸಿ, ಹಾಗೆ ಸಿಕ್ಕಿದ ಡಿಎನ್‌ಎಯನ್ನು ನಾವೀಗಾಗಲೇ ವಿಶ್ಲೇಷಿಸಿ ಇಟ್ಟಿರುವ ಡಿಎನ್‌ಎ ಜೊತೆಗೆ ಹೋಲಿಸಿ ನೋಡುವುದನ್ನೇ ಇ-ಡಿಎನ್‌ಎ ತಂತ್ರಜ್ಞಾನ ಎನ್ನುತ್ತೇವೆ.

ಉದಾಹರಣೆಗೆ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಮ್ಮೂರ ಚರಂಡಿಗಳಲ್ಲಿ ಹರಿದ ನೀರಿನಲ್ಲಿ ಇರುವ ಡಿಎನ್‌ಎಯನ್ನು ಪರಿಶೀಲಿಸಿ, ನಮ್ಮೂರಲ್ಲಿ ಹರಡಿದ ಕೋವಿಡ್‌ ವೈರಸ್ಸು ಎಂತಹ ಬಗೆಯದು ಎಂದು ತಿಳಿಯಬಹುದು. ಕೊಳಚೆ ನೀರಲ್ಲಿರುವ ಡಿಎನ್‌ಎಯಲ್ಲಿ ವೈರಸ್ಸು ಅಥವಾ ಬ್ಯಾಕ್ಟೀರಿಯಾಗಳ ಡಿಎನ್‌ಎಯನ್ನು ಹೋಲುವ ತುಣುಕುಗಳು ಕಂಡಾಗ, ಈ ರೋಗಾಣುಗಳು ಊರಿನಲ್ಲಿ ಯಾವ ಪ್ರಮಾಣದಲ್ಲಿ ಇವೆ ಎಂದು ಅಂದಾಜಿಸಬಹುದು. ಇವುಗಳಿಂದ ಊರಿಗೆ ಕಂಟಕ ಇದೆಯೋ ಇಲ್ಲವೋ ಎನ್ನುವುದನ್ನು ತಿಳಿಯಬಹುದು.

ಡಿಎನ್ಎ
ಸಾಂದರ್ಭಿಕ ಚಿತ್ರ | ಕೃಪೆ: ಎಂ ಸೋಮರ್

ಇಲ್ಲವೇ, ಕಾಡಿನಲ್ಲಿ ನಮ್ಮ ಕಣ್ಣಿಗೆ ಕಾಣದೆ ಓಡಾಡುವ ಜೀವಿಗಳ ಬಗ್ಗೆಯೂ ತಿಳಿಯಬಹುದು. ಉದಾಹರಣೆಗೆ, ಕಾಡಿನಲ್ಲಿ ಸಿಗುವ ಆನೆಯ ಲದ್ದಿಯನ್ನೋ, ಹುಲಿಗಳ ಮಲವನ್ನೋ, ಬಾವಲಿಗಳ ಹಿಕ್ಕೆಯನ್ನೋ ಹೆಕ್ಕಿ ತಂದು ಅದರಿಂದಲೂ ಡಿಎನ್‌ಎ ಪಡೆಯಬಹುದು. ಈ ಡಿಎನ್‌ಎಯಲ್ಲಿ ಆನೆ, ಬಾವಲಿ, ಹುಲಿಯ ಅಂಶಗಳಷ್ಟೆ ಅಲ್ಲ, ಅವು ತಿಂದ ಆಹಾರದ ಕುರುಹುಗಳೂ ಇರುತ್ತವೆ. ಇದು ಆ ಪರಿಸರದಲ್ಲಿರುವ ಇತರೆ ಜೀವಿಗಳ ಬಗ್ಗೆ ತಿಳಿಸುತ್ತದೆ. ಇತ್ತೀಚೆಗೆ ಟೀ ಬ್ಯಾಗುಗಳಲ್ಲಿ ಇರುವ ಟೀಯನ್ನು ವಿಶ್ಲೇಷಿಸಿ, ವಿವಿಧ ಪ್ರದೇಶಗಳಲ್ಲಿ ಬೆಳೆದ ಚಹಾ ಗಿಡಗಳನ್ನು ಯಾವ್ಯಾವ ಕೀಟಗಳು ಕಾಡಿವೆ ಎನ್ನುವುದನ್ನು ಪತ್ತೆ ಮಾಡಿದ್ದೂ ಕೂಡ ಸುದ್ದಿಯಾಗಿತ್ತು.

ಕೀಟಗಳಷ್ಟೇ ಯಾಕೆ ಕ್ರಿಮಿನಲ್ಲುಗಳನ್ನೂ ಪತ್ತೆ ಮಾಡಬಹುದು ಎನ್ನುತ್ತದೆ ಡಫಿ ತಂಡದ ಸಂಶೋಧನೆ. ಇವರು ಕೊಳಚೆ ನೀರಿನಲ್ಲಿರುವ ವಿವಿಧ ಬ್ಯಾಕ್ಟೀರಿಯಾಗಳನ್ನು ಪತ್ತೆ ಮಾಡಬಹುದೇ ಎಂದು ಪ್ರಯತ್ನಿಸುತ್ತಿದ್ದರಂತೆ. ಅದಕ್ಕಾಗಿ ಕೊಳಚೆ ನೀರಿನಿಂದ ಡಿಎನ್‌ಎಯನ್ನು ಹೆಕ್ಕಿ ವಿವಿಧ ಬ್ಯಾಕ್ಟೀರಿಯಾಗಳದ್ದರ ಜೊತೆಗೆ ಹೋಲಿಸಿ ನೋಡುತ್ತಿದ್ದರು. ವಿಶೇಷವಾಗಿ ಮನುಷ್ಯರಲ್ಲಿ ರೋಗವನ್ನುಂಟು ಮಾಡಬಲ್ಲ ಬ್ಯಾಕ್ಟೀರಿಯಾಗಳ ಬಗ್ಗೆ ಆಸಕ್ತಿ ಇತ್ತು. ಹೀಗೆ ಸಂಗ್ರಹಿಸಿದ ಮಾಹಿತಿಯಿಂದ ಮಾನವರ ಡಿಎನ್‌ಎ ಬಗ್ಗೆ ಏನಾದರೂ ತಿಳಿಯಬಹುದೋ ಎನ್ನುವ ಕುತೂಹಲವೂ ಇತ್ತು. ಹೀಗಾಗಿ, ಈ ಮಾಹಿತಿಯನ್ನು ಮಾನವರ ಡಿಎನ್‌ಎ ಜೊತೆಗೆ ಹೋಲಿಸಿದರು. ಮಾನವರ ಡಿಎನ್‌ಎಯಲ್ಲಿಯಷ್ಟೆ ಕಾಣುವಂತಹ ತುಣುಕುಗಳು ಕೆಲವು ರೋಗಾಣು ಬ್ಯಾಕ್ಟೀರಿಯಾಗಳ ಡಿಎನ್‌ಎಯಲ್ಲಿ ಇದ್ದದ್ದು ಕಂಡುಬಂದಿತು!

ಇದು ಮನುಷ್ಯರದ್ದೇ ಎಂದು ಹೇಳುವುದು ಹೇಗೆ ಎಂದಿರಾ? ಪ್ರತೀ ಡಿಎನ್‌ಎಯಲ್ಲಿಯೂ ಆಯಾ ಜೀವಿಯಲ್ಲಿಯಷ್ಟೇ ಕಾಣುವ ಕೆಲವು ತುಣುಕುಗಳಿರುತ್ತವೆ. ಇವುಗಳ ಪ್ರಮಾಣ ಹೆಚ್ಚಿದ್ದಷ್ಟೂ, ಅದು ಇಂತಹದ್ದೇ ಜೀವಿಯದ್ದು ಎಂದು ಹೇಳಬಹುದು. ಈ ತಂತ್ರದಿಂದ, ಪರಿಸರದಲ್ಲಿರುವ ಮನುಷ್ಯರ ಡಿಎನ್‌ಎಯನ್ನು ಪತ್ತೆ ಮಾಡಬಹುದಷ್ಟೇ ಅಲ್ಲ, ಅದು ಗಂಡಿನದ್ದೋ-ಹೆಣ್ಣಿನದ್ದೋ ಎಂದು ಕೂಡ ನಿರ್ಧರಿಸಬಹುದಂತೆ. ಇನ್ನು, ನಿರ್ದಿಷ್ಟ ವ್ಯಕ್ತಿಯ ಡಿಎನ್‌ಎಯನ್ನು ಪತ್ತೆ ಮಾಡುವುದು ಮುಂದಿನ ಹೆಜ್ಜೆ. ಹಾಗಾದಾಗ, ನಾವು ಎಲ್ಲೆಲ್ಲಿ ಇದ್ದೆವು, ಏನೇನು ಮಾಡಿದ್ದೆವು, ಎಂತೆಂತಹ ರೋಗ ಅಥವಾ ಖಾಯಿಲೆ ನಮಗೆ ತಾಕಿತ್ತು ಎನ್ನುವುದೆಲ್ಲವನ್ನೂ ನಮಗೇ ಗೊತ್ತಿಲ್ಲದಂತೆ ವೈದ್ಯರೋ, ಪೊಲೀಸರೋ ಅಥವಾ ಕಿಡಿಗೇಡಿಗಳೋ ಪತ್ತೆ ಮಾಡಿಬಿಡಬಹುದು!

ಈ ಆಡಿಯೊ ಕೇಳಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಹೆಣ್ಣಿನ ದೇಹದ ಮೇಲಿನ ಅಧಿಕಾರ ರಾಜಕಾರಣ

ಇದುವರೆಗೂ ಇದು ಬಹಳ ಕಷ್ಟದ ಕೆಲಸ ಎಂದು ಭಾವಿಸಲಾಗಿತ್ತು. ಆದರೆ ಡಫಿಯವರ ತಂಡದ ಸಂಶೋಧನೆ – ಪರಿಸರ ಡಿಎನ್‌ಎಯಿಂದ ಮಾನವರ ಮಾಹಿತಿಯನ್ನು ಹೆಕ್ಕುವುದು ಅಸಾಧ್ಯವೇನಲ್ಲ ಎಂದು ಸೂಚಿಸಿದೆ. ಇದರ ಅರ್ಥ ಇಷ್ಟೆ; ಪ್ರಾಣಿಗಳ ನಡವಳಿಕೆ, ಆಹಾರಾಭ್ಯಾಸಗಳನ್ನು ಅಧ್ಯಯನ ಮಾಡಲು ಬಳಸುವ ಈ ತಂತ್ರಜ್ಞಾನ ನೆರವಾಗುವಂತೆಯೇ, ಸಾಮಾನ್ಯವಾಗಿ ಇಂತಹ ಸಂಶೋಧನೆಗೆ ಒಪ್ಪದ ಸಮುದಾಯಗಳ ಬಗ್ಗೆ ಮಾಹಿತಿಯನ್ನು ಗುಟ್ಟಾಗಿ ಸಂಗ್ರಹಿಸಬಹುದು. ವ್ಯಕ್ತಿಯ ಡಿಎನ್‌ಎಯನ್ನೂ ಪತ್ತೆ ಮಾಡುವಷ್ಟು ಈ ತಂತ್ರ ನಿಖರವಾದರೆ, ನಾವು, ನೀವು ಹೋದ ಕಡೆಯಲ್ಲಿ ನಮಗೇ ಗೊತ್ತಿಲ್ಲದೆ ಉದುರಿದ ಕೂದಲೋ, ಚರ್ಮದ ಕೋಶಗಳೋ ಅಥವಾ ನಮ್ಮ ದೇಹದ ಮೇಲಿರುವ ಕೋಟ್ಯಂತರ ಬ್ಯಾಕ್ಟೀರಿಯಾಗಳೋ ಉದುರಿ, ಉಳಿಸಿಟ್ಟ ಡಿಎನ್‌ಎ ನಾವು ಎಲ್ಲೆಲ್ಲೆಲ್ಲ ಅಡ್ಡಾಡಿದ್ದೆವು ಎಂದು ತಿಳಿಸಬಹುದು.

ಸದ್ಯಕ್ಕೆ ಮನುಷ್ಯರ ಡಿಎನ್‌ಎ ಮಾಹಿತಿಯನ್ನು ಸಂಗ್ರಹಿಸಬೇಕಾದರೆ ವ್ಯಕ್ತಿಯ ಅನುಮತಿ ಪಡೆಯಬೇಕು. ಇಲ್ಲವೇ ನ್ಯಾಯಾಲಯದ ಒಪ್ಪಿಗೆ ಇರಬೇಕು. ಆದರೆ, ಪರಿಸರದಿಂದ ಹೆಕ್ಕಿ ಮಾಹಿತಿ ಸಂಗ್ರಹಿಸಲು ಈ ಅನುಮತಿ ಬೇಕಿಲ್ಲ. ಈ ಹೊಸ ತಂತ್ರಜ್ಞಾನವನ್ನು ಗೂಗಲ್‌ ನಮ್ಮ ಇಚ್ಚಾನಿಚ್ಛೆಗಳನ್ನು ಗುರುತಿಸುವಂತೆ, ಪ್ಯಾನ್‌ ಮತ್ತು ಬ್ಯಾಂಕಿನ ಮಾಹಿತಿಯನ್ನು ಎನ್‌ಫೊರ್ಸ್‌ಮೆಂಟ್‌ ಡೈರೆಕ್ಟೊರೇಟು – ಅದೇ ಇಡಿ ಅಥವಾ ಆದಾಯ ತೆರಿಗೆ ಇಲಾಖೆ ಬಳಸುವಂತೆ, ನಮ್ಮ ರೋಗ, ಖಾಯಿಲೆಗಳು, ವಂಶ, ಕುಲ, ನಡವಳಿಕೆಗಳನ್ನು ಪತ್ತೆಹಚ್ಚಲು ಪೋಲೀಸರು ಅಥವಾ ವೈದ್ಯರು ನಮ್ಮ ಒಪ್ಪಿಗೆ ಇಲ್ಲದೆ ಬಳಸಿಕೊಳ್ಳಬಹುದೇ? ಬಳಸಿಕೊಂಡರೆ ಅದನ್ನು ತಡೆಯಲು ನಮಗೆ ಅಧಿಕಾರ, ಅವಕಾಶ, ಹಕ್ಕು ಇದೆಯೇ? ಈ ಎಲ್ಲ ಪ್ರಶ್ನೆಗಳೂ ಬರಲಿವೆ. ಹಾಗೆಯೇ, ಇವನ್ನು ದುರುದ್ದೇಶದಿಂದ ಬಳಸುವವರೂ ಇರಬಹುದು. ಒಟ್ಟಾರೆ ಬೇಕೋ ಬೇಡವೋ, ನಮಗೇ ಗೊತ್ತಿಲ್ಲದಂತೆಯೇ ನಮ್ಮೆಲ್ಲ ಮಾಹಿತಿಯನ್ನೂ ಜಗಜ್ಜಾಹೀರು ಮಾಡುತ್ತಿದ್ದೇವೆ ಎನ್ನುವುದಂತೂ ನಿಜ.

ಮುಖ್ಯ ಚಿತ್ರ ಕೃಪೆ: ಜಾರ್ಜ್ ವಿಟ್ಮನ್

ಪೋಸ್ಟ್ ಹಂಚಿಕೊಳ್ಳಿ:

ಕೊಳ್ಳೇಗಾಲ ಶರ್ಮ
ಕೊಳ್ಳೇಗಾಲ ಶರ್ಮ
ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 'ಸೈನ್ಸ್‌ ರಿಪೋರ್ಟರ್‌' ಪತ್ರಿಕೆಗೆ ವರದಿಗಾರರಾಗಿದ್ದರು. ಮೂರು ದಶಕಗಳಿಂದ ವಿಜ್ಞಾನ ಬರವಣಿಗೆಯಲ್ಲಿ ಸಕ್ರಿಯರು. ವಿಜ್ಞಾನ ಸಂವಹನದ ಹೊಸ ಸಾಧ್ಯತೆಗಳನ್ನು ಹುಡುಕುವ ಉತ್ಸಾಹಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...