ನಾನ್ ರಸ್ತೆಗಿಳದಂದ್ರ... ಉತ್ತರ ಕರ್ನಾಟಕದ ಹುಲಿ ಬಂತೋ ಯಪ್ಪಾ, ದಾರಿ ಬುಡ್ರೋ ಅಂತರೆ ನಮ್ಮಂಣ್ಣದ್ರು. ಇನ್ನು ಜನಾನೋ, ಅದೆಷ್ಟು ಪ್ರೀತಿ ತೋರುಸ್ತರೆ ಅಂದ್ರೆ, ಬಟ್ಟೆ, ಸ್ವೀಟು ಎಲ್ಲ ಕೊಡ್ತರೆ. ಸೆಲ್ಫಿ ತಕ್ಕಂತರೆ, ಪೋಟೋ ಹೊಡ್ಕತರೆ, ಅದೇನೋ ಖುಷಿ ಅವ್ರಿಗೆ
ಬ್ಲ್ಯಾಕ್ ಎನ್‌ಫೀಲ್ಡ್ ಬುಲೆಟ್‌ನಲ್ಲಿ ಖಡಕ್ ಖಾಕಿ ಡ್ರೆಸ್‌ನಲ್ಲಿ ಬಂದ ಪರಿಗೆ ಅಕ್ಕಪಕ್ಕದವರೆಲ್ಲ ಅವಾಕ್ಕಾದರು. ಲೇಡಿ ಪೊಲೀಸ್ ಇನ್‌ಸ್ಪೆಕ್ಟರ್ ಎಂಬ ಅನುಮಾನದಿಂದ ದೂರ ಸರಿದರು. ಆದರೆ, ಅವರು ಲೇಡಿ ಇನ್‌ಸ್ಪೆಕ್ಟರ್ ಅಲ್ಲ- ಐವತ್ತರ ಹರೆಯದ ಪ್ರೇಮಾ ರಾಮಪ್ಪ ನಡಬಟ್ಟಿ ಎಂಬ ಬಿಎಂಟಿಸಿ ಬಸ್ ಲೇಡಿ ಡ್ರೈವರ್.
“ಎರ್ಡ್ ಗಂಟ್ಗೆ ಡ್ಯೂಟಿ ಮುಗೀತ್ರಿ. ಬಸ್ ಡಿಪೋಗೆ ಹೊಯ್ದು, ಹಿಂಗಾ ಬೈಕ್ ಹತ್ ಬಂದರ್ರಿ. ಹೇಳ್ರಲ…” ಎಂದರು.
“ಏನಿಲ್ಲ… ನಿಮ್ಮ ಕತೆ ಕೇಳೋಣಾಂತ…”
“ಅಯ್ ಬಿಡ್ರಿ… ನಮ್ದೇನು ಕೇಳಕೈತಿ! ನಾವೆಂತ ದೊಡ್ ಜನಾರಿ! ನಮ್ದು ಭೈರನಹಟ್ಟಿ ಅಂತ ಸಣ್ ಹಳ್ಳೀರಿ, ಗೋಕಾಕ ತಾಲೂಕನಾಗೈತಿ. ನಮ್ಮಪ್ಪಗ ನಾವ್ ಆರು ಮಂದಿ ಮಕ್ಳು. ನಾಕು ಗಂಡು, ಎರಡು ಹೆಣ್ಣು. ನಾಕು ಜನಾನು ಆರ್ಮಿಯಾಗ್ ಅದಾರ್ರಿ. ನಮ್ಮಕ್ಕ ನರ್ಸ್ ಅದಾಳ. ನಾನು ಬಿಎ ಓದೀನ್ರಿ, ಬಿಎಂಟಿಸಿ ಡ್ರೈವರ್ ಅದೀನಿ,” ಎಂದರು.
“ಈ ನಡಬಟ್ಟಿ ಅಂದ್ರೇನು?”
“ಅದ್ರಿ, ಊರಾಗ್ ನಮ್ದು ನಾಲ್ಕು ಮನಿ ಇದ್ ಜಾಗ. ಹೆಸರೇನಿಲ್ಲ, ನಡುವಿನ ಮನೆ ಮಂದಿ ಅಂತ ಕರೀತಿದ್ರು. ಬರ್ತಾ ಬರ್ತಾ ಅದು ನಡಬಟ್ಟಿ ಆತ್ರಿ. ಸಣ್ಣಾಕಿದ್ದಾಗ, ಹೆಣ್ಮಕ್ಕಳ ಸಾವಾಸ್ ಇಲ್ರಿ, ಬರೀ ಗಂಡ್ ಹುಡುರ್ ಜೊತೆ ಆಟ ಆಡೋದು, ಎಮ್ಮಿ ಕಾಯೋದು, ಈಜು ಹೊಡಿಯೋದು, ಮರ ಹತ್ತದು, ಸೈಕಲ್ ತುಳಿಯೋದು ಮಾಡ್ತಿದ್ದೆ, ಎಲ್ರೂ ಗಂಡುಬೀರಿ ಅಂತಿದ್ರು,” ಎಂದರು.

ಪ್ರೇಮಾ ತಂದೆಯ ಹೆಸರು ರಾಮಪ್ಪ. ಪ್ರೇಮಾ ಚಿಕ್ಕವರಿರುವಾಗಲೇ ತಂದೆ ತೀರಿಹೋದರು. ಮನೆ ತುಂಬಾ ಮಕ್ಕಳು. ಕುಟುಂಬದ ಹೊರೆ ಅನಕ್ಷರಸ್ಥ ಅಮಾಯಕ ಅಮ್ಮನ ಹೆಗಲ ಮೇಲೆ ಬಿತ್ತು. ಪುಟ್ಟ ಮನೆ ಬಿಟ್ಟರೆ ಬೇರೇನೂ ಇಲ್ಲ. ಜಮೀನ್ದಾರರ ಹೊಲ-ಗದ್ದೆಯಲ್ಲಿ ದಿನವೆಲ್ಲ ದುಡಿದರೂ ಸಿಗುತ್ತಿದ್ದುದು ಒಂದು ಸೇರು ಜ್ವಾಳ, ಇಲ್ಲ ಒಂದು ಮೂಟೆ ಗಜ್ಜರಿ. ಗಂಜಿ ಕುಡಿದು, ಗಜ್ಜರಿ ತಿಂದು ಅರೆಹೊಟ್ಟೆಯಲ್ಲಿ ಮಲಗುತ್ತಿದ್ದ ಪ್ರೇಮಾರ ನಾಲ್ಕು ಅಣ್ಣಂದಿರೂ ಕಷ್ಟಪಟ್ಟು ಆರ್ಮಿ ಸೇರಿದರು. ಅಕ್ಕ ಅಲ್ಲೇ ಮೂಡಲಗಿಯಲ್ಲಿ ನರ್ಸ್ ಆದರು. ಅಕ್ಕನೊಂದಿಗೆ ಮೂಡಲಗಿಗೆ ಬಂದ ಪ್ರೇಮಾ, ಓದು ಮುಗಿಸಿ, ಅಕ್ಕನ ಆಸ್ಪತ್ರೆಯಲ್ಲಿಯೇ ಐನೂರು ರೂಪಾಯಿ ಸಂಬಳಕ್ಕೆ ಸಹಾಯಕಿಯಾಗಿ ಕೆಲಸಕ್ಕೆ ಸೇರಿದರು. ಅಲ್ಲಿಗೆ ಬರುವ ರೋಗಿಗಳ ಆರೈಕೆ ಮಾಡುವುದರಲ್ಲಿ ನಿಷ್ಣಾತರಾದರು. ಹಾಗೆ ಬಂದ ಒಬ್ಬ ಹೊರರೋಗಿಯೊಂದಿಗೆ ಪ್ರೇಮಾಂಕುರವಾಗಿ, ಮದುವೆಯೂ ಆಯಿತು. ಒಂದು ವರ್ಷದ ಅಂತರದಲ್ಲಿ ಮಗುವೂ ಆಯಿತು.
“ಒಂದ್ ವರ್ಷದ್ ಕೂಸ್ರಿ… ನನ್ ಗಂಡ ತೀರ್ಕಂಡ. ಮನಿಲ್ಲ, ಮಠಿಲ್ಲ, ಕೆಲಸಿಲ್ಲ. ಕೈಯಲ್ಲಿ ಕೂಸದೆ, ಆಕಾಸ ಕೌಚಕೊಂಡ್ ತಲಿಮೇಲ್ ಬಿದ್ದಂಗಾತ್ರಿ…” ಎಂದರು.
ಅಮ್ಮ-ಅಕ್ಕ ಸಂತೈಸಿ ಧೈರ್ಯ ತುಂಬಿದರು. ಅಕ್ಕನ ಆಸ್ಪತ್ರೆ ಕೆಲಸ ಮುಂದುವರಿಯಿತು. ಇದರ ನಡುವೆ, ಅಮ್ಮ ಒಂದು ದಿನ, “ನಿನ್ನ ಖಾಕಿ ಡ್ರೆಸ್ ನಲ್ಲಿ ನೋಡಬೇಕು ಅನ್ನೋ ಆಸೆ…” ಎಂದರು. ಅದು ಪ್ರೇಮಾ ಮನಸ್ಸಿನಲ್ಲಿ ಬೇರೂರಿತು. ಅದಕ್ಕೆ ತಕ್ಕನಾಗಿ ಪ್ರೇಮಾ ಶಿಕ್ಷಣದುದ್ದಕ್ಕೂ ಕ್ರೀಡೆಯಲ್ಲಿ ಸದಾ ಮುಂದಿದ್ದರು. ಎಲ್ಲದರಲ್ಲೂ ಪದಕ-ಪ್ರಶಸ್ತಿ ಗೆದ್ದಿದ್ದರು. ಪ್ರೇಮಾರಿಗೂ ಆದ್ರೆ ಪೊಲೀಸೇ ಆಗಬೇಕು ಎಂಬ ಆಸೆ ಮೊಳೆಯತೊಡಗಿತು. ಪೊಲೀಸ್ ಕೆಲಸಕ್ಕೆ ಕರೆದಾಗೆಲ್ಲ ಅರ್ಜಿ ಹಾಕಿ, ಬೆಳಗಾವಿ ಬಸ್‌ಸ್ಟಾಂಡ್‌ನಲ್ಲಿ ಮಲಗಿ, ಸಂದರ್ಶನಕ್ಕೆ ಹಾಜರಾದರು. ಆದರೆ, ಪೊಲೀಸ್ ಕೆಲಸ ಮಾತ್ರ ಸಿಗಲಿಲ್ಲ.
ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು | ಎಲ್ಲೆಲ್ಲೂ ರಕ್ತದ ಕಲೆಯೇ ಕಾಣಿಸುತ್ತಿದ್ದ ಆಕೆಗೆ ನಿಜಕ್ಕೂ ಏನಾಗಿತ್ತು?
ಏತನ್ಮಧ್ಯೆ ಆಸ್ಪತ್ರೆಗೆ ಬಂದುಹೋಗುವ ರೋಗಿಗಳ ಪೈಕಿ ಅಶೋಕ್ ಸಂಗನಾಳ ಅನ್ನೋರು, ಪ್ರೇಮಾರ ಕಷ್ಟ ಕೇಳಿ, “ನೀನು ಯಾಕೆ ಕಂಡಕ್ಟರ್-ಡ್ರೈವರ್ ಕೆಲಸಕ್ಕೆ ಟ್ರೈ ಮಾಡಬಾರದು?” ಎಂದರು. ಅರ್ಜಿ ತುಂಬಿ, ಅವರೇ ಇನ್ನೂರು ರೂಪಾಯಿ ಚಲನ್ ಕಟ್ಟಿದರು. ಡ್ರೈವಿಂಗ್ ಲೈಸೆನ್ಸ್‌ಗಾಗಿ ಆರ್‌ಟಿಒ ಕಚೇರಿಗೆ ಹೋದರೆ, “ಲೇಡಿಸ್‌ಗೆ ಹೆವಿ ಡ್ರೈವಿಂಗ್ ಲೈಸೆನ್ಸ್ ಕೊಡಲಾಗುವುದಿಲ್ಲ,” ಎಂದರು. ಲೈಸೆನ್ಸ್ ಪಡೆದೇ ತೀರಬೇಕೆಂದು ಪ್ರತಿದಿನ ಹಸುಗೂಸನ್ನು ಕಂಕುಳಿಗೆ ಇರುಕಿಕೊಂಡು ಆಫೀಸರ್ ಮುಂದೆ ಹಾಜರಾದರು. ಕೊನೆಗೊಂದು ದಿನ ಕರಗಿದ ಪಾಟೀಲ್ ಎಂಬ ಅಧಿಕಾರಿ, ಎಫ್ಸಿಗೆ ಬಂದಿದ್ದ ಸಿಕ್ಸ್ ವ್ಹೀಲ್ ಲಾರಿಯ ಡ್ರೈವರ್‌ಗೆ, “ಆಕಿಗೆ ಒಂದು ವಾರ ಟ್ರೈನಿಂಗ್ ಕೊಡು,” ಎಂದರು. ತರಬೇತಿ ಆದಮೇಲೆ ಅವರೇ ಮುಂದೆ ನಿಂತು, ಒಂದು ರೂಪಾಯಿಯನ್ನೂ ಪಡೆಯದೆ ಹೆವಿ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಮಾಡಿ ಪ್ರೇಮಾರ ಕೈಗಿತ್ತರು.
“ಈ ಸರಹೊತ್ತಲ್ಲಿ ಆ ಪಾಟೀಲ್ರು ಸಾಹೇಬ್ರ ನೆನಸಬೇಕ್ರಿ… ದೇವರಂತೋರು,” ಎಂದ ಪ್ರೇಮಾ, ಯಾವುದೋ ದಿಕ್ಕಿಗೆ ಕೈ ಎತ್ತಿ ಮುಗಿದರು. “2009-10ರಲ್ಲಿ ಬಿಎಂಟಿಸಿ ಚಾಲಕ-ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಕರೆದ್ರಿ. ಅದು ಬ್ಯಾಕ್‌ಲಾಗ್ ಹುದ್ದೆ ಆಗಿತ್ರಿ, ಹಂಗಾಗಿ ನನ್ಗೆ ಕೆಲಸ ಸಿಕ್ತು. ಬೆಂಗಳೂರಿಗೆ ಬರೋ ಮುಂದ, ನನ್ ಕೂಸ್ನ ಅಮ್ಮ-ಅಕ್ಕನ ಮಡ್ಲಿಗಾಕ್ದೆ. ಬೆಂಗಳೂರಿಗೆ ಬಂದ್ನಾ… ಕೆಂಗೇರಿ ಚಾಲಕ ತರಬೇತಿ ಕೇಂದ್ರದಲ್ಲಿ ಟ್ರೈನಿಂಗು, ಪಾಸಾದ್ಮೇಲೆ ಡ್ಯೂಟಿ ಕೊಟ್ರು. ನನ್ ಭಾಳ್ ದಿನದ್ ಆಸೇರಿ – ಖಾಕಿ ಡ್ರೆಸ್ ಹಾಕ್ಬೇಕಂತ, ಅಂತೂ ಹಾಕ್ದೆ. ಅವತ್ತು ಅದೆಷ್ಟು ಖುಷಿಯಾತಂದ್ರೆ… ಅಲ್ಪರಿಗೆ ಆಕಾಸ ಸಿಕ್ಕಿದೊಷ್ಟು. ಅದ್ಕ ನಮ್ಮವ್ವ ಕಾರಣ್ರಿ, ಅದು ಆಕಿ ಆಸೇರಿ…” ಎಂದು ಕಣ್ಣೀರಾದರು.
“ದೂರದ ಗೋಕಾಕಿನ ಹಳ್ಳಿಯವರು ನೀವು. ಇದ್ದಕ್ಕಿದ್ದಂಗೆ ಬೆಂಗಳೂರಿನ ಹೆವಿ ಟ್ರಾಫಿಕ್‌ನಲ್ಲಿ ಸಿಕ್ಸ್ ವ್ಹೀಲ್ ಬಸ್ ಡ್ರೈವರ್ ಸೀಟಿನಲ್ಲಿ ಕೂತು ಚಲಾಯಿಸಿದ್ದೇಗೆ?” ಎಂದೆ.

“ಎದೀಲಿ ಕಿಚ್ಚಿರಬೇಕ್ರಿ… ಚಿಕ್ಕೋಳಿಂದ್ಲೆ ನನ್ಗೆ ಭಾರೀ ಕಿಚ್ಚಿತ್ತು. ಬೈಕ್, ಕಾರ್, ಬಸ್ ಕಂಡ್ರ ಸಾಕ್; ಹತ್ಬೇಕು, ಓಡುಸ್ಬೇಕಂತಿದ್ದೆ. ಆದ್ರೆ ನಾವ್ ಬಡವ್ರು, ಹಲ್ ಕಚ್ಕಂಡ್ ಸುಮ್ನಿದ್ದರ್ರಿ. ಆದ್ರೆ ನಮ್ಮಪ್ಪ- ನನ್ಗೆ ಇಬ್ರು ಅಪ್ಪಂದ್ರು – ಒಬ್ಬರು ಜನ್ಮ ಕೊಟ್ಟ ರಾಮಪ್ಪ, ಮತ್ತೊಬ್ಬರು ಅನ್ನ ಕೊಟ್ಟ ಅಂಬೇಡ್ಕರ್. ಬ್ಯಾಕ್‌ಲಾಗ್ ಹುದ್ದೆ ಇಲ್ದೆ ಇದ್ರೆ ನಾನ್ ಇವತ್ತು ಇಲ್ಲಿ ಇರ್ತಿಲಿಲ್ರಿ. ನಮ್ ಮನ್ಯಾಗ ದೇವ್ರ ಪೋಟಿಲ್ರಿ. ಅಂಬೇಡ್ಕರ್ರೇ ನನ್ಗೆ ದೇವರ್ರಿ. ಅವ್ರಿಗೆ ಕೈ ಮುಗ್ದೇ ನಾನ್ ಬಸ್ ಹತ್ತದು. ಭೀಮಬಲ ಭುಜಕ್ಕಿರ್ವಾಗ ಎಂಥ ಟ್ರಾಫಿಕ್ ರೀ!” ಎಂದರು.
“ಡ್ರೈವರ್ ಕೆಲಸಕ್ಕೆ ಬಂದಾಗ ಮೊದ್ಲು ಟೆನ್ಸನ್ ಆತ್ರಿ. ಬೆಂಗ್ಳೂರು ಮೊದ್ಲೆ ಸಿಕ್ಕಾಪಟ್ಟೆ ಟ್ರಾಫಿಕ್. ಕ್ಲಚ್ ಲಿವರ್ ಹಿಡ್ದ್ ಎಳೀಬೇಕು, ಬ್ರೇಕ್ ಹಾಕಬೇಕು, ಎರಡು ಮಿರರ್ ನೋಡಿಕೊಂಡು ಡ್ರೈವಿಂಗ್ ಮಾಡಬೇಕು. ನಮ್ ಬಿಎಂಟಿಸಿ ಬಸ್ ಕೇಳಬೇಕಲ್ರಿ… ಸಿಕ್ಕಾಪಟ್ಟೆ ಹಾರ್ಡು. ಆದ್ರೆ ನಾನ್ ರಸ್ತೆಗಿಳದಂದ್ರ… ಉತ್ತರ ಕರ್ನಾಟಕದ ಹುಲಿ ಬಂತೋ ಯಪ್ಪಾ, ದಾರಿ ಬುಡ್ರೋ ಅಂತರೆ ನಮ್ಮಂಣ್ಣದ್ರು. ಇನ್ನು ಜನಾನೋ, ಅದೆಷ್ಟು ಪ್ರೀತಿ ತೋರುಸ್ತರೆ ಅಂದ್ರೆ, ಬಟ್ಟೆ, ಸ್ವೀಟು ಎಲ್ಲ ಕೊಡ್ತರೆ. ಒಂದಿನ ರಜೆ ಹಾಕಕೂ ಬುಡಲ್ರಿ, ನನ್ ಗಾಡಿಯಾಗ ಕೆಲಸಕ್ಕೋಗೋ ಹೆಣ್ಮಕ್ಕಳೇ ಹೆಚ್ಚು. ಸೆಲ್ಫಿ ತಕ್ಕಂತರೆ, ಪೋಟೋ ಹೊಡ್ಕತರೆ, ಅದೇನೋ ಖುಷಿ ಅವ್ರಿಗೆ. ಮಾಡೋ ಕೆಲ್ಸಾನ ಮನಸ್ಪೂರ್ತಿ ಮಾಡಬೇಕ್ರಿ… ಯಾವ್ದೂ ದೊಡ್ದಲ್ಲ,” ಅಂದರು.
ಈ ಲೇಖನ ಓದಿದ್ದೀರಾ?: ಹಳ್ಳಿ ದಾರಿ | ಮುಗುದೆಯರನ್ನು ಮರುಳು ಮಾಡುವ ‘ಕಡ್ಡಾಯ ಸಾಲ’ ಎಂಬ ಮಂಕುಬೂದಿ
2009-10ರಲ್ಲಿ ಬಿಎಂಟಿಸಿ ಕೆಲಸಕ್ಕೆ ಸೇರಿದ ಪ್ರೇಮಾ, ಮೊದಲಿಗೆ ಕಂಡಕ್ಟರ್ ಆಗಿದ್ದರು. ಆನಂತರ ಡ್ರೈವರ್ ಕಮ್ ಕಂಡಕ್ಟರ್ ಆದರು. ಈಗ ಕಳೆದ ಆರು ವರ್ಷಗಳಿಂದ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬೆಳಗ್ಗೆ 4.30ಕ್ಕೆ ಎದ್ದು, ಸ್ನಾನ ಮಾಡಿ 6ಕ್ಕೆ ರೂಟ್ ನಂಬರ್ 13ರ ಗಾಡಿ ಹತ್ತಿದರೆ, ಶಿವಾಜಿನಗರ ಟು ಬನಶಂಕರಿ, ದಿನಕ್ಕೆ ಆರು ಟ್ರಿಪ್ ಮಾಡುತ್ತಾರೆ. ಮಧ್ಯಾಹ್ನ 2ಕ್ಕೆಲ್ಲ ಡ್ಯೂಟಿಯಿಂದ ಕೆಳಗಿಳಿಯುತ್ತಾರೆ. ಯಾವತ್ತೂ ಯಾರಿಂದಲೂ ಒಂದೇ ಒಂದು ರಿಮಾರ್ಕಿಲ್ಲ ಎನ್ನುವ ಪ್ರೇಮಾ, “ನನ್ನ ಖಾಕಿ ಡ್ರೆಸ್ಸು, ಕೆಲಸವೇ ನನ್ನ ದೇವರು,” ಎನ್ನುತ್ತಾರೆ. ಇಡೀ ಬಿಎಂಟಿಸಿಗೆ ಏಕೈಕ ಮಹಿಳಾ ಡ್ರೈವರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರೇಮಾರಿಗೆ, ಸಹೋದ್ಯೋಗಿಗಳ, ಉನ್ನತಾಧಿಕಾರಿಗಳ ಸಂಪೂರ್ಣ ಸಹಕಾರವಿದೆ. ಡಿಪೋದಲ್ಲಿ, ಸ್ಟಾಂಡ್‌ನಲ್ಲಿ, ರಸ್ತೆಯಲ್ಲಿ ಪ್ರೇಮಾ ನಿಂತರೆ ಸಾಕು, ಹೋಗಿಬರುವ ವಾಹನಗಳ ಡ್ರೈವರ್-ಕಂಡಕ್ಟರ್‌ಗಳು, ಪ್ರಯಾಣಿಕರು ವಿಶ್ವಾಸದ ನಗೆ ಬೀರುತ್ತಾರೆ. ಕುಶಲೋಪರಿ ವಿಚಾರಿಸುತ್ತಾರೆ. ಕಾಫಿ-ತಿಂಡಿಗೆ ಕರೆಯುತ್ತಾರೆ.
ಕೊರೊನಾ ಬಂದಾಗ, ಚಿಕಿತ್ಸೆ ಕೊಡಬೇಕಾದ ವೈದ್ಯರೇ ನಾಪತ್ತೆಯಾಗಿದ್ದರು. ಆಸ್ಪತ್ರೆಗಳೇ ಬಾಗಿಲು ಹಾಕಿಕೊಂಡಿದ್ದವು. ಅಂತಹ ಸಂದರ್ಭದಲ್ಲಿಯೂ ಪ್ರೇಮಾ ಅವರು ಧೈರ್ಯವಹಿಸಿ ಬಿಎಂಟಿಸಿ ಬಸ್ ಓಡಿಸಿದ್ದರು. ಸಹೋದ್ಯೋಗಿಗಳಲ್ಲಿ ಧೈರ್ಯ ತುಂಬಿದ್ದರು. ಕಷ್ಟದಲ್ಲಿದ್ದ ಸಾರ್ವಜನಿಕರಿಗೆ ನೆರವಾಗಿದ್ದರು. ಇದೆಲ್ಲವನ್ನು ಕಂಡ ಸರ್ಕಾರ, ಸಂಘ-ಸಂಸ್ಥೆಗಳು ಪ್ರೇಮಾರನ್ನು ‘ಡೇರ್ ಡ್ರೈವರ್,’ ಸಾರಿಗೆ ರತ್ನ, ಚೆನ್ನಮ್ಮ ಎಂದು ಕರೆದು ಸನ್ಮಾನಿಸಿದವು. ಮೂರನೇ ತರಗತಿಗೆ ಪ್ರೇಮಾರ ಸಾಧಕ ಬದುಕು ಪಠ್ಯವಾಗಿದೆ. ಅಸಲಿಗೆ, ಪ್ರೇಮಾರ ಸವಾಲಿನ ಬದುಕಿನ ಮುಂದೆ, ಧೈರ್ಯಸ್ಥೆ, ಗಟ್ಟಿಗಿತ್ತಿ ಎಂಬ ಪದಗಳು ಕೂಡ ಸತ್ವ ಕಳೆದುಕೊಳ್ಳುತ್ತವೆ.

“ನಂದು ಸಣ್ ಮನೀರಿ… ಒಂದ್ ರೂಮೊಳಗೆ ಮೂರು ಚೀಲ ಮೈಸೂರು ಪೇಟ, ನಾಕು ಚೀಲ ಶಾಲು, ಪ್ರಶಸ್ತಿ ಫಲಕ ಅದಾವ್ರಿ. ಪ್ರೀತಿಯಿಂದ ಕರದ್ರು ಕೊಟ್ರ ಬ್ಯಾಡ ಅನ್ನಕಾಗದಿಲ್ರಿ. ಅಲ್ಲಿ ಇಲ್ಲಿ ಹ್ವಾದಾಗ್ ಜಾತಿ ಬಗ್ಗೆ ಮಾತಾಡ್ಬೇಡ ಅಂತರ. ನಾನ್ ನನ್ ದೇವ್ರು ಅಂಬೇಡ್ಕರ್ ಬಗ್ಗೆ ಮಾತಾಡೋಳ್ರಿ. ಅದೆಂತದೋ ‘ಕ್ಲಬ್ ಹೌಸ್’ ಅಂತರಲ್ರಿ, ಅದ್ಕೂ ಕರೆದಿದ್ರು ದೊಡ್ಡರೆಲ್ಲ; ಬ್ಯಾಡಂದ್ರು ದುಡ್ ಕೊಟ್ರು. ಅವ್ರಿಗೆಲ್ಲ ನಾನ್ ಏನ್ ಮಾಡೀನ್ರಿ?” ಎಂದು ಆಕಾಶದತ್ತ ಮುಖ ಮಾಡಿದರು.
ಮುಂದುವರಿದು, “ನಮ್ಮವ್ನೂ ಕೊರೊನದಾಗ ಹೋಗ್ಬುಟ್ಲು. ಅದಾ ಯೋಚ್ನೇಲಿ ನಮ್ ಅಕ್ಕನೂ ಇದೇ ಏಪ್ರಿಲ್‌ನಲ್ಲಿ ಹ್ವಾದ್ಲು. ಈ ಏಪ್ರಿಲ್ ಅಂದ್ರೆ ನಂಗ್ ಹಬ್ಬ… 14ನೇ ತಾರೀಖು ಅಂಬೇಡ್ಕರ್ ಜಯಂತಿ ದಿನವೇ ಎರಡೂವರೆ ಲಕ್ಷ ಕೊಟ್ ಬುಲೆಟ್ ಬೈಕ್ ತರ್ಸಿ, ಅದ್ಕೆ ಅಂಬೇಡ್ಕರ್ ಬಾವುಟ ಕಟ್ಟಿ, ಒಂದ್ ಲಾಂಗ್ ಡ್ರೈವ್ ಹೋಗಬೇಕ್ ಅಂತ್ ಮಾಡ್ದೆ. ಅಷ್ಟರಲ್ಲಿ ಅಕ್ ಸತ್ಲು; ಕಾರ್ಯಗೀರ್ಯ ಅಂತೇಳಿ ಮುಂದಕ್ಕೋಯ್ತು…” ಎಂದು ಮೌನವಾದರು.
ಪದವಿ ಓದುತ್ತಿರುವ ಮಗನೊಂದಿಗೆ ಬಾಡಿಗೆ ಮನೆಯಲ್ಲಿರುವ ಈ ನಮ್ಮ ಪ್ರೇಮಾ ಶ್ರಮಜೀವಿ, ಸ್ವಾಭಿಮಾನಿ. ಕನ್ನಡಪ್ರೇಮಿ. ತಮ್ಮ ಬಸ್‌ಗೆ ಕನ್ನಡ ಬಾವುಟ ಕಟ್ಟಿ ಹೂವಿನಿಂದ ಶೃಂಗಾರ ಮಾಡುವ, ಕನ್ನಡದಲ್ಲಿ ಮಾತನಾಡಿದರೆ ಖುಷಿಪಡುವ, ಕನ್ನಡೇತರರಿಗೂ ಕನ್ನಡದ ಮೇಲೆ ಪ್ರೀತಿ ಬರುವಂತೆ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಮಾತನಾಡುವ ಪ್ರೇಮಾ – ಹಳ್ಳಿಯ ಹೆಣ್ಮಕ್ಕಳಿಗೊಂದು ಸ್ಫೂರ್ತಿ.
ಈದಿನ.ಕಾಮ್ ಬರಹಗಳ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ
Excellent realy great lady and you are interviewed very well and identifying great people, Excellent
ಈದಿನ ತಾಣಕ್ಕೆ ಭೇಟಿ ಕೊಟ್ಟು, ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
ಹೆಣ್ಣು ಮಕ್ಕಳ ಸಾಧನೆ ಚೆನ್ನಾಗಿ ವಿವರಿಸಿದ್ದೀರಿ. ಸಾದನೆಗೆ ಎಂದಿಗೊ ಬೆಲೆ ಬರುವುದು ಅನುಮಾನವಿಲ್ಲ ಸಮಾಜದ ಎಲ್ಲ ಹೆಣ್ಣು ಮಕ್ಕಳಿಗೆ ಸ್ಪೊರ್ತಿ ಸಿಗಲಿ.
ಈದಿನ ತಾಣಕ್ಕೆ ಭೇಟಿ ಕೊಟ್ಟು, ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
very good
ಈದಿನ ತಾಣಕ್ಕೆ ಭೇಟಿ ಕೊಟ್ಟು, ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
ಮುಂದಾಳತ್ವದ ಮಾದರಿ ಪ್ರೇಮರವರು. ಅಷ್ಟೇ ಅಂತ:ಕರಣದ ಸಂದರ್ಶನ ಇದು.