ಮಹಿಳೆಯರನ್ನು ಬಿಟ್ಟೂಬಿಡದೆ ಕಾಡುವ ಮಾನಸಿಕ ಸಮಸ್ಯೆಗಳು ಮತ್ತು ಪರಿಹಾರ

Date:

'ನಿಮ್ಮ ಮನಸ್ಸಿನ ಬಗ್ಗೆ ನಿಮಗೆಷ್ಟು ಗೊತ್ತು?' ಸರಣಿ | ಖಿನ್ನತೆ, ಆತಂಕದ ಅಸ್ವಸ್ಥತೆಗಳು, ಗೀಳು ಮನೋರೋಗ, ತಿನ್ನುವಿಕೆಯ ಬಗೆಗಿನ ಅಸ್ವಸ್ಥತೆ ಮೊದಲಾದ ಮಾನಸಿಕ ಸಮಸ್ಯೆಗಳು ಮಹಿಳೆಯರನ್ನು ಸದಾ ಕಾಡುತ್ತವೆ. ಇವುಗಳಿಗೆ ಕೆಲವೊಮ್ಮೆ ಸರಳ ಪರಿಹಾರವೂ ಉಂಟು. ಆದರೆ...

ಅಂತರ್ಗತವಾಗಿ ಮಹಿಳೆಯರಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚು ಅನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ, ಪುರುಷಪ್ರಧಾನ ಸಮಾಜದಲ್ಲಿ ಕೆಲವಷ್ಟು ಸಮಸ್ಯೆಗಳು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಜೈವಿಕ, ಮಾನಸಿಕ ಹಾಗೂ ಸಾಮಾಜಿಕ ಅಂಶಗಳ ಸಂಯೋಜನೆಯಿಂದ ಈ ಸಮಸ್ಯೆಗಳು ಉಂಟಾಗುತ್ತವೆ. ಖಿನ್ನತೆ, ಆತಂಕದ ಅಸ್ವಸ್ಥತೆಗಳು, ಗೀಳು ಮನೋರೋಗ, ತಿನ್ನುವಿಕೆಯ ಬಗೆಗಿನ ಅಸ್ವಸ್ಥತೆಗಳು, ಪೋಸ್ಟ್ ಟ್ರಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್, ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್ ಮೊದಲಾದ ಸಮಸ್ಯೆಗಳು ಮಹಿಳೆಯರಲ್ಲಿ ಹೆಚ್ಚು.

ಆತಂಕದ ಅಸ್ವಸ್ಥತೆ

ಮಹಿಳೆಯರಲ್ಲಿ ಆತಂಕದ ಅಸ್ವಸ್ಥತೆ ಉಂಟಾಗಲು ಕಾರಣ – ಹಾರ್ಮೋನ್‌ಗಳಲ್ಲಿ ಏರಿಳಿತ, ಸಾಮಾಜಿಕ ನಿರೀಕ್ಷೆಗಳ ಕಾರಣಕ್ಕೆ ಉಂಟಾಗುವ ಒತ್ತಡಗಳು, ಬದುಕಿನಲ್ಲಿ ಎದುರಾಗುವ ಅಘಾತಕಾರಿ ಅನುಭವಗಳು. ಈಗಲೂ ನಡೆಯುತ್ತಿರುವ ಲಿಂಗ ತಾರತಮ್ಯ ಇಂತಹ ಆತಂಕವನ್ನು ಹೆಚ್ಚು ಮಾಡುತ್ತದೆ. ಸಾಮಾನ್ಯ ಆತಂಕದ ಅಸ್ವಸ್ಥತೆ, ಪ್ಯಾನಿಕ್ ಡಿಸಾರ್ಡರ್ ಹಾಗೂ ಗೀಳು ಮನೋರೋಗ – ಇವು ಮಹಿಳೆಯರಲ್ಲಿ ಪುರುಷರಿಗಿಂತ ಹೆಚ್ಚು ಕಂಡುಬರುತ್ತವೆ. ನಮ್ಮ ದೇಶದಲ್ಲಿ ಹೆಚ್ಚಿನ ಮಹಿಳೆಯರು ಮನೆಯನ್ನು ನೋಡಿಕೊಳ್ಳುವುದಲ್ಲದೆ ಹೊರಗೆ ಹೋಗಿ ಕೆಲಸ ಮಾಡುವುದು ಕೂಡ ಮಾನಸಿಕ ಒತ್ತಡಕ್ಕೆ ಮುಖ್ಯ ಕಾರಣ. ಮನೆ ಮತ್ತು ಆಫೀಸು ಎಂದು ಪ್ರತೀ ದಿನ 16-17 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಇದರಿಂದ ಒತ್ತಡ ಆಗದೆ ಇರುತ್ತದೆಯೇ?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು | ಸಿಟ್ಟಿನ ಈ ಪುಟ್ಟನ ಕತೆ ನಿಮ್ಮ ಮಗುವಿನದ್ದೂ ಆಗಿರಬಹುದು

ಖಿನ್ನತೆಯ ಅಸ್ವಸ್ಥತೆ

ಮಹಿಳೆಯರು ಖಿನ್ನತೆ ಅನುಭವಿಸುವ ಸಾಧ್ಯತೆ ಪುರುಷರಿಗಿಂತ ಎರಡು ಪಟ್ಟು ಹೆಚ್ಚು. ಖಿನ್ನತೆ ಎಷ್ಟೋ ಸಂದರ್ಭಗಳಲ್ಲಿ ಮರೆಮಾಚಿ ಹೋಗಿರುತ್ತದೆ. ರೋಗ ಭಯ ಅಥವಾ ತೀವ್ರ ಆತಂಕ, ಅತಿಯಾದ ನಿದ್ರೆ, ಅತಿಯಾದ ಹಸಿವು… ಇಂತಹ ಗುಣಲಕ್ಷಣಗಳ ಮುಖಾಂತರ ಖಿನ್ನತೆ ಪ್ರಕಟಗೊಳ್ಳುತ್ತದೆ. ಹೆರಿಗೆಯ ನಂತರ, ಋತುಸ್ರಾವದ ಆಸುಪಾಸಿನ ದಿನಗಳಲ್ಲಿ ಹಾಗೂ ಋತುಬಂಧದ ಸಮಯದಲ್ಲಿ ಖಿನ್ನತೆಯ ಲಕ್ಷಣಗಳು ಜಾಸ್ತಿ.

ಕಾರಣವಿಲ್ಲದೆ ಮನಸ್ಸಿಗೆ ಬೇಸರ, ನಿತ್ಯ ಆನಂದ ಕೊಡುವ ಕೆಲಸಗಳಲ್ಲೂ ಅಷ್ಟೊಂದು ಖುಷಿ ಸಿಗದಿರುವುದು, ಯಾವುದೇ ವೈದ್ಯಕೀಯ ಕಾರಣವಿಲ್ಲದೆ ಸುಸ್ತು, ತಾನು ನಿಷ್ಪ್ರಯೋಜಕ ಎಂಬ ಭಾವ, ಆತ್ಮಹತ್ಯೆಯ ಯೋಚನೆ, ಧೈರ್ಯದ ಕೊರತೆ, ಬೇರೆಯವರು ಗುರುತಿಸುತ್ತಿಲ್ಲ ಎಂಬ ಕೊರಗು, ಯೋಚನೆ ಮತ್ತು ನಡವಳಿಕೆಯಲ್ಲಿ ನಿಧಾನಗತಿ, ಸುಖಾಸುಮ್ಮನೆ ತಪ್ಪಿತಸ್ಥ ಮನೋಭಾವ, ಸಣ್ಣ-ಸಣ್ಣ ವಿಷಯಗಳಿಗೂ ಅಳುವುದು, ತೂಕ ಕಡಿಮೆ ಆಗುವುದು, ಲೈಂಗಿಕ ನಿರಾಸಕ್ತಿ… ಇವೆಲ್ಲ ಖಿನ್ನತೆಯ ಲಕ್ಷಣಗಳೂ ಆಗಿರಬಹುದು.

ಗೀಳು ಮನೋರೋಗ

ಗೀಳು ಮನೋರೋಗ ಅಥವಾ ಗೀಳು ಅನ್ನುವಾಗ, ಪದೇಪದೆ ಕೈ-ಕಾಲು ತೊಳೆಯುವ ಮಹಿಳೆಯರು ನೆನಪಿಗೆ ಬರುತ್ತಾರೆ. ಗೀಳು ಎಂಬುದು – ವಿಚಿತ್ರ ಆಲೋಚನೆ ಮತ್ತು ವರ್ತನೆಗಳ ಸಮೂಹ. ಪದೇಪದೆ ತೊಳೆಯುವುದು, ಮಾಡಿದ ಕೆಲಸ ಸರಿಯಾಗಿದೆಯೇ ಇಲ್ಲವೇ ಎಂದು ಪದೇಪದೆ ಪರಿಶೀಲಿಸುವುದು, ಪದೇಪದೆ ಹರಕೆ ಹೊತ್ತುಕೊಳ್ಳುವುದು; ಅದೂ ಕೆಲವೊಮ್ಮೆ ಈಡೇರಿಸಲಾಗದ ಹರಕೆಗಳನ್ನು ಪದೇಪದೆ ಮಾಡಿಕೊಂಡು ಮುಂದೆ ಶಾಪಕ್ಕೆ ತುತ್ತಾಗುವೆ ಅನ್ನುವ ಭಯ, ದೇವಸ್ಥಾನಕ್ಕೆ ಹೋದ ಕೂಡಲೇ ಮನಸ್ಸಿಗೆ ಕೆಟ್ಟ ಮಾತುಗಳು ಬರುವುದು… ಹೀಗೆ ವಿಚಿತ್ರ ಗೀಳುಗಳು ಕಾಡುವುದುಂಟು.

ಅಸ್ವಸ್ಥತೆ
ಕಲಾಕೃತಿ ಕೃಪೆ: Unsplash ಜಾಲತಾಣ

ಪೋಸ್ಟ್ ಟ್ರಮಾಟಿಕ್ ಸ್ಟ್ರೆಸ್ ಡಿಸಾರ್ಡರ್

ಇದು ಮಹಿಳೆಯರಲ್ಲಿ ಹೆಚ್ಚು ಕಾಣಸಿಗುವ ಸಮಸ್ಯೆ. ಹಲವಾರು ವರ್ಷಗಳ ಕಾಲ, ಇದು ಕೇವಲ ವಿದೇಶದಲ್ಲಿ ಕಂಡುಬರುವ ಕಾಯಿಲೆ ಎಂಬ ಮನೋಭಾವ ಮನೋವೈದ್ಯರಲ್ಲಿ ಇತ್ತು. ಹಲವು ಬಗೆಯ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು, ಕೌಟುಂಬಿಕ ದೌರ್ಜನ್ಯದ ಬಲಿಪಶುಗಳು ಒಂದು ರೀತಿಯ ತೀವ್ರ ಆತಂಕ, ಹೆದರಿಕೆ, ನಡೆದುಹೋದ ಘಟನೆಗಳ ಫ್ಲ್ಯಾಶ್‌ಬ್ಯಾಕ್, ರಾತ್ರಿಯ ದುಃಸ್ವಪ್ನಗಳು ಮುಂತಾದವಕ್ಕೆ ತುತ್ತಾಗುವುದು ಈ ಮಾನಸಿಕ ಅನಾರೋಗ್ಯದ ಸೂಚನೆಗಳು.

ಚಿತ್ತವಿಕಲತೆ

ಇದು ಮಹಿಳೆಯರಲ್ಲಿ ಪ್ರಸವದ ನಂತರ ಹೆಚ್ಚು. ಹಾಗೆಯೇ, ಋತುಬಂಧದ ನಂತರ ಕೂಡ. ತಮಗೆ ಯಾರೋ ಏನೋ ಮಾಡುತ್ತಾರೆ, ತಮಗೆ ಮಾಟ-ಮಂತ್ರ ಮಾಡಿಸಿದ್ದಾರೆ, ವಶೀಕರಣ ಮಾಡಿದ್ದಾರೆ ಮೊದಲಾದ ಬಲವಾದ ನಂಬಿಕೆಗಳು, ತಮ್ಮ ಸಂಗಾತಿಗೆ ಬೇರೆ ಯಾರ ಜೊತೆಯೋ ಸಂಬಂಧ ಇದೆ ಮುಂತಾದ ಅಪನಂಬಿಕೆಗಳು; ಈ ಅಪನಂಬಿಕೆಗಳು ಎಷ್ಟು ಬಲವಾಗಿರುತ್ತವೆ ಅಂದರೆ, ಇದನ್ನು ಬದಲಿಸುವುದು ಅಷ್ಟು ಸುಲಭವಲ್ಲ. ಇಲ್ಲಿ ಆಪ್ತಸಲಹೆ ಏನಕ್ಕೂ ಪ್ರಯೋಜನಕ್ಕೆ ಬರುವುದಿಲ್ಲ. ಇಂತಹ ಸಮಸ್ಯೆಗಳಿಗೆ ಮಾತ್ರೆ ಚಿಕಿತ್ಸೆ ಅತಿ ಅಗತ್ಯ.

ಈ ಆಡಿಯೊ ಕೇಳಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಹೆಣ್ಣಿನ ದೇಹದ ಮೇಲಿನ ಅಧಿಕಾರ ರಾಜಕಾರಣ

ಮೈಗ್ರೇನ್ ತಲೆನೋವು ಮತ್ತು ಋತುಸ್ರಾವದ ಸುತ್ತಮುತ್ತ ಉಂಟಾಗುವ ಅಲ್ಪ ಮಟ್ಟದ ಮನೋಸಮಸ್ಯೆಗಳ ನಡುವೆ ಗಟ್ಟು ಸಂಬಂಧ ಉಂಟು. ಈ ಮೈಗ್ರೇನ್ ತಲೆನೋವು ಅಂದರೆ, ಸಾಮಾನ್ಯವಾಗಿ ತಲೆಯ ಯಾವುದಾದರೂ ಒಂದು ಭಾಗ, ಅಂದರೆ ಎಡ ಅಥವಾ ಬಲ ಭಾಗದಲ್ಲಿ ಪಟಪಟ ಎಂದು ಹೊಡೆದುಕೊಳ್ಳುವಂತಾಗಿ ಅಸಾಧ್ಯ ನೋವು ಕಾಣಿಸಿಕೊಳ್ಳುವುದು. ಹೆಚ್ಚಾಗಿ ಪ್ರಯಾಣದ ಸಮಯದಲ್ಲಿ, ಇಲ್ಲವೇ ಋತುಸ್ರಾವದ ಒಂದು ವಾರ ಮುಂಚೆ ಅಥವಾ ನಂತರ, ಸೂರ್ಯನ ಬೇಗೆಯಲ್ಲಿ ಈ ಬಗೆಯ ತಲೆನೋವು ಹೆಚ್ಚಾಗುತ್ತದೆ. ಕೆಲವು ಬಗೆಯ ಫರ್ಫೂಮ್‌ ಅಥವಾ ಸುಗಂಧದ್ರವ್ಯಗಳಿಂದ, ಕೆಲವು ಚಾಕೊಲೆಟ್‌ಗಳಿಂದಲೂ ಈ ತಲೆನೋವು ಜಾಸ್ತಿಯಾಗುತ್ತದೆ.

ಮೈಮೇಲೆ ದೇವರು, ದೈವ, ಸತ್ತವರು ಬರುವುದು ಇಲ್ಲವೇ ಎಚ್ಚರ ತಪ್ಪಿದಂತಾಗುವುದು, ಫಿಟ್ಸ್ ತರಹ ಕೈ-ಕಾಲು ನಡುಗುವುದು… ಇವುಗಳನ್ನು ವಿಘಟಿತ ಅಸ್ವಸ್ಥತೆಗಳು (dissociative disorders) ಅನ್ನುತ್ತಾರೆ. ಇವು ಕೂಡ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಸುಪ್ತ ಮನಸ್ಸಿನಲ್ಲಿ ಅಡಗಿರುವ ಹಲವಾರು ಸಮಸ್ಯೆಗಳನ್ನು ಹೇಳಿಕೊಳ್ಳಲಾಗದಂತಹ ಸಂದರ್ಭದಲ್ಲಿ ಈ ರೀತಿಯ ಸನ್ನಿವೇಶ ಏರ್ಪಡುತ್ತದೆ. ಮುಖ್ಯವಾಗಿ, ಸಣ್ಣ ಮಕ್ಕಳಿರುವಾಗ ನಡೆದುಹೋದ ಲೈಂಗಿಕ ದೌರ್ಜನ್ಯಗಳು ಇಂತಹ ಸಮಸ್ಯೆಗಳನ್ನು ಹೆಚ್ಚಾಗಿ ಉಂಟುಮಾಡುತ್ತವೆ.

ಒತ್ತಡ ಕಡಿಮೆ ಮಾಡಿಕೊಳ್ಳಲು ಏನು ಮಾಡಬಹುದು?

  • ಮನಸ್ಸಿಗೆ ಆರಾಮ ತಂದುಕೊಳ್ಳಲು ಆರಾಮದಾಯಕ ವ್ಯಾಯಮ (relaxation exercises) ಅಗತ್ಯ. ದೀರ್ಘ ಉಸಿರಾಟ, ಪ್ರಾಣಾಯಾಮ ಮನಸ್ಸಿನ ಒತ್ತಡ ಕಡಿಮೆ ಮಾಡುತ್ತವೆ.
  • ಪ್ರತೀ ದಿನ ಒಂದು ಗಂಟೆಯ ನಡಿಗೆ ಅಥವಾ ಈಜು ಅಥವಾ ಸೈಕ್ಲಿಂಗ್ ಮಾಡುವುದರಿಂದ ಎಂಡಾರ್ಫಿಂಸ್ ಎಂಬ ರಸದೂತಗಳು ಉತ್ಪಾದನೆಯಾಗಿ ಮನಸ್ಸಿಗೆ ಮುದ ಸಿಗುತ್ತದೆ.
  • ಉತ್ತಮ ಸಮಯ ನಿರ್ವಹಣೆ, ತನ್ನಿಂದ ಆಗದ ಕೆಲಸಗಳನ್ನು ಮಾಡುವುದಿಲ್ಲ ಅಂತ ನೇರವಾಗಿ ಹೇಳುವುದರಿಂದ ಮಾನಸಿಕ ಒತ್ತಡದಿಂದ ಬಹುಪಾಲು ಬಚಾವಾಗಬಹುದು.
  • ಮನಸ್ಸಿನಲ್ಲಿ ಯಾವುದೇ ವಿಚಾರಗಳನ್ನು ಹಾಗೆಯೇ ಇಟ್ಟುಕೊಂಡು ಯೋಚಿಸುತ್ತಿದ್ದರೆ, ಅದು ಕಾಲದಿಂದ ಕಾಲಕ್ಕೆ ಹೆಚ್ಚು-ಹೆಚ್ಚು ಮಾನಸಿಕ ಒತ್ತಡ ಸೃಷ್ಟಿಸುತ್ತಲೇ ಹೋಗುತ್ತದೆ. ಅದರ ಬದಲಿಗೆ, ಪ್ರೀತಿಪಾತ್ರರ ಜೊತೆಗೆ ಕೂತು ಮಾತಾಡಿದಾಗ ಸಮಸ್ಯೆಗಳು ಕಡಿಮೆ ಆಗುತ್ತವೆ.
  • ಕೆಲವೊಮ್ಮೆ, ಖಿನ್ನತೆ ಮತ್ತು ಆತಂಕಕ್ಕೆ ವೃತ್ತಿಪರರಿಂದ ಆಪ್ತಸಲಹೆಯ ಸಹಾಯ ಪಡೆದುಕೊಳ್ಳುವುದು ಅವತ್ಯ.
  • ತೀವ್ರ ಬಗೆಯ ಖಿನ್ನತೆ, ಆತ್ಮಹತ್ಯಾ ಯೋಚನೆಗಳು, ಚಿತ್ತವಿಕಲತೆ, ಪ್ರಸವದ ಆಸುಪಾಸಿನಲ್ಲಿ ಉಂಟಾಗುವ ತೀವ್ರ ಖಿನ್ನತೆ ಮತ್ತು ಚಿತ್ತವಿಕಲತೆ ಇವುಗಳಿಗೆ ಮಾತ್ರೆ ಚಿಕಿತ್ಸೆ ಅತ್ಯಂತ ಅಗತ್ಯ. ಅಂತಹ ಸಂದರ್ಭದಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಮನೋವೈದ್ಯರನ್ನು ಭೇಟಿಯಾಗುವುದು ಅನಿವಾರ್ಯ.

ಪೋಸ್ಟ್ ಹಂಚಿಕೊಳ್ಳಿ:

ಡಾಕ್ಟರ್ ಪಿ ವಿ ಭಂಡಾರಿ
ಡಾಕ್ಟರ್ ಪಿ ವಿ ಭಂಡಾರಿ
ಮನೋವೈದ್ಯರು. ಡಾಕ್ಟರ್ ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕರು. ಜನಸಾಮಾನ್ಯರು ಸ್ವಸ್ಥ ಜೀವನ ನಡೆಸಲು ಸಾಧ್ಯವಾಗಬೇಕು ಮತ್ತು ಮಾನಸಿಕ ಸಮಸ್ಯೆಗಳ ಬಗೆಗೆ ಪ್ರತಿಯೊಬ್ಬರಿಗೂ ಅರಿವಿರಬೇಕು ಎಂಬುದು ಇವರ ಮಹದಾಸೆ; ಇದಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ಸದಾ ಭಾಗಿ. ಕಾರ್ಯಕ್ಷೇತ್ರ ಉಡುಪಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...