ಜನಸಾಮಾನ್ಯರ ಆರ್ಥಿಕ ಸಂಕಟವನ್ನು ಕಿಂಚಿತ್ತಾದರೂ ಪರಿಹರಿಸುವ ಉದ್ದೇಶವಿರುವ ಮತ್ತು ಮಹಿಳಾಸ್ನೇಹಿಯಾದ ಸೌಲಭ್ಯಗಳ ಕುರಿತು ತುಂಬಾ ಲೇವಡಿಯ ವಿರೋಧ ಕೇಳಿಬರುತ್ತಿದೆ. ಹಾಗಾದರೆ, ಸರ್ಕಾರದ ಗ್ಯಾರಂಟಿಗಳು ನಿಜಕ್ಕೂ ಜನಪ್ರಿಯ ಪ್ರಣಾಳಿಕೆ ಮಾತ್ರವಾ?
ರಾಜ್ಯ ವಿಧಾನಸಭಾ ಚುನಾವಣೆಗೆ ಎರಡೇ ದಿನ ಇತ್ತು. ನನ್ನ ವಾಟ್ಸಾಪಿಗೆ ಒಂದು ಫಾರ್ವರ್ಡ್ ಮೆಸೇಜ್. ಕಳಿಸಿದವರು ನನ್ನ ದೂರದ ಸಂಬಂಧಿ. ಪಿ.ಯು ಕಾಲೇಜಿನ ಉಪನ್ಯಾಸಕಿಯಾಗಿ ನಿವೃತ್ತರಾದವರು. ಮಧ್ಯಮ ವರ್ಗದಿಂದ ಮೇಲ್‍ಮಧ್ಯಮ ವರ್ಗಕ್ಕೆ ಸ್ಥಳಾಂತರಗೊಂಡವರು. ಆ ಮೆಸೇಜಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆಯ ಗ್ಯಾರಂಟಿಗಳ ಕುರಿತು ವ್ಯಂಗ್ಯ ತಪಗುಡುತ್ತಿತ್ತು. “ನಾನು, ನನ್ನ ಹೆಂಡತಿ ಕಂಪನಿ ಉದ್ಯೋಗಿಗಳು. ಬಹಳ ಕಷ್ಟದಿಂದ ಗಳಿಕೆ ಮಾಡುತ್ತಿದ್ದೇವೆ. ಈಗ ಉದ್ಯೋಗ ಬಿಟ್ಟರೆ ನಿರುದ್ಯೋಗಿ ಭತ್ಯೆ ಸಿಗುತ್ತದೆ. ನನ್ನ ಹೆಂಡತಿ ಮನೆಯ ಯಜಮಾನಿ ಆಗುವುದರಿಂದ ಗೃಹಲಕ್ಷ್ಮಿಯ ಹಣ ಬರುತ್ತದೆ. ಮೂರು ಹೊತ್ತು ಕೂತು ಉಣ್ಣಲು ಹತ್ಹತ್ತು ಕೆ.ಜಿ ಅಕ್ಕಿ ಸಿಗುತ್ತದೆ. ನನ್ನ ಹೆಂಡತಿ ಪುಕ್ಕಟ್ಟೆ ಬಸ್ಸಲ್ಲಿ ಓಡಾಡಿ ಸಂತೆ-ಪೇಟೆ ಮಾಡುತ್ತಾಳೆ. ಮನೆಯಲ್ಲಿ ಇದ್ದು ಬೇಸರ ಕಳೆಯಲು 200 ಯುನಿಟ್ ವಿದ್ಯುತ್ ಇದೆ. ಟಿ.ವಿ ಹಚ್ಚಬಹುದು. ರಾಜ್ಯ ದಿವಾಳಿಯಾಗಲಿ; ಶ್ರೀಲಂಕಾ, ಪಾಕಿಸ್ತಾನ, ಸೋಮಾಲಿಯಾ ಆಗಲಿ. ನನಗೇನು? ಇದನ್ನು ಒಪ್ಪುವವರು ಮಾತ್ರ ಕಾಂಗ್ರೆಸ್‍ಗೆ ವೋಟು ಹಾಕಿ…” ಟಿ.ವಿ ಚಾನಲ್‍ಗಳಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಅನುಮಾನ, ಆರ್ಥಿಕ ದಿವಾಳಿ, ಚುನಾವಣಾ ತಂತ್ರ ಎಂಬ ಫೋಕಸ್ ಚರ್ಚೆಗಳು ನಡೀತಿರುವಾಗ, ಖಾಸಗಿಯಾಗಿ ಇಂತಹ ಪ್ರತಿರೋಧಗಳು ವ್ಯಕ್ತವಾಗುತ್ತಿದ್ದವು. ಆದರೆ, ಬಡವರು ಕಾಂಗ್ರೆಸ್ ಅನ್ನು ಗೆಲ್ಲಿಸಿದರು. ‘ಬಡವರಿಗೆ ನಿರ್ಣಾಯಕ ಶಕ್ತಿಯೇ ಇಲ್ಲ’ ಎನ್ನುವ ಆರೋಪವನ್ನು ಸುಳ್ಳುಮಾಡಿದರು. ಈ ನೆಲಕ್ಕೆ ಅಗತ್ಯವಾದ ಅಭಿವೃದ್ಧಿಯ ಮಾದರಿ ಖಂಡಿತವಾಗಿಯೂ ಇದೇ ಎಂದು ನಿರೂಪಿಸಿದರು.
ಈದಿನ.ಕಾಮ್ ಬರಹಗಳನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ
ಈಗ ಸರ್ಕಾರ, ಒಂದಿಷ್ಟು ನಿರ್ಬಂಧ, ರೂಪುರೇಷೆಗಳ ಮೂಲಕ ಈ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದೇ ಜೂನ್ 11ರಿಂದಲೇ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಫ್ರೀ ಆಗಲಿದೆ. ಕರ್ನಾಟಕದ ಮಹಿಳೆಯರಿಗೆ, ಕರ್ನಾಟಕದೊಳಗೆ ಕೆಲವು ಸರ್ಕಾರಿ ಸಾರಿಗೆಯಲ್ಲಿ ಉಚಿತವಾಗಿ ಓಡಾಡುವ ಅವಕಾಶವಿದೆ. ಪ್ರತೀ ಮನೆಯ ಯಜಮಾನಿ, ಸರ್ಕಾರದಿಂದ ಪ್ರತೀ ತಿಂಗಳು 2000 ರೂಪಾಯಿಗಳ ಸಂಭಾವನೆ ಪಡೆಯಲಿದ್ದಾಳೆ. ಮನೆ ಉಪಯೋಗಿ ವಿದ್ಯುತ್ 200 ಯುನಿಟ್‍ಗಳ ಒಳಗಿದ್ದರೆ ಅದನ್ನು ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ. ಮನೆಯ ಪ್ರತೀ ಸದಸ್ಯನಿಗೆ 10 ಕೆ.ಜಿ ಅಕ್ಕಿ ಸಿಗಲಿದೆ. ಜನಸಾಮಾನ್ಯರ ಆರ್ಥಿಕ ಸಂಕಟವನ್ನು ಕಿಂಚಿತ್ತಾದರೂ ಪರಿಹರಿಸಬೇಕು ಎನ್ನುವ, ಮಹಿಳಾಸ್ನೇಹಿಯಾದ ಈ ಸೌಲಭ್ಯಗಳ ಕುರಿತು ತುಂಬಾ ತೀಕ್ಷ್ಣವಾದ ಮತ್ತು ಲೇವಡಿಯ ವಿರೋಧಗಳು ಕೇಳುತ್ತಿವೆ. ರಾಜ್ಯ ಬಜೆಟ್‍ನ ಬಹುದೊಡ್ಡ ಮೊತ್ತವು ಈ ಸೌಲಭ್ಯಗಳ ಪೂರೈಕೆಗಾಗಿಯೇ ವಿನಿಯೋಗ ಆಗುವುದರಿಂದ ಇನ್ನು ಅಭಿವೃದ್ಧಿಯು ಮರೀಚಿಕೆ ಎಂಬ ಅಭಿಪ್ರಾಯವನ್ನು ಹುಟ್ಟಿಸಲಾಗುತ್ತಿದೆ. ಹೀಗೆ ಅಭಿಪ್ರಾಯಿಸುವವರಲ್ಲಿ ಶ್ರೀಮಂತರು, ಮಧ್ಯಮ ವರ್ಗದವರು ಮತ್ತು ವಿದ್ಯಾವಂತರಿದ್ದಾರೆ. ತಮ್ಮ ತೆರಿಗೆ ಹಣ ಇಂತಹದಕ್ಕೆ ಬಳಸಲು ಅನುಮತಿಸುವುದಿಲ್ಲ ಎಂಬ ಬಂಡವಾಳವಾದಿಗಳಿದ್ದಾರೆ. ಟಿ.ವಿ ಚಾನೆಲ್‍ಗಳೂ ಈ ಅಭಿಪ್ರಾಯಕ್ಕೆ ಪೂರಕವಾಗಿ ಇರುವುದರಿಂದ ಒಟ್ಟಾರೆ ಜನಾಭಿಪ್ರಾಯವನ್ನೇ ತಿರುಚುವ ಅಪಾಯವಿದೆ. ಹಾಗಿದ್ದರೆ, ಈ ಗ್ಯಾರಂಟಿಗಳು ಜನಪ್ರಿಯ ಪ್ರಣಾಳಿಕೆಗಳು ಮಾತ್ರವಾ?; ಅವುಗಳಿಗೆ ಜನಪರವಾದ ಅಭಿವೃದ್ಧಿಯ ಮೌಲ್ಯಾಂಕನ ಇದೆಯಾ ಎಂದು ಚಿಂತಿಸಬೇಕಿದೆ.

ಮಹಿಳಾಪರವಾಗಿರುವ ಯಾವ ಯೋಜನೆಯನ್ನೂ ತಕ್ಷಣಕ್ಕೆ ಒಪ್ಪಿಕೊಳ್ಳಲು ಆಗದ ಪಿತೃತ್ವ ದೃಷ್ಟಿಕೋನವು ನಮ್ಮ ಸಮಾಜ ರಚನೆಯಲ್ಲಿಯೇ ಅಂತರ್ಗತವಾಗಿದೆ. ಹಾಗಾಗಿ ಲೇವಡಿ ಸುಲಭವಾಗುತ್ತದೆ. ಇನ್ನು ಮನೆಗಳಲ್ಲಿ ಹೆಣ್ಣುಮಕ್ಕಳನ್ನು ಹಿಡಿದಿಡುವುದೇ ಕಷ್ಟ, ಅವರು ವ್ಯರ್ಥ ಸುತ್ತುತ್ತಾರೆ, ಮೋಜು ಮಾಡುತ್ತಾರೆ ಎಂಬ ವ್ಯಂಗ್ಯದ ಆರೋಪದ ಹಿಂದೆ ಇರುವುದು, ಹೆಣ್ಣುಮಕ್ಕಳನ್ನು ಯಾವತ್ತೂ ಕಬ್ಜಾದಲ್ಲಿಯೇ ಇಟ್ಟುಕೊಳ್ಳಬೇಕು-ಇಲ್ಲದಿದ್ದರೆ ಕೆಟ್ಟುಹೋಗುತ್ತಾರೆ ಎಂಬ ಸಾಂಪ್ರದಾಯಿಕತೆ. ಸರ್ಕಾರಿ ಸಾರಿಗೆಯಲ್ಲಿ ಉಚಿತವಾಗಿ ಸಂಚರಿಸುವ ಹೆಣ್ಣುಮಕ್ಕಳು ಬಹುತೇಕವಾಗಿ ಕೆಳ ಮತ್ತು ಕೆಳಮಧ್ಯಮ ವರ್ಗದವರು. ಈ ಸೌಲಭ್ಯ ಎಲ್ಲ ಮಹಿಳೆಯರಿಗೆ ಎಂದಿದ್ದರೂ ಶೇಕಡ 90ರಷ್ಟು ಫಲಾನುಭವಿಗಳು ಬಡವರು. ಹಳ್ಳಿಯಿಂದ ನಗರಕ್ಕೆ, ನಗರದ ಬೇರೆ-ಬೇರೆ ಭಾಗಗಳಿಗೆ ಹೂ-ಹಣ್ಣು ಮಾರಾಟದ, ಮನೆಗೆಲಸದ, ಅಸಂಘಟಿತ ವಲಯದ ಕಾರ್ಮಿಕ ಮಹಿಳೆಯರು ಈ ಪ್ರಯೋಜನ ಪಡೆಯುತ್ತಾರೆ.
“ನಂಗಿವತ್ತು ಕಾಲು ಹರಿಲಾಕಹತ್ತದ ಒಂದಿಪ್ಪತ್ತು ರೂಪೈ ಕೊಡಿ ಬಸ್ಸಿಗ್ ಹೊಕ್ಕೀನಿ,” ಎಂದು ಆಗಾಗ ಕೇಳುವ, ನನ್ನ ಮನೆಗೆಲಸದ ಫರ್ಜಾನಾ ನೆನಪಾಗುತ್ತಾಳೆ. ಅವರು ಉಳಿಸುವ ಸಾವಿರ-ಒಂದೂವರೆ ಸಾವಿರದಷ್ಟು ಹಣ ಅವರ ಕುಟುಂಬದ, ಮಕ್ಕಳ ಸಣ್ಣ-ಪುಟ್ಟ ಖುಷಿಗಳಿಗೆ ವಿನಿಯೋಗವಾಗುತ್ತದೆ. ಅವರ ಅಗತ್ಯಗಳ ಪೂರೈಕೆಯಾಗುತ್ತದೆ. ತಮ್ಮ ಸ್ವಂತ ಖರ್ಚು-ವೆಚ್ಚವನ್ನು ಉಳಿಸಿ ಕುಟುಂಬವನ್ನು ಸಂಗೋಪನೆ ಮಾಡುವ ಹೆಣ್ಣುಮಕ್ಕಳು ತಮ್ಮ ಆರೋಗ್ಯವನ್ನು ಅಲಕ್ಷಿಸುತ್ತಿರುತ್ತಾರೆ. ಕಾಲೇಜಿನ ಪ್ರತಿದಿನದ ಅಸೆಂಬ್ಲಿಯಲ್ಲಿ ನನ್ನ ಪಕ್ಕ ನಿಲ್ಲುತ್ತಿದ್ದ ಸುಧಾ 4-5 ದಿನಗಳಿಂದ ಬಂದಿರಲಿಲ್ಲ. “ಯಾಕೆ ಸುಧಾ… ಪ್ರೇಯರಿಗೆ ಬಂದಿಲ್ಲ?” ಎಂದು ಸಹಜವಾಗಿ ಕೇಳಿದೆ. ಸುಧಾ ಸುಮಾರು 30 ವರ್ಷದ ಗ್ರೂಫ್ ಡಿ ದರ್ಜೆಯ ಹೊರಗುತ್ತಿಗೆ ನೌಕರಳು. “ನನಗ ನಿಲ್ಲಲೇ ಆಗ್ತಿಲ್ಲ ಮೇಡಂ, ಹಿಮ್ಮಡ ವಿಪರೀತ ನೋವು; ದಿನಾ ಏನಿಲ್ಲಂದ್ರೂ 3-4 ಕಿಲೋಮೀಟರ್ ನಡ್ದೂ-ನಡ್ದೂ ಅಂತ ಕಾಣ್ತದೆ,” ಅಂದಳು ಮುಖ ಚಿಕ್ಕದು ಮಾಡಿಕೊಂಡು. ತಕ್ಷಣ “11 ರಿಂದ ಬಸ್ಸಿಗೆ ಓಡಾಡ್ತೀನಿ…” ಎಂದು ನಕ್ಕಳು. ಸರ್ಕಾರಿ ಕೆಂಪು ಬಸ್ಸು ರಾಜ್ಯಾದ್ಯಂತ ಇಂತಹ ಅದೆಷ್ಟು ಹೆಣ್ಣುಮಕ್ಕಳ ಅವ್ಯಕ್ತ ನೋವುಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡು ಸಾಂತ್ವನಿಸಲಿದೆಯೋ?
ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು | ಎಲ್ಲೆಲ್ಲೂ ರಕ್ತದ ಕಲೆಯೇ ಕಾಣಿಸುತ್ತಿದ್ದ ಆಕೆಗೆ ನಿಜಕ್ಕೂ ಏನಾಗಿತ್ತು?
ಹೆಣ್ಣುಮಕ್ಕಳ ಜಾಲಿ ಟ್ರಿಪ್ ಬಗ್ಗೆ ಸಸಾರ ಮಾತಾಡುವವರು ಗಮನಿಸಲಿ. ಬದುಕಿಡೀ ಮನೆಯೆಂಬ ತಿರುಗಣಿಯಲ್ಲಿ ಕಾಲು ಸಿಗಿಸಿಕೊಂಡವರು, ಕುಟುಂಬವೆಂಬ ಹಡಲಿಗೆ ಹೊತ್ತು ಬೆನ್ನು ಬಾಗಿದವರು, ಇಡೀ ಲೋಕವನ್ನೇ ಪಿತೃತ್ವದ ಬೆನ್ನ ಅಂಚಿನಿಂದ ಕಂಡವರು, ಇನ್ನಾದರೂ ತಾವು ತಾವೇ ಒಂಟಿಯಾಗಿ, ಒಟ್ಟಾಗಿ ಈ ಹಾದಿ-ಬೀದಿಗಳಲ್ಲಿ ಸುತ್ತಲಿ. ಅವರ ಜಡತೆ ಮುಕ್ತಗೊಳ್ಳಲಿ, ಚಲನಶೀಲತೆ ದಕ್ಕಲಿ, ಸೋದರಿಕೆಯ ಸಖ್ಯದ ಸಾಮಾಜಿಕ ಸಂಬಂಧವು ಜಾತಿ-ಧರ್ಮಗಳ ಪರಿಷೆಯಿಂದ ಕಳಚಿಕೊಂಡು ಹೊಸ ಕಾಲುಹಾದಿಯನ್ನು ಬರೆಯಲಿ. ಪಿತೃಸತ್ತೆಯು ಸಾವಿರ-ಸಾವಿರ ವರ್ಷಗಳಿಂದ ಕೊರೆದ ಛಿದ್ರತೆಯಲ್ಲಿ ಸೌಹಾರ್ದದ ಹುಲ್ಲುಗರಿಕೆಗಳು ಮೊಳೆಯಲಿ. ಕುಟುಂಬದಲ್ಲಿ ಹೆಣ್ಣುಮಕ್ಕಳನ್ನು ದುಡಿಮೆಗೆ ಮಾತ್ರ ಒಗ್ಗಿಸಿ, ನಾಗರಿಕ ಪ್ರಪಂಚದ ವ್ಯಾಪಾರ ವಹಿವಾಟಿನ ಅಧಿಕಾರದ ಚುಕ್ಕಾಣಿ ಹಿಡಿದ ಪಿತೃತ್ವದ ಬೇರು ಅಲುಗಲಿ. ಜಾಗತೀಕರಣದ ಅತ್ಯಾಧುನಿಕತೆ ಹುಟ್ಟುಹಾಕಿದ ಚೌಕಾಸಿರಹಿತವಾದ, ಪರಸ್ಪರತೆ ಇಲ್ಲವಾದ ‘ಮೌನ ಮಾರುಕಟ್ಟೆ’ ಎಂಬ ಬಂಡವಾಳೋದ್ಯಮದ ಹಿತ ಕಾಯುವ ವ್ಯವಸ್ಥೆಗೆ ತಡೆ ಒದಗಲಿ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಓಡಾಟ ಹೆಚ್ಚುತ್ತ, ಗಂಡಾಳಿಕೆಯ ವಿಕಾರಗಳು ಅಳುಕಲಿ. ಇಷ್ಟು ಸುದೀರ್ಘ ಕಾಲ ಗಂಡು ಚಿಂತನೆಯ ಮಾರುಕಟ್ಟೆ ನೀತಿ ಸ್ಥಾಪನೆಗೊಂಡು, ಭ್ರಷ್ಟಾಚಾರ, ಮೋಸ ವ್ಯಸನಗಳನ್ನು ತನ್ನ ಸಹಜತೆ ಎನ್ನುತ್ತಿದೆ. ಅದನ್ನು ಕಿಂಚಿತ್ತಾದರೂ ತಡೆಯುವ ಶಕ್ತಿ ಈ ಮಹಿಳಾ ಸಬಲೀಕರಣಕ್ಕಿದೆ. ಸರ್ಕಾರ, ಮಹಿಳಾ ಸಾರಿಗೆಗೆ ಮತ್ತು ಸಶಕ್ತತೆಗೆ ಕೊಡಮಾಡುವ ಈ ಸೌಲಭ್ಯವು ದೂರಗಾಮಿ ಪರಿಣಾಮದಲ್ಲಿ ಒಂದರಿಂದ ಇನ್ನೊಂದು ಉತ್ತೇಜಿತವಾಗುತ್ತ, ಈಗಾಗಲೇ ಕುಸಿದಿರುವ ಕೆಳ ಮತ್ತು ಮಧ್ಯಮ ಮಾರುಕಟ್ಟೆಗಳಿಗೆ ಪುನಃಶ್ಚೇತನವನ್ನು ಒದಗಿಸುತ್ತದೆ.
ಈ ಲೇಖನ ಓದಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಹೆಣ್ಣುಮಕ್ಕಳ ಲೋಕದಿಂದ ಅಂತರ ಕಾಯ್ದುಕೊಂಡ ‘ವಿರಾಮ’
ಸಾಂಪ್ರದಾಯಿಕ ಜೀವನ ವಿನ್ಯಾಸದಲ್ಲಿ ಮಹಿಳೆಯ ದುಡಿಮೆ ಅನುತ್ಪಾದಕ ಎನಿಸಿಕೊಂಡಿದೆ. ಪೂರಕ ಪಾತ್ರವನ್ನು ನಿರ್ವಹಿಸಿಸುತ್ತ ‘ನನ್ನದೇನು?’ ಎಂಬ ಆತ್ಮಗೌರವದ ಪ್ರಶ್ನೆ ಸತಾಯಿಸುತ್ತಿರುತ್ತದೆ. ನೆನಪಾಗುತ್ತಿದೆ – ನನ್ನ ಅಜ್ಜಿ, ಜಮೀನ್ದಾರಿಕೆಯ ದೊಡ್ಡ ಕುಟುಂಬದವಳು. 18 ಮಕ್ಕಳ ತಾಯಿ. ಆದರೆ ವೃದ್ಧಾಪ್ಯದ ದಿನಗಳಲ್ಲಿ ತಾನೇ ಬೆಳೆಸಿದ್ದ ಅಬಾಲಿ ಗಿಡಗಳಿಂದ ಹೂ ಕೊಯ್ದು ದಂಡೆ ಕಟ್ಟಿ ಮಾರುತ್ತಿದ್ದಳು. ಮನೆಯ ಕಟ್ಟೆಯ ಬುಟ್ಟಿಯಲ್ಲಿದ್ದ ಒಂದು ದಂಡೆಗೆ 10 ಪೈಸೆ. ಇದು ಅಪಮಾನವೆಂದು ಪ್ರಶ್ನಿಸಿದ ಮಕ್ಕಳಿಗೆ, “ಜೀವ್ನಾ ಪೂರ್ತಿ ನೀವು ಕೊಟ್ಟಿದ್ದು ಉಟ್ಟೀನಿ… ನನ್ನ ಹೆಣದ ಬಟ್ಟಿಗಾದ್ರೂ ನಂದಿರ್ಲಿ…” ಎಂದು ಕೂತುಬಿಟ್ಟಿದ್ದಳು. ಹೆಣ್ಣು ಜೀವದೊಳಗೆ ಕುದಿವ ಆತ್ಮಾಭಿಮಾನದ ಬಣ್ಣವಿದು. ಈ ಹಿಂದಿನ ‘ಅನ್ನಭಾಗ್ಯ’ದ ಸಂದರ್ಭದಲ್ಲಿ ಇಂಥವೇ ಪುಕಾರುಗಳೆದ್ದಿದ್ದವು. ಕೊಳಚೆಗೇರಿಯ ಹೆಂಗಸನ್ನ ಕೇಳಿದ್ದೆ… “ಯಾಕ್ರೀ ಬಾಯಾರ… ಹೊಟ್ಟೆ ತುಂಬಿ ಉಣ್ಣಕೋತ ಬಂದ್ ನೀವ್ಯಾರೂ ಕೆಲ್ಸ ಮಾಡಾಂಗಿಲ್ಲೇನ್ರೀ?” ಎಂದು ಪ್ರಶ್ನಿಸಿದ್ದಳು. ಮುಸ್ಸಂಜೆಯ ಅವಳ ಕಣ್ಣುಗಳ ಉರಿ ಇನ್ನೂ ಗಲಗಲಿಸುತ್ತಿದೆ.
ತೆರಿಗೆ ಹಣ ವ್ಯರ್ಥವಾಗುತ್ತಿದೆ ಎನ್ನುವವರು, ಬಡವರೂ ತೆರಿಗೆದಾರರು ಎನ್ನುವುದನ್ನು, ತಮ್ಮ ಈ ಸ್ಥಿತಿಗೆ ಬಡವರ ಪಾಲು ಸರ್ಕಾರಿ ಸೌಲಭ್ಯದ ಮೂಲಕ ಸಂದಾಯವಾಗಿರುತ್ತದೆ ಎನ್ನುವುದನ್ನು ಮರೆಯುತ್ತಾರೆ, ಮರೆತಂತೆ ನಟಿಸುತ್ತಾರೆ.
ಮುಖ್ಯ ಚಿತ್ರ ಕೃಪೆ: ಮನ್‌ಫ್ರೆಡ್ ಸೊಮರ್
ವಿಶ್ಲೇಷಣಾತ್ಮಕ ಹಾಗು ಸ್ತ್ರೀ ಪರವಾದ ಚಿಂತನೆ ಎಂದು ಪರಿಗಣಿಸದೆ ನೋಡಬಹುದಾದ ಬರಹ. ಇಷ್ಟವಾಯಿತು.
ಧನ್ಯವಾದ ಮೇಡಂ. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.
Very nice article. Hope fb warriors sitting at the comforts of social capital get to read this and understand whom these social welfare schemes are meant for! All of a sudden the rich women are conscious of state’s exchequer, turning the pages of economics books and analyzing taxes!
ಮೇಡಂ, ನಿಮ್ಮ ಪ್ರತಿಕ್ರಿಯೆಯನ್ನು ಲೇಖಕರಿಗೆ ತಲುಪಿಸಲಾಗಿದೆ. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು