ನಮ್ ಜನ | ಮರಗಳನ್ನು ಮಕ್ಕಳೆನ್ನುವ ‘ಕಾಯ್’ ನಾಗೇಶ್

Date:

'ಮೊನ್ನೆ ದಿನ ಹಿಂಗೆ ಒಂದ್ ಮರ ಹತ್ದೆ. ಸೊಂಟಕ್ಕೆ ಹಗ್ಗ ಕಟ್ಟಕಂಡಿದೀನಿ, ಕಾಯಿ ಕೆಡಕ್ತಿದೀನಿ, ಹಂಗೇ ಮ್ಯಾಕ್ ನೋಡ್ದೆ, ಕುರುಂಬಳೆ ಒಣಗಿತ್ತು, ಕೀಳನ ಅಂತ ಕೈ ಹಾಕ್ದೆ ನೋಡಿ, ಗುಂಯ್ ಅಂತ ಎದ್ದುಬುಡ್ತು ಜೇನು. ಜೇನು ಹುಟ್ಟಿರದು ಕಾಣಲಿಲ್ಲ, ಎಳದುಬುಟ್ಟೆ. ಕೈ ಬಿಟ್ರೆ ಮೂವತ್ತಡಿ ಕೆಳಿಕ್ಕೆ...'

ಬೆಳಗಿನ ಜಾವ ಐದೂವರೆ. ಮಂಜು ಮುಸುಕಿತ್ತು. ಬೆಳಕು ಬರಲು ತವಕಿಸುತ್ತಿತ್ತು. ಸೂರ್ಯನಿಗಿನ್ನೂ ಸಮಯವಿತ್ತು. ಆ ನೀರವ ಮೌನದಲ್ಲಿ ಬೀದಿಯಿಂದ ಸೈಕಲ್ ಪೆಡಲ್‌ನ ಜೀಕು ಸದ್ದು ಸಂಗೀತದಂತೆ ಕೇಳಿಬರುತ್ತಿತ್ತು. ಬೆಳಗಿನ ವ್ಯಾಯಾಮದ ಜನರ ಹೆಜ್ಜೆ ಸದ್ದಿಗಿಂತ ಭಿನ್ನವಾಗಿದ್ದ ಶಬ್ದ. ಬಗ್ಗಿ ಬೀದಿಯನ್ನೊಮ್ಮೆ ನೋಡಿದರೆ, ಪೆಡಲ್ ಮೇಲೆ ಶಕ್ತಿ ಬಿಟ್ಟು ಸೈಕಲ್ ತುಳಿಯುತ್ತಿದ್ದ ‘ತರುಣ’ ಕಣ್ಣಿಗೆ ಬಿದ್ದರು. ಸುಮಾರು ಅರವತ್ತರಿಂದ ಎಪ್ಪತ್ತರತನಕ ವಯಸ್ಸಾಗಿರುವ ವ್ಯಕ್ತಿ.

ಆ ಸೈಕಲ್ ಬೆಳಗಿನ ವ್ಯಾಯಾಮಕ್ಕೆ ಬಳಸುವ ಆಧುನಿಕ ಸೈಕಲ್ ಅಲ್ಲ. ಆಧುನಿಕ ಕಾಲದ ನಗರ ಪ್ರದೇಶದ ವಾಕಿಂಗ್-ಜಾಗಿಂಗ್ ಮಂದಿ ಬಳಸುವ ಟ್ರ್ಯಾಕ್ ಸೂಟು, ಬ್ರಾಂಡೆಡ್ ಬಟ್ಟೆಯನ್ನೇನೂ ಅವರು ತೊಟ್ಟಿರಲಿಲ್ಲ. ಕಾಲಿನಲ್ಲಿ ಯಾವ ನೈಕಿ ಶೂಸ್ ಕೂಡ ಇರಲಿಲ್ಲ. ಬದಲಿಗೆ, ಎಪ್ಪತ್ತರ ದಶಕದ ಅಟ್ಲಾಸ್ ಸೈಕಲ್. ಬಳಕೆಯಿಂದಾಗಿ ಬಳಲಿ ಅಸ್ಥಿಪಂಜರದಂತಾಗಿತ್ತು. ಅದನ್ನು ತುಳಿಯುತ್ತಿದ್ದ ವ್ಯಕ್ತಿಯೋ, ಸೈಕಲ್ಲಿಗೇ ಸೆಡ್ಡು ಹೊಡೆಯುವಂತೆ, ಅಸ್ಥಿಪಂಜರಕ್ಕೇ ಅಂಗಿ ತೊಡಿಸಿದಂತೆ, ಸೊರಗಿ ಸುಸ್ತಾಗಿದ್ದರು.

ಹಳೇ ಸೈಕಲ್ಲು, ಅದರ ಆ ಕಡೆ-ಈ ಕಡೆ ಹ್ಯಾಂಡಲ್‌ಗೆ ಎರಡು ದೊಡ್ಡ ಪ್ಲಾಸ್ಟಿಕ್ ಚೀಲಗಳು, ಅದರೊಳಗೆ ಒಂದು ದಪ್ಪನೆ ಹಗ್ಗ ಸುತ್ತಿಟ್ಟಿದ್ದಾರೆ. ಇನ್ನೊಂದರಲ್ಲಿ ಮಚ್ಚು, ಕುಡುಗೋಲು, ಸುತ್ತಿಗೆ, ಬ್ಯಾಗು ಇತ್ಯಾದಿ. ಸೈಕಲ್ ಸೀಟಿನ ಮುಂದಿನ ರಾಡಿಗೆ ಗಡಾರಿಯನ್ನು (ಕಾಯಿ ಸುಲಿಯುವ ಸಾಧನ) ಸಣ್ಣ ಹಗ್ಗದಿಂದ ಬಿಗಿಯಾಗಿ ಕಟ್ಟಲಾಗಿದೆ. ಸೈಕಲ್ ತುಳಿಯುತ್ತ, ಸುಸ್ತಾದಾಗ ಸೈಕಲ್ ತಳ್ಳಿಕೊಂಡು ನಡೆಯುತ್ತ, ತಲೆ ಎತ್ತಿ ಆಕಾಶದತ್ತ ನೋಡುತ್ತ, ಏನನ್ನೋ ಹುಡುಕುತ್ತಿದ್ದಾರೆ. ಬೆಳೆದುನಿಂತ ಮರಗಳತ್ತ ಮನಸ್ಸನ್ನು ನೆಟ್ಟಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಈ ಲೇಖನ ಓದಿದ್ದೀರಾ?: ನಮ್ ಜನ | ಜಗದೊಳಗಿದ್ದೂ ಜಲಗಾರರಾಗದ ಪೋತಲಪ್ಪ ದಂಪತಿ

ನಮಸ್ಕಾರ ಎಂದೆ. ತಕ್ಷಣ, “ನಿಮ್ಮವು ಯಾವ ಮರ ಇಲ್ವಲ್ರ…?” ಎಂದರು. ಅವರು ತೆಂಗಿನಮರ ಹತ್ತುವ, ಕಾಯಿ, ಕುರುಂಬಳೆ, ಯಡೆಮಟ್ಟೆ, ಗರಿ ಕೀಳುವ, ಕಿತ್ತ ತೆಂಗಿನಕಾಯಿಗಳನ್ನು ಸುಲಿದು ಕೊಡುವ, ಆ ಕೆಲಸಕ್ಕಾಗಿ ಕೇವಲ 250 ರೂಪಾಯಿ ಕೂಲಿಯಾಗಿ ಪಡೆಯುವ ಕೆಲಸದವರು. ಹೆಸರು ನಾಗೇಶ್. ಅವರ ಕೆಲಸ ಬೆಳಗ್ಗೆ ಆರರಿಂದ ಹನ್ನೆರಡು ಗಂಟೆವರೆಗೆ, ನಾಯಂಡಹಳ್ಳಿಯಿಂದ ಕತ್ತರಿಗುಪ್ಪೆವರೆಗೆ ಅವರ ಭೂಪ್ರದೇಶ. ಆ ಪ್ರದೇಶದಲ್ಲಿರುವ ಮನೆಗಳ ಮುಂದಿನ ತೆಂಗಿನಮರಗಳ ಯೋಗಕ್ಷೇಮ ನೋಡಿಕೊಳ್ಳುವ ತೆಂಗಿನಮರಗಳ ತಜ್ಞರು.

ನಾಗೇಶ್, ಕನಕಪುರ ತಾಲೂಕಿನ ಅರಳಾಳುಸಂದ್ರದವರು. ನಲವತ್ತು ವರ್ಷಗಳ ಹಿಂದೆ ಅಪ್ಪ-ಅಮ್ಮ, ಒಡಹುಟ್ಟಿದ ಇಬ್ಬರು ಅಣ್ಣಂದಿರು ಇಲ್ಲವಾದಾಗ, ಅನಾಥರಾದಾಗ ಊರು ಬಿಟ್ಟು ಬೆಂಗಳೂರಿಗೆ ಬಂದವರು. ಊರಿನಲ್ಲಿದ್ದಾಗ ಶಾಲೆಯ ಮೆಟ್ಟಿಲು ಹತ್ತದವರು, ಈಚಲುಮರ ಹತ್ತುವುದನ್ನು ಕಲಿತಿದ್ದರು. ಸೇಂದಿ ಬಿಚ್ಚುವ ಕೆಲಸ ಮಾಡುತ್ತಿದ್ದರು. ಸರಕಾರ ಸೇಂದಿ ನಿಷೇಧಿಸಿದಾಗ ಕೆಲಸವಿಲ್ಲದೆ ಕಂಗಾಲಾದರು. ವಿಧಿಯಿಲ್ಲದೆ ನಗರದತ್ತ ಮುಖ ಮಾಡಿದರು. ಅವರು ಬಂದ ಕಾಲಕ್ಕೆ ಬೆಂಗಳೂರು ನಗರದಲ್ಲಿ ಮನೆಗಳ ಕಾಂಪೌಂಡಿನಲ್ಲಿ ಒಂದೋ ಎರಡೋ ತೆಂಗಿನಮರಗಳು ಇದ್ದೇ ಇರುತ್ತಿದ್ದವು. ನಾಗೇಶ್ ಮರಗಳನ್ನು ನಂಬಿದರು, ಮರಗಳಿದ್ದ ಮನೆ ಮಾಲೀಕರು ನಾಗೇಶ್‌ಗಾಗಿ ಕಾಯುತ್ತಿದ್ದರು. ಈ ಮರ ಹತ್ತಿ ಇಳಿಯುವಾಟದಲ್ಲಿ ನಲವತ್ತು ವರ್ಷಗಳು ಉರುಳಿಹೋಗಿದ್ದೇ ಗೊತ್ತಾಗಲಿಲ್ಲ.

“ಊರಲ್ಲಿ ಮನೆ, ಜಮೀನೇನೂ ಇರಲಿಲ್ವಾ?” ಎಂದೆ. “ಏಯ್… ಏನಿತ್ತಲ್ಲಿ! ನಾಡಂಚಿನ ಮುರುಕ್ಲು ಮನೆಯಿತ್ತು, ಅದ್ನ ಅಣ್ಣನ ಮಗನಿಗೆ ಬುಟ್ಟು, ಅವುನಾದ್ರು ಕೈ-ಕಾಲು ಚಾಚ್ಕಂಡ್ ಮನಿಕಳ್ಳಿ ಅಂತೇಳಿ ಬೆಂಗಳೂರಿಗೆ ಬಂದೆ…” ಎಂದರು. ಅರಳಾಳುಸಂದ್ರ ಬೆಂಗಳೂರಿನಿಂದ 60 ಕಿಲೋಮೀಟರ್ ದೂರದಲ್ಲಿದೆ. ಅಂದರೆ, ಅಡಿಗಡಿಗೂ ಲಕ್ಷಗಟ್ಟಲೆ ಬೆಲೆಬಾಳುತ್ತದೆ. ಅರ್ಧ ಅಡಿ ಜಾಗಕ್ಕೆ ಕೊಲೆ ಮಾಡುವ ಅಣ್ಣ-ತಮ್ಮಂದಿರಿರುವ ಕಾಲದಲ್ಲಿ, ಅಣ್ಣನ ಮಗನಿಗೆ ಮನೆ ಬಿಟ್ಟು ಬಂದ ನಾಗೇಶ್, ಧರ್ಮರಾಯನಂತೆ ಕಾಣತೊಡಗಿದರು.

ನಾಗೇಶ್
ನಾಗೇಶ್ ಅವರೊಂದಿಗೆ ಲೇಖಕರು

“ಎಲ್ರೂ ನಿಮ್ಮಷ್ಟು ಉದಾರಿಗಳಾದ್ರೆ…” ಎಂಬ ನನ್ನ ಮಾತನ್ನು ಅರ್ಧಕ್ಕೇ ತುಂಡರಿಸಿ, “ಮೊನ್ನೆ ದಿನ ಒಂದ್ ಮನೆಗೋಗಿದ್ದೆ, ಅದು ನಾನು ಮೂವತ್ತು ವರ್ಷಗಳಿಂದ ಹೋಗ್ತಿರ ಮನೆ. ಮೊದ್ಲು ಅಲ್ಲಿಗೆ ಕೆಲಸಕ್ಕೆ ಹೋದಾಗ, ಆ ಮನೆಯ ಎರಡು ಸಣ್ ಮಕ್ಕಳು ನನ್ ಸುತ್ತಲೇ ಆಟ ಆಡತಿರವು. ಈಗ ಅವುಕ್ಕೇ ಎರಡೆರಡು ಮಕ್ಕಳಾಗವೆ, ಅಮೆರಿಕದಲ್ಲವೆ. ಆ ಮನೇಲಿ ಗಂಡ-ಹೆಂಡ್ತಿ ಬಿಟ್ಟರೆ ಮತ್ಯಾರೂ ಇಲ್ಲ. ಬೇಕಾದೊಷ್ಟಿದೆ. ಎರಡು ಮರ ಅವೆ ಮಕ್ಕಳಿದ್ದಂಗೆ, ಎಂಥ ಫಲ ಕೊಡ್ತವೆ ಅಂದ್ರೆ… ಮಕ್ಕಳೂ ಕೊಡ್ತವೆ, ಮರಗಳೂ ಕೊಡ್ತವೆ. ಇದ್ದೋರ್ಗೆ ಎಲ್ಲಾ, ಏನ್ಮಾಡ್ತಿರ? ಆದ್ರೆ ಆ ಪುಣ್ಯಾತ್ಮ ಅವತ್ಗೂ ಇನ್ನೂರೂಪಾಯೆ, ಇವತ್ಗೂ ಇನ್ನೂರೂಪಾಯೆ. ಸ್ವಾಮೆ ಅಂದ್ರೆ, ‘ಆ ಯಡೆಮಟ್ಟೆ ತಗಂಡೋಗೋ’ ಅಂತರೆ. ತಗಂಡೋದ್ರೆ ನನ್ ಹೆಂಡ್ತಿ ಅದ್ರಲ್ಲೆ ಬಡಿತಳೆ. ಈಗ ಅವ್ಳೂ ಗ್ಯಾಸ್ ಒಲೆ ಇಟ್ಕಂಡವಳೆ. ಯಡೆಮಟ್ಟೆ ಮುಟ್ಟೋರೇ ಇಲ್ಲ…” ಎಂದು ತೆಂಗಿನಮರದೊಂದಿಗಿನ ತಮ್ಮ ಪಯಣವನ್ನು ಬಿಚ್ಚಿಟ್ಟರು.

“ದಿನಕ್ಕೆ ಎರಡು ಮರನಾದ್ರೂ ಸಿಕ್ತದಾ?” ಎಂದೆ. “ಎರಡು ಮರಕ್ಕೆ ಮೋಸಿಲ್ಲ. ನಾನು-ನನ್ನ ಹೆಂಡ್ತಿ, ಮಗನ ಊಟಕ್ಕೇನೂ ಕೊರತೆ ಇಲ್ಲ. ಆದ್ರೂ ಈಗೀಗ ಬೆಂಗಳೂರಲ್ಲಿ ಬಿಲ್ಡಿಂಗ್ಳು ಬೆಳಸಕೆ ಬೆಳದ ಮರಗಳ್ನೆ ಕಡದಾಕ್ತಿದಾರೆ. ಕಡಿಯೋದು, ಕೆಡವೋದು ಅಂದರೆ ಈ ಜನಕ್ಕೆ ಅದೇನೋ ಕುಸಿ. ಅಂಥೋರೆ ಜಾಸ್ತಿ ಆಗವರೆ. ಅವರಿಂದಾಗಿ ಅರ್ಧಕ್ಕರ್ಧ ಮರಗಳು ಇಲ್ವೇ ಇಲ್ಲ ಬುಡಿ. ಜೊತಿಗೆ ಜನ ಜಾಸ್ತಿಯಾದ್ರು, ಎಲ್ರೂಗೆ ಬೆಂಗಳೂರೇ ಬೇಕಾಯ್ತು, ಏನ್ಮಾಡೋದು…! ಅವ್ರೂ ನನ್ನಂಗೇ ಅಲ್ವುರಾ? ಅದರಲ್ಲೂ ಅದೇನೋ ಕೊರೋನ ಅಂತ ಬಂತಲ್ಲ, ಕಾಯಿಲೆ ಗೀಯಲೆ ಏನೂ ಬರಲಿಲ್ಲ. ಆದರೆ, ಕೆಲಸಕ್ಕೆ ಕರೆಯದ್ ಇರಲಿ, ಮನೆ ಹತ್ರಕ್ಕೂ ಯಾರೂ ಸೇರಿಸಲಿಲ್ಲ. ಎರಡು ವರ್ಷ ಮಣ್ಣು ತಿಂದುಬುಟ್ಟೊ. ಅವರು-ಇವರು ಬಂದು ದಿನಸಿ ಕೊಟ್ಟಿದ್ದೇ, ಬದುಕ್ತಿವೋ ಇಲ್ವೋ ಅನ್ಸಬುಟ್ಟಿತ್ತು. ಯಾವ್ದೋ ಮರದಲ್ಲಿ ಯಾವ್ದೋ ಹಕ್ಕಿ ಮರಿ ಮಾಡದಿಲ್ವಾ? ಬದಕದಿಲ್ವಾ? ಹಂಗೆ, ನಮಗೂ ಯಾರೋ ಪುಣ್ಯಾತ್ಮರು ಬಂದು ಕೊಟ್ಟರು, ನಾವು ಬದಿಕಂಡೊ,” ಎಂದು ನಿಟ್ಟುಸಿರುಬಿಟ್ಟರು.

ಮರ ಹತ್ತೋದು ಸುಲಭದ ಕೆಲಸವಲ್ಲ. ಮಳೆ ಬಿದ್ದಾಗಲಂತೂ ಕಾಲು ಜಾರಿ ಜೀವಕ್ಕೂ ಅಪಾಯ ತಂದೊಡ್ಡಬಲ್ಲ ಕೆಲಸ. ಆದರೂ, ಬದುಕಿಗಾಗಿ ಈಗಲೂ ಮರ ಹತ್ತುವ ಕಾಯಕವನ್ನು ಬಿಟ್ಟಿಲ್ಲದ ನಾಗೇಶ್, ಕಾಯಿ ಕೀಳುವ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುತ್ತಾರೆ. ಮರ ಹತ್ತಿದವರು ಮೊದಲು ಬಿಗಿಯಾಗಿರುವ ಯಡೆಮಟ್ಟೆ ಮೇಲೆ ಕೂತು, ತಳ್ಳಾದ ಕಾಯಿಗಳನ್ನು ಕೀಳುತ್ತಾರೆ. ಕಿತ್ತು ಕೆಳಕ್ಕಾಗುವಾಗ ಮರದ ಬುಡದಲ್ಲಿ ಯಾರೂ ನಿಲ್ಲದಂತೆ ಎಲ್ಲರಿಗೂ ಹೇಳಿರುತ್ತಾರೆ. ಮರದಿಂದ ಕೆಳಗಿಳಿಯುವಾಗ ಒಂದೆರಡು ಎಳನೀರನ್ನು ಕಿತ್ತು ಕೆಳಕ್ಕೆ ತರುತ್ತಾರೆ. ಮಾಲೀಕರಿಗೆ ಮೊದಲು ಎಳನೀರು ಒಡೆದು ಕೊಡುತ್ತಾರೆ. ಜಾಗ ಮಾಡಿಕೊಂಡು, ಕಾಯಿ ಸುಲಿಯುವ ಗಡಾರಿಯನ್ನು ನೆಲಕ್ಕೆ ನೆಟ್ಟು, ಕಾಯಿ ಸುಲಿಯಲಿಕ್ಕೆ ಶುರು ಮಾಡುತ್ತಾರೆ. ಕೊಬ್ಬರಿ-ಕಾಯಿಗಳನ್ನು ಬೇರೆ ಮಾಡಿ ಕೊಡುತ್ತಾರೆ. ಕಾಯಿ ಸುಲಿದ ಸಿಪ್ಪೆ, ಒಣಗಿದ ಸೋಗೆ, ಕುರುಂಬಳೆಯನ್ನೆಲ್ಲ ಅಲ್ಲಿಯೇ ಒಂದು ಕಡೆಗೆ ಜೋಡಿಸಿ ಕೂರುವಷ್ಟರಲ್ಲಿ ಎರಡ್ಮೂರು ಗಂಟೆಯಾಗಿರುತ್ತದೆ. ಮಾಲೀಕರು ಮನುಷ್ಯರಾಗಿದ್ದರೆ, ಕಾಫಿ-ತಿಂಡಿ ಕೊಡುತ್ತಾರೆ. ಇಲ್ಲದಿದ್ದರೆ ಬರೀ ಮಾತಿನಲ್ಲೇ ನಾಗೇಶರ ಕೆಲಸವನ್ನು ಹೊಗಳುತ್ತ ಹೊಟ್ಟೆ ತುಂಬಿಸುತ್ತಾರೆ.

ಈ ಲೇಖನ ಓದಿದ್ದೀರಾ?: ನಮ್ ಜನ | ಒಂಟಿ ಕಣ್ಣಿನ ಒಬ್ಬಂಟಿ ಬದುಕಿನ ಆಟೋ ಗೌಸ್ ಸಾಹೇಬ್ರು

“ವಯಸ್ಸಾಗಿದೆ… ಮರ ಹತ್ತೋದು ಕಷ್ಟ ಆಗಲ್ವಾ?” ಎಂದೆ. “ವಯಸ್ನಾಗೆ ದಿನಕ್ಕೆ ಮೂವತ್ ಮರ ಹತ್ತಿದ್ದೆ, ಈಗ ಮೂರೂ ಆಗದಿಲ್ಲ. ತೊಡೆ ನಡಗ್ತವೆ. ಕೆಲವ್ರು ಆಗ್ಲೇ, ಮರದಿಂದ ಬಿದ್ಗಿದ್ ಸತ್ತೋಗಿ ಎಲ್ ನಮ್ ತಲೆಮೇಲೆ ಬತ್ತದೆ ಅಂತ, ಇನ್ನೊಂದ್ಸಲ ನೋಡನ ಹೋಗೋ ಅಂತ ಕೆಲಸಕ್ಕೆ ಕರೀದೆಯಿರೋದು ಇದೆ. ಮೊನ್ನೆ ದಿನ ಹಿಂಗೆ ಒಂದ್ ಮರ ಹತ್ದೆ. ಸೊಂಟಕ್ಕೆ ಹಗ್ಗ ಕಟ್ಟಕಂಡಿದೀನಿ, ಕಾಯಿ ಕೆಡಕ್ತಿದೀನಿ, ಹಂಗೇ ಮ್ಯಾಕ್ ನೋಡ್ದೆ, ಕುರುಂಬಳೆ ಒಣಗಿತ್ತು, ಕೀಳನ ಅಂತ ಕೈ ಹಾಕ್ದೆ ನೋಡಿ, ಗುಂಯ್ ಅಂತ ಎದ್ದುಬುಡ್ತು ಜೇನು. ಜೇನು ಹುಟ್ಟಿರದು ಕಾಣಲಿಲ್ಲ, ಎಳದುಬುಟ್ಟೆ. ಕೈ ಬಿಟ್ರೆ ಮೂವತ್ತಡಿ ಕೆಳಿಕ್ಕೆ. ಅಲ್ಲೇ ಇದ್ರೆ ಅದೇನಾಯ್ತಿನೋ ಗೊತ್ತಿಲ್ಲ. ಶಿವಾ ಅಂತ ಕಣ್ಮುಚ್ಚಿಕೊಂಡು ಕತ್ತು ಬಗ್ಗಿಸಿಕೊಂಡು ನಾನೂ ಒಂದು ಯಡೆಮಟ್ಟೆಯಂಗಾದೆ. ಬಟ್ಟೆ ಬೇರೆ ಬಿಚ್ಚಿದ್ದೆ, ಬರಿ ಮೈನಲ್ಲಿದ್ದೆ. ಎದ್ದೋ ನೋಡಿ, ಕೈ ಮೈಗೆಲ್ಲ ಮೆತ್ತಕಂಬುಟ್ಟೊ. ನಾನು, ಮುಗೀತು ಕತೆ ಅಂದ್ಕಂಡೆ. ಮುಖ ಮಾತ್ರ ಮೇಲೆತ್ತಲಿಲ್ಲ. ಹತ್ತು ನಿಮಿಷದಲ್ಲಿ ಹೊಂಟೋದೊ. ಅಷ್ಟರಲ್ಲಿ ಮೈ ಕೈ ಎಲ್ಲ ಕಚ್ಚಾಕಿದ್ದೋ, ಉರಿ ತಡಿಯಕಾಯ್ತಿಲ್ಲ, ಅದರಲ್ಲೇ ಕೆಳಕ್ಕಿಳಿದ್ರೆ, ‘ಇದ್ಯಾಕೋ… ಏನಾಯ್ತೋ?’ ಅಂತರೆ ಯಜಮಾನ್ರು! ನಾನು ಬದುಕುದ್ನೋ ಸತ್ನೋ ಅನ್ನದೂ ಗೊತ್ತಿಲ್ಲ ಅವ್ರಿಗೆ! ಹದಿನೈದು ದಿನ ಮಲಗದೋನು ಮ್ಯಾಕ್ ಏಳ್ಳಿಲ್ಲ,” ಎಂದು ಮೌನವಾದರು.

“ಆಸ್ಪತ್ರೆ ಖರ್ಚಿಗೆ ದುಡ್ಡಿಗಿಡ್ಡು ಕೊಟ್ರ?” ಎಂದೆ. “ಅಯ್ಯೋ ನೀವು… ‘ನೋಡ್ಕಂಡು ಕೀಳಬಾರದೇನೋ, ಹೆಜ್ಜೇನು ಮನೆವಳಿಕ್ಕೆ ಬಂದಿದ್ರೆ ಏನ್ ಗತಿ! ಹೆಂಗಸ್ರು-ಮಕ್ಕಳೆಲ್ಲ ಎಲ್ಲಿಗೋಗಬೇಕಾಗಿತ್ತು?’ ಅಂತ ನನಗೇ ಬಯ್ದ್ರು. ಅವ್ರೂ ಮನುಷ್ಯರಲ್ವೇ… ಕೊನೆಗೆ ಕನಿಕರ ತೋರ್ಸಿ, ನೂರು ರೂಪಾಯಿ ಜಾಸ್ತಿ ಕೊಟ್ರು. ‘ಉಸಾರಾದ್ಮೇಲೆ ಬಂದು ಕಿತ್ಕೊಡು’ ಅಂದ್ರು,” ಎಂದು ಮರ ನೋಡಿದರು.

ನಾಗೇಶ್

“ಎಲ್ಲಾ ಇಂಥೋರೇನಾ?” ಅಂದೆ. “ಇಲ್ಲಾ ಇಲ್ಲಾ… ನಲವತ್ತು ವರ್ಷ ಈ ಬೆಂಗಳೂರಲ್ಲಿ ಬದುಕಿದೀನಿ. ಒಂದಷ್ಟು ಜನ ಅವ್ರೆ, ಅವರ ಮರಗಳ್ನ ನಾನು ಮಗಿನಂಗೆ ನೋಡ್ಕತಿನಿ, ಅವರು ನನ್ನ ಮಗನಂಗೆ ಕಾಪಾಡ್ತಾವ್ರೆ. ಎಲ್ಲೋ ಕೆಲವ್ರು ಮನೆ ಕಟ್ಟಕೆ ಮರ ಕಡ್ದು ಬಿಸಾಕ್ತರಲ್ಲ, ಹಂಗೆ ಕಡ್ಡಿ ತುಂಡ್ ಮಾಡ್ದಂಗೆ ಇಷ್ಟೇ ಕೊಡದು ಅಂತರೆ, ಅಂಥೋರೂ ಇದಾರೆ, ಇಂಥೋರೂ ಇದಾರೆ. ನನಗನ್ನಿಸೋ ಪ್ರಕಾರ, ಒಳ್ಳೇರೆ ಜಾಸ್ತಿ ಇದಾರೆ. ಇಲ್ದಿದ್ರೆ ಇಷ್ಟೊರ್ಷ ಇಲ್ಲಿ ನಾನು ಬದಕಕಾಯ್ತಿತ್ತೆ?” ಎಂದರು.

ನಲವತ್ತು ವರ್ಷಗಳ ಕಾಲ ಅದೆಷ್ಟು ಮರಗಳನ್ನು ಹತ್ತಿ, ಅದೆಷ್ಟು ಕಾಯಿ ಕಿತ್ತಿದ್ದಾರೋ ಲೆಕ್ಕವೇ ಇಲ್ಲ. ದಿನ ಬೆಳಗಾದರೆ ಆಕಾಶದೆತ್ತರದ ಮರ ಹತ್ತಿದರೂ ಇವರ ಬದುಕು ಒಂದಿಂಚೂ ಮೇಲೇರಿಲ್ಲ. ಒಂದೊಳ್ಳೆ ಬಟ್ಟೆ-ಚಪ್ಪಲಿ ಹಾಕಿಕೊಂಡಿದ್ದಿಲ್ಲ. ಸಾಮಾಜಿಕ ಸ್ಥಾನಮಾನ ಅಂದರೇನು ಅನ್ನೋದೆ ಗೊತ್ತಿಲ್ಲ. ಇಷ್ಟಾದರೂ ಮಾಡುವ ಕೆಲಸವನ್ನು ಮಾತ್ರ ಬಿಟ್ಟಿಲ್ಲ. ಕಾಯಕವೇ ಕೈಲಾಸವೆಂದು ನಂಬಿರುವ, ಮರಗಳನ್ನು ಮಕ್ಕಳಂತೆ ಕಾಣುವ, ಅದೇ ಬದುಕೆಂದು ಒಪ್ಪಿಕೊಂಡಿರುವ ನಾಗೇಶ್‌ರನ್ನು ಎಲ್ಲರೂ ‘ಕಾಯ್ ನಾಗೇಶ್’ (ತಮಿಳು ಚಿತ್ರರಂಗದ ಹೆಸರಾಂತ ಹಾಸ್ಯ ಕಲಾವಿದ ತಾಯ್ ನಾಗೇಶ್ ಅಲ್ಲ) ಎಂತಲೇ ಕರೆಯುತ್ತಾರೆ. ಅದನ್ನವರು ಪದ್ಮಭೂಷಣ ಪ್ರಶಸ್ತಿಯಂತೆ ಸ್ವೀಕರಿಸಿ, ಬೊಚ್ಚುಬಾಯಿಯಲ್ಲಿ ನಗುತ್ತಾರೆ.

ಇಂತಹವರು ಅದೆಷ್ಟು ಮಂದಿ ಇದ್ದಾರೋ ಲೆಕ್ಕವಿಲ್ಲ. ತಾನೊಬ್ಬ ಕಾರ್ಮಿಕ ಎಂಬುದೂ ಅವರಿಗೆ ಗೊತ್ತಿಲ್ಲ. ಕಾರ್ಮಿಕ ಸಂಘಟನೆಗಳು, ಇಲಾಖೆ, ಸಚಿವರು, ಲೆಕ್ಕವಿಲ್ಲದಷ್ಟು ಅಧಿಕಾರಿಗಳು, ಕೋಟ್ಯಂತರ ರೂಪಾಯಿ ಅನುದಾನಗಳ ಅಂದಾಜೂ ಅವರಿಗಿಲ್ಲ. ಈ ವ್ಯವಸ್ಥೆಯೂ ಬದಲಾಗಲಿಲ್ಲ, ನಮ್ಮ ಕಾಯ್ ನಾಗೇಶ್ ಕೂಡ ಬದಲಾಗಲಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

4 COMMENTS

  1. ಶ್ರಮಜೀವಿ ಅವರು. ಇಂಥವರು ಬಹಳಷ್ಟು ಜನ ಇದಾರೆ. ನಮ್ಮೂರಲ್ಲೂ ಹೆಚ್ಚು ಕಮ್ಮಿ ಇದೇ ವಯಸ್ಸು ಅಥವಾ ಇನ್ನೂ ಹಿರಿಯರು ದಿನಾ ರಾತ್ರಿ ಒಂಭತ್ತು ಗಂಟೆ ಸುಮಾರಿಗೆ ಒಂದು ಹಳೆ ಸೈಕಲ್ ದಬ್ಬಿಕೊಂಡು ಕೋಡಬಳೆ.. ನಿಪ್ಪಟ್ಟೂ … ಅಂತ ಕೂಗಿಕೊಂಡು ಬರ್ತಾರೆ. ದಾವಣಗೆರೆಯ ಬಹಳಷ್ಟು ಬಡಾವಣೆಗಳಲ್ಲಿ ನೋಡಿದೀನಿ ಅಂತ ಹೇಳ್ತಿದ್ರು ನಿರಂಜನ್. ಸೈಕಲ್ ತುಳಿಯಲ್ಲ ಅವರು. ಬ್ಯಾಗುಗಳನ್ನ ಮಾತ್ರ ಅದಕ್ಕೆ ಸಿಗೇ ಹಾಕಿರ್ತಾರೆ. ತಾವು ದಬ್ಬಿಕೊಂಡು ನಡದೇ ಅಡ್ಡಾಡ್ತಾರೆ. ಬಹಳ ದಿನ ಆಯ್ತು ಕಂಡಿಲ್ಲ ಅಂದ್ರೆ ನಾವೂ ಸುತ್ತೋದು ಜಾಸ್ತಿ. ನಿಮ್ಮ ಲೇಖನ ಓದಿ
    ಅವರ ನೆನಪಾಯ್ತು. ಅವರನ್ನೊಮ್ಮೆ
    ಮಾತಾಡಿಸ್ಬೇಕು…. ಸುಮ್ಮನೆ ಕುಂತು ಕಾಲ ಹಾಕೋ ಎಷ್ಟೋ ಹುಡುಗರ ನಡುವೆ ಈ ವಯಸ್ಸಲ್ಲೂ ಇಷ್ಟೊಂದು ಶ್ರಮ ಪಡುವ ಈ ಹಿರಿಯರು ಅವರ ಚೈತನ್ಯ ನಿಜಕ್ಕೂ ಬೆಲೆ ಕಟ್ಟಲಾಗದ್ದು. ಇನ್ನೂ ಸ್ವತಂತ್ರವಾಗಿ ಬದುಕಬಹುದು ಎಂಬ ಧೈರ್ಯ, ಸ್ಪೂರ್ತಿ ಹುಟ್ಟುತ್ತದೆ

    • ನಿಮ್ಮ ಮಾತು ನಿಜ ಮೇಡಂ. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.

  2. ಆಪ್ತ ಬರಹ, ಕಾಯ್ ನಾಗೇಶ್ಗೆ ಭಗವಂತ ಆರೋಗ್ಯ ಆಯಸ್ಸು ಕರುಣಿಸಲಿ..

    • ನಿಮ್ಮ ಆಶಯ ಈಡೇರಲಿ. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...