(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
"ಜೀವ ಇರುವವರು ಆಡುವ ಆಟ, ಲೆಕ್ಕಾಚಾರ, ಸಣ್ಣತನ, ಹೊಟ್ಟೆಕಿಚ್ಚುಗಳಿಗಿಂತ ಜೀವವಿಲ್ಲದ ಹೆಣ ನನ್ಗಿಷ್ಟ. ಹೆಣಕ್ಕೆ ಈ ಲೋಕದ ಲೆಕ್ಕಾಚಾರವೇ ಗೊತ್ತಿಲ್ಲ. ಜೀವವಿದ್ದಾಗ ಮನುಷ್ಯ, ಜೀವವಿಲ್ಲದಾಗ ಒಂದು ವಸ್ತು. ಅದರೊಂದಿಗೆ ಎಲ್ಲಿಗೆ ಬೇಕಾದರೂ ಹೋಗಬಹುದು. ಆದರೆ ಮನುಷ್ಯರೊಂದಿಗೆ ಮಾತನಾಡುವುದು ಕಷ್ಟ..."
ಮಧ್ಯರಾತ್ರಿ ಒಂದು ಗಂಟೆ. ಮಳೆ ಸುರಿಯುತ್ತಿತ್ತು. ಆಸ್ಪತ್ರೆಯ ಶವಾಗಾರದ ಮುಂದೆ ಕೊರೆಯುವ ಚಳಿಯಲ್ಲಿ ನಡುಗುತ್ತ ನಿಂತಿದ್ದೆ. ಬಾಡಿ ಸಾಗಿಸಲು ಗಾಡಿಗಾಗಿ ಫೋನ್ ಮಾಡುತ್ತಿದ್ದೆ. ಶವಾಗಾರದ ಮುಂದೆ ಕೂತಿದ್ದ ಆಸ್ಪತ್ರೆಯ ಸಿಬ್ಬಂದಿ, “ಇವತ್ತು ಅಮಾವಾಸ್ಯೆ, ಆಂಬುಲೆನ್ಸ್ ಸಿಗಲ್ಲ,” ಎಂದು ಅಮಾವಾಸ್ಯೆಯ ಭಯ ಬಿತ್ತಿದರು. ಮುಂದುವರಿದು, “ಮದುವೆ ಆಗಿಲ್ಲ ಅಂತೀರ… ಅಮಾವಾಸ್ಯೆ ದಿನ ಸತ್ತೋಗವ್ರೆ…” ಎಂದು ಬಾಣ ಬಿಟ್ಟರು.
ಆಂಬುಲೆನ್ಸ್ ಡ್ರೈವರ್ ಫೋನ್‌ಗೆ ಸಿಕ್ಕಿ, “ಹತ್ತು ನಿಮಿಷದಲ್ಲಿ ಅಲ್ಲಿರ್ತಿನಿ,” ಅಂದರು. ಆಂಬುಲೆನ್ಸ್ ಸಿಕ್ಕಿದ್ದು ಸಿಬ್ಬಂದಿಗೆ ಗೊತ್ತಾಗಿ, ನನ್ನನ್ನು ವಿಚಿತ್ರವಾಗಿ ನೋಡಿದರು.
ಆಸ್ಪತ್ರೆಯ ಫಾರ್ಮಾಲಿಟಿಸ್ ಎಲ್ಲ ಮುಗಿದು, ಶವಾಗಾರದ ಬಳಿ ಮತ್ತೆ ಬಂದಾಗ ಬೆಳಗಿನ ಜಾವ ನಾಲ್ಕು ಗಂಟೆಯಾಗಿತ್ತು. ಇನ್ನೇನು ಐದು ನಿಮಿಷದಲ್ಲಿ ಬಾಡಿ ಸಿಗುತ್ತೆ ಎಂದುಕೊಂಡರೆ, ಆಸ್ಪತ್ರೆಯ ಸಿಬ್ಬಂದಿ ಬಾಡಿ ಮುಟ್ಟಲು, ಆಂಬುಲೆನ್ಸ್‌ಗೆ ಇಡಲು ಅಮಾವಾಸ್ಯೆಯ ಭಯಕ್ಕೆ ಬಿದ್ದು ಹಿಂಜರಿದರು. ದೂರದ ಊರಿಗೆ ಹೋಗಬೇಕೆನ್ನುವ ನನ್ನ ಚಡಪಡಿಕೆ ಹೆಚ್ಚಾಯಿತು. ಆಗ ನಮ್ಮ ಆಂಬುಲೆನ್ಸ್ ಡ್ರೈವರ್ ಮುಂದೆ ಬಂದು, “ಕೀ ಕೊಡಿ… ನಾನೇ ಬಾಡಿನ ಲೋಡ್ ಮಾಡ್ಕತೀನಿ,” ಅಂದು, ಎಲ್ಲವನ್ನೂ ಅವರೇ ಮಾಡಿ ಮುಗಿಸಿದರು.
ಹೊರಡಲು ಸಿದ್ಧವಾದಾಗ ಬೆಳಗಿನ ಜಾವ ಐದು ಗಂಟೆಯಾಗಿತ್ತು. ಮಧ್ಯರಾತ್ರಿ ಒಂದರಿಂದ ಐದು ಗಂಟೆಯವರೆಗೆ ಶವದ ಮುಂದಿದ್ದರಿಂದ ನಿರ್ಭಾವುಕನಾಗಿದ್ದೆ. ಬದುಕು ನಶ್ವರ ಎನ್ನುವ ತರ್ಕಕ್ಕೆ ಬಿದ್ದಿದ್ದೆ. ಅದೇ ಯೋಚನೆಯಲ್ಲಿ ಹೋಗಿ ಡ್ರೈವರ್ ಪಕ್ಕದಲ್ಲಿ ಕೂತೆ. “ಯಾವುದು ಎಷ್ಟೊತ್ತಿಗೆ ಆಗಬೇಕೋ ಅಷ್ಟೊತ್ತಿಗೆ ಆಗದು… ನಮ್ ಕೈಲಿ ಏನೂ ಇಲ್ಲ,” ಎಂದರು. ಸರಿ ಎನಿಸಿತು. ಸಂತ ಸಿಕ್ಕ, ಪ್ರಯಾಣ ಮುಂದುವರಿಯಿತು.
ಆತನೇ ಮುಂದುವರಿದು, “ನನ್ಗೆ ನೀವಿಷ್ಟಾದ್ರಿ… ಅಮಾವಾಸ್ಯೆ ದಿನ ಬಾಡಿ ಜೊತೆ ಯಾರೂ ಬರಲ್ಲ. ನನ್ಗೊಂದಿಷ್ಟು ದುಡ್ಡು ಜಾಸ್ತಿ ಕೊಟ್ಟು, ಅಡ್ರೆಸ್ ಕೊಟ್ಟು, ತಲುಪಿಸು ಅಂತರೆ; ಅವರು ಕಾರಲ್ಲೋ, ವಿಮಾನದಲ್ಲೋ ಹೋಯ್ತರೆ. ಹಂಗ್ ಹೋಗೋಕೆ ಇಲ್ಲಿ ಸತ್ತು ಮಲಗಿರೋ ವ್ಯಕ್ತಿಯೇ ಕಾರಣ ಅನ್ನೋದನ್ನ ಮರಿತರೆ… ಅಂಥೋರ್‍ನ ಕಂಡರೆ ನನ್ಗೆ ಆಗಲ್ಲ,” ಎಂದರು.
ಆಂಬುಲೆನ್ಸ್‌ನಷ್ಟೇ ವೇಗದಲ್ಲಿ ಮಾತಿನಲ್ಲಿ ಮುಂದಾಗಿದ್ದ 37 ವರ್ಷದ ಮಂಜುನಾಥ್ ಮಾತುಗಳು ಬದುಕಿನ ಬಹುದೊಡ್ಡ ಪಾಠಗಳನ್ನು ಹೇಳುತ್ತಿದ್ದವು. ಸಾಮಾನ್ಯನಿಂದ ಅಸಾಮಾನ್ಯ ಸಂಗತಿಗಳು ಸುರುಳಿಯಂತೆ ಬಿಚ್ಚಿಕೊಳ್ಳಬಹುದೆಂಬ ಭರವಸೆಯಿಂದ ಅವರ ಬದುಕಿನ ಕತೆ ಕೆದಕಿದೆ. “ಅಯ್ಯೋ… ನಮ್ ಕತೆ ಯಾಕೇಳ್ತಿರ!” ಎಂದವರು, “ಟೀ ಕುಡಿಯನ ಬನ್ನಿ,” ಎಂದು, ರಸ್ತೆ ಬದಿಯ ಪುಟ್ಟ ಪೆಟ್ಟಿ ಅಂಗಡಿ ಮುಂದೆ ಆಂಬುಲೆನ್ಸ್ ನಿಲ್ಲಿಸಿದರು.
ಟೀ ಕುಡಿದು, ಒಂದಷ್ಟು ಗುಟ್ಕಾ ಪ್ಯಾಕೇಟ್ ಜೇಬಿಗಿಳಿಸಿದರು. ಗಾಡಿ ಸ್ಟಾರ್ಟ್ ಮಾಡಿ, ಸ್ಟೇರಿಂಗ್ ಹಿಡಿದುಕೊಂಡೇ ಬಾಯಿಗೆ ಗುಟ್ಕಾ ಸುರಿದುಕೊಂಡರು. ಜಗಿದಂತೆಲ್ಲ ಬೆವರು ಬಂದು ದೇಹಕ್ಕೆ ಹೊಸ ಶಕ್ತಿ ಸಿಕ್ಕಿತು, ಆಂಬುಲೆನ್ಸ್ ವೇಗ ಹೆಚ್ಚಿತು. “ಹ್ಞೂಂ… ಹೇಳಿ ಸಾ,” ಎಂದರು. “ನಮ್ದೇನಿಲ್ಲ… ಎಲ್ಲ ನಿಮ್ದೆ,” ಎಂದೆ.
”ಸ್ಕೂಲ್-ಗೀಲ್‌ಗೆ ಹೋದೋನಲ್ಲ, ಹೋಗು ಅಂತ ಹೇಳೋರು ಯಾರೂ ಇರಲಿಲ್ಲ. ಮನೆ ಪರಿಸ್ಥಿತಿನೂ ಚೆನ್ನಾಗಿರಲಿಲ್ಲ. ಎರಡ್ನೆ ಕ್ಲಾಸಿಗೇ ಬಿಟ್ಟೆ. ಎಮ್ಮೆ ಕಾಯಕ್ಕೋಯ್ತಿದ್ದೆ. ಅವ್ ಪಾಡ್ಗವ ಮೇಯ್ತಿರವು, ನಾನೋಗಿ ಜೆಸಿಬಿ ರಿಪೇರಿ ಮಾಡತಕೋಗಿ ನಿಂತಿರತಿದ್ದೆ. ಅವರು ಕಾಸು ಕೊಟ್ಟು, ಬೀಡಿ-ಸಿಗರೇಟ್, ಕಾಫಿ-ಟೀ ತರಕ್ಳಸರು. ತಂದ್ಕೊಟ್ಟರೆ, ಸ್ಪ್ಯಾನರ್, ಸ್ಕ್ರೂ ಡ್ರೈವರ್ ಹಿಡ್ಕಳದು, ಜೆಸಿಬಿ ಮ್ಯಾಲ್ ಕುಂತ್ಕಳದು… ನನ್ಗೆ ಅಷ್ಟೇ ಕುಸಿ. ಆಮೇಲೆ ಲಾರಿ ರಿಪೇರಿಗೆ ಬಂದಾಗ ಹೆಲ್ಪರ್ ಆದೆ, ಕ್ಲೀನರ್ ಆದೆ, ಡ್ರೈವರ್‍ರೂ ಆದೆ. ಚೆನ್ನಾಗೇ ಓಡುಸ್ತಿದ್ದೆ. ಆದ್ರೆ, ಇದ್ಯಾವುದೂ ಮನಿಗ್ ಹೇಳಿರಲಿಲ್ಲ, ಅವರೂ ಕೇಳ್ಲಿಲ್ಲ,” ಎಂದ ಮಂಜುನಾಥ್, ತಮ್ಮ ಬದುಕಿನ ಹಾದಿಯನ್ನು ಬಿಚ್ಚಿಡತೊಡಗಿದರು.
ಬೆಂಗಳೂರಿನ ಸರಹದ್ದಿನಲ್ಲಿರುವ ಹುಳಿಮಾವು ಮಂಜುನಾಥರ ಊರು. ತಾತನಿಂದ ಬಂದ ಪುಟ್ಟ ಮನೆಯೇ ಅವರ ಬಹುದೊಡ್ಡ ಆಸ್ತಿ. ಅಪ್ಪ-ಅಮ್ಮ ಇಬ್ಬರೂ ಕೂಲಿ ಕೆಲಸಗಾರರು. ಇಬ್ಬರು ಮಕ್ಕಳು. ಮಂಜುನಾಥರೇ ಹಿರಿಯ ಮಗ, ತಂಗಿ ಚಿಕ್ಕವಳು. ಅಪ್ಪನಿಗೆ ಗೂರಲು, ಅಮ್ಮನ ಮನೆ ಕೆಲಸದಿಂದ ಬರುವ ಆದಾಯವೇ ಮನೆಗೆ ಆಧಾರ. ಅಮ್ಮ ಡಾಕ್ಟ್ರು ಮನೆಗೆ ಕೆಲಸಕ್ಕೆ ಹೋಗುತ್ತಿದ್ದರು. ಈ ನಡುವೆ ಅಪ್ಪ ಕಾಯಿಲೆ ಬಿದ್ದಾಗ, ಆ ಡಾಕ್ಟ್ರೇ ನೋಡಿಕೊಂಡರು. ಆದರೂ ಅಪ್ಪ ಉಳಿಯಲಿಲ್ಲ. ಆಗ ಆ ಡಾಕ್ಟ್ರೇ ಮುಂದೆ ನಿಂತು, ಮಂಜುನಾಥ್‌ಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೆಲಸ ಕೊಡಿಸಿದರು. ಮಂಜುನಾಥ್ ತಂಗಿಯನ್ನು ಮನೆಯಲ್ಲಿಟ್ಟುಕೊಂಡು ನೋಡಿಕೊಳ್ಳತೊಡಗಿದರು.
”ಫೋರ್ಟಿಸ್ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ 2000ರಲ್ಲಿ ಕೆಲಸಕ್ಕೆ ಸೇರ್‍ದೆ. ಬೆಡ್‌ಶೀಟ್ ಚೇಂಜ್ ಮಾಡೋದರಿಂದ ಹಿಡಿದು ಆಪರೇಷನ್ ಥಿಯೇಟರ್‌ನಲ್ಲಿ ಅಸಿಸ್ಟೆಂಟ್ ಆಗಿ – ಎಲ್ಲ ಕೆಲಸ ಕಲ್ತೆ. ನೈಟ್ ಡೂಟಿ ಹಾಕರು; ಪೇಷಂಟಿಗೆ ಡ್ರೆಸ್ ಚೇಂಜ್ ಮಾಡದು, ಡೆಡ್ ಬಾಡಿ ಕ್ಲೀನ್ ಮಾಡದು, ಮಾರ್ಚುರಿ ಕಾಯದು – ಎಲ್ಲ ಕೆಲ್ಸ ಮಾಡ್ತಿದ್ದೆ. ಯಾವ್ಯಾವ ಕಾಯಿಲೆಗೆ ಏನೇನು ಕೊಡ್ತರೆ ಅನ್ನೋದೆಲ್ಲ ಗೊತ್ತಾಗೋಗಿತ್ತು. ಒಂದಿನ ನೈಟ್ ಡೂಟಿ ಮಾಡ್ತಿದೀನಿ, ನಮ್ಮ ಆಸ್ಪತ್ರೆಯ ಡಾಕ್ಟ್ರು ಕುಡ್ದು ಬಿದ್ದೋಗಿ ನಮ್ ಆಸ್ಪತ್ರೆಗೇ ಬಂದ್ರು. ನಾನು, ನರ್ಸ್‌ಗೆ ‘ಟೆಟಾನಸ್, ಪೇನ್ ಕಿಲ್ಲರ್ ಜೊತೆಗೆ ಆಂಟಿಬಯೋಟಿಕ್ಸ್ ಕೊಡಿ’ ಅಂದೆ. ಡಾಕ್ಟ್ರು, ‘ಏನೋ ಇದು…! ಹಿಂಗೇ ಬಿಟ್ರೆ ನಮ್ಮನ್ನು ಮನೆಗೆ ಕಳಸ್ತಿಯ’ ಎಂದು ನಗಾಡಿದರು…”
“ಫೋರ್ಟಿಸ್ ಆಸ್ಪತ್ರೆ ವಾರ್ಡ್ ಬಾಯ್ ಆಗಿದ್ದೋರು ಆಂಬುಲೆನ್ಸ್ ಡ್ರೈವರ್ ಆಗಿದ್ದೇಗೆ?”
”ವಾರ್ಡ್ ಬಾಯ್ ಆಗಿದ್ದಾಗ ನೈಟ್ ಡೂಟಿ ಮಾಡ್ತಿದ್ನಲ್ಲ, ಆಗ ನಮ್ ಆಸ್ಪತ್ರೆ ಕಾಂಪೌಂಡಲ್ಲಿ ಯಾವಾಗ್ಲು ಎರಡು-ಮೂರು ಆಂಬುಲೆನ್ಸ್ ರೆಡಿಯಾಗಿ ನಿಂತರವು. ಕೆಲ್ಸ ಇಲ್ದಾಗ ಅವರತ್ರ ಹೋಗಿ ಮಾತಾಡ್ತ ಕೂತ್ಕತಿದ್ದೆ. ಮಾತಾಡ್ತ-ಮಾತಾಡ್ತ ನನ್ಗೆ ಡ್ರೈವಿಂಗ್ ಬರುತ್ತೆ ಅಂದೆ. ಒಂದಿನ ಆಂಬುಲೆನ್ಸ್ ಓನರ್‌ಗೆ ಅರ್ಜೆಂಟ್ ಕೆಲ್ಸ ಬಿತ್ತು. ನಾನೂ ಫ್ರೀ ಇದ್ದೆ. ಒಂದು ಬಾಡಿ ಡೆಲಿವರಿ ಮಾಡ್ತಿಯ ಅಂದ್ರು. ಹೂಂ ಅಂದೆ. ರಾತ್ರಿ ಎರಡು ಗಂಟೆಗೆ ಹೋಗಿ ಐದು ಗಂಟೆಗೆ ಬಂದು ಗಾಡಿ ನಿಲ್ಸಿ ಕೀ ಕೊಟ್ಟೆ. ಐನೂರು ರೂಪಾಯಿ ಕೊಟ್ರು. ಮೂರ್ ಅವರ್ಗೆ ಐನೂರು ರೂಪಾಯ್ ಸಿಕ್ತಲ್ಲ, ಇದ್ನೇ ಯಾಕ್ ಮಾಡಬಾರ್ದು ಅನ್ನಸ್ತು. ಅಲ್ಲಿಗೆ ವಾರ್ಡ್ ಬಾಯ್ ಆಗಿ 10 ವರ್ಷ ಆಗಿತ್ತು, ಸಾಕು ಅನ್ನಸ್ತು. ಆ ಆಂಬುಲೆನ್ಸ್ ಓನರ್‌ಗೂ ನನ್ನಂಥ ಡ್ರೈವರ್ ಬೇಕಾಗಿತ್ತು. ಅವತ್ತಿಂದ ಇದೇ ಕೆಲಸ. 13 ವರ್ಷ ಆಯ್ತು. ಅದೆಷ್ಟು ಹೆಣಗಳನ್ನು ಸಾಗ್ಸಿದೀನೋ ಲೆಕ್ಕವಿಲ್ಲ…”
ಮಂಜುನಾಥ್‌ಗೆ ಕುಡಿಯುವ ಚಟವಿಲ್ಲ. ಬೀಡಿ-ಸಿಗರೇಟ್ ಮುಟ್ಟಲ್ಲ. ಶಾಲೆಯ ಮೆಟ್ಟಿಲು ಹತ್ತಿಲ್ಲ. ಸ್ನೇಹಿತರಿಲ್ಲ. ಸುಮ್ಮನೆ ಕೂರುವ ಜಾಯಮಾನವಲ್ಲ. ಮನೆಯಲ್ಲಿ ಬಡತನವಿದ್ದುದರಿಂದ ಎಲ್ಲಿದ್ದೀಯ, ಏನು ಮಾಡ್ತಿದ್ದೀಯ ಎಂದು ಯಾರೂ ಕೇಳ್ತಿರಲಿಲ್ಲ. ಹೀಗಾಗಿ, ಕೈಗೆ ಏನು ಸಿಗುತ್ತೋ ಆ ಕೆಲಸ ಕಲೀತಾ ಹೋದ್ರು. ದುಡಿಮೆಯೇ ದಾರಿ ತೋರಿತು.
ಮಂಜುನಾಥರಿಗೆ ಮನುಷ್ಯರಿಗಿಂತ ಹೆಣಗಳ ಬಗ್ಗೆ ಹೆಚ್ಚು ಚಿಂತೆ. ಸಾಮಾನ್ಯವಾಗಿ ಎಲ್ಲಾದ್ರು ಗಲಾಟೆ, ಗಲಭೆ, ಅಪಘಾತವಾದರೆ, ಹೆಣ ಬಿದ್ದರೆ ತಕ್ಷಣ ಆಂಬುಲೆನ್ಸ್ ತಂದು ನಿಲ್ಲಿಸುತ್ತಾರೆ. ಆ ಬಾಡಿ ತಲುಪಬೇಕಾದ ಸ್ಥಳಕ್ಕೆ ತಲುಪಿಸಿ, ಅದಕ್ಕೊಂದು ಸದ್ಗತಿ ಕಾಣಿಸಿ ತಣ್ಣಗೆ ವಾಪಸಾಗುತ್ತಾರೆ. ರೋಗಿಗಳು, ರೋದನ, ಆಸ್ಪತ್ರೆ, ಹೆಣಗಳನ್ನು ನೋಡಿ-ನೋಡಿ ಸೂಕ್ಷ್ಮ ಸಂವೇದನೆ ಕಳೆದುಕೊಂಡಿದ್ದಾರೆ.
ಸಾವು-ನೋವು ಸಹಜ ಎನ್ನುವ ಮಂಜುಗೂ ಮದುವೆಯಾಗಿದೆ. ಒಬ್ಬಳು ಮಗಳಿದ್ದಾಳೆ. ಮಗಳನ್ನು ಬಿಜಿಎಸ್ ಸ್ಕೂಲಿನಲ್ಲಿ ಓದಿಸುತ್ತಿದ್ದಾರೆ. ಅಮ್ಮನನ್ನು ಜೊತೆಯಲ್ಲಿಯೇ ಇಟ್ಟುಕೊಂಡಿದ್ದಾರೆ. ತಂಗಿಯನ್ನು ನೋಡಲು ಆಗಾಗ್ಗೆ ಹೋಗಿಬರುತ್ತಾರೆ.
“ಈ ಆಂಬುಲೆನ್ಸ್ ಡ್ರೈವರ್ ಕೆಲಸ ಖುಷಿ ಕೊಟ್ಟಿದೆಯೇ?”
“ಸತ್ತೋರ್ ಸಂಕಟ ಕೇಳೋರು ಕಮ್ಮಿ. ಖುಷಿಯಾಗಿರೋರ ಜೊತೆ ಕುಣಿಯದ್ಕಿಂತ ಸಂಕಟದಲ್ಲಿರೋರ ಸಂಗ ಸೇರಿ ನೋವಂಚ್ಕಳದು ನನ್ಗಿಷ್ಟ. ಆಂಬುಲೆನ್ಸ್ ಹತ್ತೋರು ಯಾರೂ ಖುಷಿಯಾಗಿರಲ್ಲ. ದುಃಖ, ದುಡ್ಡು ಹೊಂದಿಸುವ ಒದ್ದಾಟದಲ್ಲಿರ್ತರೆ. ನೋವು, ಸಂಕಟದಿಂದ ನರಳ್ತಿರ್ತರೆ. ಅವರ ಜೊತೆ ಇದ್ದೂ ಇದ್ದು ಅವರಂಗೇ ಆಗೋಗಿದಿನಿ. ಜೀವ ಇರುವವರು ಆಡುವ ಆಟ, ಲೆಕ್ಕಾಚಾರ, ಸಣ್ಣತನ, ಹೊಟ್ಟೆಕಿಚ್ಚುಗಳಿಗಿಂತ ಜೀವವಿಲ್ಲದ ಹೆಣ ನನ್ಗಿಷ್ಟ. ಹೆಣಕ್ಕೆ ಈ ಲೋಕದ ಲೆಕ್ಕಾಚಾರವೇ ಗೊತ್ತಿಲ್ಲ. ಜೀವವಿದ್ದಾಗ ಮನುಷ್ಯ, ಜೀವವಿಲ್ಲದಾಗ ಒಂದು ವಸ್ತು. ಅದರೊಂದಿಗೆ ಎಲ್ಲಿಗೆ ಬೇಕಾದರೂ ಹೋಗಬಹುದು. ಆದರೆ ಮನುಷ್ಯರೊಂದಿಗೆ ಮಾತನಾಡುವುದು ಕಷ್ಟ. ಸ್ವಲ್ಪ ಸಮಯದಲ್ಲೇ ಹೊಟ್ಟೆಯೊಳಗಿನ ಹೊಲಸು ಹೊರಬಂದು ವಾಕರಿಕೆ ಹುಟ್ಟಿಸುತ್ತದೆ…”
“…ಬಾಡಿ ಇಟ್ಕಂಡ್ ಗಾಡಿ ಹತ್ತದ್ರೆ, ಎಲ್ಲಿಗ್ ಬೇಕಾದ್ರು ಹೋಯ್ತಿನಿ. ಈ ಹದಿಮೂರು ವರ್ಷದಲ್ಲಿ ಇಡೀ ಇಂಡಿಯಾ ಸುತ್ತಾಡಿದೀನಿ. ಎಲ್ಲಿಗೇ ಹೋಗಿ, ಆಂಬುಲೆನ್ಸ್ ಡ್ರೈವರ್ ಅಂದ್ರೆ, ಎಲ್ರೂ ದಾರಿ ಬಿಡ್ತರೆ. ಯಾವ್ದೆ ತೊಂದರೆ ಆದ್ರೂ ಬಂದ್ ಹೆಲ್ಪ್ ಮಾಡ್ತರೆ. ಇಡೀ ಸೌತ್ ಇಂಡಿಯಾದ ಆಂಬುಲೆನ್ಸ್ ಡ್ರೈವರ್‌ಗಳ ನಂಬರ್ ನನ್ನತ್ರ ಐತೆ. ನಮ್ಮಮ್ಮ ಹೊಸೂರುನವ್ರು. ಮನೆ ಭಾಷೆ ತಮಿಳು. ಬೀದಿ ಭಾಷೆ ಕನ್ನಡ-ತೆಲುಗು. ಆಸ್ಪತ್ರೆ ಎಲ್ಲ ಭಾಷೆಗಳ್ನೂ ಕಲಸ್ತು. ಎಲ್ ಬುಟ್ರು ಬದುಕ್ತಿನಿ…”
“ಸ್ವಂತಕ್ಕೊಂದು ಗಾಡಿ ಮಾಡ್ಕಳೋದಲ್ವ?”
“ಕಷ್ಟ ಐತೆ… ನಮ್ಮಂಥೋರಗಲ್ಲ. ಆಸೆನೂ ಇಟ್ಕಬಾರದು. ಯಜಮಾನ್ರು ನನ್ನ್ಯಾಕ್ ಇಟ್ಕಂಡವ್ರೆ ಅಂದ್ರೆ, ಅವರಿಗೆ ಒಂದೇ ಒಂದ್ ತೊಂದರೆ ಕೊಟ್ಟಿಲ್ಲ; ರಿಪೇರಿಯಿಂದ ಹಿಡ್ದು ಎಲ್ಲಾನು ನಾನೇ ಮಾಡ್ಕಂಬುಡ್ತಿನಿ. ನನ್ ಗಾಡಿ ಹತ್ತೋರ್‍ಗು ಅಷ್ಟೇ, ತೊಂದ್ರೆ ಕೊಟ್ಟಿಲ್ಲ. ಅವರಾಗೇ ಹೆಚ್ಗೆ ಕೊಟ್ರೆ ಈಸ್ಕತಿನಿ, ಇಲ್ವಾ ಸುಮ್ಕಿರ್ತಿನಿ. ಈ ಗಾಡಿ ಕಂಡಿಷನ್ನಾಗಿದೆ, ಎಂಟ್ ಲಕ್ಷ ಹೇಳ್ತಾವ್ರೆ. ಆಂಬುಲೆನ್ಸ್ ಗಾಡಿ ಅಂದ್ರೆ ಎಲ್ಲ ಅಪ್ಟುಡೇಟ್ ಆಗಿರಬೇಕು. ಎಫ್‌ಸಿ ಮಾಡ್ಸದೊಂದೇ ಕಷ್ಟದ ಕೆಲ್ಸ. ಒಳ್ಳೆ ಆದಾಯ ಐತೆ. ವಾರಕ್ಕೆರಡು ಟ್ರಿಪ್ ಸಿಕ್ಕಿದ್ರು ಸಾಕು, ಸಾಲ ತೀರಿಸಬಹುದು. ಆದ್ರೆ ಬೆಂಗಳೂರಲ್ಲಿ ಆಂಬುಲೆನ್ಸ್ ಡ್ರೈವರ್‌ಗಳ್ದೆ ಒಂದು ಗುಂಪೈತೆ, ಆ ಗುಂಪ್ಗೆ ಸೇರ್‍ಕಂಡ್ರೆ ಅವರೇಳಿದ್ದೇ ರೇಟು. ಇಲ್ವಾ, ಬದ್ಕದ್ ಕಷ್ಟ. ಪಾಪ… ಹೆಣ ಇಟ್ಕಂಡೋರ ಕಷ್ಟ ಕೇಳೋರಿಲ್ಲ…”
“ಕ್ಲೀನರ್, ವಾರ್ಡ್ ಬಾಯ್, ಆಂಬುಲೆನ್ಸ್ ಡ್ರೈವರ್… ಮುಂದೆ?”
”ಓದ್ದೋನ್ಗೆ ಒಂದೇ ಕೆಲ್ಸ, ಓದ್ದೆ ಇದ್ದೋನ್ಗೆ ನೂರಾರ್ ಕೆಲ್ಸ. ಯಾವ್ ಕೆಲ್ಸ ಮಾಡಕೂ ರೆಡಿ. ನಮ್ ಯಜಮಾನ ಕಣ್ಬುಟ್ರೆ, ಕಂತಲ್ಲಿ ಕಟ್ಟಕೆ ಒಪ್ಕಂಡ್ರೆ ನಾನೂ ಓನರ್ ಅನ್ನಸ್ಕಬೌದು. ಆಗಲಿಲ್ವಾ, ಅದ್ಕೂ ಬೇಜಾರಿಲ್ಲ. ನನ್ಗೆ ತಮಟೆ ಬಾರ್‍ಸಕೂ ಬತ್ತದೆ. ಹೆಣದ ಮುಂದೆ ತಮಟೆ ಬಡಿತರಲ್ಲ, ಟೈಮಿದ್ದಾಗ ಅದ್ನೂ ಮಾಡ್ತೀನಿ. ಊರಿಗೆ ದೇವ್ರು ಬಂದ್ರೆ ಅಲ್ಲೂ ಬಾರಸ್ತಿನಿ. ದೇವ್ರು – ಹೆಣ ಎರಡೂ ಒಂದೇ. ಎರಡೂ ಮಾತಾಡದಿಲ್ಲ. ಎರಡಕ್ಕೂ ಪೂಜೆ ಮಾಡ್ತರೆ. ಎರಡನ್ನೂ ಹೊತ್ಕಂಡೋಯ್ತರೆ. ಒಂದನ್ನ ಗುಂಡಿಗಾಕ್ತರೆ, ಇನ್ನೊಂದನ್ನು ಗುಡಿವಳಿಕ್ ಕೂರಸ್ತರೆ,” ಎನ್ನುವಲ್ಲಿಗೆ ಊರು ಬಂದಿತ್ತು. ಬೆಳಕು ಹರಿದಿತ್ತು. ಮಂಜುನಾಥನೊಂದಿಗಿನ ಮಾತುಕತೆಯೂ ಮುಗಿದಿತ್ತು.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ