ಹಳ್ಳಿ ದಾರಿ | ಉದ್ಯೋಗ ಖಾತರಿ ಹೋರಾಟದ ವೇಳೆ ದಿಲ್ಲಿಯಲ್ಲಿ ಕಂಡ ಎರಡು ಪ್ರಪಂಚ

Date:

"ಎನ್‌ಎಮ್‌ಎಮ್‌ಎಸ್ ಬಂದು ಮಾಡ್ರಿ… ನಮ್ಮ ತಾಟು ಖಾಲಿ ಇದೆ," ಘೋಷಣೆಯೊಂದಿಗೆ ತಾಟುಗಳನ್ನು ಬಡಿಯುತ್ತ ಅಲ್ಲೇ ಒಂದು ಸುತ್ತು ಹಾಕುವುದು ನಿತ್ಯದ ಕಾರ್ಯಕ್ರಮಗಳಲ್ಲೊಂದು. ಮನೆಯಲ್ಲಿ ಮಕ್ಕಳು ತಾಟುಗಳನ್ನು ಬಡಿಯುತ್ತಿದ್ದರೆ ತಾಯಿ ಲಗುಬಗೆಯಿಂದ ಊಟ ನೀಡಬಹುದು. ಆದರೆ ಇಲ್ಲಿ ಆಗುತ್ತಿರುವುದೇನು?

‘ಉದ್ಯೋಗ ಖಾತರಿ ಉಳಿಸಿ’ ಹೋರಾಟಕ್ಕಾಗಿ ದೆಹಲಿಗೆ ಬಂದಿರುವ ನಾವು, ಇಲ್ಲಿ ಎರಡು ದಿಲ್ಲಿಗಳನ್ನು ನೋಡುತ್ತಿದ್ದೇವೆ. ಯಮುನಾ ನದಿ ಗಡಿಯಾಗಿ ಹರಿದಿದೆ. ಒಂದು ದಡದಲ್ಲಿ ಅಭಿವೃದ್ಧಿ ಹೊಂದಿದ, ಅಭಿವೃದ್ಧಿ ಹೊಂದುತ್ತಿರುವ, ಸದಾ ಅಲಂಕೃತಗೊಳ್ಳುತ್ತಿರುವ ನವದೆಹಲಿ. ಇನ್ನೊಂದು ದಡದಲ್ಲಿ ಬಡಜನರ ಝೋಪಡಿ ಪಟ್ಟಿಗಳ, ಒತ್ತೊತ್ತಾಗಿ ಎದ್ದು ನಿಂತಿರುವ ಕಟ್ಟಡಗಳ, ಅಲ್ಲೇ ಮೂಲೆಯಲ್ಲಿ ರೊಟ್ಟಿ ಮಾಡುತ್ತಿರುವ ಜುಗ್ಗಾಗಳ, ಅದರ ಸಂದಿನಿಂದ ಹರಿಯುತ್ತಿರುವ ಹೊಲಸು ನಾರುತ್ತಿರುವ ನೀರಿನ ಹಳೆಯ ಬೀಡು. ಎರಡೂ ದಡಗಳ ಜನರನ್ನು ಪೊರೆಯುತ್ತ, ಎರಡೂ ದಡದವರು ಚೆಲ್ಲುತ್ತಿರುವ ಹೊಲಸನ್ನು ತನ್ನ ಹೊಟ್ಟೆಯೊಳಗೆ ಸೇರಿಸಿಕೊಳ್ಳುತ್ತ, ಇನ್ನು ಸಾಧ್ಯವಿಲ್ಲವೆಂದು ಹೊರ ಉಗುಳುತ್ತ ನೊರೆ ತುಂಬಿದ ನೀಲಿ ನದಿಯಾಗಿ ಹರಿಯುತ್ತಿದ್ದಾಳೆ ಯಮುನಾ. ಆ ನೊರೆ ರಾಶಿಗೆ ಆಗಾಗ್ಗೆ ಬೆಂಕಿ ಹತ್ತಿಕೊಳ್ಳುತ್ತಿರಬಹುದು.

ಅದೆಷ್ಟು ಸ್ಪಷ್ಟ ಗಡಿ ಇದು! ಎಲ್ಲೆಲ್ಲೂ ಪ್ಲಾಸ್ಟಿಕ್ ರಾಶಿಯ, ದುರ್ನಾತ ಸೂಸುವ, ನಲ್ಲಿಗಳು ಸೋರುವ, ಒಡೆದ ಪೈಪುಗಳಿಂದ ನೀರು ಚಿಮ್ಮುವ ಹಾದಿಗಳಲ್ಲಿ ಜಿಗಿಯುತ್ತ ಜಿಗಿಯುತ್ತ ಹೇಗೋ ಬಸ್ಸಲ್ಲಿ ತುರುಕಿಕೊಂಡು ಯಮುನೆಯ ಗಡಿ ದಾಡಿದರೆ… ಆಹಾ ಅದೆಂಥ ನೋಟ! ಅಭಿವೃದ್ಧಿಯ ಕನ್ನಡಿಯೇ ಇಲ್ಲಿದೆ. ಎತ್ತರೆತ್ತರ ಇಮಾರತುಗಳು, ಸ್ವಚ್ಛ ರಸ್ತೆಗಳು. ಹೂವಿನ ಪುಟ್ಟ-ಪುಟ್ಟ ಗುಡ್ಡಗಳನ್ನೇ ತಂದಿಲ್ಲಿಟ್ಟಿದ್ದಾರೆ. ಆದರೂ ಯಮುನೆಯ ಕೊಳಚೆಯ ವಾಸನೆ ನಮ್ಮ ಜೊತೆಗೇ ಬಹುದೂರದವರೆಗೆ ಬಂದು ಈ ಸೌಂದರ್ಯ ಸವಿಯುವುದಕ್ಕೂ ಬಿಡುತ್ತಿಲ್ಲ! ಯಮುನೆ… ಇದು ಯಮುನೆಯೇ?

ಯಮುನೆಯೆಂದರೆ, ಕೃಷ್ಣ ಜನಿಸಿದಾಗ ತಂದೆ ವಸುದೇವ ಬುಟ್ಟಿಯಲ್ಲಿ ಶಿಶುವನ್ನು ಎತ್ತಿಕೊಂಡು ನದಿ ದಾಟ ಹೊರಟಾಗ ಹರಿಯುವುದನ್ನು ನಿಲ್ಲಿಸಿ ಬದಿಗೆ ಸರಿದ ತೆರೆಗಳ ಯಮುನೆ!

ಗೋಪಿಕೆಯರ ಬಟ್ಟೆಗಳನ್ನೆತ್ತಿಕೊಂಡು ಮರವೇರಿದ ಕೃಷ್ಣ, “ಬಟ್ಟೆ ಕೊಡೋ…” ಎಂದು ನೀರಲ್ಲೇ ನಿಂತು ಬೇಡುವ ಗೋಪಿಕೆಯರ ಯಮುನೆ!

ಕೃಷ್ಣನ ಕೊಳಲಿನ ಕರೆಗೆ ಓಡಿಬಂದು ಮೈಮರೆತ ರಾಧೆಯ ಯಮುನೆ!

ಆ ಯಮುನೆಯ ನೆನಪಲ್ಲಿ ಮುಳುಗಿದ್ದ ನಮ್ಮನ್ನು ಬೃಂದಾವನದಂತೆ ಕಂಗೊಳಿಸುತ್ತಿರುವ ಈ ವಿಕಸಿತ ನವದೆಹಲಿ ತನ್ನತ್ತ ಸೆಳೆಯುತ್ತದೆ… ಮತ್ತೆ-ಮತ್ತೆ ಅಲಂಕೃತಗೊಳ್ಳುತ್ತಿರುವ ನವದೆಹಲಿ.

ಸುಂದರ ದೆಹಲಿಯ ಕಲ್ಲುಹಾಸುಗಳನ್ನು ಮತ್ತೆ-ಮತ್ತೆ ಎಬ್ಬಿಸಿ ಕೆಳಗೆ ಉಸುಕು ಹಾಕಿ ಮತ್ತೊಮ್ಮೆ ಕೂರಿಸುತ್ತಿದ್ದಾರೆ – ಅತ್ತ ದಡದಿಂದ ಬಂದ ಕೂಲಿಗಳು. ಸೆರಗಿಂದ ಮುಖ ಮುಚ್ಚಿಕೊಂಡೇ ಕೆಲಸ ಮಾಡುತ್ತಿದ್ದಾಳೆ ಕೂಲಿಕಾರ ಹೆಣ್ಮಗಳು. ಬೆಳಿಗ್ಗೆ ಹೊಟ್ಟೆಗೇನಾದರೂ ಹಾಕಿದ್ದಾಳೋ ಇಲ್ಲವೋ! ನಿತ್ಯ ಕೂಲಿಗಾಗಿ ಇತ್ತ ಬಂದು ಹೋಗುವ ಆ ಕಾರ್ಮಿಕರಿಗೆ ಆಚೆ ದಡದಲ್ಲಿ ಸರಿಯಾದ ಮನೆಯಿಲ್ಲ, ಊಟ-ಉಡುಗೆಯ ವ್ಯವಸ್ಥೆ ಹೇಗೋ ಗೊತ್ತಿಲ್ಲ. ಪ್ರತಿನಿತ್ಯ ಅವರನ್ನು ದಾಟುವಾಗೆಲ್ಲ, ‘ಇವರಿಗೆ ತಮ್ಮೂರಲ್ಲಿ ಉದ್ಯೋಗ ಖಾತರಿ ಕೆಲಸ ದೊರೆತಿದ್ದರೆ ಅಸ್ತಿತ್ವ ಇಲ್ಲದವರಾಗಿ, ಈ ದೆಹಲಿಯ ಕೂಲಿಯಾಳುಗಳಾಗಿ ಇಲ್ಲೇಕೆ ತುಂಬಿಕೊಳ್ಳುತ್ತಿದ್ದರು?’ ಎಂದೆನಿಸದೆ ಇರದು. ಬೆಳಗಿನಿಂದ ಸಂಜೆಯವರೆಗೆ ತಲೆ ಬಗ್ಗಿಸಿ ಕೆಲಸ ಮಾಡುವುದಂತೂ ಕಾಣುತ್ತಿದೆ. ಅಲ್ಲಲ್ಲಿ ಚಹಾ ಮಾರುವ ಗೂಡುಗಳು, ಜೊತೆಗೇ ಪ್ಲಾಸ್ಟಿಕ್ ಡಬ್ಬಗಳಲ್ಲಿ ತುಂಬಿರುವ ತಿನಿಸುಗಳು. ಬೇಕೆಂದರೆ ಬೀಡಿ, ಸಿಗರೇಟುಗಳು ಕೂಡ… ಕುಡಿದು ಬಿಸಾಕಿ, ತಿಂದು ಬಿಸಾಕಿ, ಸೇದಿ ಬಿಸಾಕಿ.

…ಸ್ವಚ್ಚ ಮಾಡಲು ಮತ್ತೆ ಅದೇ ಜನ.

ಈ ದೆಹಲಿಯಲ್ಲಿರುವುದು ಬಹುಶಃ ಎರಡೇ ತಂಡಗಳು; ಒಂದು ಮಾರುವವರದ್ದು, ಇನ್ನೊಂದು ಖರೀದಿಸುವವರದ್ದು. ಒಂದು ಬಿಸಾಕುವವರದ್ದು, ಇನ್ನೊಂದು ಕಸ ಎತ್ತುವವರದ್ದು. ಒಂದು ಹೊಲಸು ಮಾಡುವವರದ್ದು, ಇನ್ನೊಂದು ಸ್ವಚ್ಛ ಮಾಡುವವರದ್ದು. ಎರಡೂ ತಂಡಗಳು ಒಂದನ್ನೊಂದು ಸದಾ ಕೆಲಸ ನಿರತವಾಗಿಟ್ಟು ಪೊರೆಯುತ್ತಿವೆ!

ನಾವು, ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಉಳಿಸಿ’ 100 ದಿನಗಳ ಹೋರಾಟದಲ್ಲಿ ಭಾಗಿಯಾಗಲು ಕರ್ನಾಟಕದಿಂದ ಬಂದವರು ಪ್ರತಿನಿತ್ಯ ಯಮುನೆಯ ಆ ದಡದಿಂದ ಈ ದಡಕ್ಕೆ ಬರಬೇಕು. ಕಚಡಾದ ಲೋಕದಿಂದ ಸುಂದರ ಲೋಕಕ್ಕೆ. ಸುಂದರ ಸ್ವಚ್ಛ ಲೋಕದ ಮಧ್ಯದಲ್ಲಿ ಜಂತರ್ ಮಂತರ್. ಜಂತರ್ ಮಂತರ್‌ನ ಒಂದು ಚಿಕ್ಕ- ಸುಮಾರು 200 ಮೀಟರ್‌ನಷ್ಟು ಭಾಗವನ್ನು ‘ಹೋರಾಡಲೆಂದು’ ಬಿಟ್ಟಿದ್ದಾರೆ. ರಾಜಕೀಯದ ಹೋರಾಟಗಳಿರಲಿ, ನಾಗರಿಕ ಸಂಘಟನೆಗಳ ಹೋರಾಟವಿರಲಿ, ಎಲ್ಲವೂ ಇಲ್ಲಿಯೇ ಆಗಬೇಕು! ಅತ್ತ-ಇತ್ತ ಪೊಲೀಸರ ಭದ್ರ ಬ್ಯಾರಿಕೇಡುಗಳ ಕೋಟೆ. ನೂರಾರು ಪೊಲೀಸರ ಕಾವಲು. ಬೆಳಗ್ಗೆ ಹತ್ತರಿಂದ ಸಂಜೆ ನಾಲ್ಕು ಗಂಟೆವವರೆಗೆ ಮಾತ್ರ ಹೋರಾಡಲು ಪರವಾನಗಿ. ಅಷ್ಟರೊಳಗೆ ಎಷ್ಟು ಬೇಕಾದರೂ ಕೂಗಾಡಿ, ಎಷ್ಟು ಬೇಕಾದರೂ ಅರಚಾಡಿ. ಸರ್ಕಾರಕ್ಕೆ ಬಯ್ದು ವಾಪಸ್ ಹೋಗಿ.

ಮೂರೂ ಮುಕ್ಕಾಲಿಗೇ ಬರುತ್ತಾರೆ ನಿಮ್ಮನ್ನೆಬ್ಬಿಸಲು. ಪೊಲೀಸ್, ಪ್ಯಾರಾ ಮಿಲಿಟರಿ ಹಸಿರು ಪಟ್ಟೆ, ನೀಲಿ ಪಟ್ಟೆಯ ಬಂಧುಗಳು ಕೋಲು ಝಳಪಿಸುತ್ತ ಬಂದು ಒಂದು ಕ್ಷಣವೂ ನಮಗಲ್ಲಿ ನಿಲ್ಲಗೊಡದಂತೆ ಅತಿ ಅಪಮಾನಕರ ರೀತಿಯಲ್ಲಿ ಎಬ್ಬಿಸಿ ಕಳಿಸುತ್ತಾರೆ; “ಎಲ್ಲ ಪೋಸ್ಟರ್, ಬ್ಯಾನರ್ ಕಿತ್ತುಕೊಂಡು, ಕಟ್ಟಿಕೊಂಡು ಜಾಗ ಖಾಲಿ ಮಾಡಿ!”

ಅವರು ಅವಮಾನ ಮಾಡಿ ಕಳಿಸುವ ಜನರಲ್ಲಿ ಮಾಜಿ ಸೈನಿಕರೂ ಇದ್ದಾರೆ! ತಮ್ಮ ಪಿಂಚಣಿಗಾಗಿ ಹೋರಾಡುತ್ತಿದ್ದಾರೆ. ಇಂದು ನಮ್ಮನ್ನು ಓಡಿಸುವ ಇವರೂ ನಾಳೆ ಆ ಗುಂಪಿನಲ್ಲಿ ಸೇರಿಕೊಳ್ಳಬಹುದು – ಅಲ್ಲಿಯವರೆಗೆ ಹೋರಾಡುವ ಅವಕಾಶವಿದ್ದರೆ!

ನಮ್ಮದು, ‘ರಾಷ್ಟ್ರೀಯ ಉದ್ಯೋಗ ಖಾತರಿ ಉಳಿಸಿ’ ಎಂದು ಹೋರಾಟ. ಪಕ್ಕದಲ್ಲಿ ‘ಪಿಂಚಣಿ ಕೊಡಿ’ ಎಂದು ಮಾಜಿ ಸೈನಿಕರ ಹೋರಾಟ. ಎದುರಿಗೆ, ಮಾಂಸಖಂಡಗಳು ಕುಗ್ಗುತ್ತ ಕುಗ್ಗುತ್ತ ಅಂಗವಿಕಲವಾಗುವ (DMD) ಮಕ್ಕಳ ತಾಯಿ-ತಂದೆಯರ ಹೋರಾಟ; ‘ನಮಗೆ ಔಷಧ ದೊರಕಿಸಿಕೊಡಿ, ನಮ್ಮ ಮಕ್ಕಳಿಗೆ ಜೀವದಾನ ಮಾಡಿ’ ಎಂದು. ಕರುಳು ಬಿರಿಯುವ ಘೋಷಣೆಗಳು! ಅಕ್ಕಪಕ್ಕದ ಗೋಡೆಗಳು, ಪೊಲಿಸ್ ಬ್ಯಾರಿಕೇಡುಗಳಿಗೆ ಹೊಡೆದು ವಾಪಸ್ ಬರುವ ಕಿವಿಗಡಚಿಕ್ಕುವ ಘೋಷಣೆಗಳು! ಕೇಳುವವರಿಲ್ಲ. ವಿದೇಶಗಳಲ್ಲಿ ಈ ರೋಗಕ್ಕೆ ಔಷಧ ಲಭ್ಯವಿದೆಯಂತೆ. ನಮ್ಮಲ್ಲಿ ತರಿಸಲು ಸರ್ಕಾರ ತಯಾರಿಲ್ಲ.

ಈ ವರ್ಷ ಉದ್ಯೋಗ ಖಾತರಿಗೆಂದು ಸರ್ಕಾರ ಬಜೆಟ್‌ನಲ್ಲಿ ಕಡಿತ ಮಾಡಿದೆ. ಪ್ರತಿವರ್ಷವೂ ಕಡಿತ ಮಾಡುತ್ತಿದೆ. ಸ್ಮಾರ್ಟ್ ಫೋನ್‌ಗಳನ್ನು ಕಡ್ಡಾಯಗೊಳಿಸಿ (ಎನ್‌ಎಮ್‌ಎಮ್‌ಎಸ್) ಮಹಿಳಾ ಕೂಲಿಕಾರರಿಗೆ ಕೆಲಸ ಸಿಗದಂತೆ ಮಾಡಿದೆ. ಆಧಾರ್ ಅನ್ನು ಕಡ್ಡಾಯಗೊಳಿಸಿ, ಕೆಲಸಕ್ಕೆ ಹೋದವರಿಗೆ ಸಂಬಳವೂ ಸಿಗದಂತೆ ಮಾಡಿಟ್ಟಿದೆ. ಒಟ್ಟಾರೆಯಾಗಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ತನ್ನಷ್ಟಕ್ಕೆ ತಾನು ಉಸಿರುಗಟ್ಟಿ ಸಾಯುವಂತೆ ನಿಧಾನವಾಗಿ ಕತ್ತು ಹಿಸುಕಲಾಗುತ್ತಿದೆ. ಕೋಟ್ಯಂತರ ಜನಕ್ಕೆ ಉದ್ಯೋಗ ಕೊಟ್ಟು ಶಹರಕ್ಕೆ ವಲಸೆ ಹೋಗದಂತೆ ತಡೆದ ಕಾನೂನನ್ನು ಸಾಯಗೊಡಬಾರದೆಂದು ನಮ್ಮ ಹೋರಾಟ. ಪ್ರತೀ ವಾರವೂ ಒಂದೊಂದು ರಾಜ್ಯದ ಕನಿಷ್ಠ 100 ಮಂದಿ ಕೂಲಿಕಾರ್ಮಿಕರು ಬಂದು ಇಲ್ಲಿ ಕುಳಿತು ಹೋಗುತ್ತಿದ್ದಾರೆ. ಇದೀಗ ಕರ್ನಾಟಕದವರ ಪಾಳಿ. ಮೊದಲಿನ ಮೂರು ದಿನ ಉತ್ತರ ಪ್ರದೇಶದ ಸೀತಾಪುರ ಮತ್ತು ಬನಾರಸ್ ಕ್ಷೇತ್ರಗಳ ನೂರುಗಟ್ಟಲೆ ಕಾರ್ಮಿಕರು ನಮ್ಮೊಂದಿಗಿದ್ದರು. ಕಡೆಯ ದಿನಗಳಲ್ಲಿ ರಾಜಸ್ಥಾನದ ನೂರಾರು ಕೂಲಿಕಾರರು ಸೇರಿಕೊಂಡರು.

“ಎನ್‌ಎಮ್‌ಎಮ್‌ಎಸ್ ಬಂದು ಮಾಡ್ರಿ… ನಮ್ಮ ತಾಟು ಖಾಲಿ ಇದೆ,” ಘೋಷಣೆಯೊಂದಿಗೆ ತಾಟುಗಳನ್ನು ಬಡಿಯುತ್ತ ಅಲ್ಲೇ ಒಂದು ಸುತ್ತು ಹಾಕುವುದು ನಿತ್ಯದ ಕಾರ್ಯಕ್ರಮಗಳಲ್ಲೊಂದು. ಹೃದಯ ಇದ್ದರೆ ಅದು ಕರಗಿ ನೀರಾಗಬೇಕು. ಮನೆಯಲ್ಲಿ ಮಕ್ಕಳು ತಾಟುಗಳನ್ನು ಬಡಿಯುತ್ತಿದ್ದರೆ ತಾಯಿ ಲಗುಬಗೆಯಿಂದ ಊಟ ನೀಡಬಹುದು. ಆದರೆ ಇಲ್ಲಿ, ತಾಟು ಬಡಿಯುವ ಶಬ್ದ, ಜನರ ಕೂಗು ಯಾರಿಗೆ ಕೇಳಬೇಕು? ಪೊಲೀಸರ ಬ್ಯಾರಿಕೇಡಿಗೇ? ಅತ್ತಿತ್ತಲಿನ ಗೋಡೆಗಳಿಗೇ? ಪೋಲೀಸರು ಫೋಟೊ, ವಿಡಿಯೊ ಎಲ್ಲ ಮಾಡಿಕೊಳ್ತಾರೆ. ಆದರೆ, ಮೇಲ್ಗಡೆ ಕಳಿಸುವ ಬಗ್ಗೆ ನಂಬಿಕೆಯಿಲ್ಲ! ಕಳಿಸಿದ್ದರೆ, ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ, “ಜಂತರ್ ಮಂತರ್‌ನಲ್ಲಿ ಕೂಲಿಕಾರ್ಮಿಕರೇನೂ ಧರಣಿ ಕುಳಿತಿಲ್ಲ,” ಎಂದು ಸರ್ಕಾರವೇಕೆ ಉತ್ತರಿಸುತ್ತಿತ್ತು?

ಈ ಲೇಖನ ಓದಿದ್ದೀರಾ?: ಹಳ್ಳಿ ದಾರಿ | ಉದ್ಯೋಗ ಖಾತ್ರಿ; ಮೊಬೈಲ್ ಬಳಕೆ ವಿಷಯದಲ್ಲಿ ಜೂಟಾಟ ಆಡುತ್ತಿರುವ ಸರ್ಕಾರಗಳು

ಇಲ್ಲಿ ನಡೆಯುವ ಧರಣಿ ಹೋರಾಟಗಳು ದೆಹಲಿಯ ಜನರಿಗೂ ಗೊತ್ತಿಲ್ಲ. ಎಲ್ಲವನ್ನೂ ತನ್ನ ಮುಷ್ಟಿಯೊಳಗೇ ಇಟ್ಟುಕೊಳ್ಳಬಯಸುವ ಕೇಂದ್ರ ಸರ್ಕಾರ ಉದ್ಯೋಗ ಖಾತರಿಯಲ್ಲೂ ರಾಜ್ಯ ಸರ್ಕಾರ ಅಥವಾ ಪಂಚಾಯತಿಗಳ ಪಾತ್ರವನ್ನು ಸಂಪೂರ್ಣವಾಗಿ ತೊಡೆದುಹಾಕಿದೆ. ಹಾಗಾಗಿ, ಪಂಚಾಯಿತಿ, ಜಿಲ್ಲಾ ಮಟ್ಟಗಳಲ್ಲಿ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲ, ಹೋರಾಟ ಮಾಡಿದರೂ ಕೇಳುವವರಿಲ್ಲ. ‘ನಡೀರಿ ದಿಲ್ಲಿಗೇ ಹೋಗೋಣ’ ಎಂದು ಖರ್ಚಿಗೆ ಎಲ್ಲೆಡೆಯಿಂದ ದೇಣಿಗೆ ಎತ್ತಿ ಅಲ್ಲಿಯವರೆಗೆ ಹೋಗಿ ಕೂಗಿಕೊಂಡರೂ ಸುದ್ದಿಯಾಗುತ್ತಿಲ್ಲ. ಮಾಧ್ಯಮಗಳಿಗೆ ಜನಸಾಮಾನ್ಯರ ಈ ವಿಷಯಗಳು ಬೇಕಿಲ್ಲ.

“ಆಹಾರ, ಉದ್ಯೋಗ ಎಂದೆಲ್ಲ ಕ್ಷುಲ್ಲಕ ವಿಚಾರಗಳ ಬಗ್ಗೆ ತಲೆ ಕೆಡಿಸಬೇಡಿ. ನಮಗೆ ಧರ್ಮ ರಕ್ಷಣೆ ಮಾಡುವ ಬಹಳ ಮಹತ್ತರ ಕೆಲಸವಿದೆ,” ಎಂದು ಕರ್ನಾಟಕದ ಮಂತ್ರಿ ಮಹೋದಯರೊಬ್ಬರು ಹೇಳಿದ ಮಾತಿನಲ್ಲಿ ಅದೆಷ್ಟು ನಿಜಾಂಶವಿದೆ! ಜನರ ಆಹಾರ, ಉದ್ಯೋಗ, ಆರೋಗ್ಯ ಮುಖ್ಯ ವಿಷಯವಲ್ಲ. ಅವನ್ನೆಲ್ಲ ಕೊಡುತ್ತ ಹೋದರೆ ನಗರಗಳ ಬೀದಿ ಗುಡಿಸಲು, ಫುಟ್‌ಪಾತ್‌ಗಳನ್ನು ಕಿತ್ತು ಮತ್ತೆ ಜೋಡಿಸಲು ಜನ ಸಿಗುವುದಿಲ್ಲವಲ್ಲ!

ಪೋಸ್ಟ್ ಹಂಚಿಕೊಳ್ಳಿ:

ಶಾರದಾ ಗೋಪಾಲ
ಶಾರದಾ ಗೋಪಾಲ
ಸಿದ್ದಾಪುರ ತಾಲೂಕಿನ ಬಕ್ಕೆಮನೆಯವರು. ಸದ್ಯ ಧಾರವಾಡ ನಿವಾಸಿ. ಗ್ರಾಮೀಣರ ಬದುಕುಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು, ಗ್ರಾಮೀಣ ಅಭಿವೃದ್ಧಿಯ ವಾಸ್ತವ ಸಂಗತಿಗಳ ಕುರಿತು ನಿಖರವಾಗಿ ಬರೆಯಬಲ್ಲವರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೀಗೊನಿ | ಕೋಡಿ ನೋಡ್ದ… ಕೆಂಪು ಕೆಂಡವೊಂದು ಇವ್ರ ಕಡೀಕೇ ಬರ್‍ತಿತ್ತು!

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...

ಸಪ್ತಪರ್ಣಿ | ಮಕ್ಕಳನ್ನು ಬೆದರಿಸಲು ನೀವು ಹೇಳುತ್ತಿರುವ ಕಟ್ಟುಕತೆಗಳಿಂದ ಮುಂದೇನಾಗಬಹುದು?

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...

ಮೈಕ್ರೋಸ್ಕೋಪು | ಹೆಸರು ಬದಲಿಸುವ ಬಿಸಿ-ಬಿಸಿ ಚರ್ಚೆ; ಇಲ್ಲೊಂದು ಇಂಡಿಯಾ, ಅಲ್ಲೆರಡು ದುಂಬಿ

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...

ಸಾಲ್ಟ್ & ಪೆಪ್ಪರ್ | ಬನ್ನಿ, ಒಟ್ಟಿಗೆ ಊಟ ಮಾಡೋಣ…

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...