ನೀಗೊನಿ | ಕೋಡಿಗೆ ನೆನ್ಪಾತು, ‘ಈ ದಿಕ್ಕಾಗೆ ಮನ್ಸುರನ್ನ ತಿನ್ನೋ ಜನ ಐತೆ…’

Date:

ಕೊರಟಗೆರೆ ಸೀಮೆಯ ಕನ್ನಡದಲ್ಲಿ ಕೇಳಿ/ಓದಿ, ಅಪ್ರಕಟಿತ ಕಾದಂಬರಿ 'ನೀಗೊನಿ'ಯ ಪುಟಗಳು | ಕರಿವನ್ಗಲದ ಜನ ಕೋಡಿಯನ್ನು ಹೊಸ ಪ್ರಾಣಿ ಬನ್ದನ್ತೆ ನೋಡಿದರು. ಮಾಟ್ಗಾರನೇ ಇರಬಹುದೆನ್ದು ಹೆದರಿದರು. ಮೊದಲೇ ಗಾಬರಿಯಾಗಿದ್ದ ಕೋಡಿ ನಡುಗಿಹೋದ

ಭಾಗ – 3

ನಡ್ದೇ ಬಿಟ್ಟಿತ್ತು ಕಾಲ… ಕೋಡಿ – ಅಯ್ಯೋರ ರಾಸಗಳ್ನ ಕಾಯುತ್ತ, ತಪ್ಪಿಸಿಕೊನ್ಡ ಬುಳ್ಳಿ ಹುಡುಕುತ್ತಾ-ಹುಡುಕುತ್ತಾ ತಾನೂ ದಾರಿ ತಪ್ಪಿ ಕರಿವನ್ಗಲಕ್ಕೆ ಬನ್ದಿದ್ದ. ಬನ್ದಾಗ ಕರಿವನ್ಗಲದ ಜನರೆಲ್ಲ ಅವನನ್ನು ಯಾವುದೋ ಹೊಸ ಪ್ರಾಣಿ ಬನ್ದನ್ತೆ ನೋಡಿಯೇ ನೋಡಿದರು. ಮಕ ಮುಟ್ಟಿದರು. ಮೊದಲೇ ಗಾಬರಿಯಾಗಿದ್ದ ಕೋಡಿ ನಡುಗಿಹೋದ. ಊರಲ್ಲಿ ಹೊಸ ಪ್ರಾಣಿ ಬನ್ತೆನ್ದು ಹಟ್ಟಿಯ ಜನರೆಲ್ಲ ಗುಮ್ಪಾದರು. ಎಲ್ಲಿಯವನೋ ಯಾವ್ದೋ ಲೋಕ್ದನೋ ಎನ್ದು ಏನೇನೋ ಕತೆ ಕಟ್ಟಿ ತಮಗೆ ಬನ್ದನ್ಗೆಲ್ಲ ಮಾತಾಡಿಕೊನ್ಡರು. ಹಟ್ಟಿಯ ಹೀರಿಕ ಹೇಳ್ತಿದ್ದ ಕತೆಯಲ್ಲಿ ‘ಮಾಟ್ಗಾರನೊಬ್ಬ ಯೇಷ ಮರ್ಸಿ ಹಟ್ಟಿಗಳಿಗೆ ಬರುತ್ತಿದ್ದ ರೀತಿಯಲ್ಲಿ’ ಕಾಣುತ್ತಿದ್ದ ಕೋಡಿಯನ್ನು ನೋಡಿ ಆ ಮಾಟ್ಗಾರನೇ ಇರಬಹುದೆನ್ದು ಹೆದರಿದರು. ಇಲ್ಲ ನಮ್ಮನ್ನ ನೋಡಿಕೊನ್ಡು ಹೋಗಲು ಆ ಪರಮಾತ್ಮನೇ ಈ ಮಾರುವೇಷದಲ್ಲಿ ಬನ್ದಿರಬಹುದೇ ಎಮ್ಬ ಅನುಮಾನವೂ ಮೂಡಿತು. ಜನರೆಲ್ಲ ವಿವಿಧ ಬಗೆಯಲ್ಲಿ ಕೋಡಿಯನ್ನು ಮುಟ್ಟಿ-ತಟ್ಟಿ ನೋಡಿದರು. ವಿಚಿತ್ರ ಪಾಣಿಯೊನ್ದು ನಮ್ಮಟ್ಟಿಗೆ ಬನ್ದಿದೆಯೆಲ್ಲ ಎಂಬ ಸೋಜಿಗ ಎಲ್ರುಗೂ. ಕೋಡಿಗೂ ಭಯವಾಯಿತು. ತಾನು ತನ್ನೂರಲ್ಲಿ ದನಗಳನ್ನೆಲ್ಲ ಕಾಯ್ಲಿಕ್ಕೆ ಹೋಗುತ್ತಿದ್ದಾಗ ಬುಲ್ಡಜ್ಜ ಹೇಳುತ್ತಿದ್ದ ಕತೆ ನೆನಪಾಯ್ತು. ಮೂಡ್ಲು ಕಡೆಗೆ ಕೈ ಯೆತ್ತಿ ತೋರ್ಸಿ, “ನೋಡು ಕೂಸೂ… ಈ ದಿಕ್ಕಾಗೆ ಮನ್ಸುರನ್ನ ತಿನ್ನೋ ಜನ ಐತೆ. ಅಪ್ಪಿತಪ್ಪಿಯೂ ಆ ಕಡಿಕೆ ಹೋದ್ಯಾ…!” ಎಮ್ಬುದು ಕಣ್ಣು ಮುನ್ದೆ ಬನ್ದನ್ಗಾಯ್ತು. ತೊಳ್ಳೆಯೆಲ್ಲ ನಡುಗಿತು. ತನ್ನವರಾರೂ ಇಲ್ದೆ ಒಳಗೊಳಗೆ ರೋಧಿಸತೊಡಗಿದ. ತನ್ಗೆ ಈ ಗತಿ ಒದ್ಗಿಸಿದ ತನ್ನ ಪಿರುತಿ ಬುಳ್ಳಿ ಗ್ಯಾಪಕಕ್ಕೆ ಬನ್ದು ಮತ್ತಷ್ಟು ಕಣ್ಣೀರಾದ.

'ನೀಗೊನಿ' ಮೊದಲ ಸಂಚಿಕೆ | 'ನೀಗೊನಿ' ಅನ್ತ ಯಾರಾದ್ರೂ ಊರಿಗೆ ಹೆಸ್ರು ಕಟ್ತಾರಾ?

ಬುಳ್ಳಿ ಕೋಡಿ ಪಿರುತಿಯಿನ್ದ ಸಾಕಿದ್ದ ಹಸು. ಊರೋರೆಲ್ಲ ಹಸಿನ ಹಾಲು, ಬೆಣ್ಣೆ, ತುಪ್ಪ ತಿನ್ನೋದನ್ನಾ ನೋಡಿ, ತಾನು ತಿನ್ಬೇಕು ಎಮ್ಬ ಆಸೆ ಉನ್ಟಾಗಿ ಅಯ್ಯೋರ ಹತ್ರ ಹೋಗಿ ಕೇಳಿದ್ದ. “ಲೇ ಕೋಡಿ… ನೀವು ಮಾದಿಗ್ರು ಕಣ್ಲಾ. ನೀವೆಲ್ಲ ಹಾಲು, ತುಪ್ಪ ತಿನ್ಬಾರದು. ತಿನ್ದರೆ ನಾಳಿಕ್ಕೆ ಹಟ್ಟಿ ಹಸನೆಲ್ಲ ಕಡ್ದು ಪಾಲು ಹಾಕ್ಬಿಡ್ತೀರಿ. ಹೋಗೋಗೋ… ಹಟ್ಯಾಗೆ ಏನ್ ಕೆಲ್ಸ ಐತೆ ಮಾಡೋಗಾ…” ಎನ್ದಾಗ ಕೋಡಿಗೆ ತಣ್ಣೀರೆರೆಚಿದಾಗಾಯ್ತು. ಆದ್ರೂ ಹಠಬಿಡದೆ ಅಯ್ಯೋರ ಹತ್ರ ಹಸನ ಪಾಲಿಗೆ ತಗೊನ್ಡು ಸಾಕಿ, ಅದು ಕರು ಈಯ್ದಾಗ ಸನ್ತಸ ಪಟ್ಟು ಸಾಕಿದ್ದ. ಕರುಗೆ ಹಾಲು ಕುಡಿಯಕ್ಕಾಗದ ಬೇನೆ ಬನ್ದಾಗ ತಾನೇ ಹಸುವಿನ ಕೆಚ್ಚಲಲ್ಲಿ ಹಾಲು ಕರೆದು ಗೊಟ್ದಲ್ಲಿ ಕುಡಿಸಿದ. ಅದಕ್ಕೆ ಪಿರುತಿಯಿನ್ದ ‘ಬುಳ್ಳಿ’ ಅಂತ ಹೆಸರಿಟ್ಟು ಕರ್ದ. ಅವನು ಬುಳ್ಳಿ ಅನ್ದ್ರೆ ಸಾಕು, ಆ ಕರು ಬಾಲ ಎತ್ತಿ ಚನ್ಗನೆ ಹಾರಿ ಅವನತ್ರ ಬನ್ದು, ಅವ್ನನ್ನು ನಾಲ್ಗೆನ್ದ ನೆಕ್ಕುತ್ತಿತ್ತು. ಅಷ್ಟು ಮುದ್ದಿನ ಕರು ದೊಡ್ಡದಾಗಿಬಿಟ್ಟಿತು. ಅದಿಲ್ದೆ ಅವ್ನು ಬದುಕಲಾರದಷ್ಟು ಹಚ್ಕೊನ್ಡುಬಿಟ್ಟಿದ್ದ. ಬೆಟ್ಟಕ್ಕೆ ಹೋದಾಗ ಯಾವಗ್ಲೂ ಅದರ ಹಿನ್ದೆನೇ ಸುತ್ತುತ್ತಿದ್ದ. ಅವ್ನ ಬುಳ್ಳಿಯ ಬಾಳ್ತನ ನೋಡಿ, “ಅದು ಕಳ್ಳುಬಳ್ಳಿ ಸಮ್ಬನ್ದ ಕಣ್ರೋ. ಅವ್ರಮ್ಮನೇ ಬುಳ್ಳಿಯಾಗಿ ಹುಟ್ಟಿದಾಳೆ,” ಅನ್ತ ಮಾತಾಡ್ಕೊಳ್ತ ಇದ್ರು ಜನ್ರು. ಕೊಟ್ಗೆಲಿ ಬುಳ್ಳಿ ಜತೇಲಿ ಮಲುಗ್ತಾ ರಾತ್ರಿ ಕಳೆಯೋನು. ವತ್ತಾರನೇ ಎದ್ದಾಕ್ಷಣ ಕಸ ಎತ್ತಿ ತಿಪ್ಪೆಗೆ ಹಾಕಿ ಬನ್ದ ದನ್ಗಳನ್ನೆಲ್ಲ ಹೊಡ್ಕೊನ್ಡು ಕಟ್ಟೆ ಹತ್ರ ಕರ್ಕನ್ಡಬನ್ದು ಪಸನ್ದಾಗಿ ತೊಳೆದು ಸುದ್ಧ ಮಾಡೋನು, ಬುಳ್ಳಿಯನ್ನನ್ತೂ ತೆನ್ಗಿನ್ಮಟ್ಟೆಯಿನ್ದ ಉಜ್ಜಿ-ಉಜ್ಜಿ ರೋಸ್ ತಗ್ದು ಬೆಳ್ಗ ಮಾಡೋನು. ಮೊದ್ಲೆ ಬೆಳ್ಗಿದ್ದ ಬುಳ್ಳಿ ಮತ್ತಷ್ಟು ಬೆಳ್ಗಾಗಿ ರನ್ಗೊಳ್ಸದು. ನನ್ತ್ರ ಮನ್ಗೋಗಿ ಉನ್ಡಿ ಪಿಳ್ಳನ್ಗೋವಿ ತಗೊನ್ಡು, ಬೆಟ್ಟಕ್ಕೆ ದನ್ಗಳ ಹೊಡ್ಕೊನ್ಡು ಹೋಗೋದು. ಯಿನ್ಗೆ ದಿವ್ಸಾನೂ ನಡೀತಿತ್ತು. ಅವತ್ತು ಅದೇನ್ ಆಯ್ತಪ್ಪ. ಆ ಬುಳ್ಳಿ ತಪ್ಪಿಸಿಕೊನ್ಡಿತ್ತೋ ಇಲ್ಲಾ ಇವ್ನೇ ತಪ್ಪಿಸಿಕೊನ್ಡೋ… ಅನ್ತೂ ತಪ್ಪುಸ್ಕನ್ಡ್ರು ಇಬ್ರುವೇ. ಬುಳ್ಳಿ ಎತ್ತ ಹೋಯ್ತೋ? ಬುಳ್ಳಿಗಾಗಿ ಆ ವನಾನ್ತ್ರನ ದಾಟಿ ಕರಿವನ್ಗಲಕ್ಕೆ ಬನ್ದುಬಿಟ್ಟಿದ್ದ ಕೋಡಿ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಭಾಗ – 4

ಕರಿವನ್ಗಲಕ್ಕೆ ಬನ್ದುಬಿಟ್ಟಿದ್ದ ಕೋಡಿ ನೀಗೊನಿಯ ಏಕೈಕ ಮಾದಿಗನಾಗಿದ್ದ. ಅವನೊಬ್ಬನೇ ಈ ನೀಗೊನಿಗೆ ಮಾದಿಗ. ಅವನೊಬ್ಬನೇ ಈ ನೀಗೊನಿಗೆ ಮಾದಿಗ ಯನ್ಗಾದ ಅನ್ತ ಯಾರ್ಗೂ ಗೊತ್ತಿಲ್ಲ. ಅವ್ನನ್ನ ಮಾದ್ಗ ಅನ್ತ ಕರ್ದ ಅಯ್ಯಾರಿಗೇನಾದ್ರೂ ಗೊತೈತೋ ಏನೋ! ಎಲ್ಲೂ ಆ ಗುಟ್ಟ ಹೇಳಿರ್ಲಿಲ್ಲ. ಆದ್ರೆ, ಹಸುವನ್ನು ಪಾಲ್ಗೆ ಮೇಸ್ತಿನಿ ಅನ್ದಾಗ ಅಯ್ಯಾರು, “ನೀನು ಮಾದ್ಗ ಕಣ್ಲಾ…” ಅನ್ದ ಮಾತು ಕೋಡಿಗೆ ಯಾವಾಗ್ಲೂ ಕೊರಿತಿತ್ತು. “ಈ ಊರ್ಲಿ ಯಾರೂ ಮಾದಿಗ್ರು ಇಲ್ಲ, ಅದೆನ್ಗೆ ನಾನು ಮಾತ್ರ ಮಾದಿಗ ಆಗ್ತಿನಿ, ನಾನು ಇವ್ರಿಗೆ ಎಲ್ಲೋ ಸಿಕಿದ್ರು, ಅದು ಮಾದಿಗ ಅನ್ತ ಯನ್ಗೆ ಅನ್ಕೋಬಿಟ್ರು?” ಅನ್ನೊದು ಕೋಡಿಗೆ ಕೊರಿತಾನೇ ಇತ್ತು. ಪರಿಹಾರನೂ ಸಿಕ್ಕಿರ್ಲಿಲ್ಲ. ಇದೇ ಅಯ್ಯಾರು ಒಂದಿನ, “ಲೇ ಕೋಡಿ… ನೀನು ಯಾವೂರು, ಯಾವ್ದೇಶ ಅನ್ತಾನೇ ಗೊತ್ತಿಲ್ಲ ಕಣಾ. ನಾನು ತೀತಾಕ್ಕೆ ಬುಲ್ಡನಾ ಜತೆ ಹೋಗ್ತಿದ್ದಾಗ ಹೊನ್ಗೆ ಮರ್ದ ಸಾಲಲ್ಲಿ ಅಳ್ತಾ ಮಲಗಿದ್ದ ಕೂಸು ಕಣ್ಲಾ. ಅನಾಥವಾಗಿದ್ದ ನಿನ್ನ ನಾನೇ ಈ ಬುಲ್ಡನಿಗೆ, ‘ಈ ಕೂಸ್ನಾ ಎತ್ಕಳೋ’ ಎನ್ದು ನಮ್ಮೂರಿಗೆ ಕರೆತನ್ದಿವಿ. ನಿನ್ನ ಬುಲ್ಡ ಸಾಕಷ್ಟು ಜೋಪಾನ್ವ ಮಾಡ್ದಾ ಬಿಡು. ‘ಕೋಡಿ’ ಅನ್ತ ಕರ್ದಿವಿ. ಅದೇ ಉಳ್ಕನ್ಬುಡ್ತು. ಯನ್ಗೂ ಜಬರದಸ್ತಾಗಿದ್ದಿ, ನನ್ನ ಮನೆಗೊಬ್ಬ ಆಳು ಬೇಕಿತ್ತು. ಅನ್ಗಾಗಿ ನಮ್ಮನೆಗೆ ಇಟ್ಕನ್ಡೇ,” ಯನ್ದು ಯೋಳಿದ್ರು. ಅದ್ಯಾವಾ ತಾಯಿ ಹೆತ್ಲೋ, ಯಾವ್ಜಾತಿನೋ, ಅನ್ತೂ ಇಲ್ಲಿ ಬನ್ದು ಮಾದಿಗನಾಗಿಬಿಟ್ಟಿದ್ದ ಕೋಡಿ.

ಈ ಆಡಿಯೊ ಸಂದರ್ಶನ ಕೇಳಿದ್ದೀರಾ?: ಮಾತೇ ಕತೆ – ಲಲಿತಾ ಸಿದ್ದಬಸವಯ್ಯ ಸಂದರ್ಶನ | 'ಲೋಕದ ಲೆಕ್ಕದಲ್ಲಿ ಕೊಲೆಯಾದರೂ ಕತೆಯಾಗಿ ಉಳಿದುಕೊಂಡ ಜಿಲ್ಲಾಧಿಕಾರಿ!'

ಹಾಗಾದ್ರೆ ಕೋಡಿಯಿನ್ದೇ ಮಾದ್ಗ ಅನ್ನೋ ಜಾತಿ ಈ ನೀಗೊನಿಗೆ ಚಾಲ್ತಿಗೆ ಬನ್ದಿರಬೌದ. ಊಹೂಂ… ಈ ಕೋಡಿಗೂ ಮೊದ್ಲಿಗೆ ನೀಗೊನಿಯಲ್ಲಿ ಒಬ್ಬ ಮಾದ್ಗ ಇದ್ನನ್ತೆ. ಅವ್ನೆ ಮಾದಿಗ್ರೂ ಮೂಲ್ಪುರಸ ಏನೋ ಇರಬೌದು. ಅವನೆಸ್ರು ಬೋಡಯ್ಯ ಅಮ್ತಾ. ಆ ಬೋಡಯ್ಯ ಎಲ್ಲಿಯವ್ನೋ ಏನೋ. ಅವನ್ದು ಗುಟ್ಟಾದ ಕತೆ. ಹೆಚ್ಚು ಚಾಲ್ತಿನೂ ಇಲ್ಲ. ಹಾಗನ್ತ ಅದು ಪೂರಾ ಕಳ್ದುಹೋಗಿಲ್ಲ. ಯಾವ್ದೋ ದೂರ್ದ ದೇಶ್ದಿನ್ದ ಒನ್ದು ಗುಮ್ಪು ಬನ್ದಿತನ್ತೆ. ಅದ್ರಲ್ಲಿ ಈ ಬೋಡಯ್ಯನ್ದೂ ಒನ್ದು. ಮುನ್ದೆ ಇನ್ಯಾಕೆ ಹೋಗೋದು ಅಮ್ತಾ ಈ ಊರಾಗೆ ತಳವೊನ್ದಿಗ್ರಾದ್ರನ್ತೆ. ಮೊದ್ಮೊದ್ಲು ಈ ಊರಿನ ನಡವಳಿ ಬೋಡಯ್ಯನ ಪಿಳ್ಳೆ ಪಿರ್ಕಕ್ಕೆ ಗೊತ್ತಾಗ್ತಿರಲಿಲ್ಲ. ಬತ್ತಾ-ಬತ್ತಾ ಆ ಊರಿಗೆ ವನ್ದಕಬಿಟ್ರು. ಚಿಕ್ಕಬೋಡಯ್ಯ, ದೊಡ್ಹನ್ಮನ್ತ, ಚಿಕ್ವೀರಮ್ಮ ಅಮ್ಬೋ ಮಕ್ಕಳನ್ನಾ ಹೆತ್ತು ಬೋಡಯ್ಯನ ಹೆಣ್ತಿ ಶಿವ ಅನ್ದಿದ್ಲು. ಮಕ್ಕಳನ್ನೂ ಸಾಕ್ತಾ, ಊರಿನ ಚಾಕ್ರಿ ಮಾಡ್ತಾ ಕತೆ ಹಾಕ್ತಿದ್ದ ಬೋಡಯ್ಯ. ದೊಡ್ಹನ್ಮನ್ತ, ಚಿಕ್ವೀರಮ್ಮ ಚಿಕ್ಕ ಮಕ್ಕಳು ಇರಕ್ಕೆ ಗುಡ್ಲು ಇರ್ಲಿಲ್ಲ. ಅಗಾ ಆ ಅಳ್ಳಿಮರ ಇದ್ಯಲ್ಲ, ಆ ಜಾಗ್ದಾಗೆ ಆ ಗಿಡ ಹಾಕಿದ್ದೇ ಅವ್ರು. ಅಲ್ಲೇ ರಾತ್ರಿ ಇರೋರು. ಬೆಳಿಗೆ ಎದ್ದು ಊರ ಚಾಕರಿ ಮಾಡ್ಕೊನ್ಡು ಅವರಿವರ ಮನೇಲಿ ಕೊಟ್ಟ ತನ್ಗಳು ಗಿನ್ಗಳ್ಳು ತಿನ್ಕನ್ಡು ಕತೆ ಆಕ್ತಾ ಇದ್ರು. ಜೋರು ಮಳೆ, ಜೋರುಮಳೆ ಬರ್ಲಿ; ಬಿಸ್ಲು, ಬಿಸ್ಲು ಇರ್ಲಿ. ಯಾನೇ ಬನ್ದ್ರೂ ಅವ್ರಿಗೆ ಅಳ್ಳಿಗಿಡವೇ ಸೂರಾಗಿತ್ತು. ಚಿಕ್ಕಬೋಡಯ್ಯ ಕೈನೆರ್ಗೆ ಬನ್ದಾಗ ಬೋಡಯ್ಯ ಆ ಅಳ್ಳಿಗಿಡಕ್ಕೆ ಜೊನ್ಡು ತನ್ದು ಇಳಿಬಿಟ್ಟು ವಪ್ಪಾರ ವದ್ಸಿದ್ದ. ಸೊಲ್ಪ ಗಾಳಿಮಳೆನಾ ತಡ್ಯನ್ಗೇ ಆತು. ಅಳ್ಳಿಮರ ಬೆಳಿತಾ-ಬೆಳಿತಾ ಇವ್ರಿಗೆ ನಿರ್ವನ್ಚನೆಯಿಲ್ದೆ ಆಸ್ರಯ ನೀಡಿತ್ತು. ಇನ್ಗೇ ನಡೀತಾ ಬೋಡಯ್ಯನ್ಗೆ ವಯಸಾತ ಬನ್ತು. ದೊಡ್ಮಗ ಚಿಕ್ಕಬೋಡಯ್ಯ ಊರಿನ ಚಾಕ್ರಿಕೆಗಳನ್ನ ನಿಭಾಯಿಸುವ ಜಬಾಬ್ದಾರಿ ಹೊತ್ಕನ್ಡ.

…ಒನ್ಸಾರಿ ಏನಾತು ಅನ್ದ್ರೇ, ಅತ್ತೆಸಿತ್ತೇ ಮಳೆ….

ಮುಖ್ಯ ಚಿತ್ರ – ಸಾಂದರ್ಭಿಕ
ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ – ಈ ದಿನ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ರವಿಕುಮಾರ್ ನೀಹ
ರವಿಕುಮಾರ್ ನೀಹ
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿಯವರು. ಕನ್ನಡ ಮೇಷ್ಟ್ರು. ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ಪರಿಭಾಷೆಗಳನ್ನು ಜೋಡಿಸಿದ ಗಮನಾರ್ಹ ವಿಮರ್ಶಕ. ಇತ್ತೀಚೆಗೆ ಬಿಡುಗಡೆಯಾದ 'ಅರಸು ಕುರನ್ಗರಾಯ' ಕೃತಿ ಇವರ ಸಂಶೋಧನಾ ಆಸಕ್ತಿಯನ್ನು ಮತ್ತು ನಿಜವಾದ ನೆಲಮೂಲದ ಸಂಶೋಧನೆಗಳು ಸಾಗಬೇಕಾದ ಹಾದಿಯನ್ನು ಸಾರುವ ಅಪೂರ್ವ ದಾಖಲೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮನಸ್ಸಿನ ಕತೆಗಳು – 21 | ದೇಹದಲ್ಲಿ ಹುಳುಗಳಿವೆ ಅನ್ನುವ ಭ್ರಮೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...