(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ಹುಡ್ಗರ ವಯಸ್ಸು... ಸಿಕ್ಸಿಕ್ದ ಊರಲ್ಯೊದು, ಸುತ್ಮುತ್ತ ಹಳ್ಯಗೆ ನಾಟ್ಕ-ಗೀಟ್ಕ ಆಡುದ್ರೇ ಸರೋತ್ತಾದ್ರೂ ಹೋಗ್ಬರೋದು. ಹಣ್ಗಿಣ್ ಕದ್ಯೋದು.. ಇಂಗೆ ವಂದೇ ಎಲ್ಡೇ? ಹನ್ಮೇರಂಗ ಇಲ್ದಿದ್ರೇ ಅಯ್ಯಂಗೆ ಆ ದಿನ್ವೆಲ್ಲ ಬೇಸ್ರಿಕೆ. ಹನ್ಮೇರಂಗ ಮಾತಾಡ್ತಿದ್ರೇ ಮನೇನೇ ಮರ್ತೋಗ್ತಿತ್ತು
ಸಂಚಿಕೆ – ಏಳು
ಪಳಾರ್ ಅನ್ತ ಕಾವ್ಲುಗುಟ್ಟೆಂದ ಮಿಂಚ್ಬಂದಿದ್ನ ನೋಡಿ ಎತ್ಗುಳು ಬೆದ್ರುಬಿಟ್ವು.
“ಕೋಡಿ… ಮಳೆ ಜಾಸ್ತಿ ಆತೈತೆ. ವಸಿ ಬೇಗ್ಬೇಗ ಹೊಡಿ…”
“ಅಯ್ತಯ್ಯ…” ಎಂದ ಕೋಡಿಗೆ ಯೋಚ್ನೆಗಿಟ್ಕಂಡ್ತು. ಹ್ಯಾವ ಹಾದೇಗೆ ಹೋಗೋದು ಅನ್ತ. ಈಗಂತೂ ಈ ಕಾವ್ಲುಗುಟ್ಟೆ ತವಾಸಿ ಹೋಗಕ್ಕಾಗಲ್ಲ. ಸಂತೇನಳ್ಳಿ ತವಾಸಿ ಹೋಗೋದೇ ಸರಿ ಅನ್ನುಸ್ತು. ಸಂತೇನಳ್ಳಿ ತಟಾದ್ಮೇಲೆ, ‘ಅಯ್ಯ ಏನೇಳ್ತರೋ ಅಂಗ್ಮಾಡೋದು’ ಅನ್ತ, ಎತ್ಗುಳ್ನ ನಿಧಾನ್ವಾಗಿ ಗದ್ರುಸಿ, ಬಲ್ಗಡೆ ಎತ್ನ ಹಗ್ಗನ ಹಿಡ್ದೆಳ್ದ. ಎತ್ತು ಅಂಗೇ ಬಲುಕ್ಕೆ ತಿರುಕ್ಕಂಡ್ತು.
ಗುಂಡಿಗ್ಳ ನಡ್ವೆ ತಟಾಯ್ದು ಗಾಡಿ ನಡಿತಿತ್ತು. ಮಳೆಯೂ ನಿಲ್ತಿಲ್ಲ. ಎತ್ಗುಳ ಕಣ್ಗೆ ಹನಿ ಬೀಳ್ತನೇ ಇದ್ವು. ಒಳ್ಗೆ ಸೂಡಿ ಬೆಳುಕಿನ್ ಜೊತೆ ಕಾವನ್ನು ಕೊಡ್ತಿತ್ತು. ಆಗಾಗ್ಗೆ ಸೊಳಿ ಕಮ್ಮಿಯಾಗ್ತಿತು. ಆಚ್ಗೆ ಕಪ್ಪೆಗಳ ಟೊರ್‍ರೋ-ಟೊರ್‍ರೋ ಸಬುದ ಹಾದಿ ತೋರುಸ್ತಿತ್ತು. ಆ ಬಂಡಿಜಾಡಲ್ಲಿ ಸಣ್ಣ-ಸಣ್ಣ ಗುಂಡಿಲಿ ನೀರ್ತುಂಬಿ, ಗಾಡಿ ಆ ಕಡೆ-ಈ ಕಡೆ ವಾಲ್ತಿತ್ತು.
“ಕೋಡಿ ಕುಲ್ಮೇರ ಕುಂಬಿತವ ಇದ್ರ ಅಚ್ಚು ಸರಿ ಮಾಡ್ಸೋ. ಯಾಕಂಗೆ ಅಳ್ಳಾಡ್ತ ಇದೆ! ಕೀಲೆಣ್ಣೆ ಹಾಕಿದ್ದಾ?”
“ಹೂ ಅಯ್ಯಾ… ಇಲ್ಲೆಲ್ಲಾ ಗುಂಡಿಗಳೂ ಜಾಸ್ತಿ ಅವೆ. ಜನ ಓಡಾಡೋದು ಕಡ್ಮೆ ಅದ್ಕೆ…”
“ಊ…” ಎಂದ್ಕಂಡು ಅಯ್ಯ, ತಾನ್ಮೊದ್ಲು ಈ ಹಾದೆಗೆ ಹೋದುದ್ನ ನೆನ್ಸಕಂಡ್ರು…
ಚಿಕ್ಕೋನಿದ್ದಾಗ ದುಡ್ನಳ್ಳಿಲ್ಲಿದ್ದ ಗೆಣೆಕಾರ ಹನ್ಮೇರಂಗನ ನೋಡುಕ್ಕೆ ಹೋಗ್ತಾ ಇದ್ದುದು ಈ ಹಾದೆಗೆ. ಯೇಟೊಂದು ದೂರ ಆದ್ರೂ ನಡ್ಕಂಡೆ ಹೋಗ್ತಿದ್ನಲ್ಲ. ಅವ್ನೂ ನಾನು ಈ ಸುತ್ಮುತ್ತ ಸುತ್ತುದ್ ನೆಲ್ವೇ ಇಲ್ಲ. ದೂರ್ದೂರ್ಗೆ ನಡ್ದೇ ಹೋಗ್ತಿದ್ವಿ. ಹನ್ಮೇರಂಗ ಮಪ್ಪುರಜ್ಜನ ಒಬ್ನೆ ಮಗ. ನಂಗಿಂತ ಎತ್ರುಕ್ಕೆ ಕಪ್ಪುಗಿದ್ದ ಗಟ್ಟಿ ಹುಡ್ಗ. ಅವನ್ಗೆ ನಾನಂದ್ರೇ ಪ್ರಾಣ. ಯೇಟೋತ್ತೇ ಆಗ್ಲಿ, ಯಾರಾತ್ರಾದ್ರೂ ಹೇಳಿ ಕಳುಸುದ್ರೇ ದಡದಡಾನೇ ಓಡ್ಬರೋನು. ಮಪ್ಪುರಜ್ಜ ನಮ್ಮನ್ಗೆ ಸರ್ತೆ ಮ್ಯಾಲೇ ಮಡ್ಕೆ, ಕುಡ್ಕೆ ಕೊಡ್ತಿದ್ದ. ಅವ್ನ ಹೆಸ್ರು ಏನೋ ಮರ್ತೆ ಹೋಗೈತೆ. ಅವ್ನ ಬಾಯಿ ಎತ್ಗುಳ್ಗೆ ಮಪ್ಪರ್ದಾಗ ಯಂಗೆ ಕಾಣ್ತಿತ್ತೋ ಅಂಗೇ ಯಾವಾಗ್ಲೂ ಇರೋದು – ಬೊಚ್ಚು ಬಾಯ್ತರ. ತಲ್ಗೂದ್ಲುನ ಉದ್ದಕ್ಕೆ ಬಿಟ್ಕಂಡು, ಹಿಂದ್ಕೆ ಸದಾ ಗಂಟಾಕ್ಕೊಂಡು, ಬಾಯಾಗೆ ಎಲಡ್ಕೆ ಮಡ್ಕಂಡು ಯಾವಾಗ್ಲೂ ನಗ್ತಿರ್ತಿದ್ದ. ಆ ಎಲಡ್ಕೆಯ ಕೆಂಪಾನೇ ಕೆಂಪೆಂಜ್ಲು ಕಟ್ವಾಯಿಂದ ಸೋರ್ತಾ ಇರೋದು. ಯಾವಾಗ್ ನೋಡುದ್ರು ಆವ್ಗೆ ಮನಿಯಿಂದ ಬಂದವ್ನೇನೋ ಅನ್ನಂಗೆ ಸರೀರ್ತುಂಬಾ ಮಸಿ ಮೆತ್ಕಂಡಿರೋದು. ಅವ್ನದು ಬಣ್ಣನೇ ಅಂಗೋ ಅತ್ವ ಆವ್ಗೆ ಮನಿಂದ ಅಂಗೇ ಕಾಣ್ತಿದ್ನೇನೋ.
ಆ ಮಪ್ಪುರಜ್ಜನ ಜೊತೆ ಮಡ್ಕೆ ಹೊತ್ಕಂಡು ಬತ್ತಿದ್ದ ಹನ್ಮೇರಂಗ ದೊಡ್ಡಯ್ಯಂಗೆ ಪರ್ಚಿತವಾಗಿ ಗೆಣೆಕಾರ ಆಗ್ಬಿಟ್ಟಿದ್ದ. ಹುಡ್ಗರ ವಯಸ್ಸು… ಸಿಕ್ಸಿಕ್ದ ಊರಲ್ಯೊದು, ಸುತ್ಮುತ್ತ ಹಳ್ಯಗೆ ನಾಟ್ಕ-ಗೀಟ್ಕ ಆಡುದ್ರೇ ಸರೋತ್ತಾದ್ರೂ ಹೋಗ್ಬರೋದು. ಹಣ್ಗಿಣ್ ಕದ್ಯೋದು.. ಇಂಗೆ ವಂದೇ ಎಲ್ಡೇ? ಹನ್ಮೇರಂಗ ಇಲ್ದಿದ್ರೇ ಅಯ್ಯಂಗೆ ಆ ದಿನ್ವೆಲ್ಲ ಬೇಸ್ರಿಕೆ. ಹನ್ಮೇರಂಗ ಮಾತಾಡ್ತಿದ್ರೇ ಮನೇನೇ ಮರ್ತೋಗ್ತಿತ್ತು. ಅಯ್ಯ ಚಿಕ್ಕೋರಿದ್ದಾಗ್ಲೇ ಅವ್ರವ್ವ ಜೀವ ಕಳ್ಕಂಡಿದ್ಲು. ಅಂಗಾಗಿ ಅಪ್ಪಂದೇ ಎಲ್ಲಾ. ಅಪ್ಪನತ್ರ ಏನೂ ಯೇಳ್ಕಳಕ್ಕೆ ಆಗ್ತಿರ್ಲಿಲ್ಲ. ಅಂಗಾಗಿ ಹನ್ಮೇರಂಗನೇ ಎಲ್ಲಾ ಆಗಿದ್ದ. ಹನ್ಮೇರಂಗನೇ ಅಯ್ಯಂಗೆ ಈಜು ಕಲಿಸಿದ್ದ. ಮರ ಹತ್ತೋದು, ಬೇಟೆ ಆಡೋದು, ಕಾಕ್ವಾಳ್ಕಡ್ಡಿಲಿ ಪಿಳ್ಳಂಗೋವಿ ಮಾಡೋದು, ಬೆಟ್ಟಕ್ಕೋದ್ರೇ ಕೆಂಡ್ದ ರೊಟ್ಟಿ ಸುಡೋದು, ಹೊಲ ಗೆಯ್ಯೋದು, ಕುಂಟೆ ಹೊಡ್ಯೋದು. ಆಟೇ ಅಲ್ಲ, ಹದ್ವಾಗಿ ತುಳ್ದಿರೋ ಜೇಡಿ ಮಣ್ಣಿಂದ ಚಕ್ರ ಗರಗರ ತಿರುಗ್ಸಿ, ಅದ್ರ ಮ್ಯಾಲೆ ಮಣ್ಣಾಕಿ ಎಂತೆಂಥದೋ ಆಕಾರ ಮಾಡ್ಸಿ, ಕೊನ್ಗೆ ಕುಡ್ಕೆ, ಕರ್ಮಗಿ, ಅರ್ವಿ, ಬಾನಿ, ಕರಿಬಾನಿ, ಗುಡಾಣ… ಇಂಗೇ ಏನೇನೋ ಮಾಡಿ ಅಯ್ಯಂಗೆ ಅಚ್ಚರಿ ಹುಟ್ಟುಸ್ತಿದ್ದ. ಆದ್ರೇ, ಅವ್ನು ನಡುಮಂತ್ರಕ್ಕೆ ಹೋಗಿದ್ ಅಯ್ಯಂಗೆ ಮರ್ಯಕ್ಕಾಗ್ತ ಸಂಗ್ತಿಯಾಗಿತ್ತು. ಆ ನೋವು ಇನ್ನೂ ಬಾದುಸ್ತನೇ ಇತ್ತು…
ಇದ್ಕದ್ದಂಗೆ ಎತ್ತುಗಳು ನಿನ್ತ್‌ಬಿಟ್ವು…
“ಯಾಕೋ ಕೋಡಿ ರಾಸ್ಗಳು ನಿಂತ್ಕಂಡ್ವು?”
“ಅಯ್ಯಾ… ಸಂತೇನಳ್ಳಿ ದಾಟುದ್ವಿ. ಮುಂದ್ಕೆ ಯಂಗಾಸಿ ಹೋಗೋದು? ಮೋರ್ಗಾನಹಳ್ಳಿ ತಾವಾಸಿ ಹ್ವಾದ್ರೇ ಜಯ್ಮಂಗ್ಲಿ ತುಂಬಿ ಹರಿತಿರತೆ. ಅದ್ರ ರಬ್ಸ ಕಮ್ಮಿ ಆಗೋವರ್ಗೂ ಕಾಯ್ಬೇಕು. ಅಷ್ಟೊತ್ತಿಗೆ ಬೆಳ್ಕೆ ಹರ್ದಿರ್ತದೆ. ಈ ಮಳೆ ನೋಡಿರೇ ಬಿಡಂಗೆ ಕಾಣಲ್ಲ. ಮೋರ್ಗಾನಳ್ಳಿ ಮ್ಯಾಲಾದ್ರೆ ಹತ್ರುದು ಹಾದಿ ಮೋರ್ಗಾನಳ್ಳಿ ದಾಟುದ್ರೆ ಅಲ್ಲಿಂದ ಮೂರೇ ಹೆಜ್ಜೆ. ಆದ್ರೆ, ಈ ಮಳೆಗೆ ಆಗಲ್ಲ ಅನ್ಸುತ್ತೆ…”
“ಅವ್ಳು ಅಡ್ಡಬಾಯಿ ಹಾಕ್ದಾಗಲೇ ಅಂದ್ಕಂಡೆ – ಏನಾದ್ರೂ ತೊಂದ್ರೇ ಇದ್ದುದ್ದೇ ಅಂತ…” ಮನ್ಸಲ್ಲಿ ಅಂದ್ಕಂಡ್ರು ಅಯ್ಗಳು. ಕೋಡಿ ಅವ್ರ ಮೊಕನೇ ನೋಡ್ತಿದ್ದ. ಅಯ್ಯನ ಮೊಕ್ದಲ್ಲಿ ತರಾವರಿಯಾಗಿ ಮೂಡ್ತಿದ್ದ ಗೆರೆಗಳ್ನ ಅರ್ತ ಮಾಡ್ಕಳಕ್ಕೆ ಯತ್ನಿಸುತ್ತಿದ್ದ. ಸಾಧ್ಯವಾಗ್ತಿರಲಿಲ್ಲ. ಆದ್ರೂ, ಆ ಗೆರೆಯಲ್ಲಿ ಎದ್ದು ಕಾಣ್ತಿರ ದೊಡ್ಡ ಗೆರೆ ನಾಗಮ್ಮೋರ್ದೆ ಅಂತ ಅವ್ನಿಗೆ ಗೊತ್ತಾಗಿತ್ತು. ತಾನು ಬುದ್ಧಿ ಕಂಡಾಗಿಂದ, ಅಯ್ಯ ಮದ್ವೆಯಾದಾಗ್ನಿನ್ದ ಆ ಗೆರೆನ ಎಷ್ಟು ಬಾರಿ ನೋಡಿಲ್ಲ ಮೊಕ್ದಲ್ಲಿ…
ನಿಟ್ಟುಸಿರ ಬಿಟ್ಟ ಅಯ್ಯ, “ಸರಿ… ಈ ದಾರೀಲೇ ನಡಿಯಪ್ಪ…” ಅಂದ್ರು.
ಕೋಡಿಗೆ ಸ್ವಲ್ಪ ಭಯವಾಯ್ತು. ಸಂತೇನಳ್ಳಿಯಿಂದ ಬಲಕ್ಕೆ ಹ್ವಾದ್ರೇ ಮೋರ್ಗಾನಳ್ಳಿ. ಎಡದ ಹಾದಿ ದೂರದ್ದು. ಅಷ್ಟೇ ಅಲ್ಲ… ಮಧ್ಯೆ ಯಾವ್ದೇ ಹಳ್ಳಿಗಳು ಸಿಗ್ದೇ ಇರೋ ಹಾದಿ, ಕಳ್ಳಕಾಕರು ಅಡಗಿರುವ ಹಾದಿ ಅಂತ ಮಾತು ಹಬ್ಬಿತ್ತು. ಯಾವ್ದುಕ್ಕೂ ಇರ್ಲಿ ಅಂತ ಮಸೆದು ಚೂಪಾಗಿಸಿದ್ದ ಕುಡ್ಲುನ ತನ್ನ ಸೊಂಟ್ದಲ್ಲಿ ಸಿಕ್ಸಿಕೊಂಡಿದ್ದ ಕೋಡಿ. ಅಷ್ಟೇ ಅಲ್ಲ, ಮಳೆ ಬೇರೆ ಜಾಸ್ತಿ ಅದೆ. ಈ ಸೂಡಿ ಆರೋದ್ರೇ, ಇಲ್ಲ ಮುಗ್ದೋದ್ರೇ ಏನ್ ಮಾಡೋದು ಎಂಬ ಯೋಚ್ನೇ.
“ಹೇ ನಡ್ಯಾ… ಏನ್ ಯೋಚ್ನೆ ಮಾಡ್ತ್ಯಾ!” ಅಯ್ಯನ ದನಿಯಿಂದ ಎಚ್ಚೆತ್ತ ಕೋಡಿ ಅಲಾಲಸಮುದ್ರದ ಕಡೆ ಗಾಡಿ ತಿರುಗಿಸಿದ. ಇಲ್ಲಿ ಜಯ್ಮಂಗ್ಲಿ ನದಿ ಇಲ್ದಿದ್ರೂ ಆ ನದಿಗೆ ಸೇರ್ತಿದ್ದ ಹತ್ತಾರು ಹಳ್ಳಗಳು ತುಂಬಿ ಹರಿತಿದ್ವು, ಆಳವಿರಲಿಲ್ಲ ಅಷ್ಟೇ.
ಸಂತೇನಳ್ಳಿ ಎಡ್ಗಡಿಕ್ಕೆ ಇಳ್ಜಾರ್ನಲ್ಲಿ ಮಪ್ಪುರ್ಕಂಡು ಹಗ್ಗನ ಹಿಡ್ದಿಡ್ದು ಬಿಡ್ತಿದ್ದ ಕೋಡಿ. ಎತ್ಗುಳು ಅವ್ನ ಮನ್ಸಿಗೆ ತಕ್ಕಂತೆ ಒಂದೊಂದೇ ಹೆಜ್ಜೆ ಹಾಕ್ತಿದ್ವು. ಅದ್ನ ತಟಾಯ್ದ ಮೇಲೆ ಅಲ್ಲಲ್ಲಿ ಬೆಂಕಿಜ್ವಾಲೆಗಳು, ಊದ್ರದ ಕೊಳ್ವೆಗಳ ಜೋಪ್ಡಿಗಳನ್ನು ನೋಡಿ ಅಯ್ಯ, “ಇವ್ಯಾವೋ ಕೋಡಿ ಸಂತೇನಳ್ಳಿ ಆದ್ಮೇಲೆ ಜೋಪ್ಡಿಗಳವೆ… ಯಾವೂರೋ ಇದು. ಈ ಹಾದಿಗೆ ಬಂದು ಬಾಳ ದಿನ ಆಯ್ತು. ಇವ್ರು ಇಲ್ಲಿ ಸೇರ್ಕಂಡವ್ರೇ…?”
“ಅಯ್ಯಾ… ಇವ್ರರ್ಯಾರೋ ಕಾಡ್ಗೊಲ್ರಂತೆ. ಒಂದಿಬ್ರೂ ಬಂದು ಸೇರ್ಕಂಡ್ವ್ರೇ ಅಂತ ಊರ್ನಲ್ಲಿ ಹೇಳ್ತಾ ಇದ್ರು. ಆಗ್ಲೇ ಇಟೊಂದು ಆಗ್ಬಿಟ್ಟವೇ! ಹಟ್ಟಿನೇ ಆಗೋಗ್ಬಿಟ್ಟೈತೆ. ಇವ್ರೇ ಜನ್ಗಳನ್ನ ಅಡ್ಡಹಾಕಿ ಬೆದ್ರುಸಿ, ಎಲ್ಲ ಕಿತ್ಕಂತರೆ ಅಂತಾ ಹೇಳ್ತಿದ್ರು…. ನನ್ನತ್ರ ಕುಡ್ಲು ಐತೇಳಿ, ಏನೂ ಮಾಡಕ್ಕಾಗಲ್ಲ…”
“ಅಯ್ಯೋ ಬಾರೋ… ಈ ಮಳೆಗೆ ಅವ್ರೆಲ್ಲ ನೆಂದು ತೊಪ್ಪೆ ಆಗಿರ್ತಾರೆ, ಅವ್ರೇನೂ ಬೆದ್ರುಸ್ತಾರೆ! ಆದ್ರೂ, ಇದು ಸತ್ಯನೇ ಆದ್ರೆ ಇವ್ರನ್ನೆಲ್ಲ ಎತ್ತುಸ್ಬಿಡಾನಾ ಬಿಡು…” ಅಯ್ಯನ ಮಾತಿಗೆ ಊಗುಡುತ್ತಾ ಗಾಡಿನ್ನು ನಿಧಾನ್ವಾಗಿ ನಡುಸ್ತಿದ್ದ. ಮಳೆ ಸೊಲ್ಪ ಕಡ್ಮೆ ಆತು. ತೊಟ… ತೊಟ… ತೊಟ…ತೊಟ… ಅನ್ತ ತೊಟ್ಟಿಕ್ತಿತ್ತು.
ಗಾಡಿ ನ್ಯಾರುಕ್ಕೆ ಎದುರ್ರಗೆ ಆಟು ದೂರ್ದಲ್ಲಿ ಕೆಂಪು ಕೆಂಡವೊಂದು ಆ ಕಡಿಂದ ಈ ಕಡೆಗೆ ತೂರಾಡ್ತ್ತಾ ತಮ್ಮತ್ತನೇ ಬರುತ್ತಿರೋದು ಕಾಣ್ತು. ಮೊದ್ಮೊದ್ಲು ಬೆಳ್ಕಿನುಳ ಅಂದ್ಕಂಡ. ಬರ್ತಾ ಬರ್ತಾ ಬೆಳ್ಕಿನುಳ ಅಲ್ಲ ಅಂತ ಗೊತ್ತಾಯ್ತು. ಈಟು ಕತ್ಲಾನಾಗ ಈ ಮಳೆಲ್ಲೂ ಯಾರೋ ಬರ್ತಾವ್ರಲ್ಲ ಎಂದು ಕೈಯಿಂದ ಕುಡ್ಲು ಇರೋದನ್ನು ತಡುಕಿಕೊಂಡ. ಬರಲಿ-ಬರಲಿ ಎಂದು ಕಾದ. ಕೆಂಡುದ ಕಿಡಿ ಹತ್ತಿರವಾಗತೊಡಗಿತು. ಹತ್ತಿರವಾದಂತೆ ಕಿಡಿ ಸಿಡಿದು ಮೂರಾದ್ವು. ಇದೇನು ದೆವ್ವುಗಳ ಕಿತಾಪತಿಯಾ ಎಂದು ಕೋಡಿ ಧೈರ್ಯ ಕಳೆದುಕೊಳ್ಳತೊಡಗಿದ. ಹತ್ರತ್ರ ಬರ್ತಾ ಕಿಡಿ ಒಂದು ಮೂರಾಗೋದು, ಮೂರು ಒಂದಾಗೋದು ಆಗ್ತಾನೇ ಇತ್ತು.
…ಮುಂದುವರಿಯುವುದು
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ