ಸಾಲ್ಟ್ & ಪೆಪ್ಪರ್ | ಬನ್ನಿ, ಒಟ್ಟಿಗೆ ಊಟ ಮಾಡೋಣ…

Date:

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)

ಈ ಹೊತ್ತಿನ ಆರೋಗ್ಯಕರ ಆಹಾರವೆಂದರೆ - ಧರ್ಮವನ್ನು ಬೆರೆಸದ ಆಹಾರ ಮತ್ತು ಈ ಹೊತ್ತಿನ ಆರೋಗ್ಯಕರ ಮನುಷ್ಯರೆಂದರೆ, ಧರ್ಮ-ನಂಬಿಕೆಯ ಹೆಸರಲ್ಲಿ ಊಟ, ಉಡುಪು ಮುಂತಾದ ಮೂಲಭೂತ ವಸ್ತುಗಳಲ್ಲಿ ಬೇಧಭಾವ ಮಾಡದೆ ಇರುವವರು, ಅಷ್ಟೆ...

ಊಟವೆಂದರೆ ಹೊಟ್ಟೆ ತುಂಬಿಸುವ ಕ್ರಿಯೆ ಮಾತ್ರ ಅಲ್ಲ. ಊಟದ ಸುತ್ತವೇ ನಮ್ಮ ಬದುಕಿದೆ. ನಮ್ಮ ಊಟವನ್ನು ನಾವು ಹೇಗೆ ಗಳಿಸುತ್ತೇವೆ ಎಂಬುವುದರ ಮೇಲೆ ನಮ್ಮ ವ್ಯಕ್ತಿತ್ವವಿದೆ. ಒಟ್ಟಿಗೆ ಕುಂತು ಊಟ ಮಾಡುವಾಗ ಅದರ ರುಚಿಯೂ ಹೆಚ್ಚು. ಮನುಷ್ಯನ ನಾಗರಿಕತೆಯಲ್ಲಿ ಅಡುಗೆಯೇ ಒಂದು ಅದ್ಭುತ ವಿಜ್ಞಾನ. ಆದರೆ, ವಿಜ್ಞಾನದ ಆವಿಷ್ಕಾರಗಳೆಲ್ಲ ವಿಜ್ಞಾನದ ಬಲವರ್ಧನೆಗೆ ಸಹಕಾರಿ ಆಗುವುದಕ್ಕೆ ಮೊದಲೇ ಧರ್ಮ ಅವುಗಳನ್ನೆಲ್ಲ ನುಂಗಿ ತೇಗುವುದನ್ನು ನಾವು ಮೊದಲಿಂದಲೂ ನೋಡುತ್ತಿದ್ದೇವೆ. ಈ ವಿಷಯಕ್ಕೆ ಊಟವೂ ಹೊಸತಲ್ಲ. ಮೊನ್ನೆ-ಮೊನ್ನೆಯ ಚಂದ್ರನಿಂದ ಹಿಡಿದು, ಚಂದ್ರನನ್ನು ನೋಡುತ್ತ ಸೇವಿಸುವ ತುತ್ತಿನವರೆಗೂ ಎಲ್ಲವನ್ನೂ ಧರ್ಮ ನುಂಗಿಹಾಕಿದೆ!

ಈಗ ‘ಸನಾತನ’ ಮತ್ತು ‘ಹಿಂದೂ’ ಪದಗಳ ಚರ್ಚೆ ನಡೆಯುತ್ತಿದೆ. ಸನಾತನ ಮತ್ತು ಹಿಂದೂ ಎರಡೂ ಒಂದೇ ಎಂಬುವುದನ್ನು ವ್ಯವಸ್ಥಿತವಾಗಿ ಬಿಂಬಿಸಲಾಗುತ್ತಿದೆ. ಇವುಗಳ ನಡುವಿನ ವ್ಯತ್ಯಾಸವನ್ನು ಬಹಳ ಸರಳವಾಗಿ, ಊಟದ ಮೂಲಕವೇ ಹೇಳುವುದಾದರೆ, “ನಾವೆಲ್ಲರೂ ಒಟ್ಟಿಗೆ ಊಟ ಮಾಡೋಣ,” ಅನ್ನುವುದು ಹಿಂದೂ ಮತ್ತು “ನೀನು ನನ್ನ ಜೊತೆಗೆ ಊಟ ಮಾಡಬಾರದು, ಆ ಹಕ್ಕು ನಿನಗಿಲ್ಲ, ನಾನು ಶ್ರೇಷ್ಠ, ನೀನು ಕನಿಷ್ಠ” ಅಥವಾ “ನಾನು ಊಟ ಮಾಡಿದ ಎಂಜೆಲೆಲೆಯ ಮೇಲೆ ನೀನು ಹೊರಳಾಡಿದರೆ ನಿನಗೆ ಒಳಿತಾಗುತ್ತೆ…” ಎಂದು ನಂಬಿಸಿ ಜನರ ಅಜ್ಞಾನವನ್ನು ತನ್ನ ಸ್ವಾರ್ಥಕ್ಕೆ, ಬಲವರ್ಧನೆಗೆ, ಶ್ರೇಷ್ಠತೆಯ ವ್ಯಸನಕ್ಕೆ ಬಳಸುವುದೇ ಸನಾತನ.

ಇಂತಹ ಸನಾತನದ ಈ ಸಣ್ಣತನಗಳನ್ನು ಟೀಕೆ ಮಾಡಿದವರ ಪರಂಪರೆಯೇ ನಮ್ಮಲ್ಲಿದೆ. ಇದೇ ನಿಜವಾದ ಹಿಂದೂ ತತ್ವಶಾಸ್ತ್ರ. ಆದರೆ, ಅವರನ್ನೆಲ್ಲ ಈ ಸನಾತನ – ಮತ್ತದಕ್ಕೆ ಮಿದುಳನ್ನು ಬಲಿ ಕೊಟ್ಟವರು ದ್ವೇಷಿಸಿದ್ದಾರೆ, ಹೀಯಾಳಿಸಿದ್ದಾರೆ, ಹತ್ಯೆಯನ್ನೂ ಮಾಡಿದ್ದಾರೆ. ಈಗಲೂ ಹತ್ಯೆಗೆ ಕರೆ ಕೊಡುತ್ತಿದ್ದಾರೆ. ಸನಾತನದ ಸಣ್ಣತನಗಳನ್ನು, ಅಮಾನವೀಯ ಅಂಶಗಳನ್ನು ಟೀಕೆ ಮಾಡಿದವರನ್ನು ದ್ವೇಷಿಸಿ ಕೆಂಡ ಕಾರುವವರು, ಟಿವಿ ಚಾನೆಲ್ಲುಗಳಲ್ಲಿ ಕುಂತು ಅರಚುವವರು ಇದೇ ಸನಾತನಕ್ಕೆ ಬಲಿಯಾದ ಹಿಂದೂಗಳು ಎಂಬುವುದೇ ದುರಂತ.

ಉದಾಹಣೆಗೆ… ಮೀನುಗಾರಿಕೆ ಅಥವಾ ಮೀನು ಆಹಾರ ಕರಾವಳಿ ಜನರ ಬದುಕಿನ ಒಂದು ಭಾಗ. ಮೀನುಗಾರಿಕೆಯನ್ನೇ ನಂಬಿ ಬದುಕು ಕಟ್ಟಿಕೊಂಡವರೆಷ್ಟೋ. ಇಲ್ಲಿನ ದೈವಗಳಿಗೂ ಮಾಂಸಾಹಾರಕ್ಕೂ ನಂಟಿದೆ. ಆದರೆ, “ಇಂಥ ದೇವರ ಪೂಜೆ ಮಾಡುವಾಗ ಮೀನು ಮಾಂಸ ತಿನ್ನಬಾರದು,” ಎಂಬ ಅಂಶವನ್ನು ಒಂದು ವರ್ಗ ಬೇರೆಲ್ಲ ಜನರಿಗೆ ತಲೆತಲಾಂತರದಿಂದ ದಾಟಿಸಿದೆ. ಹಿಂದಿನವರು ಇದನ್ನು ನಂಬಿದರು, ಬಿಡೋಣ. ಆದರೆ ಈಗಿನವರು? “ಮೀನು ತಿನ್ನಬಾರದು, ಅದು ಅಪವಿತ್ರ, ಅಶುದ್ಧ,” ಎಂದು ಯಾರಾದರೂ ಹೇಳಿದರೆ, ತನ್ನ ಆಹಾರವನ್ನು ಮತ್ತು ಆ ಆಹಾರವನ್ನು ನಾನು ಸೇವಿಸಿದ ದಿನ ತಾನೂ ಅಶುದ್ಧ ಎಂದು ಆತ ಭಾವಿಸುತ್ತಾನೆ ಅಂತಾಯ್ತು. ಇದಕ್ಕಿಂತ ಅವಮಾನ ಇನ್ಯಾವುದಿದೆ? ಇಂಥ ಅವಮಾನ, ಕ್ರೌರ್ಯ ಹೆಚ್ಚಿನ ಜನರಿಗೆ ಅದು ಅವಮಾನವೆಂದು ಅನಿಸುವುದೇ ಇಲ್ಲ; ಬದಲಾಗಿ, ಅದೇ ತನಗೆ ಸಿಕ್ಕ ಗೌರವ ಎಂದು ಪಾಲಿಸುತ್ತಾರೆ. ಈ ಅರಿವು ಮೂಡದ ಹೊರತು ಸನಾತನ ಮತ್ತು ಹಿಂದೂ – ಇವುಗಳ ನಡುವಿನ ವ್ಯತ್ಯಾಸವೂ ಗೊತ್ತಾಗುವುದಿಲ್ಲ.

ಹೀಗೆ, ಸನಾತನಿಗಳು ಹೇಳಿದ್ದನ್ನೇ ನಂಬಿ ಬಲಿಯಾದ ಯುವಕರ ಬಗ್ಗೆ ನಿಜವಾಗಿ ಸಿಟ್ಟಿಗಿಂತ ಕನಿಕರವೇ ಮೂಡುತ್ತಿದೆ. ಯಾಕೆಂದರೆ, ತನ್ನ ಮೇಲಾಗುವ ಇಂಥ ಆಹಾರ ದೌರ್ಜನ್ಯವೇ ಇವರಿಗೆ ಅರಿವಾಗುವುದಿಲ್ಲ. ಆದರೂ, ಇನ್ನೊಬ್ಬನ ಆಹಾರದ ಹಕ್ಕಿಗೆ ಅಡ್ದ ಬರುತ್ತಾರೆ. “ಆ ಆಚರಣೆ, ಈ ಆಚರಣೆ, ಇಷ್ಟು ಲಕ್ಷ ಆಗುತ್ತೆ…” ಎಂದು ವಾಸ್ತವದಲ್ಲಿ ತಮ್ಮ ದುಡ್ಡನ್ನು ಕೊಳ್ಳೆ ಹೊಡೆಯುವುದೇ ಅರಿವಾಗದ ಇವರು, ಮೊಘಲರು, ಬ್ರಿಟಿಷರು ದೇಶವನ್ನು ಲೂಟಿ ಮಾಡಿದರು ಎಂದು ಗೊಣಗುತ್ತ ಇತಿಹಾಸದಲ್ಲಿಯೇ ಜೀವಿಸುತ್ತಾರೆ. ಇನ್ನೊಬ್ಬನು ನಿರ್ದೇಶಿಸಿದಂತೆ ತಲೆಬಾಗಿಸಿ ನಡೆಯುವ, ಆಹಾರವನ್ನೇ ಬದಲಾಯಿಸುವ ಇವರು, ಬೇರೆಯವರನ್ನು ‘ಗುಲಾಮ’ ಎಂದು ಕರೆಯುತ್ತಾರೆ. ತನ್ನ ಮೇಲಾಗುವ ಅವಮಾನ, ದೌರ್ಜನ್ಯವನ್ನು ಗ್ರಹಿಸದವರು ತನ್ನ ಕುಟುಂಬ, ತನ್ನ ಊರು, ತನ್ನ ಭಾಷೆ, ‘ತನ್ನ ಧರ್ಮ,’ ತನ್ನ ದೇಶದ ಮೇಲಾಗುವ ದಾಳಿಗಳನ್ನು ಗ್ರಹಿಸಲು ಸಾಧ್ಯವೇ ಇಲ್ಲ.

ಊಟ

ಈ ಸನಾತನದ ಸಣ್ಣತನ ಬೇರೆ ಧರ್ಮಗಳಲ್ಲಿಯೂ ಇದೆ. ಉದಾಹರಣೆಗೆ… ನಿನ್ನೆ (ಸೆ.8) ಕ್ರಿಶ್ಚಿಯನ್ನರಿಗೆ ‘ಮೊಂತಿ ಫೆಸ್ತ್’ ಅರ್ಥಾತ್ ‘ಕೊರಲ್ ಪರ್ಬ (ತೆನೆ ಹಬ್ಬ). ಯೇಸುವಿನ ತಾಯಿ ಮಾತೆ ಮೇರಿಯ ಹುಟ್ಟಿಗೆ ಈ ಹಬ್ಬ ತಳುಕು ಹಾಕಿಕೊಂಡಿದೆ. ಆದರೂ, ಅದಕ್ಕೂ ಹೊರಗೂ ಈ ಹಬ್ಬಕ್ಕೆ ಅಸ್ಮಿತೆ ಇದೆ. ಈ ಹಬ್ಬಕ್ಕೆ ಧರ್ಮಕ್ಕಿಂತ ಸಂಸ್ಕೃತಿ ಮತ್ತು ಕೌಟುಂಬಿಕ ಪ್ರಭೆ ಇದೆ. ಚರ್ಚಿನಲ್ಲಿ ಆಶೀರ್ವದಿಸಿದ ಬತ್ತದ ತೆನೆಯನ್ನು ಹಾಲಿಗೋ, ಪಾಯಸಕ್ಕೋ ಹಾಕಿ ಸೇವಿಸಿ  ಕುಟುಂಬ ಸಮೇತ ಒಟ್ಟಿಗೆ ಊಟ ಮಾಡುತ್ತಾರೆ. ಮನೆಯಲ್ಲಿ ಕುಟುಂಬದ ಎಲ್ಲ ಸದಸ್ಯರೂ ಒಟ್ಟಿಗೆ ಕುಳಿತು ಊಟ ಮಾಡುವುದೇ ಚಂದ. ದಶಕಗಳ ಹಿಂದೆ ಗಲ್ಫಿನಲ್ಲಿ ದುಡಿಯುತ್ತಿದ್ದ ಕುಟುಂಬದ ಸದಸ್ಯರಿಗೆ ಇದೇ ತೆನೆಯನ್ನು ಪತ್ರದ ಜೊತೆ ಕಳುಹಿಸಿಕೊಡಲಾಗುತ್ತಿತ್ತು; ಕುಟುಂಬದಲ್ಲಿ ಈ ಹಬ್ಬಕ್ಕೆ ಅಷ್ಟೊಂದು ಮಹತ್ವವಿದೆ. ಆದರೆ, ಕೆಲವು ಪಾದ್ರಿಗಳು ಈ ‘ಮನೆ ಊಟದ’ ಹಕ್ಕನ್ನು ಜನರಿಂದ ಕಸಿದುಕೊಂಡು, ಚರ್ಚಿನಲ್ಲೇ ಸಾಮೂಹಿಕ ಭೋಜನದ ವ್ಯವಸ್ಥೆ ಮಾಡುತ್ತಾರೆ. ಈ ಊಟದ ಕೌಟುಂಬಿಕ ಹಕ್ಕಿನ ಮೇಲಾಗುವ ದಬ್ಬಾಳಿಕೆಯನ್ನು ಕೊಂಕಣಿಯಲ್ಲಿ ಪ್ರಶ್ನಿಸಿದ್ದೆ ನಾನು. ಅದಿರಲಿ, ಆದರೆ ಈ ಹಬ್ಬದಲ್ಲಿಯೂ ಕ್ರಿಶ್ಚಿಯನ್ನರಲ್ಲಿ ಸನಾತನದ್ದೇ ಒಂದು ಅಂಶವಿದೆ. ಅದೆಂದರೆ, ಇದು ಪ್ಯೂರ್ ವೆಜ್ ಹಬ್ಬ, ಆಶೀರ್ವದಿಸಿದ ತೆನೆ ಮನೆಗೆ ತರುವಾಗ ಮನೆಯಲ್ಲಿ ಮಾಂಸ ಇರಬಾರದು ಮುಂತಾದ ನಂಬಿಕೆಗಳಿವೆ. ಮಧ್ಯಾಹ್ನ ಸಸ್ಯಾಹಾರ ಊಟ ಮಾಡಿ ರಾತ್ರಿ ಮಾಂಸಾಹಾರ ಸೇವಿಸುವವರನ್ನೂ ಟೀಕೆ ಮಾಡಿ ಹೀಯಾಳಿಸಿ, ಕ್ರಿಶ್ಚಿಯನ್ ಕೊಂಕಣಿ ಪತ್ರಿಕೆಗಳಲ್ಲಿ ಧಾರಾಳವಾಗಿ ಬರಹಗಳು ಪ್ರಕಟವಾಗುತ್ತವೆ. ಹೀಗೆ ಬರೆಯುವವರಿಗೆ ಗೊತ್ತಿಲ್ಲದ ವಿಷಯ ಏನೆಂದರೆ, ಸಮುದ್ರ ತೀರದಲ್ಲಿ ಬದುಕು ಕಟ್ಟಿಕೊಂಡ ಕೆಲ ಕ್ರಿಶ್ಚಿಯನ್ನರು ಈ ಹಬ್ಬವನ್ನು ಮೀನು ಆಡುಗೆಯ ಮೂಲಕವೇ ಆಚರಿಸುತ್ತಾರೆ. ಊಟದ ವಿಚಾರದಲ್ಲಿ, ಮನೆಗೆ ಕೆಲಸಕ್ಕೆ ಬಂದ ದಲಿತರು ಊಟ ಮಾಡುವ ತಟ್ಟೆಯಲ್ಲಿ ಮನೆಯವರು ಊಟ ಮಾಡದೆ ಆ ತಟ್ಟೆಯನ್ನು ಅವರಿಗೆ ಮಾತ್ರ ಮೀಸಲಿಡುವುದನ್ನು ನನ್ನ ಚಿಕ್ಕಂದಿನಲ್ಲಿ ನೋಡಿದ್ದೇನೆ. ಈ ಅಂಶಗಳು ಪೋರ್ಚುಗೀಸ್ ಅಥವಾ ಬ್ರಿಟಿಷರಿಂದ ಮತಾಂತರದ ಮೂಲಕ ಕ್ರಿಶ್ಚಿಯನ್ನರಲ್ಲಿ ಸುಳಿದದ್ದಲ್ಲ, ಅವು ತಾವಾಗಿಯೇ ಉಳಿಸಿಕೊಂಡು ಬಂದ ಇಲ್ಲಿಯದೇ ಸನಾತನದ ಅಂಶಗಳು.

ಮುಸ್ಲಿಮರಲ್ಲೂ ಆಹಾರಕ್ಕೆ ಸಂಬಂಧಿಸಿದಂತೆ ಬೇಧಭಾವವಿದೆ. ಹಂದಿ ಮಾಂಸ ಹೆಚ್ಚಿನ ಮುಸ್ಲಿಮರಿಗೆ ನಿಷಿದ್ಧ. ಒಂದು ವಾಣಿಜ್ಯ ಕಟ್ಟಡದಲ್ಲಿ ಕ್ರಿಶ್ಚಿಯನ್ ಹೋಟೆಲಲ್ಲಿ ಹಂದಿ ಮಾಂಸ ಮಾರುತ್ತಾರೆ ಎಂದು ತಕರಾರೆಬ್ಬಿಸಿ, ಆ ಕಟ್ಟಡದಲ್ಲಿದ್ದ ಮುಸ್ಲಿಮ್ ಮಳಿಗೆಯವರು ಹೋಟೆಲನ್ನು ಮುಚ್ಚುವಂತೆ ಒತ್ತಡ ಹೇರಿದಂತಹ ಘಟನೆಯನ್ನೂ ನಾನು ನೋಡಿದ್ದೇನೆ. ಊಟದ ತಟ್ಟೆಯಲ್ಲಿ ಆಹಾರದ ಬದಲು ಧರ್ಮವನ್ನು ಬೆರೆಸಿದರ ಫಲವಿದು.

ಆರೋಗ್ಯಕರ ಹಾಲು, ಆರೋಗ್ಯಕರ ಎಣ್ಣೆ, ಆರೋಗ್ಯಕರ ತಿಂಡಿ – ಎಂದೆಲ್ಲ ಜಾಹೀರಾತುಗಳನ್ನು ನಾವಿಂದು ನೋಡುತ್ತೇವೆ. ಆದರೆ, ಈ ಹೊತ್ತಿನ ಆರೋಗ್ಯಕರ ಆಹಾರವೆಂದರೆ ಅದು ಆಹಾರಕ್ಕೆ ಧರ್ಮವನ್ನು ಬೆರೆಸದ ಆಹಾರ ಮತ್ತು ಈ ಹೊತ್ತಿನ ಆರೋಗ್ಯಕರ ಮನುಷ್ಯನೆಂದರೆ ಧರ್ಮ-ನಂಬಿಕೆಯ ಹೆಸರಲ್ಲಿ ಊಟ, ಉಡುಪು ಮುಂತಾದ ಮೂಲಭೂತ ವಸ್ತುಗಳಲ್ಲಿ ಬೇಧಭಾವ ಮಾಡದೆ ಇರುವವನು, ಅಷ್ಟೆ.

ನಾನಂತೂ ತಿಂಡಿಪೋತ. ನಾನು ಆಹಾರವನ್ನು ಮಿತವಾಗಿ ಬಳಸುವುದು ನನ್ನ ದೇಹದ ತೂಕ ಕಡಿಮೆ ಮಾಡುವುದಕ್ಕಾಗಿ ಮಾತ್ರವೇ ಹೊರತು ಬೇರೆ ಯಾವುದಕ್ಕೂ ಅಲ್ಲ. ಈ ಬರಹದ ಮಧ್ಯಭಾಗದಲ್ಲಿರುವ ಚಿತ್ರ ಇದೇ ಸೆಪ್ಟೆಂಬರ್ 8ರ ತೆನೆ ಹಬ್ಬದ ದಿನದ್ದು. ಮೇರಿ ಮಾತೆಯ ಜನುಮದಿನದ ನೆಪದಿಂದ ಮನೆಯಲ್ಲಿ ಮಾಡಿದ ಇಡ್ಲಿಯೊಂದಿಗೆ ಹಿಂದೂ ಬಾಂಧವರು ಕೊಟ್ಟ ಅಷ್ಟೆಮಿಯ ಮೂಡೆ ಇದೆ. ತೆನೆ ಹಬ್ಬದ ತರಕಾರಿ ಸಾರಿನ ಜೊತೆಗೆ ನಿನ್ನೆ ಹರೀಶಣ್ಣ ಕೊಟ್ಟ ಅಷ್ಟೆಮಿಯ ಸ್ಪೆಷಲ್ ಚಿಕನ್ ಸುಕ್ಕವಿದೆ. ಎಲ್ಲ ಬಗೆಯ ಆಹಾರಕ್ಕೆ ಅವಕಾಶ ಕೊಟ್ಟ ಬಾಳೆ ಎಲೆಯೇ ನಿಜವಾದ ‘ಇಂಡಿಯಾ.’ ಈ ನಮ್ಮ ಇಂಡಿಯಾದಲ್ಲಿ ಹಬ್ಬಗಳೇ ಜೊತೆಜೊತೆಯಾಗಿ ಬರುತ್ತಿವೆ, ಅದನ್ನು ಆಚರಿಸುವ ಮನುಷ್ಯರು ದೂರವಾಗುವುದರಲ್ಲಿ ಅರ್ಥವಿದೆಯೇ?

ಬನ್ನಿ, ಒಟ್ಟಿಗೆ ಊಟ ಮಾಡೋಣ…

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ವಿಲ್ಸನ್ ಕಟೀಲ್
ವಿಲ್ಸನ್ ಕಟೀಲ್
ಸಮಕಾಲೀನ ಕನ್ನಡ ಕವಿಗಳಲ್ಲಿ ಅತ್ಯಂತ ಸೂಕ್ಷ್ಮ ಕವಿತೆಗಳ ಕಾರಣಕ್ಕೆ ಗುರುತಿಸಿಕೊಳ್ಳುವವರು. ಪತ್ರಕರ್ತ. ಊರು, ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು. 'ಒಂದು ನಿಷೇಧಕ್ಕೊಳಪಟ್ಟ ನೋಟು' ಎಂಬ ಒಂದು ಕವಿತೆಯೇ ಸಾಕು, ಇವರ ಬರಹದ ಕುರಿತ ಸಾರಸರ್ವಸ್ವ ಹೇಳಲು.

3 COMMENTS

  1. ಉತ್ತಮ ಮಾಹಿತಿವುಳ್ಳ ಅರ್ಥಭರಿತ ಲೇಖನ.
    ದನ್ಯವಾದಗಳು ವಿಲ್ಸನ್ ಕಟೀಲ್ ರವರೆ.

  2. ಆಹಾರವಿರಲಿ, ಧರ್ಮವಿರಲಿ ಯಾರೂ ಯಾರನ್ನು ದ್ವೇಷಿಸಲು ಕಲಿಸೊದಿಲ್ಲ. ಆದರೆ ಯಾವಾಗ ಶ್ರೇಷ್ಟತೆಯ ವ್ಯಸನ ಶುರುವಾಗುತ್ತೋ ಅದು ಎಲ್ಲವನ್ನು ಕೆಡಿಸುತ್ತೆ. ಎಲ್ಲರ ನಂಬಿಕೆಗಳಲ್ಲಿನ ಈ ಶ್ರೇಷ್ಟತೆಯ ಅಮಲಿಳಿಸಲು ಇಂತಹ ಲೇಖನಗಳು ಅತ್ಯಗತ್ಯ..

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೀಗೊನಿ | ಕೋಡಿ ನೋಡ್ದ… ಕೆಂಪು ಕೆಂಡವೊಂದು ಇವ್ರ ಕಡೀಕೇ ಬರ್‍ತಿತ್ತು!

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...

ಸಪ್ತಪರ್ಣಿ | ಮಕ್ಕಳನ್ನು ಬೆದರಿಸಲು ನೀವು ಹೇಳುತ್ತಿರುವ ಕಟ್ಟುಕತೆಗಳಿಂದ ಮುಂದೇನಾಗಬಹುದು?

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...

ಮೈಕ್ರೋಸ್ಕೋಪು | ಹೆಸರು ಬದಲಿಸುವ ಬಿಸಿ-ಬಿಸಿ ಚರ್ಚೆ; ಇಲ್ಲೊಂದು ಇಂಡಿಯಾ, ಅಲ್ಲೆರಡು ದುಂಬಿ

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...

ವಿಳಾಸವಿರದ ಪ್ರೇಮಪತ್ರಗಳು -1 | ‘ಸಾಕು… ಮಾತಾಡ್ತಿದ್ರೆ ಇನ್ನೂ ಏನೇನೋ ಮಾತಾಡಿಬಿಡಬಹುದು ನಾನು!’

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...