ಲಕ್ಷ ರೂಪಾಯಿ ಸಾಲ ಸಿಗುತ್ತದೆ ಅಂದರೆ ಯಾರಾದರೂ ಬೇಡ ಅನ್ನುತ್ತಾರಾ? ತೆಗೆದುಕೊಳ್ಳುತ್ತಾರೆ! ಅಲ್ಲಿಂದ ಶುರುವಾಗುತ್ತದೆ ದುರಂತ ಕತೆ. ಹ್ಞಾಂ... ಇಲ್ಲಿನ ಕುಮುದಾ, ರೇಣುಕಾ, ಶೋಭಾ ನೀವೂ ಆಗಿರಬಹುದು
ಕುಮುದಾ ಎಂಬ ಮಹಿಳೆ ಪಡೆದದ್ದು 50,000 ರೂಪಾಯಿ. ಆಕೆಯೊಂದಿಗೆ ಅವಳ ಗುಂಪಿನಲ್ಲಿರುವ ಹತ್ತೂ ಮಹಿಳೆಯರು ತಲಾ 50,000 ರೂಪಾಯಿ ಸಾಲ ಪಡೆದಿದ್ದರು. ಸಂಘದ ನಿಯಮ ಅದು. ಎಲ್ಲರೂ ಸಾಲ ತೆಗೆದುಕೊಳ್ಳಲೇಬೇಕು. ಸಾಲದ ಮರುಪಾವತಿ ಪ್ರತೀ ವಾರಕ್ಕೆ 600 ರೂಪಾಯಿಯಂತೆ ಎರಡು ವರ್ಷ – ಅಂದರೆ 104 ವಾರಗಳ ಕಾಲ ತುಂಬಬೇಕು. ಕುಮುದಾ ತುಂಬುವ ಒಟ್ಟು ಹಣ 600 X 104ರಂತೆ 62,400 ರೂಪಾಯಿ. ಅಂದರೆ, 50,000ಕ್ಕೆ ಎರಡು ವರ್ಷದಲ್ಲಿ ಆಕೆ 12,400 ರೂಪಾಯಿ ಬಡ್ಡಿ ತುಂಬಿದಳು. ಆದರೆ, ಪ್ರತೀ ಬಾರಿ ತುಂಬುವಾಗಲೂ, ಅಂದರೆ 600 ರೂಪಾಯಿಗಳಲ್ಲಿ ಅಸಲೆಷ್ಟು, ಬಡ್ಡಿಯೆಷ್ಟು ಎಂದು ಗೊತ್ತಿಲ್ಲ. ಆಕೆ ಒಂದಷ್ಟು ಬಡ್ಡಿಯನ್ನೂ ಒಂದಷ್ಟು ಅಸಲನ್ನೂ ತುಂಬುತ್ತಲೇ ಇದ್ದಳು. ಅಸಲಿನ ಒಂದು ಭಾಗವನ್ನು ತುಂಬಿದ್ದರೂ ಕೊನೆಯ ವಾರದ ತನಕವೂ ಮೂಲ ಅಸಲಿಗೇ ಬಡ್ಡಿಯನ್ನು ತುಂಬುತ್ತಿರುತ್ತಾಳೆ!
“ವರ್ಷದ ಕೊನೆಯಲ್ಲಿ ಒಂದೇ ಬಾರಿ ಅಸಲು ವಾಪಸಾತಿ ಆಗಿದ್ದಿದ್ದರೆ ಬಡ್ಡಿ ಲೆಕ್ಕ ಸಿಗುತ್ತಿತ್ತೇನೋ. ಆದರೆ ಇಡೀ ವರ್ಷವೂ, ಪ್ರತಿವಾರವೂ ಆಕೆ ಅಸಲಿನಲ್ಲೂ ಸ್ವಲ್ಪ ಭಾಗವನ್ನು ತುಂಬುತ್ತಲೇ ಇರುವುದರಿಂದ ನಿಜವಾಗಿ ಆಕೆ ತುಂಬುವ ಬಡ್ಡಿ ಎಷ್ಟೆಂದು ಲೆಕ್ಕ ಹಾಕುವುದು ಕಷ್ಟ ಎನ್ನುತ್ತಾರೆ,” ನಿವೃತ್ತ ಬ್ಯಾಂಕ್ ಅಧಿಕಾರಿಯೊಬ್ಬರು.
ಈ ಆಡಿಯೊ ಕೇಳಿದ್ದೀರಾ?: ಹಳ್ಳಿ ದಾರಿ | ತಲೆ ಎತ್ತಿ ನಡೆದ ಹಳ್ಳಿಯ ಮಹಿಳೆಯರನ್ನು ಸಾಲದ ಸುಳಿಗೆ ಸಿಲುಕಿಸಿ ಮಕಾಡೆ ಬೀಳಿಸಿದ ದುರಂತ ಕತೆ
ಇರಲಿ, 50,000ಕ್ಕೆ ಒಬ್ಬಳಿಂದ 12,400 ರೂಪಾಯಿ ಬಡ್ಡಿ. ಸಂಘದ ಹತ್ತು ಸದಸ್ಯರಿಂದ 1,24,000 ಬಡ್ಡಿ. ಅವರದೇ ಊರಿನಲ್ಲಿ ಇಂತಹ 13 ಸಂಘಗಳಿವೆಯಂತೆ. ಹಾಗಾದರೆ, 13 ಸಂಘಗಳ ಹತ್ತತ್ತು ಮಹಿಳೆಯರಿಂದ ವಾರ-ವಾರ ತುಂಬುವ ಹಣದಿಂದ ಎರಡು ವರ್ಷದಲ್ಲಿ ಒಂದು ಸಾಲದ ಸಂಘದಿಂದ ಹೊರಹೋಗುವ ಬಡ್ಡಿ ಹಣ 9,92,000 ರೂಪಾಯಿ! ಇಂತಹ ಕನಿಷ್ಠ 5 ಸಾಲದ ಸಂಘಗಳು ಒಂದೊಂದು ಹಳ್ಳಿಯಲ್ಲಿ ವ್ಯವಹಾರ ನಡೆಸುತ್ತಿವೆಯೆಂದರೂ, ಹರಿದುಹೋಗುವ ಬರಿಯ ಬಡ್ಡಿ ಹಣ 49,60,000 ರೂಪಾಯಿ. ಸನಿಹ-ಸನಿಹ 50 ಲಕ್ಷ ರೂಪಾಯಿ ಅಥವಾ ವರ್ಷಕ್ಕೆ 25 ಲಕ್ಷ ರೂಪಾಯಿ. ಇದು ಬರಿಯ ಬಡ್ಡಿ ಹಣ!
ಕಂತಿನಲ್ಲಿ ಮರುಪಾವತಿ ಆಗಿರುವುದರಿಂದ ಕುಮುದಾಳಿಗೆ ತಾನು ಒಟ್ಟು ಎಷ್ಟು ಹಣ ಪಾವತಿಸುತ್ತಿರುವೆನೆಂಬ ಅರಿವಿಲ್ಲ. ಲೆಕ್ಕ ಹಾಕಲು ಗೊತ್ತಿಲ್ಲ. ಇದನ್ನು ಲೆಕ್ಕ ಹಾಕಿ ತೋರಿಸಿದಾಗ ಗಾಬರಿಯಾಗಿ, “ಇಲ್ಲಪ್ಪ… ಇನ್ನುಮುಂದೆ ತಾನು ಸಾಲ ತೆಗೆದುಕೊಳ್ಳುವುದೇ ಇಲ್ಲ,” ಎಂದು ಹೇಳುತ್ತಾಳೆ. ಆದರೆ, ಸಾಲದ ಸುಳಿಯಲ್ಲಿ ಅವಳು ಅದೆಷ್ಟು ಸಿಕ್ಕಿಹಾಕಿಕೊಂಡು ಬಿಟ್ಟಿದ್ದಾಳೆಂದರೆ, ಸಾಲ ತೆಗೆದುಕೊಳ್ಳುವುದು-ಬಿಡುವುದು ಆಕೆಯ ಕೈಯಲ್ಲಿ ಇಲ್ಲವೇ ಇಲ್ಲ. ನಿರ್ಧಾರ ಆಕೆಯದಲ್ಲವೇ ಅಲ್ಲ. ಮೊದಲೇ ಹೇಳಿರುವಂತೆ, ಎಲ್ಲರೂ ಕಡ್ಡಾಯವಾಗಿ ಸಾಲ ತೆಗೆದುಕೊಳ್ಳಲೇಬೇಕು.

ಶುರು ಮಾಡುವುದು 30,000ದಿಂದ. ಎಲ್ಲರೂ ತುಂಬುತ್ತ ಇನ್ನೇನು ನಾಲ್ಕು ಕಂತು ತುಂಬಿದರೆ ಸಾಲವೆಲ್ಲ ಹರಿಯಿತು ಎಂದು ನಿಟ್ಟುಸಿರು ಬಿಡುವ ತಯಾರಿಯಲ್ಲಿ ಹೆಣ್ಣುಮಕ್ಕಳಿದ್ದರೆ, ಅಷ್ಟರಲ್ಲಿ ಸಾಲದ ಸಂಘದವರು ಘೋಷಿಸುತ್ತಾರೆ, “ನಿಮಗೀಗ 1 ಲಕ್ಷ ರೂಪಾಯಿಯ ಕಡ್ಡಾಯ ಸಾಲ ಮಂಜೂರಾಗಿದೆ…” ಇಂತಹ ಅವಶ್ಯಕತೆಗೆ ಬೇಕೆಂದು ಸಾಲ ಕೇಳದೆ ಮಂಜೂರಾಗುವ ಸಾಲವಿದು. ಬೇಕಾದವರು ಕೇಳದೆ ಇರುವುದರಿಂದ ಯಾತಕ್ಕಾಗಿ ಕಡ್ಡಾಯ ಸಾಲ ಎನ್ನುವುದೂ ಮಹಿಳೆಗೆ ಗೊತ್ತಿಲ್ಲ. ಆದರೆ, ಕೊಡುವವರ ಪುಸ್ತಕದಲ್ಲಿ ಏನೋ ಕಾರಣ ಬರೆದಿರಬೇಕು. ಮಾತಿನ ಮಧ್ಯೆ ಹೇಳಿಯೂ ಹೇಳಿರಬೇಕು. ಒಂದು ಲಕ್ಷ ಸಾಲ ಎಂದ ಕೂಡಲೇ ಅನೇಕರ ಕಿವಿಗಳು ನೆಟ್ಟಗಾಗುತ್ತವೆ. “ಯಾರಿಗುಂಟು ಯಾರಿಗಿಲ್ಲ! ನಮ್ಮಂಥ ಬಡವರಿಗೆ ಯಾರು ಇಷ್ಟೆಲ್ಲ ದುಡ್ಡು ಕೊಡುತ್ತಾರೆ? ಇಸ್ಕೊಂಬಿಡೋಣ,” ಎಂಬ ಲೆಕ್ಕಾಚಾರ ಬರುತ್ತದೆ.
ಒಂದಷ್ಟು ಮಹಿಳೆಯರು ಬೇಡವೆಂದು ವಾದಿಸಿದರೂ, ಎಲ್ಲರೂ ತೆಗೆದುಕೊಳ್ಳಲೇಬೇಕು ಎಂಬ ‘ಕಡ್ಡಾಯ ಸಾಲ’ದ ನಿಯಮವೊಂದಿದೆಯಲ್ಲ? “ನಿಂಗೆ ಬೇಡಾದರೆ ನನಗೆ ಕೊಡು…” ಎಂಬ ಆಗ್ರಹ. “ಅವಳೇನೂ ಹೆಚ್ಚು ದಿನ ಊರಲ್ಲಿ ಇರೋದಿಲ್ಲ ಬಿಡ್ರಿ…” ರೇಣುಕಾ ಬಗ್ಗೆ ಸುಶೀಲಾಳ ಮಾತು. ಯಾಕೆ ಹಾಗೆ ಹೇಳುತ್ತೀರಿ ಅಂತ ಕೇಳಿದರೆ, “ಆಕೆ ಇಲ್ಲಿಯ ಸಾಲ ಹರಿಯಲು ಅಲ್ಲಿ, ಅಲ್ಲಿಯದು ಹರಿಯಲು ಇನ್ನೊಂದು ಸಂಘದಲ್ಲಿ ಅಂತ 5 ಲಕ್ಷದಷ್ಟು ಸಾಲದ ಹೊರೆ ಹೊತ್ತಿದ್ದಾಳೆ. ಎಲ್ಲರ ಹೆಸರಲ್ಲೂ ಸಾಲ ತೆಗೆದಿದ್ದಾಳೆ. ಅವಳು ಬರಲಿಲ್ಲವೆಂದರೆ ಉಳಿದವರೆಲ್ಲ ತುಂಬಬೇಕು. ತುಂಬುವಾಗ ಬಯ್ಯುತ್ತಾರೆ, ತಮ್ಮ ದುಡ್ಡು ವಾಪಸ್ ಕೊಡು ಎಂದು ಕಂಡಲ್ಲಿ ಪೀಡಿಸುತ್ತಾರೆ. ಅಕ್ಕ-ಪಕ್ಕದವರು, ಹಿಂದು-ಮುಂದಿನವರು, ಓಣಿಯವರು, ಓರಗೆಯವರು ಎಲ್ಲರಲ್ಲಿಯೂ ಸಾಲ ಮಾಡಿ-ಮಾಡಿ… ಈಗ ಎಲ್ಲರಿಂದ ತಪ್ಪಿಸಿಕೊಳ್ಳಬೇಕೆಂದರೆ ಆಕೆಗೆ ಓಡಿಹೋಗುವುದೊಂದೇ ದಾರಿ. ಬೇಗ ಆಕಿ ಊರು ಬಿಟ್ಟು ಓಡಿಹೋಗ್ತಾಳೆ ನೋಡ್ರಿ…” ಸುಶೀಲಾ ಒಬ್ಬಳೇ ಅಲ್ಲ, ಎಲ್ಲರೂ ಹೇಳುವ ಮಾತಿದು. ಬಡ್ಡಿ ತುಂಬಿಕೊಳ್ಳುವಾತ ಮಾತ್ರ ತನ್ನ ರೊಕ್ಕದ ಗಂಟು ಎತ್ತಿಕೊಂಡು ನಿಶ್ಚಿಂತೆಯಿಂದ ಜಾಗ ಖಾಲಿ ಮಾಡುತ್ತಿರುತ್ತಾನೆ.
ಈ ಆಡಿಯೊ ಕೇಳಿದ್ದೀರಾ?: ಮೈಕ್ರೋಸ್ಕೋಪು | ಹೆಣ್ಣು-ಗಂಡಿನ ಕುರಿತು ಸಿಜೆಐ ಹೇಳಿದ ಮಾತು ಮತ್ತು ಬಯಾಲಜಿ
ಐದು ಲಕ್ಷಗಟ್ಟಲೆ ಯಾಕೆ ಸಾಲ ಮಾಡಿದಳು ರೇಣುಕಾ? ಮೊದಲ 30,000ವನ್ನು ತುಂಬಿಯಾಗುತ್ತಲೇ, ಒಂದು ಲಕ್ಷದ ಹೊಸ ಸಾಲದ ಘೋಷಣೆ ಆಗಿತ್ತಲ್ಲವೇ? ಯಾತಕ್ಕಾಗಿ ಆ ಸಾಲ? ಗೊಬ್ಬರಕ್ಕೆ ಎಂದು ಬರೆಸಿದಳು. ಗೊಬ್ಬರಕ್ಕೆ ಎಷ್ಟು ಹಣ ಬೇಕಿತ್ತು? ಹೆಚ್ಚೆಂದರೆ 30,000 ಇರಬಹುದು. ಉಳಿದ ಹಣವನ್ನು ಯಾತಕ್ಕಾಗಿ ಬಳಸಿದಳು? ಅದೇ ವೇಳೆಗೆ ಊರಲ್ಲಿ ಜಾತ್ರೆ ಬರಬೇಕಾ? ಜಾತ್ರೆಗೆ ಬರುವ ನೆಂಟರಿಗೆಲ್ಲ ಬಟ್ಟೆ ಖರೀದಿ ಆಯಿತು- ಇತ್ತೀಚೆಗೆ ಹಳ್ಳಿಗಳ ಜಾತ್ರೆಗಳಲ್ಲಿ ಇದೊಂದು ಹೊಸ ಬೆಳವಣಿಗೆಯಾಗಿದೆ. ಮದುವೆಯಲ್ಲಿ ಉಡುಗೊರೆ ಕೊಟ್ಟಂತೆ ಜಾತ್ರೆಗೆ ಬರುವ ನೆಂಟರಿಗೆಲ್ಲ ಬಟ್ಟೆ ಕೊಡಿಸಬೇಕು. ಇನ್ನೊಂದಿಷ್ಟನ್ನು ಗಂಡ ಕಸಿದುಕೊಂಡು ತನ್ನ ಕುಡಿತಕ್ಕೆ, ಗೆಳೆಯರ ಜೊತೆ ಪಾನಗೋಷ್ಠಿಗೆ ವ್ಯಯಿಸಿದ.
ಸಾಲವೆಂದರೆ ಹೆದರಿ ಮೈ ಹಿಡಿಯಾಗಿಸಿಕೊಳ್ಳುತ್ತಿದ್ದ, ಮರ್ಯಾದೆಗೆ ಅಂಜಿಕೊಳ್ಳುತ್ತಿದ್ದ ಜನರು, ಇಂದು ಸುಲಭವಾಗಿ ದೊರೆಯುವ ಸಾಲದ ಬಲೆಯೊಳಗೆ ಈ ರೀತಿಯಲ್ಲಿ ತಾವಾಗಿಯೇ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಆಸೆಗಳು ಗರಿಗೆದರಿವೆ, ಉಪಭೋಗತ್ವ ಎಲ್ಲೆ ಮೀರಿದೆ.

ಈ ಕಡ್ಡಾಯ ಸಾಲ ಸಹವಾಸದಿಂದಾಗಿ ಕೇಂದ್ರ ಸರ್ಕಾರದಿಂದ ಹಕ್ಕಾಗಿ ಬಂದಿದ್ದ ಉದ್ಯೋಗ ಖಾತರಿಯ ಕೆಲಸಕ್ಕೆ ಹೋಗುವುದನ್ನೇ ಒಂದು ಹಳ್ಳಿಯವರು ಬಿಟ್ಟುಬಿಟ್ಟಿದ್ದಾರೆ! “ದಿನಕ್ಕೆ 316 ರೂಪಾಯಿ ಬರುತ್ತಿತ್ತಲ್ಲ… 200 ರೂಪಾಯಿಯ ಕೆಲಸಕ್ಕೆ ಹೋಗಿ, ನಿತ್ಯ 116 ರೂಪಾಯಿ ಕಳಕೊಳ್ತಿದ್ದೀರಲ್ಲ! ಯಾಕೆ ಬಿಟ್ರಿ?” ಎಂದು ಕೇಳಿದರೆ, “ಆ ಪಗಾರ ಬರುವುದು ಯಾವಾಗಲೋ. ಇಲ್ಲಿ ಎರಡೇ ನೂರು ಬರುತ್ತಿದ್ದರೂ, ಆ ವ್ಯಕ್ತಿ ಊರಲ್ಲೇ ಇರ್ತಾರೆ, ಕೇಳಿದಾಗ ಕೈಸಾಲ ಕೊಡುತ್ತಾರೆ,” ಎಂಬ ಉತ್ತರ. ಹಕ್ಕಾಗಿ ಬಂದಿದ್ದು ಬೇಡ, ಘನತೆಯ ಉದ್ಯೋಗವೂ ಬೇಡ ಎನ್ನುವಷ್ಟು ಸಾಲದ ಮಂಕುಬೂದಿ!
ಸಾಮಾನ್ಯವಾಗಿ ಸಾಲದ ಸಂಘಗಳು ಉಳಿತಾಯ ಮಾಡಿಸುವುದಿಲ್ಲ. ಆದರೆ, ಒಂದು ಸಾಲದ ಸಂಘವಿದೆ; ಧರ್ಮದ ಹೆಸರಿನಲ್ಲಿ ಸುಮಾರು 10-15 ವರ್ಷಗಳಿಂದ ಹಳ್ಳಿಗಳಲ್ಲಿ ನೆಲಸಿ ಲೂಟಿ ಮಾಡುತ್ತಿರುವ ಸಂಘವದು. ವಾರಕ್ಕೆ ಹತ್ತು ರೂಪಾಯಿ ಉಳಿತಾಯವನ್ನೂ ಮಾಡಿಸುತ್ತಾರವರು. ಮಹಿಳೆಯರು ಕಟ್ಟಿದ ಉಳಿತಾಯದ ಹಣವನ್ನು ಪುಸ್ತಕದಲ್ಲಿ ಬರೆಸಿ, ತಾವು ಕಟ್ಟಿಕೊಂಡು ಹೋಗುತ್ತಾರೆ. ಸಂಘ ಮುರಿದಾಗಲೇ ಆ ಹಣ ಮಹಿಳೆಯರಿಗೆ ಸಿಗುತ್ತದೆ. ಅದಕ್ಕೆ ಮಾತ್ರ ಬಡ್ಡಿ ಇಲ್ಲ. ಈಗಾಗಲೇ ಐದಾರು ಸಾವಿರ ರೂಪಾಯಿ ಉಳಿತಾಯವಾಗಿದ್ದರೂ ಸಂಘ ಬರಖಾಸ್ತಾದಾಗ ಸಿಗುವುದು ಉಳಿತಾಯದ ಹಣ ಮಾತ್ರ, ಒಂದು ಪೈಸೆ ಬಡ್ಡಿಯೂ ಇಲ್ಲ! ಅಕಸ್ಮಾತ್ ಒಬ್ಬಾಕೆ ಒಂದು ವಾರದ ಹಣ ತುಂಬಲಿಲ್ಲವೆಂದರೆ, “ನಿಮ್ಮೆಲ್ಲರ ಉಳಿತಾಯದ ಹಣವನ್ನು ಬಳಸಿಕೊಳ್ಳುತ್ತೇವೆ,” ಎನ್ನುತ್ತಾನೆ ಸಂಯೋಜಕ. ತಮ್ಮ ಉಳಿತಾಯದ ಹಣ ಹೋದೀತೆಂದು ಎಲ್ಲರೂ ತಮ್ಮ ಕೈಲಾದಷ್ಟು ಸೇರಿಸಿ ಆಕೆಯ ಸಾಲ ತುಂಬಿ ಮುಗಿಸುತ್ತಾರೆ ಅಥವಾ ಒಬ್ಬರ ಜುಟ್ಟು ಇನ್ನೊಬ್ಬರು ಹಿಡಿದು ಎಳೆದಾಡಿ ಜಗಳಕ್ಕಿಳಿಯುತ್ತಾರೆ. ಕಂತು ತುಂಬಿಸಿಕೊಂಡವ ತಣ್ಣಗೆ ಅಲ್ಲಿಂದ ಜಾಗ ಖಾಲಿ ಮಾಡುತ್ತಿರುತ್ತಾನೆ. ಸಂಘ ಮುರಿಯುವ ಹೊತ್ತಿನಲ್ಲಿ ಒಬ್ಬಾಕೆ ಡಿಫಾಲ್ಟರ್ ಇದ್ದರೂ, ಯಾರೊಬ್ಬರ ಉಳಿತಾಯದ ಹಣವೂ ವಾಪಸ್ ಬರುವುದಿಲ್ಲ.
ಈ ಆಡಿಯೊ ಕೇಳಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಹೆಣ್ಣಿನ ದೇಹದ ಮೇಲಿನ ಅಧಿಕಾರ ರಾಜಕಾರಣ
ಶೋಭಾ ತನ್ನ ಮಗನ ಶಿಕ್ಷಣಕ್ಕಾಗಿ ಒಂದು ಲಕ್ಷ ರೂಪಾಯಿಗಳ ಸಾಲ ತೆಗೆದುಕೊಂಡಳು. ಮಗನನ್ನು ಧಾರವಾಡದ ಹೆಚ್ಚಿನ ಡೊನೇಶನ್ ಕೇಳುವ ‘ಒಳ್ಳೆಯ’ ಕಾಲೇಜಿಗೆ ಹೆಸರಚ್ಚಿ ಬಂದಳು. ಆ ಮಗನಿಗೆ ಮಿಲಿಟರಿಗೆ ಹೋಗುವ ತರಬೇತಿ ಕೊಡುವಂಥ ಕಾಲೇಜು ಬೇಕಾಗಿತ್ತಂತೆ. ಅಪ್ಪ-ಅವ್ವ ಹಚ್ಚಿಸಿದ್ದು ಕಾಮರ್ಸ್ ಕಾಲೇಜಿಗೆ. ನಾ ಒಲ್ಲೆ ಎಂದು ಎರಡೇ ತಿಂಗಳಿಗೆ ಮಗ ಕಾಲೇಜು ಬಿಟ್ಟೇಬಿಟ್ಟ. ತುಂಬಿದ ಹಣವನ್ನು ಹಿಂದಿರುಗಿಸಲು ಕಾಲೇಜಿನವರು ನಿರಾಕರಿಸಿದರು. ಈಗ ಶೋಭಾ, ಶಿಕ್ಷಣದ ಸಾಲದ ಕಂತನ್ನು ವಾರ-ವಾರ ತುಂಬುತ್ತಿದ್ದಾಳೆ!
ಮಗ ಶಾಲೆಗೆ ಹೋಗಲು ಮನಸ್ಸು ಮಾಡದಿದ್ದರೆ ಈಗ ತಾಯಿ-ತಂದೆ ಒತ್ತಾಯಿಸುವುದಿಲ್ಲ. ಮಾಸ್ತರರಿಗೆ ಹೋಗಿ ಹೇಳುವುದಿಲ್ಲ. ಉಪಾಯ ಮಾಡಿ ಆತನನ್ನು ಶಾಲೆಗೆ ಕಳಿಸುವ ಪ್ರಯತ್ನ ಮಾಡುವುದಿಲ್ಲ. ಬದಲಿಗೆ, “ಹಾಗಾದರೆ, ದುಡಿ ಹೋಗು…” ಎಂದು ಕೆಲಸಕ್ಕೆ ಕಳಿಸುತ್ತಾರೆ. ಒಮ್ಮೆ ದುಡಿಯಲು ಹತ್ತಿ, ನಾಲಕ್ಕು ಕಾಸು ಕೈಗೆ ಬಂತೆಂದರೆ ಆ ಮಗ ಮತ್ತೆ ಶಾಲೆಯ ಮುಖ ನೋಡುವುದಿಲ್ಲ. ಮಗನ ಗಳಿಕೆಯ ರುಚಿ ಹತ್ತಿದ ತಾಯಿ-ತಂದೆ ಮಗನನ್ನು ಶಾಲೆಗೆ ಕಳಿಸಬೇಕಿತ್ತೆನ್ನುವ ವಿಚಾರವನ್ನೇ ಮರೆತುಬಿಡುತ್ತಾರೆ. ‘ಮರಳಿ ಬಾ ಶಾಲೆಗೆ’ ಎಂದು ಮನವೊಲಿಸುವಂಥ ಗುಣಮಟ್ಟವಾದರೂ ಎಲ್ಲಿದೆ ನಮ್ಮ ಶಾಲೆಗಳಲ್ಲಿ? ಈ ಎಪ್ಪತ್ತು ವರ್ಷಗಳಲ್ಲಿ, ಮನೆಯಲ್ಲಾಗಲೀ ಸುತ್ತಲಾಗಲೀ ಕಲಿಯಬೇಕೆಂಬ ವಾತಾವರಣವನ್ನು ನಾವು ಸೃಷ್ಟಿ ಮಾಡಿಯೇ ಇಲ್ಲವಲ್ಲ?
ಮುಖ್ಯ ಚಿತ್ರ – ಸಾಂದರ್ಭಿಕ
wonderful inherent research article, lot of alternatives can be done, as a fellow citizen DUTY duty to ease this peoples burden and increase their purchase POWER . [email protected]
r.g.m
ಧನ್ಯವಾದ ಸರ್. ನಿಮ್ಮ ಮಾತನ್ನು ಲೇಖಕರಿಗೆ ತಲುಪಿಸಲಾಗಿದೆ. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.