ಹೊಸಿಲ ಒಳಗೆ-ಹೊರಗೆ | ಹೆಣ್ಣುಮಕ್ಕಳ ಲೋಕದಿಂದ ಅಂತರ ಕಾಯ್ದುಕೊಂಡ ‘ವಿರಾಮ’

Date:

"ನನಗೆ ಸೈಕಲ್ ಓಡಿಸೋದು ಬಹಳ ಇಷ್ಟ. ವಾರಕ್ಕೆ 2 ದಿನವಾದರೂ ನಾನು 25-30 ಕಿಮೀ ಸೈಕಲ್ ಓಡಿಸಬೇಕು; ಆ ದಿನಗಳಲ್ಲಿ ಊಟ-ತಿಂಡಿ ವಿಚಾರಕ್ಕೆ ಸ್ವಲ್ಪ 'ಅಡ್ಜಸ್ಟ್' ಮಾಡಿಕೊಳ್ಳಿ," ಅಂತ ಮಹಿಳೆಯೊಬ್ಬರು ಹೇಳಿದರೆ, ಮನೆಮಂದಿಯ ಪ್ರತಿಕ್ರಿಯೆ ಹೇಗಿರಬಹುದು?

ಎರಡು ಕುಟುಂಬದವರು ಹೀಗೇ ಖುಷಿಗಾಗಿ ಟೂರ್ ಹೋಗುತ್ತಾರೆ. ಎರಡೂ ಕುಟುಂಬದಲ್ಲಿ ಗಂಡ, ಹೆಂಡತಿ ಹಾಗೂ ಮಕ್ಕಳು ಇದ್ದಾರೆ. ಜೊತೆಗೆ ಇರುವುದು, ಉಂಡು ತಿಂದು ಹರಟುವುದು, ಆರಾಮವಾಗಿ ಕಾಲ ಕಳೆಯುವುದು, ಬೇಕೆನಿಸಿದರೆ ಒಂದಿಷ್ಟು ಸುತ್ತಾಡುವುದು… ಹೀಗೆ ಇತ್ತು ಅವರ ಯೋಜನೆ. ಇವರಲ್ಲಿ ಒಬ್ಬ ಮಹಿಳೆಗೆ ಮಾತ್ರ ಈ ಯೋಜನೆ ಹಿಡಿಸಲೇ ಇಲ್ಲ. ಪ್ರತೀ ಹೊತ್ತಿನಲ್ಲೂ ಚಡಪಡಿಸುತ್ತಿದ್ದರು. “ಏನೂ ನೋಡದೆ ಸುಮ್ಮನೆ ಉಂಡು-ತಿಂದು ಬಿದ್ದುಕೊಂಡು ಹರಟೆ ಹೊಡೆಯಲು ಇಷ್ಟು ದೂರ ಖರ್ಚು ಮಾಡಿಕೊಂಡು ಬರಬೇಕಾಗಿತ್ತೇ?” ಎಂದು ಆಗಾಗ ಗೊಣಗಿಕೊಳ್ಳುತ್ತಿದ್ದರು. ವಿಷಯ ಇಷ್ಟೇ… ಆ ಬಳಗದ ಎಲ್ಲರೂ ಸದಾ ಸುತ್ತಾಡುತ್ತ ಕೆಲಸ ಮಾಡುವವರು; ಸುತ್ತಾಟದ ನಡುವೆ ಬೇರೆ-ಬೇರೆ ಸ್ಥಳ ವೀಕ್ಷಣೆ ಮಾಡುವವರು. ಅವರ ಪಾಲಿಗೆ ವಿರಾಮ ಎಂದರೆ ಮೇಲೆ ಹೇಳಿದಷ್ಟೇ ಬೇಕಾಗಿದ್ದುದು. ಆದರೆ, ಆ ಒಬ್ಬ ಮಹಿಳೆ ಸದಾ ಮನೆಯೊಳಗೆ ಇದ್ದು ಕುಟುಂಬದವರ ಬೇಕು-ಬೇಡಗಳನ್ನು ನೋಡಿಕೊಳ್ಳುತ್ತ ಕಾಲ ಕಳೆಯುವವರು. ಹೊರಗೆ ಸುತ್ತಾಡುವ ಅವಕಾಶವೇ ಕಡಿಮೆ. ಈಗ ಹೊರಗೆ ಬಂದಿದ್ದಾರೆ; ಅಡುಗೆ ಕೆಲಸ, ಮನೆ ಸ್ವಚ್ಛ ಇರಿಸಿಕೊಳ್ಳುವ ಗಡಿಬಿಡಿ ಯಾವುದೂ ಇಲ್ಲ. ಈಗ ಪ್ರಪಂಚ ನೋಡಬೇಕು, ಸುತ್ತಾಡಬೇಕು ಅನಿಸಿದೆ. ಅದೇ ಅವರಿಗೆ ವಿರಾಮ. ಮನೆಯಲ್ಲಿ ಹೇಗೂ ನಾಲಕ್ಕು ಗೋಡೆಯೊಳಗೆ, ಹೊರಗೆ ಬಂದರೂ ರೂಮಿನ – ‘ಸುಂದರವಾದ ರೂಮಿನ’ ನಾಲಕ್ಕು ಗೋಡೆಯೊಳಗೇ ಆಕೆ ಇರಬೇಕಾಗಿ ಬಂತು. ಆದರೆ, ಆ ಮಹಿಳೆಯ ಅಗತ್ಯ, ಹಪಾಹಪಿ ಅಲ್ಲಿ ಯಾರಿಗೂ ಅರ್ಥವಾಗಲೇ ಇಲ್ಲ.

ಬಹಳ ಸೂಕ್ಷ್ಮವಾದ ವಿಷಯ ಇದು. ವಿರಾಮ ಅನ್ನುವುದು ಒಂದು ಮನಸ್ಥಿತಿ. ಅವರವರ ಬದುಕಿನ ಶೈಲಿಗೆ ಅನುಗುಣವಾಗಿ ಅವರವರು ವಿರಾಮ ಪಡೆದುಕೊಳ್ಳುವ ರೀತಿ ಬೇರೆ ಬೇರೆಯೇ ಇರಬಹುದು. ಬಿಡುವು, ವಿಶ್ರಾಂತಿ, ವಿರಾಮ, ಮನರಂಜನೆ ಎಲ್ಲವೂ ಒಂದೇ ವ್ಯಾಪ್ತಿಗೆ ಬರುವ ಪದಗಳಾದರೂ ಅವುಗಳಿಗೆ ವಿಭಿನ್ನ ಆಯಾಮ ಇದೆ. ದಣಿದಾಗ ಬಿಡುವು ಬೇಕು, ವಿಶ್ರಾಂತಿ ಬೇಕು. ವಿಶ್ರಾಂತಿ ಒಂದು ಹಕ್ಕು ಕೂಡ ಹೌದು. ಆದರೆ, ವಿರಾಮಕ್ಕೆ ಇನ್ನೂ ವಿಶೇಷವಾದ ಆಯಾಮವಿದೆ. “ನನ್ನ ಬಿಡುವನ್ನು ನನಗೆ ಬೇಕಾದ ರೀತಿಯಲ್ಲಿ ಪಡೆಯುವುದು ಅಥವಾ ಅನುಭವಿಸುವುದು. ಇದು ಸರಳವಾದ ವಿಷಯ ಅಲ್ಲ, ಬಹಳ ಸಂಕೀರ್ಣವಾಗಿದೆ. ಒಂದು ರೀತಿಯಲ್ಲಿ ನೋಡಿದರೆ ಬಹಳ ದುಬಾರಿಯೂ ಹೌದು. ಈ ನಿಟ್ಟಿನಲ್ಲಿ ನೋಡುವಾಗ ಮಹಿಳೆಯರಿಗೆ ಎಷ್ಟರಮಟ್ಟಿಗೆ ವಿಶ್ರಾಂತಿ, ವಿರಾಮ ಮನರಂಜನೆ ಸಿಗುತ್ತದೆ – ಅದೂ, ಅವರಿಗೆ ಬೇಕಾದ ರೀತಿಯಲ್ಲಿ?” ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ.

ಈದಿನ.ಕಾಮ್ ಬರಹಗಳನ್ನು ಆಲಿಸಲು ಈ ಲಿಂಕ್ ಕ್ಲಿಕ್ ಮಾಡಿ: 'ಈ ದಿನ' ಕೇಳುದಾಣ

ಮನರಂಜನೆಯ ವಿಷಯ ಬಂದರೆ ಸಾಕು ಮೊದಲಿಗೆ ಬರುವ ಸವಾಲು, “ಮಹಿಳೆಯರು ಧಾರಾವಾಹಿ ಲೋಕದಲ್ಲಿ ಮುಳುಗಿರುತ್ತಾರೆ; ಹೊರಗೆ ದುಡಿಯುವ ಪುರುಷರಿಗಿಂತ ಹೆಚ್ಚು ಆರಾಮವಾಗಿ ಕಾಲ ಕಳೆಯುವುದು ಅವರೇ!” ಎಂಬುದು. ಬಹಳ ಸಾರಿ ಈ ವಿಚಾರ ಬಂದಾಗ ಅಧ್ಯಯನ ಮಾಡಬೇಕು ಅನಿಸುತ್ತದೆ. ಹೀಗೆ ಮೇಲ್ನೋಟಕ್ಕೆ ನೋಡುವಾಗಲೂ ಕೆಲವು ವಿಚಾರಗಳು ಗೋಚರವಾಗುತ್ತವೆ. ಟಿವಿ ನೋಡುವುದು ಹೌದು, ಧಾರಾವಾಹಿ ಕತೆಗಳನ್ನು ತಮ್ಮ ನಡುವೆಯೇ ನಡೆವಂತೆ ಅವುಗಳ ಬಗ್ಗೆ ಮಾತಾಡಿಕೊಳ್ಳುವುದೂ ಹೌದು, ಹಾಗಂತ ಯಾರಿಗಾದರೂ ಮೂರು ಹೊತ್ತಿನ ಊಟಕ್ಕೆ ತೊಂದರೆಯಾಗಿದೆಯೇ? ತಮ್ಮ-ತಮ್ಮ ಕೆಲಸಕ್ಕೆ ಹೋಗುವಾಗ ಕೊಳಕು ಬಟ್ಟೆ ಹಾಕಿಕೊಂಡು ಹೋಗುವಂತಹ ಪರಿಸ್ಥಿತಿ ಬಂದಿದೆಯೇ? ಹಬ್ಬಗಳಲ್ಲಿ ವಿಶೇಷ ಅಡುಗೆಗೆ ಕೊರತೆಯಾಗಿದೆಯೇ? ಮನೆಗೆ ಬಂದವರ ಉಪಚಾರದಲ್ಲಿ ಹೆಚ್ಚೂಕಡಿಮೆಯಾಗಿದೆಯೇ? ಅಂತ ನೋಡಬೇಕು. ಒಂದು ವೇಳೆ ಈ ಕೊರತೆಗಳು ಆಗಿದ್ದರೆ ಮನೆಯೊಳಗೆ ಟಿವಿ ಇಷ್ಟು ಆರಾಮವಾಗಿ ಬಿದ್ದುಕೊಂಡು ಇರುತ್ತಿತ್ತೇ? ಬೀಗ ಬೀಳದೆ ಉಳಿಯುತ್ತಿತ್ತೇ ಎಂಬುದನ್ನು ಯೋಚಿಸಬೇಕು. ಇನ್ನೂ ಒಂದು ವಿಚಾರ; ಮನೆಯಲ್ಲಿ ಪುರುಷರು ಇರುವಾಗ ಟಿವಿಯ ರಿಮೋಟ್ ಯಾರ ಕೈಯಲ್ಲಿ ಇರುತ್ತದೆ ಎಂಬುದನ್ನೂ ಗಮನಿಸಬೇಕು. ಏನೇ ಇರಲಿ, ಸೂಕ್ಷ್ಮವಾಗಿ ಅವಲೋಕಿಸಿದರೆ ಟಿವಿ ವ್ಯವಸ್ಥೆ ಮಹಿಳೆಯರನ್ನು ಮನೆಯೊಳಗೆ ಇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮನರಂಜನೆ ವಿಷಯದಲ್ಲಿ ಬಾಯಿ ಮುಚ್ಚಿಸುವುದಕ್ಕೂ ಅನುಕೂಲವೇ ಆಗಿದೆ. ಒಬ್ಬ ಮಹಿಳೆ ಏನಾದರೂ, “ನನಗೆ ಸೈಕಲ್ ಓಡಿಸೋದು ಬಹಳ ಆಸಕ್ತಿಯ ವಿಚಾರ. ವಾರಕ್ಕೆ ಎರಡು ದಿನಗಳಾದರೂ ನಾನು 25-30 ಕಿಲೋಮೀಟರ್ ಓಡಿಸಬೇಕು, ಆ ದಿನಗಳಲ್ಲಿ ಊಟ-ತಿಂಡಿ ವಿಚಾರಕ್ಕೆ ಸ್ವಲ್ಪ ‘ಅಡ್ಜಸ್ಟ್’ ಮಾಡಿಕೊಳ್ಳಿ,” ಅಂತ ಹೇಳಿದರೆ, ಮನೆಯವರ ಪ್ರತಿಕ್ರಿಯೆ ಹೇಗಿರಬಹುದು?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ವಿರಾಮ
ಸಾಂದರ್ಭಿಕ ಚಿತ್ರ | ಕೃಪೆ: ಪಲ್ಲಬ್ ಸೇತ್

ಅದಕ್ಕಾಗಿಯೇ ಮನೆಯ ವ್ಯವಹಾರಗಳಿಗೆ ಯಾವುದೇ ಧಕ್ಕೆ ಬಾರದಂತೆ – ಯೋಗ, ಧ್ಯಾನ, ಹೊಲಿಗೆ ತರಗತಿಗಳು, ಮನೆ ಪಕ್ಕ ಉದ್ಯಾನವನದಲ್ಲಿ ಇತರೆ ಮಹಿಳೆಯರನ್ನು ಸೇರಿಕೊಂಡು ಮಾಡುವ ಏನೇನೋ ಚಟುವಟಿಕೆಗಳು, ವಾಕಿಂಗ್ ಇತ್ಯಾದಿಗಳನ್ನು ಮನೆಮಂದಿ, ಸಮಾಜ ಒಪ್ಪಿಕೊಳ್ಳುತ್ತಾರೆ. ಈ ಚೌಕಟ್ಟು ದಾಟಿ ಅವಳು ಹೊಸದೇನಾದರೂ ಮಾಡುವ ಅವಕಾಶ ಎಷ್ಟರಮಟ್ಟಿಗೆ ಇದೆ? ಅದಿರಲಿ, ಹಾಗೆ ಮಾಡುವ ಯೋಚನೆ ಹುಟ್ಟುವ ಮನಸ್ಥಿತಿ, ಅವಕಾಶ ಎಷ್ಟರಮಟ್ಟಿಗೆ ಇದೆ? ಮನೆಗೆ ದುಡಿದು ತಂದು ಹಾಕುವ ಅನೇಕಾನೇಕ ಪುರುಷರಿಗೆ ಅವರ ಆಶಯಕ್ಕೆ ತಕ್ಕಂತಹ ವಿರಾಮ ಆರಾಮವಾಗಿ ಸಿಗುತ್ತದೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಆದರೆ, ಅವರು ದುಡಿದು ಮನೆಗೆ ಬಂದಾಗ (ಕುಡಿದು ತೂರಾಡಿಕೊಂಡು ಬಂದರೂ) ಒಂದು ವಿಶೇಷ ಆರೈಕೆ, ಕಾಳಜಿ ಸಿಗುವುದು ಸಾಮಾನ್ಯ ಸಂಗತಿ. ಮನೆಗೆ ಬಂದ ಮೇಲೆ ಒಂದಷ್ಟು ಸಮಯ ತಮಗೆ ಬೇಕಾದ ಹಾಗೆ ವಿರಮಿಸಲು ಅವರು ಯಾರ ಅನುಮತಿಯನ್ನೂ ಪಡೆಯಬೇಕಾಗಿಲ್ಲ. ಅದು ಅವರ ಹಕ್ಕು ಅನ್ನುವ ಹಾಗೆ ಮನೆಯಲ್ಲಿ ಸಿಗುತ್ತದೆ. ಅದೇ ಮಹಿಳೆಯರು ಹೊರಗೆ ದುಡಿಯುತ್ತಿದ್ದರೂ, ಮನೆಗೆ ಬಂದು ಮನೆವಾರ್ತೆಗಳ ನಿಗಾ ವಹಿಸುವುದು ಇದ್ದೇ ಇರುತ್ತದೆ. ಇನ್ನೊಂದು ಅಂಶವೂ ಇದೆ. ಎಷ್ಟೋ ಮಹಿಳೆಯರಿಗೆ ಬೇಕಾದಷ್ಟು ಬಿಡುವು ಇರುತ್ತದೆ. ಸಮಯ ಬಿದ್ದುಕೊಂಡಿರುತ್ತದೆ. ಆದರೆ, ತಮಗೆ ಬೇಕಾದಂತೆ ಆ ಬಿಡುವನ್ನು ಅನುಭವಿಸಲು ಸಿಗುವುದಿಲ್ಲ. ಇವರೆಲ್ಲರಿಗೂ ವಿರಾಮ ಕನಸಿನ ಮಾತಾಗಿಬಿಡುತ್ತದೆ.

ಈ ಆಡಿಯೊ ಕೇಳಿದ್ದೀರಾ?: ಹಳ್ಳಿ ದಾರಿ | ಮುಗುದೆಯರನ್ನು ಮರುಳು ಮಾಡುವ ‘ಕಡ್ಡಾಯ ಸಾಲ’ ಎಂಬ ಮಂಕುಬೂದಿ

ಕೆಲಸಕ್ಕೆ ಹೋಗುವ ಮಹಿಳೆಯರ ಪಾಲಿಗೆ ಕೆಲಸದ ಸ್ಥಳಗಳಲ್ಲೂ ‘ವಿಶ್ರಾಂತಿ’ ಸಿಗುವುದೇ ಕಷ್ಟ. ಅದನ್ನು ಒಂದು ಹಕ್ಕು ಎಂದು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಗಾರ್ಮೆಂಟ್ ಕೆಲಸ ಮಾಡುವ ಮಹಿಳೆಯರಿಗೆ, ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಆರಾಮವಾಗಿ ಶೌಚಾಲಯ ಬಳಸುವುದಕ್ಕೆ, ಮುಟ್ಟಾದಾಗ ಸ್ವಲ್ಪ ಸುಧಾರಿಸಿಕೊಳ್ಳುವುದಕ್ಕೆ ಕೂಡ ಅವಕಾಶ ಇಲ್ಲದಿರುವುದು ನಿಜಕ್ಕೂ ಕಾಳಜಿಯ ವಿಷಯ. ನಿಜವಾಗಿಯೂ ಕಾರ್ಮಿಕ ಚಳವಳಿಗಳ ಬೇಡಿಕೆಯಂತೆ, ‘8 ಗಂಟೆ ಹೊರಗೆ ಕೆಲಸ, 8 ಗಂಟೆ ವಿಶ್ರಾಂತಿ, 8 ಗಂಟೆ ನಮ್ಮ ಇಚ್ಛೆಯಂತೆ ಇರಲು’ ಎಲ್ಲರಿಗೂ ಸಿಗಬೇಕು. ಆದರೆ, ಸಾಮಾನ್ಯವಾಗಿ ಮಹಿಳೆಯರ ಪಾಲಿಗೆ, ಅದರಲ್ಲೂ ಹೊರಗೆ ದುಡಿಯುವ ಮಹಿಳೆಯರ ಪಾಲಿಗೆ, 8 ಗಂಟೆ ಹೊರಗೆ ಕೆಲಸ, 8 ಗಂಟೆ ಮನೆ ಒಳಗೆ ಕೆಲಸ ಇದ್ದೇ ಇರುತ್ತದೆ. ಉಳಿದ 8 ಗಂಟೆ ಒಂದಷ್ಟು ವಿಶ್ರಾಂತಿ. ತಮ್ಮ ಇಚ್ಛೆಯಂತೆ ಕಾಲ ಕಳೆಯಲು ಅವಕಾಶ ಇರುವ ಮಹಿಳೆಯರು ಅದೃಷ್ಟಶಾಲಿಗಳೇ ಸರಿ.

ಯಾವುದೇ ಕೆಲಸವಿರಲಿ, ನಡುನಡುವೆ ಒಂದಿಷ್ಟು ವಿಶ್ರಾಂತಿ, ವಿರಾಮವನ್ನು ನಿರಾಳವಾಗಿ ಅನುಭವಿಸಲು ಸಾಧ್ಯವಾಗಬೇಕು. ಎಲ್ಲ ಕೆಲಸಗಳ ಮರೆತು ಜೀವಕ್ಕೆ ಚೈತನ್ಯ ತುಂಬಿಸಿಕೊಳ್ಳುವ ಸಮಯಾವಕಾಶ ಇರಬೇಕು. ಗೆಳತಿಯರೊಂದಿಗೆ ಪ್ರವಾಸ, ಒಂಟಿಯಾಗಿ ಪ್ರವಾಸ, ಎಲ್ಲವನ್ನೂ ಮರೆತು ಓದುವುದಕ್ಕೆ-ಬರೆಯುವುದಕ್ಕೆ – ಹೀಗೆ ತಮಗನ್ನಿಸಿದ ಚಟುವಟಿಕೆ ಮಾಡುವುದಕ್ಕೆ ಅವಕಾಶ ಸಿಗಬೇಕು. ಖಚಿತ ವೇಳಾಪಟ್ಟಿಯೊಳಗೆ ಬಂಧಿಯಾಗದಂತೆ ನೋಡಿಕೊಳ್ಳುವುದು ಸಾಧ್ಯವಾಗಬೇಕು. ಆಗ ಮಾತ್ರ ಸೃಜನಶೀಲ ಬದುಕು ಮತ್ತಷ್ಟು ಅರಳುವುದು ಸಾಧ್ಯ.

ಮುಖ್ಯ ಚಿತ್ರ – ಸಾಂದರ್ಭಿಕ | ಕೃಪೆ: ಕಾರ್ತಿಕ್ ಜಯರಾಮನ್

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಪೆರಿಯೋಡಿ
ವಾಣಿ ಪೆರಿಯೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಾಮಾಜಿಕ ಕಾರ್ಯಕರ್ತೆ. 'ತರಿಕಿಟ ಕಲಾ ಕಮ್ಮಟ' ಎಂಬ ಸಾಂಸ್ಕೃತಿಕ ವೇದಿಕೆಯ ಉಸ್ತುವಾರಿ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರುದ್ಧ ಒಕ್ಕೂಟದ ಸಕ್ರಿಯ ಸದಸ್ಯೆ. ಲಿಂಗ ಸಂವೇದನೆ, ಸಂವಹನ ಕೌಶಲ್ಯ ಇತ್ಯಾದಿ ವಿಚಾರಗಳ ಮೇಲೆ ತರಬೇತಿ ನಡೆಸುವುದು ಇಷ್ಟದ ಕೆಲಸ.

2 COMMENTS

  1. ಒಂದು ಹೆಣ್ಣು ಅನುಭವಿಸುವ ಕಷ್ಟ , ಅವಮಾನ ಇಲ್ಲಿಯವರೆಗೂ ಯಾವ ಪುರಷನು ಅನುಭವಿಸಿರಲು ಸಾದ್ಯವಿಲ್ಲ ಅನ್ನೊದು ನನ್ನ ಅಭಿಪ್ರಾಯ…….
    ಸಮಾಜದಲ್ಲಿ ಹೆಣ್ಣಿಗಾಗಿ ಹಾಕಿರುವ ಚೌಕಟ್ಟಿನಿಂದ ಅವಳು ಹೊರಗೆ ಬಂದಾಗಲೇ ಗೊತ್ತಾಗೊದು ಹೆಣ್ಣಿಗಿರುವ ಶಕ್ತಿ ಮತ್ತು ಸಾಮರ್ಥ್ಯ…..ಪ್ರತಿಯೊಂದು ಹೆಣ್ಣು ಸ್ವತಂತ್ರವಾಗಿ ಬದುಕುವುದಕ್ಕೆ ಈ ಸಮಾಜ ಯಾವಾಗ ಅವಕಾಶ ಮಾಡಿಕೊಡುವುದಿಲ್ಲ, ಅದನ್ನು ನಾವೇ ಸ್ವತಃ ಸೃಷ್ಟಿಸಿಕೊಳ್ಳಬೇಕು…..
    ತುಂಬಾ ಅದ್ಭುತವಾದ ಬರಹ ಮೇಡಂ

    • ಧನ್ಯವಾದ ಮೇಡಂ. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...