ನಮ್ ಜನ | ಸರ್ಕಾರದ ಗ್ಯಾರಂಟಿಗಳ ಬಗ್ಗೆ ವಯೋವೃದ್ಧೆ ವತ್ಸಲಮ್ಮ ಸಿಟ್ಟಾಗಿದ್ದೇಕೆ?

Date:

"...ಒಬ್ಬರೆ ಅಂದ್ರೆ... ಏನ್ಮಾಡ್ಲಿ? ನನ್ನ ಕರ್ಮ... ಯಾರ್ ಕೇಳ್ತರೆ? ನನ್ನ ಗಂಡ್ ಇದ್ದ, ಪಿ ರಾಜನ್ ಅಂತ. ಸಿನಿಮಾ ಥಿಯೇಟರ್‌ನಲ್ಲಿ ಆಪರೇಟರ್ ಆಗಿದ್ರು. ರಾಜಕುಮಾರ್ ಸಂಬಂಧಿಕ ಗೋವಿಂದರಾಜು ಇದಾನಲ್ಲ, ಅವರ ಥಿಯೇಟರ್‌ನಲ್ಲಿ ಕೆಲಸ ಮಾಡ್ತಿದ್ರು..."

ಮುಖದಲ್ಲಿ ಕಳೆ ಇದೆ, ಕೈಯಲ್ಲಿ ಕೋಲಿದೆ, ಬೆನ್ನು ಬಾಗಿದೆ, ಬಗಲಲ್ಲಿ ಬಟ್ಟೆ ಬ್ಯಾಗ್ ಇದೆ. ಬೊಚ್ಚುಬಾಯಿಯ ಮುದುಕಿ ಬಗ್ಗಿಕೊಂಡೇ ಅಂಗಡಿಯ ಮುಂದೆ ಕೂತಿದ್ದ ವ್ಯಕ್ತಿಯೊಂದಿಗೆ ವಾದ ಮಾಡುತ್ತಿದ್ದಾರೆ. ವಾದ ಮಾಡುವ ವಯಸ್ಸಲ್ಲ, ಕೇಳುವವರೂ ಇರುವುದಿಲ್ಲ. ಆದರೂ, “ಅಲ್ಲಪ್ಪಾ, ಈ ಸರ್ಕಾರದೋರು ಮನೆ ಯಜಮಾನಿಗೆ ಎರಡು ಸಾವ್ರ ಕೊಡ್ತರಂತೆ, ಬಸ್ಸಲ್ಲಿ ಓಡಾಡಕ್ಕೆ ಫ್ರೀಯಂತೆ, ಕರೆಂಟ್ ಬಿಲ್ ಕಟ್ಟಂಗಿಲ್ವಂತೆ. ಇದನೆಲ್ಲ ಎಲ್ಲಿಂದ ತತ್ತರೆ ಅಂತ? ಎಷ್ಟು ಜನಕ್ಕೆ ಅಂತ ಕೊಡಕಾಯ್ತದೆ? ಎಷ್ಟು ದಿನಾಂತ ಕೊಡ್ತರೆ? ಇದ್ಯಾಕೋ ಸರಿಕಾಣದಿಲ್ಲ,” ಎಂದು ತಮ್ಮ ಮನಸ್ಸಿನಲ್ಲಿದ್ದ ತಳಮಳವನ್ನು ಹೊರಹಾಕಿದರು.

ಅಂಗಡಿ ಮುಂದೆ ಕೂತಿದ್ದ ವ್ಯಕ್ತಿಗೂ ಈ ಕಾಂಗ್ರೆಸ್ ಸರ್ಕಾರ ಕೊಡುತ್ತಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಅನುಮಾನವಿತ್ತು. ತಮ್ಮ ಅನುಮಾನ ಮತ್ತು ಅಸಮಾಧಾನವನ್ನು ಮುದುಕಿಯ ಮಾತುಗಳ ಮೂಲಕ ಕೇಳುತ್ತಿರುವುದು ಕಿವಿಗೆ ಇಂಪಾಗಿತ್ತು. ಹಾಗಾಗಿ, ಅವರು ಖುಷಿಯಿಂದ ಕೇಳುತ್ತ, ಮತ್ತಷ್ಟು ಮಾತನಾಡಲು ಮುದುಕಿಯನ್ನು ಹುರಿದುಂಬಿಸುತ್ತಿದ್ದರು.

ಅವರ ಮಾತು-ಕತೆಗೆ ಕಿವಿಯಾದೆ, ಜೊತೆಯಾದೆ. ಅದಕ್ಕೆ ಅವರು, ಇವನ್ಯಾರೋ ಬೇರೆ ಬಂದನಲ್ಲ ಎಂದು ಕೊಂಚ ಅನ್ಯಮನಸ್ಕರಾದರು. ಮಾತು-ಕತೆ ನಿಲ್ಲಿಸಿದರು. “ಯಾಕಜ್ಜಿ…?” ಎಂದರೆ, “ಅವರು ದುಡ್ಡು ಕೊಡ್ತರೆ, ನೀನ್ ಕೊಡ್ತಿಯಾ?” ಎಂದು ಸ್ವಲ್ಪ ಒರಟಾಗಿಯೂ ನೇರವಾಗಿಯೂ ಕೇಳಿದರು. ಕೇಳುವುದು ಅವರ ವೃತ್ತಿಯಾಗಿತ್ತು, ಕೇಳುವ ಸ್ಥಿತಿಯಲ್ಲಿಯೇ ಇದ್ದರು. ಅದನ್ನು ಸೂಕ್ಷ್ಮವಾಗಿ ಗಮನಿಸಿ, “ಕೊಡೋಣ ಬನ್ನಿ ಅಜ್ಜಿ…” ಎಂದು ಒಂದಷ್ಟು ಕೊಟ್ಟೆ. ಅವರ ಹಾವ-ಭಾವವೇ ಬದಲಾಯಿತು. ಅಲ್ಲಿಯೇ ಅಂಗಡಿ ಮುಂದಿನ ಜಾಗದಲ್ಲಿ ಕೂತು ಮಾತನಾಡಿದರು. “ಏನೋ ನಿಮ್ಮಂಥೋರಿಂದ ಬದುಕು ನಡೀತದೆ. ಈ ಅಂಗಡಿ ಇದೆಯಲ್ವಾ, ಅವರತ್ರ ಆಗಾಗ ಬರ್ತಿನಿ, ಅಕ್ಕಿ-ಬೇಳೆ ಕೊಡ್ತರೆ, ದುಡ್ಡು ಕೊಡ್ತರೆ ಹೆಂಗೋ ಆಗ್ತದೆ…” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಈ ಆಡಿಯೊ ಕೇಳಿದ್ದೀರಾ?: ರಂಗ ನಿರ್ದೇಶಕ ಲಕ್ಷ್ಮಣ್ ಕೆ ಪಿ ಸಂದರ್ಶನ | ‘ಅವತ್ತು ಥಟ್ಟನೆ ಅಳು ಬಂದು ಗಾಂಧಿಯ ವೇಷ ಕಿತ್ತು ಬಿಸಾಡಿಬಿಟ್ಟಿದ್ದೆ!’

“ಎಲ್ಲಿಂದ ಬರ್ತಿರಾ? ಏನ್ ಕತೆ ನಿಮ್ದು…?” ಎಂದೆ.

“ಅಯ್ಯೋ… ನನ್ ಕತೆ ಕೇಳು… ಅದೊಂದು ರಾಮಾಯ್ಣ. ಕತೆ ಕೇಳಿ ಏನ್ಮಾಡ್ತಿಯ? ನನ್ ಕತೆ ಯಾರಿಗ್ಬೇಕು? ಯಾರ್ ಏನ್ ಕೊಡ್ತರೆ?” ಎಂದ ಅವರ ಕಾಳಜಿ ಕೊಡುವುದರ ಬಗ್ಗೆಯೇ ಇತ್ತು.

ನನ್ನ ವೃತ್ತಿ ವಿವರಿಸಿ, “ನೋಡೋಣ… ಯಾರಾದ್ರು ಏನಾದ್ರು ಸಹಾಯ ಮಾಡಬಹುದು…” ಎಂದೆ.

“ನೋಡಪ್ಪ… ನನ್ನ ಹೆಸರು ವತ್ಸಲಾ ಅಂತ. ನನಗೀಗ 87 ವರ್ಷ. ಕಣ್ಣು ಕಾಣ್ತದೆ. ಕೈ-ಕಾಲು ಗಟ್ಟಿಯಾಗವೆ. ಓಡಾಡಕ್ಕೂ ಆಯ್ತದೆ. ದೇವರ ದಯೆಯಿಂದ ಕಾಯ್ಲೆ-ಕಸಾಲೆ ಏನೂ ಇಲ್ಲ. ಕೈಯಲ್ಲೊಂದು ಕೋಲು ಇಟ್ಕಂಡಿದೀನಿ, ಊರ್ಕೊಂಡ್ ತಿರಗಾಡ್ತಿನಿ. ಶಂಕರಮಠದತ್ರ ಮನೆ. ಅದಕ್ಕೆ ಒಂದೂವರೆ ಸಾವಿರ ಬಾಡಿಗೆ. ಅಲ್ಲಿಂದ ಹರಿಶ್ಚಂದ್ರ ಘಾಟ್‌ವರೆಗೆ ನಡಕಂಡೇ ಬತ್ತಿನಿ. ನನ್ಗೊತ್ತಿರೋ ಇಂಥ ಅಂಗಡಿಯೋರು ಅದು-ಇದು ಕೊಡ್ತರೆ, ಕೆಲವ್ರು ಕಾಸು ಕೊಡ್ತರೆ. ಹೆಂಗೋ ಜೀವನ ನಡೀತಿದೆ ಕಣಪ್ಪಾ…” ಎಂದರು.

“ಮನೆಯಲ್ಲಿ ಯಾರ್‍ಯಾರಿದ್ದೀರಿ?” ಎಂದೆ.

“ನಿಂದೊಳ್ಳೆ ಕತೆಯಾಯ್ತು… ಮನೇಲಿ ಜನ ಇದ್ರೆ ನಾನ್ಯಾಕೆ ರೋಡಿಗೆ ಬತ್ತಿದ್ದೆ! ಯಾರೂ ಇಲ್ಲ… ಒಬ್ಬಳೆ ಇದೀನಿ, ದೆವ್ವಿದ್ದಂಗೆ…” ಎಂದರು.

“ಒಬ್ಬರೇನಾ… ಈ ವಯಸ್ನಲ್ಲಿ? ಹೆಂಗಿದೀರಾ?” ಎಂದೆ.

ವತ್ಸಲಮ್ಮ
ವತ್ಸಲಮ್ಮನವರೊಂದಿಗೆ ಲೇಖಕರು

“ಒಬ್ಬರೇ ಅಂದ್ರೆ ಏನ್ಮಾಡ್ಲಿ? ನನ್ನ ಕರ್ಮ. ಯಾರ್ ಕೇಳ್ತರೆ? ನನ್ನ ಗಂಡ್ ಇದ್ದ, ಪಿ ರಾಜನ್ ಅಂತ. ಸಿನಿಮಾ ಥಿಯೇಟರ್‌ನಲ್ಲಿ ಆಪರೇಟರ್ ಆಗಿದ್ರು. ರಾಜಕುಮಾರ್ ಸಂಬಂಧಿಕ ಗೋವಿಂದರಾಜು ಇದಾನಲ್ಲ, ಅವರ ಥಿಯೇಟರ್‌ನಲ್ಲಿ ಕೆಲಸ ಮಾಡ್ತಿದ್ರು. ನಮ್ಗೆ ಮೂರು ಜನ ಗಂಡುಮಕ್ಕಳು. ಅವರೂ ದುಡೀತಿದ್ರು, ನಾವೂ ದುಡೀತಿದ್ದೊ. ಮೂರು ಜನಕ್ಕೂ ಹೆಂಗೋ ಕಷ್ಟಬಿದ್ದು ಮದುವೆ ಮಾಡ್ದೊ. ಮಕ್ಕಳೂ ಆದೋ. ನಮ್ಮನೆ ನಂದನವನದ ಥರ ಇತ್ತು. ಹಿಂಗಿರುವಾಗಲೇ ನಮ್ ಯಜಮಾನರು ತೀರಿಹೋದರು. ಅವರು ಕೆಲಸ ಮಾಡ್ತಿದ್ದ ಆಫೀಸಿನಿಂದ ಅವರ ಹೆಣದ ಮೇಲೆ ಒಂದು ಹೂವಿನ ಹಾರ ಬಂದು ಬಿತ್ತು; ಅಷ್ಟು ಬಿಟ್ಟರೆ ಬೇರೇನೂ ಬರಲಿಲ್ಲ. ಹೆಂಗೋ ಮಕ್ಕಳಿದ್ರಲ್ಲ, ಸಂಸಾರ ಸಾಗ್ತಿತ್ತು. ಆಮೇಲೆ ಅದೇನಾಯ್ತೊ, ನನ್ನ ಮೂರು ಜನ ಗಂಡುಮಕ್ಕಳೂ ಒಬ್ಬರಿಂದೊಬ್ರು ತೀರಿಕೊಂಡರು. ಬುಂಡೆ ಮೇಲೆ ಬಂಡೆಕಲ್ ಬಿದ್ದಂಗಾಯ್ತು. ಮನೆ ತುಂಬಾ ಮಕ್ಕಳು… ಮೂರು ಜನ ಸೊಸೆಯಂದ್ರು. ಎಷ್ಟು ದಿನಾಂತ ಸುಮ್ಮನಿರದು? ಒಬ್ಬೊಬ್ರು ಒಂದೊಂದು ಕೆಲಸ ಹುಡಿಕ್ಕಂಡು ತಿರಗ್ದೊ. ಇದ್ದಾಗೇನು ಉಂಡುಟ್ಟು ಮೆರೆದವರಲ್ಲ ನಾವು. ಆಗಲೂ ಬಾಡಿಗೆ ಮನೇಲೆ ಇದ್ದೋ… ಆದರೆ ಆಗ ಮನೆಗೆ ಯಜಮಾನ್ರು ಅಂತಿದ್ರು, ಗಂಡಸ್ರು ಇದ್ರು, ಈಗ ಬರೀ ಹೆಂಗಸರೇ…” ಎಂದು ಮುಖ ಇಳಿಬಿಟ್ಟರು.

ದುಃಖ ಒತ್ತರಿಸಿ ಬಂದಿತ್ತು. ಸೆರಗಿನಿಂದ ಕಣ್ಣೊರಿಸಿಕೊಂಡು ಮೌನಕ್ಕೆ ಜಾರಿದರು. ನನ್ನ ಈ ದಿಕ್ಕೆಟ್ಟ ಕತೆ ಕೇಳುವವರು ಯಾರೂ ಇಲ್ಲ, ಹೇಳುವ ಅನಿವಾರ್ಯತೆಯೂ ಇಲ್ಲ ಎಂದು ಅವರ ಪಾಡಿಗೆ ಅವರು ಇದ್ದರು. ಅವರನ್ನು ಅಷ್ಟಕ್ಕೇ ಬಿಡದೆ, “ಮುಂದೇನಾಯ್ತು?” ಎಂದೆ.

ಈ ಆಡಿಯೊ ಕೇಳಿದ್ದೀರಾ?: ಫೇಸ್‌ಬುಕ್‌ನಿಂದ | ಕೇರಳದ ಅಡಿಕೆ ಕಳ್ಳ ರಾಜು ಮತ್ತು ಉಜಿರೆಯ ಸೌಜನ್ಯ ಕೊಲೆ ಪ್ರಕರಣ

“ಆಮೇಲೆ ಆಗಿದ್ದು… ಮೂರು ಜನ ಸೊಸೆದಿರುವೆ ಕೆಲಸ ಹುಡಿಕ್ಕಂಡ್ರಾ… ಕೈಯಲ್ಲಿ ಕಾಸಾಡಕೆ ಸುರುವಾಯ್ತಾ… ಒಬ್ಬೊಬ್ಬರೇ ಮನೆ ಬಿಟ್ಟು ಬೇರೆ ಮನೆ ಮಾಡ್ಕೊಂಡು ಹೋದ್ರು. ತುಂಬಿದ ಮನೆ ಕೆಲವೇ ತಿಂಗಳಲ್ಲಿ ಖಾಲಿಯಾಯ್ತು. ಒಬ್ಬಳೇ ಕಾಗೆ ಥರ ಕೂತು ಕಾ ಕಾ ಅಂದ್ರೂ, ಸತ್ಲಾ-ಕೆಟ್ಲಾ ಅಂತ ಕೇಳೋರೂ ಇಲ್ಲದಂಗಾಯ್ತು. ನಾನೇ ಮರ್ಯಾದಿ ಬಿಟ್ಟು ಸೊಸೆ ಮನೆಗೆ ಹೋದೆ. ಎರಡು ದಿನಾ ಕಳೆದಿಲ್ಲ, ಶುರುವಾಯ್ತು ಗೊಣಗಾಟ. ಅಲ್ಲಿಂದ ಇನ್ನೊಬ್ಬಳ ಮನೆಗೋದೆ, ಅಲ್ಲೂ ಅದೇ ಕತೆ. ಕೊನೆಗೊಂದ್ ತೀರ್ಮಾನಕ್ಕೆ ಬಂದೆ… ಅವರಗ್ಯಾಕ್ ಕಷ್ಟ ಕೊಡಬೇಕು, ಅವರಿಗೆ ಅವರ ಬದುಕೇ ದೊಡ್ದು, ಹೆಂಗೋ ಎಲ್ಲೋ ಚೆನ್ನಾಗವರಲ್ಲ, ಅಷ್ಟೇ ಸಾಕು ಅಂತ. ಅವತ್ತಿಂದ್ಲೆ ಯಾರ ಮನಿಗೂ ಹೋಗಬಾರದು ಅನ್ನಕಂಡೆ,” ಎಂದರು.

“ಊಟ-ತಿಂಡಿಗೆಲ್ಲ…?” ಎಂದು ಮಾತು ಮುಂದುವರಿಸಿದೆ.

“ಮನೆಯತ್ರ ಇದ್ದ ಹೋಟ್ಲುಗೋದೆ, ಪಾತ್ರೆ ತೊಳಕೊಡ್ತಿನಿ ಅಂದೆ. ಆ ಪುಣ್ಮಾತ್ಮ ಅಡಿಯಿಂದ ಮುಡಿಯವರೆಗೆ ನೋಡಿದ. ಏನನ್ನಿಸಿತೋ, ಆಗಲಿ ಅಂದ. ಮೂರೊತ್ತು ಊಟ-ತಿಂಡಿಗೇನೂ ಕೊರತೆಯಾಗಲಿಲ್ಲ. ಆದರೆ ನಾನು ಮುದುಕಿ, ವ್ಯಾಪಾರದ ಭರಾಟೆಗೆ ತಕ್ಕನಾಗಿ ತೊಳಕೊಡೋದು ಆಗಲಿಲ್ಲ. ನನಗೂ ಸುಮ್ಮನೆ ತಿಂಡಿ ತಿನ್ನದು ಸರಿಬರಲಿಲ್ಲ. ಕೊನೆಗೊಂದು ದಿನ ಕೆಲಸ ಬಿಟ್ಟೆ…” ಎಂದು ನಿಟ್ಟುಸಿರು ಬಿಟ್ಟರು.

“ಮತ್ತೆ ಮನೆ ಬಾಡಿಗೆಯೆಲ್ಲ ಹೆಂಗ್ ಕಟ್ಟಿದ್ರಿ?” ಎಂದೆ.

“ನೀನೊಳ್ಳೆ… ಪುಡಿಗಾಸ್ ಕೊಟ್ಟು ಪುರಾಣನೇ ಕೇಳ್ತಿಯಲ್ಲ!” ಎಂದು ಸಿಟ್ಟಾದರು.

“ಏನ್ ಅಜ್ಜಿ… ಸಿಟ್ಟಲ್ಲೂ ಸುಂದರಿ ಥರ ಕಾಣ್ತೀರಿ…” ಎಂದಿದ್ದಕ್ಕೆ ಬೊಚ್ಚು ಬಾಯಿಯಲ್ಲಿ ನಕ್ಕರು. “ನಿಮ್ಮ ಕತೇನಾ ಓದಿ, ಯಾರಾದ್ರು ಸಹಾಯ ಮಾಡುದ್ರೆ ಒಳ್ಳೆದಲ್ವೇ?” ಎಂದೆ.

“ಅಯ್ಯೋ ನೀನು… ಈ ಕಾಲದಲ್ಲಿ ಸಹಾಯ ಮಾಡೋರು ಅವರಾ? ಕೆಲಸ ಬಿಟ್ಟೆ ಅಂದ್ನಲ್ಲ, ಆಮೇಲೆ ಏನ್ಮಾಡದೆ ಗೊತ್ತಾ? ಮನೆ ಹತ್ರ ಇದ್ದ ದೇವಸ್ಥಾನದ ಮುಂದೆ ಕೂತ್ಕಂಡೆ. ಹೋಗಿ ಬರೋರು ನನ್ನ ನೋಡಿ, ಒಂದಷ್ಟು ಭಿಕ್ಷೆ ಹಾಕರು. ಪುರೋಹಿತರು ಪ್ರಸಾದ ಕೊಡೋರು. ದೇವಸ್ಥಾನಕ್ಕೆ ಬಂದೋರು ಸ್ವಲ್ಪ ಮನುಷ್ಯರಾಗಿರ್ತರೆ, ದಾನ-ಧರ್ಮ ಮಾಡ್ತರೆ, ಹತ್ತನ್ನೊಂದು ಗಂಟೆವರೆಗೂ ಅದಾಯ್ತ… ಆಮೇಲೆ ಈ ಕಡೀಕ್ ಬತ್ತಿನಿ. ಈ ಅಂಗಡಿಯೋರು ಅಕ್ಕಿ-ಬೇಳೆ ಕೊಡ್ತರೆ, ಒಂದೊಂದಿನ ಕಾಸು ಕೊಡ್ತರೆ, ಹಿಂಗೇ ಹೆಂಗೋ ದಿನ ದೂಡ್ತಿದೀನಿ… ಹರಿಶ್ಚಂದ್ರ ಘಾಟ್ಗೆ ಯಾವತ್ತೋಯ್ತಿನೋ ಗೊತ್ತಿಲ್ಲ… ಕಾಯ್ತಿದೀನಿ ಕರಕತಾಯಿಲ್ಲ,” ಎಂದು ದೇವರಿಗೂ ಬಯ್ದರು.

“ವಯಸ್ಸಾದವರಿಗೆ ಸರ್ಕಾರ ವೃದ್ಧಾಪ್ಯ ವೇತನ, ಪಿಂಚಣಿ ಕೊಡ್ತದಲ್ಲ… ಏನೂ ಬರಲ್ವಾ ಅಜ್ಜಿ?” ಎಂದೆ.

“ಬತ್ತದೆ ಕಣಪ್ಪಾ… ಕೊಡೋ ಸಾವಿರದ ಇನ್ನೂರು ರೂಪಾಯಿಗೆ ಸಾವರ ಸಲಾನೆ ತಿರಗಸ್ತರೆ. ಈಗ ಅದಕ್ಕೂ ಏನೋ ಪಾನ್ ಕಾರ್ಡು, ಆಧಾರ್ ಕಾರ್ಡು ಕೊಡಬೇಕಂತೆ. ಅದೂ ಬಂದ್ ಆಗಲೇ ಎರಡು ತಿಂಗಳಾಯ್ತು. ಕೇಳಿದ್ರೆ, ಆಗ-ಈಗ ಅಂತರೆ. ಮುದುಕಿ ಬೇರೆ, ಎಲ್ಲೂ ಹೋಗಕಾಗದಿಲ್ಲ. ಯಾರ್‍ನೂ ಕೇಳಕ್ಕಾಗದಿಲ್ಲ. ಹಂಗಂತ ನಾನ್ ಸುಮ್ಮಿನಿರದಿಲ್ಲ. ದಿನಾ ಕೇಳ್ತಿನಿ, ಅವನು ಬಂದಿಲ್ಲ ಅಂತನೆ…” ಎಂದರು.

ಈ ಆಡಿಯೊ ಕೇಳಿದ್ದೀರಾ?: ಹೊಸ ಓದು | ಗುರುಪ್ರಸಾದ್ ಕಂಟಲಗೆರೆ ಅವರ ‘ಟ್ರಂಕು ತಟ್ಟೆ’ ಪುಸ್ತಕದ ಆಯ್ದ ಭಾಗ

“ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಐದು ಗ್ಯಾರಂಟಿಗಳನ್ನು ಜನರಿಗೆ ಕೊಟ್ಟಿದೆ. ನಿಮಗೆ ಅನುಕೂಲ ಆಗಲ್ವಾ?” ಎಂದೆ.

“ಪಿಂಚಣಿನೇ ಬಂದಿಲ್ಲಾಂದ್ರೆ ಈ ಗ್ಯಾರಂಟಿಗಳೆಲ್ಲ ಎಲ್ಲಿಂದ ಬತ್ತವಪ್ಪಾ. ನನ್ನ ಬಾಯಿಂದ ಏನೇನೋ ಹೇಳಿಸಬೇಡ… ನನ್ಗೆ ಕ್ಯಟ್ ಕ್ವಾಪ ಬಂದ್ ಬಯ್ದ್ರೆ ಬೇಜಾರು ಮಾಡ್ಕಬೇಡ. ಬೇಕಾದ್ರೆ ಕೊಟ್ಟಿರೋ ಕಾಸ್ನ ವಾಪಸ್ ಕೊಡ್ತಿನಿ, ಸುಮ್ನೆ ಹೋಗಬುಡು…” ಎಂದು ಮತ್ತೆ ಸಿಟ್ಟಾದರು.

87ರ ಹರೆಯದ ವತ್ಸಲಮ್ಮ ಬದುಕಿನುದ್ದಕ್ಕೂ ಬಡತನವನ್ನೇ ಹಾಸಿ ಹೊದ್ದವರು. ಬದುಕಿನ ಬಿರುಗಾಳಿಗೆ ಸಿಕ್ಕಿ ತರಗೆಲೆಯಂತಾದವರು. ಯಾವತ್ತು ಬೇಕಾದರೂ ಬಿದ್ದುಹೋಗಬಹುದು. ಸರ್ಕಾರದ ಯೋಜನೆಗಳು ನಿಜವಾಗಿಯೂ ತಲುಪಬೇಕಾದ್ದು ಇಂತಹ ಬಡವರಿಗೆ, ನಿರ್ಗತಿಕರಿಗೆ. ಆ ಯೋಜನೆಗಳ ಉದ್ದೇಶವೂ ಅದೇ. ಆದರೆ, ನಮ್ಮ ರಾಜಕೀಯ ನಾಯಕರು, ಅಧಿಕಾರಿಗಳು, ಮಾಧ್ಯಮಗಳು ಹಾಗೂ ಸಾಮಾಜಿಕ ವ್ಯವಸ್ಥೆ- ನಮ್ಮ ಸವಲತ್ತುಗಳ ಬಗ್ಗೆ ನಾವೇ ಲಘುವಾಗಿ ನೋಡಿ ಲೇವಡಿ ಮಾಡುವಂತೆ ಮಾಡಿದೆ. ಉಳ್ಳವರು ಕುಹಕವಾಡಿದರೆ, ಸಹಿಸಿ ಸಾಕಾಗಿಹೋಗಿರುವ ಬಡವರು ಸಿನಿಕರಾಗುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಹಸಿವಿಗಾಗಿ ಪ್ರತಿನಿತ್ಯ ಬೇಡುವ, ಪ್ರತಿಕ್ಷಣವೂ ಅವಮಾನಕ್ಕೊಳಗಾಗುವ ವಯೋವೃದ್ಧೆ ವತ್ಸಲಮ್ಮನ ಮಾತು ವರಾತವೆನಿಸಿದರೆ, ಅದು ಸಂವೇದನಾರಹಿತ ಸಮಾಜದ ಪ್ರತಿಬಿಂಬ.

ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...