ಹಳ್ಳಿ ದಾರಿ | ತಲೆ ಎತ್ತಿ ನಡೆದ ಹಳ್ಳಿಯ ಮಹಿಳೆಯರನ್ನು ಸಾಲದ ಸುಳಿಗೆ ಸಿಲುಕಿಸಿ ಮಕಾಡೆ ಬೀಳಿಸಿದ ದುರಂತ ಕತೆ

Date:

ಹುಸೇನಮ್ಮನ ಸೊಸೆ ದಾವಲ್ ಬೀ ಇಂದು ಮಂದಿಯ ಕಣ್ತಪ್ಪಿಸಿ ಮುದುರಿಕೊಂಡು ಓಡುತ್ತಿದ್ದಾಳೆ. ಹಿಂದಿನ ಓಣಿಯ ಮಂಜುಳಾ ಕಾಣೆಯಾಗಿ ತಿಂಗಳಾದವು. ಪಕ್ಕದ ಹಳ್ಳಿಯಲ್ಲಿ ರೇಣುಕಾ ನೇಣು ಹಾಕಿಕೊಂಡಿದ್ದಾಳೆಂದು ಸುದ್ದಿ ಇದೆ... ಇಂತಹ ಆಘಾತಕಾರಿ ಸನ್ನಿವೇಶ ಸೃಷ್ಟಿಯಾಗಿದ್ದು ಹೇಗೆ?

ನನಗೆ ಬಹಳ ಚೆನ್ನಾಗಿ ನೆನಪಿದೆ. ಹುಸೇನಮ್ಮ, ಪಾರೋತಿ ಅಕ್ಕ ಬಗಲಲ್ಲಿ ಫೈಲ್ ಹಿಡಿದು ಹೊರಟರೆ ಓಣಿಯ ಮಂದಿಯೆಲ್ಲ ಕಟ್ಟೆಯ ಮೇಲೆ ಬಂದು ಕೂಡ್ರುತ್ತಿದ್ದರು ನೋಡಲು! ಅದೇನು ಠೀವಿ ಅವರ ನಡಿಗೆಯಲ್ಲಿ, ಅದೆಷ್ಟು ಆತ್ಮವಿಶ್ವಾಸ ಅವರ ಮೊಗದಲ್ಲಿ. “ಆತು ಬಿಡು… ಇವರಿನ್ನು ಸೆರಗಿಗೆ ಪಿನ್ನು ಸಿಕ್ಕಿಸಿ ಫೈಲ್ ಹಿಡ್ಕಂಡು ಹೊರಟ್ರಂದ್ರೆ, ಒಂದಿನ ಡಿ.ಸಿಯೇ ಆಗಿಬಿಡ್ತಾರೋ ಏನೋ…” ತಮ್ ತಮ್ಮಲ್ಲೇ ಗಂಡಸರು ಮಾತಾಡಿಕೊಳ್ಳುತ್ತಿದ್ದರೂ, ಅದು ಪಿಸುಮಾತು ಮಾತ್ರವಾಗಿತ್ತು. ಆದರೂ ಅವರು ಹಾಗೆ ಮಾತಾಡಿಕೊಳ್ಳುತ್ತಿದ್ದಾರೆಂದು ಇವರಿಗೂ ಗೊತ್ತು, ಊರಲ್ಲಿ ಎಲ್ಲರಿಗೂ ಗೊತ್ತು.

ಗಂಡಸರು ಹಾಗೆ ಪಿಸುಗುಟ್ಟುವುದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಆ ಹೆಣ್ಣುಮಕ್ಕಳ ಆತ್ಮವಿಶ್ವಾಸದ ನಡಿಗೆ, ಮಾತು, ಅವರ ಕಾರ್ಯಚಟುವಟಿಕೆಗಳು ಅಂತಹ ನಂಬಿಗೆಯನ್ನು ಇಡೀ ಸಮಾಜದಲ್ಲಿ ಉಂಟುಮಾಡಿದ್ದವು. ಅಂತಹ ದಿನಗಳವು. ಬಾಲ್ಯ ವಿವಾಹಗಳು ಓಣಿ ಓಣಿಗೆ ಜರುಗುತ್ತಿದ್ದ, ಹೆಣ್ಮಕ್ಕಳು ಎಂದೂ ಮನೆಯ ಹೊರಗೆ ಕಾಲಿಡದ, ತಲೆ ತುಂಬ ಸೆರಗು ಹೊದ್ದೇ ಮಂದಿ ಜೊತೆ ಮಾತಾಡುತ್ತಿದ್ದ ಆ ದಿನಗಳಲ್ಲಿ ಒಂದೊಂದೇ ಹಳ್ಳಿಗಳಲ್ಲಿ ಸ್ವಸಹಾಯ ಸಂಘಗಳು ಕುಡಿಯೊಡೆಯುತ್ತಿದ್ದವು. ಮನೆಗೆಲಸವೆಲ್ಲ ಮುಗಿದು, ರಾತ್ರಿ ಗಂಡ-ಮಕ್ಕಳು ಮಲಗಿದ ಮೇಲೆ ಹೆಣ್ಮಕ್ಕಳಿಗೆ ಕುಳಿತು ಮಾತಾಡಲು, ಸಂಘ ಕಟ್ಟಲು ಈ ಸ್ವಸಹಾಯ ಸಂಘಗಳು ಅವಕಾಶದ ಬಾಗಿಲು ತೆರೆದಿದ್ದವು. ಹಾಗಂತ ಅದೇನೂ ಸುಲಭವಾದ ಕೆಲಸವಾಗಿತ್ತು ಅಂದ್ಕೋಬೇಡಿ. ರಾಜ್ಯಾದ್ಯಂತ, ದೇಶಾದ್ಯಂತ ನೂರಾರು ಸಂಘ-ಸಂಸ್ಥೆಗಳು ಅನಾದಿ ಕಾಲದಿಂದ ಮುಚ್ಚಿಯೇ ಇದ್ದ ಆ ಬಾಗಿಲುಗಳನ್ನು ಬಲು ಕಷ್ಟದಿಂದ ಅತ್ತ ಸರಿಸಿದ್ದವು.

ಈ ಆಡಿಯೊ ಕೇಳಿದ್ದೀರಾ?: ಹಳ್ಳಿ ದಾರಿ | ಉದ್ಯೋಗ ಖಾತ್ರಿ; ಮೊಬೈಲ್ ಬಳಕೆ ವಿಷಯದಲ್ಲಿ ಜೂಟಾಟ ಆಡುತ್ತಿರುವ ಸರ್ಕಾರಗಳು

ಇವರು ತಮ್ಮ ಕೈಲಿರೋ ಮೂರ್ಕಾಸನ್ನೇ ಉಳಿತಾಯ ಮಾಡ್ತಾರೆ, ಸಾಲ ತಗೊಂಡು ಬರ್ತಾರೆ ಎಂಬುದು ತಿಳಿಯುತ್ತಲೇ ಮನೆಗಳಿಂದ ಪ್ರತಿರೋಧ ಕಡಿಮೆಯಾಗಿತ್ತು. ಮನೆಯ ಹಿರಿಯ ಹೆಂಗಸರೇ ಸಂಘಗಳನ್ನು ಮುನ್ನಡೆಸಿದರು. ಬೆಳ್ಳಾಂಬೆಳತನಕ ಕುಳಿತು ಸೋಬಾನೆ ಪದ ಹಾಡುವುದು, ಅದೂ ಇದೂ, ಅವಳ ಕಷ್ಟಕ್ಕೆ ಕಿವಿಯಾಗಿ, ಇವಳ ಕಣ್ಣೀರಿಗೆ ಹೆಗಲಾಗಿ ಹೆಣ್ಣ್ಮಕ್ಕಳು ಮೀಟಿಂಗ್ ಮಾಡುತ್ತಿದ್ದರು. ಅಲ್ಲಿಂದೆದ್ದು ಸೀದಾ ಬಾಗಿಲಿಗೆ ನೀರಿಕ್ಕಲು, ಒಲೆ ಹೊತ್ತಿಸಿ ಚಾಕ್ಕಿಡಲು, ಕೊಟ್ಟಿಗೆಗೆ ಸಗಣಿ ಬಳಿಯಲೇ ಹೋಗಬೇಕಿತ್ತೇ ಹೊರತು ಹಾಸಿಗೆಯತ್ತ ಸುಳಿಯುವಷ್ಟು ಸಮಯವಿರುತ್ತಿರಲಿಲ್ಲ. ನಿದ್ದೆಗೆಟ್ಟಿದ್ದರೂ ಮರುದಿನದ ಕೆಲಸಗಳಲ್ಲಿ ಒಂದು ಗೆಲುವಿತ್ತು, ಕೈಯಲ್ಲಿನ ಕಸಬರಿಗೆ ಕುಣಿಕುಣಿದು ಸೋಬಾನೆ ಪದ ಗುಣುಗುಣಿಸುತ್ತಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಂದು ನೀವು ನಗಬಹುದು ಅಂದಿನ ಉಳಿತಾಯದ ಮೊತ್ತ ಕೇಳಿ – ಎರಡು ರೂಪಾಯಿ! ಕೇವಲ ಎರಡು ರೂಪಾಯಿಗಳಿಂದ ಉಳಿತಾಯ ಆರಂಭಿಸಿದ ಸಂಘಗಳಿವೆ. ಹಿರಿಯ ಮಹಿಳೆಯೊಬ್ಬಳ ಬಳಿ ಎಲ್ಲರ ಉಳಿತಾಯದ ಹಣದ ಗಂಟನ್ನಿಟ್ಟು, ಒಬ್ಬ ಬರಹ ಬಲ್ಲವಳಿಂದ ಬರೆಸಿಟ್ಟು, ಬಹಳ ಹೊತ್ತು ಚರ್ಚೆಯಾಗಿ ಎಲ್ಲರ ಒಪ್ಪಿಗೆ ಇದ್ದಾಗ ಮಾತ್ರ ಹಣದ ಅತಿ ಹೆಚ್ಚು ಅವಶ್ಯಕತೆ ಇದ್ದವಳಿಗೆ ಸಾಲ ಕೊಡಲಾಗುತ್ತಿತ್ತು.

ವಾಟ್ಸಪ್ ಭಾಷೆಯಲ್ಲಿ ಹೇಳುವುದಾದರೆ ವೈರಲ್ ಆಯಿತು ನೋಡಿ ಅದು. “ನಮ್ದೂ ಒಂದು ಸಂಗಾ ಮಾಡ್ರೀ. ನಾವೂ ಸಂಘ ಕಟ್ತೀವಿ ಹೇಳ್ಕೊಡ್ ಬರ್ರಿ…” ಕಾರ್ಯಕರ್ತರಿಗೆ ಇನ್ನಿಲ್ಲದ ಕರೆ. ಒಂದೇ ಸಾರಿ ಎಲ್ಲೆಡೆ ಬೀಜ ಬಿತ್ತಿದ್ದಂತೆ, ಹದವಾಗಿ ಮಳೆ ಬಂತೋ ಎಂಬಂತೆ ಚಿಗುರಿದವು… ಚಿಗುರಿದವು… ಚಿಗುರಿದವು ಓಣಿಗೊಂದೊಂದು ಸಂಘ. ಒಂದೊಂದು ಊರಲ್ಲೂ ಹತ್ತು-ಹನ್ನೆರಡು-ಹದಿನೈದು ಸಂಘಗಳು.

ಸಾಲ
ಸಾಂದರ್ಭಿಕ ಚಿತ್ರ

ರಾಜ್ಯದ ತುಂಬ, ದೇಶದ ತುಂಬ ಮಹಿಳೆಯರ ಸಂಘಗಳು ಬೆಳೆಯುತ್ತ, ಹಬ್ಬುತ್ತ ಹೋದಂತೆ ಸಂಘ ರಚನೆ ಮಾಡಿದವರಿಗೆ ಮುಂದಿನ ಹೆಜ್ಜೆಯಾಗಿ ಅವರ ಉಳಿತಾಯದ ಹಣವನ್ನು ಬ್ಯಾಂಕಲ್ಲಿ ಇಡಬೇಕೆಂಬ ಹೊಸ ಯೋಜನೆ. ಆದರೆ, ಬ್ಯಾಂಕುಗಳಲ್ಲಿ ಮಹಿಳೆಯರಿಗೆಲ್ಲಿ ಪ್ರವೇಶ? ಮಹಿಳೆಯರ ಹೆಸರಲ್ಲಿ ಖಾತೆ ತೆರೆಯಲು ಒಪ್ಪುವ ಬ್ಯಾಂಕು ಒಂದೂ ಇಲ್ಲ. ಬ್ಯಾಂಕಿನ ನಿಯಮಗಳು ಅದಕ್ಕವಕಾಶವನ್ನೇ ಕೊಡುವುದಿಲ್ಲ. ಆಸ್ತಿ, ಮನೆ ಯಾವೊಂದೂ ಮಹಿಳೆಯರ ಹೆಸರಲ್ಲಿ ಇಲ್ಲದಾಗ ಅವರ ಹೆಸರಲ್ಲಿ ಖಾತೆ ತೆರೆಯಲು ಬರುವುದಿಲ್ಲ.

“ಸರಿ… ವೈಯಕ್ತಿಕ ಹೆಸರಲ್ಲಿ ಖಾತೆ ತೆರೆಯದಿದ್ದರೆ ಅಷ್ಟೇ ಹೋಯಿತು, ಸಂಘಗಳ ಹೆಸರಲ್ಲಿ ಖಾತೆ ತೆರೆದುಕೊಡಿ,” ಎಂದು ಸಂಸ್ಥೆಗಳು ಸರ್ಕಾರ ಮತ್ತು ಬ್ಯಾಂಕ್ ಅಧಿಕಾರಿಗಳೊಂದಿಗೆ ಮತ್ತೆ-ಮತ್ತೆ ಮಾತುಕತೆ ಮಾಡಿ, ದೊಡ್ಡ ಹೋರಾಟವನ್ನೇ ಮಾಡಿ, ಮುಚ್ಚಿದ್ದ ಆ ಬಾಗಿಲನ್ನೂ ಸಾವಕಾಶವಾಗಿ ತೆರೆಸಿದರು. ಫ್ಲಡ್ ಗೇಟ್ ತೆರೆದಂತಾಯಿತು ನೋಡಿ! ಮಹಿಳಾ ಸಂಘಗಳು ಬ್ಯಾಂಕಿನಲ್ಲಿ ಖಾತೆ ಮಾಡಿಸಿದವು; ಒಂದಲ್ಲ, ಎರಡಲ್ಲ, ಅಸಂಖ್ಯಾತ ಮಹಿಳಾ ಖಾತೆಗಳು. ಹಣ ತುಂಬಿಬರಲು, ಹೊರ ತೆಗೆಯಲು ಬ್ಯಾಂಕುಗಳಿಗೆ ಮಹಿಳೆಯರ ಓಡಾಟ.

ಅದೆಲ್ಲ ಇತಿಹಾಸವಿಂದು. ಎಂಬತ್ತರ ದಶಕದ ಕತೆ ಅದು. ಆರ್ಥಿಕ ರಂಗದಲ್ಲಿ ಮಹಿಳೆಯರ ಆಸಕ್ತಿ, ಪ್ರಾವೀಣ್ಯತೆ ನೋಡಿ ಸರಕಾರವು ಸ್ತ್ರೀ ಶಕ್ತಿ ಸಂಘಗಳನ್ನಾರಂಭಿಸಿತು. ಸ್ವಸಹಾಯದಿಂದ ಸ್ತ್ರೀ ಶಕ್ತಿಯಾಗಿ ಮೇಲೆದ್ದಳು ಗ್ರಾಮೀಣ ಮಹಿಳೆ. ಮಹಿಳಾ ಸಂಘಗಳಿಗೆ ನಬಾರ್ಡ್‌ನಿಂದ ಸಾಲಗಳು, ಸುತ್ತು ನಿಧಿಗಳು ದೊರೆತು ಸ್ವಉದ್ಯೋಗಕ್ಕೆ ಮಹಿಳೆಯರು ದಾಪುಗಾಲಿಕ್ಕಿದರು. ಅದೆಷ್ಟು ಗ್ರಾಮೋದ್ಯೋಗಗಳು ಪುನರ್ಸೃಷ್ಟಿಯಾದವು ಆಗ! ಮುತ್ತಲ ಎಲೆ ಕೊಯ್ದು ಪತ್ರಾವಳಿ ಮಾಡುವ ಉದ್ಯೋಗದಿಂದ ಹಿಡಿದು, ಊದುಬತ್ತಿ, ಮೇಣದ ಬತ್ತಿ, ಸಾಬೂನು, ಹಪ್ಪಳ, ಬೇವಿನ ಹಿಂಡಿ, ಬೇವಿನ ಗೊಬ್ಬರ, ಟೆರ್ರಾಕೋಟಾದ ಮಣ್ಣಿನ ಸಾಮಾನುಗಳ ತಯಾರಿಕೆ, ಕುಂಬಾರಿಕೆ, ಒಂದೇ ಎರಡೇ? ಗುಜರಾತಿನ ‘ಲಿಜ್ಜತ್ ಪಾಪಡ್’ ಜಗತ್ತಿನೆಲ್ಲರ ಗಮನ ಸೆಳೆದರೆ ಕರ್ನಾಟಕದ ‘ನಂದಿನಿ’ ಹಳ್ಳಿ-ಹಳ್ಳಿಗಳಲ್ಲಿ ಹಾಲಿನ ಹೊಳೆ ಹರಿಸಿತ್ತು. ಇವೆಲ್ಲ ಸಾಧ್ಯವಾಗಿದ್ದು ಮಹಿಳೆಯರ ಸ್ವಸಹಾಯದಿಂದ, ಸ್ವಉದ್ಯೋಗದಿಂದ ಮಾತ್ರ.

ಈ ಆಡಿಯೊ ಕೇಳಿದ್ದೀರಾ?: ಹೊಸಿಲ ಒಳಗೆ-ಹೊರಗೆ | ನೀವು ಯಾವತ್ತಾದರೂ ಬಸ್ಸಿನಲ್ಲಿ ಪಯಣಿಸುವ ಮಹಿಳೆಯ ಸ್ಥಾನದಲ್ಲಿ ನಿಂತು ಯೋಚಿಸಿದ್ದೀರಾ?

ಆರಂಭದಲ್ಲಿ ವಿವರಿಸಿದ ಚಿತ್ರ ಆ ಮಹಿಳೆಯರದ್ದು. ಸಂಘದ ಚಟುವಟಿಕೆಗಳಿಗಾಗಿ, ಬ್ಯಾಂಕಿಗೆ ಹಣದ ವ್ಯವಹಾರಕ್ಕಾಗಿ, ಕಚ್ಚಾವಸ್ತು ತರಲಿಕ್ಕಾಗಿ, ಮಾರಾಟ ಮಾಡಲಿಕ್ಕಾಗಿ ಸೀರೆಗೆ ಪಿನ್ನು ಸಿಕ್ಕಿಸಿ, ಜಡೆಯನ್ನು ಮುಡಿಯಾಗಿಸಿ ಫೈಲು ಹಿಡಿದು ಹೊರಟಿದ್ದು ಆವಾಗಲೇ. ಬಹುಶಃ ಸೆರಗನ್ನು ಓರಣವಾಗಿ ನಿರಿಗೆ ಮಾಡಿ, ಬ್ಲೌಸಿಗೆ ಪಿನ್ನು ಸಿಕ್ಕಿಸುವ ರೂಢಿ ಬಂದಿದ್ದೇ ಆ ದಿನಗಳಲ್ಲಿ. ತಲೆಯ ಮೇಲಿದ್ದ ಸೆರಗೂ ಶಿಸ್ತಾಗಿ ಹೆಗಲ ಮೇಲೆ ಕೂತು, ಆ ಹೆಣ್ಮಗಳಿಗೆ ಗಾಂಭೀರ್ಯವನ್ನೂ, ತಲೆ ಎತ್ತಿ ನಡೆಯುವ ಕೌಶಲವನ್ನೂ ತಂದುಕೊಟ್ಟಿತು.

ತಲೆ ಎತ್ತಿ ನಡೆದಿದ್ದೇನೂ ಸುಳ್ಳಲ್ಲ. ನಡಿಗೆಯಲ್ಲಿ ಆತ್ಮವಿಶ್ವಾಸವಿತ್ತು. ಸ್ವಸಹಾಯ, ಸ್ವಉದ್ಯೋಗಳು ಹೆಜ್ಜೆಗಳಿಗೆ ಬಲ ಕೊಟ್ಟಿದ್ದವು. ಸಾವಿರಾರು ವರ್ಷಗಳ ಹೊಡೆತ ಬಡಿತ,ದೌರ್ಜನ್ಯ, ಅಸಮಾನತೆಗಳನ್ನು ಮೀರಿ ಹೆಣ್ಣು ಬೆಳೆಯುತ್ತಿದ್ದಳು. ಇನ್ನೂ ಕ್ರಮಿಸಬೇಕಾದ ದೂರ ಬಹಳವಿತ್ತು. ಶಾಲೆಗಳಲ್ಲಿ, ರ್ಯಾಂಕುಗಳಲ್ಲಿ, ಆಟೋಟಗಳಲ್ಲಿ, ಕಚೇರಿಗಳಲ್ಲಿ, ಅಧಿಕಾರದ ಸ್ಥಾನಗಳಲ್ಲಿ ಅವಳು ತನ್ನನ್ನು ಸ್ಥಾಪಿಸಬೇಕಿತ್ತು. ಬಾಲ್ಯವಿವಾಹ, ಕುಡಿತ ಬಡಿತಗಳನ್ನು ನಿವಾರಿಸಬೇಕಿತ್ತು. ಹೆಂಡದಂಗಡಿಗಳನ್ನು ಮುಚ್ಚಿಸಬೇಕಿತ್ತು. ವರದಕ್ಷಿಣೆ, ವಧುದಹನಗಳನ್ನು ನಿಲ್ಲಿಸಬೇಕಿತ್ತು. ಲಿಂಗಾನುಪಾತವನ್ನು ಸರಿಪಡಿಸಬೇಕಿತ್ತು. ಹೆಣ್ಣೆಂದರೆ ಭೋಗದ ವಸ್ತುವಲ್ಲ, ನಿನಗೆ ಸರಿಸಮಾನ ವ್ಯಕ್ತಿ ಅವಳು ಎಂದು ಪುರುಷಾಧಿಕಾರಕ್ಕೆ ತಿಳಿವಳಿಕೆ ಮೂಡಿಸುವುದು ಬಾಕಿ ಇತ್ತು. ಅಂಬೇಡ್ಕರ್ ಕನಸಿನ ಹಾದಿಯಲ್ಲಿ ಹೆಜ್ಜೆಗಳು ಹೊರಟಿದ್ದವಷ್ಟೇ.

ಕಟ್ಟೆ ಮೇಲೆ ಕುಂತು ತಂಬಾಕು ಹೊಸಕುತ್ತ ಮಾತಾಡುತ್ತಿದ್ದವರ ಹೊಟ್ಟೆಯಲ್ಲಿ ಮಾತ್ರ ಉರಿಬೆಂಕಿ, ಅದಕ್ಕಿಷ್ಟು ತುಪ್ಪ. ಅವಳು ತನಗಾಗಿ ಪುಟ್ಟ ಜಾಗ ಮಾಡಿಕೊಳ್ಳುತ್ತಿದ್ದಳಷ್ಟೇ. ಆದರೆ, ಪುರುಷಾಧಿಕಾರಕ್ಕೆ ಕಂಡಿದ್ದೇ ಬೇರೆ – ತಮ್ಮ ಜಾಗವನ್ನು ಆಕ್ರಮಿಸಿಕೊಳ್ಳುತ್ತಿದ್ದಂತೆ. ಗಂಡಸುತನದ ಅಹಂಕಾರಕ್ಕೆ ಇದನ್ನು ಸಹಿಸಲೆಂತು ಸಾಧ್ಯ? ಹೇಗಾದರೂ ಕತ್ತರಿಸಿಹಾಕಬೇಕು ಇವಳ ಆತ್ಮವಿಶ್ವಾಸವನ್ನು, ತಡೆಯಬೇಕು ಇವಳ ನಡಿಗೆಯನ್ನು, ಒಂದೇಟು ಕೊಟ್ಟು ಮಕಾಡೆ ಮಲಗಿಸಬೇಕು ಇವಳ ಆತ್ಮ ಬಲವನ್ನು ಎಂಬ ಮಸಲತ್ತು.

ಸಾಲ
ಸಾಂದರ್ಭಿಕ ಚಿತ್ರ

ಮೊದಲು ಹೆಣ್ಮಕ್ಕಳು ಒಳಬಂದರೆ ಹುಬ್ಬೇರಿಸಿ ನೋಡುತ್ತಿದ್ದ, ಅವಳಿಗೆಂದೂ ಒಂದು ಕುರ್ಚಿಯನ್ನು ತೋರಿಸದಿದ್ದ ಬ್ಯಾಂಕ್ ಅಧಿಕಾರಿಗಳಿಂದ, “ಕಟ್ ಬಾಕಿ ಇಲ್ಲ ನೋಡಿ, ಹೆಣ್ಮಕ್ಕಳಿಗೆ ಸಾಲ ಕೊಟ್ಟರೆ ಸೆಂಟ್ ಪರ್ಸೆಂಟ್ ರಿಟರ್ನ್. ಗಂಡಸರಿಗೆ ಕೊಟ್ಟರೆ ನೋಟೀಸ್ ಕೊಟ್ಟು ಕೊಟ್ಟೂ ಸಾಕಾಗಬೇಕು…” ಎಂಬ ಉದ್ಗಾರಗಳು. ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಕೊಡಲು ಬ್ಯಾಂಕ್‌ಗಳ ಮನಸ್ಥಿತಿ ಅಣಿಗೊಳ್ಳುತ್ತಲಿತ್ತು. ಆದರೂ ಅಲ್ಲಿನ ಪುರುಷಾಧಿಕಾರದ ಮನಸ್ಸುಗಳು, ಬ್ಯಾಂಕಿನ ನಿಯಮಾವಳಿಗಳು ಮಹಿಳೆಯರಿಗೆ ಸಮಾನ ಸ್ಥಾನವನ್ನು ಕೊಡಲು ಇನ್ನೂ ಪೂರ್ತಿಯಾಗಿ ಸಜ್ಜಾಗಿರಲಿಲ್ಲ.

ಆದರೆ ಸಂದೇಶವಾಗಲೇ ಇನ್ನೆಲ್ಲೋ ತಲುಪಿತ್ತು. ಗಾಂಧೀಜಿಯ ಕನಸಿನ ‘ಗ್ರಾಮ ಭಾರತ’ದ ಮಹಿಳೆಯರು ಗ್ರಾಮೋತ್ಪನ್ನಗಳನ್ನು ತಯಾರಿಸಿ ಪೇಟೆಗಳಲ್ಲಿ ಬಂದು ಕೂಡ್ರುತ್ತಿದ್ದುದು, ಅವರಿಗೆ ಸಾಲ ಕೊಟ್ಟರೆ ‘ಸೆಂಟ್ ಪರ್ಸೆಂಟ್ ರಿಟರ್ನ್’ ಎಂಬ ನಿತ್ಯದ ಮಾತುಗಳು ಎಲ್ಲೆಲ್ಲೋ ತಲುಪಿ ಬಿರುಗಾಳಿಯನ್ನೆಬ್ಬಿಸಿದ್ದವು. ಮಹಿಳೆಯರ ಸ್ವಾವಲಂಬನೆ, ಸ್ವಸಾಮರ್ಥ್ಯ, ಸಬಲ ಕೋಟೆಗೆ ಲಗ್ಗೆ ಹಾಕಲು ಭರ್ಜರಿ ತಯಾರಿ ನಡೆದಿತ್ತಲ್ಲಿ. ವಿಚಾರ ಮಾಡಿ… ಒಂದೇ ಸಾರಿ ಬಂಡವಾಳಿಗರೂ, ಮಠಮಾನ್ಯರೂ ಹೆಣ್ಮಕ್ಕಳಿಗೆ ಸಾಲ ಕೊಡಲು ಹಳ್ಳಿಯತ್ತ ಮುಖ ಮಾಡಿದವೆಂದರೆ? ಅದು ಗ್ರಾಮೀಣ ಮಹಿಳೆಯರನ್ನು, ಗ್ರಾಮೋದ್ಯೋಗಗಳನ್ನು, ಗ್ರಾಮಭಾರತವನ್ನು ಉದ್ಧಾರ ಮಾಡಲೆಂದು ತಿಳಿದಿರಾ? ಖಂಡಿತ ಅಲ್ಲ. ಅವರ ಸ್ವಾವಲಂಬನೆಯನ್ನು ಕಸಿಯಲು, ಅವರನ್ನು ಮತ್ತೆ ಅಡ್ಡ ಕೆಡವಲೆಂದೇ ಬಂದಿದ್ದು ಅವು.

“ನೀವು ಐದು ಮಂದಿ ಆದರೂ ಸಾಕು. ಒಟ್ಟುಗೂಡಿ. ನಿಮಗೆ ನಾವು ಸಾಲ ಕೊಡುತ್ತೇವೆ. ಯಾವುದೇ ಆಧಾರ ಬೇಕಿಲ್ಲ. ಶುಕ್ರವಾರ ಬರುತ್ತೇನೆ, ಮತ್ತೊಮ್ಮೆ ಐದೂ ಜನ ಸೇರಿ…”

“ಗ್ರಾಮಾಭಿವೃದ್ಧಿ ಸಂಘವನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೇ ಉದ್ಘಾಟಿಸುತ್ತಾರಂತೆ, ಎಲ್ಲಾರೂ ಬರಬೇಕಂತೆ…”

“ಬ್ಯಾಂಕ್ ಕೊಡದ ಸಾಲವನ್ನು ನಾವು ಕೊಡುತ್ತೇವೆ. ಮಹಿಳೆಯರಿಗೇ ಕೊಡುತ್ತೇವೆ. ಯಾವ ಶೂರಿಟಿಯೂ ಬೇಡ. ವಿಶ್ವಾಸವೇ ಮುಖ್ಯ. ನೀವು ಐದೂ ಜನ ಮಹಿಳೆಯರ ಒಪ್ಪಿಗೆಯ ಮೇಲೆ ಸಾಲ ಕೊಡುತ್ತೇವೆ, ಸಾಲ ತೀರಿಸಲಿಕ್ಕೂ ನೀವು ಐದು ಜನ ಜವಾಬ್ದಾರರಾಗಿರಬೇಕು…”

“ಅರೇ! ನಮ್ಮ ಸ್ವಸಹಾಯ ಸಂಘದ ಮಾತೇ ಆಡುತ್ತಾರೀತ. ಅಲ್ಲಿಯೂ ಒಬ್ಬಾಕೆ ಸಾಲ ತೆಗೆದುಕೊಂಡರೆ ಎಲ್ಲರೂ ಜವಾಬ್ದಾರಿ ವಹಿಸಿ ಆಕೆ ಬೇಗ ಸಾಲ ತೀರಿಸುವಂತೆ ಮಾಡುತ್ತೇವೆ, ಇಲ್ಲಿಯೂ ಹಾಗೇ ಮಾಡುವುದು ತಾನೇ? ಬ್ಯಾಂಕ್ ಕೊಡದಿದ್ದರೆ ಅಷ್ಟೇ ಹೋಯ್ತು, ಕಿರುಸಾಲಸಂಘದಿಂದ ಸಾಲ ಪಡೆಯೋಣ…” ಮಹಿಳೆಯರು ಒಬ್ಬೊಬ್ಬರಾಗಿ ಸುವಾಸನೆಗೆ ಆಕರ್ಷಿತರಾದ ದುಂಬಿಗಳಂತೆ ಮೈಕ್ರೋ ಫೈನಾನ್ಸ್ ಕಂಪನಿಗಳತ್ತ ಒಲಿಯತೊಡಗಿದರು. ಉದ್ಘಾಟನೆಗೆ ಬ್ಯಾಂಕ್ ಅಧಿಕಾರಿಗಳು, ಸರ್ಕಾರದ ಅಧಿಕಾರಿಗಳೂ ಬರುವುದನ್ನು ನೋಡಿ ಎಲ್ಲರ ಭರವಸೆ, ಒತ್ತಾಸೆ ತಮಗಿದೆ ಎಂದು ತಿಳಿದರು.

ಈ ಆಡಿಯೊ ಕೇಳಿದ್ದೀರಾ?: ಮೈಕ್ರೋಸ್ಕೋಪು | ಹೆಣ್ಣು-ಗಂಡಿನ ಕುರಿತು ಸಿಜೆಐ ಹೇಳಿದ ಮಾತು ಮತ್ತು ಬಯಾಲಜಿ

ಎಡವಟ್ಟಾಗಿದ್ದು ಅಲ್ಲಿಯೇ…! ಸರ್ಕಾರದ, ಅಧಿಕಾರಿಗಳ ಭರವಸೆ ಇದ್ದುದು ಸಾಲ ತೀರಿಸುವ ಇವರ ಗುಣದ ಮೇಲೆ ಮಾತ್ರ. ಒತ್ತಾಸೆ ಇದ್ದುದು ಆ ಸಾಲದ ಸಂಘದ ಕಡೆಗೇ. ಅದು ನಮ್ಮ ಮಹಿಳೆಯರಿಗೆ ತಿಳಿಯಲಿಲ್ಲ. ಎಲ್ಲರೂ ಜವಾಬ್ದಾರಿ ವಹಿಸಿ ಆಕೆ ಬೇಗ ಸಾಲ ತೀರಿಸುವಂತೆ ಮಾಡುವುದು ಎಂದರೆ, ಆಕೆಯ ಸಾಲವನ್ನು ತಾವು ಮುಟ್ಟಿಸಬೇಕಾಗುತ್ತದೆಂಬ ಗುಪ್ತ ಸಂದೇಶವನ್ನು ತಿಳಿದುಕೊಳ್ಳಲಾರದೆ ಹೋದರು. ತಾವೆಂಥ ಮಾತಿನ ಬಲೆಯಲ್ಲಿ ಬೀಳುತ್ತಿದ್ದೇವೆಂದು ಇದೀಗ ಹೊರಗಡೆಯ ಪ್ರಪಂಚಕ್ಕೆ ಕಾಲಿಟ್ಟಿದ್ದ ಅವರಿಗೆ ಗೊತ್ತಾಗದೆ ಹೋಯಿತು.

ಸಾಲ ತೆಗೆದುಕೊಂಡರು, ತೀರಿಸಿದರು, ಮತ್ತೆ ಪಡೆದರು, ಮತ್ತೆ ತೀರಿಸಿದರು, ಮತ್ತೆ ಪಡೆದರು. ಅದನ್ನು ತೀರಿಸುತ್ತಲೇ ಇನ್ನೊಮ್ಮೆ ಸಾಲ. ಒಮ್ಮೆ ಕಂಪನಿಯವರ ಒತ್ತಾಯಕ್ಕೆ ಸಾಲ, ಇನ್ನೊಮ್ಮೆ ಜೊತೆಯಲಿದ್ದವಳಿಗೆ ಸಾಲ ಬೇಕೆಂದು ಸಾಲ… ಬಲೆಯೊಳಗೆ ಸಿಕ್ಕಿಕೊಂಡಿದ್ದೇ ಗೊತ್ತಾಗಲಿಲ್ಲ. ತಾನು ಕಾಲಿಟ್ಟಿದ್ದು ಎಂತಹ ಸುಳಿಯೊಳಗೆ ಎಂದು ತಿಳಿಯಲೇ ಇಲ್ಲ. ಸಾಲದ ಸುಳಿ, ಸುಳಿಯಲೊಂದು ಸುಳಿ ಬಂಧಿಸುತ್ತ ಹೋಯಿತು. ನೆರವು ನೀಡುವ ಕಿರುಸಾಲವೆಂದು ಕಾಲಿಟ್ಟಿದ್ದು ಇಂದು ಹೆಬ್ಬಾವಿನಂತೆ ಬೆಳೆದು ನುಂಗುತ್ತಿದೆ. ಹಳ್ಳಿ-ಹಳ್ಳಿಗಳ ಪ್ರತಿಯೊಬ್ಬ ಮಹಿಳೆಯನ್ನೂ ಸಾಲದೊಳಗೆ ಬಂಧಿಸಿದೆ. ಕೊಕ್ಕೆ ಹಾಕಿ ಸಿಕ್ಕಿಸಿದೆ. ಹೊರಬರಲಾರದೆ ಒದ್ದಾಡುತ್ತ, ಉಸಿರುಗಟ್ಟಿಸಿಕೊಳ್ಳುತ್ತ ಎಷ್ಟೋ ಮಹಿಳೆಯರು ಊರನ್ನೇ ಬಿಟ್ಟು ನಾಪತ್ತೆಯಾಗಿದ್ದಾರೆ, ಆತ್ಮಹತ್ಯೆಯತ್ತ ಮುಖ ಮಾಡಿದ್ದಾರೆ.

“ನನಗಿನ್ನು ಸಾಲ ಬೇಡ…” ಎಂದೆನ್ನುವ ಅವಕಾಶವೇ ಇಲ್ಲ ಅಲ್ಲಿ. ಮದುವೆಗೆ, ಮನೆ ಕಟ್ಟಲು, ಕೃಷಿಗೆ, ಜಾತ್ರೆಗೆ, ಹಬ್ಬಕ್ಕೆ ಎನ್ನುತ್ತ, ಕಡೆಗೆ ಮಕ್ಕಳ ಶಿಕ್ಷಣದ ಹೆಸರಲ್ಲಿ ಸಾಲ ಸಿಗುತ್ತದೆ. ಆ ಹಣವನ್ನು ನೀವು ಫ್ರಿಜ್ ಖರೀದಿಸಲು ಬಳಸಬಹುದು. ಮನೆಗೆ ಟೈಲ್ಸ್ ಹಾಕಿಸಬಹುದು, ಹೋಂ ಥಿಯೇಟರ್ ತಂದು ಮನೆಯ ಗೋಡೆಯನ್ನಲಂಕರಿಸಬಹುದು. ಮೊಮ್ಮಗನ ಭರ್ಜರಿ ಬರ್ತ್ ಡೇ ಪಾರ್ಟಿ ಮಾಡಿ ಕೇಕ್ ಕತ್ತರಿಸಬಹುದು – ಹೇಗೂ ಹಳ್ಳಿ ಹಳ್ಳಿಗೂ ಬೇಕರಿಗಳಾಗಿವೆ ಈಗ. ನಾಳೆ ಸಾಲ ಮರುಪಾವತಿ? ನಿನಗೆ ಸಾಧ್ಯವಾಗದಿದ್ದರೆ ಶಾಲೆಗೆ ಹೋಗುವ ಮಗನನ್ನು ಬಿಡಿಸಿ ಕೆಲಸಕ್ಕೆ ಹಚ್ಚು, ಏನಾದರೂ ಮಾಡಿಕೋ, ಸಾಲ ತೀರಿಸು ಅಷ್ಟೇ.

ಸಾಂದರ್ಭಿಕ ಚಿತ್ರ

ಓಡುತ್ತಿದ್ದಾಳಾಕೆ ದುಡಿಯಲು, ದುಡ್ಡು ಒಟ್ಟುಮಾಡಲು, ಈ ಸಾಲ ತೀರಿಸಲೆಂದು ಇನ್ನೊಂದು ಕಡೆ ಸಾಲ ತೆಗೆಯಲು, ನೆರೆಯವಳು ಕೈಗಡ ಕೊಡುತ್ತಾಳೋ ನೋಡಲು. ಶುಕ್ರವಾರ ಬಂತೆಂದರೆ ಬೆಚ್ಚಿ ಬೀಳುತ್ತಾಳೆ, ಗುರುವಾರ ರಾತ್ರಿ ಜಾಗರಣೆ. ಮಂಗಳವಾರ ಹತ್ತಿರ ಬಂದಂತೆ ಮಂದಿಯ ಕಣ್ತಪ್ಪಿಸಿ ಓಡಾಡುತ್ತಾಳೆ. ಗುರುವಾರದ ಹಿಂದಿನ ಇಡೀ ರಾತ್ರಿ ಹಾಸಿಗೆಯಲ್ಲಿ ಹೊರಳಾಡುತ್ತಾಳೆ. ಮನೆಯಲ್ಲಿ ಇಲ್ಲವೆಂದು ಸುಳ್ಳು ಹೇಳಿ ಕಳಿಸುತ್ತಾಳೆ. ಹಿಂದೆ ಸಂತೆಯೆಂದರೆ ಮನೆಯೆಲ್ಲ ಸ್ವಚ್ಛ ಮಾಡಿ ಬಟ್ಟೆಯೊಗೆದು, ನೆರೆಯವರೊಂದಿಗೆ ಆರಾಮವಾಗಿ ಹರಟೆ ಹೊಡೆಯುತ್ತ ಸಂತೆಗೆ ಹೋಗುತ್ತಿದ್ದರು. ಅಂದು ಸಂಜೆ ಚುರುಮುರಿ, ಮಿರ್ಚಿಯ ಪಾರ್ಟಿ ಮನೆಮಂದಿಗೆಲ್ಲ. ರಾತ್ರಿ ಕೋಳಿ ಸಾರು. ಈಗ ಅವೆಲ್ಲ ಇಲ್ಲ, ಪುರುಸೊತ್ತಿಲ್ಲ. ಸಂತೆಯ ದಿನವೂ ದುಡಿಯಲೇಬೇಕು. ಸಂತೆ ಮಾಡದೆ ಅದೆಷ್ಟೋ ವಾರಗಳು ದಾಟಿವೆ. ಮೊದಲು ಶನಿವಾರ, ರವಿವಾರದಂದು ಮಕ್ಕಳನ್ನು ದುಡಿಯಲು ಹಚ್ಚುತ್ತಿದ್ದವಳು ಈಗ ವಾರಕ್ಕೆ ಮೂರು, ನಾಲ್ಕು ದಿನ ಕೆಲಸಕ್ಕೆ ಎಳೆದುಕೊಂಡು ಹೋಗುತ್ತಾಳೆ. ಇನ್ನೂ ನಿಭಾಯಿಸಲಾಗದಿದ್ದರೆ ಓಡಿಹೋಗುತ್ತಾಳೆ. ಕಳೆದುಹೋಗುತ್ತಾಳೆ.

ಒಪ್ಪಾಗಿ ನಿರಿಗೆ ಮಾಡಿದ ಸೆರಗನ್ನು ಸಿಕ್ಕಿಸಿ ಹೆಗಲು ಚೀಲ ಜೋಲಿಸಿಕೊಂಡು ಠೀವಿಯಿಂದ ದಾಟುತ್ತಿದ್ದ ಹುಸೇನಮ್ಮನ ಸೊಸೆ ದಾವಲ್ ಬೀ ಇಂದು ಮಂದಿಯ ಕಣ್ತಪ್ಪಿಸಿ ಮುದುರಿಕೊಂಡು ಓಡುತ್ತಿದ್ದಾಳೆ. ಅವಳ ಸೆರಗು ಮುಖವನ್ನೂ ಮುಚ್ಚುತ್ತ ಮತ್ತೆ ತಲೆಯ ಮೇಲೇರಿದೆ. ಹಿಂದಿನ ಓಣಿಯ ಮಂಜುಳಾ ಕಾಣೆಯಾಗಿ ತಿಂಗಳಾದವು. ಪಕ್ಕದ ಹಳ್ಳಿಯಲ್ಲಿ ರೇಣುಕಾ ನೇಣು ಹಾಕಿಕೊಂಡಿದ್ದಾಳೆಂದು ಸುದ್ದಿ ಇದೆ. ಗಂಡನ ಕಾಟಕ್ಕೆ ಸತ್ತಿದ್ದಾಳೆ, ಅವಳಿಗೆ ಇನ್ನೊಬ್ಬರ ಜೊತೆ ಸಂಬಂಧವಿತ್ತು ಎಂದೆಲ್ಲ ಎಲ್ಲರೂ ಹೇಳಿದರೂ, ಸಾವಿಗೆ ನಿಜವಾದ ಕಾರಣ ಸಾಲವೇ ಎಂದು ಎಲ್ಲರಿಗೂ ಗೊತ್ತು.

ಸ್ವಯಂಸೇವಾ ಸಂಸ್ಥೆಗಳು ಕಿರುಸಾಲ ಸಂಘಗಳಾಗಿ, ಸಾಲದ್ದೇ ಸಂಘಗಳು, ಸಾಲ ಕೊಡುವ ಕಂಪನಿಗಳು ಬಂದು ಉಳಿತಾಯ ಸಂಘಗಳನ್ನು ಸಾಲದ ಸಂಘಗಳನ್ನಾಗಿಸಿ, ಸ್ವಉದ್ಯೋಗಿ ಮಹಿಳೆಯರನ್ನು ಸಾಲದ ಹೊರೆ ಹೊತ್ತವಳನ್ನಾಗಿಸಿ, ಸ್ವಸಾಮರ್ಥ್ಯ ಕಂಡುಕೊಂಡು ಸ್ವಾಭಿಮಾನದಿಂದ ಸಾಗುತ್ತಿದ್ದವಳ ನಡುವಿಗೇ ಏಟು ಕೊಟ್ಟು ಮಕಾಡೆ ಮಲಗಿಸಿದ ದುರಂತ ಕತೆ ಇದು.

ಮುಖ್ಯ ಚಿತ್ರ ಕೃಪೆ: Unsplash ಜಾಲತಾಣ

ಪೋಸ್ಟ್ ಹಂಚಿಕೊಳ್ಳಿ:

ಶಾರದಾ ಗೋಪಾಲ
ಶಾರದಾ ಗೋಪಾಲ
ಸಿದ್ದಾಪುರ ತಾಲೂಕಿನ ಬಕ್ಕೆಮನೆಯವರು. ಸದ್ಯ ಧಾರವಾಡ ನಿವಾಸಿ. ಗ್ರಾಮೀಣರ ಬದುಕುಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು, ಗ್ರಾಮೀಣ ಅಭಿವೃದ್ಧಿಯ ವಾಸ್ತವ ಸಂಗತಿಗಳ ಕುರಿತು ನಿಖರವಾಗಿ ಬರೆಯಬಲ್ಲವರು.

6 COMMENTS

 1. ಬ್ಯಾಂಕುಗಳ ಮೈಕ್ರೊ ಫೈನಾನ್ಸ್ ಅಷ್ಟೇ ಅಲ್ಲ ಧರ್ಮಸ್ಥಳ ಅಭಿವೃದ್ದಿ ಸಂಸ್ಥೆಯವರು ನೀಡುವ ಕಿರು ಸಾಲ ಕೂಡ ಮಹಿಳೆಯರಿಗೆ ಹೊರೆಯಾಗಿವೆ. ಒಂದು ಕಾರ್ಯಜ್ರಮದಲ್ಲಿ ಮಂಡ್ಯದ ಕೆಲವು ಮಹಿಳಾ ಸಂಘದವರು ತಮ್ಮ ಅನುಭವ ಹಂಚಿಕೊಂಡಿದ್ದರು. ಕಿರುಸಾಲದಿಂದ ಮುಕ್ತಿ ಪಡೆಯುವುದು ಹೇಗೆ ಅಂತ ಚಿಂತೆಯಾಗಿದೆ ಎಂದು ಹೇಳಿದರು.
  ಲೆಕ್ಕ ಹಾಕಿದರೆ ಅಸಲಿಗಿಂತ ಎಷ್ಟೊಪಟ್ಟು ಬಡ್ಡಿನೆ ಕಟ್ಟಿರುತ್ತಾರಂತೆ.
  ಹೇಗಾದರು ಹಳೆ ಸಾಲ ತೀರಿಸಿ ಹಿಂದಿನಂತೆ ತಮ್ಮ ಉಳಿತಾಯದಲ್ಲೆ ಕಡಿಮೆ ಬಡ್ಡಿಗೆ ಸಾಲ ತಗೊಂಡು ಸಂಘದ ಚಟುವಟಿಕೆ ಮುಂದುವರೆಸಿದರೆ ಒಳ್ಳೆಯದು.
  ಶಾರದಾ ಅವರ ಲೇಖನ ಸತ್ಯವನ್ನು ಬಿಚ್ಚಿಟ್ಟಿದೆ.
  ಅಭಿನಂದನೆಗಳು

  • ಮಾಹಿತಿ ಹಂಚಿಕೊಂಡಿದ್ದಕ್ಕೆ ಧನ್ಯವಾದ ಮೇಡಂ. ಸಾಧ್ಯವಾದರೆ, ಮಂಡ್ಯದ ಮಹಿಳಾ ಸಂಘದವರ ಅನುಭವಗಳನ್ನು ನಮಗೆ ಬರೆದು ಕಳಿಸಿ (ವಿಳಾಸ: [email protected] ). ಸೂಕ್ತವಾಗಿದ್ದರೆ ಪ್ರಕಟಿಸುತ್ತೇವೆ. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.

 2. ಲೇಖನ ಚೆನ್ನಾಗಿ ಮೂಡಿ ಬಂದಿದೆ. ಇದು ನೈಜ ಚಿತ್ರ. ಈ ಮೈಕ್ರೋ ಫಾಯಿನಾನ್ಸನಿಂದ ಯಾರಿಗೆ ಲಾಭ ಇದೆ ಎನ್ನುವುದು ಎಲ್ಲ ಮಹಿಳೆಯರಿಗೂ ಗೊತ್ತಾಗಬೇಕು.

  • ನಿಮ್ಮ ಮಾತು ನಿಜ ಸರ್. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.

 3. ನಿಜವಾಗಿಯೂ ಹೌದು. ‘ಸಾಲವೇ ಶೂಲ’ ಎಂಬಂತೆ ಒಂದು ಸಲ ಸಾಲದ ಸುಳಿಗೆ ಸಿಲುಕಿದರೆಂದರೆ ಹೊರಬರುವುದು ತುಂಬಾ ಕಷ್ಟ. ಈ ಲೇಖನವನ್ನು ಓದಿದ ಮೇಲೆ ಒಂದಿಬ್ಬರ ಹತ್ತಿರ ವಿಚಾರಿಸಿ ವಾಸ್ತವ ತಿಳಿದುಕೊಂಡೆ.

  • ಧನ್ಯವಾದ ಮೇಡಂ. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮನಸ್ಸಿನ ಕತೆಗಳು – 21 | ದೇಹದಲ್ಲಿ ಹುಳುಗಳಿವೆ ಅನ್ನುವ ಭ್ರಮೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...