ಮೈಕ್ರೋಸ್ಕೋಪು | 37 ದೇಶಗಳ ‘ಭಾಗ್ಯ’ ಯೋಜನೆ ಫಲಿತಾಂಶಗಳು ಏನನ್ನು ಹೇಳುತ್ತವೆ?

Date:

ಕರ್ನಾಟಕ ಸರ್ಕಾರ ಜಾರಿಗೆ ತರುತ್ತಿರುವ ನಾನಾ 'ಗ್ಯಾರಂಟಿ ಯೋಜನೆಗಳು' ಹೊಸತೇನಲ್ಲ. ಇಂತಹ ಯೋಜನೆಗಳು ಹಲವು ದೇಶಗಳಲ್ಲಿ ಈಗಲೂ ಚಾಲ್ತಿಯಲ್ಲಿವೆ. ಹಾಗಾದರೆ, ಕೆಲವರು ವಾದಿಸುವಂತೆ, ಇವುಗಳಿಂದ ಜನತೆ ಸೋಮಾರಿಗಳಾಗಿದ್ದಾರೆಯೇ?

ಕರ್ನಾಟಕ ಭಾಗ್ಯವಂತ ನಾಡು. ಕೆಲವರು ‘ಭಾಗ್ಯಗಳ ನಾಡು’ ಎನ್ನಬಹುದು. ಏಕೆಂದರೆ, ಇತ್ತೀಚೆಗೆ ಆಡಳಿತದ ಚುಕ್ಕಾಣಿ ಹಿಡಿದ ಸರ್ಕಾರ ಅವಶ್ಯಕತೆ ಇದ್ದವರಿಗೆ ಉಚಿತ ವಿದ್ಯುತ್ತು, ಮನೆಯೊಡತಿಗೆ ಮಾಸಿಕ ಎರಡು ಸಾವಿರ ರೂಪಾಯಿ, ಬಡತನ ರೇಖೆಯ ಕೆಳಗಿರುವ ಬಿಪಿಎಲ್‌ ಕುಟುಂಬಗಳಿಗೆ ಮಾಸಿಕ ಉಚಿತ ಧಾನ್ಯಗಳು, ಉನ್ನತ ವ್ಯಾಸಂಗ ಮಾಡಲಾಗದೆ, ಉದ್ಯೋಗವೂ ಇಲ್ಲದೆ ಮನೆಯಲ್ಲಿರುವ ನಿರುದ್ಯೋಗಿ ಪದವೀಧರ ಯುವಕರಿಗೆ ಮಾಸಿಕ ಮೂರು ಸಾವಿರ ರೂಪಾಯಿ ಹಾಗೂ ಕರ್ನಾಟಕದ ಮಹಿಳೆಯರಿಗೆ ಸರ್ಕಾರಿ ಸಾರಿಗೆಯ ಸಾಮಾನ್ಯ ಬಸ್ಸುಗಳಲ್ಲಿ ಪಯಣ ಉಚಿತ ಎಂದು ಘೋಷಿಸಿದೆಯಷ್ಟೆ. ಇದನ್ನು ಸರ್ಕಾರದ ವಿರೋಧಿಗಳು ‘ಭಾಗ್ಯಗಳ ಸರಮಾಲೆ ಎಂದೂ, ಇದರಿಂದ ಸರ್ಕಾರ ದಿವಾಳಿ ಆಗುವುದು ಖಚಿತ ಎಂದೂ ವಿಮರ್ಶಿಸುತ್ತಿದ್ದಾರೆ. ಹಲವರಂತೂ, “ಮೂರ್ನಾಲ್ಕು ಮಡದಿಯರು ಇರುವ ಕುಟುಂಬಗಳಲ್ಲಿ ಯಾರು ಮನೆಯೊಡತಿ? ಎಲ್ಲರಿಗೂ ಹಣ ಸಹಾಯ ದೊರೆಯುತ್ತದೆಯೋ?” ಎಂದು ಕುಹಕ ಆಡಿದ್ದಾರೆ. “ಮನೆಯೊಡತಿ ಯಾರು? ಅತ್ತೆಯೋ-ಸೊಸೆಯೋ?” ಎಂದು ವ್ಯಂಗ್ಯ ಆಡಿದವರಿದ್ದಾರೆ.

ಇವೆಲ್ಲದರ ಜೊತೆಗೇ ಇಂತಹ ನೆರವಿನ ಅಗತ್ಯವಿದೆಯೇ? ಅಂದಾಜು ಐವತ್ತೈದು ಸಾವಿರ ಕೋಟಿ ವೆಚ್ಚದ ಇಂತಹ ಜನಕಲ್ಯಾಣ ಯೋಜನೆಗಳು ದುಂದುವೆಚ್ಚವಲ್ಲವೇ? ಇದರ ಬದಲಿಗೆ ಶಿಕ್ಷಣ ಹಾಗೂ ಆರೋಗ್ಯಸೇವೆಗಳನ್ನು ಉಚಿತವಾಗಿ ನೀಡಬಹುದಿತ್ತಲ್ಲ? ಎಂಬ ಸಲಹೆಗಳೂ ಬಂದಿವೆ. ಮೂಲಭೂತ ಅವಶ್ಯಕತೆಗಳು ಎನ್ನಿಸದ ಇಂತಹ ಜನಕಲ್ಯಾಣ ಯೋಜನೆಗಳಾದರೂ ಏಕೆ ಬೇಕು? ಅದರಿಂದ ಏನು ಪ್ರಯೋಜನ? ಕೇವಲ ವೋಟು ಬ್ಯಾಂಕ್‌ ಅಷ್ಟೆ ಅಲ್ಲವೇ ಎಂದೆಲ್ಲ ಯೋಚನೆಗಳು ಶುರುವಾದಾಗಲೇ, ಒಂದು ಸುದ್ದಿ ಓದಿದೆ. ಸಾಮಾನ್ಯವಾಗಿ ಕಡು ವಿಜ್ಞಾನವನ್ನಷ್ಟೆ ಮಾತನಾಡುವ ನೇಚರ್‌ ಪತ್ರಿಕೆಯಲ್ಲಿ ಇಂತಹ ಸರಕಾರಿ ಭಾಗ್ಯಗಳ ಬಗ್ಗೆ ನಡೆದ ಒಂದು ಸಂಶೋಧನೆಯ ವಿವರಗಳನ್ನು ಓದಿದೆ. ಬಡರಾಷ್ಟ್ರಗಳಲ್ಲಿ ಹಾಗೂ ಅಲ್ಪ, ಸ್ವಲ್ಪ ಆರ್ಥಿಕ ಸುಧಾರಣೆ ಕಾಣುತ್ತಿರುವ ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಕೊಡುವ ಇಂತಹ ನೇರ ನೆರವು, ಇಂದಿನವರಿಗಷ್ಟೆ ಅಲ್ಲ, ನಾಳೆ ಪ್ರಜೆಗಳಾಗುವಂತಹ ಮಕ್ಕಳ ಆರೋಗ್ಯಕ್ಕೂ ಹಿತ. ಅವರ ಉಳಿವಿಗೂ ಬಲ ನೀಡುತ್ತದೆ ಎನ್ನುತ್ತದೆ ಈ ವರದಿ.

ಈ ಆಡಿಯೊ ಸಂದರ್ಶನ ಕೇಳಿದ್ದೀರಾ?: ಮಾತೇ ಕತೆ – ಲಲಿತಾ ಸಿದ್ದಬಸವಯ್ಯ ಸಂದರ್ಶನ | ‘ಲೋಕದ ಲೆಕ್ಕದಲ್ಲಿ ಕೊಲೆಯಾದರೂ ಕತೆಯಾಗಿ ಉಳಿದುಕೊಂಡ ಜಿಲ್ಲಾಧಿಕಾರಿ!’

ಬಡತನ ಎನ್ನುವುದು ಸಾವಿಗಿಂತ ಕಡೆ ಎಂದು ಅದನ್ನು ಅನುಭವಿಸಿದವರು ಹೇಳುವುದುಂಟು. ಈಗಲೂ ಭಾರತದಲ್ಲಿ ಅಂದಾಜು ಜನಸಂಖ್ಯೆಯ 15ರಿಂದ 28 ಶತಾಂಶದವರೆಗೂ ಬಡವರಿದ್ದಾರೆ ಎಂದು ವಿಶ್ವಬ್ಯಾಂಕಿನ ಅಂದಾಜು ತಿಳಿಸುತ್ತದೆ. ಇದು ಬಡತನ ಎನ್ನುವುದರ ಬಗ್ಗೆ ವಿಶ್ವಬ್ಯಾಂಕ್‌ ನೀಡಿರುವ ವಿವರಣೆಯ ಪ್ರಕಾರವಷ್ಟೆ. ವಿಶ್ವಬ್ಯಾಂಕಿನ ಪ್ರಕಾರ, ತಲಾವಾರು ದೈನಂದಿನ ಅದಾಯ ಎರಡು ಡಾಲರಿಗಿಂತಲೂ ಅಂದರೆ, 150 ರೂಪಾಯಿಗಿಂತಲೂ ಕಡಿಮೆ ಇರುವ ಕುಟುಂಬಗಳೆಲ್ಲವೂ ಬಡ ಕುಟುಂಬಗಳೆನ್ನಿಸಿಕೊಳ್ಳುತ್ತವೆ. ಆದರೆ, ಭಾರತದಲ್ಲಿ ಸರಾಸರಿ ಮಾಸಿಕ 1,060ರಿಂದ 1,280 ರೂಪಾಯಿಗಿಂತಲೂ ಕಡಿಮೆ ಆದಾಯವಿರುವ ಕುಟುಂಬಗಳನ್ನು ಬಡ ಕುಟುಂಬಗಳೆಂದು ಪರಿಗಣಿಸಲಾಗುತ್ತದೆ. ಕುಟುಂಬದ ಈ ಕನಿಷ್ಠ ಆದಾಯ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗುತ್ತದೆ ಎನ್ನುವ ಮಾತು ಬೇರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದು ಅಂದಾಜು ಅಷ್ಟೆ. ಹಾಗಂತ ಇದಕ್ಕಿಂತಲೂ ಹೆಚ್ಚಿನ ಆದಾಯವಿರುವ ಕುಟುಂಬಗಳನ್ನು ಬಡವರಲ್ಲ ಎನ್ನಲಾಗದು. ಬಡವರು ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿಯೂ ಇದ್ದಾರೆ. “ಬಡತನ ಎಂದರೆ ಮೂಲಭೂತವಾಗಿ ಬೇಕಾದ ಕೆಲವು ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಾಗದಂತಹ ಆದಾಯವಿರುವ ಸ್ಥಿತಿ. ಇದು ಆಯಾ ಸಮಾಜದ ಸಾಮಾಜಿಕ ಸ್ಥಿತಿ, ಗತಿಗಳು ಹಾಗೂ ಪರಿಸರವನ್ನೂ ಅವಲಂಬಿಸಿರುತ್ತದೆ. ಜೊತೆಗೆ ಕೇವಲ ಆದಾಯವಲ್ಲದೆ, ಹಲವು ಇನ್ನಿತರ ಅಂಶಗಳೂ ಇದನ್ನು ಬಾಧಿಸುತ್ತವೆ.” ಎಂದು ನೊಬೆಲ್‌ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಪ್ರೊ. ಅಭಿಜಿತ್‌ ಬ್ಯಾನರ್ಜಿ ಒಂದೆಡೆ ವಿವರಿಸಿದ್ದಾರೆ. ವಿಶ್ವಬ್ಯಾಂಕಿನ ಈ ಆದಾಯಮಟ್ಟ, ಬಡತನಕ್ಕೊಂದು ಸೂಚಿ ಅಷ್ಟೆ. ಈ ಸೂಚಿ ಸರಕಾರಗಳು ನೀಡುವ ಹಲವು ಸೌಲಭ್ಯಗಳು ಇಂತಹ ಅವಕಾಶ ವಂಚಿತರಿಗೆ ತಲುಪಬೇಕು ಎನ್ನುವ ಉದ್ದೇಶದಿಂದ ಹಾಕುವ ಲೆಕ್ಕಾಚಾರ.

ಭಾಗ್ಯ
ಇರುಳಿಗರ ಕಾಲನಿ, ರಾಮನಗರ | ಚಿತ್ರ ಕೃಪೆ: ಸಹ್ಯಾದ್ರಿ ನಾಗರಾಜ್

ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲಿಯೂ ಬಡತನವಿದೆ. ಬಡತನ ನಿರ್ಮೂಲನೆಗೆಂದು ಹಲವು ಯೋಜನೆಗಳಿವೆ. ʼಗರೀಬೀ ಹಟಾವೋ” ಅಥವಾ “ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌” ಎನ್ನುವ ಘೋಷಣೆಗಳ ಹಿಂದೆ ಇರುವ ಕಾಳಜಿಯೂ ಇದೇ. ಇವೆರಡೂ ಒಂದೇ ಗುರಿ ಇರುವ ಎರಡು ಮಾರ್ಗಗಳು ಎನ್ನಬಹುದು. ಮೊದಲನೆಯದು ಬಡತನದ ಬೇಗೆಯನ್ನು ಕಡಿಮೆ ಮಾಡಲು ಜನಕಲ್ಯಾಣ ಎನ್ನುವ ಯೋಜನೆಗಳನ್ನು ಹಮ್ಮಿಕೊಳ್ಳುವುದು. ಎರಡನೆಯದು ಇಡೀ ದೇಶದ ಆರ್ಥಿಕತೆಯನ್ನು ಸುಧಾರಿಸುವುದರಿಂದ ಈ ಗುರಿ ಸಾಧಿಸಬಹುದು ಎನ್ನುವುದು. ಎರಡೂ ಮಾರ್ಗಗಳನ್ನೂ ಪ್ರಪಂಚದ ಎಲ್ಲ ರಾಷ್ಟ್ರಗಳೂ ಪರೀಕ್ಷಿಸಿವೆ.

ಈ ಎರಡು ಮಾರ್ಗಗಳಲ್ಲಿ ಯಾವುದು ಸರಿ? ಇದಕ್ಕೆ ಇದಮಿತ್ಥಂ ಎನ್ನುವ ಉತ್ತರವಿಲ್ಲ. ಸಬ್‌ ಕಾ ವಿಕಾಸ್‌, ಸಬ್‌ ಕಾ ಸಾಥ್‌ ಎಂದು ವಿಕಾಸ ಮಾರ್ಗವನ್ನೇ ಅನುಸರಿಸಿದ ರಾಷ್ಟ್ರಗಳಲ್ಲಿಯೂ ಬಡತನದಲ್ಲಿರುವವರ ಸಂಖ್ಯೆ ಕಡಿಮೆಯಾಗಿದೆ. ಹಾಗೆಯೇ ಜನಕಲ್ಯಾಣ ಯೋಜನೆಯನ್ನು ಅನುಸರಿಸಿದ್ದರಲ್ಲಿಯೂ ಬಡತನ ಕಡಿಮೆಯಾಗಿದ್ದು ವರದಿಯಾಗಿದೆ. ವಿಕಾಸವೇ ಮಾರ್ಗವಾದರೆ, ದೇಶದ ಒಟ್ಟಾರೆ ಆರ್ಥಿಕ ಆದಾಯ ಹೆಚ್ಚಾಗುತ್ತದೆ. ಅದರ ಲಾಭ, ನದಿಯಿಂದ ಕಾಲುವೆಗಳ ಮೂಲಕ ಹರಿದು ಗಿಡಕ್ಕೆ ಹನಿಯುವ ನೀರಿನಂತೆ, ಕೊಟ್ಟ ಕೊನೆಗೆ ಬಡವರಿಗೂ ಮುಟ್ಟುತ್ತದೆ ಎನ್ನುವುದು ತರ್ಕ. ರೂಪಾಯಿ ಖರ್ಚಿನಲ್ಲಿ ಕೇವಲ ಹದಿನೈದು ಪೈಸೆಯಷ್ಟೆ ಫಲಾನುಭವಿಗಳಿಗೆ ತಲುಪುತ್ತದೆ ಎನ್ನುವ ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಮಾತಿನ ಅರ್ಥ ಇದು. ಇಂತಹ ಯೋಜನೆಗಳು ಉಳ್ಳವರು ಹಾಗೂ ಬಡವರ ನಡುವಣ ಕಂದಕವನ್ನು ಇನ್ನಷ್ಟು ಆಳವಾಗಿಸಬಹುದು ಎನ್ನುವ ಮಾತೂ ಇದೆ. ಇತ್ತೀಚೆಗೆ ಆಕ್ಸ್‌ಫಾಂ ಸಂಸ್ಥೆ ಭಾರತದ ಒಟ್ಟಾರೆ ಆದಾಯ ಹೆಚ್ಚಾಗಿದ್ದರೂ, ಇದರ ಲಾಭ ಕೇವಲ ಶ್ರೀಮಂತರಿಗೇ ಹೆಚ್ಚು ತಲುಪಿತು ಎಂದು ವರದಿ ಮಾಡಿತ್ತು.

ಈ ಲೇಖನ ಓದಿದ್ದೀರಾ?: ಕಾಲದಾರಿ | ‘ಹೆಣ್ಣುಮಕ್ಕಳ ಜಾಲಿ ಟ್ರಿಪ್’ ಎಂದು ಸಸಾರ ಮಾತಾಡುವವರು ಗಮನಿಸಬೇಕು…

ಜನಕಲ್ಯಾಣ ಯೋಜನೆಗಳು ಎಂದರೆ ನೇರವಾಗಿ ಫಲಾನುಭವಿಗಳಿಗೆ ಅನುಕೂಲಗಳನ್ನು ತಲುಪಿಸುವುದು. ಧನಸಹಾಯ, ಉಚಿತ ಆರೋಗ್ಯ ಹಾಗೂ ಶಿಕ್ಷಣ ಸೇವೆಗಳು ಇಂಥ ನೇರ ನೆರವಿನ ಯೋಜನೆಗಳು; ಗೃಹಲಕ್ಷ್ಮಿ, ಉಚಿತ ವಿದ್ಯುತ್‌ ಹಾಗೂ ಉಚಿತ ಬಸ್‌ ಪಯಣಗಳೂ ಇಂತಹವೇ. ರೈಲು ಅಥವಾ ಬಸ್‌ ಪಾಸುಗಳು, ನಷ್ಟವಾದರೂ ಓಡುವ ರೈಲುಗಳು ಮುಂತಾದುವು ಈ ಬಗೆಯ ನೇರ ನೆರವುಗಳು. ಅರ್ಥಶಾಸ್ತ್ರಜ್ಞರು ಇವನ್ನು ನೇರ ಧನಸಹಾಯ ಎನ್ನುತ್ತಾರೆ. ಈ ಯೋಜನೆಗಳ ಬಗ್ಗೆಯೂ ಅಪಸ್ವರಗಳಿವೆ. “ಇವು ಬಡವರನ್ನು ಸೋಮಾರಿಗಳನ್ನಾಗಿ ಮಾಡಿಬಿಡುತ್ತವೆ, ಆದ್ದರಿಂದ ಇಂತಹ ಯೋಜನೆಗಳು ಬೇಕಿಲ್ಲ,” ಎನ್ನುವವರಿದ್ದಾರೆ. ಇತ್ತೀಚೆಗೆ ಬಂಧನ್‌ ಬ್ಯಾಂಕ್‌ ಎನ್ನುವ ಸ್ವಸಹಾಯ ಬ್ಯಾಂಕೊಂದರ ವಾರ್ಷಿಕ ಸಮಾರಂಭದಲ್ಲಿ ಭಾಗವಹಿಸಿದ್ದ ನೊಬೆಲ್‌ ವಿಜೇತ ಅಭಿಜಿತ್‌ ಬ್ಯಾನರ್ಜಿಯವರ ಪ್ರಕಾರ, “ಉಚಿತ ಭಾಗ್ಯ ಅಥವಾ ಉಚಿತ ನೆರವು ಪಡೆದ ಬಡವರು ಸೋಮಾರಿಗಳಾಗಿದ್ದಾರೆ ಎನ್ನುವುದಕ್ಕೆ ಯಾವುದೇ ಮಾಹಿತಿಯಾಗಲೀ, ಪುರಾವೆಯಾಗಲೀ ಇಲ್ಲ.”

ನಮ್ಮಲ್ಲಿ ‘ಭಾಗ್ಯ’ ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಇಂತಹ ಕಾರ್ಯಕ್ರಮಗಳಲ್ಲಿ ಪರೋಕ್ಷವಾಗಿ ಸಂಪಾದನೆಗೆ ಪೂರಕವಾದಂತಹ ನೆರವು ದೊರೆಯುತ್ತದೆ. ಇವುಗಳಿಂದ ಲಾಭ ಇದೆ ಎನ್ನುತ್ತದೆ ‘ನೇಚರ್‌.’

ಕಳೆದ ಇಪ್ಪತ್ತು ವರ್ಷಗಳಿಂದ ಪ್ರಪಂಚದ ನೂರಕ್ಕೂ ಹೆಚ್ಚು ಕಡಿಮೆ ಮತ್ತು ಮಧ್ಯಮ ಆದಾಯವಿರುವಂತಹ ದೇಶಗಳು, ಬಡತನ ಕಡಿಮೆಯಾಗಲಿ ಎಂದು ಇಂತಹ ನೇರ ನೆರವಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಇಂತಹ ಕಾರ್ಯಕ್ರಮಗಳಿಂದ ಬಡಜನರ ಪ್ರಮಾಣ ಕುಗ್ಗಿದೆ. ಕೆಲವೆಡೆ ಶಾಲೆಗಳಲ್ಲಿ ಹಾಜರಾತಿ ಹೆಚ್ಚಿವೆ, ಭಾರತವೂ ಸೇರಿದಂತೆ ಹಲವೆಡೆ ಮಕ್ಕಳ ಪೋಷಣೆ ಸುಧಾರಿಸಿದೆ. ಮಹಿಳೆಯರನ್ನು ಸಬಲವಾಗಿಸಿವೆ. ಕೆಲವು ಯೋಜನೆಗಳು ಆರೋಗ್ಯ ಸೇವೆಯನ್ನು ನೀಡಿವೆ. ಇನ್ನು ಕೆಲವು ಬಡಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆಯೂ ಪ್ರೋತ್ಸಾಹಿಸುತ್ತಿವೆ. ಇವುಗಳ ಲಾಭ ಫಲಾನುಭವಿಗಳಷ್ಟೇ ಅಲ್ಲ, ಇತರರಿಗೂ ಸ್ವಲ್ಪವಾದರೂ ಮೆತ್ತಿಕೊಳ್ಳುತ್ತದೆ ಎಂದು ಹಲವು ಆಧ್ಯಯನಗಳು ತಿಳಿಸಿದ್ದವು.

ಇದೀಗ ಅಮೆರಿಕೆಯ ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದ ಸೋಂಕು ರೋಗಗಳ ವಿಭಾಗದ ವೈದ್ಯ ಆರೋನ್‌ ರಿಶ್ಟರ್‌ಮನ್‌ ಮತ್ತು ತಂಡ, ಈ ಬಗೆಯ ಭಾಗ್ಯಗಳು ನಾಳಿನ ಜನತೆ ಅರ್ಥಾತ್‌ ಮಕ್ಕಳ ಮೇಲೆ ಎಂತಹ ಪ್ರಭಾವ ಬೀರಲಿದೆ ಎಂದು ಪರಿಶೀಲಿಸಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ, ಶಿಶುಮರಣದ ಪ್ರಮಾಣದ ಮೇಲೆ ಈ ಭಾಗ್ಯ ಯೋಜನೆಗಳ ಪ್ರಭಾವವನ್ನು ಪರೀಕ್ಷಿಸಿದ್ದಾರೆ. ಈ ಹಿಂದೆ ದಕ್ಷಿಣ ಅಮೆರಿಕದ ಮೆಕ್ಸಿಕೊ ಮೊದಲಾದ ದೇಶಗಳ ಕೆಲವು ನಗರಗಳಲ್ಲಿ ನಡೆದ ಸಣ್ಣ ಪ್ರಮಾಣದ ಅಧ್ಯಯನಗಳು – ಐದು ವರ್ಷಕ್ಕೂ ಮೊದಲೇ ಸಾಯುವಂತಹ ಮಕ್ಕಳ ಸಂಖ್ಯೆಯನ್ನು ಇಂತಹ ಧನಸಹಾಯ ತಗ್ಗಿಸುತ್ತದೆ ಎಂದು ಸೂಚಿಸಿದ್ದವು. ಆದರೆ, ಅವೆಲ್ಲ ಸಣ್ಣಪುಟ್ಟ ಅಧ್ಯಯನಗಳಾಗಿದ್ದುವು.

ಭಾಗ್ಯಗಳು ಜನಪ್ರಿಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಇವು ಬಡವರಲ್ಲಿ ದೊಡ್ಡವರು ಮತ್ತು ಮಕ್ಕಳ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುತ್ತವೆಯೇ ಎನ್ನುವ ಪ್ರಶ್ನೆಯನ್ನು ಆರೋನ್‌ ತಂಡ ಕೇಳಿಕೊಂಡಿತ್ತು. ಇದನ್ನು ಪರಿಶೀಲಿಸಲು ಈ ತಂಡ ನಾನಾ ದೇಶಗಳು ಕಾಲಕಾಲಕ್ಕೆ ನಡೆಸಿದ್ದ ಸರ್ವೆಗಳಿಂದ ದೊರೆತ ಮಾಹಿತಿಯನ್ನು ಬಳಸಿದೆ. ಎಷ್ಟು ಪ್ರಮಾಣದ ಮಕ್ಕಳು ಐದು ವರ್ಷವಾಗುವ ಮುನ್ನವೇ ಸಾವನ್ನಪ್ಪುತ್ತಾರೆ ಎನ್ನುವುದನ್ನು ಇದರಿಂದ ತಿಳಿಯಬಹುದು. 2000ದಿಂದ 2019ರವರೆಗೆ ಹೀಗೆ ಜನಕಲ್ಯಾಣ ಯೋಜನೆಗಳ ಫಲಾನುಭವಿಗಳಾಗಿದ್ದ ಸುಮಾರು ಎಪ್ಪತ್ತು ಲಕ್ಷ ಬಡವರ ಜನಸಂಖ್ಯೆಯನ್ನು ಇವರು ಪರಿಶೀಲಿಸಿದರು. ಭಾಗ್ಯ ಪಡೆಯದ ಆದರೆ, ಅಂತಹುದೇ ಸ್ಥಿತಿಯಲ್ಲಿ ಇರುವ ದೇಶಗಳ ಜನತೆಯನ್ನೂ ಗಮನಿಸಿದರು. ಎರಡೂ ಸಮುದಾಯಗಳಲ್ಲಿ ಭಾಗ್ಯದ ಕಾರ್ಯಕ್ರಮಗಳು ಬರುವ ಮುನ್ನ ಮತ್ತು ಭಾಗ್ಯದ ಕಾರ್ಯಕ್ರಮಗಳು ಬಂದ ನಂತರದಲ್ಲಿ ಶಿಶುಮರಣ ಸಂಖ್ಯೆಯಲ್ಲಿ ಏನಾದರೂ ವ್ಯತ್ಯಾಸವಾಗಿದೆಯೇ ಎಂದು ಗಮನಿಸಿದರು. ಈ ವ್ಯತ್ಯಾಸಗಳನ್ನು ಆ ಭಾಗ್ಯಗಳು ಗೃಹಲಕ್ಷ್ಮಿಯಂತೆ ನೇರವಾಗಿ ಹಣವನ್ನೇ ಕೊಡುವಂಥವೋ ಅಥವಾ ಉಚಿತ ಬಸ್ಸಿನ ಸವಾರಿಯಂತೆ ಪರೋಕ್ಷವೋ ಎಂದೂ ಪಟ್ಟಿ ಮಾಡಿಕೊಂಡರು. ಈ ವ್ಯತ್ಯಾಸಗಳಲ್ಲಿನ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು.

ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು | ಎಲ್ಲೆಲ್ಲೂ ರಕ್ತದ ಕಲೆಯೇ ಕಾಣಿಸುತ್ತಿದ್ದ ಆಕೆಗೆ ನಿಜಕ್ಕೂ ಏನಾಗಿತ್ತು?

ಹೀಗೆ ಆಫ್ರಿಕಾ, ದಕ್ಷಿಣ ಅಮೆರಿಕ, ಆಗ್ನೇಯ ಏಷ್ಯಾ ಮೊದಲಾದ ಪ್ರದೇಶಗಳಲ್ಲಿನ ಒಟ್ಟು 37 ದೇಶಗಳಲ್ಲಿನ ಜನಕಲ್ಯಾಣ ಯೋಜನೆಗಳನ್ನು ಪರಿಶೀಲಿಸಲಾಯಿತು. ಇವುಗಳಲ್ಲಿ ಕಾಣುವ ಸಾವು-ನೋವು, ಇಂತಹ ಭಾಗ್ಯಗಳನ್ನು ಪಡೆಯದವರಲ್ಲಿರುವ ಸಾವು-ನೋವುಗಳಷ್ಟೇ ಇರಬಹುದು ಎಂಬುದು ಇವರ ತರ್ಕವಾಗಿತ್ತು. ಆದರೆ, ಲೆಕ್ಕಾಚಾರಗಳು ಹಾಗಲ್ಲ ಎಂದು ತಿಳಿಸಿವೆ. ನೇರವಾಗಿ ಭಾಗ್ಯಗಳಂತಹ ಕಾರ್ಯಕ್ರಮಗಳ ಮೂಲಕ ಬಡವರಿಗೆ ಆಸರೆ ನೀಡುವ ಸರ್ಕಾರಗಳಿರುವ ದೇಶಗಳಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಐದು ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಾವುಂಟಾಗುವುದು ಕುಗ್ಗಿದೆಯಂತೆ. ಸಮಾಜದ ಬಹುತೇಕ ಜನರನ್ನು ಒಳಗೊಂಡಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ಪರಿಣಾಮಕಾರಿ ಎಂದು ಈ ಅಧ್ಯಯನಗಳು ತಿಳಿಸಿವೆ. ವಿಕಾಸದ ಹಾದಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಬಡತನವನ್ನು ಮತ್ತು ಬಡತನ ತರುವ ಕೋಟಲೆಯನ್ನು ಈ ಭಾಗ್ಯ ಯೋಜನೆಗಳು ಕಡಿಮೆ ಮಾಡುತ್ತವೆ ಎನ್ನುತ್ತದೆ ಈ ವರದಿ. ಪರೋಕ್ಷವಾಗಿ ಸಮಾಜಕ್ಕೆ ಆರೋಗ್ಯ ಲಾಭವನ್ನೂ ತರುತ್ತದೆ.

“ಇವೆಲ್ಲ ಲೆಕ್ಕಾಚಾರ ಸರಿ, ಆದರೆ ಇದಕ್ಕೆ ನಾವು ತೆರಿಗೆ ತೆರಬೇಕಲ್ಲ?” ಎಂದು ಕೆಲವರು ಕೇಳಬಹುದು. ವಾಸ್ತವ ಏನೆಂದರೆ, ವಿಕಾಸದ ಯೋಜನೆಯೇ ಆಗಲಿ, ನೇರ ನೆರವಿನ ಯೋಜನೆಗಳೇ ಆಗಲಿ, ಒಕ್ಕೂಟ ಸರ್ಕಾರವೇ ಆಗಲಿ – ರಾಜ್ಯ ಸರ್ಕಾರವೇ ಆಗಲಿ, ಎಲ್ಲ ಯೋಜನೆಗಳೂ ಸಾರ್ವಜನಿಕರ ಹಣದಿಂದಲೇ ಆಗುವುದು. ಪ್ರಜಾಸತ್ತೆಯ ಮೂಲ ತತ್ವವಾದ ಸಮಾನತೆಯನ್ನು ಸಾಧಿಸುವ ಒಂದು ವಿಧಾನ ಇದು, ಅಲ್ಲವೇ?

ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ

ಚಿತ್ರಗಳ ಕೃಪೆ: Unsplash ಜಾಲತಾಣ

ಪೋಸ್ಟ್ ಹಂಚಿಕೊಳ್ಳಿ:

ಕೊಳ್ಳೇಗಾಲ ಶರ್ಮ
ಕೊಳ್ಳೇಗಾಲ ಶರ್ಮ
ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 'ಸೈನ್ಸ್‌ ರಿಪೋರ್ಟರ್‌' ಪತ್ರಿಕೆಗೆ ವರದಿಗಾರರಾಗಿದ್ದರು. ಮೂರು ದಶಕಗಳಿಂದ ವಿಜ್ಞಾನ ಬರವಣಿಗೆಯಲ್ಲಿ ಸಕ್ರಿಯರು. ವಿಜ್ಞಾನ ಸಂವಹನದ ಹೊಸ ಸಾಧ್ಯತೆಗಳನ್ನು ಹುಡುಕುವ ಉತ್ಸಾಹಿ.

1 COMMENT

  1. ನಿಮ್ಮ ಬರಹ ಸಮಕಾಲೀನ ಸಾಮಾಜಿಕ ವಿಷಯ ಕುರಿತಂತೆ ಸಕಾಲಿಕ ವಾಗಿದೆ. ಯೋಚನೆ ಮಾಡಬೆಕಾದ ಸಾಮಾಜಿಕ ವಿಜ್ಞಾನ ವಿಚಾರ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮನಸ್ಸಿನ ಕತೆಗಳು – 21 | ದೇಹದಲ್ಲಿ ಹುಳುಗಳಿವೆ ಅನ್ನುವ ಭ್ರಮೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...