ಔರಾದ್ ಸೀಮೆಯ ಕನ್ನಡ | ನಾಕ್ ವರ್ಷ ನಡ್ಕೊತಾ ಶಾಳಿಗಿ ಹೋದುರ್ಬಿ ಆಠಾಣೆ ರೊಕ್ಕ ಸಿಕ್ಕಿಲ್ಲ!

Date:

ಅವೊತ್ತು ಮುಂಜಾನತೇ ಮಳಿ ಸುರು ಆಗಿತ್ತು. ಇಗೊತ್ತು ಶಾಳಿಗಿ ಹೋಗಭ್ಯಾಡ್ ಅಂದುರ್ ಬಿ ಮಗ ಕೇಳಲ್ದೆ ಇಲ್ಲ ನಾ ಹೋಗ್ತಾ ಅಂದಾ. ಹಂಗೇ ಮಳ್ಯಾಗ್ ಹೋಗ್ಲಾಕ್ ತಯ್ಯಾರ್ ಆಗಿದಾ, ಮಳಿ ಬಂದುರ್ ಬ್ಯಾಗ್ ತೊಯ್ತುದ್ ಅಂತ ಪ್ಲಾಸ್ಟಿಕ್ ಕಾಗುದ್ ಮಡ್ಚಿ ಕೊಟ್ಟಿದುರ್...

ಬ್ಯಾಸಕಿ ಕಿರ್ಕತ್ ಮುಗ್ದಿ ಮಿರ್ಗ್ ಬಂತಂದುರ್ ಸಾಕ್, ಎಲ್ಲಾ ಒಕ್ಕಲಗೇರಿಗ್ ಫುರಸೋತ್ ಇಲ್ದ್ಹಾಂಗ್ ಕೈಥುಂಬಾ ದಂಧ್ಯಾ ಚಾಲು ಅಯ್ತಾವ್. ವರ್ಷೆಲ್ಲಾ ದುಡ್ದಿ ಹೊಲ್ದಾಗಿಂದ್ ರಾಶಿ ರುಪ್ಟಿ ಎಲ್ಲಾ ಮುಗ್ಸಿ ಬ್ಯಾಸ್ಕಿ ದಿನಕ್ ಥೋಡೆ ದಿನ ನಿಶ್ಚಿಂತಿಯಿಂದ ಇದ್ದ ದುಡೇ ಮಂದಿಗಿ ಪೈಲೆ ಮಿರ್ಗುದ್ ಮಳಿ ಯಾಗ್ ಬರ್ತುದೊ ಅಂತೇ ಕಾಯ್ಕೊತಾ ಕೂಡ್ತಾರ್, ಬ್ಯಾರೆ ದಂದ್ಯಾ ಎಲ್ಲ ಬಿಟ್ಟಿ ಪೈಲೆ ಹೊಲ್ದಾಗಿಂದ್ ಕೆಲ್ಸದ್ ಕಡಿ ಧ್ಯಾನಾ  ಕೊಟ್ಟಿ ಹೊಲಾ – ಮನಿ ಹಿಡ್ಕೊಂಡಿ ಇರೋದ್ ತಪ್ಪಲ್ದು.

ಹೊಲ್ದಾಗಿಂದ್ ದಂಧ್ಯಾ ಅಂದುರ್ ಏನ್ ಓಟ್ ಆಸಾನಿ ಇಲ್ಲ. ಸಣ್ಣಾಗಿಂದ್ ಹಿಡ್ದು ಥೊಡ್ ಥೊಡೇ ಮಾಡ್ಕೊತಾ ಇದ್ದುರೇ ಜರಾ ಜರಾ ರಾಟಿ ಬಿಳ್ತುದ್, ಏನರಾ ಮಾಡ್ಲಾಕ್ ಬಿ ಜಡಾ ಹೋಗ್ಲದ್, ವರ್ಷಿಗೊಮ್ಮಿ ಹೊಲುಕ್  ಹೋಗಿ ನಂಗ್ ಬಿ ಎಲ್ಲಾ ಬರ್ತುದ್ ಅಂತ ‘ಕೊಯ್ಲು ಕಿತ್ಲಾಕ್ ಹೋದುರ್ ಕಾಲಾಗ್ ಸಿಬುರ್ ನಡ್ಸಕೊಂಡಿ ಬ್ಯಾನಿ ಮಾಡ್ಕೊಬೇಕ್ ಆಗ್ತುದ್’  ಅದ್ಕೆ ಅಂತಾರ್, “ಹೊಲ್ದಾಗ್ ದುಡೆದ್ ಅಂದುರೇನ್ ಪಾರಾಬಟ್ಟಿ ಆಟ ಇಲ್ಲ” ರಟ್ಯಾಗ್ ತಾಕತ್ ಬೇಕ್, ಬಿಸ್ಲು, ಛಳಿ, ಘಾಳಿ, ಮಳಿ ಏನ್ ಇದ್ದುರ್ಬಿ ಹಂಗೇ ದುಡಿಬೇಕ್ ಆಗ್ತುದ್ ಅಂತ. ಇಂಥ ಹೈರಾಣಿ ಜಿಂದಗಿ ಇದ್ದುರ್ಬಿ ರಾಮಪ್ಪ ಭಾಳ್ ಮಂದಿ ಬಲ್ಲಿ ಕೂಲಿ ನಾಲಿ ಮಾಡಿ ಜ್ವಾಕಿದಿಂದ ಇದ್ದಿ, ಸಣ್ಣ ಸಂಸಾರದಾಗ ಇದೊಬ್ಬ ಮಗಳ ಮದಿ ಮಾಡ್ಕೊಟ್ಟಿದ, ಮಗ್ನಿಗ್ ಛಂದ್ ಓದ್ಸಬೇಕಂತಾ ಊರಾಗಿಂದ ಸರ್ಕಾರಿ ಶಾಳಿಗಿ ಹಾಕಿದಾ.

ಈ ನುಡಿಗಟ್ಟು ಕೇಳಿದ್ದೀರಾ?: ಕೆ ಆರ್ ಪೇಟೆ ಸೀಮೆಯ ಕನ್ನಡ | ಕೊನ್ಗೂ ಬುದ್ದಿ ಕಲ್ತು ನಾರಾಯಣ್‌ ಗೌಡುನ್ನ ಸೋಲ್ಸುದ್ರು ನಮ್ ಕ್ಯಾರ್‌ಪೇಟೆ ಜನ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಮ್ದು ಸಣ್ಣ ಹಳ್ಳಿ , ಊರಾಗ ಬರೀ ಐದನೇ ತನಕನೇ ಶಾಳಿ ಇತ್ತು. ಮುಂದ್ ಕಲಿಬೇಕ್ ಅಂದುರ್ ಬಾಜು ಊರಿಗ್ ಹೋಗ್ಬೇಕು. ಆಗೆಲ್ಲ ಬಸ್ ಇದ್ದಿಲ್ಲ ಏನಿದ್ದಿಲ್ಲ. ಒಂದು ಆಟೋ ಬಿ ದಿಕ್ಕಿದಿಲ್ಲ.‌ ಹ್ಯಾಂಗ್ ಹೋದುರ್ಬಿ ನಡ್ಕೊತಾ ಹೋಗದೇ ಗತಿ. ಇಂಥದ್ರಾಗ್ ಆರನೇ ಓದ್ಲಾಕ್ ಅಂತ ಮಗ್ನಿಗೆ  ಶಾಲಿಗ್ ಹಾಕಿದ ರಾಮಪ್ಪ ಮಗ ಧಿನಾ ಹ್ಯಾಂಗ್ ನಡ್ಕೊತಾ ಹೊಯ್ತಾನೋ ಏನೋ ಅಂಬೊ ಚಿಂತಿ ಭಾಳ್ ಆಗಿತ್ತು. ಸೈಕಲ್ ಇಸ್ಕೊಟ್ಟುರ್ ಅಗಾವ್ ಮಾಡ್ಕೊತಾ ಹ್ಯಾಂಗ್ ಬೇಕ್ ಹಾಂಗ್ ಓಡ್ಸತಾರ್, ‘ಹಿಂಗೇ ನಮ್ಮೂರ್ ಪಾರೊಬ್ಬ ಶಾಲಿ ಮುಗ್ಸೊಕೊಂಡಿ ಸೈಕಲ್ ಮ್ಯಾಲೆ  ಮನೀಗ್ ಹೊಂಟುರ್ ಟೆಕ್ಕರ್ ಆಗಿ ಸತ್ತಿದಾ’ ಅದೇ ಅಂಜ್ಕಿದಿಂದ ಊರಾಗಿಂದ್ ಎಲ್ಲಾ ಪಾರ್ಗೊಳಿಗ್ ಬಿ  ಸೈಕಲ್ ಭ್ಯಾಡಾ ಅಂತ ನಡ್ಕೊತಾ ಹೊಗಂತಾರ್.‌  ಅಯ್ಯಿ…! “ಊರಾಗಿಂದ್ ವಾರ್ಗಿ ಪಾರ್ಗೊಳ್ ಸರಿ ತಾನೇ ಹೋಗಿ ಬರ್ತಾನ್ ತಕೋರಿ, ಹಿಂಗೆಲ್ಲ ಕುದಿ ಮಾಡ್ಕೊತಾ ಕುಂತುರ್ ಮಗ್ನಿಗ್ ಶಾಳಿ ಬಿಡ್ಸಿ ಹೊಲ್ದಾಗ್ ಒಕ್ಕಲ್ತನ್ ಮಾಡ್ಲಕ್ ಹಚ್ರಿ,” ಅಂತ ಹೆಂಡ್ತಿ ಸಿಟ್ಟಿಗ್ ಬರ್ತಿಕಿ ಸುಮ್ಮುನಾದ ರಾಮಪ್ಪ ನ್ಯಾರಿ ಕಟ್ಕೊಂಡಿ ಹೊಲ್ಕಡಿ ನಡ್ದಾ.

ಊರಿಂದ ಬರೋಬ್ಬರಿ ಐದಾರು ಹರಿ ಧೂರ್, ಧಿನಾ ನಡ್ಕೊತಾ ಹೋಗೊ ಮಗ, ತಂದಿ ಬಲ್ಲಿ ಒಂದ್ ರೂಪಾಯಿ ಬಿ ಕೇಳ್ತಿದಿಲ್ಲ. ಆಗ ಟೈಮಿಗ್ ಒಂದ್ ರೂಪಾಯೇ ಗತಿ ಹುಟ್ತಿದ್ದಿಲ್ಲ, ಕುಡ್ತಾರ್ ಎಲ್ಲಿಂದ್.‌ ಕೇಳ್ದುರ್ ಬೈಯ್ತಾರ್, ಹೊಡಿತಾರ್ ಅಂಬಾ ಅಂಜ್ಕಿದಿಂದ ಇದ್ದಿಂದ್ ಹೆಬ್ರೇಟ್ ಜ್ವಾಳಾ ರೊಟ್ಟಿ, ಪಲ್ಯಾ, ರ್ಯಾಷನ್ ಅಕ್ಕಿ ಬಾನಾ ಉಂಡಿ ಹಂಗೇ ಟಿಫಿನ್ ಕಟ್ಕೊಂಡಿ ಹೋಗ್ತಿದಾ. ಮುಂಜಾನತ್ ಸಂಜಿಗ್ ಅಂದುರ್ ಐದಾರು ಕಿಲೊ ಮೀಟರ್ ನಡ್ಕೊತಾ ಹೋಗೊದ್ ಅಂದುರ್ ಶುರು ಶುರು ಭಾಳ್ ಜಡಾ ಅನ್ಸಿತಿತ್ತು.‌ ರಾತ್ರಿ ಅವ್ವುನ್ ಬಲ್ಲಿ ಕುಂತಿ ‘ಕಾಲ್ ಭಾಳ್ ನೈಯಲಾತಾವ್ ಯವಾ’ ಅಂತ ಹೇಳ್ತಿದಾ, “ಏನಾಗಲಾ ಮಗಾ, ಥೊಡೆ ದಿನಾ ಆದ್ಮ್ಯಾಗ್ ನೈಯಲಾ ಏನಿಲ್ಲ, ಹಂಗೇ ರಾಟಿ ಬಿಳಾಸ್ತಾನಾ ನೈಯ್ತಾವ್,” ಅಂತ ಅವ್ವು ಜರಾ ಕಾಲ್ ಒತ್ತಿ ತಲಿ ಮ್ಯಾಲೆ ಕೈ ಸವ್ರಿನ್ ಮ್ಯಾಲೆ ಥೊಡೆ ಸಮಾಧಾನ ಆಗಿ ಗಪ್ಚುಪ್ ಮಕೊತಿದಾ.

ಶಾಳಿ

ಹಂಗೊ ಹಿಂಗೋ ಮಳ್ಯಾಗ್, ಛಳ್ಯಾಗ್, ಬಿಸ್ಲಾಗ್ ಒಂದೊರ್ಷ್ ನಡ್ಕೊತಾ ಶಾಳಿಗ್ ಹೋಗಿ ಆರನೇ ಮುಗ್ಸದಾ, ಜರಾ ದೊಡ್ಡವ್ ಬಿ ಆದಾ ಮಗಾ ಅಂತ ಅವ್ಪಪ್ಪ ಹಿಗ್ಗಿ ಹಿರೇಕಾಯಿ ಆದುರ್. ಮತ್ ಮುಂದ್ ಶಾಳಿ ಶುರುವಾಗಾಕಿನಾ ಪೈಲೆ ಹೊಸ ಬ್ಯಾಗ್ ಪುಸ್ತುಕ್, ಕಾಪಿ, ಅರ್ಬಿ ಅದು ಇದೂ  ಬೇಕಂತ ಮಗ ಕೇಳಕ್ ಶುರು ಮಾಡ್ದಾ, ಇತ್ತ್ ಮಿರ್ಗುದ್ ಮಳಿ ಬಿದ್ದುದ್, ಐನ್ ಬಿತ್ತಣ್ಕಿ ಮೊಸಂ, ಇದ್ದಿಂದ್ ಒಂದೆಕ್ಕರ್ ಹೊಲ ಬಿತ್ಕೊಬೇಕ್, ಇಲ್ದುರ್ ಕೂಲಿ ಮಾಡಿಂದ ಯಾದುಕ್ ಬಿ ಸಾಕಾಗಲ್ದು, ಅಂಬಾ ಕುದಿ ತಂದಿಗಿ, ಅದ್ರಗೇ ಮಗುಂದ್ ಕಿರಿಕರಿ ಬ್ಯಾರೆ ಆಗ್ಲಾತಿತ್ತು. ತಂದಿರಾ ಏನ್ ಮಾಡ್ತಾನ್ ‘ಬೀಜ ಗೊಬ್ಬರ, ಬಿತ್ಲಾಕ್ ಅಂತೇಳಿ ಕ್ವಾಟಿಗಿ ಹೋಗಿ ಅಡ್ತಿ ಮಾಲಾಕ್ ಬಲ್ಲಿ ತಂದಿಂದ್ ಥೊಡೆ ರೂಪಾಯಿದಗೇ ಮಗ್ನಿಗ್ ಶಾಲಿಗ್ ಬೇಕಾಗಿಂದ್ ಪುಸ್ತಕ ಕಾಪಿ ಎಲ್ಲಾ ಇಸ್ಕೊಟ್ಟಾ, ಈ ಶಾಲಿ ಡ್ರೆಸ್ ತಕೊ, ಖರೇ ಇದರ್ ಮ್ಯಾಲೇ ದಸರಿ ಹಬ್ಬ ಮುಗ್ಸಬೇಕ್ ನೋಡ್, ಮತ್ ದಸ್ರಿ ಹಬ್ಬುಕ್ ಹೊಸ ಅರ್ಬಿ ಅಂತ ಮುನ್ದುರ್ ಸಿಗಲುವ್ ಮತ್ತ್ ಹೊಸ ಬ್ಯಾಗ್ ತಕೊಲಾಕ್ ರೊಕ್ಕ ಇಲ್ಲ ಈಗ, ಮುಂದಿನ ವರ್ಷ ತಕೊಂಬರಿ “ಹೋದರ್ಷ್ ಸುರೇಪನ್ ಬೀಜ ತಂದಿಂದ ಚೀಲಾ ಛಂದದಾ, ನಿಮ್ಮುವುಗ್ ಹೇಳಿ, ಹೊಲ್ದಿ ಕುಡ್ತಾಳ್,” ಅಂತ ಹೇಳಿಂದ ಅಪ್ಪುನ್ ಮಾತಿಗಿ ಮಗಾ ಹು…ಅನ್ಕೊತಾ ಮಾರಿ ಸಣ್ಣುದ್ ಮಾಡ್ಕೊಂಡಿ ಮನಿಗಿ ಬಂದಾ…!

ಅವೊತ್ತು ಮುಂಜಾನತೇ ಮಳಿ ಸುರು ಆಗಿತ್ತು. ಇಗೊತ್ತು ಶಾಳಿಗಿ ಹೋಗಭ್ಯಾಡ್ ಅಂದುರ್ ಬಿ ಮಗ ಕೇಳಲ್ದೆ ಇಲ್ಲ ನಾ ಹೋಗ್ತಾ ಅಂದಾ, ಒಂದಿನಾ ಬಿ ಶಾಳಿ ಛುಟ್ಟಿ ಮಾಡ್ತಿದ್ದಿಲ್ಲ. ಹಂಗೇ ಮಳ್ಯಾಗ್ ಹೋಗ್ಲಾಕ್ ತಯ್ಯಾರ್ ಆಗಿದಾ, ಮಳಿ ಬಂದುರ್ ಬ್ಯಾಗ್ ತೊಯ್ತುದ್ ಅಂತ ಪ್ಲಾಸ್ಟಿಕ್ ಕಾಗುದ್ ಮಡ್ಚಿ ಕೊಟ್ಟಿದುರ್, “ಸಂಜಿಗಿ ಬಿ ಹಿಂಗೇ ಮಳಿ ಇದ್ದುರ್ ನಡ್ಕೊತಾ ಬರ್ಭ್ಯಾಡ್, ನಮ್ಮೂರ್ ಕ್ರಾಸ್ ತನ್ಕಾ ಯಾವದ್ರಾ ಮ್ಯಾಕ್ಸಿ ಸಿಕ್ಕುರ್ ಬಾ,” ಅಂತ ಅಪ್ಪ ಒಂದು ರೂಪಾಯಿ ಸಿಕ್ಕಾ ಕೊಟ್ಟಿದಾ. ಅವತ್ತು ಅಂದ್ಕೊಂಡಂಗೇ ಸಂಜಿಗ್ ಜೋರ್ ಮಳೀ ಬಂತ್, ಒಂದು ರೂಪಾಯಿ ಅಂದುರೇ ಬಾಳ್ ಅಪರೂಪ ಆಗಿತ್ತು, ಮಳೀ ಬಂದುರ್ ಬಿ ಹಂಗೇ ನಡ್ಕೊತಾ ಹೋಗರಿ, ಈ ಒಂದು ರೂಪಾಯಿದು ಏನರಾ ತಿಲ್ಲಾಕ್ ತಿಂಬರಿ ಅಂತ ಎಲ್ಲಾ ದೋಸ್ತುರ್ ಹೇಳ್ಕೊಂಡಿ ನಡ್ಕೊತಾ ಬಂದುರ್.

ಈ ನುಡಿಗಟ್ಟು ಕೇಳಿದ್ದೀರಾ?: ಕುಮಟಾ ಸೀಮೆಯ ಕನ್ನಡ | ಈ ಬಿಂಬ್ಲಿಕಾಯಿ ರುಚಿ ತಿಂದವ್ರಿಗೇ ಗೊತ್ತು

ಹಾದ್ಯಾಗ್ ಹೊಂಟುರ್ ಮೂರು ಹಳ್ಳ ಬರ್ತಾವ್, ಜರಾ ಮಳಿ ಬಂದುರ್ ಸಾಕ್ ಹಳ್ಳ ತುಂಬಿ ಹರಿತಾವ್, ಅವು ದಾಟಿ ಬರ್ಬೇಕ್, ಹಣಾದಿ ಹಾದ್ಯಾಗೆಲ್ಲ ಕೆಸರೇ ಕೆಸರು, ಚಪ್ಪಲ್ ಬೂಟು ಕೆಸರಿನಾಗ್ ಸಿಕ್ಕ್ ಬಿಳ್ತಾವ್, ಕಾಪಿ ಬುಕ್ ತೊಯ್ತಾವ್ ಅಂತ ಕಾಗುದ್ ಹಚ್ಕೊಂಡಿ ಹೊಂಟುರ್ ಬಿ ಮೊಳಕಾಲಿನ್ ತನ್ಕಾ ಕೆಸುರ್ ಮುದ್ದಿ, ಕಾಲಾಗಿಂದ ಬೂಟ್ ತೆಗ್ದಿ ಕೈಯ್ದಾಗ್ ಹಿಡ್ಕೊಂಡಿ ಹಂಗೇ ಹಳ್ಳೂಗ್ ಬಂದಾ, ಮೈಯೆಲ್ಲ ನಡುಗ್ ಹುಕ್ಕಿತ್, ಮನ್ಯಾಗ್ ಫೋನ್ ಇಲ್ಲ ಏನಿಲ್ಲ, ಅವ್ವಪ್ಪ ಘಾಬ್ರಿ, ‘ಮೊಮ್ಮಗ ಮಳ್ಯಾಗ್ ಸಿಕ್ಕಿ ಬಿದ್ದುನ್ ಏನೋ, ಹೊಂಟಾನೊ ಇಲ್ಲೋ’ ಅಂತ ಬಾರ್ ಬಾರ್ ಮೊಮ್ಮಗುನ್ ನೆಪ್ಪು ಮಾಡ್ಲಾತುಳ್ ಆಯಿ. ಅಷ್ಟರಾಗ್ ಪೂರಾ ಮೈ ತೊಯ್ಸಕೊಂಡಿ ಬಂದಾ ಮಗಾ ಮನಿಗಿ, ಒಂದು ರೂಪಾಯಿ ಕೊಟ್ಟಿ ರೋಡಿನ್ ಗೊಂಟಾ ಬಾ ಅಂದುರ್, ಕೆಸರಾಗ್ ನಡ್ಕೊತಾ ಬಂದ್ಯಾಲಾ ಅಂತ ಅಪ್ಪ ಬೈಲತಾ, “ನಂಬಲಿ ರೊಕ್ಕ ಇದ್ದುವ್, ಬ್ಯಾರೆ ದೊಸ್ತುರ್ ಬಲ್ಲಿ ಇದ್ದಿಲ್ಲ, ಅದ್ಕೆ ಅವ್ರಿಗ್ ಬಿಟ್ಟಿ ಒಬ್ಬ ಹ್ಯಾಂಗ್ ಬರ್ಲಿ ಅಂತ ಒಂದು ರೂಂ ಬಿ ಹಂಗೇ ಇಟ್ಕೊಂಡಿ ನಡ್ಕೊತಾ ಬಂದಿದಾ,” ಅಂತ ಹೇಳ್ದಾ ಮಗಾ. 

ಯಪ್ಪಾ…! “ನಂಗ್ ಇಗೊತ್ತ್ ಹತ್ತ್ ರೂಪಾಯಿ ಬೇಕ್, ಶಾಳ್ಯಾಗ್ ಪರೀಕ್ಷಾ ಫೀಸ್ ಕಟ್ಟದ್ ಅದಾ,” ಅಂತ ಕೇಳ್ದಾ ಮಗಾ. “ಧಿನಾ ರೊಕ್ಕ ಎಲ್ಲಿಂದ ತಂದಿಕೊಡರಿ ನಿಂಗ್, ಎನ್ ರೊಕ್ಕುದ್ ಗಿಡಾ ಅದಾನಾ, ಮತ್ತ್ ಕುಡ್ತಾ ಅಂತ ಹೇಳ್ ಸರರಿಗ್,” ಅಂತ ಸಿಟ್ಟಿಗ್ ಬಂದಾ ಅಪ್ಪ. ಇಲ್ಲಾ, ನಂಗ್ ಇಗೊತ್ತ್ ಬೇಕೇ… ಹ್ಯಾಂಗರಾ ಮಾಡ್ ಅಂದಾ ಮಗಾ, ಮನ್ಯಾಗರಾ ಒಂದ್ ರೂಪಾಯಿ ಇಲ್ಲ; ಯಾರ್ ಬಿ ಕುಡಾಲುವ್ ಈಗ ಹ್ಯಾಂಗ್ ಮಾಡರ್ ಅಂತ ರಾಶಿ ಮಾಡ್ದುರ್ ಬಂದಿಂದ್ ಒಂದು ಪಾವ್ ಹೆಸುರ್ ತೆಗ್ದಿ ಕೊಟ್ಟುಳ್ ಅವ್ವ, ಪಾವ್ ಹೆಸುರ್ ದುಕಾನ್ಕ್ ಕೊಟ್ಟಿ ಹತ್ತು ರೂಪಾಯಿ ಮ್ಯಾಗ್ ಆಠಾಣೆ ಬಂದಿಂದ್ ತಕೊಂಡಿ ಶಾಳಿಗ್ ಹೋದಾ ಮಗಾ,  ಮಗ್ನಿಗ್ ಶಾಳಿಗಿ ಹಾಕಿದೇವ್ ಖರೇ ಅವಾ ಕೇಳಿನಾಗ್ ನಾಕ್ ರೂಪಾಯಿ ಕುಡ್ಲಾಕ್ ಆಗಾಲ್ ಹೋಗ್ಯಾದ್, ಎಂಥಾ ಖಿಸ್ಮತ್ ನಮ್ದು ನೋಡ್ ಅಂತ ಮಾರಿ ಸಣ್ಣುದ್ ಮಾಡ್ಕೊಂಡಿ ಖುರ್ಪಿ, ತಕೊಂಡಿ ಅವ್ವಪ್ಪ ಹೋದುರ್ ಮಂದಿ ಹೊಲುಕ್.

ಈ ನುಡಿಗಟ್ಟು ಕೇಳಿದ್ದೀರಾ?: ಮಾಲೂರು ಸೀಮೆಯ ಕನ್ನಡ | ಪೋತುರಾಜುಲು ಮತ್ತು ಧರಮ ದೊರೆಗಳ ಬೆಂಕಿ ಆಟ

ಬರೋಬ್ಬರಿ ನಾಕ್ ವರ್ಷ ಮಳ್ಯಾಗ್ ಛಳ್ಯಾಗ್ ನಡ್ಕೊತಾ ಹೋಗೇ ಶಾಳಿ ಕಲ್ತಾ ಮಗಾ ಥೊಡೆ ಹುಶ್ಯಾರ್ ಹೊಂಟಿದಾ, ಮುಂಜಾನೆದ್ದಿ  ಎಷ್ಟು ಝಲ್ದಿ ತೈಯಾರಾದುರ್ ಬಿ, ನಡ್ಕೊತಾ ಹೊಗಾತನ್ಕಾ ತಡಾನೇ ಆಗ್ತಿತ್, ಅಲ್ಲಿ ಪಿಟಿ ಮಾಸ್ತಾರ್ ಕೈಯ್ದಾಗ್ ಬಡ್ಗಿ ತಕೊಂಡಿ ನಿಂದುರ್ತಿದ್ರು, ಛಳ್ಯಾಗ್ ನಡ್ಕೊತಾ ಹೋಗಿ ಅವ್ರು ಕೈಯ್ದಾದಿಂದ ನಾಕ್ ಪೆಟ್ಟಿ ಹೊಡ್ಸಿಕೊಂಡಾಗ ಕೈಯೆಲ್ಲ ಖೆಂಪುಗ್, ಪೆನ್ನು ಹಿಡಿಲಾಕ್ ಬರಲ್ದ್ಹಾಂಗ್ ಆಯ್ತುದುವ್. ನಾಕ್ ವರ್ಷ ನಡ್ಕೊತಾ ಹೋಗಿ ಶಾಳಿ ಕಲ್ತಿದೇವ್ ಖರೇ, ಒಂದಿನಾಬಿ ನಾಕ್ ರೂಪಾಯಿ ಸಿಕ್ಕಿಲ್ಲ. ಯಾವಾತ್ರಾ ಒಂದ್ ರೂಪಾಯಿ ಇದ್ದುರ್, ಆಠಾಣೆದು ಏನಾರಾ ತಿಂದಿ, ನಾಳಿಗಿ ಆಯ್ತಾವ್ ಅಂತ ಹಂಗೇ ಆಠಾಣೆ ಇಟ್ಕೊತಿದ್ದೇವ್. ಖರೇ ಬ್ಯಾರೇರ್ದು ಬಲ್ಲಿ ನೋಡಿ ನಮ್ಗ್ ಬಿ ಇದು ಬೇಕಂತ ಯಾವಾತ್ಬಿ ಹಠಾ ಮಾಡಿಲ್ಲ, ನಾವ್ ಗರೀಬ್ ಮಂದಿ, ಇದ್ದಿಂದ್ರಾಗೇ ಖುಷಿದಿಂದ ಇರ್ಬೇಕು ಅಂತ ಅನ್ಸತಿತ್ತು.  ಅದು ಹಿಂದ್ಕಿಂದ್ ಹಿಡ್ದೆ ಮನೀ ಸಂಸ್ಕಾರ ಕಲ್ಕೊಂಡಿ ಬಂದೇವ್.

ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ

ಕಲಾಕೃತಿಗಳ ಕೃಪೆ: Unsplash ಜಾಲತಾಣ

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಕವಿ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಂಜನಗೂಡು ಸೀಮೆಯ ಕನ್ನಡ | ‘ನಮ್ಮೆಣ್ಣು ಬಾರಿ ಒಳ್ಳೆದು ಕಣ, ಆಸ್ತಿ ಬ್ಯಾಡಾಂತ ಸೈನ್ ಆಕೊಡ್ತದ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...