ಬೀದರ್ ಸೀಮೆಯ ಕನ್ನಡ | ಯಾರ್ ಪ್ರಶ್ನೆ ಕೇಳ್ತಾರ ಅವರ್ ಸಾಯ್ತಾರ!

Date:

ಮನಿ ಇರ್ಲಿ, ಆಪೀಸ್ ಇರ್ಲಿ, ಎಲ್ಲೇ ಇರ್ಲಿ, ಯಾರಿಗಿಬಿ 'ಹಿಂಗ್ಯಾಕ ಮಾಡ್ತಿ'? ಅಂತ ಪ್ರಶ್ನೆ ಕೇಳ್‌ಬ್ಯಾಡ್ದು! ಯಾರರಾ ಹಿಂಗ್ಯಾಕ್ ಮಾಡ್ತಿ ಅಂತ ಕೇಳ್ದುರು, ಅವರಿಗಿ ಬರ್ತದ್ ನೋಡ್ ಸಿಟ್. ನಾಭಿ ಇಂಥವು ಅನ್ಬವಿಸಿದಾನೋ ಎಪ್ಪಾ... ಖರೆನೇ ಇಂತವ್ ಭಾಳ್ ಸಲ ನಾ ಅನುಭವಿಸಿದಾ!

ನಾ ಮನ್ನಿ ರಾಜೇಶ್ವರ್‌ದಿಂದ ಬೀದರ್ಕ ಬರ್ಲತಿದ. ನನ್ ಬಾಜು ಇಬ್ಬರು ಹೆಣ್ಮಕ್ಕುಳು ಕುಂತಿರು. ಅವರಿಬ್ಬರ್ದಾಗ ಒಬ್ಬಕಿ ಮತ್ತೊಬ್ಬಾಕಿಗಿ ಹೇಳತೀಳು.

“ಎಕ್ಕಾ ನಮ್ ಶ್ಯಾರಿದು ಇಕಾಡಿಕಾಡಿ ತೋಲಾಗ್ಯಾದ್. ಮನ್ನಿ ಸಂಘದಾಗ ಹ್ಯಾಂಗ್ ಮಾಡ್ತು ನೋಡಿದಲ್ಲಿ?”

“ಹೂಂ ನೋಡ್ದ್… ‘ಕಾಗಿ ಕೈಯಾಗ ಕಾರಬಾರ್ ಕೊಟ್ಟುರ ಕಚೇರಿ ತುಂಬಾ ಹೇಲ್ ಮಾಡಿತಂತ’ ಹಂಗ್ ಆಗ್ಯಾದ ಅದುರ್ದು. ಏನೊ ಒಂದ್ ಥೋಡೆ ಏಳನೇ ತನ ಓದ್ಯಾದ. ಕವೆಲ್ಲಾ ಪುಸ್ತಕಗೋಳು ಇರ್ತಾವಲಾ, ಯಾರ್ ಏಟ್ ಕೊಟ್ಟೂರು? ಏಟ್ ತಗೊಂಡುರು? ಬ್ಯಾಂಕಿಗೇಟ್ ಕಟ್ದೂರು? ಅಂಬಾದೆಲ್ಲ ಲೆಕ್ಕಾ ಇಡ್ತಾಳ ಅಂತ್ಹೇಳಿ ಅದ್ಕ ಮುಂಬೇಕಾರಿ ಕೊಟ್ಟಿದ್ದೇವು. ಸುಮ್ಮ ಅದ್ಯಕ್ಷ ಅಂತ್ಹೇಳಿ ಅಂಬಾರಿ ಅಂತ ಅಧ್ಯಕ್ಷ ಮಾಡ್ಯಾರದ್ಕ.
ನಾನೇ ಮುಂಬೆಕಾರಿ ಆಗಿದಾ. ನನಗೇ ಎಲ್ಲ ಗೊತ್ತದ . ನನ್ ಮನಿಗೇ ಎಲ್ಲರೂ ಬರ್ತಾರಂತ ತೋಲೆ ಧಿಮಾಕ್ ಮಾಡ್ಲತದ. ತೋಲ್ ಧಿಮಾಕ್ ಬಂದುದ ಎಕ್ಕಾ ಅದ್ಕ,” ಅಂತಂದುಳು ಅದಕ್ ಮತ್ತೊಬ್ಬಾಕಿ

“ಹೂಂ ಎಕ್ಕಾ ಅದಕ್ ಈಗೀಗ್ ಧಿಮಾಕೇ ಬಂದದ. ಹಿಂದುಕಾ ಗೌಡಾ, ಕುಲಕರ್ಣಿಗೋಳ್ ಬಲ್ಲಿ ಅಡ್ಡಕ್ ಪಂಚರ್ ಬಡ್ಡಿಲಿ ರೊಕ್ಕ ತಂದು, ಬಡ್ಡಿ ರೊಕ್ಕ ಕಟ್ತೀದೇವು. ಇಕಾಡಿಕಾಡಿ ಕಿವ್ ಸಣ್-ಸಣ್ ಸಂಘಗೋಳ್ ಆಗಿ ಸಣ್-ಸಣ್ ಯ್ಯಾಳೆ ಹೊಡಿಲತಾವ್. ಎಕ್ಕಾ ಎಡ್ಡರ್ ಬಡ್ಡಿ ಒಜ್ಜಿ ಆಗಲೊಂಟುದ. ಪೈಲೇ ಬಡ್ಡಿನೇ ಒಜ್ಜಿ ಆಯ್ತಿತು ಗಂಟಿನಕ್ಕಿಂತ. ಅದರ್ ಸಲ್ಯಾಂದು ಥೋಡೆ ಬಡ್ಡಿ ಕಟ್ಟಾದದಾ ಆಸಾನ್ ಐಯ್ತದಾ. ಏನರ ಒಂದೀಟ್ ಮದ್ದತ್ ಐಯ್ತದ. ನಾವ್ ಕಟ್ಟಿದ್ ಬಡ್ಡಿ ನಾವೇ ಎಲ್ಲರೂ ಜಮಾಸಿ ಕೊನಿಗೆಲ್ಲರೂ ಹಂಚ್ಗೋತೇವ್ ಇದ್ರಾಗ ನಮಗ್ ಬಿ ಲಾಭನೇ ಅದಾ ಅಂತ್ ಈ ಸಂಘದಾಗ್ ಸೇರ್ಕೊಂಡಿದೇವು. ಇದರ್ ಧಿಮಾಕ್ ನೋಡ್ದುರ್ ತಲಿನೇ ಖರಾಬ್ ಆಗ್ಲತದ ನಂದರ ಎಕ್ಕ…”

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು – ಹೊನ್ನಾಳಿ ಸೀಮೆ | ಸವಂತ್ಗಿ ಅಂದ್ರ ಸರ್ವೂತ್ನಾಗು ಬದ್ಕು

“ಹೂಂ… ನಾಭಿ ಅದರ್ ಸಲ್ಯಾಂದೇ ಸಂಘದಾಗ ಸೇರಿದಾ. ಇದು ಹಿಂಗ್ ಮಾಡ್ತುದ ಅಂತ ನಮಗೇನ್ ಗೊತ್ತಿತ್ತು? ಮನ್ನಿ ನಾ ಏನ್ ಅಂದಾ ಅದುಕಾ? ಅಂಥಾದೇನ್ ದೊಡ್ಡುದ್ ಅಂದಾ? ಈಟೆ ಅಂದಿದಾ ನೋಡು ‘ಇಕಾ ತಂಗಿ ರೊಕ್ಕದ ಲೆಕ್ಕಾ ಚಂದಿಡು ಮತ್ತ ನಾಳಿಗಿ ಯಾರಿಗಿಬಿ ಸಂಶಾ ಬರಬ್ಯಾಡ್ದು,’ ಅಂತ ಅಂದುರಾ ಅಕಿ ನನಗ ಏನಂದುಳಂತಿ? ‘ನೀ ಊರ ಪಂಚೇತಿ ಮಾತಾಡ್ ಬ್ಯಾಡ ಸಂಘದಾಗ ಇರಾದಿದ್ದುರ ಇರು. ಇಲ್ಲಾಂದುರ ಹೋಗ್’ ಅಂತು. ಅದರ್ ಮಾತ್ ಕೇಳಿ ನನ್ ತಲಿ ಗಿರ್ ಅಂತ ನೋಡು. ಏನ್ಮಾಡ್ಲಿ? ಸುಮ್ಮುನ್ ಆದ್.”

“ಅಲ್ಲಿದ್ದವ್ರು ಒಬ್ಬುರರಾ ‘ಹಂಗ್ಯಾಕೇ… ಹಂಗ್ಯಾಕ್ ಅಂತೇ ತಂಗಿ? ಅಕಿ ಅಂಬಾದ್ ಬಿ ಖರೆನೇ ಅದಾ. ಎಲ್ಲರೂ ನಿನ್ ಕೈಯ್ಯಾಗ ರೊಕ್ಕಾ ಕುಡ್ತೇವು. ಮತ್ ನೀನೇ ಲೆಕ್ಕ ಬರೋಬ್ಬರಿ ಇಡ್ಬೇಕಲ್ಲ?’ ಅಂತ ಅಂಬಾಲ್ಹೋದುರು. ನೋಡು ಇದು ಎಂಥಾ ನ್ಯಾಯ ಇದ್ದಿರ್ಬೇಕಂತೆ? ಲೆಕ್ಕ ಕೇಳದೇ ತಪ್ಪ್ ಅಂದಪ್ಲೇ ಮಾಡ್ತಾವ. ಇದ್ದಿಂದ್ ಇದ್ದಪ್ಲೇ ಯಾರ್ ಮಾತಾಡ್ತಾರ ಔರ್ ಖೊಟ್ಟಿನೇ ಐಯ್ತಾರ. ಅಂದವರಿಗಿ ಹೊರಗ್ ನಡಿ ಅಂತಾವ್ ಮಂದಿ,” ಅಂತಂದುಳು.

…ಹಿಂಗೆ ಅವರಿಬ್ಬರು ಇನ್ನಾ ಏನೇನೋ ಮಾತಾಡ್ಲತಿರು. ಅವರ್ ಮಾತ್ಗೋಳ್ ಕೇಳಿ. ನನಗ ನಗು ಬಂತು. ನಗು ಬಂತ್ ಖರೆ. ಅವರ್ ಮಾತಿನಾಗ ಬಿ ಅರ್ಥ ಅದಾ ಅಂತನಸ್ತು.

ಮನಿ ಇರ್ಲಿ, ಆಪೀಸ್ ಇರ್ಲಿ, ಅದು ಎಲ್ಲೇ ಇರ್ಲಿ, ಯಾರಿಗಿಬಿ ‘ಹಿಂಗ್ಯಾಕ ಮಾಡ್ತಿ?’ ಅಂತ ಪ್ರಶ್ನೆ ಕೇಳ್‌ಬ್ಯಾಡ್ದು; ಯಾರರಾ ಹಿಂಗ್ಯಾಕ್ ಮಾಡ್ತಿ ಅಂತ ಕೇಳ್ದುರು, ಅವರಿಗಿ ಬರ್ತದ್ ನೋಡ್ ಸಿಟ್. ಯಾರ ಪ್ರಶ್ನೆ ಕೇಳ್ತಾರ ಅವರ್ ಸಾಯ್ತಾರ. ಸಾಯಾದ್ ಏನು ಸತ್ತೇ ಹೊಯ್ತಾರ್. ನಾಭಿ ಇಂಥವು ತೋಲ್ ತೋಲ್ ಅನ್ಬವಿಸಿದಾನೋ ಎಪ್ಪಾ. ಖರೆನೇ ಇಂತವ್ ಭಾಳ್ ಸಲ ನಾ ಅನುಭವಿಸಿದಾ. ಯಾಕ್ರಿ ಸರ್ ಹಿಂಗ್ಯಾಕ್ ಮಾಡ್ಲತೀರಿ, ಇದು ತಪ್ಪದಾ ಅಲಾ ನೀವು ಮಾಡಾದು ಅಂತ ಒಂದೆರಡ್ ಸಲಾ ಕೇಳಿ ನಾ ಫಜೀತಿ ಫಜೀತಿ ಆಗಿದಾ.

ಒಮ್ ಏನಾಗಿತ್ತಂದುರ ನಾ ಭಾಳ ಸಣ್ಣಕಿ ಇದ್ದ. ಏಳನೇನೋ ಎಂಟನೇನೋ ಇದ್ದ. ಅವಾಗ ನಮ್ ಕ್ಲಾಸ್ ಟೀಚರು ಏನ್ಮಾಡ್ತೀರು ಅಂದುರಾ? ಸಾವಕಾರ್ ಮಕ್ಕುಳು ತಡ ಮಾಡ್ದುರ ಹೊಡಿತಿದಿಲ್ಲ. ಬಡುರು ಮಕ್ಕುಳು ಥೋಡೆ ತಡ ಮಾಡಿ ಬಂದುರ್ ಬಿ, ಇನ್ಸಲ್ಟ ಮಾಡಿ, ಕಿವಿ ಹಿಂಡಿ ಒಳಗ್ ನೂಕ್ತೀರು. ನಾ ಒಂದಿನ ಎದ್ದ್ ನಿಂತು “ಇಕಾರಿ ಟೀಚರ್… ಈಗೇ ದೋ ಮಿನೇಟ್ ಪೈಲೆ ಮಾನಂದಾ ಬಂದುಳು. ಅಕಿಗಿ ನೀವು ಏನ್ ಬಿ ಅಂದಿಲ್ಲ? ಈಗ್ ಈ ತುಕ್ಯಾಗ ಯಾಕ್ ಹೊಡಿಲತಿರಿ?” ಅಂತ ಕೇಳ್ದ ಅವಾಗ್ ಅವರು ನನ್ಕಡಿ ಘುರ್ಕಾಸಿ ನೋಡಿ, “ಹಿಂಗಾ ಇಕಾಡಿ ಬಾ. ಜರಾ ಇಕಾಡಿ ಬಾ ಬಿಟಾ,” ಅಂತ್ ಕರ್ದು, ನನ್ ಕಪಾಳ್ದಾಗ ಎಡ್ ಹೊಡ್ದು, ನನ್ ಕಿವಿ ಹಿಂಡಿ, “ನೀ ಏನ್ ನನ್ ಹೆಡ್ ಮಾಸ್ತರ್ ಇದ್ದಿ? ನಡೀ ಅಕಾಡಿ…” ಅಂತ್ ಕಳ್ಸೀರು. ನನಗ್ ತೋಲ್-ತೋಲ್ ಇನ್ಸಲ್ಟ ಆಗಿತ್ತವಾಗ್. ಅಗೋತಿನಿಡ್ದು ಇಗೋತಿನ್ ತನ್ಕ ಇಂಥಾವ ಬಕ್ಕೋಳ್ ಅನುಭವಿಸಿದಾ ಮತ್ ನೋಡಿದಾ.

ಒಮ್ಮ ನಮ್ಮ ಬಾಬಾ ಮತ್ ನಮ್ಮ ಬಾಬಾನ ದೋಸ್ತುರು ಮಾತಾಡ್ಕೋತ ಕುಂತಿರು ನಮ್ ಅಂಗಳ್ದಾಗ್. ನಾ ಅಲ್ಲೇ ರಜ ತೆಗಿಲತಿದಾ. ಅವಾಗ ನಮ್ ಬಾಬಾನ ದೋಸ್ತುರು ಬಾಬಾಗ ಹೇಳ್ಳತೀರು; “ದೋಸ್ತ ಒಂದ್ ಮಾತ್ ಹೇಳದದಾ ನಿನಗ್. ನಾ ತೋಲ್ ತೋಲ್ ತಕ್ಲೀಫ್ ಉಟಾಸ್ಲತಿದಾ ಏನ್ ಮಾಡ್ಬೇಕು ಅಂತ ನನಗ ತಿಳ್ಯಾಲೊಂಟುದಾ.” ಅದಕ್ ಬಾಬಾ, “ಯಾಕೋ ದೋಸ್ತ, ಏನಾಗ್ಯಾದ?” ಅಂತ್ ಕೇಳ್ದುರ್. ಅವಾಗ ನಮ್ಮ ಬಾಬಾನ್ ದೋಸ್ತುರ್ ಅಂದುರು; “ನಮ್ ಪಗಾರ್ಕಾ ನಾವ್ ರೊಕ್ಕಾ ಕುಡಾದ್ ಬಂದುದ್. ಈ ಕ್ಲರ್ಕಗೋಳಿಗಿ ಏಟರಾ ಲಂಚಾ ಕುಡಬೇಕು ಅಂತಾ! ನಾ ಏಟ್ ಕೊಟ್ಟುರ್ ಬಿ ಅವತುರ್ ಹೊಟ್ಟಿನೇ ತುಂಬಾಲೊಂಟುದ್. ಅದರ್ ಸಲ್ಯಾಂದು ಎಲ್ಲರೂ ಸೇರಿ ಒಂದ್ ಯುನಿಯನ್ ಮಾಡ್ಕೊಂಡು, ನಮ್ದರ್ದಾಗೇ ಒಬ್ಭವನಿಗಿ ಅಧ್ಯಕ್ಷ ಮಾಡ್ದೇವು. ಉಲ್ಟಾ ಖೆಮ್ ಕೊಟ್ಟು ದಮ್ ತಗೊಂಡಪ್ಲೇ ಆಯ್ತು. ಅವ ನಾ ಅಧ್ಯಕ್ಷ ಇದ್ದ ನನಗ ಕೆಲ್ಸ ಕೇಳಬ್ಯಾಡ್ರಿ ಅಂತ್ ಘರ್ ಘುರ್ ಮಾಡ್ಕೊತಾ ಮ್ಯಾಗ ಮ್ಯಾಗಾ ಒಡ್ಯಾಕೋತಾ, ನಮ್ಮ ಕ್ಲರ್ಕನ್ ಜೋಡಿ ಒಳಗಿಂದೊಳಗೆ ಕೈ ಜೋಡ್ಸಿ, ನಮಗೆಲ್ಲಾ, ‘ಕುಡ್ರೊ ಅವನಿಗಿಬಿ ಹೊಟ್ಟಿ ಅದಾ ಪಾಪ ಇರ್ಲಿ ಕುಡ್ರಿ,’ ಅಂತ ನಮಗೇ ಅಲ್ಲಾತನ. ನಮಗ ಕಮೀಷನ್ ಕುಡಾದು ತಪ್ಪಲ್ ಹೊಂಟುದ್, ಕ್ಲರ್ಕಾ ಮತ್ ಅಧ್ಯಕ್ಷ ಇಬ್ಬರು ಸೇರಿ ಹಂಚ್ಕೊಂಡು ತಿಲ್ಲತರ. ಪೈಲೆ ಒಬ್ಬವ್ ತಿಂತಿನೂ ಈಗ್ ಇಬ್ಬರ್ ತಿಲ್ಲತೂರ್. ಏನ್ ಮಾಡ್ಬೇಕ್ ಅಂತಾ ತಿಳ್ಯಾಲ್ ಹೊಂಟುದ್. ಅಲ್ಲ ದೋಸ್ತ, ನಮ್ ಪಗಾರಾ, ಟಿಎಡಿಎ ಇವೆಲ್ಲ ಮಾಡಾದು ಅವನ್ ಕೆಲ್ಸನೇ ಇರ್ತದ. ಅದರ್ ಸಲ್ಯಾಂದೇ ಅವನೀಗಿ ಕ್ಲರ್ಕ ಅಂತ ತಗೊಂಡು, ಪಗಾರ್ ಕೊಡ್ತಾರ್. ಅವ ಒಂದು ಪೇಪರ್ ಹಿಲಾಸ್ದೂರ್ಬಿ ರೊಕ್ಕಾ ಕೇಳಾತನ್. ನನಗ ತೋಲ್ ಸಿಟ್ ಬಂದು, ‘ಇಕಾ… ನಾ ಒಂದಪೈಸೆ ಕುಡಾಲ್. ನಮ್ದೆಲ್ಲಾ ಬಿಲ್ ಮಾಡಾ ಸಲ್ಯಾಂದೇ ನಿನಗ್ ಪಗಾರ್ ಕುಡ್ತಾರ್. ನೀ ಹಿಂಗ್ ಕಮೀಷನ್ ತಕೋಮದು ತಪ್ಪದಾ,’ ಅಂತಂದ್ ನೋಡ್ ದೋಸ್ತ. ವೋಟ್ ಅಂದಿಂದ್ ಸಲ್ಯಾಕ್, ನನಗ ಸತಾಸೇ ಸತಾಸಲತಾನ್. ತೋಲ್ ತಕ್ಲೀಫ್ ಮಾಡ್ಲತಾನ್…” ಇವರಿಬ್ಬರ ಮಾತ ಕೇಳಿ ನನಗ ಖರೇ ಅನಸ್ತು. ಇಂಥವು ಭಾಳ್ ಅವಾ ದುನಿಯಾದಾಗ. ಯಾರರ ತಪ್ಪಿಗಿ ತಪ್ಪು ಅಂತ ಹೇಳ್ದುರ, ಹಲ್ಲಾಗೇ ಹಿಡಿತಾರ್.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು – ಕಲಬುರಗಿ ಸೀಮೆ | ನಮ್ ರತ್ನನ್ ‘ಎಲೆಕ್ಷನ್ ಟಿವಿ’ ಕನಸು

ನನಗ್ ಬಿ ಒಂದ್ ಸಲ ಹಿಂಗೇ ಆಗಿತ್ತು. ನಾ ಕೆಲ್ಸ ಮಾಡಾ ಥವಲಿ. ನಮ್ ಸೀನಿಯರ್ ಅಕ್ಕ ಬಂದು, “ತಂಗಿ ನಾವ್ ಬಿ ಒಂದ್ ಯುನಿಯನ್ ಮಾಡ್ಕೋಮಾರಿ. ನಮಗೇನಾರ ಅನ್ಯಾಯ ಆದುರ ಒಂದಾಗಿ ಕೇಳ್ಳಾಕ್ ಬರ್ತದ. ನಿನ್ ಮಾತ್ ಎಲ್ಲರೂ ಕೇಳ್ತಾರ್. ನನಗ ಸಪೋಟ್ ಮಾಡು ನಾ ಅಧ್ಯಕ್ಷ ಆಯ್ತಾ?” ಅಂತಂದುಳು. ನಾ ಎಲ್ಲರಿಗಿ ಹೇಳಿ, ಅಕಿಗಿ ಅಧ್ಯಕ್ಷ ಮಾಡ್ದ. ಮೆಂಬರ್ಶಿಪ್ ಫೀಸ್ ಜಮಾಸಿ, ಅಕಿನ ಕೈಯ್ಯಾಗ ಒಯ್ದು ಕೊಟ್ಟ. ಅಕಿ ಮೊದಲೇ ಪ್ಲಾನ್ ಮಾಡಿ, ತನ್ನ ಮಾತ್ ಕೇಳೋರಿಗಿ ಖಜಾಂಚಿ ಮಡ್ಕೊಂಡು, ಒಂದ್ ಥೋಡೆ ದಿನ ಒಡ್ಯಾಡಿದಪ್ಲೆ ಮಾಡಿ, ಅವೀಸ್ ರೊಕ್ಕ ನುಂಗಿ ನೀರ್ ಕುಡ್ದುಳು. ಹಿಂಗಾದುರ ನಡ್ಯಾಲಂತ್ಹೇಳಿ ನಾ ಅಕಿಗಿ ಲೆಕ್ಕ ಕೇಳ್ದ ನೋಡ್ರಿ! ಅದಕ್ಕ ಅಕಿ ನನಗೇ ಗುಂಪಿನಾಗಿಂದೇ ತೆಗ್ದ ಹಾಕ್ದುಳ್. ಇಂಥವು ಹೇಳ್ಕೋತ ಹೋದುರ ಶಂಬೋರ್ ಕತಿ ಅವಾ. ಹಂಗಂತ ಸಂಘಟನೇ ಮಾಡೋರೆಲ್ಲ ಹಿಂಗೇ ಇರಲ್ಲ. ನಮ್ ದೇಶದೊಳಗ ಸಂಘಟನೆಲಿಂದ ಬೇಕಾದಷ್ಟು ಕೆಲಸಾಗೋಳು ಆಗ್ಯಾವ್. ಆದ್ರ ಒಳ್ಳೆ ಮುಂಬೆಕಾರಿಗೋಳು ಅಂದುರ ಅಧ್ಯಕ್ಷ ಸಿಗಬೇಕು. ಒಳ್ಳೆ ಕೆಲಸಾ ಆಯಿತಾದ. ಈ ಲಂಚಾ ತಿಂಬಾ ದುನಿಯಾದಾಗ, ಕೆಟ್ಟ ಮಂದಿನೇ ಜಾಸ್ತಿ ಆಗ್ಯಾರ. ಹಿಂಗಾಗಿ ನನಗ ಕೆಟ್ಟ ಅನುಭವ್ಗೋಳೇ ಜಾಸ್ತಿ ಆದುವು ಅಂತ ಅನಸ್ತದ. ಬಿ ಆರ್ ಅಂಬೇಡ್ಕರ್ ಅವರು ಹೇಳ್ಯಾರ್; ಶಿಕ್ಷಣ ಸಂಘಟನೆ ಮತ್ತು ಹೋರಾಟ ಅಂತ್ಹೇಳಿ. ಎಲ್ಲಿ ತನ್ಕ ಹೋರಾಟ ಮಾಡಲ್ಲ ಅಲ್ಲಿತನ್ಕ ನ್ಯಾಯ ಸಿಗಲ್ಲ. ಅಂಬಾ ಮಾತು ತಲ್ಯಾಗ್ ಇಟ್ಗೊಂಡು, ನಾ ಬಾರ್-ಬಾರ್ ಅಲ್ಲಿ ಇಲ್ಲಿ ಪ್ರಶ್ನೆ ಮಾಡಿ, ಭಾಳ ತಕ್ಲೀಪ್ ಉಟಾಸಿದ. ಅದೇ ಯೋಚ್ನೆ ಮಾಡ್ಕೋತ ನಾ ಬಸ್ಸಿನಾಗ ಕುಂತಿದ. ಬಸ್ ಯಾವಾಗ ಬೀದರ್ಕ ಬಂತು ಅಂಬಾದೇ ಗೊತ್ ಆಗಲೋಯ್ತು. ಕಂಡೆಕ್ಟರ್, “ಬೀದರ್… ಬೀದರ್… ಲಾಸ್ಟ ಸ್ಟೇಷನ್ ಇಳಿರಿ, ಇಳಿರಿ…” ಅಂತ ಅಂದಮ್ಯಾಲ ನನ್ ಯೋಚ್ನೆ ಕಟ್ ಆಯ್ತು. ನಾ ಬಸ್ಸಿನಾಗಿಂದು ಇಳ್ದು ಆಟೊ ಹಿಡ್ಕೊಂಡು ಮನಿಗಿ ಬಂದ.

ಕಲಾಕೃತಿಗಳ ಕೃಪೆ: Unsplash ಜಾಲತಾಣ

ಪೋಸ್ಟ್ ಹಂಚಿಕೊಳ್ಳಿ:

ಬಿ ಜೆ ಪಾರ್ವತಿ ವಿ ಸೋನಾರೆ
ಬಿ ಜೆ ಪಾರ್ವತಿ ವಿ ಸೋನಾರೆ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೊಂಕಣಗಾಂವ ಎಂಬ ಕುಗ್ರಾಮದವರು. ಓದಿದ್ದು, ಬೆಳೆದದ್ದೆಲ್ಲ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ. ಅನೇಕ ನಾಟಕ, ಕಿರುಚಿತ್ರಗಳಲ್ಲಿ ಅಭಿನಯ. ಸಾಹಿತ್ಯ ಕೃತಿಗಳ ರಚನೆ.

1 COMMENT

  1. ‘ಯಾರ್ ಪ್ರಶ್ನೆ ಕೇಳ್ತಾರ?, ಅವರ್ ಸಾಯ್ತಾರ!’, ೧೦೦% ನಿಜ ಅವ್ವರೆ, ನಿವೂ ಹೇಳಿದ ಈ ಕಥೆಯನ್ನು ಸುಮಾರು ಜನ ಇದನ್ನು ಅನುಭವಿಸೇ ಅನುಭವಿಸಿರುತ್ತಾರೆ. ಏಕೆಂದರೆ ನಂಬಿ ನಮ್ಮರ ಅಂತ ಸಹಕಾರ ಕೊಟ್ಟು ಹಿರೆತನ ಕೊಟ್ಟಿರುತ್ತೇವೆ. ಅವು ನಾವು ಹೇಳಿದ್ದೇ ಕೇಳುತ್ತಾರಂತ ತಿಳಿದು, ಸ್ವಲ್ಪ ದಿನ ಹಾಗಿಂದ ಅವುಗಳಿಕೆ ಕೊಂಬು ಜಾಸ್ತಿಯಾಗಿ, ಮದದಿಂದ ನನ್ನಿಂದ ಎಲ್ಲಾ ಅಂತವು, ನಮ್ಮ ಪ್ರೀತಿಯನ್ನು ದುರುಪಯೋಗ ತೊಗನಂತಾವು. ಇಂತವುಕ್ಕೆ ನಿವೂ ಹೇಳಿದ ಕಥೆ ಕೇಳಿ ಎಲ್ಲಾ ಜನ ಶಿಕ್ಷಣ, ಸಂಘಟನೆ, ಹೋರಾಟ ದಿಂದ ಸರಿಯಾಗಿ ಜನ ಎಚ್ಚರಾಗಿ ಬುದ್ದಿ ಕಲಿಸಬೇಕು. ಏಕೆಂದರೆ ಪ್ರೇಶ್ನೆ ಕೇಳಿದರೆ? ಗುಂಪಿನಿಂದ ದೂರವಿಡವ ವ್ಯಕಿಗಳನ್ನು, ಒಂದಾಗಿ ನಾವು ದೂರ ಮಾಡಬೇಕು!. ಇಲ್ಲಂದರೆ ಲದ್ದಿ ಜೀವಿಗೆ ಭ್ರಷ್ಟಾಚಾರಕ್ಕೆ ನಾವೂ ಅನು ಮಾಡಿಕೊಟ್ಟಂತೆ ಆಗುತ್ತದೆ. ಸರಿಯಾದ ಬುದ್ದಿ ಜೀವಿ ವ್ಯಕ್ತಿಗಳಿಗೆ ಹಿರೆತನ ಕೊಡಬೇಕು ಅವಾಗ ಹೆಚ್ಚು ಅಭಿವೃದ್ಧಿ ಆಗುತ್ತದೆ, ಅಂತ ನಿಮ್ಮ ಕಥೆಯ ಒಳ್ಳೆಯ ಉದ್ದೇಶದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಿರುವ ಅವ್ವನವರಿಗೆ…. ಅನಂತ ಕೋಟಿ ಶರಣುಶರಣಾರ್ಥಿಗಳು ಅವ್ವನವರೇ…
    🌹🌹🙏🙏🙏👏👏🌹🌹

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ ಸೀಮೆಯ ಕನ್ನಡ | ‘ಅಲ್ಲಬೇ… ಚಲೋ ಮಳಿ ಆಗ್ಯಾವು, ಅಡವ್ಯಾಗ ಏನು ಇಲ್ಲಂತನ ಚಿಗರಿಗೆ ತಿನ್ನಾಕ?’

"ಯಾಕ ಬೇ ಅಕ್ಕವ್ವ ಇಷ್ಟ ಮುಂಜೆನೆದ್ದು ಯಾರಗೇ ಬೈಯಾಕತ್ತಿಯಲ್ಲಾ? ಯಾರ ಏನ್‌...

ಕುಮಟಾ ಸೀಮೆಯ ಕನ್ನಡ | ನಮ್ಮನಿ ಹಿಂದಿನ ಸೊಪ್ಪಿನ ಬೆಟ್ಟ ಒಂದ್ ನಮನಿ ಮಾಲ್ ಇದ್ದಂಗೆ!

ದೊಡ್ಡವ್ರೆಲ್ಲ ದನದ ಸಗಣಿ ಬಿದ್ರೆ ಹೆಕ್ಕ ಬಂದು ಬರಣಿ ತಟ್ಟುದು, ಕಡ್ಲಕಾಯಿ...