"ಗ್ವಾಡಿಗಿ ಹಚ್ಚೋ ಟಿವಿ ತಗೋಬೇಕಂತ ಆಸಿ ಅದಾ. ಎಲೆಕ್ಷನ್ ಮುಗಿಯೋದ್ರೋಳಗ ಒಂದ್ ಹೋಸ ಟಿವಿ ತಗೋಬೇಕಂತ ಮಾಡಿನಿ ನೋಡ್ರೀ," ಅಂದಳು ರತ್ನ. "ಎಲೆಕ್ಷನ್ಗೂ ಟಿವಿಗೂ ಏನ್ ಸಂಬಂಧ? ಎಲೆಕ್ಷನ್ ಸಲುವಾಗಿ ಟಿವಿ ರೇಟೆನಾದ್ರೂ ಕಮ್ಮಿ ಮಾಡ್ಯಾರೇನೇ...?" ಅಂದೆ ಆಶ್ಚರ್ಯದಿಂದ
“ಅಕ್ಕೋರೇ…” ಬಾಗಿಲ ಬಡಿದಳು ರತ್ನ.
“ಯಾಕೇ ರತ್ನ… ಈಟ ಜಲ್ದಿ ಬಂದಿದಿ…”
“ಬಿಸಲ ಬಾಳ ಆಗಲತದರೀ ಅಕ್ಕೋರೇ. ಅದಕ್ಕ ಜಲ್ದಿ ಕೆಲಸ ಮುಗಿಸಿ ಬಿಸಲ ಏರಟಗೇ ಮನಿ ಸೇರಕೋಬೇಕಂತ ಜಲ್ದಿ ಬಂದ,” ಅಂದಳು.
“ಛಲೋ ಮಾಡಿದ್ದಿ. ಮುಂಜಾನಿ ಏಳಕ್ಕ ಬಿಸಲ ರಪರಪ ಬಡಿಲತದ. ಬಿಸಲ ಹೆಚ್ಚಾದರ ದಣಿವು ಹೆಚ್ಚಾಗತದ. ಈ ಬ್ಯಾಸಗಿ ಮುಗ್ಯಾತನಕ ಜಲ್ದಿನೆ ಬಂದ ಬಿಡು. ಸುಮ್ಮನೆ ಬಿಸಲಾಗ ಓಡಾಡಬ್ಯಾಡ. ಬಿಸಲ ಬಡದು ಬೇಮಾರ ಬಿದ್ದರ ಹೈರಾಣ ಅದ ಮತ್ತ ಅಂತ ಅನಕೊಂತ ಬೀಸಿ ಗಾಳಿ ಬರಲತದಂತ ಮನ್ಯಾಗಿನ ಎಲ್ಲಾ ಕಿಟಕಿಗಳನ್ನು ಮುಚ್ಚಲತಿದ್ದ. ಈ ಬ್ಯಾಸಗ್ಯಾಗ್ ಮುಂಜಾನಿ ಒಂಬತ್ತ ಅನ್ನುವಷ್ಟರಲ್ಲಿ ಕಿಟಕಿ, ಬಾಗಿಲ ಮುಚ್ಚಿಟ್ರ ಮನಿ ಸ್ವಲ್ಪ ತಂಪ ಇರತದ. ಇಲ್ಲಂದ್ರ ಹೊರಗಿನ ಬಿಸಿ ಗಾಳಿ ಮನಿಯೊಳಗ ತುಂಬಿ, ಮನಿ ಎಂಬೋದು ಕಾದ ಕುಲಮಿ ಆಗಿಬಿಡತದ…”
ಎಂದಿನಂತೆ ರತ್ನ ಕೆಲಸದ ಗಡಿಬಿಡಿ ಮಾಡಲಾರದೆ, ನೀವಾ… ಅಂತ ಕುಂತಬಿಟ್ಟಳು. “ಒಂದೀಟು ಶರಬತ್ತ ಮಾಡ್ರೀ ಅಕ್ಕೋರೆ… ಸ್ವಲ್ಪ ಐಸ್ ಹಾಕ್ರೀ. ಈ ಗರಮಿಗಿ ಬಾಯಿ ಆರಲತದ,” ಅಂದಳು.
ನಾ ಶರಬತ್ತಿನ ತಯ್ಯಾರಿಯಲ್ಲಿದ್ದಾಗ, “ಅಕ್ಕೋರೇ, ನಾ ಒಂದು ಹೋಸ ಟಿವಿ ತಗೋಬೇಕಂತ ಅನ್ಕೋಂಡಿನ್ರೀ,” ಅಂದಳು.
“ಯಾಕೇ…? ಈಗ ಇದ್ದದ್ದು ಖರಾಬ ಆಗ್ಯಾದೇನು?” ಅಂದೆ.
“ಇಲ್ರೀ ಅಕ್ಕೋರೆ, ಛಂದೆ ಅದಾ. ಆದರ ಸ್ವಲ್ಪ ದೊಡ್ಡದು ಗ್ವಾಡಿಗಿ ಹಚ್ಚೋ ಟಿವಿ ತಗೋಬೇಕಂತ ಮಾಡಿನಿ…”
ಮುಂಜಾನಿಯಿಂದ ಹೈರಾಣಾಗಿ ದುಡದು ಮನಿಗಿ ಹೋಗಿ ನೀವಾ ಅಂತ ಧಾರಾವಾಹಿ, ಸಿನಿಮಾ ನೋಡೋದು ರತ್ನಗ ಭಾಳ ಇಷ್ಟ. ಸದಾ ದುಡಿಯೊದರೊಳಗ ವ್ಯಸ್ತ ಇರೋ ಅವಳಿಗಿ ಎಂಟರ್ಟೈನ್ಮೆಂಟ್ ಅಂದರ ಟಿವಿ ಮಾತ್ರ. ಅವಳ ಆಸೆಗೆ ನಾನು ಪ್ರೋತ್ಸಾಹಿಸಿ, “ಆಯ್ತು ತಗೋ. ಎಷ್ಟ ದುಡ್ಡ ಜಮಾ ಮಾಡಿದಿ ಟಿವಿ ತಗೋಲಾಕ? ಕಮ್ಮಿ ಬಿದ್ದರ ಕೇಳು ನಾನು ಕೊಡತಿನಿ,” ಅಂತ ಅಶ್ವಾಶನೆ ಕೊಟ್ಟೆ.
“ಹೂಂ ರೀ ಅಕ್ಕೋರೆ… ಬಾಳ ದಿನದ ಹಿಡದು ಗ್ವಾಡಿಗಿ ಹಚ್ಚೋ ಟಿವಿ ತಗೋಬೇಕಂತ ಆಸಿ ಅದಾ. ಈಗ ಹ್ಯಾಂಗಿದ್ರೂ ಎಲೆಕ್ಷನ್ ಬಂದಾವ. ಎಲೆಕ್ಷನ್ ಮುಗಿಯೋದ್ರೋಳಗ ಒಂದ್ ಹೋಸ ಟಿವಿ ತಗೋಬೇಕಂತ ಮಾಡಿನಿ ನೋಡ್ರೀ,” ಅಂದಳು ಶರಬತ್ತ ಹೀರತಾ.
“ಎಲೆಕ್ಷನ್ಗೂ ಟಿವಿಗೂ ಎನ್ ಸಂಬಂಧ? ಎಲೆಕ್ಷನ್ ಸಲುವಾಗಿ ಟಿವಿ ರೇಟೆನಾದ್ರೂ ಕಮ್ಮಿ ಮಾಡ್ಯಾರೇನೇ?” ಅಂದೆ ಆಶ್ಚರ್ಯದಿಂದ.
“ಇಲ್ರೀ ಅಕ್ಕೋರೇ… ಈಗ ಎಲೆಕ್ಷನ್‌ಗೆ ನಿಂತೋರು ನಮಗ ಓಟ್ ಹಾಕ್ರೀ ಅಂತ ರೊಕ್ಕ ಕುಡತಾರಲ… ನಮ್ಮ ಮನ್ಯಾಗ್ ನಾನು, ನನ್ನ ಗಂಡ, ನಮ್ಮತ್ತಿ – ಮೂರ ಮಂದಿದ ಓಟ್ ಅವಾ. ಅವರ ಕೊಟ್ಟ ರೊಕ್ಕ ಮತ್ತ ನಾ ಜಮಾಸಿದೆಲ್ಲ ಕೂಡಸಿ ಒಂದ್ ಗ್ವಾಡಿಗಿ ಹಚ್ಚೋ ಟಿವಿ ತಗೋತಿನಿ,” ಅಂದಳು.
ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು – ಕುಂದಾಪುರ ಸೀಮೆ | ಗಂಜಿ ಊಟದ ಗಮ್ಮತ್ತು
“ಅಲ್ಲೇ ರತ್ನ… ರೊಕ್ಕ ತಗೊಂಡು ಓಟ್ ಹಾಕ್ತಿ ಏನೇ? ಅದು ತಪ್ಪ ನೋಡು,” ಅಂತ ತಿಳಿಸಿ ಹೇಳೋ ನನ್ನ ಪ್ರಯತ್ನ ಅರ್ದಕ್ಕೆ ತಡೆದು… “ಸುಮ್ನಿರ್ರೀ ಅಕ್ಕೋರೇ.. ತಪ್ಪೋ ಸರಿನೋ… ಅಲ್ರೀ, ಗೆದ್ದ ಬಂದೋರು ನಮಗೇನಾರ ಉದ್ಧಾರ ಮಾಡ್ತಾರೇನು! ಅವರವರ ಮನಿ ತುಂಬಕೊಂಬ ಸಲುವಾಗಿ ಬಡದಾಡತಾರ ಅಷ್ಟ. ರೊಕ್ಕ ಕೊಟ್ಟ ಓಟ್ ಹಾಕ್ರೀ ಅಂತ ಕೇಳಲಾಕ ಬರತಾರಲ್ಲ, ಅವಾಗೀಟೆ ಅವರ ಮಾರಿ ನೋಡಾದು. ಗೆದ್ದ ಮ್ಯಾಕ ನಮ್ಮ ಕಷ್ಟ ಎಲ್ಲಿ ಕೇಳತಾರ ಅವ್ರು!“
“ಹಂಗಾದ್ರ, ಯಾರ ದುಡ್ಡ ಕೊಡತಾರ ಅವರಿಗಿ ಓಟ್ ಹಾಕ್ತಿ ಏನೇ?”
“ಹೂಂ ಮತ್ತ… ರೊಕ್ಕ ಕೊಟ್ರ ನಾವ್ಯಾಕ ಬ್ಯಾಡ ಅಂಬರಿ? ಬರೋ ಲಕ್ಷಮಿಗಿ ಒದ್ದರ ಹುಚ್ಚ ಅಂತಾರ. ಎಲ್ಲಾ ಪಾರ್ಟಿದವರು ಕೊಡತಾರ. ಅವರಿಗಿ ಗೆದೆದು ಮುಖ್ಯ. ನಾವ್ಯಾಕ ಸುಮ್ನ ಓಟ್ ಹಾಕರಿ? ಗೆದ್ದ ಮ್ಯಾಲ್ ನಮ್ಮ ಕಡಿ ಮೂಸಿನು ನೊಡಲ್ಲ ಅವ್ರು…!”
“ಅಂದರ… ಟಿವಿ ಖರದಿ ಮಾಡೊವಷ್ಟು ದುಡ್ಡು ಕೋಡ್ತಾರೇನು?”
“ಇಲ್ರೀ… ಏಟರ ಕೊಡ್ಲಿ, ಮನ್ಯಾಗ ಏಸ್ ಓಟ್ ಇರತಾವ ಅವರಿಗೆಲ್ಲ ಹಿಡದೆ ಇಂತಿಷ್ಟು ಅಂತ ಕೊಡತಾರ. ನಮ್ಮ ಅತ್ತಿ ಮತ್ತ ಗಂಡಂಗೂ ಹೇಳಿನಿ; ಇಕ ಸಾರಿ ಎಲೆಕ್ಷನ್‌ದವರೂ ಕೊಟ್ಟ ರೊಕ್ಕ ಖರ್ಚ ಮಾಡಬ್ತಾಡ್ರೀ ಅಂತ. ಎಲ್ಲರದೂ ಕೂಡಸಿ ಒಂದ ಟಿವಿ ತಗೊಂಬದ ಅದಾ…”
“ರತ್ನ, ನಿನಗ ಇಂಥ ಪಕ್ಷದವರೇ ಗೆದಿಲಿ ಅಂಬೊ ಆಶಾ ಇಲ್ಲೇನು…?”
“ಯಾರ ಗೆದ್ರ ನಮಗೇನ್ರೀ ಅಕ್ಕೋರೆ… ನಾವ ಬಡತನದಾಗ ಹುಟ್ಟಿ ಬಡತನದಾಗ ಬದುಕಲತಿವಿ. ಸರ್ಕಾರ ಒಂದೀಟ ಅಕ್ಕಿ ಕೊಡತದ. ಅದಿಲ್ಲದಿದ್ರ ಕೆಲಸ ಇಲ್ಲದಾಗ ಮಕ್ಕಳ ಉಪವಾಸ ಬಿಳಬೇಕಾಗತಿತ್ತು. ಎಲ್ಲರೂ ಓಟ ಕೇಳಾಕ ಬಂದಾಗ ಅದು ಮಾಡತಿವಿ, ಇದ ಮಾಡತೀವಿ ಅಂತ ಆಶಾ ತೊಇರಿಸತಾರ. ಅದರಾಗ ಒಂದ ಪೈಸೆನೂ ನೇರವೇರಿಸಲ್ಲ. ನಮಗ ಕೂಲಿ ಸಿಕ್ಕರ ಸಾಕು, ಹೆಂಗಾರ ಬದಕತಿವಿ. ಈ ರಾಜಕೀಯದಿಂದ ಯಾರಿಗಿ ಉಪಕಾರ ಆಗತದೊ ಏನೋ! ನಮಗಂತು ದುಡಿಯೋದ ತಪ್ಪಲ್ಲ ನೋಡ್ರೀ ಅಕ್ಕೋರ…”
“ದುಡದ ತಿನ್ನೋದು ಒಳ್ಳೆದೇ ಬಿಡು. ನಾವು ಓಟ ಹಾಕಿ ಗೆದಸಿದೋರಿಗು ಸಮಾಜಕ್ಕ ಜನರಿಗೆ ಒಳ್ಳೆದ ಮಾಡಬೇಕೆಂಬ ಜವಾಬ್ದಾರಿ ಇರತದ. ಗೆದ್ದ ತಕ್ಷಣ ಅವರು ನಮದೆಲ್ಲ ಸಮಸ್ಯೆ ಪರಿಹರಿಸಬೇಕು ಅಂತ ನಿರೀಕ್ಷೆ ಮಾಡಿದ್ರ ಹ್ಯಾಂಗ್? ಅವರು ಅವರ ಮಿತಿಯೊಳಗ ಕೆಲಸ ಮಾಡಬೆಕಾಗತದ. ಯಾರಿಗೇ ಆಗ್ಲಿ ಒಬ್ಬೊಬ್ಬರ ಸಮಸ್ಯೆ ಪರಿಹರಿಸಲಿಕ್ಕ ಆಗತದೇನ್ ಹೇಳು?” ಅಂದೆ.
“ಅದಕ್ಕ ಅಕ್ಕೋರೇ… ಯಾರ್ರ ಗೆದಿಲಿ, ಯಾರ್ರ ಸೋಲಲಿ, ನಮಗಿಷ್ಟು ರೊಕ್ಕ ಕೊಡ್ಲಿ. ಅಲ್ಲಿ ನಮ್ಮಕ್ಕನ ಊರಾಗ ಮನಿಗೊಂದು ಕುಕ್ಕರ ಕೊಡಲಾತರಂತ, ಸೀರಿ ಕೊಡಲತಾರಂತ, ಈ ನಮ್ಮ ಹಾಳ ಊರಾಗ ಏನೂ ಕೊಡಲಾಗ್ಯಾವ… ಸಂತಹಾರ್ಲಿ…” ಅಂತ ಬೈಯತೊಡಗಿದಳು.
“ರತ್ನ… ಅವರು ಕೊಡೊ ಸೀರಿ, ಕುಕ್ಕರ್, ರೊಕ್ಕದ ಆಸಿಗಿ ನಿನ್ನ ಓಟ್ ಮಾರಕೋಬ್ಯಾಡ್. ನೀನು ತಿಳದಕಿ ಇದ್ದಿ. ಹೊರಗೆಲ್ಲ ಓಡಾಡತಿ. ಸ್ವಲ್ಪ ವಿಚಾರ ಮಾಡು, ಸ್ವಂತ ನಿರ್ಧಾರ ತಗೋ. ಯಾರು ಗೆದ್ದರ ಒಳ್ಳೆದು ಅಂತ ನಿನಗ ಬೇಕಾದವರ ಸಂಗಡ ಚರ್ಚೆ ಮಾಡು. ನಾವು ಗೆದಸಿದವರು ನಮ್ಮ ಸರಿ ಐದು ವರ್ಷ ಇರತಾರ, ಸಮಾಜ ಅಭಿವೃದ್ಧಿ ಆದ್ರ ನಾವ ಅಭಿವೃದ್ಧಿ ಆದಂಗ…”
ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು – ರಾಣೆಬೆನ್ನೂರು ಸೀಮೆ | ‘ಟೀಸೀನೂ ಬ್ಯಾಡ, ನೀರಾವರಿನೂ ಬ್ಯಾಡ…’
“ಹಂಗಾದ್ರ ನಮಗ ಓಟ್ ಹಾಕ್ರೀ… ಅಂತ ರೊಕ್ಕ ಕೊಡಾಕ ಬಂದ್ರ ತಗೋಬಾರದೇನ್ರೀ ಅಕ್ಕೋರೇ…?”
“ಹೌದು ತಗೋಬಾರ್ದು. ಅವರು ಕೊಟ್ಟ ದುಡ್ಡು ತಗೊಂಡಮ್ಯಾಲ್, ನಮಗಿಷ್ಟ ಇರಲಿ ಬಿಡ್ಲಿ ಅವರಿಗೆ ಓಟ್ ಹಾಕಬೇಕಾಗತದ. ನಿನಗ ಅನಿಸಬಹುದು, ಬ್ಯಾರಯವರೆಲ್ಲ ರೊಕ್ಕ ತಗೋತಾರ, ನಾನ್ ತಗೋಬಾರ್ದೇನು ಅಂತ. ಆದ್ರ ಅವರು ಮಾಡಿದ್ದಂಗ ನೀನು ಮಾಡಬ್ಯಾಡ್. ನೋಡು ರತ್ನ, ಯಾರು ಗೆದ್ರೂ-ಯಾರ ಸೊತ್ರು ನಾವು ಬದುಕಬೇಕಾದ್ರ ನಮ್ಮ ಶ್ರಮನೇ ಮುಖ್ಯ. ಜಯ ಇರುವದು ಶ್ರಮಕ್ಕ ಅಲ್ದ ಮತ್ತಾವದಕ್ಕೂ ಇಲ್ಲ ತಿಳ್ಕೋ…”
“ಖರೇರಿ ಅಕ್ಕೋರೆ… ಅವ್ರು ಕೊಟ್ಟ ದುಡ್ಡೇನು ನಮಗ ಕಡಿಗಿ ಹತ್ತಲ. ನಮ್ಮ ಓಣ್ಯಾಗ ಪಾರಗೋಳೆಲ್ಲ ನೂರ ರೂ ಆಸಿಗಿ ಸುಮ್ನ ಬಿಸಲ್ನಾಗ ತಿರಗಲತಾವ. ಸುಮ್ನ ಅವರ ಹಿಂದ ತಿರೊಗೋದು ಬಿಟ್ಟು ಏನಾರ ಕೆಲಸ ಮಾಡಿದ್ರ ನಾಕ ಕಾಸು ಕಾಣಬಹುದು. ಈ ಎಲೆಕ್ಷನ್ ಮುಗಿಯೋತನಕ ನಮ್ಮ ಪಾರಗೋಳ ಸುಮ್ನ ಹೀಂಗ ತಿರಗತಾವ ನೋಡ್ರಿ. ಇದೋಂಥರಾ ಹುಚ್ಚರ ಆಟನೇ…”
“ಹೌದಲ್ಲ… ನೀನು ಅವರು ಕೊಡೊ ದುಡ್ಡನಾಗ ಟಿವಿ ತಗೊಳ್ಳೋ ಕನಸು ಕಾಣಬ್ಯಾಡ. ನಿನಗ ಗ್ವಾಡಿಗಿ ಹಚ್ಚೋ ಟಿವಿ ಬೇಕಲ್ಲ… ಈಗೇ ತಗೊಂಡಬಿಡರ್ರೀ. ಎಲೆಕ್ಷನ್‌ದಾಗ ಯಾರ ಗೆದ್ರೂ, ಯಾರ ಸೊತ್ರೂ ಅಂಬೋದು ನಿನ್ನ ಹೊಸ ಟಿವ್ಯಾಗ ನೊಡಕ್ಕಂತಿ,” ಅಂದಾಗ ಗಲಗಲನೆ ನಕ್ಕಳು ರತ್ನ.
ಚಿತ್ರಗಳು: ಸಾಂದರ್ಭಿಕ