ಕಲಬುರಗಿ ಸೀಮೆಯ ಕನ್ನಡ | ನಮಗ ಮನ್ಯಾಗ ಕೂಡಹಾಕಿ ಬರಿ ಗಂಡಸರೆ ತಿರಗತಿದ್ದರಲ್ಲ, ಅದಕ್ಕ ಅವರಿಗಿ ಇದು ಜೋಕ್ ಅನಸಲತದ!

Date:

"ಅತ್ತಿಗಿ ಕೊಟ್ರ ಮಕ್ಕಳಿಗಿ ಒಜ್ಜಿ ಆಗಲದಂಗ ತನ್ನ ಆರೋಗ್ಯದ ಖರ್ಚು ತಾನೇ ನೋಡ್ಕೋಬಹುದು. ಅತ್ತಿಗಿ ದುಡ್ಡು ಕೋಡೋದೇ ವಾಜವಿ ಅದಾ ಬಿಡ್ರೀ. ಮೊದಲೇ ಅತ್ತಿ-ಸೊಸಿ ನಡು ನೂರ ಇರತಾವ. ಈ ಎರಡು ಸಾವ್ರದ ಒಂದು ಹೊಸದ ತಂದಿಡ್ತು ನೋಡ್ರೀ ಸರ್ಕಾರ..." ಅಂತ ನಕ್ಕೆವು

ಈಗ ಯಾರ ಬಾಯಾಗ ನೋಡ್ರೀ ಫ್ರೀ ಬಸ್ ಪ್ರಯಾಣ, ಕರೆಂಟ್ ಬಿಲ್ ಫ್ರೀ, ಅಕ್ಕಿ ಫ್ರೀ, ಅದು ಫ್ರೀ-ಇದು ಫ್ರೀ…! ಏನೇ ಆದ್ರೂ ಈ ಫ್ರೀ ವ್ಯಾಮೋಹ ನಮಗ ಬಾಳ ನೋಡ್ರೀ. ಫಿಪ್ಟಿ ಪರ್ಸೆಂಟ್ ಡಿಸ್ಕ್ಂಟ್, ಒಂದು ತಗೊಂಡ್ರ ಒಂದು ಫ್ರೀ ಅಂಬೊ ಆಫರ್‌ಗಳು ನಮಗ ಬಹಳ ಆಕರ್ಷಿಸತವಾ. ಯಾರೋ ಅಂದದ್ದ ನೆನಪಾತು, ನಮ್ಮ ಇಂಡಿಯನ್ಸ್‌ಗೊಳಿಗೆ ಕ್ವಾಲಿಟಿಗಿಂತ ಕ್ವಾಂಟಿಟಿ ಮ್ಯಾಲ್ ಬಾಳ ಮೋಹ ಅಂತ. ಮನಿಗಿ ತಂದು ಬಿಟಾಕದರೂ ಪರವಾ ಇಲ್ರಿ, ಫ್ರೀ ಸಿಕ್ಕರ ತರಬೇಕ ಅಷ್ಟ, ಇದು ನಮ್ಮ ಕ್ವಾಲಿಟಿ!

ಸಂಜಿ ಮುಂದ ಮಾತಾಡಕ ಯಾರರೆ ಸಿಗತಾರೆನೊ ಅಂತ ಕಾಲಾಡಿಸಕೋತ್ ಹೊರಗ ಹೋಗೊ ಅಷ್ಟ್ಲ್ರಲ್ಲಿ, ಅದಾಗಲೇ ನಾಲೈದು ಬ್ಯೂಟಿಪುಲ್ ಲೇಡಿಜ್ ಜೋರು ಚರ್ಚಾದಾಗಿದ್ರು. ನಾನು ದೌಡ-ದೌಡ ಹೋಗಿ ಜ್ಯೋಯಿನ್ ಆಗ್ಬಿಟ್ಟೆ. ಅಲ್ಲೆನದಾ…? ಟೀವಿದಾಗ ಏನ್ ಒದರಲತಾರ ಅಲ್ಲೂ ಅದೇ…!

ಬಾಜು ಮನಿ ಅಕ್ಕೋರು, “ಬರ್ರೀ ಅಕ್ಕೊರೆ… ಈಗ ಬಸ್‌ನಾಗ ನಮ್ಮ ಹೆಣ್ಮಕ್ಕಳಿಗಿ ರೊಕ್ಕ ತಗೊಂಬಲ್ ಅಂತಲ್ಲರೀ; ಸರ್ಕಾರಕ್ಕ ಅದರಿಂದ ಲಾಸ್ ಆಗಂಗಿಲ್ಲೆನ್ರೀ?” ಅಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಈ ನುಡಿಗಟ್ಟು ಕೇಳಿದ್ದೀರಾ?: ಕೆ ಆರ್ ಪೇಟೆ ಸೀಮೆಯ ಕನ್ನಡ | ಕೊನ್ಗೂ ಬುದ್ದಿ ಕಲ್ತು ನಾರಾಯಣ್‌ ಗೌಡುನ್ನ ಸೋಲ್ಸುದ್ರು ನಮ್ ಕ್ಯಾರ್‌ಪೇಟೆ ಜನ

ನಾನು, “ಐ… ಲಾಸ್ ಆಗ್ಲಿಕ್ಕಿಲ್ಲ ಬಿಡ್ರೀ. ಫ್ರೀ ಅಂತೆನು ಹೆಚ್ಚಿಗಿ ಬಸ್ ಓಡಾಡಸ್ತಾರೇನು? ಈಗ ಓಡಾಡೋ ಬಸ್‌ನಾಗೆ ನಮಗ ಫ್ರೀ ಒಯ್ಯತಾರ. ಹೆಂಗೂ ಬಸ್‌ಗಳಂತೂ ಆಯಾ ಊರಿಗಿ ಓಡಾಡತಿರತಾವ. ಬಸ್‌ನಾಗ ಮಂದಿ ಇಲ್ಲಂದರೂ ಬಸ್ಗಳು ಓಡಾಡೆಬೇಕು. ಹಂಗ ಓಡಾಡೋ ಬಸ್ನಾಗ ಹೆಣ್ಣಮಕ್ಕಳಿಗಿ ಫ್ರೀ ಒಯ್ಯತಾರಪ. ಇದರಾಗ ಅದೆಂಥ ಲಾಸ್ ಆಗತದ? ಇಷ್ಟ ದಿನಾ ಸರ್ಕಾರಿ ಬಸ್ಗಳೇನು ಬರೀ ಲಾಭದಾಗೆ ಅವ ಏನು? ಹೆಣ್ಮಕ್ಕಳಿಗಿ ಟಿಕಿಟ್ ಇಲ್ಲಂದ್ರ ಅದೇಟ್ ಲಾಸ್ ಆಗತದೋ ಅಂದಗ ಮಾತಾಡತಾರಪ! ನಾನು ನನ್ನ ತವರಮನಿಗಿ ಹೋಗೂ ಪೌರಾದೇವಿ ಬಸ್ ಯಾವಾಗಲೂ ಖಾಲಿನೇ ಇರತಿತ್ತು. ಪಾಪ… ಆ ರೂಟಿಗಿ ಹೋಗೊ ಬಡ ಮಂದಿ ಎಕ್ಸ್ಪ್ರೆಸ್ ಬಸ್ ಚಾರ್ಜ ಬಾಳ ಅದಂತ ಅದಕ್ಕ ಹತ್ತತಿದ್ದಿಲ್ಲ, ಖಾಲಿನೇ ಹೋಗತಿತ್ತು. ಹಂಗ ಖಾಲಿ ಹೋಗ ಬದಲಿ ಆ ರೂಟಿಗಿ ಹೋಗೋರಿಗಿ ಹತ್ತಸಕೊಂಡು ಹೋದ್ರ ಬರತದ. ನಮಗ ಟಿಕಿಟ್ ತಗೊಳ್ಳಿಲ್ಲಂದ್ರ ಲಾಸ್ ಆಗಲ್ಲ, ಮಣ್ಣ ಆಗಲ್ಲ,” ಅಂದೆ.

“ಮತ್ತ ನೋಡ್ರೀ ಅಕ್ಕೋರೆ, ಬಸ್ ಫ್ರೀ ಅದ ಅಂದ್ರ ನಾವು ಏಟ ಓಡಾಡತಿವಿ ಅಂಬಂಗ್ ಜೋಕ್ ಮಾಡಲತಾರ್. ನಾವ್ ಯಾವಾಗ ಬೆಕಂದರ ಆಗ ತವರ ಮನಿಗಿ ಹೋಗತಿವಂತ್, ದಿನಾ ಮುಂಜಾನೆದ್ದು ಬಸ್‌ನಾಗ ತಿರುಗಾಡಿ ರಾತ್ರಿ ಮನಿಗಿ ಬರತಿವಂತ್… ಒಂದಾ ಎರಡ ಇವ್ರ ಜೋಕ್‌ಗಳು. ಹಿಂದಕಿನಿಂದ ನಮಗ ಮನ್ಯಾಗೆ ಕೂಡ ಹಾಕಿ ಬರಿ ಗಂಡಸರೆ ತಿರಗತಿದ್ದರಲ್ಲ, ಅದಕ್ಕ ಅವರಿಗಿ ಇದು ಜೋಕ್ ಅನಸಲತದ! ಇದೇನಪ್ಪ ಅವರಿಗಿ ಇಂತಹ ಕಾಲಾ ಬಂತು ಅಂತ ಆಶ್ಚರ್ಯ ಆಗಲತಿಬೇಕು. ಈಗ ಅವರು ಮನ್ಯಾಗ ಕೂಡ್ಲಿ, ನಾವು ತಿರಗಾಡಮಿ…” ಅಂದಾಗ ನಮ್ಮ ನಗು ಪ್ರತಿದ್ವನಿಸಿತ್ತು.

ಫ್ರೀ

“ಹೂಂ ನೋಡ್ರೀ ಅಕ್ಕೋರೆ… ದಿನಾ ಓಡಾಡತಿವೋ ಬಿಡತಿವೋ ನಮಗ ಟಿಕೆಟ್ ತಗೊಳ್ಳಲ್ಲಂತ ಗೌರವ ಕೊಟ್ಟಾರಲ್ಲ ಸಾಕು ಬಿಡ್ರಿ…”

“ಹೌದ್ರಿ… ದಿನಾ ಕೆಲಸಕ್ಕ ಓಡಾಡೋ ಹೆಣ್ಣಮಕ್ಕಳಿಗಿ ಉಪಯೋಗ ಆಗ್ಲಿ. ದೊಡ್ಡ ನೌಕರಿದಾಗ ಇರೋರ ಮಾತು ಬ್ಯಾರೆ. ಆದ್ರ ದಿನಗೂಲಿ ಮಾಡೋರು, ಗಾರ್ಮೆಂಟ್ಸಗಳಲ್ಲಿ ದುಡೇರು ಇವ್ರಿಗಿ ಉಪಯೋಗ ಆಗ್ಲಿ. ಒಂದಿಷ್ಟು ದುಡ್ಡು ಉಳದ್ರ ಅವರ ಭವಿಷ್ಯಕ್ಕ ಆಗತದ. ಎಷ್ಟೋ ಮಂದಿ ಬಡ ಹೆಣ್ಮಕ್ಕಳು – ಮಕ್ಕಳು, ಸಂಬಂದಿಕರ ಬಲ್ಲಿ ಹೋಗೊದಕ್ಕ, ಅವರ ಮನಿದು ಒಂದು ಒಳ್ಳೆದು-ಕೆಟ್ಟದ್ದಕ್ಕ ಹೊಗಬೇಕಂದರೂ ಬಸ್ ಚಾರ್ಜ ಲೆಕ್ಕ ಹಾಕಿ ಹೊಗಲಾರದ ಬಿಟ್ಟದ್ದು ನೋಡಿನಿ ನಾ. ಈಗ ಅವ್ರೆಲ್ಲ ಓಡಾಡ್ಲಿ. ಒಟ್ಟಿನಾಗ ಯಾರಿಗಿ ಅವಶ್ಯಕತೆ ಅದಾ ಅವ್ರೀಗಿ ಈ ಭಾಗ್ಯಗಳು ಸಿಗಬೇಕ ನೋಡ್ರೀ…” ಅಂದೆ.

“ಹೌದು, ಸಿಗಬೇಕಾದವ್ರಿಗಿ ಸಿಗಲಿ. ಈ 2,000 ರೂಪಾಯ್ ಅತ್ತಿಗೆ ಕೊಡತಾರಂತ… ಮನಿ ಯಜಮಾನಿ ಅತ್ತಿ ಆದ್ರ ಸೊಸಿ ಏನ್ ಕೆಲ್ಸದವಳೇನು?”

“ಐ… ಹೋಗ್ಲಿ ಬಿಡ್ರೀ ಅಕ್ಕೊರೆ… ಯಜಮಾನಿ ಪಟ್ಟ ತಗೊಂಡ ಎನ್ ಮಾಡೊದದಾ? ಆದ್ರೂ ಈ ದುಡ್ಡಿನ ವಿಷಯದಾಗ ಸ್ವಲ್ಪ ಅತ್ತಿ-ಸೊಸಿ ನಡು ಎರಡು ಮಾತು ಬರತವ ನೋಡ್ರೀ. ಅತ್ತಿಗಿ ಕೊಟ್ರ ಸೊಸಿಗಿ ಸಿಟ್ಟು, ಸೋಸಿಗ ಕೊಟ್ರ ಅತ್ತಿಗಿ ಸಿಟ್ಟು.ಇಬ್ಬರ ನಡು ಮಗಂದು ಹೈರಾಣ ಅದಾ ನೋಡ್ರೀ…” ಅಂದಾಗ ಮತ್ತೊಮ್ಮೆ ನಗು ಪ್ರತಿದ್ವನಿಸಿತು.

ಈ ನುಡಿಗಟ್ಟು ಕೇಳಿದ್ದೀರಾ?: ಕುಮಟಾ ಸೀಮೆಯ ಕನ್ನಡ | ಈ ಬಿಂಬ್ಲಿಕಾಯಿ ರುಚಿ ತಿಂದವ್ರಿಗೇ ಗೊತ್ತು

“ಒಂದೊಂದು ಮನ್ಯಾಗ, ಮಕ್ಕಳು ಅನುಕೂಲವಾಗಿದ್ರ ತಂದಿ-ತಾಯಿ ಅನೂಕೂಲವಾಗಿರಲ್ಲ. ತಂದಿ-ತಾಯಿ ಅನುಕೂಲವಾಗಿದ್ರ ಮಕ್ಕಳು ಅನುಕೂಲವಾಗಿರಲ್ಲ. ಮಕ್ಕಳು ಸಣ್ಣೊರಿರತಾರ, ದುಡದು ತಿನ್ನಬಹುದು. ವಯಸ್ಸಾದ ಮ್ಯಾಗ್ ದವಖಾನಿ, ಗೋಲಿಗಳಿಗಿ ದುನೇದು ದುಡ್ಡ ಬೇಕಾಗತದ. ಅತ್ತಿಗಿ ಕೊಟ್ರ ಮಕ್ಕಳಿಗಿ ಒಜ್ಜಿ ಆಗಲದಂಗ ತನ್ನ ಆರೋಗ್ಯದ ಖರ್ಚು ತಾನೇ ನೋಡ್ಕೋಬಹುದು. ಅತ್ತಿಗಿ ದುಡ್ಡು ಕೋಡೋದೇ ವಾಜವಿ ಅದಾ ಬಿಡ್ರೀ…” ಅಂದೆ.

“ಜಗಳ ಆಡಲ್ದಂಗ್ ಉಪಯೋಗ ಮಾಡಕೊಂಡ್ರ ಛಂದೆ ನೋಡ್ರಿ… ಮೊದಲೇ ಅತ್ತಿ-ಸೊಸಿ ನಡು ನೂರ ಇರತಾವ. ಈ ಎರಡು ಸಾವ್ರದ ಒಂದು ಹೊಸದ ತಂದಿಡ್ತು ನೋಡ್ರೀ ಸರ್ಕಾರ…” ಅಂತ ನಕ್ಕೆವು.

“ಎನೋ… ಎರಡು ನೂರ್ ಯುನಿಟ್ ಕರೆಂಟ್ ಫ್ರೀ ಅಂತಲ್ಲರಿ ಅಕ್ಕೋರೆ…”

“ಹೌದ್ರಿ… ಎಲ್ಲರೂ ಎರಡನೂರ್ ಯುನಿಟ್ ಆಗೋಷ್ಟೆ ಮಿತವ್ಯಯದಿಂದ ಕರೆಂಟ್ ಖರ್ಚ ಮಾಡಿದ್ರ ಬಿಲ್ ಕಟ್ಟದೇ ಇರಲ್ಲ ನೋಡ್ರೀ. ಈಗ ನಾವೂ ಕರೆಂಟ್ ಆದಷ್ಟು ಮಿತವ್ಯಯದಿಂದ ಬಳಸೊದು ಕಲಿಬೇಕ್ರೀ. ಸಂಜಿ ಮುಂದ ಮನಿ ತುಂಬಾ ಲೈಟ್ ಹಾಕದು ಬಿಟ್ಟು, ಎಲ್ಲಿ ಕುಂಡರತಿವಿ ಅಲ್ಲಿಟೇ ಲೈಟ್ ಹಾಕಬೇಕು. ಓದೋ ಮಕ್ಕಳು ಇರಲಿಲ್ಲಂದ್ರ ಎಲ್ಲರೂ ಒಂದೇ ಕಡೇ ಕುಂತು ಫ್ಯಾನ್ ಹಾಕ್ಕೋಬೇಕು. ಈಗ ಎಲ್ಲರಿಗೂ ಪ್ರೈವೇಸಿ ಅಂತ ಒಬ್ಬೊಬ್ಬರು ಒಂದೊಂದು ರೂಂ ಹಿಡಿತಾರ; ಎಲ್ಲರಿಗಿ ಒಂದೊಂದು ಲೈಟ್ ಒಂದೊಂದ್ ಫ್ಯಾನ್ ಬೇಕಾಗತದ. ಯರ್ರಾಬಿರ್ರಿ ನೀರ್ ಚಲ್ಲೊದು, ಮತ್ತ ಟ್ಯಾಂಕ್ ತುಂಬೊದು, ಕರೆಂಟ್ ಬಿಲ್ಲ್ ಬಂದಾಗ ಇಷ್ಟ ಹ್ಯಾಂಗ್ ಬಂತು ಅಂತ ಕೆಇಬಿದವರಿಗಿ ಬೈತಿವಿ. ಈಗ ಸರ್ಕಾರ ಎರಡುನೂರು ಯುನಿಟ್ ಪ್ರೀ ಕೊಡಲತದ ಅಂದ್ರ, ತಿಂಗಳಿಗಿ ಎರಡು ನೂರ ಯುನಿಟ ಆಗುವಷ್ಟೆ ಉಪಯೋಗಿಸಲು ನಾವು ಪ್ರಯತ್ನಿಸಬೇಕು. ಬ್ಯಾಸಗಿದಾಗಂದ್ರ ನಮ್ಮ ಕಡಿನ ಗರ್ಮಿಗಿ ಒಂದ ಗಳಿಗಿ ಪ್ಯಾನ್ ಇಲ್ಲಂದರೂ ನಡೆಲ್ಲ. ಎರಡು ತಿಂಗಳು ಕರೆಂಟ್ ಬಿಲ್ಲ ಹೆಚ್ಚಿಗೆ ಬರತದ ಬಿಡ್ರೀ. ಉಳಿದ ಟೈಮನಾಗರೆ ಮಿತವ್ಯಯ ಮಾಡಬೇಕ. ನೀರು, ಕರೆಂಟ್ ಮಿತವ್ಯಯ ಮಾಡಿ ಬಳಸೋದು ನಮ್ಮ ಮಕ್ಕಳಿಗಿ ಕಲಿಸೋದು ಭಾಳ ಮುಖ್ಯ ಅದಾ ನೋಡ್ರಿ…” ಅಂದೆ.

ಈ ನುಡಿಗಟ್ಟು ಕೇಳಿದ್ದೀರಾ?: ಮಾಲೂರು ಸೀಮೆಯ ಕನ್ನಡ | ಪೋತುರಾಜುಲು ಮತ್ತು ಧರಮ ದೊರೆಗಳ ಬೆಂಕಿ ಆಟ

“ನಮ್ಮ ಕಡಿ ಎಂಟ ತಿಂಗಳು ಬಿಸುಲು ಧಗಿನೆ ಇರತದ ಅಕ್ಕೋರೇ… ಫ್ಯಾನ್ ಇಲ್ಲಂದ್ರ ಎಲ್ಲಿ ನಡಿತದ? ಆದ್ರೂ ಬೇಕಾಬಿಟ್ಟಿ ಮಾಡೋದು ಬಿಟ್ಟು ಹೆಚ್ಚಿಗ ಕರೆಂಟ್ ಬಿಲ್ ಬರಲಾರದಂಗ ಮನ್ಯಾಗ ಎಲ್ಲರೂ ಪ್ರಯತ್ನಿಸಬೇಕು,” ಅಂದರು.

“ಐ… ಕತ್ತಲಾಯುತು. ಮಾತಿನಾಗ ಟೈಮ್ ಹೋಗಿದ್ದೆ ಗೊತ್ತಾಗಿಲ್ಲ. ಒಟ್ಟಿನಾಗ, ಈ ಸರ್ಕಾರ ಕೊಡೋ ಭಾಗ್ಯಗಳೆಲ್ಲ ಅಗತ್ಯ ಇರೋರಿಗೆ ತಲುಪೋದು ಬಾಳ ಮುಖ್ಯ. ಇಷ್ಟೆಲ್ಲಾ ಮಾಡಲತಾರ… ಪಿಯುಸಿ ತನಾ ಶಿಕ್ಷಣ ಒಂದು ಫ್ರೀ ಅಂತ ಮಾಡಿದ್ದರ ಬಾಳ ಚಂದಿತ್ತು ಅನಿಸ್ತದ ನೋಡ್ರೀ ನಂಗ. ಹೋಗ್ಲಿ ಬಿಡ್ರೀ… ನಮ್ಮ-ನಮ್ಮ ಇಷ್ಟಗಳು ಹೆಳಕೋತ ಕೂತ್ರ ಕೊನಿನೆ ಇರಲ…” ಅನಕೊಂತ ಯಾರದವರ ಮನಿ ಕಡಿ ತಿರಗದೆವು.

ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಜ್ಯೋತಿ ಡಿ ಬೊಮ್ಮಾ
ಜ್ಯೋತಿ ಡಿ ಬೊಮ್ಮಾ
ಚಿಂಚೋಳಿ ತಾಲೂಕಿನವರು. ಸದ್ಯ ಕಲಬುರಗಿ ನಿವಾಸಿ. ಗೃಹಿಣಿ. ಓದು, ಬರಹ, ಪ್ರವಾಸವೆಂದರೆ ಪ್ರೀತಿ.

3 COMMENTS

 1. Very good podcast by E DINA👏👌
  Loved your writing..I think this plot really works coz how well you have placed the info.
  And the kalburgi ascent is well said…
  The audio level in here is perfect👍🏻
  The kalburgi ascent in this is soo gudd
  This platform is spreading our kalburgi bhasha and making people aware of it🙌

  • ಧನ್ಯವಾದ ಮೇಡಂ. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಂಜನಗೂಡು ಸೀಮೆಯ ಕನ್ನಡ | ‘ನಮ್ಮೆಣ್ಣು ಬಾರಿ ಒಳ್ಳೆದು ಕಣ, ಆಸ್ತಿ ಬ್ಯಾಡಾಂತ ಸೈನ್ ಆಕೊಡ್ತದ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...