"ಏನ್ ದೊಡಪ್ಪೋ ಏನೋ ಮಾಡ್ತಿದ್ಯ?" ಅಂದೆ. "ಇನ್ಯಾತುದ್ ಮಾಡನ ಬಾರಪ್ಪ... ಮೊದ್ಲು ಮಡ್ಕೆ ಮಾಡಕೆ ನ್ಯಾರ ಮಾಡ್ಕಂತಿದಿನಿ," ಅಮ್ತ ಬಾಳ್ಸಿನಾಗೆ ಕೆತ್ತದ್ನ ಮುಂದುವರುಸ್ತು. ಎಲ್ಲ ಕಾಲಕ್ ತಕ್ಕಂಗೆ ಬದ್ಲಾಗಿದ್ರೆ ಈಯಪ್ಪೋಬ್ಬ ಪರಂಪರೆನಾ ಮುಂದುವರ್ಸಿದ್ದ
ಮುಂಗಾರಿ ಬರ್ಣಿ ಮಳೆ ಮೊದ್ಲುಪಾದದಾಗೇನೆ ದೋಣ್ ದುಮುಕ್ಲು ಆಯ್ತು. ವತಾರಿಕೆ ವರ್ಸದಿಂದ ಮೂಲೆ ಸೇರಿದ್ದ ಮಡ್ಕೆ-ನಗನ ಅಟ್ಟುದ ಮ್ಯಾಲಿಂದ ತಗ್ದ ಕಾವಲ್ಲಪ್ಪ ಮಡ್ಕೆನ ಕೆತ್ತಿ ನ್ಯಾರ ಮಾಡ್ಕಂತಿತ್ತು. ಈಯಪ್ಪುನ್ನ ಊರಾಗ್ಲು ಜನೆಲ್ಲ, “ಇವ್ನಿನ್ನ ಓಬಿರಾಯ್ನ ಕಾಲ್ದಗೇ ಅವ್ನೆ. ಯಾವ್ದನ ಟ್ಯಾಗುಟ್ರಿಗೇಳಿರೆ ಎರಡ್ಸಾಲು ಇಟ್ನೋತ್ಗೆ ಹೊಡ್ಕಂಡ್ ಬತ್ತರೆ. ಅದ್ಬಿಟ್ಟು ಮೂಗ್ ಜೀವಾದಿನ ಅಯ್ಯೋ ಅನ್ನುಸ್ತನೆ,” ಅನ್ನರು. ಇದುನ್ನ ಗ್ಯಾಪ್ನುಸ್ಕಂಡು, “ಏನ್ ದೊಡಪ್ಪೋ ಏನೋ ಮಾಡ್ತಿದ್ಯ?” ಅಂದೆ. “ಇನ್ಯಾತುದ್ ಮಾಡನ ಬಾರಪ್ಪ… ಮೊದ್ಲು ಮಡ್ಕೆ ಮಾಡಕೆ ನ್ಯಾರ ಮಾಡ್ಕಂತಿದಿನಿ,” ಅಮ್ತ ಬಾಳ್ಸಿನಾಗೆ ಕೆತ್ತದ್ನ ಮುಂದುವರುಸ್ತು. ಎಲ್ಲ ಕಾಲಕ್ ತಕ್ಕಂಗೆ ಬದ್ಲಾಗಿದ್ರೆ ಈಯಪ್ಪೋಬ್ಬ ಪರಂಪರೆನಾ ಮುಂದುವರ್ಸಿದ್ದ. ನಾನು ಚಿಕ್ಕುಡ್ಗನಾಗೆ ಮೊದ್ಲು ಮಡ್ಕೆ ನೋಡಿದ್ದು ನೆನ್ಪಾಗಿ ತಿರ್ಗ ನೋಡನಂತ ಅನ್ಕಂಡು, “ನಂಗೂ ಯೇಳು ದೊಡಪ್ಪೋಯೋ, ನಾನು ಬತ್ತಿನಿ,” ಅಂತೇಳಿ ಮನೆ ಕಡೆ ಬಂದೆ.
ಮೊದ್ಲು ಪಾದದಾಗೆ ಎರಡನಿ ಉದ್ರಿದ್ದು ಕೊನೆ ಪಾದ ಬಂದ್ರು ಬರದಿರ್ಲಿ ಮಾಡನೂ ಆಗ್ಲಿಲ್ಲ. ಓಕುಣ್ಕೆ (ಒಂದು ಮಳೆ ಮುಗಿದು ಮತ್ತೊಂದು ಮಳೆ ಹುಟ್ಟುವ ಕಾಲ) ದಿನ ಮೋಟ್ ಮಡ್ಕೆ ಹದ ಆಗಂಗೆ ಮಳೂಯ್ತು. ಹೊತ್ನುಂಟೆ ದನ ಇಡ್ಕಂಡು, ಮದ್ಲು ಮಡ್ಕೆ ಮಾಡನಂತ ಹೊಲ್ಟಾಗ ಯಂಡ್ರು ರಾಮಕ್ಕ ಪೂಜ್ಗೆ ತಗಂತು, ನಾನುನು ಜೊತೆಗೋದೆ. ಸೌಳ್ಬಾರೆನಾಗಿದ್ದ ಹೊಲ್ದಾಗೆ ಹೆಗ್ಲುಗೆ ನಗ ಕಟ್ಟಕೂ ಮದ್ಲು ಮೂರ್ಸತಿ ಉಗ್ದು ಕಣ್ಣಿ ಕಟ್ಟಿ ಮಡ್ಕೆ ಹೂಡಿದ್ದಾಯ್ತು. ಮೂಡ-ಪಡ್ವ ಮೂರ್ಸುತ್ತು ಗೆರೆ ಗೀಸಿ, ಮೂಡ್ಗಡಿಕೆ ಹೂಡಿರೋ ದನ ನಿಲುಸ್ತು. ಆಟೋತ್ಗೆ ರಾಮಕ್ಕ ಅಲ್ಲೇ ಬದಿನಾಗಿದ್ದ ತುಂಬೆ ಹುವ್ವ ತರ್ಕಂಡು, ಕೊರುಕ್ಲಾಗಿದ್ದ ಮುತ್ಗದೆಲೆ ಕಿತ್ಕಂಡು ಬಂದಿತ್ತು. ಜೀವಾದಿಗೂ ಅತಾರಗಳ್ಗೂ ಅರುಸ್ಣ-ಕುಂಕ್ಮ ಇಕ್ಕಿ ಕಡ್ಡಿ ಬೆಳುಗ್ತ, “ಓಲ್ಗೀಸಮೋಲ್ಗೀಸ್ ಬಾಳ್ಗ ಬಾಳ್ಗ…” ಅಂತ ದ್ಯಾವರ್ನ ಗ್ಯಪ್ತಿ ಮಾಡ್ಕಂತ ಮೂರು ಸುತ್ತು ತಿರ್ಗಿ ಅಡ್ಬಿತ್ತು. ಅಮ್ಯಾಕ್ಕಿಂದ ಎಡೆಗಿಕ್ಕಿದ್ದ ನೆನಕ್ಕಿನ ಮುತ್ಗದೆಲೆಗಾಕಿ ಕೊಟ್ರು. ಹೊತ್ತು ನೇತ್ತಿಗೇರೋವಷ್ಟತ್ಗೆ ಈ ತಾಕು ವಡಿಬೇಕು ಕಣಪ್ಪ ಕಾಂತಣ್ಣ ಅಮ್ತ ಮೇಣಿ ಇಡ್ಕಂಡು ಅರ್ ಅರ್ಸಾಲ್ ಅಂತ ದನ ಬೆದ್ರುಸ್ತು.
ಕರ್ನಾಟಕದ ಹಲವು ಕನ್ನಡಗಳನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ - ನುಡಿ ಹಲವು
ನಾನು ಮುತ್ಗದೆಲೆಗಿದ್ದ ಅಕ್ಕಿ ಇಡ್ಕಂಡು ಮನೆ ಕಡೆ ಹೆಜ್ಜೆ ಹಾಕ್ತ ನಾಕಾಳ್ನ ಬಾಯಕೆ ಯಸ್ಕಂಡೆ. ಅಬ್ಬಾ… ಯಂತಾ ರುಚಿ! ಏಸೊರ್ಸ ಆಗಿತ್ತೋ ತಿಂದು. ತಿಂತಾ ತಿಂತಾ ಬಯಲ್ನ ನೋಡ್ಕಂಡು ಬತ್ತಾ ನಂ ಬಾಲ್ಯನ ನೆನ್ಪುಸ್ಕಂಡೆ. ಉಸ್ಕೂಲ್ಗೆ ಬ್ಯಾಸ್ಗೆ ರಜಾ ಇರದು. ಯಾವ್ಯಾವ ಬಯ್ಲಾಗೆ ಯಾರ್ಯಾರು ಮದ್ಲುಮಡ್ಕೆ ಮಾಡ್ತರೋ ಅಲ್ಗೆಲ್ಲಾ ಮುತ್ಗದೆಲೆ ಇಡ್ಕಂಡು ಓಡೋಗವು. ಕೊಡ್ತಿದ್ದ ನೆನಕ್ಕಿನ ತಿಂದು ಕೈನ ತಿಕ್ ವರುಸ್ಕಂಡು ಬತ್ತಿದ್ವಿ. ನಿಜ ಹೇಳ್ಬೇಕಂದ್ರೆ ಅದು ಬರಿ ಅಕ್ಕಿ ಆಗಿರ್ಲಿಲ್ಲ, ಆ ಕಾಲದ ಸ್ಪೆಷಲ್ ಐಟಂ. ದಡ್ಡಿನೆಲ್ಲಕ್ಕಿನ ನೆನ್ಸಿ, ಬೆಲ್ಲ-ಕಾಯ್ತುರಿ ಹಾಕಿ ಮಾಡಿರ್ತಿದ್ದ ಮೃಷ್ಟಾನ್ನ. ಈಗೆಲ್ಲಾ ಸಣ್ಣಕ್ಕಿ ತಿನ್ನೋದು ಪ್ರೆಸ್ಟೀಜ್ ಆಗಿರ್ವಾಗ ದಡ್ಡಿನೆಲ್ಲು ತಿನ್ನೋದಿರ್ಲಿ ಬೆಳ್ಯೋರು ಕೂಡ ಕಡ್ಮೆ ಆಗವ್ರೆ. ಎಲ್ಲೋ ಅಲ್ಲೋಬ್ರು ಇಲ್ಲೋಬ್ರು ಕಾವಲ್ಲಪ್ಪನಂತೋರು ಪರಂಪರೆ ಪದ್ದತಿ ಹೆಸ್ರಲ್ಲಿ ಉಳುಸ್ಕಂಡಿದಾರೆ.
‘ಓಲ್ಗೀಸಮೋಲ್ಗೀಸ್ ಬಾಳ್ಗ ಬಾಳ್ಗ…’ ಅಂದ್ರೇನು ಅಂತ ಕಾಡಾಕ್ ಸುರ್ವಾಯ್ತು. ಬೈನ್ಕಡೆಯಿಂದ ಹೋಗಿ, “ಏನ್ ದೊಡ್ಡಪ್ಪ ಅಂಗಂದ್ರೆ?” ಅಂದೇ. “ಯಾರಿಗೋತ್ತಪ್ಪ… ಮದ್ಲಿಂದ ಬಂದಿರದು ಹೇಳ್ದೆ ಅಷ್ಟೆ,” ಅಂತು. ಊರ್ನಾಗಿದ್ದ ನಾಕೈದು ಹಿರಿತಲೆಗಳ್ನ ಕೇಳ್ದೆ. ಅವ್ರು, “ಯಾರಿಗೋತ್ತಪ್ಪ… ತಾತ-ಮುತ್ತಾತ್ನ ಕಾಲ್ದಿಂದ ಹೇಳರು. ಈಗೆಲ್ಲ ಯಾರೇಳ್ತರೆ, ಎಲ್ಲ ನಿಂತಿದ್ವೋ,” ಅಂದ್ರು. ಇದೊಳ್ಳೆ ಕತೆ ಆಯ್ತಲ್ಲಾ… ನುಡಿಗಟ್ಟು ನೋಡುದ್ರೆ ಕನ್ನಡನೋ ತೆಲ್ಗೋ ಒಂದೂ ತಿಳಿದು. ರೈತಾಪಿ ಜನುಕ್ಕೆ ಸಂಸ್ಕೃತ ಎಲ್ಲಿಂದ ಬಂದಾತು? ತೆಲ್ಗು ಇಲ್ಲ ಕನ್ನಡಾನೆ ಇರ್ಬೇಕಂತ ಪದಕೋಶನ ಹುಡುಕ್ಕಿದಾಯ್ತು. ಅಂತೂ ಇಂತೂ ಕೊನ್ಗೂ ಸಿಕ್ತು. ‘ಓಲಗಿಸು’ ಅಂದ್ರೆ ‘ಅರ್ಪಿಸು’ ಎಂದರ್ಥ. ಬಳಕೆಯಲ್ಲಿ ‘ಓಲ್ಗೀಸು’ ಆಗಿದೆ. ‘ಬಾಳ್ಗ’ ಅಂದ್ರೆ ‘ಬದುಕಿಸು’ ಎಂದರ್ಥ. ರೈತಾಪಿ ಜನ ಭೂತಾಯಿಗೆ ಅರ್ಪಿಸಿ ಬೇಳೆ ನೀಡುವ ಮೂಲಕ ಬದುಕಿಸು ಎಂಬರ್ಥದಲ್ಲಿ ಈ ನುಡಿಗಟ್ಟು ಕಟ್ಟಿದ್ದಾರೆ.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ