ಈ ದಿನ ಸಂಪಾದಕೀಯ | ಮಣಿಪುರದ ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುತ್ತಿರುವ ಶಕ್ತಿಗಳು ಯಾವುವು?

Date:

ಮುಖ್ಯಮಂತ್ರಿ ಬೀರೇನ್ ಸಿಂಗ್ ಕಳೆದ ಕೆಲವು ತಿಂಗಳುಗಳಿಂದ ಕುಕಿಗಳನ್ನು ವಿದೇಶೀಯರು, ಅಕ್ರಮ ವಲಸಿಗರು, ನೆರೆಯ ಬರ್ಮಾದಿಂದ ಅಕ್ರಮ ವಲಸೆಗೆ ಕುಮ್ಮಕ್ಕು ನೀಡುತ್ತಿರುವವರು ಎಂದೆಲ್ಲ ಟೀಕಿಸಿದ್ದಾರೆ. ಅರಣ್ಯ ಭೂಮಿಯನ್ನು ಅತಿಕ್ರಮಿಸಿರುವವರು, ಅಫೀಮು ಕೃಷಿಯಲ್ಲಿ ತೊಡಗಿರುವವರು ಎಂದೆಲ್ಲ ಕುಕಿಗಳನ್ನು ನಿಂದಿಸಿದ್ದಾರೆ.

ಈಶಾನ್ಯದ ಸಪ್ತಸೋದರಿಯರು ಎಂದೇ ಕರೆಯಲಾಗುವ ರಾಜ್ಯಗಳಲ್ಲೊಂದು ಮಣಿಪುರ. ನೆರೆಯ ದೇಶ ಮಯನ್ಮಾರ್ ಜೊತೆಗೆ ಸರಹದ್ದು ಹಂಚಿಕೊಂಡಿರುವ ಈ ಸೀಮೆ ಇತ್ತೀಚೆಗೆ ಹೊತ್ತಿ ಉರಿಯುತ್ತಿದೆ. ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನೆಗಳು, ಅಗ್ನಿಸ್ಪರ್ಶಗಳು, ಲೂಟಿಗಳು, ಹತ್ಯೆಗಳು ಜರುಗಿವೆ. ಎಂಟು ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಇಂಟರ್ನೆಟ್ ಸಂಪರ್ಕವನ್ನು ಕಡಿದು ಹಾಕಲಾಗಿದೆ. ಸೇನೆ ನಿಯುಕ್ತಿಗೊಂಡಿದೆ. ಹಲವೆಡೆಗಳಲ್ಲಿ ಕಂಡಲ್ಲಿ ಗುಂಡು ಹಾರಿಸುವ ಆದೇಶ ಜಾರಿಯಲ್ಲಿದೆ. ಮುಷ್ಠಿಕಾಳಗದ ಅಂತಾರಾಷ್ಟ್ರೀಯ ಕ್ರೀಡಾಪಟು ಮತ್ತು ರಾಜ್ಯಸಭಾ ಸದಸ್ಯೆ ಮೇರಿ ಕೋಮ್ ನೆರವಿಗಾಗಿ ಪ್ರಧಾನಿ ಮೋದಿಯವರಲ್ಲಿ ಮೊರೆ ಇಟ್ಟಿದ್ದಾರೆ.

ಸಾವಿರಾರು ಕುಕಿ ಬುಡಕಟ್ಟು ಕುಟುಂಬಗಳು ಛಿದ್ರಗೊಂಡಿವೆ. ಆಶ್ರಯ ಅರಸಿ ಪಲಾಯನ ಮಾಡಿವೆ. 23 ಸಾವಿರ ಜನರನ್ನು ಹಿಂಸಾಚಾರ ಪೀಡಿತ ಪ್ರದೇಶಗಳಿಂದ ಸುರಕ್ಷಿತ ಪ್ರದೇಶಗಳಿಗೆ ಒಯ್ದಿದೆ ಅಸ್ಸಾಮ್ ರೈಫಲ್ಸ್. ಮಣಿಪುರ ಹೈಕೋರ್ಟಿನ ಏಪ್ರಿಲ್ 19ರ ಆದೇಶ ಕಿಡಿ ಹಾರಿಸಿತ್ತು. ಮೀತೀ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರ್ಪಡೆಯ ಶಿಫಾರಸನ್ನು ತ್ವರಿತವಾಗಿ ಸಾಧ್ಯವಾದರೆ ನಾಲ್ಕು ವಾರಗಳೊಳಗೆ ಕೇಂದ್ರಕ್ಕೆ ಕಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಮೀತೀಗಳು ಮತ್ತು ಕುಕಿ ಬುಡಕಟ್ಟುಗಳ ನಡುವೆ ದಶಕಗಳಿಂದ ಬೆಳೆದು ಬಂದಿದ್ದ ಮನಸ್ತಾಪದ ಸಿಡಿಮದ್ದಿಗೆ ನ್ಯಾಯಾಲಯದ ಆದೇಶ ಕಿಡಿ ತಗುಲಿಸಿದಂತಾಗಿದೆ.

ವೈಷ್ಣವ ಸಂಪ್ರದಾಯದ ಹಿಂದೂಗಳು. ಕೇಂದ್ರೀಯ ಕಣಿವೆ ಪ್ರದೇಶ ಅವರ ವಸತಿಸೀಮೆ. ಮಣಿಪುರದ ಜನಸಂಖ್ಯೆಯಲ್ಲಿ ಮೀತೀಗಳ ಪ್ರಮಾಣ ಶೇ.53ರಷ್ಟು. ಮೀತೀ ಸಮುದಾಯದಲ್ಲಿ ಹಿಂದೂ ಅಸ್ಮಿತೆಯನ್ನು ಬಡಿದೆಬ್ಬಿಸುವ ಕೆಲಸ ನಡೆದಿದೆ. ಬಿಜೆಪಿಗೆ ದೊಡ್ಡ ರೀತಿಯಲ್ಲಿ ಬೆಂಬಲ ನೀಡಿರುವ ಸಮುದಾಯವಿದು. ಆದರೆ ಕುಕಿಗಳ ಪೈಕಿ ಬಿಜೆಪಿಗೆ ದೊರೆತಿದ್ದ ಅಷ್ಟಿಷ್ಟು ಬೆಂಬಲ ಕೂಡ ಮುಖ್ಯಮಂತ್ರಿ ಬಿರೇನ್ ಸಿಂಗ್ ಸರ್ಕಾರದ ಕುಕಿ ವಿರೋಧಿ ನೀತಿಯಿಂದ ಅಳಿದು ಹೋಗಿದೆ.

ಕಳೆದ ವರ್ಷ ಮರಳಿ ಆರಿಸಿ ಬಂದು ಅಧಿಕಾರ ಹಿಡಿದಿರುವ ಬಿರೇನ್ ಸಿಂಗ್, ಅಫೀಮು ಕೃಷಿ ಮತ್ತು ಮಾದಕ ದ್ರವ್ಯಗಳನ್ನು ಹತ್ತಿಕ್ಕುವ ನೆವದಲ್ಲಿ ಕುಕಿಗಳ ವಿರುದ್ಧ ಯುದ್ಧ ಸಾರಿದ್ದಾರೆ. ಸಂರಕ್ಷಿತ ಅರಣ್ಯಗಳ ಅತಿಕ್ರಮಣವನ್ನು ತೆರವುಗೊಳಿಸುವ ಹೆಸರಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ದೌರ್ಜನ್ಯಗಳು ಜರುಗಿವೆ.

ಮಣಿಪುರದಲ್ಲಿನ ಒಟ್ಟು ಜಮೀನಿನ ಶೇ.10 ಮಾತ್ರ ಮೀತೀಗಳು ವಾಸಿಸುವ ಕಣಿವೆ ಪ್ರದೇಶದಲ್ಲಿದೆ. ಉಳಿದ ಜಮೀನು ಗುಡ್ಡಗಾಡುಗಳಲ್ಲಿದೆ. ರಾಜ್ಯದ ಜನಸಂಖ್ಯೆಯ ಶೇ.35.4ರಷ್ಟಿರುವ ಕುಕಿ ಬುಡಕಟ್ಟು ಜನರು ಮತ್ತು ನಾಗಾಗಳು ಅಲ್ಲಿದ್ದಾರೆ. ಕುಕಿಗಳು ಮತ್ತು ನಾಗಾಗಳು ಅಧಿಕಾಂಶ ಕ್ರೈಸ್ತರು. ಬುಡಕಟ್ಟು ಜನರ ಸಂರಕ್ಷಣೆಗೆ ಸಂವಿಧಾನದಲ್ಲಿ ಕೈಗೊಂಡಿರುವ ಕ್ರಮಗಳ ಪ್ರಕಾರ ಬುಡಕಟ್ಟು ಜನರ ಜಮೀನನ್ನು ಇತರರು ಖರೀದಿಸುವಂತಿಲ್ಲ. ಜಮೀನಿಗಾಗಿ ಹಸಿದಿರುವ ಮಣಿಪುರದ ಮೀತೀ ಹಿಂದೂಗಳು, ಗುಡ್ಡಗಾಡಿನಲ್ಲಿರುವ ಕುಕಿ ಕ್ರೈಸ್ತರ ಜಮೀನನ್ನು ಖರೀದಿಸುವಂತಿಲ್ಲ. ಕುಕಿಗಳು ಬೇಕಾದರೆ ಮೀತೀಗಳ ಜಮೀನನ್ನು ಖರೀದಿಸಬಹುದು. ಹೀಗಾಗಿ ಮೀತೀಗಳು ಮತ್ತು ಕುಕಿಗಳ ನಡುವಣ ಜಮೀನು ಹಂಚಿಕೆಯ ಅಸಮತೋಲನ ಬಹುಕಾಲದ ಬೇಗುದಿಗೆ ಕಾರಣ.

ರಾಜ್ಯದ 60 ವಿಧಾನಸಭಾ ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳು ಮೀತೀಗಳು ವಾಸಿಸುವ ಕಣಿವೆ ಪ್ರದೇಶದಲ್ಲಿವೆ. ಬುಡಕಟ್ಟು ಜನರು ವಾಸಿಸುವ ಗುಡ್ಡಗಾಡು ಪ್ರದೇಶದ ಹತ್ತು ಜಿಲ್ಲೆಗಳು ಉಳಿದ 20 ಶಾಸಕರನ್ನು ಆರಿಸಿ ಕಳಿಸುತ್ತವೆ. ಜನಸಂಖ್ಯೆ ಮತ್ತು ಜನಪ್ರತಿನಿಧಿಗಳ ಸಂಖ್ಯೆ ಎರಡರಲ್ಲೂ ಸಿಂಹಪಾಲನ್ನು ಹೊಂದಿರುವ ಮೀತೀ ಸಮುದಾಯವನ್ನು ಪರಿಶಿಷ್ಟ ಪಂಗಡಗಳಿಗೆ ಸೇರಿಸಿಬಿಟ್ಟರೆ ತನ್ನ ಅಸ್ತಿತ್ವಕ್ಕೇ ಸಂಚಕಾರ ಬಂದೀತು ಎಂಬುದು ಕುಕಿಗಳ ಕಳವಳ.

1949ರಲ್ಲಿ ಮಣಿಪುರ ಭಾರತದಲ್ಲಿ ವಿಲೀನಗೊಂಡ ಸಮಯದಲ್ಲಿ ತಾವು ಕೂಡ ಪರಿಶಿಷ್ಟರಾಗಿದ್ದೆವು ಎಂಬುದು ಮೀತೀಗಳ ಅಹವಾಲು. ಕೇವಲ ನಾಗಾ ಮತ್ತು ಕುಕಿಗಳಿಗೆ ಮಾತ್ರವೇ ಪರಿಶಿಷ್ಟ ಸ್ಥಾನಮಾನ ನೀಡಲಾಯಿತು ಎಂಬುದು ಅವರ ದೂರು. ಆದರೆ ಮೀತೀಗಳು ಅರಸರಾಗಿ ಮಣಿಪುರವನ್ನು ಆಳಿದವರು. ಮುಂದುವರೆದವರು. ಅವರಿಗೆ ಪರಿಶಿಷ್ಟ ಪಂಗಡಗಳ ಸ್ಥಾನಮಾನ ನೀಡುವ ಮಾನದಂಡಗಳನ್ನು ಅನ್ವಯಿಸಲು ಬರುವುದಿಲ್ಲ. ಮಿಗಿಲಾಗಿ ಮೀತೀಗಳಿಗೆ ಒ.ಬಿ.ಸಿ. ಮತ್ತು ಪರಿಶಿಷ್ಟ ಜಾತಿಯ ಸ್ಥಾನಮಾನ ಈಗಾಗಲೇ ಸಿಕ್ಕಿದೆ ಎಂಬುದು ಕುಕಿಗಳ ವಾದ.

ಮುಖ್ಯಮಂತ್ರಿ ಬಿರೇನ್ ಸಿಂಗ್ ಕಳೆದ ಕೆಲವು ತಿಂಗಳುಗಳಿಂದ ಕುಕಿಗಳನ್ನು ವಿದೇಶೀಯರು, ಅಕ್ರಮ ವಲಸಿಗರು, ನೆರೆಯ ಬರ್ಮಾದಿಂದ ಅಕ್ರಮ ವಲಸೆಗೆ ಕುಮ್ಮಕ್ಕು ನೀಡುತ್ತಿರುವವರು ಎಂದೆಲ್ಲ ಟೀಕಿಸಿದ್ದಾರೆ. ಅರಣ್ಯ ಭೂಮಿಯನ್ನು ಅತಿಕ್ರಮಿಸಿರುವವರು, ಅಫೀಮು ಕೃಷಿಯಲ್ಲಿ ತೊಡಗಿರುವವರು ಎಂದೆಲ್ಲ ಕುಕಿಗಳನ್ನು ನಿಂದಿಸಿದ್ದಾರೆ.

ಇದನ್ನು ಓದಿ ಈಶಾನ್ಯ ರಾಜ್ಯಗಳಲ್ಲಿ ಬೆಂಕಿಯೊಂದಿಗೆ ಆಟವಾಡುವುದನ್ನು ಬಿಜೆಪಿ ನಿಲ್ಲಿಸುವುದೇ?

35 ಸಾವಿರಕ್ಕೂ ಹೆಚ್ಚು ಕುಕಿಗಳು ನಿರಾಶ್ರಿತರಾಗಿದ್ದಾರೆ. ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಹಿಂಸಾಚಾರಕ್ಕೆ ಬಲಿಯಾಗಿರುವವರ ಅನಧಿಕೃತ ಸಂಖ್ಯೆ ನೂರರ ಹತ್ತಿರ ಎನ್ನಲಾಗಿದೆ. ಇಂಫಾಲ ಕಣಿವೆ ವಾಸಿಗಳಾಗಿದ್ದ ಎಲ್ಲ ಕುಕಿಗಳ ನಿವಾಸಗಳಿಗೆ ಬೆಂಕಿ ಇಡಲಾಗಿದೆ. ಕುಕಿ ಜನವಸತಿಗಳ ಹಳ್ಳಿಗಳನ್ನು ಸಾರಾಸಗಟಾಗಿ ಸುಟ್ಟು ಹಾಕಲಾಗಿದೆ. ಮೀತೀ ಉಗ್ರವಾದಿಗಳ ಗುಂಪುಗಳು ಕುಕಿಗಳ ಲೂಟಿ ಹಿಂಸಾಚಾರ ನಡೆಸಿದ್ದಾರೆ. ಮಣಿಪುರ ಪೊಲೀಸ್ ಕಮಾಂಡೋಗಳು ಈ ಉಗ್ರವಾದಿ ಗುಂಪುಗಳಿಗೆ ರಕ್ಷಣೆ ನೀಡಿದ್ದಾರೆಂದು ವರದಿಗಳು ಹೇಳಿವೆ. ಕುಕಿಗಳ ಇಗರ್ಜಿಗಳಿಗೆ ಮಾತ್ರ ಬೆಂಕಿ ಇಡಲಾಗುತ್ತಿದೆ. ನಾಗಾಗಳ ಚರ್ಚುಗಳನ್ನು ಬಿಡಲಾಗಿದೆ. ಕೇಂದ್ರ ಬಿಜೆಪಿ ಸರ್ಕಾರ ನಾಗಾಲ್ಯಾಂಡಿನ ನಾಗಾ ಸಂಘಟನೆಗಳೊಂದಿಗೆ ಶಾಂತಿ ಒಪ್ಪಂದಕ್ಕಾಗಿ ಪ್ರಯತ್ನ ನಡೆಸಿದೆ. ಈ ಹಿನ್ನೆಲೆಯಲ್ಲಿ ನಾಗಾಗಳ ಚರ್ಚುಗಳನ್ನು ಮುಟ್ಟಲಾಗುತ್ತಿಲ್ಲ ಎಂಬ ವ್ಯಾಖ್ಯಾನ ಉಂಟು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕುಕಿ ಬುಡಕಟ್ಟು ಜನರಲ್ಲಿ ವಿಶ್ವಾಸ ಹುಟ್ಟಿಸಬೇಕಿದ್ದರೆ ಮೀತೀ ಬಹುಸಂಖ್ಯಾತ ಸರ್ಕಾರವನ್ನು ಅಮಾನತಿನಲ್ಲಿ ಇರಿಸಿ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಬೇಕು. ಕೋಮುವಾದಿ ಹಣೆಪಟ್ಟಿ ಹಚ್ಚಿಕೊಂಡಿರುವ ರಾಜ್ಯ ಪೊಲೀಸ್ ವ್ಯವಸ್ಥೆ ನಿಷ್ಪಕ್ಷಪಾತಿಯಾಗಿ ವರ್ತಿಸುವುದೆಂದು ನಂಬಲಾಗದು. ಕೇಂದ್ರೀಯ ಸೇನೆಯ ನಿಯುಕ್ತಿ ಮುಂದುವರೆಯಬೇಕು. ಹೀಗೆ ನೆಲೆಗೊಳ್ಳುವ ಶಾಂತಿಯ ಅವಧಿಯಲ್ಲಿ ಮೀತೀ ಮತ್ತು ಕುಕಿಗಳ ನಡುವೆ ರಾಜೀ ಒಪ್ಪಂದದ ಮಾತುಕತೆಗಳನ್ನು ಜರುಗಿಸಬೇಕಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...

ಈ ದಿನ ಸಂಪಾದಕೀಯ | ದೇವೇಗೌಡರ ದೈತ್ಯಶಕ್ತಿ, ಮೋದಿಯ ಮೋಡಿ ಮತ್ತು ದಂಗಾದ ಜನ

ಮೇಲ್ನೋಟಕ್ಕಿದು ಕೊಡು-ಕೊಳ್ಳುವ ಮೈತ್ರಿಯಂತೆ ಕಂಡರೂ, ಗೆದ್ದರೆ ಮಾತ್ರ ಇಬ್ಬರಿಗೂ ಲಾಭವಿದೆ. ಸೋತರೆ,...

ಈ ದಿನ ಸಂಪಾದಕೀಯ | ಬಯಲಾಗುತ್ತಿರುವ ಸುಳ್ಳುಗಳು, ಬೆತ್ತಲಾಗುತ್ತಿರುವ ಬಿಜೆಪಿ

ಹತ್ತು ವರ್ಷಗಳ ಕಾಲ ದೇಶವನ್ನಾಳಿದ ಬಿಜೆಪಿ, ತನ್ನ ಆಡಳಿತವನ್ನು, ಅಭಿವೃದ್ಧಿಯನ್ನು ದೇಶದ...