ಈ ದಿನ ಸಂಪಾದಕೀಯ | ಭಗತ್ ಸಿಂಗ್ ಎಂಬ ಬೆಳಕಿಗೆ ಬೆನ್ನು ಮಾಡಿದ್ದೇವೆ

Date:

ಬ್ರಿಟಿಷರ ನೇಣುಗಂಬಕ್ಕೆ ನಗು ನಗುತ್ತಲೇ ಕೊರಳೊಡ್ಡಿದ್ದ ಆ ಸ್ವಾತಂತ್ರ್ಯ ಕ್ರಾಂತಿಯ ಕಿಡಿ ಉಸಿರಾಡಿದ್ದು ಇಪ್ಪತ್ಮೂರೇ ವರ್ಷ. ಉಕ್ಕು ಹರೆಯದ ಈ ಬಿಸಿ ಗುಂಡಿಗೆ ದಾಸ್ಯದ ವಿರುದ್ಧ ಮಾತ್ರವೇ ಅಲ್ಲ, ಸಮ ಸಮಾಜ, ಸಹಬಾಳುವೆಗಾಗಿ ಮಿಡಿದ ಪರಿ ಅಭೂತಪೂರ್ವ.

ಭಗತ್ ಸಿಂಗ್ ದೇಹ ಬಹು ಹಿಂದೆಯೇ ಮಣ್ಣು ಸೇರಿರಬಹುದು. ಆದರೆ ಕೋಮುವಾದ, ಅಮಾನವೀಯ ಅಸ್ಪೃಶ್ಯತೆ, ಧರ್ಮ-ಜಾತಿಗಳ, ಮೇಲು- ಕೀಳುಗಳ ನೆವದಲಿ ನಡೆವ ಕ್ರೌರ್ಯ-ಶೋಷಣೆ ವಿರುದ್ಧ ಆತ ಎತ್ತಿದ ದನಿ ಇಂದಿಗೂ ಪ್ರಸ್ತುತ. ಬ್ರಿಟಿಷರು ಗಲ್ಲಿಗೇರಿಸಿದ್ದು ಕೇವಲ ಆತನ ದೇಹವನ್ನು. ಆದರೆ ಆತನ ಅಜರಾಮರ ಆತ್ಮವನ್ನು, ಸ್ವಸ್ಥ ಸಮಾಜ ಕುರಿತು ಆತ ಕಂಡ ಕನಸುಗಳನ್ನು, ಆತನ ವಿಚಾರಗಳನ್ನು ಅನುದಿನವೂ ಉರಿಕಂಬಕ್ಕೆ ಏರಿಸುತ್ತಿದ್ದೇವೆ.

‘ಸಾಂಪ್ರದಾಯಿಕ ದಂಗೆಗಳು ಮತ್ತು ಅವುಗಳ ಇಲಾಜು’ ಎಂಬುದಾಗಿ 1927ರಲ್ಲಿ ಭಗತ್ ಬರೆದ ಲೇಖನ ಇಂದಿನ ಭಾರತದ ಸ್ಥಿತಿಗತಿಗೂ ಹಿಡಿದ ಕೈಗನ್ನಡಿ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

. . . . . ‘ಇಂಡಿಯಾದ ಇಂದಿನ ಪರಿಸ್ಥಿತಿ ಅತೀವವಾಗಿ ಉಲ್ಬಣಿಸಿದೆ. ಒಂದು ಧರ್ಮದ ಅನುಯಾಯಿಗಳು ಹಠಾತ್ತನೆ ಇತರೆ ಧರ್ಮಗಳ ವಿರುದ್ಧ ಕಡು ಹಗೆತನದ ಕತ್ತಿ ಹಿರಿದಿದ್ದಾರೆ. ಹಿಂದು ಸಿಖ್ಖರೆಂಬ ಏಕೈಕ ಕಾರಣಕ್ಕೆ ಮುಸ್ಲಿಮರು ಹಿಂದು ಮತ್ತು ಸಿಖ್ಖರನ್ನೂ, ಮುಸಲ್ಮಾನರೆಂಬ ಕಾರಣಕ್ಕಾಗಿ ಮುಸಲ್ಮಾನರನ್ನೂ ಕ್ರೂರವಾಗಿ ಕೊಲ್ಲಲಾಗುತ್ತಿದೆ. . . . ರಾಜಕೀಯ ನಾಯಕರು ನಿರ್ಲಜ್ಜರಾಗಿ ವರ್ತಿಸುತ್ತಿದ್ದಾರೆ. ದೇಶವನ್ನು ದಾಸ್ಯದಿಂದ ವಿಮೋಚನೆಗೊಳಿಸುವ ಶಪಥ ತೊಟ್ಟಿರುವ ಮತ್ತು ಸಮಾನ ರಾಷ್ಟ್ರೀಯತೆ ಕುರಿತು ಹಗಲಿರುಳು ಭಾಷಣ ಮಾಡುವ ತಲೆಯಾಳುಗಳು ಒಂದೋ ಲಜ್ಜೆಯಿಂದ ತಲೆತಗ್ಗಿಸಿ ಬಾಯಿ ಹೊಲಿದುಕೊಂಡಿದ್ದಾರೆ ಇಲ್ಲವೇ ಧರ್ಮಾಂಧತೆಯ ದುಷ್ಟ ಗಾಳಿಯ ದಿಕ್ಕಿನತ್ತ ಓಲಾಡುತ್ತಿದ್ದಾರೆ.. . .ತುಟಿ ಬಿಚ್ಚದೆ ಬೇಲಿಯ ಮೇಲೆ ಮುಖ ಮುಚ್ಚಿ ಕುಳಿತಿರುವವರ ಸಂಖ್ಯೆಯೂ ಸಣ್ಣದೇನಲ್ಲ.…’

ಕೋಮುವಾದದ ದಳ್ಳುರಿಗೆ ಎಣ್ಣೆ ಎರೆವ ಪತ್ರಿಕೆಗಳ ಕುರಿತು ಭಗತ್ ಹೇಳಿದ್ದು- . . . . . ‘ಕೋಮು ದಂಗೆಗಳಿಗೆ ಪ್ರಚೋದನೆ ನೀಡುವ ಇತರೆ ಪ್ರಮುಖ ಪಾತ್ರಧಾರಿಗಳ ಸಾಲಿಗೆ ಪತ್ರಕರ್ತರೂ ಸೇರುತ್ತಾರೆ. ಒಂದು ಕಾಲಕ್ಕೆ ಬಹುಗಣ್ಯ ಕಸುಬು ಎಂದು ಪರಿಗಣಿಸಲಾಗಿದ್ದ ಪತ್ರಿಕೋದ್ಯಮ ಈಗ ತಿಪ್ಪೆಯಾಗಿ ಬದಲಾಗಿದೆ. ಒಬ್ಬರ ವಿರುದ್ಧ ಮತ್ತೊಬ್ಬರು ತಲೆಬರೆಹಗಳಲ್ಲಿ ಕೂಗಿ ಕಿರುಚುತ್ತಾರೆ, ಪರಸ್ಪರರನ್ನು ಕೊಲ್ಲುವ ಉನ್ಮಾದಗಳನ್ನು ಜನರಲ್ಲಿ ಪ್ರಚೋದಿಸುತ್ತಿದ್ದಾರೆ… ಪತ್ರಿಕೆಗಳು ತೀವ್ರತರದ ಆಸ್ಫೋಟಕ ಮತ್ತು ಅತೀವ ಪ್ರಚೋದಕ ಲೇಖನಗಳನ್ನು ಪ್ರಕಟಿಸಿ ಕೋಮುವಾದೀ ಜ್ವಾಲೆಯನ್ನು ಹತ್ತು ಹಲವು ಸ್ಥಳಗಳಲ್ಲಿ ಭುಗಿಲೆಬ್ಬಿಸುತ್ತಿವೆ.. . . . ತಳಮಳ ತಳ್ಳಂಕಗಳ ಈ ಸ್ಥಿತಿಯಲ್ಲಿ ಸಮಚಿತ್ತವನ್ನು, ಸಮತೂಕವನ್ನು ಪ್ರದರ್ಶಿಸಿದ ಪತ್ರಕರ್ತರು ಕೆಲವೇ ಕೆಲವರು.

. . . .ಜನತೆಯಲ್ಲಿ ಅರಿವು ಮೂಡಿಸಿ ಅವರ ಮೆದುಳುಗಳನ್ನು ನಿರ್ಮಲವಾಗಿ ಇರಿಸುವುದು, ಸಂಕುಚಿತವಾದದ ಬಿಲಗಳಿಂದ ಹೊರಗೆಳೆದು ತರುವುದು, ಕೋಮುವಾದೀ ಭಾವನೆಗಳನ್ನು ಕೆರೆದು ತೆಗೆದು ತೊಳೆದು ಪರಸ್ಪರ, ಸಾಮರಸ್ಯ ಮೂಡಿಸುವುದು ಪತ್ರಿಕೆಗೆಳ ಅಸಲು ಕರ್ತವ್ಯ. ….ಬದಲಾಗಿ ಅರಿವುಗೇಡಿತನ, ಸಂಕುಚಿತ ಪಂಥವಾದ- ಕೋಮುವಾದಗಳನ್ನು ಜನರ ಮನಸುಗಳಲ್ಲಿ ಬಿತ್ತಿ ಗಲಭೆಗಳನ್ನು ಎಬ್ಬಿಸುವುದೇ ಅವರ ಮುಖ್ಯ ಗುರಿ ಎನ್ನಿಸುತ್ತಿದೆ. ಈಗಿನ ಇಂಡಿಯಾದ ಪರಿಸ್ಥಿತಿಯನ್ನು ನೋಡಿದರೆ ರಕ್ತಕಣ್ಣೀರು ಕಪಾಳಕ್ಕೆ ಇಳಿವುದಲ್ಲದೆ, ಕಟ್ಟಕಡೆಗೆ ಈ ದೇಶದ ಪರಿಸ್ಥಿತಿ ಏನಾದೀತು ಎಂಬ ಪ್ರಶ್ನೆ ಏಳುತ್ತದೆ.

‘ಜನ ಪರಸ್ಪರ ಕಚ್ಚಾಡುವುದನ್ನು ನಿಲ್ಲಿಸಬೇಕಿದ್ದರೆ, ದೀನ ದರಿದ್ರರು ಮತ್ತು ರೈತರು ಮತ್ತು ದುಡಿಯುವ ವರ್ಗಗಳಿಗೆ ಬಂಡವಾಳಶಾಹಿಯೇ ಅವರ ಅಸಲು ಶತ್ರು ಎಂಬ ವಾಸ್ತವವನ್ನು ತಿಳಿಸಿ ಹೇಳಬೇಕಿದೆ. ಅವರ ಕೈಯಲ್ಲಿನ ದಾಳ ಆಗದಂತೆ, ಅವರ ಮೋಸ ಮರೆಗಳ ಹುನ್ನಾರಗಳಿಗೆ ಬಲಿಯಾಗದಂತೆ ಎಚ್ಚರಗೊಳಿಸಬೇಕಿದೆ. ಎಲ್ಲ ಜಾತಿ, ವರ್ಣ, ಜನಾಂಗ, ರಾಷ್ರೀಯತೆಯ ಭೇದ ಭಾವವಿಲ್ಲದೆ ಒಗ್ಗಟ್ಟಿನಿಂದ ತಮ್ಮ ಹಕ್ಕುಗಳಿಗೆ ಹೋರಾಡಬೇಕೆಂಬ ಅರಿವನ್ನು ಎಲ್ಲ ಬಡವರಲ್ಲಿ ಮೂಡಿಸಬೇಕಿದೆ’.

ಅಸಲು ಕ್ರಾಂತಿಕಾರಿ ಸೈನ್ಯಗಳಿರುವುದು ಹಳ್ಳಿಗಳಲ್ಲಿ ಮತ್ತು ಫ್ಯಾಕ್ಟರಿಗಳಲ್ಲಿ…ಅವರೆಂದರೆ ರೈತರು ಮತ್ತು ಕಾರ್ಮಿಕರು. ನೇಣಿಗೇರಿದ ಎರಡು ತಿಂಗಳ ಮುನ್ನ 1931ರ ಫೆಬ್ರವರಿ ಎರಡರಂದು ಬರೆದ ‘To the young political workers’ ಲೇಖನದಲ್ಲಿ ಕಾಣಬರುವ ಈ ಸಾಲುಗಳು ಆತನ ಒಲವು ನಿಲುವುಗಳನ್ನು ನಿಚ್ಚಳಗೊಳಿಸುತ್ತವೆ.

Kavya Samatala
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಎಲ್ಲೆಲ್ಲೂ ಪುರುಷರದೇ ಪಾರುಪತ್ಯ; ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟು

ಎಲ್ಲ ಕ್ಷೇತ್ರವನ್ನೂ ಪುರುಷರೇ ಆವರಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಪಕ್ಷ, ಸರ್ಕಾರದೊಳಗೆ, ಸಾಂಸ್ಕೃತಿಕ ಸಂಸ್ಥೆಗಳಲ್ಲಿ...

ಈ ದಿನ ಸಂಪಾದಕೀಯ | ಇದು ಬಿಜೆಪಿ-ಜೆಡಿಎಸ್ ನಡುವಿನ ಬಿರುಕಲ್ಲ, ಬಿಕ್ಕಟ್ಟಲ್ಲ, ಆಟ

ಗೌಡರ ಕುಟುಂಬಕ್ಕೆ ಚುನಾವಣೆ ಎಂದರೆ ಖರ್ಚಿನ ಬಾಬತ್ತಲ್ಲ, ಲಾಭದ ಹೊಸ ಮಾರ್ಗ....

ಈ ದಿನ ಸಂಪಾದಕೀಯ | ಹೇಳುವುದು ಹಬ್ಬ, ಮಾಡುವುದು ಯುದ್ಧ, ಸಾಯುವುದು ಸೈನಿಕರು

ಹಬ್ಬಗಳು ಎಲ್ಲ ಕಾಲಕ್ಕೂ ಉಳ್ಳವರ ಸಂಭ್ರಮ-ಸಂತೋಷವನ್ನು ಹೆಚ್ಚು ಮಾಡುತ್ತವೆ. ಬಡವರನ್ನು ನೋಯಿಸಿ...

ಈ ದಿನ ಸಂಪಾದಕೀಯ | ಮುಚ್ಚಿಟ್ಟ ಮಾಧ್ಯಮಗಳು ಬಿಚ್ಚಿಟ್ಟ ಸಾಮಾಜಿಕ ಮಾಧ್ಯಮಗಳು

ಚುನಾವಣಾ ಆಯೋಗ ಬಿಡುಗಡೆ ಮಾಡಿದ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಸುದ್ದಿ ಮಾಧ್ಯಮಗಳು...