‘ಈ ದಿನ’ ಸಂಪಾದಕೀಯ | ₹2000 ನೋಟು ರದ್ದತಿಯು ಮತ್ತೊಂದು ದುರಂತ ಪ್ರಹಸನಕ್ಕೆ ನಾಂದಿ ಆಗದಿರಲಿ

Date:

2016ರ ನೋಟು ರದ್ದತಿಯಿಂದ ನಯಾಪೈಸೆಯ ಪ್ರಯೋಜನವೂ ಆಗಿಲ್ಲ ಎಂದು ಸ್ವತಃ ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಒಪ್ಪಿಕೊಂಡಿದ್ದಾಗಿದೆ. ಆದರೂ, '₹2000 ನೋಟು ರದ್ದತಿಯು ಮತ್ತೊಂದು ಮಾಸ್ಟರ್ ಸ್ಟ್ರೋಕ್' ಎಂದು ಅಬ್ಬರಿಸುತ್ತಿರುವ ಸುದ್ದಿವಾಹಿನಿಗಳ ವರ್ತನೆ ನಾಚಿಕೆಗೇಡು

₹2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುತ್ತಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕೃತವಾಗಿ ಘೋಷಿಸಿದೆ. ಈ ಸುದ್ದಿಯು ಸಹಜವಾಗಿಯೇ ಜನಸಾಮಾನ್ಯರ ನಡುವೆ ಹೆಚ್ಚು ಸದ್ದು ಮಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ, ₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ರಾತ್ರೋರಾತ್ರಿ ರದ್ದುಗೊಳಿಸಿದ 2016ರ ದುರಂತ ಪ್ರಹಸನ. ಆರ್ಥಿಕ ಸಬಲೀಕರಣ ಮತ್ತು ಭಯೋತ್ಪಾದನೆ ನಿಯಂತ್ರಣವೇ ಗುರಿ ಎಂದು ಸಾರಲಾಗಿದ್ದ ಈ ದುರಂತಕ್ಕೆ ಮುನ್ನುಡಿ ಬರೆದದ್ದು ಪ್ರಧಾನಿ ನರೇಂದ್ರ ಮೋದಿ.

ದೇಶದ ಅರ್ಥ ವ್ಯವಸ್ಥೆಯ ಮೇಲೆ ನಿಗಾ ಇಡುವ ಮತ್ತು ನಿಭಾಯಿಸುವ ಭಾರತೀಯ ರಿಸರ್ವ್ ಬ್ಯಾಂಕನ್ನು ಸಂಪೂರ್ಣ ಕತ್ತಲಲ್ಲಿಟ್ಟು, ಯುದ್ಧ ಘೋಷಣೆಯ ರೀತಿಯಲ್ಲಿ ಕೇಂದ್ರ ಸರ್ಕಾರ ಮಾಡಿದ ಈ ಎಡವಟ್ಟಿನಿಂದ ಅರ್ಥ ವ್ಯವಸ್ಥೆಗೆ ನಯಾಪೈಸೆಯೂ ಪ್ರಯೋಜನ ಆಗಲಿಲ್ಲ ಎಂದು ಸಾಲು-ಸಾಲು ಅಧ್ಯಯನಗಳು ಷರಾ ಬರೆದಾಗಿದೆ. ಈ ವಿಷಯವನ್ನು ಸಂಸತ್‌ನಲ್ಲಿ ಕೇಂದ್ರ ಸರ್ಕಾರವೂ ಒಪ್ಪಿಕೊಂಡಿದೆ. ಇನ್ನು, ಭಯೋತ್ಪಾದನೆ ಮೊದಲಿಗಿಂತ ಹೆಚ್ಚೇ ಆಗಿದ್ದು ಜಗಜ್ಜಾಹೀರು. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೆ ನಡೆದಿದ್ದ ಈ ನೋಟು ರದ್ದತಿ ದುರಂತದಲ್ಲಿ ಎಷ್ಟು ಮಂದಿ ಪ್ರಾಣ ಕಳೆದುಕೊಂಡರು ಎಂಬುದು ಗೊತ್ತಿಲ್ಲ ಎನ್ನುವುದರ ಮೂಲಕ ಸ್ವತಃ ಪ್ರಧಾನಮಂತ್ರಿ ಮಹಾ ಪಲಾಯನ ಮಾಡಿದ್ದೂ ಆಯಿತು. ಇಷ್ಟೆಲ್ಲಕ್ಕೂ ಸಾಕ್ಷಿಯಾಗಿದ್ದ ₹2000 ಮುಖಬೆಲೆಯ ನೋಟುಗಳನ್ನು ಇದೀಗ ವಾಪಸು ತೆಗೆದುಕೊಳ್ಳಲಾಗುತ್ತಿದೆ.

ಈ ಸಂಪಾದಕೀಯ ಓದಿದ್ದೀರಾ?: ಈ ದಿನ ಸಂಪಾದಕೀಯ | ಕರಾವಳಿ ಕೋಮು ರಾಜಕಾರಣಕ್ಕೆ ಮದ್ದು ಅರೆಯುವುದೇ ಸಿದ್ದು-ಡಿಕೆ ಜೋಡಿ?

ಅಂದು ಅತ್ಯುತ್ಸಾಹದಲ್ಲಿ ₹500 ಮತ್ತು ₹1,000 ನೋಟು ರದ್ದತಿ ಘೋಷಿಸಿದ್ದ ಪ್ರಧಾನಿ, ಇಂದು ₹2000 ನೋಟಿಗೂ ತಮಗೂ ಸಂಬಂಧವಿಲ್ಲ ಎಂಬಂತೆ ವಿದೇಶ ಪ್ರವಾಸದಲ್ಲಿದ್ದಾರೆ. ಅಂದು ನೋಟು ರದ್ದತಿ ಘೋಷಿಸಬೇಕಿದ್ದ ರಿಸರ್ವ್ ಬ್ಯಾಂಕ್, ಇಂದು ತಾನು ಬಹಳ ದೊಡ್ಡ ಘನಕಾರ್ಯ ಮಾಡುತ್ತಿರುವಂತೆ ಕಾಯ್ದೆಯನ್ನು ಉಲ್ಲೇಖಿಸಿ ಸುತ್ತೋಲೆ ಹೊರಡಿಸಿದೆ. ಅಲ್ಲದೆ, ‘ಇದು ಯಾವಾಗಲೂ ನಡೆಯುತ್ತ ಬರುತ್ತಿರುವ ರಿವಾಜು’ ಎಂಬಂತೆ ತೋರಿಕೆಯ ನಾಟಕವಾಡಿದೆ.  

ಅಸಲಿಗೆ ₹2000 ನೋಟಿನ ಮುದ್ರಣ ನಿಲ್ಲಿಸುವ ನಿರ್ಧಾರ ಐದು ವರ್ಷಗಳ ಹಿಂದೆಯೇ ಆಗಿತ್ತು. ಹಣಕಾಸು ರಾಜ್ಯ ಸಚಿವರಾಗಿದ್ದ ಅನುರಾಗ್ ಠಾಕೂರ್, 2021ರ ಮಾರ್ಚ್‌ 15ರಂದು ಸಂಸತ್‌ನಲ್ಲಿ ಬಹಿರಂಗಗೊಳಿಸಿದ್ದ ಮಾಹಿತಿ ಇದು. ಆಗ ಠಾಕೂರ್ ಅವರು, 2019-20 ಮತ್ತು 2020-21ನೇ ಸಾಲಿನಲ್ಲಿ ₹2000 ನೋಟು ಮುದ್ರಣ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂಬುದನ್ನಷ್ಟೇ ಖಚಿತಪಡಿಸಿದ್ದರು. ಆದರೆ, ನಿನ್ನೆ (ಮೇ 19) ರಿಸರ್ವ್ ಬ್ಯಾಂಕ್ ಸುತ್ತೋಲೆಯಲ್ಲಿ, 2018-2019ರ ಸಾಲಿನಿಂದಲೇ ₹2000 ಮುಖಬೆಲೆಯ ನೋಟು ಮುದ್ರಣ ನಿಲ್ಲಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಅಲ್ಲದೆ, ರಿಸರ್ವ್ ಬ್ಯಾಂಕ್‌ನ ‘ಕ್ಲೀನ್ ನೋಟ್ ಪಾಲಿಸಿ’ಯ ಪ್ರಕಾರ, ಯಾವುದೇ ಹೊಸ ನೋಟುಗಳ ಚಲಾವಣೆ ಅವಧಿ ನಾಲ್ಕರಿಂದ ಐದು ವರ್ಷ. ಹಾಗಾದರೆ, 2016ರಲ್ಲಿ ಚಾಲ್ತಿಗೆ ಬಂದ ಈ ನೋಟುಗಳು ಎರಡೇ ವರ್ಷದಲ್ಲಿ ಬೇಡವಾಗಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರಿಸುವವರು ಯಾರು? ಈ ಘಟನಾವಳಿಯಿಂದ ಆದ ಜೀವಗಳ ನಷ್ಟ ಮತ್ತು ದೇಶಕ್ಕಾದ ಆರ್ಥಿಕ ನಷ್ಟ ತುಂಬುವವರು ಯಾರು? ಈ ದುರಂತ ಪ್ರಹಸನವನ್ನು ‘ದೇಶದ್ರೋಹದ ಸಂಚು’ ಎಂದು ಕರೆಯಬಾರದೇಕೆ?

ಈ ಸಂಪಾದಕೀಯ ಓದಿದ್ದೀರಾ?: 'ಈ ದಿನ' ಸಂಪಾದಕೀಯ | ಕೋರ್ಟು, ತಾಯಿ-ತಂದೆಯ ನಡುವೆ ಮಕ್ಕಳು ಕಾಲ್ಚೆಂಡಾಗದಿರಲಿ

ಇದನ್ನೆಲ್ಲ ಮೊದಲೇ ಮನಗಂಡು, ಕಾಲಕಾಲಕ್ಕೆ ಈ ಬಗ್ಗೆ ನಿಗಾ ವಹಿಸಿ, ಸರ್ಕಾರದ ನಡೆಯನ್ನು ವಿಮರ್ಶೆ ಮಾಡಬೇಕಿದ್ದದ್ದು ಈ ದೇಶದ ಸುದ್ದಿ ಮಾಧ್ಯಮಗಳು. ಆದರೆ, 2016ರಲ್ಲಿ ನೋಟು ರದ್ದತಿ ಘೋಷಿಸಿದಾಗ, ಜನಸಾಮಾನ್ಯರು ಆಘಾತದಲ್ಲಿದ್ದರೆ, ಬಹುತೇಕ ಸುದ್ದಿ ಮಾಧ್ಯಮಗಳು ಕಪೋಲಕಲ್ಪಿತ ಕತೆಗಳನ್ನು ಹುಟ್ಟುಹಾಕಿ, ಆಳುವ ಸರ್ಕಾರಗಳಿಂದ ಆದಷ್ಟು ಲಾಭ ಗಿಟ್ಟಿಸುವ ಸಂಚಿನಲ್ಲಿ ಮುಳುಗಿಹೋಗಿದ್ದವು. ಹಿಂದಿ ಮತ್ತು ಕನ್ನಡದ ಕೆಲವು ಸುದ್ದಿವಾಹಿನಿಗಳಂತೂ ಹೊಸ ನೋಟಿನಲ್ಲಿ ರಿಸರ್ವ್ ಬ್ಯಾಂಕಿಗೂ ಗೊತ್ತಿಲ್ಲದಂತೆ ‘ಚಿಪ್’ ಇರಿಸಿದ್ದವು. ಈ ಬಾರಿ, ಪ್ರಧಾನಿ ಮೋದಿಯವರು ನೋಟು ರದ್ದತಿ ಘೋಷಿಸಿಲ್ಲ ಮತ್ತು ರಿಸರ್ವ್ ಬ್ಯಾಂಕಿಗೆ ಆ ಕೆಲಸ ತನ್ನದು ಎಂಬ ಎಚ್ಚರ ಈಗಲಾದರೂ ಆಗಿದೆ ಎಂಬುದು ಸಮಾಧಾನಕರ ಸಂಗತಿ. ಇಷ್ಟೆಲ್ಲ ಆದರೂ, ರಾಜಕೀಯ ಪಕ್ಷಗಳಿಗಿಂತಲೂ ಚೆನ್ನಾಗಿ ರಾಜಕಾರಣ ಮಾಡಲು ಕಲಿತಿರುವ ಕೆಲವು ಸುದ್ದಿವಾಹಿನಿಗಳು, ‘ಇದು ಮತ್ತೊಂದು ಮಾಸ್ಟರ್ ಸ್ಟ್ರೋಕ್’ ಎಂದು ಅಬ್ಬರಿಸುತ್ತ, ಜನಸಾಮಾನ್ಯರನ್ನು ಮೂರ್ಖರನ್ನಾಗಿಸುವ ಮತ್ತೊಂದು ಸುತ್ತಿನ ಕಾರ್ಯಾಚರಣೆಗೆ ಇಳಿದಿರುವುದು ನಾಚಿಕೆಗೇಡು.

ರಿಸರ್ವ್ ಬ್ಯಾಂಕ್ ಇನ್ನು ಮುಂದಾದರೂ, ತಾನು ಸುತ್ತೋಲೆಯಲ್ಲಿ ಉಲ್ಲೇಖಿಸಿರುವ ಕಾಯ್ದೆ ಹೇಳುವ ಪ್ರಕಾರ ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ ನಡೆದುಕೊಳ್ಳಲಿ. ಪ್ರಧಾನಿ ಮೋದಿಯವರು ಅನವಶ್ಯವಾಗಿ ರಿಸರ್ವ್ ಬ್ಯಾಂಕ್‌ನ ದೈನಂದಿನ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸದಿರಲಿ. ಎಲ್ಲಕ್ಕಿಂತ ಮುಖ್ಯವಾಗಿ, ₹2000 ನೋಟು ರದ್ದತಿಯು ಮತ್ತೊಂದು ದುರಂತ ಪ್ರಹಸನದ ಶುರುವಾತು ಆಗದಿರಲಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಹೇಗೂ ಮುದ್ರಣ ನಿಲ್ಲಿಸಿದ್ದರು ಹಾಗೆ ಸುಮ್ಮನೆ ಇದ್ದಿದ್ದರೆ ಆಗಿತ್ತು ಬಾಯಿ ಬಡಿದುಕೊಂಡು ತಮ್ಮ ಮೂರ್ಖತನವನ್ನು ಜಾಹೀರು ಮಾಡಿಕೊಂಡರು 😀

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ವೀರಣ್ಣ ಮಡಿವಾಳರ ಅವರನ್ನು ಅವಮಾನಿಸಿದ್ದೇ ಅನಾಗರಿಕತೆ! ಅಮಾನತನ್ನು ವಾಪಸು ಪಡೆಯಿರಿ

ಸರ್ಕಾರಿ ಶಾಲೆಗಳು ಸದ್ದಿಲ್ಲದೆ ಸಾಯುತ್ತಿರುವ ಈ ದಿನಮಾನಗಳಲ್ಲಿ ದಮನಿತರು, ದೀನ ದುರ್ಬಲರು,...

ಈ ದಿನ ಸಂಪಾದಕೀಯ | ರಾಜ್ಯ ಸರ್ಕಾರದ ‘ಗೃಹ ಆರೋಗ್ಯ’ ಮತ್ತೊಂದು ಗ್ಯಾರಂಟಿ ಯೋಜನೆಯೇ?

ಮನೆ ಬಾಗಿಲಿಗೆ ಉಚಿತ ಆರೋಗ್ಯ ಸೇವೆ ಮತ್ತು ಔಷಧ ತಲುಪಿಸುವ ನಿಟ್ಟಿನಲ್ಲಿ...

ಈ ದಿನ ಸಂಪಾದಕೀಯ | ಸ್ಥಳೀಯ ಸರ್ಕಾರಗಳ ಚುನಾವಣೆ ವಿಳಂಬ; ಕಾಂಗ್ರೆಸ್ ನಡೆ ಸಂವಿಧಾನ ವಿರೋಧಿಯಲ್ಲವೇ?

'ಸಂವಿಧಾನ ಉಳಿವಿಗಾಗಿ ನಮ್ಮ ಹೋರಾಟ' ಎಂದು ಸಂವಿಧಾನ ಪುಸ್ತಕ ಹಿಡಿದು ಎಲ್ಲ...

ಈ ದಿನ ಸಂಪಾದಕೀಯ | ಡಬಲ್ ಇಂಜಿನ್ ಸರ್ಕಾರದಲ್ಲೂ ಬಿಹಾರ ಬಸವಳಿದಿದೆ

2025ರ ವಿಧಾನಸಭಾ ಚುನಾವಣೆಗೆ ಬಿಹಾರ ಸಿದ್ಧವಾಗುತ್ತಿದೆ. ಪ್ರಧಾನಿ ಮೋದಿ ಅವರು ಬಿಹಾರದತ್ತ...

Download Eedina App Android / iOS

X