ರಾಜ್ಯ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಹುರಿಯಾಳುಗಳ ತಯಾರಿ ಮಾಡಿಕೊಂಡಿದ್ದಾಯಿತು. ಇನ್ನೊಂದೆಡೆ, ಚುನಾವಣೆ ನಡೆಸಲು ಅವಶ್ಯವಿರುವ ಸಿಬ್ಬಂದಿ, ಅಧಿಕಾರಿಗಳ ನಿಯುಕ್ತಿಯನ್ನು ಆಯೋಗ ಮಾಡಿ ಮುಗಿಸಿದೆ. ಈ ನಡುವೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳ ಐವರು ಕಾನ್‌ಸ್ಟೆಬಲ್‌ಗಳ ವರ್ಗಾವಣೆ ಅತ್ಯಂತ ಮಹತ್ವದ ಮತ್ತು ಅಪರೂಪದ ಬೆಳವಣಿಗೆ. ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಕೃಷ್ಣಪ್ಪ ಪರ ಪ್ರಚಾರದಲ್ಲಿ ತೊಡಗಿದ್ದರು ಎಂಬ ಆರೋಪ ಈ ವರ್ಗಾವಣೆಗೆ ಕಾರಣ. ಚುನಾವಣೆಗಳ ಸಮಯದಲ್ಲಿ ಸರ್ಕಾರಿ ನೌಕರ ಸಿಬ್ಬಂದಿ ಆಡಳಿತಾರೂಢ ಪಕ್ಷಗಳ ಶಾಸಕರ ಪರ ಮೃದು ಧೋರಣೆ ತಳೆಯುತ್ತದೆ ಎಂಬ ಭಾವನೆ ಎಲ್ಲೆಡೆ ಬೇರೂರಿದೆ. ಆದರೆ, ಈ ಪ್ರಕರಣ ಈ ಭಾವನೆಯನ್ನು ಹುಸಿಗೊಳಿಸಿ, ಪೊಲೀಸ್ ಅಧಿಕಾರಿಗಳ ಪ್ರಾಮಾಣಿಕತೆಯನ್ನು ಎತ್ತಿಹಿಡಿದಿದೆ. ವರ್ಗಾವಣೆ ಆದೇಶ ಹೊರಡಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಪರಶುರಾಮ ಅವರು, ‘ಆಡಳಿತಾತ್ಮಕ ಹಿತದೃಷ್ಟಿಯಿಂದ’ ವರ್ಗಾವಣೆ ಮಾಡಲಾಗುತ್ತಿದೆ ಎಂದು ಉಲ್ಲೇಖಿಸಿರುವುದು ಗಮನಾರ್ಹ.
ವರ್ಗಾವಣೆಗೊಂಡ ಐವರು ಕಾನ್‌ಸ್ಟೆಬಲ್‌ಗಳು, ಇಬ್ಬರು ಶಿಕ್ಷಣ ಇಲಾಖೆ ಸಿಬ್ಬಂದಿ ಹಾಗೂ ಹಿರಿಯೂರು ತಾಲೂಕು ಪಂಚಾಯ್ತಿಯ ಒಬ್ಬರು ಸಿಬ್ಬಂದಿ ವಿರುದ್ಧ ಕಾಂಗ್ರೆಸ್ ಪಕ್ಷ ಇದೇ ಏಪ್ರಿಲ್ 9ರಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಇದಾಗಿ ಕೇವಲ ನಾಲ್ಕೇ ದಿನದೊಳಗೆ, ಪೊಲೀಸ್ ಇಲಾಖೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಚುನಾವಣೆಯನ್ನು ಪಾರದರ್ಶಕವಾಗಿಸುವಲ್ಲಿ ಈ ಬೆಳವಣಿಗೆ ನೆರವಾಗಲಿದೆ.
ಈ ಲೇಖನ ಓದಿದ್ದೀರಾ?: ಈ ದಿನ ಸಂಪಾದಕೀಯ | ಗವಾಕ್ಷಿಯಲ್ಲಿ ಮರಳಿ ಬರಲಿದೆಯೇ ‘ಪೆಗಸಸ್’ ದೆವ್ವ?
ಅಸಲಿಗೆ, ಯಾವುದೇ ಸರ್ಕಾರಿ ಅಧಿಕಾರಿ ಅಥವಾ ಸಿಬ್ಬಂದಿ ರಾಜಕೀಯ ಪಕ್ಷಗಳ ಪರ ಪ್ರಚಾರ ನಡೆಸುವಂತಿಲ್ಲ. ಅದರಲ್ಲೂ, ಚುನಾವಣಾ ಕಾರ್ಯಕ್ಕೆ ನಿಯುಕ್ತಿಗೊಂಡ ಸರ್ಕಾರಿ ಇಲಾಖೆಗಳ ಸಿಬ್ಬಂದಿ ಅಥವಾ ಅಧಿಕಾರಿಗಳಂತೂ ಈ ವಿಷಯದಲ್ಲಿ ಇನ್ನಷ್ಟು ಕಟ್ಟುನಿಟ್ಟಾಗಿ ಇರಬೇಕಾಗುತ್ತದೆ. ಆದರೆ, ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಈ ಮಟ್ಟದ ಪ್ರಾಮಾಣಿಕತೆ ಅಧಿಕಾರಿ ವರ್ಗಗಳಿಂದ ಕಂಡುಬಂದಿಲ್ಲ ಎಂಬುದಕ್ಕೆ ಚುನಾವಣೆ ವೇಳೆ ಆಯೋಗಕ್ಕೆ ಬರುವ ದೂರುಗಳೇ ಸಾಕ್ಷಿ. 2018ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಇಂತಹ 163 ದೂರುಗಳು ದಾಖಲಾಗಿದ್ದವು. ಈ ಪೈಕಿ ಬಹುತೇಕ ದೂರುಗಳಲ್ಲಿ, ಸರ್ಕಾರಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿಲ್ಲ ಎಂಬ ಆರೋಪವಿತ್ತು. ಆದರೆ, ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಕಾರಣ 155 ದೂರುಗಳನ್ನು ಕೈಬಿಡಲಾಯಿತು. ಉಳಿದ ಎಂಟು ದೂರುಗಳು ಏನು ಮತ್ತು ಯಾವ ಕ್ರಮ ಕೈಗೊಳ್ಳಲಾಯಿತು ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ಇನ್ನೊಂದೆಡೆ, ಚುನಾವಣೆ ವೇಳೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿಲ್ಲ ಎಂಬ ದೂರು ಸಲ್ಲಿಕೆಯಾದೊಡನೆ ಯಾವುದೇ ಸರ್ಕಾರಿ ಅಧಿಕಾರಿಯ ಮೇಲೆ ಕ್ರಮಕ್ಕೆ ಶಿಫಾರಸು ಮಾಡಲು ಆಗುವುದಿಲ್ಲ ಎಂಬುದು ಚುನಾವಣಾ ಆಯೋಗದ ಸ್ಪಷ್ಟನೆ. ಈ ಕುರಿತ ಚುನಾವಣಾ ನಿಯಮ ಕೂಡ ಅದಕ್ಕೆ ಪೂರಕವಾಗಿದೆ. ಆರೋಪ ಕೇಳಿಬಂದ ಅಧಿಕಾರಿ ಅದೇ ಸ್ಥಳದಲ್ಲಿ ಮೂರಕ್ಕಿಂತ ಹೆಚ್ಚು ವರ್ಷ ಕಾರ್ಯನಿರ್ವಹಿಸಿದ್ದರೆ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ, ಸೂಕ್ತ ಸಾಕ್ಷ್ಯಾಧಾರಗಳ ವಿನಾ ದೂರು ನಿಲ್ಲುವುದೇ ಇಲ್ಲ. ಹೀಗೆ, ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಚುನಾವಣಾ ಪಕ್ಷಪಾತಗಳ ಕುರಿತ ದೂರುಗಳ ಬಗ್ಗೆ ನೀತಿ-ನಿಯಮಗಳು ನಾನಾ ಕತೆ ಹೇಳುವ ಸಂದರ್ಭದಲ್ಲೇ, ಆಯೋಗದ ಶಿಫಾರಸಿಗೆ ಕಾಯದೆ ಕ್ರಮ ಜಾರಿಯಾದ ಹಿರಿಯೂರು ಪ್ರಕರಣ ಮಾದರಿ ಎನಿಸಿಕೊಂಡಿದೆ.