ಈ ದಿನ ಸಂಪಾದಕೀಯ | ನರೋಡಾ ಗಾಮ್ ತೀರ್ಪು- ನಿಜಕ್ಕೂ ಕುರುಡಾದಳು ನ್ಯಾಯದೇವತೆ!

Date:

ನರೋಡಾ ಗಾಮ್‌ ಹತ್ಯಾಕಾಂಡ ಪ್ರಕರಣದ ಆರೋಪಿಗಳಾದ ಬಿಜೆಪಿಯ ಮಾಜಿ ಮಂತ್ರಿ ಮಾಯಾ ಕೊಡ್ನಾನಿ, ವಿಶ್ವಹಿಂದೂ ಪರಿಷತ್ ನಾಯಕ ಜೈದೀಪ್ ಪಟೇಲ್, ಭಜರಂಗದಳದ ನಾಯಕ ಬಾಬೂ ಭಜರಂಗಿಯನ್ನೂ ಅಹ್ಮದಾಬಾದಿನ ನ್ಯಾಯಾಲಯವೊಂದು ದೋಷಮುಕ್ತರೆಂದು ಸಾರಿ ಬಿಡುಗಡೆ ಮಾಡಿದೆ

2002ರ ಫೆಬ್ರವರಿ 27ರಂದು ಸಾಬರಮತಿ ಎಕ್ಸ್ ಪ್ರೆಸ್ ರೈಲುಗಾಡಿಗೆ ಗೋಧ್ರಾದಲ್ಲಿ ಬೆಂಕಿ ಬಿದ್ದು 69 ಮಂದಿ ಕರಸೇವಕರು ಮೃತಪಟ್ಟಿದ್ದರು. ತರುವಾಯ ಕೋಮುಗಲಭೆಗಳು ಭುಗಿಲೆದ್ದು ನರಮೇಧ ನಡೆದಿದ್ದ ಗುಜರಾತಿನ ಒಂಭತ್ತು ಸ್ಥಳಗಳ ಪೈಕಿ ನರೋಡಾ ಗಾಮ್ ಕೂಡ ಒಂದು. ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಸುಮಾರು ಒಂದು ಸಾವಿರ ಮಂದಿ ಈ ಗಲಭೆಗಳಿಗೆ ಬಲಿಯಾಗಿದ್ದರು. ಈ ಪೈಕಿ ಮುಸಲ್ಮಾನರು 800 ಮಂದಿ.

ವಿಶ್ವಹಿಂದೂ ಪರಿಷತ್ತು ಗುಜರಾತ್ ಬಂದ್ ಗೆ ಕರೆ ನೀಡಿತ್ತು. ನಂತರ ಇಡೀ ಗುಜರಾತಿನಲ್ಲಿ ಹಿಂದುತ್ವವಾದಿ ಗುಂಪುಗಳು ಮುಸ್ಲಿಮ್ ಬಹುಳ ವಸತಿಗಳ ಮೇಲೆ ದಾಳಿ ನಡೆಸಿದ್ದವು. ಮಕ್ಕಳು ವೃದ್ಧರನ್ನು ಕೊಲ್ಲಲಾಯಿತು. ಮಹಿಳೆಯರ ಮೇಲೆ ಬಲಾತ್ಕಾರ ನಡೆಸಲಾಯಿತು.

ಈ ಪ್ರಕರಣಗಳ ತನಿಖೆಗೆಂದು ವಿಶೇಷ ತನಿಖಾ ತಂಡಗಳನ್ನು ನೇಮಿಸಿದ್ದ ಸುಪ್ರೀಮ್ ಕೋರ್ಟು, ನಿರ್ದಿಷ್ಟ ಕೋರ್ಟುಗಳನ್ನು ಗೊತ್ತು ಮಾಡಿ ಪ್ರತಿನಿತ್ಯ ವಿಚಾರಣೆಗೆ ಆದೇಶ ನೀಡಿತ್ತು. ಆದರೂ ನರೋಡಾ ಗಾಮ್ ಪ್ರಕರಣದ ವಿಚಾರಣೆ ಮುಗಿದು ತೀರ್ಪು ಹೊರಬೀಳಲು 13 ವರ್ಷಗಳೂ, ಘಟನೆ ನಡೆದ ನಂತರ 21 ವರ್ಷಗಳೂ ಹಿಡಿದಿವೆ.

28 ಫೆಬ್ರವರಿ 2002. ಗುಜರಾತಿನ ಅಹ್ಮದಾಬಾದಿನ ನರೋಡಾ ಗಾಮ್ ಪ್ರದೇಶದಲ್ಲಿ ಕೋಮು ಗಲಭೆಗಳು ಭುಗಿಲೆದ್ದಿದ್ದವು. ಮುಸಲ್ಮಾನರ ಮೊಹಲ್ಲಾಕ್ಕೆ ಬೆಂಕಿ ಇಟ್ಟು 11 ಮಂದಿಯನ್ನು ಕೊಲ್ಲಲಾಗಿತ್ತು.ಪೀಡಿತರಿಗೆ ನೆರವಾಗಲು ಪೊಲೀಸರು ಸ್ಥಳದಲ್ಲಿರಲಿಲ್ಲ, ಸಂಜೆಯ ಹೊತ್ತಿಗೆ ತಲುಪಿದರು ಎಂದು ನ್ಯಾಯಮೂರ್ತಿ ನಾನಾವತೀ ಆಯೋಗದ ವರದಿ ಹೇಳಿತ್ತು. ನೆರೆಹೊರೆಯ ನರೋಡ ಪಾಟ್ಯದಲ್ಲಿ ಹಿಂದುತ್ವವಾದಿ ಗುಂಪು 97 ಮಂದಿ ಮುಸಲ್ಮಾನರ ಹತ್ಯೆ ಮಾಡಿತ್ತು. ನರೋಡಾ ಗಾಮ್ ಪ್ರಕರಣದಲ್ಲಿ 86 ಮಂದಿಯನ್ನು ದೋಷಿಗಳೆಂದು ಪರಿಗಣಿಸಿ ಮೊಕದ್ದಮೆ ಹೂಡಲಾಗಿತ್ತು. ಈ ಎಲ್ಲ ಆರೋಪಿಗಳನ್ನು ಅಹ್ಮದಾಬಾದಿನ ನ್ಯಾಯಾಲಯವೊಂದು ಸಾಕ್ಷ್ಯ ಪುರಾವೆಗಳ ಅಭಾವದ ಕಾರಣ ನೀಡಿ ಬಿಡುಗಡೆ ಮಾಡಿತು. ಬಿಜೆಪಿಯ ಮಾಜಿ ಮಂತ್ರಿ ಮಾಯಾ ಕೊಡ್ನಾನಿ, ವಿಶ್ವಹಿಂದು ಪರಿಷತ್ ನಾಯಕ ಜೈದೀಪ್ ಪಟೇಲ್, ಭಜರಂಗದಳದ ನಾಯಕ ಬಾಬೂ ಭಜರಂಗಿಯನ್ನೂ ಈ ಪ್ರಕರಣದಲ್ಲಿ ದೋಷಮುಕ್ತರೆಂದು ಸಾರಿ ಬಿಡುಗಡೆ ಮಾಡಲಾಗಿದೆ.

ನರೋಡಾ ಗಾಮ್ ಹತ್ಯೆಗಳ ವಿಚಾರಣೆ ಶುರು ಆದದ್ದು 2009ರಲ್ಲಿ ತೀರ್ಪು ಹೊರಬೀಳಲು 13 ವರ್ಷಗಳು ಹಿಡಿದಿವೆ. ಈ ಅವಧಿಯಲ್ಲಿ ಹಲವು ವಕೀಲರು ನ್ಯಾಯಾಧೀಶರು ಬದಲಾದರು. ಹಲ್ಲೆ ಹಿಂಸೆ ಬಲಾತ್ಕಾರಕ್ಕೆ ಬಲಿಯಾದವರ ಕುಟುಂಬಗಳು ಈ ತೀರ್ಪಿನ ಕುರಿತು ತೀವ್ರ ನಿರಾಶೆ ವ್ಯಕ್ತಪಡಿಸಿವೆ. ವಿಳಂಬ ನ್ಯಾಯವು, ನ್ಯಾಯ ನಿರಾಕರಣೆಗೆ ಸಮ ಎಂಬ ಗಾದೆ ಮಾತು ಇಲ್ಲಿ ಅಕ್ಷರಶಃ ನಿಜವಾಗಿದೆ.

ಬೇಕೆಂದೇ ಕಾಲಹರಣ ಮಾಡಿ ಎಳೆದು ವಿಚಾರಣೆಯನ್ನು ಲಂಬಿಸಲಾಗಿದೆ. 2024ರ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜಕೀಯ ಒತ್ತಡದಲ್ಲಿ ಈ ತೀರ್ಪು ಹೊರಬಿದ್ದಿದೆ. ಒಂದೇ ಒಂದು ಸಾಕ್ಷ್ಯ ಕೂಡ ತಿರುಗಿಬಿದ್ದಿಲ್ಲ. ಕೋಮುಗಲಭೆ ಮಾಡಿ, ಬೇಕಾದ್ದು ಮಾಡಿ ಸರ್ಕಾರ ನಿಮ್ಮೊಂದಿಗಿದೆ ಎಂಬ ಸಂದೇಶವನ್ನು ಈ ತೀರ್ಪಿನಿಂದ ರವಾನಿಸಲಾಗಿದೆ ಎಂಬ ಆರೋಪಗಳಿವೆ.

ಗುಜರಾತ್ ಕೋಮುಗಲಭೆಗಳ ಕುರಿತು ವಿವಾದಗ್ರಸ್ತ ತೀರ್ಪು ಹೊರಬೀಳುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಗಸ್ಟ್ ತಿಂಗಳಲ್ಲಿ ಇಂತಹುದೇ ತೀರ್ಪು ಪ್ರಕಟವಾಗಿತ್ತು. ಬಿಲ್ಕಿಸ್ ಬಾನು ಮತ್ತು ಆಕೆಯ ಕುಟುಂಬದ ಸದಸ್ಯರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದ 11 ಆಪರಾಧಿಗಳನ್ನು ಶಿಕ್ಷೆಯ ಅವಧಿ ಪೂರ್ತಿ ಆಗುವ ಮೊದಲೇ ಬಿಡುಗಡೆ ಮಾಡಲಾಯಿತು. ಈ ಬಿಡುಗಡೆಯನ್ನು ಪ್ರಶ್ನಿಸಿರುವ ಅರ್ಜಿಯೂ ಸುಪ್ರೀಮ್ ಕೋರ್ಟ್ ಮುಂದೆ ವಿಚಾರಣೆಗಿದೆ. ಬಿಲ್ಕಿಸ್ ಪ್ರಕರಣದ ಈ ಎಲ್ಲ 11 ಆರೋಪಿಗಳು ಸಂಸ್ಕಾರವಂತ ಬ್ರಾಹ್ಮಣರಾಗಿದ್ದು, ಅತ್ಯಾಚಾರ ಮಾಡಿರುವುದು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದ್ದರು. ಆರೋಪಿಗಳ ಶಿಕ್ಷೆಯನ್ನು ತಗ್ಗಿಸುವಂತೆ ಶಿಫಾರಸು ಮಾಡಿದ್ದ 11 ಮಂದಿ ಸಮಿತಿಯ ಸದಸ್ಯರಲ್ಲೊಬ್ಬರು ಈ ಶಾಸಕರು.

ಬಾಬು ಬಜರಂಗಿ ತನ್ನ ತಪ್ಪನ್ನು ಒಪ್ಪಿಕೊಂಡಿರುವ ವಿಡಿಯೋ ಸಾಕ್ಷ್ಯವಿದ್ದರೂ ನ್ಯಾಯಾಲಯ, ಆತನನ್ನು ಯಾಕೆ ಆರೋಪಮುಕ್ತನೆಂದು ಸಾರಿದೆ. ತೆಹೆಲ್ಕಾ ನಿಯತಕಾಲಿಕ ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ ಗುಪ್ತ ಕ್ಯಾಮೆರಾ ಮುಂದೆ ಆತ ಹೇಳಿದ್ದ ಮಾತುಗಳು ಹೀಗಿವೆ- “ಮಜಾ ಬರ್ತದಲ್ವಾ ಸಾಹೇಬರೇ, ಅವರನ್ನು ಕೊಂದ ನಂತರ ವಾಪಸು ಬಂದೆ… ಗೖಹಮಂತ್ರಿಗೆ ದೂರವಾಣಿ ಕರೆ ಮಾಡಿ ಮಲಗಿಬಿಟ್ಟೆ… ರಾಣಾ ಪ್ರತಾಪನಂತೆ ಅನಿಸಿತು… ಮಹಾರಾಣಾ ಪ್ರತಾಪ ಮಾಡಿದ್ದಂತಹುದನ್ನೇ ಮಾಡಿದ್ದೆ… ಆತನ ಕುರಿತು ಕತೆಗಳನ್ನು ಕೇಳಿದ್ದೆ, ಆದರೆ ಅಂದು ಆತ ಮಾಡಿದ್ದನ್ನೇ ನಾನೂ ಮಾಡಿದ್ದೆ… ಆ ದಿನ, ಜರುಗಿದ್ದು ಪಾಕಿಸ್ತಾನ ಮತ್ತು ಭಾರತದ ನಡುವೆ ಅನಿಸಿತ್ತು… ಎಲ್ಲಿ ನೋಡಿದರೂ ಹೆಣಗಳು… ನೋಡಲೇಬೇಕಿದ್ದ ದೖಶ್ಯ ಅದು”.

ಮಾಜಿ ಮಂತ್ರಿ ಮಾಯಾ ಕೊಡ್ನಾನಿ ಅವರಿಗೆ ನರೋಡ ಪಾಟ್ಯ ಪ್ರಕರಣದಲ್ಲಿ 28 ವರ್ಷಗಳ ಸಜೆಯಾಗಿತ್ತು. ಆದರೆ 2018ರಲ್ಲಿ ಅವರು ಈ ಆರೋಪದಿಂದ ಮುಕ್ತರಾದರು. ಆಗ ಮಾಯಾ ಪರವಾಗಿ ಸಾಕ್ಷ್ಯ ನುಡಿಯಲು ಖುದ್ದು ಗೃಹಮಂತ್ರಿ ಅಮಿತ್ ಶಾ ಅವರೇ ನ್ಯಾಯಾಲಯಕ್ಕೆ ಬಂದಿದ್ದರು. ಅಕ್ಕಪಕ್ಕದಲ್ಲಿರುವ ನರೋಡಾ ಗಾಮ್ ಮತ್ತು ನರೋಡ ಪಾಟ್ಯ ಎರಡೂ ಕೋಮುಗಲಭೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಕೊಡ್ನಾನಿ ಅವರಿಗೆ ಪಾಟ್ಯ ಪ್ರಕರಣದಲ್ಲಿ 28 ವರ್ಷಗಳ ಸಜೆಯಾಗಿತ್ತು. ಅನಾರೋಗ್ಯದ ಕಾರಣಗಳನ್ನು ನೀಡಿ ಜಾಮೀನಿನ ಮೇಲೆ ಹೊರಗಿದ್ದರು.

ಇದನ್ನು ಓದಿ ಬಸವಣ್ಣ, ಕುವೆಂಪು ಅವರ ನಾಡಿಗೆ ಮೋದಿಯ ಆಶೀರ್ವಾದ ಅಗತ್ಯವಿಲ್ಲ: ಪ್ರಿಯಾಂಕಾ ಗಾಂಧಿ

ಗಲಭೆಗಳು ನಡೆದಾಗ ಆಕೆ ಬಿಜೆಪಿ ನಾಯಕಿ. ಚುನಾವಣೆಯಲ್ಲಿ 1.80 ಲಕ್ಷ ಮತಗಳ ಅಂತರದಿಂದ ವಿಧಾನಸಭೆಗೆ ಆಯ್ಕೆಯಾದರು. ಆನಂತರ ಕೋಮುಗಲಭೆ ಆರೋಪಗಳಿದ್ದರೂ ಮೋದಿಯವರು ಆಕೆಯನ್ನು ತಮ್ಮ ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, 2007ರಲ್ಲಿ ಕ್ಯಾಬಿನೆಟ್ ದರ್ಜೆಗೂ ಬಡ್ತಿ ನೀಡುತ್ತಾರೆ.

ನರೋಡಾ ಗಾಮ್ ಆಪಾದಿತರನ್ನು ದೋಷಮುಕ್ತರೆಂದು ಸಾರಿರುವ ಈ ತೀರ್ಪನ್ನು ಗುಜರಾತ್ ಹೈಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ವಿಶೇಷ ತನಿಖಾ ತಂಡ ಸಾರಿದೆ. ವಿಶೇಷ ನ್ಯಾಯಾಧೀಶೆ ಶುಭದಾ ಬಕ್ಸಿ ನೀಡಿದ ತೀರ್ಪನ್ನು ನ್ಯಾಯಾಲಯದ ಹೊರಗೆ ಜೈ ಶ್ರೀರಾಮ್ ಮತ್ತು ಭಾರತ್ ಮಾತಾ ಕೀ ಜೈ ಘೋಷಣೆಗಳನ್ನು ಕೂಗಿ ಸ್ವಾಗತಿಸಲಾಗಿದೆ. ನ್ಯಾಯದೇವತೆಯ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆ. ಆದರೂ ಆಕೆ ಸತ್ಯವನ್ನು ಕಾಣಬಲ್ಲಳು ಎಂಬ ಮಾತು ಹುಸಿಯಾಗತೊಡಗಿದೆಯೇ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಲಡಾಖಿನ ಹೋರಾಟವೂ ಮತ್ತು ಮೋದಿಯ ಮೊಂಡಾಟವೂ

ಆರ್ಟಿಕಲ್‌ 370 ತೆರವುಗೊಳಿಸಿದ ಮೋದಿಯವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾರು ಬೇಕಾದರೂ...

ಈ ದಿನ ಸಂಪಾದಕೀಯ | ಸರ್ವಾಧಿಕಾರದತ್ತ ದೇಶ ದಾಪುಗಾಲು ಹಾಕುತ್ತಿಲ್ಲವೇ? ಅವರಿಗಾದದ್ದು ನಮಗಾಗುವುದಿಲ್ಲವೇ?

ಹಿಟ್ಲರ್ ಮತ್ತು ಪುಟಿನ್ ಮಾಡಿದಂತೆ, ಮೋದಿ ಅವರು ದೇಶದಲ್ಲಿ ವಿರೋಧ ಪಕ್ಷಗಳಿಲ್ಲದಂತೆ,...

ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್

ಮನಮೋಹನ್ ಸಿಂಗ್ ಎಂದೂ ಅಧಿಕಾರ ಚಲಾಯಿಸಲಿಲ್ಲ, ಹಣ ಮಾಡಲಿಲ್ಲ, ಪ್ರಚಾರ ಬಯಸಲಿಲ್ಲ,...