ಈ ದಿನ ಸಂಪಾದಕೀಯ | ಗ್ರಾಮ ಪಂಚಾಯ್ತಿಗಳ ನೈಜ ಶಕ್ತಿ ಪ್ರದರ್ಶನಕ್ಕೆ ಇದು ಸಕಾಲ

Date:

ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಪ್ರಚಾರ ಕಳೆಗಟ್ಟುತ್ತಿದೆ. ಪ್ರತೀ ಚುನಾವಣೆ ಸಂದರ್ಭದಲ್ಲಿ ಆದಂತೆ ಈ ಬಾರಿಯೂ ಶಾಸಕರಿಗೆ ಗ್ರಾಮಸ್ಥರು ಘೇರಾವ್ ಹಾಕಿದ ಸುದ್ದಿಗಳ ಸರಣಿ ಶುರುವಾಗಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು ಏನು ಮಾಡಬಹುದು?

ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಸದಿ ವರ ಎಂಬ ಗ್ರಾಮ ಸದ್ಯ ಸುದ್ದಿಯಲ್ಲಿದೆ. ಕೇವಲ 15 ದಿನಗಳಲ್ಲಿ ‘ಪ್ಲಾಸ್ಟಿಕ್ ಮುಕ್ತ ಗ್ರಾಮ’ ಎನಿಸಿಕೊಂಡಿದ್ದು ಇದಕ್ಕೆ ಕಾರಣ. ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಿಕೊಟ್ಟರೆ ಚಿನ್ನದ ನಾಣ್ಯಗಳನ್ನು ಕೊಡುವುದಾಗಿ ಗ್ರಾಮ ಪಂಚಾಯ್ತಿಯಿಂದ ಘೋಷಣೆ ಹೊರಬಿದ್ದ ನಂತರ ಈ ಚಮತ್ಕಾರ ನಡೆದಿದೆ. ಇಂಥದ್ದೊಂದು ಕ್ರಾಂತಿ ಸಾಧ್ಯವಾಗಿಸಿದ್ದು ಸರಪಂಚ್ ಫಾರೂಕ್ ಅಹ್ಮದ್ ಗನೈ. ಇನ್ನೊಂದೆಡೆ, ಮಹಾರಾಷ್ಟ್ರದ ಹಿವ್ರೆ ಬಜಾರ್ ಎಂಬ ಹಳ್ಳಿ ಕಳೆದ 20 ವರ್ಷಗಳಿಂದ ನಿರಂತರವಾಗಿ ಸುದ್ದಿಯಲ್ಲಿದೆ. ಇದಕ್ಕೆ ಕಾರಣ, ದೇಶದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಮಂತ ರೈತರಿರುವುದು. ಇದನ್ನು ಆಗುಮಾಡಿದ್ದು ಅಲ್ಲಿನ ಸರಪಂಚ್ ಪೋಪಟ್ ರಾವ್ ಪವಾರ್. ಹೆಣ್ಣುಮಕ್ಕಳು ಹುಟ್ಟಿದರೆ ಇಡೀ ಊರಿಗೆ ಸಿಹಿ ಹಂಚುವ ಕಾರ್ಯಕ್ರಮ ರೂಪಿಸಿದ ಹರ್ಯಾಣದ ಚಾಪ್ಪರ್ ಗ್ರಾಮ ಪಂಚಾಯ್ತಿ ಕೂಡ ಹಿಂದೊಮ್ಮೆ ಸುದ್ದಿಯಲ್ಲಿತ್ತು. ಇದರ ಹಿಂದೆ ಇದ್ದುದು ಸರಪಂಚ್ ನೀಲಮ್ ಕೌರ್.

ಆದಾಯಕ್ಕಾಗಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡ ಗ್ರಾಮ ಪಂಚಾಯ್ತಿಯೊಂದು ಪ್ಲಾಸ್ಟಿಕ್ ವಿಲೇವಾರಿಗೆ ಆಕರ್ಷಕ ಯೋಜನೆ ರೂಪಿಸುತ್ತದೆ. ಬರದಿಂದ ಕಂಗೆಟ್ಟ ಪ್ರದೇಶದ ಗ್ರಾಮ ಪಂಚಾಯ್ತಿಯೊಂದು ಸತತ ಪ್ರಯತ್ನದಿಂದಾಗಿ ರೈತರ ಬದುಕನ್ನು ಹಸನಾಗಿಸುತ್ತದೆ. ಲಿಂಗಾನುಪಾತದಲ್ಲಿ ಆಘಾತಕಾರಿ ಅಂಕಿ-ಅಂಶ ಹೊಂದಿದ ಗ್ರಾಮ ಪಂಚಾಯ್ತಿಯೊಂದು ಹೆಣ್ಣು ಭ್ರೂಣ ಹತ್ಯೆ ವಿರುದ್ಧ ವಿನೂತನ ಕಾರ್ಯಕ್ರಮ ರೂಪಿಸುತ್ತದೆ. ಹತ್ತಿರದ ಉದಾಹರಣೆಗಳನ್ನೇ ಹೇಳುವುದಾದರೆ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಗ್ರಾಮ ಪಂಚಾಯ್ತಿಗಳು ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಸ್ವಾವಲಂಬಿ ಆಗುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿವೆ. ಬಳ್ಳಾರಿ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಕೆಲವು ಗ್ರಾಮ ಪಂಚಾಯ್ತಿಗಳು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಂಡು ಊರನ್ನು ಚಂದ ಮಾಡಿಕೊಂಡ ನಿದರ್ಶನಗಳಿವೆ. ಹೀಗೆ, ಗ್ರಾಮ ಪಂಚಾಯ್ತಿಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮನಸ್ಸು ಮಾಡಿದರೆ ಸ್ವಾವಲಂಬನೆ ಸಾಧಿಸುವುದು ದೊಡ್ಡ ವಿಷಯವೇನಲ್ಲ.

ಈ ಲೇಖನ ಓದಿದ್ದೀರಾ?: ಈ ದಿನ ಸಂಪಾದಕೀಯ | ಬಡವರ ಬೆವರಿಳಿಸುತ್ತಿರುವ ಬೆಲೆ ಏರಿಕೆ ಚುನಾವಣಾ ವಿಷಯವಲ್ಲವೇ?

ಕರ್ನಾಟಕ ಸರ್ಕಾರವು ಕಳೆದ ಡಿಸೆಂಬರ್‌ನಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಗೌರವಧನ ಹೆಚ್ಚಿಸಿತ್ತು. ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡೇ ಗೌರವಧನ ಹೆಚ್ಚಿಸಲಾಗಿದೆ ಎಂಬ ಆರೋಪ ಕೂಡ ಉಂಟು. ಅದೇನೇ ಇರಲಿ, ಈ ಬೆಳವಣಿಗೆಯು ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳ ಹುಮ್ಮಸ್ಸು ಹೆಚ್ಚಿಸುವಂತಾಗಬೇಕು. ತಾವು ದೊಡ್ಡ ಮಟ್ಟದ ರಾಜಕಾರಣಿಗಳಂತೆ ಅಧಿಕಾರಕ್ಕೆ ಅಂಟಿಕೊಂಡವರಲ್ಲ, ಭ್ರಷ್ಟಾಚಾರಕ್ಕೆ ಮುಂದಾಗುವವರಲ್ಲ ಎಂಬುದನ್ನು ಸಾಬೀತು ಮಾಡಿ ತೋರಿಸಬೇಕು. ತಾವು ಪ್ರತಿನಿಧಿಸುವ ಜನರಿಗೆ ಮೂಲಸೌಲಭ್ಯಗಳನ್ನು ಒದಗಿಸುವ ಮಹತ್ತರ ಹೊಣೆ ತಮ್ಮ ಹೆಗಲ ಮೇಲಿದೆ, ಅದೇ ತಮ್ಮೆದುರಿನ ಮುಖ್ಯ ಕೆಲಸ ಎಂಬ ಅರಿವು ಸಾಧ್ಯವಾಗಬೇಕು.

ನಾಲ್ಕು ದಿನದ ಹಿಂದೆ (ಏ.4), ಬೆಳಗಾವಿಯ ಹಳೇ ದಿಗ್ಗೇವಾಡಿ ಗ್ರಾಮಕ್ಕೆ ತೆರಳಿದ ಶಾಸಕ ಡಿ ಎಂ ಐಹೊಳೆ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ವಾಪಸು ಕಳಿಸಿದ ಘಟನೆ ನಡೆದಿದೆ. ಗೆದ್ದ ಮೇಲೆ ತಮ್ಮೂರಿನತ್ತ ಇಣುಕದವರು ಚುನಾವಣೆ ಘೋಷಣೆಯಾದ ನಂತರವಷ್ಟೇ ಬಂದಿದ್ದಾರೆ ಎಂಬ ಸಿಟ್ಟು ಇದಕ್ಕೆ ಕಾರಣ. ಚುನಾವಣಾ ಪ್ರಚಾರ ಕಳೆಗಟ್ಟುತ್ತಿರುವ ಈ ಹೊತ್ತಿನಲ್ಲಿ ಸಹಜವಾಗಿಯೇ ಇಂತಹ ನೂರಾರು ಘಟನೆಗಳು ನಡೆಯಲಿವೆ. ಅಂತಹ ಸಂದರ್ಭಗಳಲ್ಲಿ ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು ತಮ್ಮ ಊರುಗಳ ಜನರೊಂದಿಗೆ ನಿಂತು ಒಗ್ಗಟ್ಟು ಪ್ರದರ್ಶಿಸುವುದು ಅತ್ಯಂತ ಅಗತ್ಯ. ಆಗ ಮಾತ್ರವೇ ಜನತೆಗೆ ತಾವು ಯಾರಿಗೆ ಮತ ಹಾಕಬೇಕು ಎಂಬ ಸ್ಪಷ್ಟತೆ ಮೂಡೀತು. ಜೊತೆಗೆ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಸ್ವಾವಲಂಬನೆ ಸಾಧಿಸಿದರೆ, ಯಾವ ಶಾಸಕರನ್ನೂ, ಮಂತ್ರಿಯನ್ನೂ, ಮುಖ್ಯಮಂತ್ರಿಯನ್ನೂ ಬೇಡುವ ಪರಿಸ್ಥಿತಿ ಬರುವುದಿಲ್ಲ ಎಂಬ ವಾಸ್ತವ ಅರಿವಾದೀತು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಬ್ರ್ಯಾಂಡ್ ಬೆಂಗಳೂರಿನಲ್ಲಿ ಬಡವರ ಪ್ರಾಣಕ್ಕೆ ಗ್ಯಾರಂಟಿಯಿಲ್ಲ

ಸರ್ಕಾರದ ಕೋಟಿ ಕೋಟಿ ಅನುದಾನ ನೀಡಿ ಬೆಂಗಳೂರು ಹಬ್ಬಗಳಂಥ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ...

ಈ ದಿನ ಸಂಪಾದಕೀಯ | ಕೇಂದ್ರದ ಏಜೆಂಟರಾಗಿರುವ ರಾಜ್ಯಪಾಲರುಗಳಿಗೆ ಸುಪ್ರೀಮ್ ಚಾವಟಿ!

ಇಂದಿರಾಗಾಂಧೀ ಕಾಲದಲ್ಲೂ ಹೀಗೆಯೇ ರಾಜ್ಯಪಾಲರನ್ನು ಬಳಸಿಕೊಳ್ಳಲಾಗುತ್ತಿತ್ತು ಎಂಬ ವಾದ ಮುಂದೆ ಮಾಡಬಹುದು....

ಈ ದಿನ ಸಂಪಾದಕೀಯ | ಸರ್ಕಾರದ ಆರು ತಿಂಗಳ ‘ಅನನ್ಯ ಸಾಧನೆ’ ಮತ್ತು ವಿರೋಧ ಪಕ್ಷಗಳ ‘ಜವಾಬ್ದಾರಿ’

ಸರ್ಕಾರ ಆರು ತಿಂಗಳು ಮುಗಿಸಿ, ತನ್ನದು ಅನನ್ಯ ಸಾಧನೆ ಎಂದು ಬಣ್ಣಿಸಿಕೊಳ್ಳುತ್ತಿದೆ....

ಈ ದಿನ ಸಂಪಾದಕೀಯ | ಪ್ರಬಲ ಜಾತಿಗಳ ಜೋಡೆತ್ತುಗಳು, ಬಿಜೆಪಿಗರಿಗೇ ಬೇಡವಾಗಿದ್ದೇಕೆ?

ಅಪ್ಪನ ಆಸ್ಥಾನವನ್ನೇ ಆಕ್ರಮಿಸಿಕೊಂಡು ಅಟ್ಟಹಾಸ ಮೆರೆದ ವಿಜಯೇಂದ್ರ, ತಮ್ಮ ರಾಜಕಾರಣದುದ್ದಕ್ಕೂ ಹೊಂದಾಣಿಕೆಯಲ್ಲಿಯೇ...