- ‘ಪದಗ್ರಹಣ ಕಾರ್ಯಕ್ರಮ ಸಿಇಟಿ ಮುಗಿದ ನಂತರ ಮಾಡಬಹುದಿತ್ತು‘
- ಮಲ್ಯ ರಸ್ತೆ ಬಳಿ ದಟ್ಟಣೆ; ರೋಗಿಗಳಿಗೂ ಟ್ರಾಫಿಕ್ ಕಂಟಕ
ಹಲವು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಬರೆಯು ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪದಗ್ರಹಣ ಕಾರ್ಯಕ್ರಮ ಒಂದೇ ದಿನ ನಿಯೋಜಿಸಿದ್ದ ಕಾರಣ ಪರೀಕ್ಷಾರ್ಥಿಗಳು ಸಂಚಾರ ದಟ್ಟಣೆಯ ಆತಂಕಕ್ಕೆ ಒಳಗಾಗಿದ್ದರು.
ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ಹಿನ್ನೆಲೆ, ಕಂಠೀರವ ಕ್ರೀಡಾಂಗಣದ ವ್ಯಾಪ್ತಿಯಲ್ಲಿರುವ ಕಾಲೇಜುಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮುಂಜಾನೆ ಎಂಟಕ್ಕೆ ಹಾಜರಿರಲು ಸೂಚಿಸಲಾಗಿತ್ತು.
ಆದರೆ, ಸಂಚಾರ ದಟ್ಟಣೆ ಮಧ್ಯೆ ಪರೀಕ್ಷಾ ಕೇಂದ್ರ ತಲುಪುವುದುದಾದರು ಹೇಗೆ ಎಂದು ಸಿಇಟಿ ಅಭ್ಯರ್ಥಿಗಳು ಆತಂಕ ವ್ಯಕ್ತಪಡಿಸಿದ್ದರು. ಪರೀಕ್ಷೆ ದಿನವೇ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಸಿದ ಕಾಂಗ್ರೆಸ್‌ನ ನಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಾಗ್ಯುದ್ಧಕ್ಕೆ ಕಾರಣವಾಗಿದೆ.
ಸಂಚಾರ ದಟ್ಟನೆಯಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಪರೀಕ್ಷಾ ಕೇಂದ್ರಗಳ ಬಳಿ ಪರೀಕ್ಷಾ ಆರಂಭವಾಗುವುದಕ್ಕೂ ಐದಾರು ಗಂಟೆಗಳ ಮುನ್ನವೇ ಹಾಜರಾಗಿದ್ದರು. ಪರೀಕ್ಷಾ ಕೇಂದ್ರಗಳ ಬಳಿ ಬಿಗಿ ಬಂದೋಬಸ್ತ್ ಇತ್ತು. ವಿದ್ಯಾರ್ಥಿಗಳು ತಮ್ಮ ದಾಖಲೆಗಳನ್ನು ತೋರಿಸಿದ ನಂತರ ಅವರನ್ನು ಕೇಂದ್ರದ ಒಳಗೆ ಬಿಡಲಾಗುತ್ತಿತ್ತು.
ಕಂಠೀರವ ಕ್ರೀಡಾಂಗಣದ ಪಕ್ಕದಲ್ಲಿರುವ ವಿಠಲ್ ಮಲ್ಯ ರಸ್ತೆಯಲ್ಲಿ ಜನಜಂಗುಳಿ ಜೊತೆಗೆ ದಟ್ಟಣೆ ಹೆಚ್ಚಾಗಿದ್ದು, ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಭಾರಿ ತೊಂದರೆಯಾಗಿದೆ. ಅದಲ್ಲದೆ ರಸ್ತೆತಡೆಯಿಂದಾಗಿ ಮಲ್ಯ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೂ ತೊಂದರೆಯಾಗುತ್ತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ವಕೀಲ ವಿನಯ್ ಕೂರಗಾಯಲ ಶ್ರೀನಿವಾಸ ಅವರು ಟ್ವೀಟ್ ಮಾಡಿದ್ದು, ಸಿಇಟಿ ಸಮಯದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ತಪ್ಪು. ಇದನ್ನು ಮಧ್ಯಾಹ್ನ ಅಥವಾ ಸಂಜೆಯೂ ಮಾಡಬಹುದಿತ್ತು. ಸಿಇಟಿ ಬರೆಯುವ ತುಂಬಾ ಒತ್ತಡದ ಮಧ್ಯೆ, ಪರೀಕ್ಷಾ ಕೇಂಧ್ರಗಳಿಗೆ ತಲುಪುವುದು ಇನ್ನೂ ಸಂಕಷ್ಟಕ್ಕೆ ಸಿಲುಕಿಸುವುದು. ಇದೊಂದು ಅವರ ಭವಿಷ್ಯ ನಿರ್ಣಾಯಕ ಪರೀಕ್ಷೆ. ಪ್ರಮಾಣ ವಚನಕ್ಕಾಗಿ ವಿದ್ಯಾರ್ಥಿಗಳ ಜೀವನವನ್ನು ಇಷ್ಟು ಹಗುರವಾಗಿ ತೆಗೆದುಕೊಂಡರೆ ಹೇಗೆ ?? ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಬಹುಮತ ಪಡೆದು ಜಯಗಳಿಸಿದ ನಂತರ ಇಷ್ಟು ದಿನ ಮುಖ್ಯ ಮಂತ್ರಿ ಯಾರು ಎಂದು ಆಯ್ಕೆ ಮಾಡುವುದಕ್ಕೆ ಸಮಯ ಕಳೆದ ನೀವು ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಇಷ್ಟು ಕಾತುರತೆ ಏಕೆ? ರೋಡ್ ಶೋ ನೀಟ್ ಪರೀಕ್ಷೆ ಅಭ್ಯರ್ಥಿಗಳಿಗೆ ತೊಂದರೆ ಆಗುತ್ತದೆ ಎಂದವರಿಗೆ ಇವತ್ತಿನ ಸಿಇಟಿ ಅಭ್ಯರ್ಥಿಗಳಿಗೆ ಆಗುವ ತೊಂದರೆ ಕಾಣುವುದಿಲ್ಲವೇ? ನಿರ್ದಿಷ್ಟ ಸ್ಥಳದಲ್ಲಿ ನಡೆಯುವ ಕಾರ್ಯಕ್ರಮ ಎಂದು ರಿಯಾಯತಿಯೇ? ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.