ಹಿಂದುತ್ವದ ಪ್ರಯೋಗಶಾಲೆ , ಕೋಮು ಸೂಕ್ಷ್ಮ ಪ್ರದೇಶವಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿದೆ.
2013ರ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 8 ಸ್ಥಾನಗಳಲ್ಲಿ 7 ಕಾಂಗ್ರೆಸ್, 1 ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ ಮುಂದಿನ ಚುನಾವಣೆ, 2018ರಲ್ಲಿ ಇದು ತದ್ವಿರುದ್ದವಾಯಿತು. 8ರಲ್ಲಿ 7 ಬಿಜೆಪಿ ವಶಪಡಿಸಿಕೊಂಡರೆ, 1 ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಮಾತ್ರ ಕಾಂಗ್ರೆಸ್ ಸಫಲವಾಯಿತು.
ಕಳೆದ ಎರಡು ಚುನಾವಣೆಗಳಿಗಿಂತಲೂ ಈ ಭಾರಿಯ ಚುನಾವಣೆ ಮೇಲ್ನೋಟಕ್ಕೆ ಭಿನ್ನ ಎಂಬಂತೆ ಕಾಣಿಸುತ್ತಿದೆ. ಎರಡೂ ಪಕ್ಷಗಳು ‘ಹೊಸ ಮುಖ’ಗಳಿಗೆ ಮಣೆ ಹಾಕಿವೆ. ಎಂಟು ಕ್ಷೇತ್ರಗಳ ಪೈಕಿ ಬಿಜೆಪಿ ಮೂರು ಮತ್ತು ಕಾಂಗ್ರೆಸ್ ಐದು ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಕಣಕ್ಕೆ ಇಳಿಸಿವೆ. ಸುಳ್ಯ, ಪುತ್ತೂರಿನಲ್ಲಿ ತನ್ನ ಹಾಲಿ ಶಾಸಕರ ಬದಲು ಇಬ್ಬರು ಮಹಿಳಾ ಅಭ್ಯರ್ಥಿಗಳಿಗೆ ಬಿಜೆಪಿ ಮಣೆ ಹಾಕಿದೆ.
ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ರಕ್ಷಿತ್ ಶಿವರಾಮ್, ಕೃಷ್ಣಪ್ಪ, ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಇನಾಯತ್ ಆಲಿ, ಮಿಥುನ್ ರೈ ಹೊಸ ಮುಖಗಳಾಗಿದ್ದರೆ, ಬಿಜೆಪಿಯಿಂದ ಆಶಾ ತಿಮ್ಮಪ್ಪ ಗೌಡ, ಭಾಗೀರಥಿ ಮುರುಳ್ಯ, ಸತೀಶ್ ಕುಂಪಲ ಹೊಸ ಮುಖಗಳಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್, ಬಿಜೆಪಿ ಸಹಿತ ಒಟ್ಟು 13 ಪಕ್ಷಗಳು ಅಖಾಡಕ್ಕಿಳಿದಿವೆ. ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದಿರುವ ಆಮ್ ಅದ್ಮಿ ಪಾರ್ಟಿ ಇದೇ ಮೊದಲ ಬಾರಿಗೆ ಜಿಲ್ಲೆಯ ಎಲ್ಲ 8 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.
ಜೆಡಿಎಸ್ ಮಂಗಳೂರು ಕ್ಷೇತ್ರ ಹೊರತುಪಡಿಸಿ ಉಳಿದ 7 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) 5 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. 2018ರ ಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸಿಪಿಐಎಂ ಈ ಬಾರಿ ಸ್ಪರ್ಧೆಯಿಂದ ದೂರ ಉಳಿದಿದೆ.
ಪುತ್ತೂರು
ಪ್ರಮುಖ ಅಭ್ಯರ್ಥಿಗಳು: ಆಶಾ ತಿಮ್ಮಪ್ಪ ಗೌಡ (ಬಿಜೆಪಿ), ಅಶೋಕ್ ಕುಮಾರ್ ರೈ ಕೋಡಿಂಬಾಡಿ (ಕಾಂಗ್ರೆಸ್), ಅರುಣ್ ಕುಮಾರ್ ಪುತ್ತಿಲ (ಪಕ್ಷೇತರ), ಶಾಫಿ ಬೆಳ್ಳಾರೆ (ಎಸ್.ಡಿ.ಪಿ.ಐ.)
ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಇಡೀ ರಾಜ್ಯದ ಗಮನ ಸೆಳೆದಿರುವುದು ಪುತ್ತೂರು ಕ್ಷೇತ್ರ. ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಟಿಕೆಟ್ ನಿರಾಕರಿಸಿ, ಅವರದ್ದೇ ಸಮುದಾಯದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಬಿಜೆಪಿ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಪ್ರಖರ ಹಿಂದುತ್ವವಾದಿ ಅರುಣಕುಮಾರ್ ಪುತ್ತಿಲ ಪಕ್ಷೇತರರಾಗಿ ಕಣಕ್ಕಿಳಿದಿರುವುದು ಈ ಕ್ಷೇತ್ರವನ್ನು ಹೈ ವೋಲ್ಟೇಜ್ ಕದನವನ್ನಾಗಿಸಿದೆ.
ಈ ಹಿಂದೆ ಹಿಂದುತ್ವ ಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ, ಕೆಲ ತಿಂಗಳ ಹಿಂದಷ್ಟೇ ಬಿಜೆಪಿಯಿಂದ ಕಾಂಗ್ರೆಸ್ ಸೇರಿರುವ ಅಶೋಕ ಕುಮಾರ್ ರೈ ಕಾಂಗ್ರೆಸ್ ಹುರಿಯಾಳು. ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಪ್ರಮುಖ ಆರೋಪಿ, ಸದ್ಯ ಜೈಲಿನಲ್ಲಿರುವ ಶಾಫಿ ಬೆಳ್ಳಾರೆ ಇಲ್ಲಿ ಎಸ್‌ಡಿಪಿಐ ಅಭ್ಯರ್ಥಿ. ಅರುಣಕುಮಾರ್ ಪುತ್ತಿಲ ಪಡೆಯುವ ಮತಗಳು ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ.
ನಾಮಪತ್ರ ವಾಪಸ್ ಪಡೆಯಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ-ಆರ್‌ಎಸ್‌ಎಸ್‌ನ ಪ್ರಮುಖ ನಾಯಕರು ಮನವೊಲಿಸುವ ಪ್ರಯತ್ನ ನಡೆಸಿದ್ದರಾದರೂ, ತಾನು ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯುವುದಿಲ್ಲ ಎಂದು ಪುತ್ತಿಲ ಹೇಳಿದ್ದಾರೆ.
ಕಳೆದ ಬಾರಿಯ ಫಲಿತಾಂಶ, ಗೆಲುವಿನ ಅಂತರ
ಸಂಜೀವ ಮಠಂದೂರು (ಗೆಲುವು, ಬಿಜೆಪಿ), ಶಕುಂತಳಾ ಶೆಟ್ಟಿ (ಕಾಂಗ್ರೆಸ್, ಸೋಲು) ಅಂತರ- 19477 ಮತಗಳು
ಮಂಗಳೂರು ಉತ್ತರ

ಕಣದಲ್ಲಿರುವ ಪ್ರಮುಖರು: ಡಾ. ವೈ.ಭರತ್ ಶೆಟ್ಟಿ (ಹಾಲಿ ಶಾಸಕರು, ಬಿಜೆಪಿ ಅಭ್ಯರ್ಥಿ), ಇನಾಯತ್ ಅಲಿ (ಕಾಂಗ್ರೆಸ್), ಮೊಹಿಯುದ್ದೀನ್ ಬಾವಾ (ಜೆಡಿಎಸ್).
224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೊನೆಯದಾಗಿ ಅಭ್ಯರ್ಥಿಯ ಘೋಷಣೆ ಮಾಡಿದ ಕ್ಷೇತ್ರವಿದು. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ, ಮಾಜಿ ಶಾಸಕ ಮೊಹಿಯುದ್ದಿನ್ ಬಾವಾ ಮತ್ತು ಡಿಕೆಶಿ ಆಪ್ತ, ಯುವ ಮುಖ ಇನಾಯತ್ ಅಲಿ ನಡುವೆ ಕಾಂಗ್ರೆಸ್ ಟಿಕೆಟ್‌ಗಾಗಿ ಕೊನೆ ದಿನದವರೆಗೂ ಟಿಕೆಟ್ ಫೈಟ್ ಇತ್ತು. ಅಳೆದೂ, ತೂಗಿ ಉದ್ಯಮಿ ಇನಾಯತ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇನಾಯತ್‌ಗೆ ಬಿ ಫಾರಂ ಘೋಷಣೆಯಾಗುತ್ತಿದ್ಧಂತೆಯೇ ಕಾಂಗ್ರೆಸ್ ಕಟ್ಟಾಳು ಮೊಹಿಯುದ್ದಿನ್ ಜೆಡಿಎಸ್‌ಗೆ ಜಿಗಿದು ಆ ಪಕ್ಷದ ಅಭ್ಯೃರ್ಥಿಯಾಗಿದ್ದಾರೆ.
2018ರಲ್ಲಿ ಬಿಜೆಪಿ, ಅಚ್ಚರಿಯ ಅಭ್ಯರ್ಥಿಯಾಗಿ ಡಾ. ವೈ. ಭರತ್ ಶೆಟ್ಟಿ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿತ್ತು. ಈ ಬಾರಿಯೂ ಭರತ್ ಅವರೇ ಕಮಲ ಪಕ್ಷದ ಹುರಿಯಾಳು. ಅಭಿವೃದ್ಧಿ ಮತ್ತು ಹಿಂದುತ್ವವನ್ನು ಮುಂದಿಟ್ಟುಕೊಂಡು ಹಾಲಿ ಶಾಸಕ ಪ್ರಚಾರ ಕಣದಲ್ಲಿದ್ದಾರೆ. ಮೊಹಿಯುದ್ದಿನ್ ಸ್ಪರ್ಧೆ ಕಾಂಗ್ರೆಸ್‌ಗೆ ದೊಡ್ಡ ತಲೆ ನೋವಾಗಿದೆ. ಬಾವಾ-ಅಲಿ ನಡುವಿನ ಸ್ಪರ್ಧೆಯಿಂದಾಗಿ ಮತಗಳು ವಿಭಜನೆಯಾಗಲಿದ್ದು, ಇದು ತಮ್ಮ ಗೆಲುವಿನ ಹಾದಿಯನ್ನು ಸುಗಮಗೊಳಿಸಲಿದೆ ಎಂಬ ಲೆಕ್ಕಾಚಾರದಲ್ಲಿದೆ ಬಿಜೆಪಿ.
ಕಳೆದ ಬಾರಿಯ ಫಲಿತಾಂಶ, ಗೆಲುವಿನ ಅಂತರ
ಭರತ್ ಶೆಟ್ಟಿ (ಗೆಲುವು, ಬಿಜೆಪಿ), ಮೊಹಿಯುದ್ದಿನ್ ಬಾವ, (ಕಾಂಗ್ರೆಸ್, ಸೋಲು) ಅಂತರ 26,648 ಮತಗಳು
ಮಂಗಳೂರು ದಕ್ಷಿಣ
ಕಣದಲ್ಲಿರುವ ಪ್ರಮುಖರು: ಡಿ. ವೇದವ್ಯಾಸ ಕಾಮತ್ (ಹಾಲಿ ಶಾಸಕ, ಬಿಜೆಪಿ), ಜೆ.ಆರ್. ಲೋಬೊ (ಕಾಂಗ್ರೆಸ್)
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ಹೊಸಮುಖ ಡಿ.ವೇದವ್ಯಾಸ ಕಾಮತ್ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ಕೊಟ್ಟಿದೆ. ಕಾಂಗ್ರೆಸ್‌ನಿಂದ 2013ರ ಶಾಸಕ ಜೆ.ಆರ್. ಲೋಬೊ ಮೂರನೇ ಬಾರಿ ಕಣಕ್ಕೆ ಇಳಿದಿದ್ದಾರೆ. ಇಲ್ಲಿ ಆಮ್ ಆದ್ಮಿ, ಜೆಡಿಎಸ್ ಕಣದಲ್ಲಿದ್ದರೂ ಕಮಲ-ಕೈ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಇಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಕುದ್ರೋಳಿ ಕ್ಷೇತ್ರಾಡಳಿತ ಸಮಿತಿ ಕೋಶಾಧಿಕಾರಿ ಪದ್ಮರಾಜ್ ಪ್ರಯತ್ನ ನಡೆಸಿದ್ದರು. ಕ್ರೈಸ್ತರು ಅಧಿಕವಾಗಿರುವ ಮಂಗ ಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಟಿಕೆಟ್ ಪಡೆಯುಲ್ಲಿ ಜೆ.ಆರ್.ಲೋಬೋ ಯಶಸ್ವಿಯಾಗಿದ್ದಾರೆ.
ಕಳೆದ ಬಾರಿಯ ಫಲಿತಾಂಶ-ಗೆಲುವಿನ ಅಂತರ
ವೇದವ್ಯಾಸ ಕಾಮತ್ (ಗೆಲುವು, ಬಿಜೆಪಿ), ಆರ್.ಲೋಬೊ, (ಕಾಂಗ್ರೆಸ್ , ಸೋಲು) ಅಂತರ 16,075 ಮತಗಳು
ಮಂಗಳೂರು (ಉಳ್ಳಾಲ)
ಕಣದಲ್ಲಿರುವ ಪ್ರಮುಖರು: ಯು.ಟಿ. ಖಾದರ್ (ಹಾಲಿ ಶಾಸಕರು, ಕಾಂಗ್ರೆಸ್), ಸತೀಶ್ ಕುಂಪಲ (ಬಿಜೆಪಿ), ರಿಯಾಝ್ ಫರಂಗಿಪೇಟೆ (ಎಸ್.ಡಿ.ಪಿ.ಐ.)
ಮುಸ್ಲಿಂ ಮತದಾರರ ಬಾಹುಳ್ಯವಿರುವ ಮಂಗಳೂರು ಕ್ಷೇತ್ರದಲ್ಲಿ ʻಹ್ಯಾಟ್ರಿಕ್ ಸರದಾರʼ ಯು.ಟಿ. ಖಾದರ್, ಐದನೇ ಬಾರಿಗೆ ಅಖಾಡದಲ್ಲಿದ್ದಾರೆ. ನಿರಂತರವಾಗಿ ನಾಲ್ಕು ಬಾರಿ ಗೆದ್ದಿರುವ ಖಾದರ್‌ಗೆ ಈ ಬಾರಿ ಎಸ್.ಡಿ.ಪಿ.ಐ.ನ ರಿಯಾಝ್ ಫರಂಗಿಪೇಟೆ ಸ್ಪರ್ಧೆ ತಲೆನೋವಾಗಿ ಪರಿಣಮಿಸಿದೆ. ಎಸ್‌ಡಿಪಿಐ ಕಾಂಗ್ರೆಸ್ ಗೆಲುವಿಗೆ ಅಡ್ಡಗಾಲು ಹಾಕುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಈ ಬಾರಿ ಬಿಜೆಪಿ ಹೊಸಮುಖ ಜಿ.ಪಂ.ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಅವರನ್ನು ಸ್ಪರ್ಧೆಗೆ ಇಳಿಸಿದೆ. ಈ ಕ್ಷೇತ್ರದಲ್ಲಿ ಒಮ್ಮೆ ಮಾತ್ರ ಬಿಜೆಪಿ ಗೆದ್ದ ಇತಿಹಾಸವಿದೆ. ಉಳಿದಂತೆ ಕಾಂಗ್ರೆಸ್‌ನದ್ದೇ ಅಧಿಪತ್ಯ. ಕ್ಷೇತ್ರದಲ್ಲಿ ಹಿಂದೆ ಖಾದರ್ ತಂದೆ ಯು.ಟಿ. ಫರೀದ್ ಶಾಸಕರಾಗಿದ್ದರು. ಜೆಡಿಎಸ್ ಅಭ್ಯರ್ಥಿ ಅಂತಿಮ ದಿನ ದಿಢೀರ್ ಆಗಿ ನಾಮಪತ್ರ ವಾಪಸ್ ಪಡೆದಿರುವುದು ತ್ರಿಕೋನ ಸ್ಪರ್ಧೆಗೆ ವೇದಿಕೆ ಒದಗಿಸಿದೆ.
ಕಳೆದ ಬಾರಿಯ ಫಲಿತಾಂಶ-ಗೆಲುವಿನ ಅಂತರ
ಯು.ಟಿ. ಖಾದರ್ (ಗೆಲುವು, ಕಾಂಗ್ರೆಸ್), ಸಂತೋಷ್ ಕುಮಾರ್ ರೈ (ಬಿಜೆಪಿ , ಸೋಲು) ಅಂತರ- 19739 ಮತಗಳು
ಬಂಟ್ವಾಳ
ಕಣದಲ್ಲಿರುವ ಪ್ರಮುಖರು: ರಾಜೇಶ್ ನಾಯ್ಕ್ (ಹಾಲಿ ಶಾಸಕ, ಬಿಜೆಪಿ), ಬಿ.ರಮಾನಾಥ ರೈ (ಕಾಂಗ್ರೆಸ್), ಇಲ್ಯಾಸ್ ತುಂಬೆ (ಎಸ್.ಡಿ.ಪಿ.ಐ.)
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಇದು ಮೂರನೇ ಸ್ಪರ್ಧೆ. 2013ರಲ್ಲಿ ಸೋತರೆ, 2018ರಲ್ಲಿ ಗೆದ್ದಿದ್ದರು. ಇಲ್ಲಿ ಮಾಜಿ ಸಚಿವ ರಮಾನಾಥ ರೈ, 9ನೇ ಬಾರಿಗೆ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ಆರು ಬಾರಿ ಶಾಸಕರಾಗಿ, ಎರಡು ಬಾರಿಯಷ್ಟೇ ಸೋತಿರುವ ರೈ, ಈ ಬಾರಿ ಕೊನೆಯ ಸ್ಪರ್ಧೆ ಎಂಬಂತೆ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಈ ಬಾರಿ ಗೆದ್ದರೆ ಅತಿ ಹೆಚ್ಚು ಬಾರಿ ವಿಧಾನಸಭೆ ಪ್ರವೇಶಿಸಿದ ದಕ್ಷಿಣ ಕನ್ನಡದ ಶಾಸಕ ಎಂಬ ದಾಖಲೆ ರಮಾನಾಥ ರೈ ಪಾಲಾಗಲಿದೆ. ಇಲ್ಲಿ ಬಿಲ್ಲವರು ಮತ್ತು ಮುಸ್ಲಿಮರು ನಿರ್ಣಾಯಕ ಮತದಾರರಾಗಿದ್ದಾರೆ. ಈ ಬಾರಿಯೂ ಬಂಟ್ವಾಳದಲ್ಲಿ ಬಿಜೆಪಿ – ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಸ್ಪರ್ಧೆ. ಎಸ್.ಡಿ.ಪಿ.ಐ. ಕೂಡ ಕಣದಲ್ಲಿದೆ.
ಕಳೆದ ಬಾರಿಯ ಫಲಿತಾಂಶ-ಗೆಲುವಿನ ಅಂತರ
ರಾಜೇಶ್ ನಾಯ್ಕ್ (ಗೆಲುವು, ಬಿಜೆಪಿ), ರಮಾನಾಥ ರೈ (ಕಾಂಗ್ರೆಸ್, ಸೋಲು) ಅಂತರ- 15971 ಮತಗಳು.
ಮೂಡುಬಿದಿರೆ
ಕಣದಲ್ಲಿರುವ ಪ್ರಮುಖರು: ಉಮಾನಾಥ ಕೋಟ್ಯಾನ್ (ಹಾಲಿ ಶಾಸಕ, ಬಿಜೆಪಿ), ಮಿಥುನ್ ರೈ (ಕಾಂಗ್ರೆಸ್), ಡಾ.ಅಮರಶ್ರೀ ಶೆಟ್ಟಿ (ಜೆಡಿಎಸ್)
ಮೂಲ್ಕಿ-ಮೂಡುಬಿದಿರೆ ಕ್ಷೇತ್ರದಲ್ಲಿ ಹಾಲಿ ಶಾಸಕ ಉಮಾನಾಥ ಕೋಟ್ಯಾನ್ ಅವರು ನಾಲ್ಕನೇ ಬಾರಿಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಕಳೆದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ದಾಖಲೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಹೆಗ್ಗಳಿಕೆ ಇವರದ್ದು. ಆದರೆ, ಈ ಬಾರಿ ಇವರ ಗೆಲವಿನ ಓಟಕ್ಕೆ ಲಗಾಮು ಹಾಕಲು ಕಾಂಗ್ರೆಸ್, ಯುವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಜೆಡಿಎಸ್ ಮಾಜಿ ಸಚಿವ ಅಮರನಾಥ ಶೆಟ್ಟಿಯವರ ಪುತ್ರಿ ಡಾ.ಅಮರಶ್ರೀ ಅವರನ್ನು ಕಣಕ್ಕಿಳಿಸಿದೆ. ಆದರೂ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿ ಇದೆ.
ಕಳೆದ ಬಾರಿಯ ಫಲಿತಾಂಶ-ಗೆಲುವಿನ ಅಂತರ
ಉಮಾನಾಥ ಕೋಟ್ಯಾನ್ (ಗೆಲುವು, ಬಿಜೆಪಿ), ಕೆ.ಅಭಯಚಂದ್ರ ಜೈನ್ (ಕಾಂಗ್ರೆಸ್, ಸೋಲು) ಅಂತರ- 29,799
ಬೆಳ್ತಂಗಡಿ
ಕಣದಲ್ಲಿರುವ ಪ್ರಮುಖರು: ಹರೀಶ್ ಪೂಂಜಾ (ಬಿಜೆಪಿ, ಹಾಲಿ ಶಾಸಕ), ರಕ್ಷಿತ್ ಶಿವರಾಮ್ (ಕಾಂಗ್ರೆಸ್)
ಬೆಳ್ತಂಗಡಿಯಲ್ಲಿ ಹಾಲಿ ಶಾಸಕ ಬಿಜೆಪಿಯ ಶಾಸಕ ಹರೀಶ್ ಪೂಂಜಾ ಈಗ ಎರಡನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ ಕ್ಷೇತ್ರದಲ್ಲಿ ಪ್ರಬಲವಾಗಿರುವ ಬಿಲ್ಲವ ಸಮುದಾಯಕ್ಕೆ ಸೇರಿದ ರಕ್ಷಿತ್ ಶಿವರಾಮ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಕಾಂಗ್ರೆಸ್‌ನ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸಹೋದರ, ನಿವೃತ್ತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಮ್ ಅವರ ಪುತ್ರ ರಕ್ಷಿತ್, ಕ್ಷೇತ್ರದಲ್ಲಿ ಹೊಸಮುಖ. ಕಳೆದ ಬಾರಿ ಸ್ಪರ್ಧೆಯಲ್ಲಿ ಹರೀಶ್ ಪೂಂಜಾಗೆ ಕಾಂಗ್ರೆಸ್‌ನಿಂದ ಮಾಜಿ ಶಾಸಕ ವಸಂತ ಬಂಗೇರ ಪ್ರತಿಸ್ಪರ್ಧಿಯಾಗಿದ್ದರು. ಈ ಬಾರಿ ಕೈ ಪಕ್ಷ ಹೊಸಮುಖವನ್ನು ಕಣಕ್ಕೆ ಇಳಿಸಿದೆ. ಇಲ್ಲಿ ಬೇರೆ ಪಕ್ಷಗಳು ಸ್ಪರ್ಧಾ ಕಣದಲ್ಲಿದ್ದರೂ ಸಹ ಹರೀಶ್-ಪೂಂಜಾ ನಡುವೆ ನೇರ ಹಣಾಹಣಿ ಇದೆ.
ಕಳೆದ ಬಾರಿಯ ಫಲಿತಾಂಶ-ಗೆಲುವಿನ ಅಂತರ
ಹರೀಶ್ ಪೂಂಜ (ಗೆಲುವು, ಬಿಜೆಪಿ), ವಸಂತ ಬಂಗೇರ (ಕಾಂಗ್ರೆಸ್, ಸೋಲು) ಅಂತರ- 22,974 ಮತಗಳು
ಸುಳ್ಯ
ಕಣದಲ್ಲಿರುವ ಪ್ರಮುಖರು: ಭಾಗೀರಥಿ ಮುರುಳ್ಯ (ಬಿಜೆಪಿ), ಕೆ.ಕೃಷ್ಣಪ್ಪ (ಕಾಂಗ್ರೆಸ್), ಸುಮನಾ ಬೆಳ್ಳಾರ್ಕರ್ (ಆಮ್ ಆದ್ಮಿ ಪಕ್ಷ)
ಮೀಸಲು ಕ್ಷೇತ್ರ (ಎಸ್‌ಸಿ) ಸುಳ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹೊಸಮುಖಗಳಿಗೆ ಮಣೆ ಹಾಕಿವೆ. ಬಿಜೆಪಿಯಿಂದ ಆರು ಬಾರಿ ಗೆದ್ದು, ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿದ್ದ ಎಸ್.ಅಂಗಾರ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದ್ದು, ಭಾಗೀರಥಿ ಮುರುಳ್ಯ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಕಾಂಗ್ರೆಸ್ ಕೂಡ ಹೊಸಮುಖ ಜಿ. ಕೃಷ್ಣಪ್ಪ ರಾಮಕುಂಜರನ್ನು ಕಣಕ್ಕಿಳಿಸಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ನಂದಕುಮಾರ್, ಬಂಡಾಯದ ಬಾವುಟ ಹಾರಿಸಿದ್ದರು. ಆದರೆ ಅವರಿಗೆ ಕೊಡುಗು ಉಸ್ತವಾರಿ ನೀಡಿ ಸಮಾಧಾನ ಪಡಿಸಿ ಮತ್ತೆ ಸಕ್ರಿಯರಾಗುವಂತೆ ಮನವೊಲಿಸಲಾಗಿದೆ. ಆದರೆ ಅವರ ಕಟ್ಟಾ ಬೆಂಬಲಿಗರು ಸಿಟ್ಟಿಗೆದ್ದು ತಟಸ್ಥ ಧೋರಣೆ ತಳೆದಿದ್ದಾರೆ. ಇಲ್ಲಿ ಆಮ್ ಆದ್ಮಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಸಹ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಅದಾಗಿಯೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ನಡೆಯಲಿದೆ.
ಕಳೆದ ಬಾರಿಯ ಫಲಿತಾಂಶ-ಗೆಲುವಿನ ಅಂತರ
ಎಸ್.ಅಂಗಾರ (ಗೆಲುವು, ಬಿಜೆಪಿ), ಡಾ. ಬಿ ರಘು (ಕಾಂಗ್ರೆಸ್, ಸೋಲು) ಅಂತರ- 26 ಮತಗಳು