ಬಾದಾಮಿ ಕ್ಷೇತ್ರ | ಕೈ-ತೆನೆ ನಡುವೆ ನೇರ ಫೈಟ್; ಸಿದ್ದರಾಮಯ್ಯ ಬಳಿಕ ಬಾದಾಮಿ ಅಧಿಪತಿ ಯಾರು?

Date:

ಕುರುಬ ಸಮುದಾಯ, ನಂತರದಲ್ಲಿ ಲಿಂಗಾಯತರ ಪ್ರಾಬಲ್ಯ ಇರುವ ಬಾದಾಮಿ ಕ್ಷೇತ್ರದಲ್ಲಿ ಹಾಲುಮತದ ಮತದಾರರೇ ನಿರ್ಣಾಯಕ. ಬಾದಾಮಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ ಬಿಜೆಪಿ ಒಳಗಿನ ಬಂಡಾಯ. ಕೈ-ತೆನೆ ನಡುವೆ ನಿರ್ಣಾಯಕ ಫೈಟ್ ನಡೆಯಲಿದ್ದು, ಸಿದ್ದರಾಮಯ್ಯ ನಂತರ ಬಾದಾಮಿಗೆ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡಿದ ಕ್ಷೇತ್ರಗಳ ಪೈಕಿ ಬಾದಾಮಿ ಕೂಡ ಒಂದು. ಆಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಮತ್ತು ಅವರ ಎದುರಾಳಿಯಾಗಿ ಬಿಜೆಪಿಯ ಬಿ ಶ್ರೀರಾಮುಲು ಕಣಕ್ಕಿಳಿಯುತ್ತಿದ್ದಂತೆ ರಾಜ್ಯ ರಾಜಕಾರಣದ ಕೇಂದ್ರಬಿಂದುವಾಗಿ ಈ ಕ್ಷೇತ್ರ ಮುನ್ನೆಲೆಗೆ ಬಂದಿತ್ತು.

ರಾಜಕೀಯವಾಗಿ ಮರುಜನ್ಮ ನೀಡಿದ ಬಾದಾಮಿ ಕ್ಷೇತ್ರವನ್ನು ಸಿದ್ದರಾಮಯ್ಯ ಅವರು ಈ ಚುನಾವಣೆಯಲ್ಲಿ ತೊರೆದು, ಸ್ವ ಕ್ಷೇತ್ರ ವರುಣಾ ಕಡೆ ಮುಖ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಕ್ಷೇತ್ರದಲ್ಲಿ ಉಳಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಒತ್ತಾಯಿಸಿದ್ದರೂ, ರಾಜಧಾನಿಯಿಂದ ದೂರ ಎಂಬ ಕಾರಣ ನೀಡಿ ಸ್ಪರ್ಧಿಸಲು ನಿರಾಕರಿಸಿದ್ದರು.

ಬದಲಾದ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಅವರು ಅಂತಿಮವಾಗಿ ಕ್ಷೇತ್ರ ಬಿಟ್ಟಿರುವುದರಿಂದ ಮೊದಲಿದ್ದ ಕಣ ಕುತೂಹಲ ಕಾಣೆಯಾಗಿ, ಈಗ ಸ್ಥಳೀಯ ರಾಜಕಾರಣ ಮುನ್ನೆಲೆಗೆ ಬಂದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಕ್ಷೇತ್ರದಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ಸಿನ ಮಾಜಿ ಶಾಸಕ, ಸಚಿವ ಬಿ ಬಿ ಚಿಮ್ಮನಕಟ್ಟಿ ಮತ್ತು ಲಿಂಗಾಯತ ಸಮುದಾಯಕ್ಕೆ ಸೇರಿದ ಬಿಜೆಪಿ ಮಾಜಿ ಶಾಸಕ ಎಂ ಕೆ ಪಟ್ಟಣಶೆಟ್ಟಿ ನಡುವೆಯೇ ದಶಕಗಳ ಕಾಲ ಪೈಪೋಟಿ ನಡೆದಿದೆ. ಚಿಮ್ಮನಕಟ್ಟಿ ಅವರು ಬಾದಾಮಿ ಕ್ಷೇತ್ರದಿಂದ ಐದು ಬಾರಿ ಶಾಸಕರಾಗುವ ಮೂಲಕ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ.

ಸಿದ್ದರಾಮಯ್ಯ ಅವರು 2018ರಲ್ಲಿ ರಕ್ಷಣಾ ಕ್ಷೇತ್ರವನ್ನಾಗಿ ಬಾದಾಮಿಯನ್ನು ಕೊನೆಕ್ಷಣದಲ್ಲಿ ಆಯ್ಕೆ ಮಾಡಿಕೊಂಡಾಗ ಬಿ ಬಿ ಚಿಮ್ಮನಕಟ್ಟಿ ಅವರು ಸಿದ್ದರಾಮಯ್ಯ ಅವರಿಗೆ ಸ್ಥಾನ ಬಿಟ್ಟುಕೊಟ್ಟಿದ್ದರು. ಅತ್ತ ಬಿಜೆಪಿಯಿಂದ ಎಂ ಕೆ ಪಟ್ಟಣಶೆಟ್ಟಿ ಕೂಡ ಶ್ರೀರಾಮುಲು ಅವರಿಗೆ ಕ್ಷೇತ್ರ ತ್ಯಾಗ ಮಾಡಿದ್ದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಇಬ್ಬರೂ ಕ್ಷೇತ್ರದಿಂದ ದೂರವಾಗಿದ್ದು, ಕಾಂಗ್ರೆಸ್‌ನಿಂದ ಬಿ ಬಿ ಚಿಮ್ಮನಕಟ್ಟಿ ಅವರ ಮಗ ಭೀಮಸೇನ ಚಿಮ್ಮನಕಟ್ಟಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅತ್ತ ಬಿಜೆಪಿ ಎಂ ಕೆ ಪಟ್ಟಣಶೆಟ್ಟಿ ಅವರ ಬದಲು ಹೊಸ ಮುಖಕ್ಕೆ ಮಣೆ ಹಾಕಿದ್ದು, ಜಿಲ್ಲಾ ಬಿಜೆಪಿ ಅಧ್ಯಕ್ಷ ಲಿಂಗಾಯತ ಗಾಣಿಗ ಸಮುದಾಯಕ್ಕೆ ಸೇರಿದ ಶಾಂತಗೌಡ ಪಾಟೀಲ ಅವರಿಗೆ ಟಿಕೆಟ್ ಘೋಷಿಸಿದೆ.

ಕಳೆದ ಬಾರಿ ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಸ್ಪರ್ಧೆಯ ನಡುವೆಯೇ ಜೆಡಿಎಸ್ ಅಭ್ಯರ್ಥಿ ಹನಮಂತ ಮಾವಿನಮರದ 24,448 ಮತ ಪಡೆಯುವ ಮೂಲಕ ಗಮನ ಸೆಳೆದಿದ್ದರು. ಈ ಬಾರಿ ಜೆಡಿಎಸ್‌ನಿಂದ ಮತ್ತೆ ಕಣದಲ್ಲಿರುವ ಪಂಚಮಸಾಲಿ ಸಮುದಾಯದ ಹನಮಂತ ಮಾವಿನಮರದ ಹೊಸ ಉತ್ಸಾಹದಲ್ಲಿದ್ದಾರೆ. ಕಳೆದ ಬಾರಿ ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಸ್ಪರ್ಧಿಸದೇ ಇದ್ದಿದ್ದರೆ ಹನಮಂತ ಮಾವಿನಮರದ ಗೆಲುವು ಸಾಧಿಸುತ್ತಿದ್ದರು ಎನ್ನುವ ಮಾತುಗಳು ಈಗಲೂ ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

ಅತ್ತ ಆಮ್ ಆದ್ಮಿ ಪಕ್ಷದಿಂದ ಕುರುಬ ಸಮುದಾಯದ ಶಿವರಾಯಪ್ಪ ಜೋಗಿನ್ ಕಣದಲ್ಲಿದ್ದಾರೆ. ಇವರು ಉತ್ತರ ಕರ್ನಾಟಕ ಭಾಗದ ಪ್ರಮುಖ ಮುಖಂಡರಾಗಿ ಗುರುತಿಸಿಕೊಂಡಿದ್ದು, ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಸಿದ್ದರಾಮಯ್ಯ ಬೆಂಬಲಿಗರೊಂದಿಗೆ ʼಆಪ್ʼ ಸೇರ್ಪಡೆಯಾಗಿದ್ದರು.

ತ್ರಿಕೋನ ಸ್ಪರ್ಧೆ

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ನಂತರ ಮಾಜಿ ಸಚಿವ ಬಿ ಬಿ ಚಿಮ್ಮನಕಟ್ಟಿ ಅವರ ಹೆಸರು ಹೆಚ್ಚು ಪ್ರಚಲಿತದಲ್ಲಿತ್ತು. ಆದರೆ ಅವರ ಅನಾರೋಗ್ಯದ ಕಾರಣದಿಂದ ಅವರ ಪುತ್ರನಿಗೆ ಟಿಕೆಟ್ ನೀಡಲಾಗಿದೆ. ಕುರುಬ ಸಮುದಾಯದ ಮಹೇಶ ಹೊಸಗೌಡರು ಕೂಡ ಅರ್ಜಿ ಹಾಕಿದ್ದರು. ಆದರೆ ಟಿಕೆಟ್ ಸಿಗಲಿಲ್ಲ. ಹಾಗಾಗಿ ಅವರಿಗೆ ಕಾಂಗ್ರೆಸ್ ಮೇಲೆ ಸಹಜವಾದ ಮುನಿಸು ಹುಟ್ಟಿಕೊಂಡಿತ್ತು. ಆದರೆ ಇದು ಬಂಡಾಯವೇಳುವ ಮಟ್ಟಕ್ಕೆ ಹೋಗದಂತೆ ಕ್ಷೇತ್ರದ ಹಾಲಿ ಶಾಸಕ ಸಿದ್ದರಾಮಯ್ಯ ತಡೆದಿದ್ದಾರೆ.

ಚಿಮ್ಮನಕಟ್ಟಿ ಅವರ ಮೇಲಿನ ಎಲ್ಲ ಮುನಿಸು ಮರೆತ ಸಿದ್ದರಾಮಯ್ಯ, ಕಾಂಗ್ರೆಸ್ ವಿರುದ್ಧ ಬಂಡಾಯ ಏಳುವ, ಅಸಮಾಧಾನ ಹೊಂದಿರುವ 150ಕ್ಕೂ ಹೆಚ್ಚು ಕ್ಷೇತ್ರದ ನಾಯಕರನ್ನು ಬೆಂಗಳೂರಿಗೆ ಕರೆಯಿಸಿಕೊಂಡು, “ಒಗ್ಗಟ್ಟಿನಿಂದ ಕೆಲಸ ಮಾಡಿ, ಕಾಂಗ್ರೆಸ್ ಗೆಲ್ಲಿಸಿಕೊಂಡು ಬನ್ನಿ, ಬಾದಾಮಿ ಕ್ಷೇತ್ರಕ್ಕೆ ಸೂಕ್ತ ಅನುದಾನ ನೀಡುವೆ” ಎನ್ನುವ ಮೂಲಕ ಭೀಮಸೇನ್ ಪರವಾಗಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ.

ಇನ್ನು ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಚಿಮ್ಮನಕಟ್ಟಿ ವಿರುದ್ಧ ಟಿಕೆಟ್‌ಗಾಗಿ ಫೈಟ್ ನಡೆಸಿದ್ದ ಡಾ. ದೇವರಾಜ್ ಪಾಟೀಲ್ ಈ ಬಾರಿ ಬಾದಾಮಿ ಬಿಟ್ಟು ಬಾಗಲಕೋಟೆ ಕ್ಷೇತ್ರದತ್ತ ಮುಖ ಮಾಡಿ, ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದಾರೆ. ಹಾಗಾಗಿ ಬಂಡಾಯದ ಬಿಸಿಯಂತೂ ಸದ್ಯಕ್ಕೆ ಕಾಂಗ್ರೆಸ್‌ಗೆ ಇಲ್ಲ.

ಬಾದಾಮಿ ಕ್ಷೇತ್ರದಲ್ಲಿ ಚಿಮ್ಮನಕಟ್ಟಿ ಮನೆತನದ ಮೇಲೆ ಕುರುಬ ಸಮುದಾಯಕ್ಕೆ ವಿಶೇಷ ಪ್ರೀತಿ, ಅಭಿಮಾನ ಇದೆ. ಹಾಗಾಗಿ ಸಮುದಾಯದ ಬಹುತೇಕ ಮತಗಳು ಕಾಂಗ್ರೆಸ್ ಅಭ್ಯರ್ಥಿ ಪರ ಬರಲಿವೆ. ಇನ್ನು ಕಾಂಗ್ರೆಸ್‌ನ ಸಾಂಪ್ರದಾಯಿಕ ಬೆಂಬಲಿಗರಾದ ದಲಿತ, ವಾಲ್ಮೀಕಿ, ಮುಸ್ಲಿಂ, ಕ್ರಿಶ್ಚಿಯನ್ ಮತಗಳು ಕೈ ಹಿಡಿಯುವ ಸಾಧ್ಯತೆ ಇದೆ. ಆದರೆ, ಭೀಮಸೇನ ಚಿಮ್ಮನಕಟ್ಟಿ ಅವರು ತಮ್ಮ ತಂದೆಯಷ್ಟು ಜನಸಂಪರ್ಕ ಹೊಂದಿಲ್ಲ. ಹಾಗಾಗಿ ಕಾಂಗ್ರೆಸ್‌ಗೆ ಗೆಲುವಿನ ತುತ್ತು ಸುಲಭವಾಗಿ ಬಾಯಿಗೆ ಬಂದು ಬೀಳುತ್ತೆ ಎಂದು ಹೇಳಲಿಕ್ಕಾಗುವುದಿಲ್ಲ.

ಈ ಸುದ್ದಿ ಓದಿದ್ದೀರಾ? ಎರಡು ಅವಧಿಗೊಮ್ಮೆ ಒಂದು ಪಕ್ಷಕ್ಕೆ ಅಧಿಕಾರ; ಸಿದ್ದರಾಮಯ್ಯಗೆ ಮರುಜನ್ಮ ನೀಡಿದ ಕ್ಷೇತ್ರ

ಮಾವ-ಅಳಿಯನಿಗೆ ತಪ್ಪಿದ ಬಿಜೆಪಿ ಟಿಕೆಟ್

ಬಿಜೆಪಿಯಿಂದ ಮಹಾಂತೇಶ್ ಮಮದಾಪುರ ಮತ್ತು ಅವರ ಮಾವ ಎಂ ಕೆ ಪಟ್ಟಣಶೆಟ್ಟಿ ಅವರ ನಡುವೆ ಟಿಕೆಟ್‌ಗಾಗಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಆದರೆ ಇನ್ನೊಂದೆಡೆ ಈ ಅಳಿಯ-ಮಾವನನ್ನು ಬಿಟ್ಟ ಬಿಜೆಪಿ, ಬಾಗಲಕೋಟೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ ಅವರನ್ನು ಕಣಕ್ಕೆ ಇಳಿಸಿದೆ.

ಇದರಿಂದ ಪಟ್ಟಣಶೆಟ್ಟಿ ಮತ್ತು ಮಮದಾಪುರ ಇಬ್ಬರು ನಾಯಕರು ಬಂಡಾಯ ಏಳುವ ಮುನ್ಸೂಚನೆ ನೀಡಿದ್ದಾರೆ. ಆದರೆ ಜಿಲ್ಲೆಯ ಮತ್ತೋರ್ವ ಬಿಜೆಪಿ ಹಿರಿಯ ನಾಯಕ ಗೋವಿಂದ ಕಾರಜೋಳ ಅವರು ಈ ಇಬ್ಬರಿಗೂ ಸಮಾಧಾನ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಬಿಜೆಪಿಯಿಂದ ಎಷ್ಟೇ ಸಮಾಧಾನ ಮಾಡಿದರು ಈ ಇಬ್ಬರು ನಾಯಕರು ಪ್ರಚಾರ ಸಂದರ್ಭದಲ್ಲಿ ಕೈಕೊಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಕಳೆದ ಬಾರಿ ಶ್ರೀರಾಮುಲು ಸ್ಪರ್ಧಿಸಿದಾಗಲೂ ಇವರು ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡಿಲ್ಲ ಎನ್ನುವ ಆರೋಪಗಳು ಇವರ ಮೇಲಿವೆ.

ಬಾಗಲಕೋಟೆ ಸಂಸದ ಪಿ ಸಿ ಗದ್ದಿಗೌಡರ ಅವರ ಆಪ್ತ ಶಿಷ್ಯನಾಗಿ ಗುರುತಿಸಿಕೊಂಡಿರುವ ಶಾಂತಗೌಡ ಪಾಟೀಲ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದವರು. ಅವರು ಕ್ಷೇತ್ರದ ಪ್ರಮುಖ ಕಾರ್ಯಕರ್ತರು ಹಾಗೂ ಮುಖಂಡರಿಗೆ ಮಾತ್ರ ಪರಿಚಿತರು. ಕ್ಷೇತ್ರದ ಮತದಾರರಿಗೆ ಇವರ ಮುಖ ಪರಿಚಯ ಇಲ್ಲ. ಹೊಸ ಮುಖಗಳಿಗೆ ಟಿಕೆಟ್ ನೀಡಿ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಬಿಜೆಪಿಯ ಲೆಕ್ಕಾಚಾರ ಈ ಕ್ಷೇತ್ರದಲ್ಲಿ ಎಷ್ಟು ಉಪಯೋಗಕ್ಕೆ ಬರುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ.

ದಿಗ್ಗಜರ ಮಧ್ಯೆ ಸೆಣಸಿರುವ ಮಾವಿನಮರ ಮತ್ತೆ ಅಖಾಡದಲ್ಲಿ

2018ರ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಾದಾಮಿ ಕ್ಷೇತ್ರದಲ್ಲಿ ಇಬ್ಬರು ದಿಗ್ಗಜ ನಾಯಕರ ನಡುವೆ ಸ್ಪರ್ಧೆ ಮಾಡಿದ್ದ ಜೆಡಿಎಸ್ ಪಕ್ಷದ ಅಭ್ಯರ್ಥಿ ಹನಮಂತ ಮಾವಿನಮರದ ಅವರೇ ಅಭ್ಯರ್ಥಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತರೂ ಸುಮ್ಮನೆ ಕೂರದ ಮಾವಿನಮರದ, ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದಾರೆ. ಪಂಚಮಸಾಲಿ ಸಮುದಾಯದ ಮಾವಿನಮರದ, ಕ್ಷೇತ್ರದ ಉಳಿದ ಸಮುದಾಯಗಳೊಂದಿಗೆ ಉತ್ತಮ ಒಡನಾಟ ಹೊಂದಿರುವುದು ಅವರ ಪ್ಲಸ್ ಪಾಯಿಂಟ್.

ಕ್ಷೇತ್ರದ ಯುವಕರ ಬಾಯಲ್ಲಿ ಮಾವಿನಮರ ಹೆಸರು ಹಿಂದಿಗಿಂತ ಈಗ ಹೆಚ್ಚು ಚಿರಪರಿಚಿತ. ಈ ಬಾರಿ ಸಿದ್ದರಾಮಯ್ಯ ಇಲ್ಲದ ಅಖಾಡದಲ್ಲಿ ತನ್ನ ಸಂಪೂರ್ಣ ಸಾಮರ್ಥ್ಯ ಪ್ರದರ್ಶನ ಮಾಡಲಿದ್ದಾರೆ. ಈ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಆಡಳಿತ ನೋಡಿದ ಬಾದಾಮಿ ಜನ ಈ ಯುವ ನಾಯಕನ ಮೇಲೆ ಹೆಚ್ಚು ಭರವಸೆ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಬಿಜೆಪಿಯತ್ತ ಹೆಚ್ಚು ಚಲಾವಣೆಯಾಗುತ್ತವೆ. ಹಾಗಾಗಿ ಮಾವಿನಮರದ ಅವರ ಸ್ಪರ್ಧೆ ಬಿಜೆಪಿಗೆ ದೊಡ್ಡ ಹೊಡೆತ ಕೊಡಲಿದೆ. ಜೊತೆಗೆ ಮಾವಿನಮರದ ಇತರ ಸಮುದಾಯದ ಮತಗಳನ್ನು ಬಾಚಿಕೊಂಡಿದ್ದೇ ಆದಲ್ಲಿ ಕೈ-ಕಮಲದ ನಡುವೆ ತೆನೆ ಹೊತ್ತ ಮಹಿಳೆ ಎದ್ದು ನಿಲ್ಲುತ್ತಾಳೆ. ರಾಜಕೀಯ ಚದುರಂಗದಾಟದಲ್ಲಿ ಮಾವಿನಮರದಗೆ ಲಾಟರಿ ಹೊಡೆದರೂ ಅಚ್ಚರಿ ಪಡಬೇಕಿಲ್ಲ!

ಅಲ್ಲದೇ ಎಚ್ ಡಿ ಕುಮಾರಸ್ವಾಮಿ ಅವಧಿಯಲ್ಲಿ ಹೊಸ ತಾಲ್ಲೂಕು ಕೇಂದ್ರವಾಗಿ ರಚನೆಯಾಗಿರುವ ಗುಳೆದಗುಡ್ಡ ಮಾವಿನಮರದ ಅವರ ಸ್ವಂತ ಊರು. ಈ ಪ್ರದೇಶ ಯಾವ ಕಡೆ ವಾಲುತ್ತದೆಯೋ ಅವರು ಗೆಲುವು ಸಾಧಿಸುತ್ತಾರೆ ಎನ್ನುವ ಮಾತಿದೆ.

ಜಾತಿ ಲೆಕ್ಕಾಚಾರ

ಕುರುಬ ಸಮುದಾಯ, ನಂತರದಲ್ಲಿ ಲಿಂಗಾಯತರ ಪ್ರಾಬಲ್ಯ ಇರುವ ಬಾದಾಮಿ ಕ್ಷೇತ್ರದಲ್ಲಿ ಹಾಲುಮತದ ಮತದಾರರೇ ನಿರ್ಣಾಯಕ. ನಂತರದ ಸ್ಥಾನದಲ್ಲಿ ಎಸ್ಸಿ, ಎಸ್ಟಿ ಹಾಗೂ ಮುಸ್ಲಿಂ ಮತಗಳು ಇವೆ. ಬಾದಾಮಿ ಕ್ಷೇತ್ರದಲ್ಲಿ ಪುರುಷ ಮತದಾರರ ಸಂಖ್ಯೆ 1,07,074 ಇದ್ದು ಮಹಿಳಾ ಮತದಾರರ ಸಂಖ್ಯೆ 1,05,098 ಇದೆ. ಒಟ್ಟು ಸುಮಾರು 2,12,187. ಕುರುಬ-49,600, ಲಿಂಗಾಯತ-32,000, ಎಸ್ಸಿ-29,900, ವಾಲ್ಮೀಕಿ-19,500, ಮುಸ್ಲಿಂ-19,000, ದೇವಾಂಗ (ನೇಕಾರ)-15,500, ಗಾಣಿಗ-10,500, ಕ್ಷತ್ರಿಯ ಮರಾಠ-5,700, ವಿಶ್ವಕರ್ಮ-4,600, ರೆಡ್ಡಿ-3,800, ಉಪ್ಪಾರ-2,700, ಕಬ್ಬಲಿಗ-2,650, ಗೊಲ್ಲ-2,250, ಕ್ರಿಶ್ಚಿಯನ್-1450 ಮತ್ತು ಇತರೆ-27,000.

ಕೊನೆ ಮಾತು

ಸದ್ಯಕ್ಕೆ ಬಿಜೆಪಿ ಒಳಗಿನ ಬಂಡಾಯ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ. ಮತದಾನಕ್ಕೆ ಮೂರು ದಿನ ಇರುವಂತೆ (ಮೇ 7) ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಮೋದಿ ಆಗಮನ ಕೊನೆ ಕ್ಷಣದಲ್ಲಿ ಅಲೆ ಸೃಷ್ಟಿಸಿ ಬಾದಾಮಿಯಲ್ಲಿ ಬದಲಾವಣೆಗೆ ಕಾರಣವಾಗುತ್ತಾ ಎಂಬುದು ಕೂಡ ನೋಡಬೇಕಿದೆ. ಒಂದು ವೇಳೆ ಬಿಜೆಪಿ ಒಳಗಿನ ಬಂಡಾಯ ಬೆಂಕಿಯಾದರೆ, ಕೈ-ತೆನೆ ನಡುವೆ ನಿರ್ಣಾಯಕ ಫೈಟ್ ಇರಲಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೆಲಂಗಾಣ ಫಲಿತಾಂಶ: ಕೆಸಿಆರ್ ಸರ್ವಾಧಿಕಾರಕ್ಕೆ ಏಟು; ಕಾಂಗ್ರೆಸ್ ಗ್ಯಾರಂಟಿಗಳಿಗೆ ಓಟು

2014ರಿಂದಲೂ ಕಾಂಗ್ರೆಸ್ ತೆಲಂಗಾಣದ ಗದ್ದುಗೆ ಮೇಲೆ ಕಣ್ಣಿಟ್ಟಿತ್ತು. ಈ ಬಾರಿ ಕರ್ನಾಟಕದಲ್ಲಿ...

ರಾಜಸ್ಥಾನ | ಬಿಜೆಪಿ ವಿರುದ್ಧ ಬಂಡಾಯವೆದ್ದ 26 ವರ್ಷದ ಸ್ವತಂತ್ರ ಅಭ್ಯರ್ಥಿಗೆ ಭಾರಿ ಮುನ್ನಡೆ

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಭಾರಿ...

ರಾಜಸ್ಥಾನ | ಬಿಜೆಪಿ ಮುನ್ನಡೆ ಕಾಯ್ದುಕೊಂಡಂತೆ ಸಿಎಂ ಸ್ಥಾನಕ್ಕೆ ಮೂವರ ಪೈಪೋಟಿ!

ರಾಜಸ್ಥಾನ ರಾಜ್ಯದ 199 ವಿಧಾನಸಭಾ ಕ್ಷೇತ್ರಗಳ ಪೈಕಿ ಮಧ್ಯಾಹ್ನ 12 ಗಂಟೆ...

ಛತ್ತೀಸ್‌ಗಢ ಮತ ಎಣಿಕೆ: ಕ್ಷಣದಿಂದ ಕ್ಷಣಕ್ಕೆ ಕಾಂಗ್ರೆಸ್ – ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿ

ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕುತೂಹಲದಿಂದ ಕೂಡಿದ್ದು ಕಾಂಗ್ರೆಸ್ ಹಾಗೂ...