ಬೆಂಗಳೂರು ಗ್ರಾಮಾಂತರ ಕ್ಷೇತ್ರ | ಕಾಂಗ್ರೆಸ್ – ಜೆಡಿಎಸ್ ಪ್ರಾಬಲ್ಯದಲ್ಲಿ ಬಿಜೆಪಿಯಿಂದ ಅಸ್ತಿತ್ವಕ್ಕಾಗಿ ಹೋರಾಟ  

Date:

ರಾಮನಗರ, ಬೆಂಗಳೂರು ನಗರ ಹಾಗೂ ತುಮಕೂರು ಮೂರು ಜಿಲ್ಲೆಗಳ ಎಂಟು ಕ್ಷೇತ್ರಗಳನ್ನು ಸೇರಿಸಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ರಚಿಸಲಾಗಿದೆ. ಬೆಂಗಳೂರು ದಕ್ಷಿಣ ಹಾಗೂ ರಾಜರಾಜೇಶ್ವರಿ ಹೊರತುಪಡಿಸಿದರೆ ಉಳಿದ ಆರು ಕ್ಷೇತ್ರಗಳಲ್ಲಿ ಕಮಲಕ್ಕೆ ಬಲವಿಲ್ಲ. ಇಲ್ಲೇನಿದ್ದರೂ ಕೈ ಹಾಗೂ ತೆನೆ ಪಕ್ಷಗಳ ನಡುವೆಯೆ ಹೋರಾಟ. ರಾಮನಗರ, ಕನಕಪುರ, ಮಾಗಡಿ ಹಾಗೂ ಕುಣಿಗಲ್‌ನಲ್ಲಿ ಬಿಜೆಪಿಗೆ ಸವಾಲು ಒಡ್ಡುವವರೇ ಇಲ್ಲ. ಚನ್ನಪಟ್ಟಣದಲ್ಲಿ ಹೋರಾಟವಿಲ್ಲದೆ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಆನೇಕಲ್‌ನಲ್ಲಿ ಆಗಾಗ ಗೆಲುವು ಸಾಧಿಸಿದರೂ ಕಾಂಗ್ರೆಸ್ ಪ್ರಬಲವಾಗಿದೆ.  

ಬೆಂಗಳೂರು ದಕ್ಷಿಣ: ಕೃಷ್ಣಪ್ಪನ ಗೆಲುವಿಗೆ ಕಳಪೆ ಅಭಿವೃದ್ಧಿ ಅಡ್ಡಿ

ಬೆಂಗಳೂರು ದಕ್ಷಿಣ ಕ್ಷೇತ್ರ ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ 6.50 ಲಕ್ಷ ಮತದಾರರಿದ್ದಾರೆ. 2018ರ ಚುನಾವಣೆಯಲ್ಲಿ 6.03 ಲಕ್ಷ ಜನ ಮತ ಚಲಾಯಿಸಿದ್ದರು. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯಾದಾಗ ಉತ್ತರಹಳ್ಳಿ ಕ್ಷೇತ್ರದಲ್ಲಿದ್ದ ಕೆಲ ಪ್ರದೇಶವನ್ನು ಒಳಗೊಂಡಂತೆ, ಸುಬ್ರಹ್ಮಣ್ಯಪುರ, ವಸಂತಪುರ, ಯಲಚೇನಹಳ್ಳಿ, ಚುಂಚಘಟ್ಟ, ಬೇಗೂರು, ಕಾಳೇನ ಅಗ್ರಹಾರ, ಗೊಟ್ಟಿಗೆರೆ ಮತ್ತು ಎಲೆಕ್ಟ್ರಾನಿಕ್ ಸಿಟಿಯಿಂದ ಬನ್ನೇರುಘಟ್ಟ, ಜಿಗಣಿಯ ಕೆಲ ಪ್ರದೇಶಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕ್ಷೇತ್ರ ವಿಂಗಡಣೆಯಾದ ನಂತರದ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ತನ್ನ ಹಿಡಿತ ಸಾಧಿಸಿಕೊಂಡು ಬಂದಿದೆ. ಸತತ ಮೂರು ಬಾರಿ ಎಂ. ಕೃಷ್ಣಪ್ಪ ಅವರೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯೂ ಕೃಷ್ಣಪ್ಪ ಅವರೆ ಸ್ಪರ್ಧಿಸಿದ್ದು, ಗೆಲುವು ಸಾಧಿಸುವ ತವಕದಲ್ಲಿದ್ದಾರೆ. ಆದರೆ ಕ್ಷೇತ್ರದಲ್ಲಿರುವ ಹತ್ತಾರು ಸಮಸ್ಯೆಗಳು ಜಯದ ಕನಸಿಗೆ ಅಡ್ಡಿಯಾಗಲಿದೆ.

ಸಂಚಾರಿ ದಟ್ಟಣೆ ಸಮಸ್ಯೆ ಬೆಂಗಳೂರು ದಕ್ಷಿಣ ಕ್ಷೇತ್ರದ ದೊಡ್ಡ ಸಮಸ್ಯೆಯಾಗಿದೆ. ಉತ್ತರಹಳ್ಳಿ, ಕೋಣನಕುಂಟೆ ಕ್ರಾಸ್, ಕನಕಪುರ ರಸ್ತೆಯಲ್ಲಿನ ಸಂಚಾರ ದಟ್ಟಣೆ ಕಿರಿಕಿರಿ ಜನರಿಗೆ ಅಸಮಾಧಾನ ತಂದಿದೆ. ಬಹುತೇಕ ಕಡೆ ರಸ್ತೆಗಳು ಗುಂಡಿ ಬಿದ್ದಿದ್ದು, ವಾಹನ ಓಡಾಟಕ್ಕೆ ಅಡ್ಡಿಯಾಗುತ್ತಿದೆ. ಹಲವು ಕಡೆ ನೀರಿನ ಸಮಸ್ಯೆ ನಿವಾರಣೆಯಾಗಿಲ್ಲ. ಮಳೆ ಬಂದಾಗ ಕೆಲ ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಯಾಗುತ್ತಿದೆ. ಕ್ಷೇತ್ರದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾಗಳು ಕೆರೆ, ಸರ್ಕಾರಿ ಜಮೀನು ಒತ್ತುವರು ಮಾಡಿಕೊಳ್ಳುವುದು ಎಗ್ಗಿಲ್ಲದೆ ಸಾಗುತ್ತಿದೆ. ಇವೆಲ್ಲವು ಚುನಾವಣೆ ಫಲಿತಾಂಶ ಬದಲಾಗಲು ಕಾರಣವಾಗಲಿದೆ.

ಕಾಂಗ್ರೆಸಿನಿಂದ ಕಳೆದ ಬಾರಿ ಪ್ರಬಲ ಪೈಪೋಟಿ ನೀಡಿದ್ದ ಆರ್‌ ಕೆ ರಮೇಶ್ ಸ್ಪರ್ಧಿಸಿದ್ದಾರೆ. ಅಭಿವೃದ್ಧಿ ಸಮಸ್ಯೆಗಳಿಗೆ ಹಿನ್ನಡೆಯುಂಟಾಗಿರುವುದರಿಂದ ಕ್ಷೇತ್ರದ ಮತದಾರರ ತೀರ್ಪು ಈ ಬಾರಿ ‘ಕೈ’ಗೆ ಒಲಿಯುವ ಸಾಧ್ಯತೆ ಬಹುತೇಕ ಹೆಚ್ಚಾಗಿದೆ. 2013ರಲ್ಲಿ ಎರಡನೇ ಸ್ಥಾನ ಪಡೆದಿದ್ದ ಆರ್‌ ಪ್ರಭಾಕರ್ ರೆಡ್ಡಿ ಜೆಡಿಎಸ್‌ನಿಂದ ಮೂರನೇ ಬಾರಿ ಕಣಕ್ಕಿಳಿದಿದ್ದಾರೆ. ಆದರೆ ಜೆಡಿಎಸ್‌ನಿಂದ ಅಂತಹ ಸ್ಪರ್ಧೆ ಕಂಡುಬರುತ್ತಿಲ್ಲ.

1,54,000 ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯ ಕ್ಷೇತ್ರದ ಅತಿದೊಡ್ಡ ವೋಟ್‌ ಬ್ಯಾಂಕ್‌ ಆಗಿದೆ. ಇವರ ನಂತರದಲ್ಲಿ 1,40,000 ಒಕ್ಕಲಿಗರಿದ್ದಾರೆ. ಅವರನ್ನು ಹೊರತುಪಡಿಸಿದರೆ ಇತರೆ ಹಿಂದುಳಿದ ಸಮುದಾಯಗಳ 1,40,000 ಮತದಾರರು ಹಾಗೂ 55,000 ಲಿಂಗಾಯತ, 14,000 ಬ್ರಾಹ್ಮಣ, ವರ್ಗದ ಮತದಾರರಿದ್ದಾರೆ.

ಈ ಸುದ್ದಿ ಓದಿದ್ದೀರಾ? ತುಮಕೂರು ಜಿಲ್ಲೆ | ಕಾಂಗ್ರೆಸ್‌ – ಜೆಡಿಎಸ್‌ ಪ್ರಾಬಲ್ಯದ ನಡುವೆ ಗೆಲುವಿಗಾಗಿ ಬಿಜೆಪಿ ಕಸರತ್ತು

ಆನೇಕಲ್: ಬಿಜೆಪಿ ಭದ್ರಕೋಟೆ ಛಿದ್ರಗೊಳಿಸಿದ್ದ ಶಿವಣ್ಣನಿಗೆ ಹ್ಯಾಟ್ರಕ್‌ ಗೆಲುವಿನ ನಿರೀಕ್ಷೆ!

ಆನೇಕಲ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ. ನೆರೆಯ ತಮಿಳುನಾಡಿನೊಂದಿಗೆ ಉತ್ತಮ ವ್ಯಾಪಾರ ಸಂಬಂಧ ಹೊಂದಿರುವ ಬೆಂಗಳೂರಿನ ನಗರಗಳ ಪೈಕಿ ಆನೇಕಲ್ ಪ್ರಮುಖ ಪಟ್ಟಣವಾಗಿದ್ದು, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಹುಸ್ಕೂರು ಮುಂತಾದ ಕೈಗಾರಿಕಾ ಪ್ರದೇಶಗಳನ್ನು ಕ್ಷೇತ್ರ ಒಳಗೊಂಡಿದೆ. ಹಾಗೆಯೇ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಮುತ್ಯಾಲಮಡುನಂತಹ ಪ್ರವಾಸಿ ತಾಣಗಳು, ಬಯೋಕಾನ್, ಇನ್ಫೋಸಿಸ್‌ನಂತಹ ಜಾಗತಿಕ ಮಟ್ಟದ ಐಟಿ ಕಂಪನಿಗಳು ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿವೆ.

50ರ ದಶಕದಿಂದಲೂ ಹಿಂದಿನ ಹಲವು ಚುನಾವಣೆಗಳನ್ನು ಗಮನಿಸಿದರೆ ಕಾಂಗ್ರೆಸ್ ಇಲ್ಲಿ ಪ್ರಬಲವಾಗಿದೆ. 1994ರಲ್ಲಿ ಕಾಂಗ್ರೆಸ್‌ನ ಸರಪಳಿ ಮುರಿದ ಬಿಜೆಪಿ 20013ರವರೆಗೂ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿತ್ತು. ಬಿಜೆಪಿಯ ಭದ್ರಕೋಟೆಯನ್ನು ಛಿದ್ರಗೊಳಿಸಿದ ಶಿವಣ್ಣ, ನಾಲ್ಕು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದ ಎ ನಾರಾಯಣಸ್ವಾಮಿಯವರನ್ನು ಸೋಲಿಸಿ ಸತತ ಎರಡು ಬಾರಿಯಿಂದ ಶಾಸಕರಾಗಿದ್ದಾರೆ. ಹಲವು ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿರುವ ಶಿವಣ್ಣ ಅವರಿಗೆ ಈ ಬಾರಿಯೂ ಟಿಕೆಟ್ ನೀಡಲಾಗಿದೆ.

ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಹುಲ್ಲಳ್ಳಿ ಶ್ರೀನಿವಾಸ್‌ ಅವರಿಗೆ ಈ ಬಾರಿ ಟಿಕೆಟ್ ನೀಡಲಾಗಿದ್ದು, ಶಿವಣ್ಣನವರ ಓಟದ ಮುಂದೆ ಕ್ಷೇತ್ರದಲ್ಲಿ ಶ್ರೀನಿವಾಸ್ ವೇಗ ಅಷ್ಟಾಗಿಲ್ಲ. ಆನೇಕಲ್‌ನ ನಗರಸಭೆ ಸದಸ್ಯರಾದ ಕೆ ಪಿ ರಾಜು ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಆದರೆ ಜೆಡಿಎಸ್‌ಗೆ ಈ ಕ್ಷೇತ್ರದಲ್ಲಿ ನೆಲೆಯಿಲ್ಲ.

ಎಸ್‌ಸಿಎಸ್‌ಟಿ ಸಮುದಾಯದ ಜೊತೆ ವಲಸಿಗ ಮತದಾರರು ಈ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಇದ್ದಾರೆ. ಇವರ ಜೊತೆಗೆ ಖಾಸಗಿ ಕಂಪನಿಗಳ ಉದ್ಯೋಗಿಗಳು ಮತ್ತು ರೈತಾಪಿ ವರ್ಗವೂ ಅಭ್ಯರ್ಥಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ.

ಈ ಸುದ್ದಿ ಓದಿದ್ದೀರಾ? ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ | ಒಕ್ಕಲಿಗರ ಕೋಟೆಯಲ್ಲಿ ಅನ್ಯ ಭಾಷಿಕರೆ ಗೆಲುವಿನ ನಿರ್ಣಾಯಕರು

ಮಾಗಡಿ: ಬಿಜೆಪಿ ಬಂಡಾಯದಲ್ಲಿ ಕಾಂಗ್ರೆಸಿಗೆ ಲಾಭ!

ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಹುಟ್ಟೂರು, ಸಿದ್ಧಗಂಗಾ ಮಠದ ಶತಾಯುಷಿಗಳಾಗಿದ್ದ ಶಿವಕುಮಾರ ಸ್ವಾಮೀಜಿಯ ಜನ್ಮಸ್ಥಳ, ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕನ ಕರ್ಮ ಭೂಮಿ ಎಲ್ಲವೂ ಇರುವ ಕ್ಷೇತ್ರ ಮಾಗಡಿ ವಿಧಾನಸಭಾ ಕ್ಷೇತ್ರ. ಇವುಗಳ ಜೊತೆ ಕೆಂಪೇಗೌಡರ ಕೋಟೆ, ಸಾವನದುರ್ಗ ಬೆಟ್ಟ, ಹೀಗೆ ಹತ್ತು ಹಲವು ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳೂ ಮಾಗಡಿ ತಾಲೂಕಿನಲ್ಲಿವೆ.

ಕುಟುಂಬ ರಾಜಕಾರಣಕ್ಕೆ ನೆಲೆ ಒದಗಿಸಿರುವ ಕ್ಷೇತ್ರಗಳಲ್ಲಿ ಇದೂ ಒಂದಾಗಿದ್ದು, ಮಾಗಡಿಯಲ್ಲಿ ಪ್ರತಿನಿಧಿಸಿದ್ದ ಎಚ್‌.ಜಿ. ಚನ್ನಪ್ಪ ಮೂರು ಬಾರಿ, ಇವರ ಪುತ್ರ ಎಚ್‌ ಸಿ ಬಾಲಕೃಷ್ಣ ನಾಲ್ಕು ಬಾರಿ ಆಯ್ಕೆಯಾಗಿ ಒಟ್ಟು ಮೂರು ದಶಕಗಳಿಗೂ ಹೆಚ್ಚುಕಾಲ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 2004, 2008 ಮತ್ತು 2013ರ ಚುನಾವಣೆಯಲ್ಲಿ ಎಚ್.ಸಿ. ಬಾಲಕೃಷ್ಣರವರು ಜೆಡಿಎಸ್‌ನಿಂದ ಸ್ಪರ್ಧಿಸಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿದ್ದರು.

ರಾಜಕೀಯ ಮೇಲಾಟದಲ್ಲಿ 2018ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಕಾರಣ ಸಾಂಪ್ರದಾಯಿಕ ಜೆಡಿಎಸ್‌ ಮತಗಳಿಂತ ವಂಚಿತರಾಗಿ, ಕೈ ಪಕ್ಷದಿಂದ ತೆನೆ ಪಕ್ಷಕ್ಕೆ ಜಿಗಿದಿದ್ದ ಎ ಮಂಜುನಾಥ್ ವಿರುದ್ಧ ಭಾರಿ ಅಂತರದಿಂದ ಸೋತಿದ್ದರು. ಬಾಲಕೃಷ್ಣ ಮತ್ತೆ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದು, ತಾವು ತಾಲೂಕಿಗೆ ಮಾಡಿದ ಅಭಿವೃದ್ಧಿಯ ವಿನಾ ಬೇರೆ ಯಾವ ಪ್ರಗತಿಯು ಆಗಿಲ್ಲ ಎಂದು ಮತದಾರರ ಮನವೊಲಿಸುತ್ತಿದ್ದಾರೆ. ಅಲ್ಲದೆ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿರುವ ಹೆಚ್‌ ಎಂ ಕೃಷ್ಣಮೂರ್ತಿ ಕೂಡ ಬಾಲಕೃಷ್ಣರೊಂದಿಗೆ ಪ್ರಚಾರ ನಡೆಸುತ್ತಿರುವ ಕಾರಣ ಕಾಂಗ್ರೆಸ್‌ಗೆ ಲಾಭವಾಗುವ ಸಾಧ್ಯತೆಯೆ ಹೆಚ್ಚು.

ಜೆಡಿಎಸ್‌ನಿಂದ ಹಾಲಿ ಶಾಸಕ ಎ ಮಂಜುನಾಥ್ ಸ್ಪರ್ಧಿಸುತ್ತಿದ್ದು, ಕ್ಷೇತ್ರಕ್ಕೆ ಹೆಚ್ಚಿನದೇನು ಅನುದಾನ ದೊರೆಯದಿರುವುದರಿಂದ ಮತದಾರರಲ್ಲಿ ಅಸಮಾಧಾನವಿದೆ. ಇದು ಕೈ ಪಕ್ಷಕ್ಕೆ ವರದಾನವಾಗಲಿದೆ. ಬಿಜೆಪಿಯು ಹೊಸ ಮುಖ ಪ್ರಸಾದ್‌ ಗೌಡ ಎಂಬುವವರಿಗೆ ಟಿಕೆಟ್ ನೀಡಿದೆ. ಪ್ರಭಾವಿ ನಾಯಕರ ಒಲವಿನಿಂದ ಟಿಕೆಟ್ ಗಟ್ಟಿಸಿದ್ದಾರೆ ಎಂಬುದು ಸ್ಥಳೀಯ ಬಿಜೆಪಿ ನಾಯಕರ ಸಿಟ್ಟಿಗೆ ಕಾರಣವಾಗಿದೆ. ಇವೆಲ್ಲವೂ ಕಾಂಗ್ರೆಸ್‌ಗೆ ವರದಾನವಾಗಲಿದೆ.

ಮಾಗಡಿ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ ಬಹುಸಂಖ್ಯಾತ ವರ್ಗವಾಗಿದೆ. 70,000 ಮತದಾರರನ್ನು ಹೊಂದಿರುವ ಈ ಸಮುದಾಯ ಚುನಾವಣೆಯ ನಿರ್ಣಾಯಕ ಶಕ್ತಿ. ಉಳಿದಂತೆ ದಲಿತರು 30,000 ಮತಗಳನ್ನು ಹೊಂದಿ ಎರಡನೇ ಸ್ಥಾನದಲ್ಲಿದ್ದರೆ, ವೀರಶೈವರು 16,000, ಮುಸ್ಲಿಮರು 13,000 ಹಾಗೂ ಇತರ ಹಿಂದುಳಿದ ಸಮುದಾಯಗಳ 10000 ಸಾವಿರ ಮತಗಳು ಇಲ್ಲಿವೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ಕೇಂದ್ರ | ಎಂಟು ಕ್ಷೇತ್ರಗಳಲ್ಲೂ ಬಲಿಷ್ಠವಾಗಿರುವ ಕಾಂಗ್ರೆಸ್, ಕಷ್ಟಪಡುತ್ತಿರುವ ಕಮಲ  

ರಾಮನಗರ: ಜೆಡಿಎಸ್‌ ಓಟಕ್ಕೆ ಕಾಂಗ್ರೆಸ್ ಲಗಾಮು ಹಾಕುವುದೇ?

ರೇಷ್ಮೆ ನಗರಿ ಎಂದು ಖ್ಯಾತವಾಗಿರುವ ಕ್ಷೇತ್ರ ರಾಮನಗರ. ರಾಜ್ಯದ ಶಕ್ತಿಸೌಧವೆಂದು ಕರೆಯಲ್ಪಡುವ ವಿಧಾನಸೌಧದ ನಿರ್ಮಾತೃ, ಕೆಂಗಲ್‌ ಹನುಮಂತಯ್ಯ ಹಾಗೂ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರ ಕುಟುಂಬ ರಾಜಕಾರಣದ ಭದ್ರ ನೆಲೆ ರಾಮನಗರ. ಇದೇ ಕ್ಷೇತ್ರವನ್ನು ಪ್ರತಿನಿಧಿಸಿದ ಕೆಂಗಲ್‌ ಹನುಮಂತಯ್ಯ, ಹೆಚ್‌ ಡಿ ದೇವೇಗೌಡ ಹಾಗೂ ಹೆಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ.

1994ರಿಂದ ರಾಮನಗರ ಕ್ಷೇತ್ರ ದೇವೇಗೌಡ ಕುಟುಂಬದ ಭದ್ರಕೋಟೆ. 1994ರಲ್ಲಿ ದೇವೇಗೌಡರು ರಾಮನಗರದಿಂದಲೇ ಸ್ವರ್ಧೆ ಮಾಡಿ ಗೆಲುವು ಸಾಧಿಸಿ ಮುಖ್ಯಮಂತ್ರಿ ಆಗಿದ್ದರು. 2004 ರಲ್ಲಿ ಗೆಲುವು ಸಾಧಿಸಿದ್ದ ಕುಮಾರಸ್ವಾಮಿ 2006ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ನಂತರ 2018ರಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಹೆಚ್‌ಡಿಕೆ ಎರಡು ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿ, ನಂತರ ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡು ರಾಮನಗರಕ್ಕೆ ರಾಜೀನಾಮೆ ಕೊಟ್ಟಿದ್ದರು. ಉಪಚುನಾವಣೆ ವೇಳೆ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿದ್ದರು.

ಪ್ರಸ್ತುತ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯತ್ತ ಮೂರು ಪಕ್ಷಗಳು ದೃಷ್ಟಿ ನೆಟ್ಟಿವೆ. ಜೆಡಿಎಸ್‌ ಪ್ರಾಬಲ್ಯ ಹೊಂದಿದ್ದರೂ ಈಗಲೂ ರಾಮನಗರದ ಕೆಲವು ಭಾಗಗಳಲ್ಲಿ ಕಾಂಗ್ರೆಸ್ ಹಿಡಿತ ಸಾಧಿಸಿದೆ. ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ ಎಂಬ ಆರೋಪಗಳ ನಡುವೆಯೂ ಈ ಬಾರಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟು ಅನಿತಾ ಕುಮಾರಸ್ವಾಮಿ ಅವರು ರಾಜಕೀಯದಿಂದ ದೂರ ಉಳಿದಿದ್ದಾರೆ.  

ಕಳೆದ ಬಾರಿ ಪರಾಭವಗೊಂಡಿದ್ದ ಇಕ್ಬಾಲ್ ಹುಸೇನ್ ಕಾಂಗ್ರೆಸ್‌ನಿಂದ ಮತ್ತೆ ಸ್ಪರ್ಧೆ ಮಾಡಿದ್ದಾರೆ. ರಾಮನಗರ ಜಿಲ್ಲೆಯವರಾದ ಇಕ್ಬಾಲ್ ಹುಸೇನ್ ಅವರು ಕುಮಾರಸ್ವಾಮಿಯವರಂತೆ ಜಿಲ್ಲೆಯ ನಾಡಿಮಿಡಿತ ಅರಿತವರು. ತಮಗೆ ಅವಕಾಶ ನೀಡಿದರೆ ನಿಮ್ಮ ಮನೆ ಮಗನಂತೆ ದುಡಿಯುತ್ತೇನೆ ಎಂದು ಭಾವನಾತ್ಮಕವಾಗಿ ಜನಗಳನ್ನು ಸೆಳೆಯುತ್ತಿದ್ದಾರೆ. ಕ್ಷೇತ್ರದಲ್ಲಿ ನೆಲೆಯಿಲ್ಲದ ಬಿಜೆಪಿ ಹೊಸ ಮುಖ ಗೌತಮ್ ಗೌಡ ಎಂಬುವರಿಗೆ ಟಿಕೆಟ್ ನೀಡಿದೆ. ಸ್ಪರ್ಧೆ ಏನಿದ್ದರೂ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಮಾತ್ರ ನಡೆಯಲಿದೆ.

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರು ಸಂಖ್ಯಾಬಲದಲ್ಲಿ ಮುಂದಿದ್ದು, ಇವರೊಂದಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡ, ಲಿಂಗಾಯತ, ಅಲ್ಪಸಂಖ್ಯಾತರು ಹಾಗೂ ಕುರುಬ ಸಮುದಾಯದವರೂ ಅಭ್ಯರ್ಥಿ ಭವಿಷ್ಯ ನಿರ್ಧರಿಸುವಲ್ಲಿ ನಿರ್ಣಾಯಕರಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ದಕ್ಷಿಣ | ಕಾಂಗ್ರೆಸ್, ಬಿಜೆಪಿ ಸೆಣಸಾಟದಲ್ಲಿ ಜೆಡಿಎಸ್‌ ನಗಣ್ಯ

ಕನಕಪುರ: ಡಿಕೆಶಿ ಹಣಿಯಲು ಬಿಜೆಪಿ ತಂತ್ರ ಸಫಲವಾಗುವುದೇ?

ಕನಕಪುರ ಲೋಕಸಭಾ ಕ್ಷೇತ್ರದಲ್ಲಿದ್ದ ಸಾತನೂರು ವಿಧಾನಸಭಾ ಕ್ಷೇತ್ರ. 2008ರ ಕ್ಷೇತ್ರ ವಿಂಗಡಣೆ ವೇಳೆ ತನ್ನ ಅಸ್ತಿತ್ವ ಕಳೆದುಕೊಂಡು ಕನಕಪುರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳೊಂದಿಗೆ ವಿಲೀನವಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಾತನೂರು ಕ್ಷೇತ್ರದಲ್ಲಿ ಸತತ ನಾಲ್ಕು ಗೆಲುವು ದಾಖಲಿಸಿದ್ದರು. ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕೂಡ ಒಂದೊಂದು ಬಾರಿ ಇದೇ ಕ್ಷೇತ್ರದಿಂದ ಆರಿಸಿ ಬಂದಿದ್ದರು.

ಕ್ಷೇತ್ರ ವಿಂಗಡಣೆಗೂ ಮೊದಲು ಜನತಾ ಪರಿವಾರದಿಂದ ಮಜಿ ಸಚಿವ ಪಿ ಜಿ ಆರ್‌ ಸಿಂಧಿಯಾ ಆರು ಬಾರಿ ಆಯ್ಕೆಯಾಗಿದ್ದರೆ, ಪ್ರಸ್ತುತ ಡಿ ಕೆ ಶಿವಕುಮಾರ್ 2008ರಿಂದ ಕಾಂಗ್ರೆಸ್‌ನಿಂದ ಮೂರು ಬಾರಿ ಚುನಾಯಿತರಾಗಿದ್ದಾರೆ. ಕನಕಪುರದ ಮತದಾರರು ಇಲ್ಲಿಯವರೆಗೂ ಕಾಂಗ್ರೆಸ್ ಹಾಗೂ ಜನತಾ ಪರಿವಾರದ ಅಭ್ಯರ್ಥಿಗಳು ಮಾತ್ರ ಮಣೆ ಹಾಕಿದ್ದಾರೆ. ಆದರೆ ಡಿಕೆ ಶಿವಕುಮಾರ್ ಆಗಮನದ ನಂತರ ಕಳೆದ 20 ವರ್ಷದಿಂದ ಕಾಂಗ್ರೆಸ್ ಭದ್ರಕೋಟೆಯಾಗಿ ಮಾರ್ಪಾಡಾಗಿದೆ. ಇಲ್ಲಿ ಬಿಜೆಪಿ ಸ್ಪರ್ಧೆ ಹೆಸರಿಗೆ ಸೀಮಿತವಾಗಿತ್ತು. ಒಮ್ಮೆಯೂ ಠೇವಣಿ ಪಡೆದಿಲ್ಲ.

ಆದರೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಹಣಿಯಲು ಈ ಬಾರಿ ಬಿಜೆಪಿ ಭರ್ಜರಿ ಯೋಜನೆ ರೂಪಿಸಿದೆ. ಇದೇ ಕಾರಣಕ್ಕೆ ಕನಕಪುರವು ಹೈವೋಲ್ಟೇಜ್‌ ಕ್ಷೇತ್ರವಾಗಿ ಬದಲಾಗಿದೆ. ಡಿಕೆಶಿಗೆ ಎದುರಾಳಿಯಾಗಿ ಬಿಜೆಪಿಯಿಂದ ಪ್ರಭಾವಿ ನಾಯಕ ಆರ್‌ ಅಶೋಕ್‌ ಅವರನ್ನು ಕಣಕ್ಕಿಳಿಸಲಾಗಿದೆ. ಒಕ್ಕಲಿಗರೇ ನಿರ್ಣಾಯಕರಾಗಿರುವ ಕ್ಷೇತ್ರದಲ್ಲಿ ಒಂದಿಷ್ಟು ಸ್ಪರ್ಧೆಯನ್ನು ಕಾಣಬಹುದು. ಆದರೆ ಕ್ಷೇತ್ರದ ಅಭಿವೃದ್ಧಿ ಹಾಗೂ ಹಿಡಿತ ಹೊಂದಿರುವ ಕಾರಣ ಕೆಪಿಸಿಸಿ ಅಧ್ಯಕ್ಷರನ್ನು ಮಣಿಸುವುದು ಅಷ್ಟು ಸುಲಭವಲ್ಲ. ಪ್ರತಿ ಗ್ರಾಮದಲ್ಲೂ ದಿನವಿಡಿ ಬೆವರು ಸುರಿಸಿ ಕೆಲಸ ಮಾಡುವ ಕೈ ಕಾರ್ಯಕರ್ತರ ಪಡೆ ಅವರ ಹಿಂದೆ ಇದೆ. ಕಾರ್ಯಕರ್ತರ ವಿಚಾರದಲ್ಲಿ ಬಿಜೆಪಿ ಹಿಂದಿರುವುದು ಹಾಗೂ ಜೆಡಿಎಸ್ ಅಷ್ಟೇನು ಪ್ರಭಾವಿಯಲ್ಲದ ನಾಗರಾಜು ಎಂಬ ಅಭ್ಯರ್ಥಿಗೆ ಟಿಕೆಟ್ ನೀಡಿರುವುದು ಕಾಂಗ್ರೆಸ್‌ಗೆ ಲಾಭವೇ ಆಗಲಿದೆ.    

ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ ಇಲ್ಲಿ ಒಕ್ಕಲಿಗರು 99,567, ದಲಿತರು 44341, ಮುಸ್ಲಿಮರು 22,500, ಲಿಂಗಾಯತರು 18,500, ಕುರುಬರು 5,600, ತಿಗಳರು 10,500, ಕ್ರೈಸ್ತರು 2,507, ಬೆಸ್ತರು 6000, ಹಾಗೂ ಇತರೆ ಸಮುದಾಯದ 9400 ಮತದಾರರಿದ್ದಾರೆ. ಅಭ್ಯರ್ಥಿಗಳ ಗೆಲುವಿನಲ್ಲಿ ಒಕ್ಕಲಿಗರ ಮತಗಳೆ ನಿರ್ಣಾಯಕ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ಉತ್ತರ | ಕಾಂಗ್ರೆಸ್ – ಬಿಜೆಪಿ ನೇರ ಹಣಾಹಣಿ, ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಪೈಪೋಟಿ

ಚನ್ನಪಟ್ಟಣ: ಜೆಡಿಎಸ್‌ – ಬಿಜೆಪಿ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಕಾಂಗ್ರೆಸ್‌ಗೆ ಲಾಭವಾಗುವುದೇ?

ಮರದ ಕರಕುಶಲ ವಸ್ತುಗಳಿಗೆ, ಮರದ ಗೊಂಬೆ ಮತ್ತು ಆಟಿಕೆಗಳಿಗೆ ಚನ್ನಪಟ್ಟಣ ಸುಪ್ರಸಿದ್ದ. ಬೊಂಬೆ ನಗರವೆಂತಲೂ ಖ್ಯಾತಿ. ವಿಧಾನಸೌಧ ನಿರ್ಮಾತೃ ಕೆಂಗಲ್‌ ಹನುಮಂತಯ್ಯವರ ಹುಟ್ಟೂರು ಇರುವುದು ಈ ಕ್ಷೇತ್ರದ ವ್ಯಾಪ್ತಿಯಲ್ಲೇ. ಮೈಸೂರು ಒಡೆಯರ ಆಳ್ವಿಕೆಯ ಕಾಲದಲ್ಲಿ ಇದು ಸೇನಾ ನೆಲೆಯಾಗಿತ್ತು. ಮೈಸೂರು ಅರಸ ಹೈದರಾಲಿಯ ಗುರು ಅಕ್ಮಲ್ ಶಾ ಖಾದ್ರಿಯ ಮಸೀದಿಯೂ ಚನ್ನಪಟ್ಟಣದಲ್ಲಿದೆ.

ರಾಜಕೀಯವಾಗಿ ನೋಡಿದರೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎನ್ನುವುದನ್ನು ತೋರಿಸಿದ ಕ್ಷೇತ್ರಗಳಲ್ಲಿ ಚನ್ನಪಟ್ಟಣ ಕೂಡ ಒಂದು. ಆರಂಭದಲ್ಲಿ ಕಾಂಗ್ರೆಸ್‌ನ ಹಿಡಿತದಲ್ಲಿದ್ದ ಈ ಕ್ಷೇತ್ರದ ರಾಜಕೀಯ ಸ್ವರೂಪ ಬದಲಿಸಿದವರು ಸಿ ಪಿ ಯೋಗೇಶ್ವರ್‌. ಸಿನೆಮಾ ನಟನಾಗಿ ಹೆಸರು ಮಾಡಿದ್ದ ಯೋಗೇಶ್ವರ್‌ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1999ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದ ಅವರು, 2004 ಮತ್ತು 2008ರಲ್ಲಿ ಕಾಂಗ್ರೆಸ್‌ನಿಂದ ಜಯಗಳಿಸಿದ್ದರು.  2011ರಲ್ಲಿ ಬಿಜೆಪಿ, 2013ರಲ್ಲಿ ಎಸ್‌ಪಿ ಚಿಹ್ನೆಯಡಿ ಸ್ಪರ್ಧಿಸಿ ಗೆಲುವು ಕಂಡಿದ್ದರು. 2018 ರಲ್ಲಿ ಕುಮಾರಸ್ವಾಮಿ ಎದುರು ಸೋತಿದ್ದರು.  

ಈಗ ಪ್ರಸ್ತುತ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರಗಳ ಪೈಕಿ ಚನ್ನಪಟ್ಟಣ ಕೂಡ ಒಂದಾಗಿದೆ. ಕುಮಾರಸ್ವಾಮಿ ಎದುರು ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಅವರೆ ಸ್ಪರ್ಧಿಸಿದ್ದಾರೆ. ಒಟ್ಟಾರೆ ಕ್ಷೇತ್ರದಲ್ಲಿ ಜೆಡಿಎಸ್ ವರ್ಸಸ್ ಬಿಜೆಪಿ ಎನ್ನುವುದಕ್ಕಿಂತಲೂ ಕುಮಾರಸ್ವಾಮಿ ವರ್ಸಸ್ ಯೋಗೇಶ್ವರ್ ಎನ್ನುವಂತಾಗಿದೆ.

ಆದರೆ ಇವರಿಬ್ಬರ ನಡುವೆ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಸ್ಥಳೀಯ ನಾಯಕ ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ ಮತದಾರರ ಅನುಕಂಪ ಗಳಿಸಿ ಅಚ್ಚರಿಯ ಫಲಿತಾಂಶ ನೀಡಿದರೆ ಅಚ್ಚರಿಯೇನಿಲ್ಲ. ಜಾತಿವಾರು ನೋಡಿದರೆ ಒಕ್ಕಲಿಗ ಮತದಾರರ ಬಲ ಹೊಂದಿರುವ ಈ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಎರಡನೇ ಸ್ಥಾನದಲ್ಲಿದ್ದರೆ ದಲಿತರು ಮೂರನೇ ಸ್ಥಾನದಲ್ಲಿದ್ದು ನಿರ್ಣಾಯಕವಾಗಿವೆ. ಇನ್ನೊಂದು ವಿಶೇಷವೆಂದರೆ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿರುವುದು ಈ ಕ್ಷೇತ್ರದ ವೈಶಿಷ್ಟ್ಯ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಏಮ್ಸ್ ಮಂಜೂರು ಮಾಡದಿದ್ದರೆ ಚುನಾವಣೆ ಬಹಿಷ್ಕಾರ; ಎಚ್ಚರಿಕೆ

ಕಳೆದ ಎರಡು ವರ್ಷಗಳಿಂದ ಏಮ್ಸ್ ಮಂಜೂರಾತಿಗೆ ಸತತ ಹೋರಾಟ ನಡೆಸುತ್ತಿದ್ದರೂ ಕೇಂದ್ರ...

ವಿಜಯಪುರ | ಲೋಕಸಭಾ ಚುನಾವಣೆ – ಭಾವನೆ ಕೆರಳಿಸುವ v/s ಬದುಕು ರೂಪಿಸುವ ಸಂಘರ್ಷ: ಸಚಿವ ಎಚ್.ಕೆ ಪಾಟೀಲ್‌

ಭಾವನೆ ಕೆರಳಿಸುವ ಹಾಗೂ ಬದುಕು ರೂಪಿಸುವ ನಡುವಿನ ಸಂಘರ್ಷದ ಲೋಕಸಭೆ ಚುನಾವಣೆ...

ಲೋಕಸಭಾ ಚುನಾವಣೆ | ಕಲಬುರಗಿಯಲ್ಲಿ ಅಳಿಯನ ಸ್ಪರ್ಧೆ – ಮಾವನಿಗೆ ಪ್ರತಿಷ್ಠೆ

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಮ್ಮ ತವರು ರಾಜ್ಯ ಕರ್ನಾಟಕದಲ್ಲಿ...

ಕಾಂಗ್ರೆಸ್‌ ಪ್ರತಿಭಟನೆ | ಬರ ಪರಿಹಾರ ನೀಡಿ, ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿ: ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾಗಿರುವ ಬರ ಪರಿಹಾರದಲ್ಲಿ ತಾರತಮ್ಯ ವಿರೋಧಿಸಿ...