ಚಾಮರಾಜನಗರ | ಕಾಂಗ್ರೆಸ್‌ಗೆ ನಾಲ್ಕೂ ಕ್ಷೇತ್ರ ಗೆಲ್ಲುವ ತವಕ; ಬಿಜೆಪಿ-ಜೆಡಿಎಸ್‌ಗೆ ಆತಂಕ

Date:

ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ, ಅಧಿಕಾರ ಪಡೆಯಲು ಕಾಂಗ್ರೆಸ್‌ ಮತ್ತು ಕಿಂಗ್‌ ಮೇಕರ್‌ ಆಗಲು ಜೆಡಿಎಸ್‌ ಹವಣಿಸುತ್ತಿವೆ. ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಮೂರು ಪಕ್ಷಗಳು ಅಣಿಯಾಗಿವೆ.

ವಿಧಾನಸಭಾ ಚುನಾವಣೆಗೆ ಇನ್ನೈದು ದಿನಗಳಷ್ಟೇ ಬಾಕಿ ಇವೆ. ಬಿಜೆಪಿ-ಕಾಂಗ್ರೆಸ್‌ನ ರಾಷ್ಟ್ರ ನಾಯಕರು ರಾಜ್ಯದಲ್ಲೇ ಬೀಡು ಬಿಟ್ಟವರಂತೆ ರಾಜ್ಯದ ನಾನಾ ಭಾಗಗಳಲ್ಲಿ ಸುತ್ತುತ್ತಿದ್ದಾರೆ. ಪ್ರಮುಖ ಪ್ರಾದೇಶಿಕ ಪಕ್ಷ ಜೆಡಿಎಸ್‌ ನಾಯಕರೂ ಕೂಡ ಕೈ-ಕಮಲ ನಾಯಕರ ಪ್ರಚಾರಕ್ಕೆ ಸಡ್ಡು ಹೊಡೆದು ತಮ್ಮ ಪ್ರಾಬಲ್ಯ ತೋರಿಸಲು ಯತ್ನಿಸುತ್ತಿದ್ದಾರೆ. ಈ ಮೂರು ಪಕ್ಷಗಳಿಗೆ ಇನ್ನಿತರೆ ಕೆಲವು ಪಕ್ಷಗಳು ಕೆಲವು ಕ್ಷೇತ್ರಗಳಲ್ಲಿ ಪೈಪೋಟಿ ನೀಡುತ್ತಿವೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ, ಅಧಿಕಾರ ಪಡೆಯಲು ಕಾಂಗ್ರೆಸ್‌ ಮತ್ತು ಕಿಂಗ್‌ ಮೇಕರ್‌ ಆಗಲು ಜೆಡಿಎಸ್‌ ಅವಣಿಸುತ್ತಿವೆ. ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಮೂರು ಪಕ್ಷಗಳು ಪೈಪೋಟಿಗೆ ಬಿದ್ದಿವೆ.

ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯಲ್ಲಿ ಸದ್ಯಕ್ಕೆ ಜೆಡಿಎಸ್‌ಗೆ ನೆಲೆಯಿಲ್ಲ. ನಾಲ್ಕು ಕ್ಷೇತ್ರಗಳೂ ಕಾಂಗ್ರೆಸ್‌ನ ಭದ್ರಕೋಟೆಯಂತಿದ್ದರೂ, ಸದ್ಯ ಹನೂರು ಮತ್ತು ಚಾಮರಾಜಗರ ಎರಡು ಕ್ಷೇತ್ರಗಳಷ್ಟೇ ಕಾಂಗ್ರೆಸ್‌ ತೆಕ್ಕೆಯಲ್ಲಿವೆ. ಗುಂಡ್ಲುಪೇಟೆ ನೇರವಾಗಿ ಬಿಜೆಪಿ ತೆಕ್ಕೆಯಲ್ಲಿದ್ದರೆ, ಕೊಳ್ಳೇಗಾಲ ಬಿಎಸ್‌ಪಿಯಿಂದ ಗೆದ್ದು ಬಿಜೆಪಿ ಸೇರಿರುವ ಎನ್‌ ಮಹೇಶ್‌ ಕಾರಣಕ್ಕಾಗಿ ಬಿಜೆಪಿಯ ವಶದಲ್ಲಿದೆ.

ಈ ಬಾರಿ ನಾಲ್ಕು ಕ್ಷೇತ್ರಗಳನ್ನೂ ಗೆಲ್ಲಬೇಕೆಂದು ಕಾಂಗ್ರೆಸ್‌ ಯತ್ನಿಸುತ್ತಿದೆ. ಅದಕ್ಕಾಗಿ ಭಾರೀ ಕಸರತ್ತು ನಡೆಸುತ್ತಿದೆ. ತನ್ನ ತೆಕ್ಕೆಯಲ್ಲೇ ಇರುವ ಎರಡು ಕ್ಷೇತ್ರಗಳಲ್ಲಿ ತಮ್ಮ ಸಾಧನೆಗಳ ಕುರಿತು ಹೆಚ್ಚಾಗಿ ಹೇಳಿಕೊಳ್ಳುತ್ತಿರುವ ಕೈ ಪಡೆ, ಬಿಜೆಪಿ ವಶಲ್ಲಿರುವ ಮತ್ತೆರಡು ಕ್ಷೇತ್ರಗಳನ್ನೂ ಗೆಲ್ಲಲು ಕಸರತ್ತು ನಡೆಸುತ್ತಿದೆ. ಎನ್ ಮಹೇಶ್‌ ಅವರನ್ನು ನಂಬಿಕೆ ದ್ರೋಹಿ ಎಂದು ಬಿಂಬಿಸುತ್ತಾ, ಬಿಜೆಪಿ ಆಡಳಿತ ವೈಫಲ್ಯಗಳನ್ನು ಬೆಟ್ಟು ಮಾಡಿ ತೋರಿಸುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಚಾಮರಾಜನಗರ

ಚಾಮರಾಜನಗರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಆಪ್ತ, ಉಪ್ಪಾರ ಸಮುದಾಯದ ಮುಖಂಡ, ಕಾಂಗ್ರೆಸ್‌ ಹಾಲಿ ಶಾಸಕ ಸಿ ಪುಟ್ಟರಂಗಶೆಟ್ಟಿ ಸತತ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ತಮ್ಮ ನಾಲ್ಕನೇ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದಾರೆ.

ಕ್ಷೇತ್ರದಲ್ಲಿ ಪುಟ್ಟರಂಗ ಶೆಟ್ಟಿ ವಿರುದ್ಧ ಹಲವು ದಲಿತ ಮುಖಂಡರು ಸಿಟ್ಟಾಗಿದ್ದಾರೆ. ಶಾಸಕರಾಗಿ ಶೆಟ್ಟಿ ಕ್ಷೇತ್ರದ ಜನರಿಗಾಗಿ ಕೆಲಸ ಮಾಡಿಲ್ಲವೆಂಬ ಆರೋಪಗಳೂ ಇವೆ. ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ, ವಸತಿ ಸಚಿವ ವಿ ಸೋಮಣ್ಣ ಮತ್ತು ಜೆಡಿಎಸ್‌ನಿಂದ ಮಲ್ಲಿಕಾರ್ಜುನಸ್ವಾಮಿ ಕಣದಲ್ಲಿದ್ದಾರೆ.

ಸೋಮಣ್ಣ ಅವರಿಗೆ ಚಾಮರಾಜನಗರ ಕ್ಷೇತ್ರದ ಮೇಲೆ ಅಷ್ಟೊಂದು ಆಸಕ್ತಿ ಇಲ್ಲದಿದ್ದರೂ, ಬಿಜೆಪಿ ಹೈಕಮಾಂಡ್‌ ಬಲವಂತವಾಗಿ ಅವರನ್ನು ಚಾಮರಾಜನಗರ ಮತ್ತು ವರುಣಾ ಕ್ಷೇತ್ರಗಳಲ್ಲಿ ಕಣಕ್ಕಿಸಿದೆ. ಸದ್ಯ ಸೋಮಣ್ಣರ ಪರಿಸ್ಥಿತಿ ಎರಡು ದೋಣಿಗಳ ಮೇಲೆ ಕಾಲಿಟ್ಟಂತಾಗಿದೆ. ಅವರ ರಾಜಕೀಯ ಭವಿಷ್ಯಕ್ಕಾಗಿ ಎರಡರಲ್ಲಿ ಒಂದಾದರೂ ಗೆಲ್ಲಲೇಬೇಕಾದ ಅಗತ್ಯವಿದೆ. ಆದರೆ, ಎರಡೂ ಕ್ಷೇತ್ರಗಳಲ್ಲಿಯೂ ಗೆಲ್ಲುವುದು ಅವರಿಗೆ ಅಷ್ಟು ಸುಲಭವಲ್ಲ.

ಕ್ಷೇತ್ರದ ರಾಜಕೀಯ ಇತಿಹಾಸ ತಿಳಿಯಲು ಈ ವರದಿ ಓದಿ: ಸತತ ಗೆಲುವು ಕಂಡ ಅಭ್ಯರ್ಥಿಗಳನ್ನು ಕೊಟ್ಟರೂ ಮಂತ್ರಿ ಭಾಗ್ಯ ಕಾಣದ ಕ್ಷೇತ್ರ ಚಾಮರಾಜನಗರ

ಈ ನಡುವೆ ಬಿಜೆಪಿಯಲ್ಲಿ ತಮಗೆ ಟಿಕೆಟ್‌ ಸಿಕ್ಕಿಲ್ಲವೆಂದು ಮಾಜಿ ಎಂಎಲ್‌ಸಿ ಮಲ್ಲಿಕಾರ್ಜುನಪ್ಪ ಅಸಮಾಧಾನಗೊಂಡಿದ್ದಾರೆ. ಅವರಲ್ಲದೆ, ಪಕ್ಷದಲ್ಲಿ ಕಳೆದ ಕೆಲವು ವರ್ಷಗಳಿಂದ ಅವಿರತವಾಗಿ ಕೆಲಸ ಮಾಡಿದ್ದ ಮತ್ತು ಟಿಕೆಟ್‌ ಆಕಾಂಕ್ಷಿಗಳಾಗಿದ್ದ ರುದ್ರೇಶ್ ಅಸಮಾಧಾನಗೊಂಡಿದ್ದಾರೆ. ಸದ್ಯ, ಮಾಜಿ ಶಾಸಕ ಗುರುಸ್ವಾಮಿ ಅವರ ಪುತ್ರಿ ನಾಗಶ್ರೀ ಮಾತ್ರ ಸೋಮಣ್ಣಗೆ ಬೆಂಬಲ ನೀಡಿದ್ದಾರೆ.

ಇದೆಲ್ಲದರ ನಡುವೆ, ಬಿಜೆಪಿ ವಕ್ತಾರ ಆಯ್ಯನಪುರ ಶಿವಕುಮಾರ್‌ ಬಹಿರಂಗವಾಗಿಯೇ ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾತ್ರವಲ್ಲ, ಕ್ಷೇತ್ರದ ಅಮಚವಾಡಿ ಮತ್ತು ಚನ್ನಪ್ಪನಪುರ ಗ್ರಾಮಗಳ ಜನರು ‘ಗೋ ಬ್ಯಾಕ್‌ ಸೋಮಣ್ಣ‘ ಎಂಬ ಬ್ಯಾನರ್‌ ಕಟ್ಟಿ, ಸೋಮಣ್ಣ ವಿರುದ್ಧ ಗುಡುಗಿದ್ದಾರೆ.

ಕ್ಷೇತ್ರದಲ್ಲಿ ನೆಲೆಯಿಲ್ಲದ ಜೆಡಿಎಸ್ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದೆ. ಈ ನಡುವೆ ಜೆಡಿಎಸ್‌ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿ ಅವರಿಗೆ ನಾಮಪತ್ರ ಹಿಂಪಡೆಯುವಂತೆ ಸೋಮಣ್ಣ ಒತ್ತಾಯಿಸಿದ್ದಾರೆಂಬ ಆಡಿಯೋ ಕೂಡ ವೈರಲ್‌ ಆಗಿದೆ. ಸೋಮಣ್ಣ ಮತ್ತು ಮಲ್ಲಿಕಾರ್ಜುನಸ್ವಾಮಿ ಇಬ್ಬರೂ ಲಿಂಗಾಯತರೇ ಆಗಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್‌ ಮತಗಳನ್ನು ಒಡೆಯಬಹುದು ಎಂದು ಎಣಿಸಲಾಗಿದೆ.

ಲಿಂಗಾಯತರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಉಪ್ಪಾರರು, ಕುರುಬರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಕ್ಷೇತ್ರದಲ್ಲಿದ್ದಾರೆ. ಎಸ್‌ಸಿ-ಎಸ್‌ಟಿ ಮತಗಳು ಕ್ಷೇತ್ರದಲ್ಲಿ ನಿರ್ಣಾಯಕವಾಗಿವೆ. ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಇಬ್ಬಾಗಗೊಂಡು, ಎಸ್‌ಸಿ-ಎಸ್‌ಟಿ ಮತಗಳು ಒಡೆಯದಿದ್ದರೆ ಶೆಟ್ಟಿ ಅವರೇ ಮತ್ತೊಮ್ಮೆ ಗೆಲ್ಲಬಹುದಾದ ಸಾಧ್ಯತೆಗಳು ಹೆಚ್ಚಾಗಿವೆ.

ಹನೂರು

ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರ, ತಾಲೂಕು ಕೇಂದ್ರವೂ ಹೌದು. ತಮಿಳುನಾಡು ಗಡಿಯಲ್ಲಿರುವ ಈ ಕ್ಷೇತ್ರದ ಶಾಸಕ ನಾಗಪ್ಪ ಅವರು ಕುಖ್ಯಾತ ಕಾಡುಗಳ್ಳ ವೀರಪ್ಪನ್‌ನಿಂದ ಹತ್ಯೆಗೀಡಾಗಿದ್ದರು. ಹನೂರು ಕ್ಷೇತ್ರ ಆರಂಭದಿಂದಲೂ ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದು, ಈಗಲೂ ಕಾಂಗ್ರೆಸ್‌ ತೆಕ್ಕೆಯಲ್ಲಿಯೇ ಇದೆ.  2008ರಿಂದ ಮೂರು ಬಾರಿ ಕ್ಷೇತ್ರವನ್ನು ಕಾಂಗ್ರೆಸ್​ನ ಆರ್ ನರೇಂದ್ರ ಪ್ರತಿನಿಧಿಸಿದ್ದು, ನಾಲ್ಕನೇ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ನರೇಂದ್ರ ವಿರುದ್ಧ ಬಿಜೆಪಿಯಿಂದ ಪ್ರೀತಮ್ ನಾಗಪ್ಪ, ಜೆಡಿಎಸ್‌ನಿಂದ ಮಂಜುನಾಥ್ ಮತ್ತು ಎಎಪಿಯಿಂದ ಹರೀಶ್‌ ಕಣದಲ್ಲಿದ್ದಾರೆ. 2004ರಲ್ಲಿ ಜನತಾ ದಳದ ಹಿರಿಯ ಮುಖಂಡ ಎಚ್ ನಾಗಪ್ಪ ಅವರ ಪತ್ನಿ ಪರಿಮಳಾ ನಾಗಪ್ಪ ಅವರನ್ನು ಜೆಡಿಎಸ್‌ ಕಣಕ್ಕಿಳಿಸಿತ್ತು,. ಮಾತ್ರವಲ್ಲದೆ, ಗೆದ್ದು ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಈ ಬಾರಿ ಮತ್ತೆ ಕ್ಷೇತ್ರದಲ್ಲಿ ಗೆಲ್ಲಲು ಯತ್ನಿಸುತ್ತಿದೆ.  

ಕ್ಷೇತ್ರದ ರಾಜಕೀಯ ಇತಿಹಾಸ ತಿಳಿಯಲು ಈ ವರದಿ ಓದಿ: ವೀರಪ್ಪನ್ ಭಯದ ನೆರಳಲ್ಲಿ ಚುನಾವಣೆಗಳನ್ನು ಎದುರಿಸುತ್ತಿದ್ದ ಕ್ಷೇತ್ರ ಹನೂರು

ಇದುವರೆಗೂ ಕ್ಷೇತ್ರದಲ್ಲಿ ಖಾತೆಯನ್ನೇ ತೆರೆಯದ ಬಿಜೆಪಿ, ಈ ಬಾರಿ ಖಾತೆ ತೆರೆಯಬೇಕೆಂದು ಹವಣಿಸುತ್ತಿದೆ. ನಾಗಪ್ಪ ಅವರ ಪುತ್ರ ಪ್ರೀತಮ್ ನಾಗಪ್ಪ ಅವರನ್ನು ಕಣಕ್ಕಿಳಿಸಿದೆ. ಕಳೆದ ಚುನಾವಣೆಯಲ್ಲಿ ಕೇವಲ 3,513 ಮತಗಳ ಅಂತರದಿಂದ ಸೋಲುಂಡಿದ್ದ ಪ್ರೀತಮ್ ನಾಗಪ್ಪ, ಈ ಬಾರಿ ಗೆಲ್ಲಬೇಕೆಂಬ ಹಠದಲ್ಲಿದ್ದಾರೆ.

ಈ ನಡುವೆ, ಎಎಪಿ ಕೂಡ ಪೈಪೋಟಿ ನೀಡಲು ಸಜ್ಜಾಗಿದೆ. ಆದರೂ, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ತ್ರಿಶಂಕು ಸ್ಪರ್ಧೆಯಲ್ಲಿ ಜೆಡಿಎಸ್‌-ಬಿಜೆಪಿಗೆ ಅವಕಾಶ ಕೊಡದೇ ನರೇಂದ್ರ ಅವರು ಮತ್ತೆ ಗೆಲ್ಲುವರೇ ಎಂಬುದು ಕುತೂಹಲ ಮೂಡಿಸಿದೆ.

ಗುಂಡ್ಲುಪೇಟೆ

ರಾಜ್ಯ ರಾಜಕಾರಣದಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಒಂದು ರೀತಿಯ ವಿಶೇಷ ಕ್ಷೇತ್ರ. ಇಲ್ಲಿಯ ಜನ ಒಬ್ಬರು ಒಮ್ಮೆ ಆರಿಸಿದರೆ, ಅವರು ಸಾಯುವವರೆಗೂ ಅವರೇ ಶಾಸಕರು. ಏರು ದಶಕಗಳ ರಾಜಕಾರಣದಲ್ಲಿ ಕ್ಷೇತ್ರವನ್ನು ಕೇವಲ ಐವರು ಮಾತ್ರವೇ ಪ್ರತಿನಿಧಿಸಿದ್ದಾರೆ. ಅವರಲ್ಲಿ  ಮೂವರು ತಮ್ಮ ಸಾವಿನವರೆಗೂ ಶಾಸಕರಾಗಿಯೇ ಇದ್ದರು. ಈ ಇತಿಹಾಸಕ್ಕೆ 2018ರ ಚುನಾವಣೆಯಲ್ಲಿ ಬೇಕ್‌ ಬಿದ್ದಿತು. 2017ರ ಉಪಚುನಾವಣೆಯಲ್ಲಿ ಗೆದ್ದಿದ್ದ ಮಹದೇವ ಪ್ರಸಾದ್ ಅವರ ಪತ್ನಿ ಗೀತಾ ಅವರು 2018ರ ಚುನಾವಣೆಯಲ್ಲಿ ಸೋತಿದ್ದಾರೆ.

2018ರಲ್ಲಿ  ಗೀತಾ ಅವರ ವಿರುದ್ಧ ಗೆದ್ದಿದ್ದ ಹಾಲಿ ಶಾಸಕ ಸಿ.ಎಸ್‌ ನಿರಂಜನ್‌ ಕುಮಾರ್, ತಮ್ಮ ಎರಡನೇ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನಿಕಟವರ್ತಿಯಾಗಿದ್ದ ನಿರಂಜನ್‌, 2008ರಿಂದಲೂ ಬಿಜೆಪಿ-ಕೆಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು. 2017ರ ಉಪ ಚುನಾವಣೆಯಲ್ಲೂ ಗೀತಾ ಅವರ ವಿರುದ್ಧ ಸೋಲು ಕಂಡಿದ್ದರು. 2018ರಲ್ಲಿ ಕ್ಷೇತ್ರದ ಜನರು ಅವರಿಗೆ ಮಣೆ ಹಾಕಿದ್ದಾರೆ. ಅದನ್ನು ಉಳಿಸಿಕೊಳ್ಳುವಲು ನಿರಂಜನ್‌ಕುಮಾರ್ ಹೋರಾಡುತ್ತಿದ್ದಾರೆ.

ನಿರಂಜನ್ ವಿರುದ್ಧ ಕಾಂಗ್ರೆಸ್‌ನಿಂದ ಮಹದೇವ ಪ್ರಸಾದ್ ಅವರು ಪುತ್ರ ಗಣೇಶ್ ಪ್ರಸಾದ್ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ಕಡಬೂರು ಮಂಜುನಾಥ್‌ ಸ್ಪರ್ಧಿಸಿದ್ದಾರೆ. ಮಹದೇವ ಪ್ರಸಾದ್ ಅವರು ಜನತಾ ಪರಿವಾರ ತೊರೆದ ನಂತರ ಕ್ಷೇತ್ರದಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲದಂತಾಗಿದೆ. ಹೀಗಾಗಿ, ಜೆಡಿಎಸ್‌ ಹೆಚ್ಚು ಪ್ರಭಾವಿಯಲ್ಲದಿದ್ದರೂ, ಪೈಪೋಟಿ ನೀಡಲಿದೆ. ಇನ್ನು ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ.

ಕ್ಷೇತ್ರದ ರಾಜಕೀಯ ಇತಿಹಾಸ ತಿಳಿಯಲು ಈ ವರದಿ ಓದಿ: ಸಾಮಾನ್ಯ ಮೀಸಲು ಕ್ಷೇತ್ರವಾದರೂ ಗುಂಡ್ಲುಪೇಟೆಯಲ್ಲಿ ದಲಿತರ ಮತಗಳೇ ನಿರ್ಣಾಯಕ

ಎರಡೂವರೆ ದಶಕಗಳ ಕಾಲ ವಿಧಾನಸಭೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಹದೇವ ಪ್ರಸಾದ್ ಅವರ ವರ್ಚಸ್ಸು ಕ್ಷೇತ್ರದಲ್ಲಿ ಇನ್ನೂ ಇದೆ. ಅಲ್ಲದೆ, ಕೊರೊನಾ ಉಲ್ಬಣಗೊಂಡಿದ್ದ ಸಮಯದಲ್ಲಿ ಕ್ಷೇತ್ರದಲ್ಲಿ ಗಣೇಶ್ ಮಾಡಿದ ಕೆಲಸಗಳೂ ಜನರ ಮನ ಮುಟ್ಟಿವೆ. ಅದು ಅವರಿಗೆ ವರದಾನವಾಗಬಹುದು ಎಂಬ ಮಾತುಗಳೂ ಇವೆ.

ಸದ್ಯ ಕಣದಲ್ಲಿರುವ ಮೂವರು ಪ್ರಮುಖ ಅಭ್ಯರ್ಥಿಗಳು ಲಿಂಗಾಯತ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ದಲಿತ ಮತದಾರರೂ ನಿರ್ಣಾಯಕರಾಗಿದ್ದಾರೆ. ಕ್ಷೇತ್ರದ ಜನರು ನಿರಂಜನ್‌ ಅವರನ್ನು ಮತ್ತೆ ಗೆಲ್ಲಿಸುವರೇ? ಅಥವಾ ಒಂದೇ ಅವಧಿಗೆ ಬಿಜೆಪಿ ಸಹವಾಸ ಸಾಕೆನ್ನುವರೇ? ಕಾದು ನೋಡಬೇಕಿದೆ.

ಕೊಳ್ಳೇಗಾಲ

ಯಾವ ಪಕ್ಷಕ್ಕೂ ಭದ್ರ ನೆಲೆ ಒದಗಿಸದ ಕ್ಷೇತ್ರ ಕೊಳ್ಳೇಗಾಲ. ಮೂರು ಪ್ರಮುಖ ಪಕ್ಷಗಳಿಗೂ, ಸ್ವತಂತ್ರ ಅಭ್ಯರ್ಥಿಗಳಿಗೂ ಕ್ಷೇತ್ರ ಅವಕಾಶ ನೀಡಿದೆ. ಸದ್ಯ ಕ್ಷೇತ್ರವನ್ನು ಬಿಎಸ್‌ಪಿಯಿಂದ ಬಿಜೆಪಿಗೆ ಹಾರಿರುವ ಎನ್‌ ಮಹೇಶ್ ಪ್ರತಿನಿಧಿಸುತ್ತಿದ್ದಾರೆ.

ದಲಿತ ಚಳುವಳಿಯ ಹಿನ್ನೆಲೆಯುಳ್ಳ ಮಹೇಶ್, 2004ರಿಂದಲೂ ನಿರಂತರವಾಗಿ ಬಿಎಸ್‌ಪಿಯಿಂದ ಕ್ಷೇತ್ರದಲ್ಲಿ ಸ್ಪರ್ಧಿಸಿ, ಠೇವಣಿಯನ್ನು ಹಿಂಪಡೆಯದಂತೆ ಸೋಲುಣ್ಣುತ್ತಿದ್ದರು.

2018ರ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲದೊಂದಿಗೆ ಬಿಎಸ್‌ಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಆದರೆ, ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತೆ, ಜೆಡಿಎಸ್‌ ಸಖ್ಯದಿಂದ ದೂರ ಉಳಿದಿದ್ದರು. ಬಿಎಸ್‌ಪಿಯಿಂದ ಉಚ್ಛಾಟನೆಯೂ ಆದರು.

ಇದೀಗ, ಬಿಜೆಪಿ ಸೇರಿಸಿರುವ ಮಹೇಶ್, ನೀಲಿ ಬಾವುಟಕ್ಕೆ ತಿಲಾಂಜಲಿ ಇಟ್ಟು ಕೇಸರಿ ಬಾವುಟ ಹಿಡಿದ್ದಾರೆ. ಈ ಬಾರಿಯ ಚುನಾಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್‌ನಿಂದ ಎ.ಆರ್ ಕೃಷ್ಣಮೂರ್ತಿ, ಜೆಡಿಎಸ್‌ನಿಂದ ಪುಟ್ಟಸ್ವಾಮಿ ಕಣಕ್ಕಿಳಿದಿದ್ದಾರೆ.

ತಮ್ಮ ಬೆಂಬಲದಿಂದ ಗೆದ್ದು, ಬಿಜೆಪಿ ಸೇರಿದ ಮಹೇಶ್‌ ಅವರನ್ನು ಸೋಲಿಸಬೇಕೆಂಬ ಜಿದ್ದು ಜೆಡಿಎಸ್‌ನಲ್ಲಿದೆ. ಅಲ್ಲದೆ, 30 ವರ್ಷಗಳಿಂದ ಕ್ಷೇತ್ರದಲ್ಲಿ ಗೆಲುವು ಕಾಣದ ಪಕ್ಷ ಈ ಬಾರಿ ಗೆಲ್ಲಬೇಕೆಂದು ಶತಪ್ರಯತ್ನ ಮಾಡುತ್ತಿದೆ.

ಕ್ಷೇತ್ರದ ರಾಜಕೀಯ ಇತಿಹಾಸ ತಿಳಿಯಲು ಈ ವರದಿ ಓದಿ: ಕೊಳ್ಳೇಗಾಲ | ಮತದಾರರ ಮಂತ್ರದಂಡದ ಮುಂದೆ ನಡೆಯದ ಮಾಟ ಮಂತ್ರ!

ಇನ್ನು, ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದ ಕೃಷ್ಣಮೂರ್ತಿ ಈ ಬಾರಿ ಗೆಲ್ಲಬೇಕೆಂಬ ಛಲದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಒಂದು ಚುನಾವಣೆಯಲ್ಲಿ ಸೋಲು, ಮತ್ತೊಂದು ಚುನಾವಣೆಯಲ್ಲಿ ಗೆಲುವು ಕಾಣುತ್ತಾ ಸೋಲು-ಗೆಲುವಿನ ಆಟವಾಡುತ್ತಿರುವ ಕಾಂಗ್ರೆಸ್‌, ಈ ಬಾರಿ ಕ್ಷೇತ್ರದಲ್ಲಿ ಮತ್ತೆ ತನ್ನ ಗೆಲುವು ದಾಖಲಿಸಿಲು ಮುಂದಾಗಿದೆ.

ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಈ ಮೂವರೂ ಎಸ್‌ಸಿ ಬಲಗೈ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕ್ಷೇತ್ರದಲ್ಲಿ ದಲಿತರ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. ದಲಿತ ಚಳವಳಿಗೆ ಅಪಮಾನ ಮಾಡಿ, ಬಿಜೆಪಿ ಸೇರಿದವರ ವಿರುದ್ಧ ಇವರೆಲ್ಲರೂ ಸಿಟ್ಟಾಗಿದ್ದಾರೆ. ಮಹೇಶ್‌ ಅವರನ್ನು ಸೋಲಿಸಬೇಕೆಂದು ನಿರ್ಧರಿಸಿದ್ದಾರೆ. ಅದು ಮಹೇಶ್‌ ಅವರ ಪ್ರಚಾರ ವೇಳೆ ಕಂಡುಬರುತ್ತಿರುವ ವಿರೋಧ ಮತ್ತು ಆಕ್ರೋಶಗಳಲ್ಲಿ ಗೋಚರವಾಗುತ್ತಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಮತದಾನ ಮಾಡಲು ವಿಕಲಚೇತನರು, ಹಿರಿಯ ನಾಗರಿಕರಿಗೆ ಸೌಲಭ್ಯ

ರಾಜ್ಯದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಈ...

ಲೋಕಸಭಾ ಚುನಾವಣೆ; ಕರ್ತವ್ಯದಲ್ಲಿರುವ ಬಹುತೇಕ ನೌಕರರಿಗೆ ಸಿಗದ ಅಂಚೆ ಮತದಾನ

ಲೋಕಸಭಾ ಚುನಾವಣೆಯ ಕರ್ತವ್ಯಕ್ಕೆ ತೆರಳುವ ಬಹುತೇಕ ಸೇವಾ ಸಿಬ್ಬಂದಿಗಳು ಈ ಬಾರಿ...

ಹಾಸನ ಪೆನ್‌ಡ್ರೈವ್‌ ಪ್ರಕರಣ: ನಾಲ್ವರು ಸಂತ್ರಸ್ತೆಯರು ಆತ್ಮಹತ್ಯೆಗೆ ಯತ್ನ

ಹಾಸನದ ಪೆನ್‌ಡ್ರೈವ್‌ ಪ್ರಕರಣ ದಿನದಿಂದ ದಿನಕ್ಕೆ ಜಿಲ್ಲಾದ್ಯಂತ ಆತಂಕ ಹೆಚ್ಚಿಸ್ತಾ ಇದೆ....

ಬೆಂಗಳೂರು | ಲೋಕಸಭಾ ಚುನಾವಣೆ : ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಚುನಾವಣಾಧಿಕಾರಿ

2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೃಹತ್...