ಗದಗ ಜಿಲ್ಲೆ | ಅಭಿವೃದ್ಧಿ ಮರೆತ ಜಿಲ್ಲೆಯಲ್ಲಿ ಅಧಿಕಾರಕ್ಕಾಗಿ ಕೈ-ಕಮಲ ಕಾದಾಟ

Date:

ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಅವೈಜ್ಞಾನಿಕವಾಗಿ ರಚನೆಯಾಗಿವೆ ಎಂಬ ಅಳಲು ಪ್ರತಿ ಕ್ಷೇತ್ರದಲ್ಲೂ ಇದೆ. ತಾಲ್ಲೂಕು ಒಂದು ಕ್ಷೇತ್ರದಲ್ಲಿದ್ದರೆ, ವಿಧಾನಸಭೆ ಮತ್ತೊಂದು ಕ್ಷೇತ್ರದಲ್ಲಿ. ಕ್ಷೇತ್ರವಾಸಿಗಳ ಈ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಗೆದ್ದವರದು ಯಥಾಪ್ರಕಾರ ಇಲ್ಲಿ ಸ್ವಹಿತಾಸಕ್ತಿಯ ’ಒಣ ರಾಜಕಾರಣ’.

‌ಪುಟ್ಟರಾಜ ಗವಾಯಿಗಳ ಪುಣ್ಯಭೂಮಿ, ಮುದ್ರಣ ನಗರ ಖ್ಯಾತಿಯ ಗದಗ ಜಿಲ್ಲೆಯಲ್ಲಿ ಚುನಾವಣೆ ಕಣ ರಂಗೇರಿದೆ. ಮತ್ತೊಂದಡೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಯಾವ ದಿಕ್ಕಿನಲ್ಲಿ ಹೆಜ್ಜೆ ಹಾಕಿದರೂ ಸಮಸ್ಯೆ-ಸಂಕಷ್ಟಗಳಿಗೆ ಕೊರತೆಯಿಲ್ಲ. ಆದರೂ ಇಲ್ಲಿ ಚುನಾವಣೆ ಪ್ರತಿಷ್ಠೆಯ ಸಂಕೇತ.

ಕೈಗಾರಿಕೀಕರಣ, ಕೃಷಿ ಉನ್ನತೀಕರಣದಂಥ ಅಭಿವೃದ್ಧಿ ಮಾತು ಬದಿಗಿರಲಿ. ಕನಿಷ್ಠ ಮಟ್ಟದ ಮೂಲ ಸೌಕರ್ಯಗಳ ಕೊರತೆ ಪ್ರತಿ ಕ್ಷೇತ್ರದಲ್ಲೂ ಕಂಡುಬರುತ್ತದೆ. ಗದಗ-ಬೆಟಗೇರಿ ಸಂಯೋಜಿತ ನಗರಾಡಳಿತದ ಪಟ್ಟಣದ ಯಾವ ವಾರ್ಡಿನಲ್ಲೂ ಸಮರ್ಪಕ ರಸ್ತೆಯಿಲ್ಲ. ಕುಡಿಯುವ ನೀರು 15-20 ದಿನಕ್ಕೊಮ್ಮೆ ಪೂರೈಕೆಯಾಗುತ್ತಿದೆ. ಗದಗ ಜಿಲ್ಲೆ ರಚನೆಯಾಗಿ 25 ವರ್ಷ ಕಳೆದಿದ್ದರೂ ಅಭಿವೃದ್ಧಿಯಲ್ಲಿ ಹಿಂದಿದೆ. ಇದಕ್ಕೆಲ್ಲ ಕಾರಣ ರಾಜಕೀಯ ಇಚ್ಛಾಶಕ್ತಿಯಿಲ್ಲದ ಹೊಣೆಗೇಡಿತನ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ- ಹೀಗೆ ಅಷ್ಟೂ ರಂಗಗಳಲ್ಲಿ ಲಿಂಗಾಯತರದೇ ಜಿಲ್ಲೆಯಲ್ಲಿ ಪಾರುಪತ್ಯ. ಅದರಲ್ಲೂ ಪಂಚಮಸಾಲಿಗಳ ಹಿಡಿತ ತುಸು ಜಾಸ್ತಿಯೇ ಎನ್ನಬಹುದು. ಗದಗ ಜಿಲ್ಲೆಯಲ್ಲಿ ವ್ಯಕ್ತಿ ಮತ್ತು ಜಾತಿ ಪ್ರತಿಷ್ಠೆಯ ರಾಜಕಾರಣದ ಗ್ರಾಫ್ ಮಾತ್ರ ಏರುಗತಿಯಲ್ಲೇ ಸಾಗಿದೆ. ಗದಗಿನ ರಾಜಕೀಯ ದುರಂತ ಎಂದೆರೆ, ಕುಡಿಯುವ ನೀರು ಒದಗಿಸುವ ಆಶ್ವಾಸನೆ ಮುಂದಿಟ್ಟುಕೊಂಡೇ ಸಕಲ ಪಕ್ಷಗಳು ಚುನಾವಣೆಯಲ್ಲಿ ಬೇಳೆ ಬೇಯಿಸಿಕೊಳ್ಳುತ್ತವೆ.  

ಈಗಲೂ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಅವೈಜ್ಞಾನಿಕವಾಗಿ ರಚನೆಯಾಗಿವೆ ಎಂಬ ಅಳಲು ಪ್ರತಿ ಕ್ಷೇತ್ರದಲ್ಲೂ ಇದೆ. ತಾಲ್ಲೂಕು ಒಂದು ಕ್ಷೇತ್ರದಲ್ಲಿದ್ದರೆ ವಿಧಾನಸಭೆ ಮತ್ತೊಂದು ಕ್ಷೇತ್ರದಲ್ಲಿ. ಕ್ಷೇತ್ರವಾಸಿಗಳ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ಗೆದ್ದವರು ಯಥಾಪ್ರಕಾರ ಸ್ವಹಿತಾಸಕ್ತಿಯ ’ಒಣ ರಾಜಕಾರಣ’ ಮಾಡಿಕೊಂಡು ಕಾಲ ಕಳೆದಿದ್ದಾರೆ.  

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಶಿರಹಟ್ಟಿ, ರೋಣ ಹಾಗೂ ನರಗುಂದ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಗದಗ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಬಾವುಟ ಹಾರಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ನಾಲ್ಕೂ ಕ್ಷೇತ್ರಗಳಲ್ಲಿ ಗೆಲ್ಲುವ ಉತ್ಸಾಹದಲ್ಲಿದೆ. ಇತ್ತ ಬಿಜೆಪಿ ಗೆದ್ದ ಕ್ಷೇತ್ರಗಳನ್ನೇ ಉಳಿಸಿಕೊಳ್ಳಲು ನಿರ್ಣಾಯಕ ಪೈಪೋಟಿ ನೀಡಲು ಸಜ್ಜಾಗಿದೆ. ಹಾಗೆಯೇ ಜೆಡಿಎಸ್‌ ಮತ್ತು ʼಆಪ್‌ʼ ಕೂಡ ನಾವೇನು ಕಡಿಮೆ ಕಮ್ಮಿ ಇಲ್ಲ ಎಂದು ತೋರಿಸಲು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿಕೊಂಡಿವೆ.

ಶಿರಹಟ್ಟಿ ಎಸ್‌ಸಿ ಕ್ಷೇತ್ರ

ಗದಗ ಜಿಲ್ಲೆಯ ಒಂದೇ ಒಂದು ಮೀಸಲು ಕ್ಷೇತ್ರದವಾದ ಶಿರಹಟ್ಟಿ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮುಂಡರಗಿ ತಾಲ್ಲೂಕಿನ ದಿಂಡೂರು ತಾಂಡಾದ ಡಾ. ಚಂದ್ರು ಲಮಾಣಿಗೆ ಟಿಕೆಟ್ ನೀಡುವ ಮೂಲಕ ಹಾಲಿ ಶಾಸಕ ರಾಮಣ್ಣ ಲಮಾಣಿ ಅವರನ್ನು ಕೈಬಿಟ್ಟಿದೆ.

ಕೋವಿಡ್-19 ಸಂದರ್ಭದಲ್ಲಿ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲ್ಲೂಕುಗಳಲ್ಲಿ ಸಾಮಾಜಿಕ ಸೇವೆ ಸಲ್ಲಿಸುವ ಮೂಲಕ ಜನಸಂಪರ್ಕ ಸಾಧಿಸಿದ್ದ ಡಾ. ಚಂದ್ರು ಲಮಾಣಿ, ತನ್ನ ಕೆಲಸವೇ ಟಿಕೆಟ್ ಪಡೆಯಲು ದಾರಿಮಾಡಿಕೊಟ್ಟಿದೆ. ಲಂಬಾಣಿ ಸಮುದಾಯಕ್ಕೆ ಟಿಕೆಟ್ ಕೊಟ್ಟಿರುವುದರಿಂದ ಸಾಮಾನ್ಯ ಕಾರ್ಯಕರ್ತರು ಕೂಡ ಖುಷಿಗೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಶಿರಹಟ್ಟಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹೊಸ ಮುಖಕ್ಕೆ ಮಣೆ ಹಾಕಿದೆ. ಪ್ರಬಲ ಆಕಾಂಕ್ಷಿಗಳಾದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮತ್ತು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಇಬ್ಬರ ನಡುವೆ ಕಾಂಗ್ರೆಸ್‌ ಸುಜಾತಾ ದೊಡ್ಡಮನಿ ಅವರಿಗೆ ಮಣೆ ಹಾಕಿದೆ. ಮಾದಿಗ ಸಮಾಜದ ಮುಖಂಡರು ಸುಜಾತಾ ದೊಡ್ಡಮನಿ ಅವರಿಗೆ ಟಿಕೆಟ್ ನೀಡಿರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಇರಲಿದೆ.

ಜೆಡಿಎಸ್‌ನಿಂದ ಎಚ್‌ ಎಂ ನಾಯಕ್‌ ಸ್ಪರ್ಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳು ಕೂಡ ಮತ ವಿಭಜನೆಗೆ ಸಿದ್ದರಾಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ನೊಳಗೆ ಬಂಡಾಯ ಇದ್ದು ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ತೀವ್ರ ತಿಕ್ಕಾಟದ ನಡುವೆ ವಿಜಯ ಮಾಲೆ ಯಾರ ಕೊರಳಿಗೆ ಎಂಬುದು ಗುಟ್ಟಾಗಿ ಉಳಿದಿದೆ.

ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

ಗದಗ ಕ್ಷೇತ್ರ

ಗದಗ ವಿಧಾನಸಭಾ ಕ್ಷೇತ್ರ ಲಿಂಗಾಯತ ’ಪ್ರಜ್ಞೆ’ಯ ಅಖಾಡ. ಜಾತಿ ಪ್ರತಿಷ್ಠೆಯ ಜತೆಯಲ್ಲಿಯೇ ಪಕ್ಷ ಪ್ರಭಾವ ಮತ್ತು ವ್ಯಕ್ತಿ ವರ್ಚಸ್ಸು ಗುಪ್ತಗಾಮಿಯಾಗಿ ಕೆಲಸ ಮಾಡುತ್ತದೆ. 1960ರ ದಶಕದಾರಂಭದಿಂದ 1980ರ ದಶಕದವರೆಗೆ ಲಿಂಗಾಯತೇತರ ನಾಮದ ರೆಡ್ಡಿ ಸಮುದಾಯದ ಕೆ ಎಚ್ ಪಾಟೀಲ್ ಗದಗ ರಾಜಕಾರಣದ ಕೇಂದ್ರ ಬಿಂದುವಾಗಿದ್ದರು. ’ಹುಲುಕೋಟಿ ಹುಲಿ’ ಎಂದೆ ಜನಪ್ರಿಯರಾಗಿದ್ದ ಪಾಟೀಲ್ ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಅವರ ಪುತ್ರ ಎಚ್‌ ಕೆ ಪಾಟೀಲ ಕ್ಷೇತ್ರದ ಅಧಿಪತಿ.

ಕಾಂಗ್ರೆಸ್‌ನಿಂದ ಎಚ್‌ ಕೆ ಪಾಟೀಲ ಈ ಬಾರಿಯೂ ಕಣದಲ್ಲಿ ಇದ್ದಾರೆ. ಬಿಜೆಪಿಯಿಂದ ಅನಿಲ್ ಮೆಣಸಿನಕಾಯಿ ಸ್ಪರ್ಧಿಸಿದ್ದಾರೆ. 2013ರ ಚುನಾವನೆಯಲ್ಲಿ ಎಚ್‌ ಕೆ ಪಾಟೀಲ ದೊಡ್ಡ ಗೆಲುವು ಸಾಧಿಸಿದಾಗ ಅವರ ಎದರಾಳಿಯಾಗಿದ್ದವರು ಶ್ರೀರಾಮಲು ಅವರಿಂದ ರಾಜಕೀಯ ದೀಕ್ಷೆ ಪಡೆದಿದ್ದ ಅನಿಲ್ ಮೆಣಸಿನಕಾಯಿ. ರೆಡ್ಡಿ-ರಾಮಲುಗಳ ಬಿಎಸ್‌ಆರ್‌ಸಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನಂತರ ಬಿಜೆಪಿ ಸೇರಿ ಕಳೆದ ಚುನಾವಣೆಯಲ್ಲಿ ಎಚ್‌ ಕೆ ಪಾಟೀಲ ಅವರಿಗೆ ತೀವ್ರ ಪೈಪೋಟಿ ನೀಡಿದ್ದರು.

ಜೆಡಿಎಸ್‌ನಿಂದ ವೆಂಕಣಗೌಡ ಗೋವಿಂದಗೌಡರ ಅವರು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಪೈಪೋಟಿ ನೀಡಲು ಉತ್ಸುಕವಾಗಿದ್ದಾರೆ. ಅದರೆ ಅವರು ಗೆಲ್ಲುವ ಮುಖವಲ್ಲ. ಎಚ್‌ ಕೆ ಪಾಟೀಲ ಮತ್ತು ಅನಿಲ್ ಮೆಣಸಿನಕಾಯಿ ನಡುವೆ ನಿರ್ಣಾಯಕ ಫೈಟ್‌ ಇರಲಿದ್ದು ಯಾರು ಗೆಲ್ಲುತ್ತಾರೆ ಎಂಬುದು ಕ್ಷೇತ್ರದ ಜನರಿಗೆ ಸ್ಪಷ್ಟತೆ ಸಿಕ್ಕಿಲ್ಲ.

ರೋಣ ಕ್ಷೇತ್ರ

ರೋಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಜಿ ಎಸ್ ಪಾಟೀಲ್ ಕಣದಲ್ಲಿದ್ದಾರೆ. ಇವರು ಪಕ್ಷ ನಿಷ್ಠೆಯ ಕಾಂಗ್ರೆಸ್ಸಿಗ. 7 ಬಾರಿ ಸ್ಪರ್ಧಿಸಿ 3 ಬಾರಿ ಗೆಲವು ಸಾಧಿಸಿದರೂ ಜಿಲ್ಲೆಯ ಸ್ವಪಕ್ಷದವರ ಒಳ ಸಂಚಿನ ರಾಜಕಾರಣದಿಂದಾಗಿ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ ಎನ್ನುವ ಅನುಕಂಪದ ಮಾತುಗಳು ಇವರ ಮೇಲಿವೆ.

ಜಿ ಎಸ್ ಪಾಟೀಲ್ ತಮ್ಮ 40 ವರ್ಷದ ರಾಜಕಾರಣದಲ್ಲಿ ಎಂದೂ ಪಕ್ಷದ್ರೋಹ ಎಸಗಿದವರಲ್ಲ. ವಯಸ್ಸು 76 ಮೀರಿದ್ದರೂ ಪಕ್ಷ ಕಟ್ಟಿ ಬೆಳೆಸುವಲ್ಲಿ ಚಿರಯುವಕರಂತೆ ಸುಡು ಬಿಸಿಲಿನಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಲ್ಲಿ ತಿರುಗುತ್ತಿದ್ದಾರೆ. 2018ರಲ್ಲಿ 7ನೇ ಬಾರಿ ಸ್ಪರ್ಧಿಸಿದ್ದ ಅವರು ಪ್ರತ್ಯೇಕ ಲಿಂಗಾಯತ ಧರ್ಮದ ಗಾಳಕ್ಕೆ ಸಿಕ್ಕು ಸೋಲುಂಡರು. ಬಿಜೆಪಿಯ ಕಳಕಪ್ಪ ಬಂಡಿ ಗೆಲುವು ಸಾಧಿಸಿದರು. ಈ ಬಾರಿಯ ಚುನಾವಣೆಲ್ಲಿ ಈ ಇಬ್ಬರು ಪರಸ್ಪರ ಮತ್ತೆ ಮುಖಾಮುಖಿಯಾಗುತ್ತಿದ್ದಾರೆ. 

ರೋಣ ಕ್ಷೇತ್ರದಲ್ಲಿ ಒಬ್ಬರ ಸಕ್ರಿಯ ರಾಜಕಾರಣವು ಮತ್ತೊಬ್ಬರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ. ರಾಜಕಾರಣ ಮತ್ತು ಕುಟುಂಬದ ವ್ಯವಹಾರದಲ್ಲಿ ಸಮತೋಲನ ಸಾಧಿಸಿದ್ದ ಬಂಡಿ ಬ್ರದರ್ಸ್ ನಡುವೆ ರಾಜಕೀಯ ವೈಮನಸ್ಸು ಬೆಳೆದಿದೆ. ಬಿಜೆಪಿ ಶಾಸಕ ಕಳಕಪ್ಪ ಬಂಡಿ ಅವರ ಸಹೋದರ ಸಿದ್ದಪ್ಪ ಬಂಡಿ ಈಗ ಕಾಂಗ್ರೆಸ್‌ ಸೇರಿ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದ್ದಾರೆ.

ಹಾಗೆಯೇ ರೋಣ ಮತ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ (ಆಪ್​) ಸಂಘಟನಾತ್ಮಕ ಸಿದ್ಧತೆ ಮಾಡಿಕೊಂಡಿದೆ. ಗಜೇಂದ್ರಗಡ ಪಟ್ಟಣದಲ್ಲಿ ಆಪ್ ಪಕ್ಷದ ಕಾರ್ಯಾಲಯ ಉದ್ಘಾಟನೆಯಲ್ಲಿ ತನ್ನ ಬಲಾಬಲ ತೋರಿಸುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದೆ. ರೋಣ ಕ್ಷೇತ್ರಕ್ಕೆ ಆಪ್‌ನಿಂದ ಆನೇಕಲ್ ದೊಡ್ಡಯ್ಯ ಅಭ್ಯರ್ಥಿಯಾಗಿದ್ದು, ಬಿಜೆಪಿ ಶಾಸಕ ಕಳಕಪ್ಪ ಬಂಡಿಗೆ ಟಕ್ಕರ್ ಕೊಡಲು ಸಿದ್ಧರಾಗಿದ್ದಾರೆ.

ಜೆಡಿಎಸ್‌ನಿಂದ ಮುಕ್ತಾಮ್‌ಸಾಬ್‌ ಮುಧೋಳ ಕಣದಲ್ಲಿದ್ದಾರೆ. ಆಪ್‌ ಸ್ಪರ್ಧೆಯಿಂದಾಗಿ ರೋಣದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್‌ನ  ಜಿ ಎಸ್ ಪಾಟೀಲ್ ಕಡೆ ಕ್ಷೇತ್ರದ ಮತದಾರರು ಹೆಚ್ಚಿನ ಒಲವು ಹೊಂದಿದ್ದಾರೆ ಎನ್ನುವ ಮಾತುಗಳು ಹೆಚ್ಚು ಕೇಳಿಬರುತ್ತಿವೆ.

ನರಗುಂದ ಕ್ಷೇತ್ರ

ರೈತ ಬಂಡಾಯದ ನಾಡು ನರಗುಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಆರ್ ಯಾವಗಲ್ ಕಣದಲ್ಲಿದ್ದಾರೆ. ಈ ಚುನಾವಣೆ ಯಾವಗಲ್‌ ಅವರಿಗೆ ಕೊನೆಯ ಚುನಾವಣೆಯಾಗಿದೆ. ಈಗಾಗಲೇ 10 ಬಾರಿ ವಿಧಾನಸಭೆ ಹಾಗೂ ಒಂದು ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. 10 ಬಾರಿ ಸ್ಪರ್ಧಿಸಿದ ಸಂದರ್ಭದಲ್ಲಿ 5 ಬಾರಿ ಸೋತು 5 ಬಾರಿ ಗೆದ್ದಿದ್ದಾರೆ. ಒಂದು ಬಾರಿ ಎಂಪಿ ಚುನಾವಣೆಯಲ್ಲೂ ಸೋಲುಂಡಿದ್ದಾರೆ. ಇದು ನನ್ನ ಕೊನೆಯ ಚುನಾವಣೆ ಎಂದು ಸ್ವತಃ ಅವರೇ ಘೋಷಣೆ ಮಾಡಿಕೊಂಡಿದ್ದಾರೆ.

ನರಗುಂದ ವಿಧಾನಸಭಾ ಕ್ಷೇತ್ರದಿಂದ ಸಚಿವ ಸಿ ಸಿ ಪಾಟೀಲ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಒಬ್ಬರೇ ಇದ್ದುದರಿಂದ ಸಹಜವಾಗಿ ಸಿ ಸಿ ಪಾಟೀಲಗೆ ಟಿಕೆಟ್‌ ಲಭಿಸಿದೆ. ಇಲ್ಲೂ ಕೂಡ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ.

ಸೌಜನ್ಯದ ಮೂರ್ತಿ ಎಂದೇ ಹೆಸರುವಾಸಿಯಾಗಿರುವ ಬಿ ಆರ್ ಯಾವಗಲ್ ಅವರ ಬೆನ್ನಿಗೆ ಕಾಂಗ್ರೆಸ್ಸಿಗರ ಪಡೆಯೇ ನಿಂತಿದೆ. ಇದೇ ಅವರ ಬಲ. ಅವರ ಈ ಬಲವೇ ಕಾಂಗ್ರೆಸ್ ಪಕ್ಷದ ಗೆಲುವಿಗೂ ಶಕ್ತಿಮದ್ದು ಆಗಲಿದೆ ಎಂಬುದು ಕಾರ್ಯಕರ್ತರ ಮಾತನಾಡುತ್ತಿದ್ದಾರೆ.

ಜೆಡಿಎಸ್‌ನಿಂದ ರುದ್ರಗೌಡ ಪಾಟೀಲ ಸ್ಪರ್ಧಿಸಿದ್ದಾರೆ. ಸಿ ಸಿ ಪಾಟೀಲ ಮತ್ತು ಬಿ ಆರ್‌ ಯಾವಗಲ್‌ ನಾಯಕತ್ವದ ನಡುವೆ ರುದ್ರಗೌಡ ಪಾಟೀಲ ಅಷ್ಟು ಪೈಪೋಟಿ ನೀಡುವ ನಾಯಕರಾಗಿ ಇನ್ನೂ ಗುರುತಿಸಿಕೊಂಡಿಲ್ಲ.

ಕಳೆದ ಬಾರಿ 73,045 ಮತ ಪಡೆದು ಗೆಲವು ಸಾಧಿಸಿದ ಸಿ ಸಿ ಪಾಟೀಲ್,​ ಲೋಕೋಪಯೋಗಿ ಸಚಿವರೂ ಆದರು. ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಎಂದು ಹೇಳಿಕೊಳ್ಳುವ ಸಿ ಸಿ ಪಾಟೀಲ್ ಅವರಿಗೆ ಬದಲಾದ ರಾಜಕೀಯ ಸನ್ನಿವೇಶಗಳಿಂದ ಈ ಬಾರಿ ಹಿನ್ನಡೆಯಾಗಲಿದೆ ಎಂಬ ಮಾತು ಹೆಚ್ಚು ಕೇಳಿಬಂದಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ: ಸಿಎಂ ಸಿದ್ದರಾಮಯ್ಯ

"ನರೇಂದ್ರ ಮೋದಿ ಹತ್ತು ವರ್ಷ ಪ್ರಧಾನಿಯಾಗಿ ಭಾರತೀಯರಲ್ಲಿ ಭ್ರಮೆ ಹುಟ್ಟಿಸಿದ್ದು ಬಿಟ್ಟರೆ...

ಬೀದರ್‌ ಲೋಕಸಭಾ | ಮುಗಿದ ನಾಮಪತ್ರ ಭರಾಟೆ, ಶುರುವಾಗಿ ಮತಬೇಟೆ

ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರಾಟೆ ಮುಕ್ತಾಯವಾಗಿದೆ. ಬೀದರ್‌ ಲೋಕಸಭಾ ಕ್ಷೇತ್ರದ...

ಲೋಕಸಭಾ ಚುನಾವಣೆ | ಬಿಜೆಪಿ ಭದ್ರಕೋಟೆ ಬೆಂ. ದಕ್ಷಿಣದ ಮತದಾರರು ಹೇಳುತ್ತಿರೋದೇನು?

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಏ.26 ರಂದು...

ಬಿಜೆಪಿಯಿಂದ ಪಿಕ್ ಪಾಕೆಟ್ ಕಾಂಗ್ರೆಸ್, ಕನ್ನಡಿಗರ ಕೈಗೆ ಚಿಪ್ಪು ಪೋಸ್ಟರ್ ಬಿಡುಗಡೆ

ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ಚುನಾವಣಾ ಆಯೋಗದ ಅನುಮತಿ ಕೇಳಿದ್ದು,...