ಕೊಡಗು | ‘ಕರ್ನಾಟಕದ ಕಾಶ್ಮೀರ’ದಲ್ಲಿ ಕಾಂಗ್ರೆಸ್‌ನಿಂದ ಅಚ್ಚರಿಯ ಫಲಿತಾಂಶದ ನಿರೀಕ್ಷೆ

Date:

ಕರ್ನಾಟಕದ ಕಾಶ್ಮೀರ, ಭಾರತದ ಸ್ವಿಡ್ಜರ್‌ ಲ್ಯಾಂಡ್‌ ಎಂದು ಕರೆಯಿಸಿಕೊಳ್ಳುವ ಪ್ರಕೃತಿ ಸೊಬಗಿನ ನಾಡು ಕೊಡಗಿನೊಳಗೆ ಚುನಾವಣಾ ಕಾವು ಏರತೊಡಗಿದೆ. ಸತತ ನಾಲ್ಕು ಚುನಾವಣೆಗಳಿಂದಲೂ ‘ಬಿಜೆಪಿ ಭದ್ರಕೋಟೆʼಯಾಗಿರುವ ಕೊಡಗಿನ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ಲಗ್ಗೆ ಇಡಲು ಕಾಂಗ್ರೆಸ್ ಈ ಬಾರಿ ಯುವ ಮುಖಂಡರನ್ನು ಕಣಕ್ಕಿಳಿಸಿದೆ. 


ಮಡಿಕೇರಿ ವಿಧಾನಸಭಾ ಕ್ಷೇತ್ರ
ಮಡಿಕೇರಿ ವಿಧಾನಸಭಾ ಕ್ಷೇತ್ರದ ಈ ಬಾರಿಯ ರಣಕಣ ತ್ರಿಕೋನ ಸ್ಪರ್ಧೆಗೆ ಅಣಿಯಾಗುತ್ತಿದೆ. ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿ ತಮ್ಮ ಕೊನೆ ಚುನಾವಣೆ ಎದುರಿಸುತ್ತಿರುವ ಹಾಲಿ ಶಾಸಕ ಅಪ್ಪಚ್ಚು ರಂಜನ್ ಒಂದೆಡೆಯಾದರೆ, ನೆಲೆ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಹೊಸ ಶಕ್ತಿ ತುಂಬಲು ಮಂಥರ್ ಗೌಡ ಸಿದ್ದರಾಗುತ್ತಿದ್ದಾರೆ.

ಹಾಗೆಯೇ ಕಾಂಗ್ರೆಸ್‌ನ ಪ್ರಭಾವಿ ನಾಯಕನಾಗಿದ್ದರೂ ಟಿಕೆಟ್ ಪಡೆಯಲಾಗದ ಬೇಸರದಲ್ಲಿ ಜೆಡಿಎಸ್ ಕದ ಬಡಿದು ಅಲ್ಲಿಂದ ಅಭ್ಯರ್ಥಿಯಾಗುವ ಅವಕಾಶ ಪಡೆದ ನಾಪಂಡ ಮುತ್ತಪ್ಪ ಈ ಬಾರಿ ಇಲ್ಲಿನ ಪ್ರಬಲ ಉಮೇದುವಾರರು.

ಚುನಾವಣಾ ಕಣದ ಬಲಾಬಲ
ಮಾಜಿ ಸಚಿವರಾಗಿ, ನಾಲ್ಕು ಬಾರಿ ಶಾಸಕರಾಗಿರುವ ಅಪ್ಪಚ್ಚು ರಂಜನ್, ಈ ಬಾರಿಯೂ ಗೆಲ್ಲುವ ಫೇವರೆಟ್. ಹಿಂದುತ್ವದ ಮಂತ್ರ ಹಾಡಿಕೊಂಡೇ ಜಿಲ್ಲೆಯ ಕೊಮುಸೌಹಾರ್ದತೆಯ ಕೊಳದೊಳಕ್ಕೆ ಕಲ್ಲು ಹೊಡೆದು, ಅದನ್ನು ಕಲಕಿ ಅದರಿಂದ ಲಾಭ ಪಡೆಯುವುದನ್ನೇ ಬಿಜೆಪಿ ಇಲ್ಲಿ ನಿರಂತರವಾಗಿ ಮಾಡಿಕೊಂಡು ಬಂದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಬಾರಿಯೂ ಭಜರಂಗದಳ ನಿಷೇಧ, ಟಿಪ್ಪು ಜಯಂತಿ ವಿವಾದಗಳೇ ಇಲ್ಲಿನ ಚುನಾವಣಾ ಸರಕುಗಳು. ಇದನ್ನಿಟ್ಟೇ ಈ ಸಲವೂ ಚುನಾವಣೆ ಗೆಲ್ಲುವ ಲೆಕ್ಕಾಚಾರವನ್ನು ಬಿಜೆಪಿ ಮಾಡಿದೆ.

ಹೀಗೆ ಸಾಗುತ್ತಿರುವ ಬಿಜೆಪಿಯ ಲೆಕ್ಕಾಚಾರಕ್ಕೆ ಕೊಕ್ಕೆ ಹಾಕಲು ಮೊದಲ ಬಾರಿಗೆ ಕಾಂಗ್ರೆಸ್ ಈ ಕ್ಷೇತ್ರದಲ್ಲೊಂದು ಪ್ರಯೋಗ ಮಾಡಲು ಹೊರಟಿದ್ದು, ಪಕ್ಕದ ಜಿಲ್ಲೆಯ ಮಂಥರ್ ಗೌಡರನ್ನ ತನ್ನ ಉಮೇದುವಾರನನ್ನಾಗಿಸಿದೆ.

ಮಾಜಿ ಸಚಿವ ಹಾಲಿ ಅರಕಲಗೂಡು ಜೆಡಿಎಸ್ ಅಭ್ಯರ್ಥಿ ಎ ಮಂಜು ಪುತ್ರ ಮಂಥರ್ ಗೌಡ ಕಾಂಗ್ರೆಸ್‌ನ ಒಕ್ಕಲಿಗ ಸಮುದಾಯದ ಮುಖವಾಗಿ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

ಇಲ್ಲಿ ಬಿಜೆಪಿ ಕಟ್ಟರ್ ಹಿಂದುತ್ವವಾದದೆದರು, ಜಾತಿ ಲೆಕ್ಕಾಚಾರದ ದಾಳ ಉರುಳಿಸಿರುವ ಕಾಂಗ್ರೆಸ್ ಪಕ್ಕಾ ಚೆಸ್ ಬೋರ್ಡ್‌ ಆಟ ಆಡಲು ಹೊರಟಿದೆ.

ಕಾಂಗ್ರೆಸ್‌ನ ಜಾತಿ ಲೆಕ್ಕಾಚಾರ ಹೀಗಿದೆ; ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಗಳೆರಡನ್ನೂ ಒಗ್ಗೂಡಿಸಿ ರಚಿಸಲಾಗಿರುವ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ತಾಲೂಕಿನಲ್ಲೂ ಒಂದೊಂದು ಸಮುದಾಯ ಮೇಲುಗೈ ಸಾಧಿಸಿದೆ.

ಇದರಂತೆ ಅಪ್ಪಚ್ಚು ರಂಜನ್ ವಾಸವಿರುವ ಸೋಮವಾರ ಪೇಟೆ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಪರಿಧಿ ಹೆಚ್ಚಿದ್ದರೆ, ಮಡಿಕೇರಿಯಲ್ಲಿ ಅರೆಭಾಷೆ ಮಾತನಾಡುವ ಅರೆಗೌಡ (ಒಕ್ಕಲಿಗ) ಪಂಗಡ ತನ್ನ ಬಲ ಹೊಂದಿದೆ.

ಉಳಿದಂತೆ ಅಪ್ಪಚ್ಚು ರಂಜನ್ ಅವರ ಕೊಡವ ಜನಾಂಗ ಈ ಭಾಗದಲ್ಲಿ ಮೂರನೇ ಸ್ಥಾನದಲ್ಲಿರುವ ಸಮುದಾಯ. ಹೀಗೆ ಒಕ್ಕಲಿಗ,ದಲಿತ, ಲಿಂಗಾಯತ ಮತ್ತು ಅಲ್ಪಸಂಖ್ಯಾತ ಸಮುದಾಯದ ಬಹುದೊಡ್ಡ ಓಟಿನ ಹಂದರ ಹೊಂದಿರುವ ಕ್ಷೇತ್ರವನ್ನು ಕಾಂಗ್ರೆಸ್ ಮಂಥರ್ ಗೌಡ ಮೂಲಕ ಪಡೆದುಕೊಳ್ಳಲು ಮುಂದಾಗಿದೆ.

ಇನ್ನು ಮತ್ತೊರ್ವ ಅಭ್ಯರ್ಥಿ ಜೆಡಿಎಸ್ ನ ನಾಪಂಡ ಮುತ್ತಪ್ಪ ಹಿಂದೆ ಕಾಂಗ್ರೆಸ್ ನಾಯಕನಾಗಿ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದವರು.

ಟಿಕೆಟ್ ನಿರಾಕರಣೆ ವಿಚಾರದಲ್ಲಿ ಕೈ ಪಕ್ಷದೊಂದಿಗೆ ಮನಿಸಿಕೊಂಡ ಬಳಿಕ ಪಕ್ಷೇತರರಾಗಿ ಕೆಲಸ ಮಾಡಿ, ಆ ಬಳಿಕ ಜೆಡಿಎಸ್ ಸೇರಿದ್ದ ಅವರು, ಕಳೆದೊಂದು ವರ್ಷದಿಂದ ಜಿಲ್ಲೆಯಲ್ಲಿ ಪಕ್ಷ ಸಂಘಟಬೆ ಮಾಡಿದವರು. ಕೊಡವ ಸಮುದಾಯದ ಇವರು ಈ ಬಾರಿ ಅಪ್ಪಚ್ಚು ರಂಜನ್‌ಗೆ ಜಾತಿ ಲೆಕ್ಕಾಚಾರದಲ್ಲಿ ಟಕ್ಕರ್ ಕೊಡುವ ನಾಯಕ.

ತನ್ನ ಹಳೆ ವರ್ಚಸ್ಸು ಮುಂದಿಟ್ಟು ಆ ಪಕ್ಷದ ಓಟನ್ನೂ ಸೆಳೆಯುವ ಶಕ್ತಿ ಹೊಂದಿರುವವರು ಮುತ್ತಪ್ಪ ಕಾಂಗ್ರೆಸ್ ನ ಮಂಥರ್ ಗೌಡ ಹಾದಿಗೂ ತೊಡಕಾಗಬಲ್ಲರು. ಹೀಗೆ ಎರಡೂ ಪಕ್ಷದ ಅಭ್ಯರ್ಥಿಗಳಿಗೂ ಕೊಂಚ ಟೆನ್ಷನ್ ಕೊಡಬಲ್ಲ ನಾಪಂಡ ಮುತ್ತಪ್ಪ, ಆರ್ಥಿಕವಾಗಿ ಸಬಲರಾಗಿರುವ ಕಾರಣ ಜಿಲ್ಲೆಯಲ್ಲೊಂದು ಬದಲಾವಣೆ ತರಬಲ್ಲರೆನ್ನುವ ವಿಶ್ವಾಸ ಅವರ ಬೆಂಬಲಿಗ ವರ್ಗದ್ದು.

ಅಭ್ಯರ್ಥಿಗಳಿಗೆ ನೆರವಾಗುವ ಅಂಶಗಳು
ಹದಿನೈದು ವರ್ಷಗಳ ಕಾಲ ಕ್ಷೇತ್ರದ ಶಾಸಕರಾಗಿರುವ ಅಪ್ಪಚ್ಚು ರಂಜನ್ ಇದುವರೆಗೂ ಇಲ್ಲಿ ಜ್ವಲಂತ ಸಮಸ್ಯೆಗಳಾದ ಕಾಫಿ ಬೆಳೆಗಾರರ ಸಮಸ್ಯೆ, ಮಾನವ ಪ್ರಾಣಿ ಸಂಘರ್ಷ, ಜಿಲ್ಲೆಯ ಕೇಂದ್ರ ಸ್ಥಾನ ಮಡಿಕೇರಿಯ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ವಿಚಾರದಲ್ಲಿ ತೋರಿರುವ ನಿರ್ಲಕ್ಷ್ಯ ಹಾಗೂ ಅಸಡ್ಡೆ, ಇವೆಲ್ಲವುಗಳ ಜೊತೆಗೆ ಕ್ಷೇತ್ರ ಅಭಿವೃದ್ದಿಗಿಂತಲೂ ಹೆಚ್ಚು ಹಿಂದುತ್ವಕ್ಕೆ ಒತ್ತು ನೀಡಿರುವುದು ಅವರ ಪಾಲಿನ ಮೈನಸ್ ಪಾಯಿಂಟ್‌ಗಳು.

ಇದನ್ನ ಬಿಟ್ಟರೆ ಉಳಿದಂತೆ ಕಷ್ಟಕ್ಕಾಗುವ ಜನ ಎನ್ನುವ ಕಾರಣದಿಂದ ಜನ ಇಂದಿಗೂ ಇವರಿಗೇ ಮನ್ನಣೆ ನೀಡುತ್ತಿದ್ದಾರೆ. ಜೊತೆಗೆ ಪಕ್ಷ ನಿಷ್ಠೆಯ ಮತದಾರರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರು ಜಾತಿ, ಸಮುದಾಯ ಎಲ್ಲವನ್ನೂ ಮೀರಿ ಬಿಜೆಪಿಯನ್ನು ಬೆಂಬಲಿಸುವುದು ಪಕ್ಷಕ್ಕೆ ಆನೆ ಬಲ ತಂದಿದೆ. ಇದನ್ನು ಹೊರತುಪಡಿಸಿದರೆ, ಪ್ರಬಲ ಎದುರಾಳಿ ಇಲ್ಲದಿರುವುದೇ ಅಪ್ಪಚ್ಚು ರಂಜನ್ ಗೆಲುವಿನ ಮೂಲ ಶಕ್ತಿ.

ಈ ಕ್ಷೇತ್ರಕ್ಕೆ ಹೊಸ ಮುಖದ ರೂಪದಲ್ಲಿ ಕಾಲಿಟ್ಟಿರುವ ಮಂಥರ್ ಗೌಡ , ವಿದ್ಯಾವಂತ-ಯುವ ಸಮುದಾಯದ ಐಕಾನ್. ಬದಲಾವಣೆ ಬಯಸಿರುವ ಕ್ಷೇತ್ರಕ್ಕೆ ಹೊಸತನ ತಂದುಕೊಡಬಲ್ಲ ಯುವ ನೇತಾರ, ಹೊರಗಿನವರಾದರೂ ಆಸ್ಥೆಯಿಂದ ಕ್ಷೇತ್ರ ನೋಡಿಕೊಳ್ಳಬಲ್ಲ; ಎಲ್ಲಕ್ಕಿಂತ ಹೆಚ್ಚಾಗಿ ಒಕ್ಕಲಿಗ ಸಂಘದಲ್ಲಿ ಜಿಲ್ಲೆ ಪ್ರತಿನಿಧಿಸುತ್ತಿರುವ ನಾಯಕ ಎನ್ನುವ ಅಂಶಗಳು ಅವರಿಗೆ ನೆರವಾಗಬಹುದು.

2021ರ ಡಿಸೆಂಬರ್‌ನಲ್ಲಿ ನಡೆದಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಮಂಥರ್ ಗೌಡ 102 ಮತಗಳ ಅಂತರದಿಂದ, ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಅವರ ಸೋದರ ಸುಜಾ ಕುಶಾಲಪ್ಪ ವಿರುದ್ಧ ಸೋತಿದ್ದರು. ಕ್ಷೇತ್ರಕ್ಕೆ ಹೊಸಬರಾಗಿದ್ದರೂ ಅವರು ಪಡೆದಿದ್ದ ಮತಗಳು ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್‌ನಲ್ಲಿಯೂ ಹುಬ್ಬೇರುವಂತೆ ಮಾಡಿದ್ದವು. ಇದು ಕ್ಷೇತ್ರದೊಂದಿಗೆ ಅವರಿಗಿರುವ ನಂಟಿಗೆ ಸಾಕ್ಷಿಯಾಗಿತ್ತು. ಅದೇ ಹಿನ್ನೆಲೆಯಲ್ಲಿ ಈ ಬಾರಿ ಅವರು ಇಲಿನ ಟಿಕೆಟ್ ರೇಸ್ ಗೆದ್ದಿದ್ದಾರೆ.

ಕ್ಷೇತ್ರ ಮತ್ತು ಅಸ್ತಿತ್ವದ ವಿಚಾರದಲ್ಲಿ ಸ್ವಾಭಿಮಾನ ಮೆರೆಯುವ ಕೊಡಗಿನ ಜನ ಇದೇ ದೃಷ್ಟಿಯಲ್ಲಿ ಮಂಥರ್ ಅವರನ್ನು ನೋಡಿದರೆ ಹಾಸನದ ಕುವರನ ಶಾಸಕನ ಆಸೆ ಮತ್ತೊಂದು ಅವಧಿಗೆ ಪೋಸ್ಟಪೋನ್ ಆಗಬಹುದು.

ಮಡಿಕೇರಿ ಕ್ಷೇತ್ರದ ಮಟ್ಟಿಗೆ ಬಹುತೇಕ ಮತದಾರರು ಪಕ್ಷವನ್ನು ನೋಡಿ ಮತ ನೀಡುವುದನ್ನು ರೂಢಿಸಿಕೊಂಡಿರುವ ಕಾರಣ ಕಾಂಗ್ರೆಸ್‌ನ ತಂತ್ರಗಳು ಕಳೆದ ಒಂದೆರಡು ದಶಕಗಳಿಂದ ಯಾವುದೇ ಫಲ ಕೊಟ್ಟಿಲ್ಲ. ಜೊತೆಗೆ ಬಿಜೆಪಿಯನ್ನು ಕಟ್ಟಿಹಾಕಲು ಮಾಡಿದ ಪ್ರಯತ್ನ ಯಶಸ್ಸು ಕಾಣಲಿಲ್ಲ. ಜೊತೆಗೆ ಕ್ಷೇತ್ರದ ನಾಯಕರುಗಳಲ್ಲಿಲ್ಲದ ಒಗ್ಗಟ್ಟು ಅಭ್ಯರ್ಥಿ ಪಾಲಿಗೆ ಹಿನ್ನಡೆಯಾಗಬಹದು.

ಇವೆಲ್ಲರ ಜೊತೆಗೆ ಕ್ಷೇತ್ರದ ಮಾಜಿ ಶಾಸಕ, ಸಚಿವ ಜೀವಿಜಯ ಪಕ್ಷ ತೊರೆದು ಬಿಜೆಪಿ ಅಭ್ಯರ್ಥಿಗೆ ಪರೋಕ್ಷ ಬೆಂಬಲ ಘೋಷಿಸಿರುವುದು ಕಾಂಗ್ರೆಸ್ ಪಾಲಿಗೆ ಹಿನ್ನೆಡೆ. ಇದರೊಂದಿಗೆ ಎಸ್ಡಿಪಿಐ ಸ್ಪರ್ಧೆಯಿಂದ ಆಗಲಿರುವ ಮತ ವಿಭಜನೆ ಕಾಂಗ್ರೆಸ್ ಪಾಲಿಗೆ ನಕಾರಾತ್ಮಕ ಅಂಶಗಳು.

ಈಗಿನ ಪರಿಸ್ಥಿತಿಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೂ ಇಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್ ಮತ್ತು ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಕೊಡವ ಸಮುದಾಯದ ನಾಯಕರಾಗಿದ್ದು, ಇಬ್ಬರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಇದರಿಂದ ಮತದಾರ ಪ್ರಭುಗಳು ಇಬ್ಬರಲ್ಲಿ ಯಾರತ್ತ ಒಲವು ತೋರುತ್ತಾರೆ ಎಂಬುದೇ ಬಹುಮುಖ್ಯವಾಗಿದೆ.

ಜಾತಿ ಲೆಕ್ಕಾಚಾರ
ಮಡಿಕೇರಿ ಕ್ಷೇತ್ರದಲ್ಲಿ ಮಡಿಕೇರಿ ನಗರ ಹೊರತುಪಡಿಸಿ ಬೇರೆಲ್ಲೆಡೆ ಕೊಡವ ಸಮುದಾಯದ ಸಂಖ್ಯೆ ಗಣನೀಯ. ಸೋಮವಾರ ಪೇಟೆ ಭಾಗದಲ್ಲಿನ ಒಕ್ಕಲಿಗರು, ದಲಿತರು ಹಾಗೂ ಲಿಂಗಾಯತ ವರ್ಗಗಳು ಓಟಿನ ಬಹುಪಾಲಿನ ಪ್ರಭುತ್ವ ಮೆರೆದರೆ, ಮಡಿಕೇರಿಯನ್ನೂ ಒಳಗೊಂಡಂತೆ ಹರಡಿಕೊಂಡಿರುವ ಅಲ್ಪಸಂಖ್ಯಾತ ಹಾಗೂ ಇತರೆ ವರ್ಗ ಗೆಲುವಿನ ನಿರ್ಣಾಯಕರು.

ಒಟ್ಟಾರೆಯಾಗಿ ಕ್ಷೇತ್ರವನ್ನು ಗಮನಿಸುವುದಾದರೆ, ಇಲ್ಲಿ ಬಿಜೆಪಿ ತನ್ನ ಭದ್ರಕೋಟೆಯನ್ನು ಭದ್ರವಾಗಿರಿಸಿಕೊಳ್ಳುತ್ತಾ? ಅಥವಾ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಇದರ ಕೋಟೆ ಛಿದ್ರಗೊಳಿಸುತ್ತವೆಯಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಈ ಸುದ್ದಿ ಓದಿದ್ದೀರಾ? : ಮಡಿಕೇರಿ ವಿಧಾನಸಭಾ ಕ್ಷೇತ್ರ

ವಿರಾಜಪೇಟೆ ಕ್ಷೇತ್ರ
ಕೊಡವರೇ ಹೆಚ್ಚಾಗಿರುವ ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಇದೆ. ‘ಹ್ಯಾಟ್ರಿಕ್’ ಗೆಲುವು ಸಾಧಿಸಿರುವ ಅರೆಭಾಷೆ ಗೌಡ ಸಮುದಾಯಕ್ಕೆ ಸೇರಿದ ಕೆ.ಜಿ.ಬೋಪಯ್ಯ, ಸತತ 4ನೇ ಬಾರಿ ಗೆಲುವಿಗಾಗಿ ಇನ್ನಿಲ್ಲದ ಶ್ರಮ ಹಾಕುತ್ತಿದ್ದಾರೆ.

ಇವರ ವಿರುದ್ದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೈಕೋರ್ಟ್ ವಕೀಲ, ಕೊಡವ ಸಮುದಾಯದ ಎ ಎಸ್ ಪೊನ್ನಣ್ಣ ಕಣಕ್ಕಿಳಿದಿದ್ದಾರೆ. ಜೆಡಿಎಸ್‌ನಿಂದ ಮನ್ಸೂರ್ ಆಲಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ಅಭ್ಯರ್ಥಿಗಳಿಗೆ ನೆರವಾಗುವ ಅಂಶಗಳು

ಮಿತಭಾಷಿ, ಪಕ್ಷದ ನೆಚ್ಚಿನ ನಾಯಕನೆಂದು ಗುರುತಿಸಿಕೊಂಡಿರುವ ಕೆ ಜಿ ಬೋಪಯ್ಯ, ಪಕ್ಕಾ ಕೆಲಸಗಾರ. ಹೀಗಾಗಿ ಸಮುದಾಯ ಬದಲಾದರೂ ಜನರ ಪ್ರೀತಿ ಗಳಿಸಿ ಶಾಸಕರಾದವರು. ಇದೇ ಇವರ ಮೊದಲ ಪ್ಲಸ್ ಪಾಯಿಂಟ್.

ಇದರ ಜೊತೆಗೆ ಅತಿವೃಷ್ಟಿಯಾದಾಗಲೆಲ್ಲ ಗುಡ್ಡ, ಬೆಟ್ಟಗಳನ್ನು ಹತ್ತಿ ಸಂತ್ರಸ್ತರಿಗೆ ಸಾಂತ್ವನ ಹೇಳಿರುವುದು ಇವರ ಮತ್ತೊಂದು ಹಿರಿಮೆ. ಇದರ ಜೊತೆಜೊತೆಗೆ ಅಗತ್ಯಕ್ಕೆ ತಕ್ಕಂತೆ ಹಿಂದುತ್ವದ ಝಂಡಾ ಹಾರಿಸುವುದನ್ನು ಕರಗತ ಮಾಡಿಕೊಂಡಿರುವ ಬೋಪಯ್ಯ, ಇದ್ದುದರಲ್ಲೇ ತೃಪ್ತಿ ಪಟ್ಟಕೊಂಡವರು. ಅಲ್ಪಸಂಖ್ಯಾತರ ವಿರೋಧಿ ಎನ್ನುವುದೇ ಇವರ ಮೈನಸ್ ಪಾಯಿಂಟ್.

ಇನ್ನು ಕಾಂಗ್ರೆಸ್‌ನ ಎ ಎಸ್‌ ಪೊನ್ನಣ್ಣ ವಿಚಾರವಾದಿ ಎ.ಕೆ.ಸುಬ್ಬಯ್ಯ ಅವರ ಪುತ್ರ. ಕೊಡವರೇ ಆಗಿರುವ ಕಾರಣ ಜಾತಿ ತಮ್ಮ ಕೈಹಿಡಿಯುವ ನಿರೀಕ್ಷೆ ಇಟ್ಟುಕೊಂಡು ಪೊನ್ನಣ್ಣ ಕಣಕ್ಕಿಳಿದಿದ್ದಾರೆ. ಬಿಜೆಪಿಗೆ ಅದರದ್ದೇ ರೀತಿಯಲ್ಲಿ ಕೌಂಟರ್ ಕೊಟ್ಟಿರುವ ಪೊನ್ನಣ ಕ್ಷೇತ್ರದ ಅಲ್ಪಸಂಖ್ಯಾತರ ಓಲೈಕೆಗಿಳಿಯದೆಯೇ ಮತಯಾಚನೆ ಮಾಡಲು ಹೊರಟಿರುವುದು ಹುಬ್ಬೇರುವಂತೆ ಮಾಡಿದೆ.

ಇದೇ ಸದ್ಯ ಇವರಿಗಿರುವ ಪ್ಲಸ್ ಪಾಯಿಂಟ್. ಇದರ ಜೊತೆಗೆ ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸಂಕೇತ್ ಪೂವಯ್ಯ ಕಾಂಗ್ರೆಸ್ ಸೇರಿ, ಪೊನ್ನಣ್ಣಗೆ ಬೆಂಬಲ ನೀಡಿರುವುದು ಅವರ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.

ಸರ್ವೋದಯ ಪಕ್ಷದಿಂದ ಮನು ಸೋಮಯ್ಯ ಸ್ಪರ್ಧೆ ಮಾಡಿ ಮತಗಳಲ್ಲಿ ವಿಘಟನೆ ಮಾಡದ ಹೊರತು ಪೊನ್ನಣ್ಣ ಪಾಲಿಗೆ ಗೆಲುವು ಕಷ್ಟ. ಇದರ ಜೊತೆಜೊತಗೆ ಕಾಡಂಚಿನ ಪ್ರದೇಶಗಳ ರೈತರು, ಬುಡಕಟ್ಟು ನಿವಾಸಿಗಳ ಕಡೆಗೆ ಪೊನ್ನಣ್ಣ ಗಮನ ಹರಿಸಿರುವುದು ಅವರ ಬದಲಾದ ಕಾಯತಂತ್ರಕ್ಕೆ ಹಿಡಿದ ಕೈಗನ್ನಡಿ.

ಜೆಡಿಎಸ್ ಇಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದರ ಜೊತೆಗೆ ತನ್ನ ಸಾಂಪ್ರದಾಯಿಕ ಮತ ಹಾಗೂ ದಲಿತರ ಆಶೀರ್ವಾದ ಬಯಸಿ ನಿಂತಿರುವುದು ಅದಕ್ಕಿಂತ ಕಾಂಗ್ರೆಸ್‌ಗೆ ಹೊಡೆತ ನೀಡಿದರೂ ಅಚ್ಚರಿ ಇಲ್ಲ. ಉಳಿದಂತೆ ಎಲ್ಲವೂ ಇಲ್ಲಿ ನಿರೀಕ್ಷಿತ.

ಜಾತಿ ಲೆಕ್ಕಾಚಾರ
ವಿರಾಜಪೇಟೆಯಲ್ಲಿ ಕೊಡವ ಸಮುದಾಯದವರೇ ಬಹುಸಂಖ್ಯಾತರು. ಇವರನ್ನು ಬಿಟ್ಟರೆ ದಲಿತ ಹಾಗೂ ಅಲ್ಪಸಂಖ್ಯಾತರು ಗೆಲುವಿನ ನಿರ್ಣಾಯಕರು. ಹೀಗಾಗಿ ಕೊಡವರನ್ನು ಒಲಿಸಿಕೊಂಡವರು ಅದರ ಜೊತೆಗೆ ದಲಿತರ ಮತ ಪಡೆದುಕೊಂಡರೆ ಈ ಕ್ಷೇತ್ರ ಅವರದ್ದೇ.

ಜಿಲ್ಲೆಯ ಹಾಲಿ ಚಿತ್ರಣ
ಒಟ್ಟು ಎರಡು ಕ್ಷೇತ್ರಗಳನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ 4, 57, 735 ಮತದಾರರಿದ್ದಾರೆ. ಇವರಲ್ಲಿ 224875 ಪುರುಷರು, 231415 ಮಹಿಳಾ ಮತದಾರರಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ಈ ಬಾರಿ ಎರಡೂ ಕಡೆಯಿಂದ ಒಟ್ಟು 24 ಅಭ್ಯರ್ಥಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಈ ಬಾರಿ ಮತದಾರರು ಜಿಲ್ಲೆಯ ರಾಜಕೀಯ ಇತಿಹಾಸವನ್ನು ಮರುಕಳಿಸುತ್ತಾರೋ ಅಥವಾ ಬದಲಾವಣೆ ಬಯಸುತ್ತಾರೋ ಎಂಬುದೇ ಈಗ ಇಲ್ಲಿನ ಕುತೂಹಲ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ವೈಫಲ್ಯ-6 | ಎಲ್ಲಿವೆ ಸಂಸದರ ಆದರ್ಶ ಗ್ರಾಮಗಳು; ಮೋದಿ ದತ್ತು ಪಡೆದ ಹಳ್ಳಿಗಳು?

ಸಂಸದ್ ಆದರ್ಶ ಗ್ರಾಮ ಯೋಜನೆಯಡಿ ಏನೆಲ್ಲಾ ಸೌಲಭ್ಯಗಳಿದ್ದವೂ ಆ ಯಾವುದೇ ಸೌಕರ್ಯಗಳೂ...

ಬೆಂಗಳೂರು | ಹಾಡಹಗಲೇ ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರ ಬರ್ಬರ ಹತ್ಯೆ

ರಾಜ್ಯ ರಾಜಧಾನಿ ಬೆಂಗಳೂರಿನ ಸಾರಕ್ಕಿ ಮಾರ್ಕೆಟ್ ಬಳಿಯ ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರನ್ನು...

ಬೆಂಗಳೂರು |ತಲಾ ₹1 ಲಕ್ಷ ದಂಡ ಬಾಕಿ ಉಳಿಸಿಕೊಂಡಿವೆ 123 ವಾಹನಗಳು

ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿ, ಹೆಚ್ಚು ದಂಡಕ್ಕೆ ಗುರಿಯಾಗಿರುವ ವಾಹನಗಳನ್ನು...

ಚಿಕ್ಕಮಗಳೂರು | ಜಯಪ್ರಕಾಶ್ ಹೆಗ್ಡೆ ಮಲೆನಾಡಿನ ಅಡಿಕೆ ಬೆಳೆಗಾರರ ಆಶಾಕಿರಣ: ಬಿ ಎ ರಮೇಶ್ ಹೆಗ್ಡೆ

"ಜಯಪ್ರಕಾಶ್ ಹೆಗ್ಡೆ ಅವರು ಅಡಿಕೆ ಬೆಳೆಗಾರರ ಆಶಾಕಿರಣ. ಕೇವಲ ಎರಡು ವರ್ಷಗಳಲ್ಲಿ...