ತೇರದಾಳ ಕ್ಷೇತ್ರದಲ್ಲಿ ನೇಕಾರರು ಯಾರ ಪರ ಒಲವು ವ್ಯಕ್ತಪಡಿಸುತ್ತಾರೋ ಅವರೇ ಅಲ್ಲಿನ ಶಾಸಕರಾಗುತ್ತಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಫೈಟ್ ಇರಲಿದೆ. ಈ ನಡುವೆ ಪಕ್ಷೇತರ ಅಭ್ಯರ್ಥಿ ಮತ ವಿಭಜಿಸಿ, ಯಾರ ಗೆಲುವಿಗೆ ಕಾರಣವಾಗುತ್ತಾರೆ ಎಂಬುದು ಕೂಡ ಕುತೂಹಲ ಸೃಷ್ಟಿಸಿದೆ.
ಜೈನರ ಪ್ರಮುಖ ಕೇಂದ್ರವಾಗಿರುವ ತೇರದಾಳ, ರಾಜ್ಯದಲ್ಲಿ ಅತಿಹೆಚ್ಚು ನೇಕಾರರನ್ನು ಹೊಂದಿರುವ ವಿಧಾನಸಭಾ ಕ್ಷೇತ್ರ. ನಾಲ್ಕನೇ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ತೇರದಾಳ ಕ್ಷೇತ್ರದಲ್ಲಿ ಚುನಾವಣೆ ಕಾವು ರಂಗೇರಿದೆ.
2008ರಲ್ಲಿ ನಡೆದ ಕ್ಷೇತ್ರ ಮರುವಿಂಗಡನೆಯಲ್ಲಿ ಗುಳೇದಗುಡ್ಡ ಮತ್ತು ಜಮಖಂಡಿಯ ಹಳ್ಳಿಗಳನ್ನು ಸೇರಿಸಿ, ತೇರದಾಳ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ರಬಕವಿ, ಬನಹಟ್ಟಿ, ಮಹಾಲಿಂಗಪುರ ಈ ಕ್ಷೇತ್ರದ ಪ್ರಮುಖ ಪಟ್ಟಣಗಳಾಗಿವೆ.
ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ 2018ರಲ್ಲಿ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಬಾಗಲಕೋಟ ಜಿಲ್ಲೆಯ ತೇರದಾಳವನ್ನು ಹೊಸ ತಾಲೂಕನ್ನಾಗಿ ಘೋಷಣೆ ಮಾಡಿದರು. ರಾಜಕೀಯವಾಗಿ ಇಲ್ಲಿ ಮೇಲಿಂದ ಮೇಲೆ ನೇಕಾರರಿಗೆ ಮನ್ನಣೆ ನೀಡಿ ಅನ್ನುವ ಕೂಗು ಸದಾ ಕೇಳುತ್ತಲೇ ಇರುತ್ತದೆ.
ಆದರೆ ನೇಕಾರ ಪ್ರಾತಿನಿಧ್ಯ ವಿಚಾರದಲ್ಲಿ ಕಾಂಗ್ರೆಸ್ ನೇಕಾರ ಸಮುದಾಯದ ಉಮಾಶ್ರೀ ಅವರಿಗೆ ಮಣೆ ಹಾಕಿ ಒಮ್ಮೆ ಗೆಲುವು ಕಂಡು ಇನ್ನೊಮ್ಮೆ ಸೋಲು ಅನುಭವಿಸಿದೆ. ಆದರೆ ಬಿಜೆಪಿ ಮಾತ್ರ ಈ ವಿಚಾರದಲ್ಲಿ ಭಿನ್ನವಾಗಿ ನಡೆದುಕೊಂಡಿದೆ. ಪ್ರತಿ ಬಾರಿ ನೇಕಾರರಿಗೆ ಸ್ಪರ್ಧೆಗೆ ಅವಕಾಶ ಕೊಡಿ ಎಂಬ ಕೂಗು ಇದ್ದರೂ ಇದೂವರೆಗೂ ಬಿಜೆಪಿ ನೇಕಾರರಿಗೆ ಮನ್ನಣೆ ನೀಡಿಲ್ಲ. ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿ, ನೇಕಾರ ಸಮುದಾಯ ಅಲ್ಲದ ಲಿಂಗಾಯತ ಸಮುದಾಯದ ಸಿದ್ದು ಸವದಿಗೆ ಟಿಕೆಟ್ ನೀಡಿದೆ.
2008ರಿಂದ ಕಾಂಗ್ರೆಸ್‌ನಿಂದ ತೇರದಾಳ ಕ್ಷೇತ್ರವನ್ನು ಪ್ರತಿನಿಧಿಸುತ್ತ ಬಂದ ನಟಿ ಉಮಾಶ್ರೀಗೆ ಈ ಬಾರಿ ಟಿಕೆಟ್ ತಪ್ಪಿದೆ. ಹೊಸ ಮುಖ ಸಿದ್ದು ಕೊಣ್ಣೂರು ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ. 2013ರಲ್ಲಿ ನಟಿ ಉಮಾಶ್ರೀ ಶಾಸಕಿಯಾಗಿ ಆಯ್ಕೆಯಾಗಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವೆಯೂ ಆದರು. ಅವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ನೊಣವಿನಕೆರೆ ಗ್ರಾಮದವರು. ಸದಾ ಬೆಂಗಳೂರಿನಲ್ಲೇ ಕಾಲ ಕಳೆಯುತ್ತಾರೆ ಎನ್ನುವ ದೂರು ಇವರ ಮೇಲಿತ್ತು. ಕೊನೆ ಕ್ಷಣದವರೆಗೂ ತಮಗೇ ಟಿಕೆಟ್ ಸಿಗುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ, ತೇರದಾಳದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ ಎಂಬ ಕೂಗು ಬಲವಾಗಿ ಕೇಳಿ ಬಂದಿದ್ದರಿಂದ ಸಿದ್ದು ಕೊಣ್ಣೂರು ಅವರಿಗೆ ಟಿಕೆಟ್ ಲಭಿಸಿದೆ.
ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ
ಬಿಜೆಪಿಯಲ್ಲಿ ಈ ಬಾರಿ ಜಿಲ್ಲೆಯ ನೇಕಾರ ಮುಖಂಡ ಮನೋಹರ ಶಿರೋಳ ಪ್ರಬಲ ಆಕಾಂಕ್ಷಿಯಾಗಿದ್ದರು. ಇವುಗಳ ಮಧ್ಯೆ ಮೂರನೇ ವ್ಯಕ್ತಿ ಪಿಕೆಪಿಎಸ್ ಮಾಜಿ ನಿರ್ದೆಶಕ ಭೀಮಶಿ ಮಗದುಮ್ ಸಹ ಬಿಜೆಪಿ ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದರು. ಆದರೆ ಬಿಜೆಪಿ ಅಂತಿಮವಾಗಿ ಸಿದ್ದು ಸವದಿಗೆ ಮುದ್ರೆ ಒತ್ತಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ನೀಡಲು ಮತ್ತೊಬ್ಬ ಅಭ್ಯರ್ಥಿ ಸಜ್ಜಾಗಿದ್ದಾರೆ. ಅದು ಕಾಂಗ್ರೆಸ್‌ನಿಂದ ಬಂಡಾಯ ಸಾರಿ ಪಕ್ಷೇತರ ಅಭ್ಯರ್ಥಿಯಾಗಿ ಡಾ. ಪದ್ಮಜೀತ್ ನಾಡಗೌಡ ಉಮೇದುವಾರಿಕೆ ಸಲ್ಲಿಸಿದ್ದಾರೆ.
ತೇರದಾಳ ಕ್ಷೇತ್ರದಲ್ಲಿ ನೇಕಾರರು ಯಾರ ಪರ ಒಲವು ವ್ಯಕ್ತಪಡಿಸುತ್ತಾರೋ ಅವರೇ ಅಲ್ಲಿನ ಶಾಸಕರಾಗುತ್ತಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಫೈಟ್ ಇರಲಿದೆ. ಮತ್ತೊಂದು ಅವಧಿಗೆ ಗೆಲ್ಲಲು ಸಿದ್ದು ಸವದಿ ಪ್ರಯತ್ನಿಸುತ್ತಿದ್ದು, ಸವದಿಗೆ ಕಾಂಗ್ರೆಸ್‌ನ ಹೊಸ ಮುಖ ಸಿದ್ದು ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ. ಈ ನಡುವೆ ಪಕ್ಷೇತರ ಅಭ್ಯರ್ಥಿ ಮತ ವಿಭಜಿಸಿ, ಯಾರ ಗೆಲುವಿಗೆ ಕಾರಣವಾಗುತ್ತಾರೆ ಎಂಬುದು ಕೂಡ ಕುತೂಹಲ ಸೃಷ್ಟಿಸಿದೆ.