ಯಾದಗಿರಿ | ನಾಲ್ಕರಲ್ಲಿ ಮೂರೂ ಪಕ್ಷಗಳಿಗೆ ಜಾಗ; ಈ ಬಾರಿ ಅಭ್ಯರ್ಥಿಗಳು ಅದಲು – ಬದಲು

Date:

ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತದಾರರು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಮೂರಕ್ಕೂ ಜಾಗ ನೀಡಿದ್ದಾರೆ. ಈ ಬಾರಿ ಅಭ್ಯರ್ಥಿಗಳು ಅದಲು ಬದಲಾಗಿದ್ದು, ಮತದಾರ ಯಾರ ಕೈ ಹಿಡಿಯಲಿದ್ದಾರೆ ಎನ್ನುವುದು ಕುತೂಹಲ.

2009ರಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಕಲಬುರಗಿ ಜಿಲ್ಲಾ ವ್ಯಾಪ್ತಿಗೆ ಒಳಪಡುತ್ತಿದ್ದ ಯಾದಗಿರಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿದ್ದರು. ಆರು ತಾಲೂಕುಗಳಿರುವ ಯಾದಗಿರಿ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಯಾದಗಿರಿ ಅತ್ಯಂತ ಚಿಕ್ಕ ಜಿಲ್ಲೆಯಾದರೂ ಸಹಿತ ಘಟಾನುಘಟಿ ನಾಯಕರನ್ನೇ ನಾಡಿಗೆ ನೀಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಪ್ತ ಖಾತೆಗಳ ಸಚಿವ ಬಾಬುರಾವ್ ಚಿಂಚನಸೂರು, ಮಾಜಿ ಸಚಿವ ಎ ಬಿ ಮಾಲಕರೆಡ್ಡಿ ಮತ್ತು ಪ.ಪಂಗಡ ನಾಯಕ ರಾಜುಗೌಡ ಅವರು ಯಾದಗಿರಿಯಿಂದಲೇ ಪ್ರಸಿದ್ಧಿ ಪಡೆದಿದ್ದಾರೆ.

ಯಾದಗಿರಿ, ಶಹಾಪುರ, ಸುರಪುರ ಹಾಗೂ ಗುರುಮಠಕಲ್ ಒಳಗೊಂಡ ಯಾದಗಿರಿ ಜಿಲ್ಲೆ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಮೊದಲಿಗಿಂತಲೂ ಜಿಲ್ಲಾ ರಾಜಕಾರಣ ತುಸು ಬದಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು ತಮ್ಮ ಮಾತೃ ಪಕ್ಷದ ಎದುರೇ ಪಕ್ಷಾಂತರವಾಗಿ ಅಖಾಡಕ್ಕೆ ಧುಮುಕಿದ್ದಾರೆ. ಜಿಲ್ಲಾ ರಾಜಕಾರಣ ಈ ಬಾರಿ ಪಕ್ಷಾಂತರ ಪರ್ವಕ್ಕೆ ಸಾಕ್ಷಿಯಾಗಿದೆ. ಮಾತೃ ಪಕ್ಷಗಳ ಟಿಕೆಟ್ ನಿರಾಕರಣೆಗೆ ಬಂಡಾಯ ಸಾರಿರುವ ಪ್ರಭಾವಿ ನಾಯಕರು ಗೆಲುವಿನ ಭರ್ಜರಿ ತಯಾರಿಯಲ್ಲಿದ್ದಾರೆ.

ಇರುವ ನಾಲ್ಕು ಕ್ಷೇತ್ರಗಳಲ್ಲಿ ರಾಜ್ಯದ ಮೂರೂ ಪ್ರಮುಖ ಪಕ್ಷಗಳಿಗೂ ಜಿಲ್ಲೆ ಜಾಗ ಕೊಟ್ಟಿದೆ. ಯಾದಗಿರಿಯಿಂದ ಬಿಜೆಪಿಯ ವೆಂಕಟರೆಡ್ಡಿ ಗೌಡ ಮುದ್ನಾಳ ಅವರು ವಿಧಾನಸಭೆಗೆ ಕಾಲಿಟ್ಟರೆ, ಸುರುಪುರದಿಂದ ಬಿಜೆಪಿಯ ರಾಜುಗೌಡ, ಶಹಾಪುರದಿಂದ ಕಾಂಗ್ರೆಸ್‌ನ ಶರಣಬಸಪ್ಪಗೌಡ ದರ್ಶಾನಪುರ ಹಾಗೂ ಗುರುಮಠಕಲ್ ಜೆಡಿಎಸ್‌ನಿಂದ ನಾಗನಗೌಡ ಕಂದಕೂರ್ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಈ ಬಾರಿಯ ಚುನಾವಣೆ ಹಾಲಿ ಮತ್ತು ಮಾಜಿ ಶಾಸಕರ ನಡುವೆ ನಡೆಯಲಿದ್ದು, ಜಿಲ್ಲೆಯಲ್ಲಿ ರಾಜಕೀಯ ಅಖಾಡ ಕಾವೇರಿದೆ. ಕ್ಷೇತ್ರವಾರು ಮಾಹಿತಿ ಇಲ್ಲಿದೆ.

ಯಾದಗಿರಿ

ಭೀಮಾ ನದಿಯ ತೀರದಲ್ಲಿರುವ ಯಾದಗಿರಿ ತಾಲೂಕು, ವಿಧಾನಸಭಾ ಕ್ಷೇತ್ರವೂ ಹೌದು. ಹೊಸ ಜಿಲ್ಲೆಯಾಗಿ ರೂಪುಗೊಂಡ ನಂತರ ಯಾದಗಿರಿ ಎರಡು ವಿಧಾನಸಭಾ ಚುನಾವಣೆಗಳನ್ನು ಎದುರಿಸಿದೆ.

ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ 80ರ ದಶಕವರೆಗೆ ಕಾಂಗ್ರೆಸ್‌ ಸಹ ನೆಲೆಯೂರಲು ಸಾಧ್ಯವಾಗಿರಲಿಲ್ಲ. 70ರ ದಶಕದವರೆಗೆ ಪಕ್ಷೇತರ ಅಭ್ಯರ್ಥಿಗಳೇ ಕ್ಷೇತ್ರದಿಂದ ಆಯ್ಕೆಯಾಗಿದ್ದು, 80ರ ದಶಕದ ನಂತರ ಕಾಂಗ್ರೆಸ್‌ ಯಾದಗಿರಿಯನ್ನು ತನ್ನ ಭದ್ರಕೋಟೆಯನ್ನಾಗಿಸಿಕೊಂಡಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಗೆಲುವು ಕಂಡಿದೆ. ಜೆಡಿಎಸ್ ಈವರೆಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ.

ಈ ಬಾರಿಯ ಚುನಾವಣಾ ಕಣದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌, ಕಾಂಗ್ರೆಸ್‌ನಿಂದ ಚನ್ನರೆಡ್ಡಿ ಪಾಟೀಲ್ ತುನ್ನೂರು, ಜೆಡಿಎಸ್‌ನಿಂದ ಮಾಜಿ ಸಚಿವ ಎ ಬಿ ಮಾಲಕರೆಡ್ಡಿಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಹಣಮೇಗೌಡ ಬಿರನಕಲ್ ಇದ್ದಾರೆ.

ಕಾಂಗ್ರೆಸ್‌ನಿಂದ ಮೂರು ಬಾರಿ ಶಾಸಕರಾಗಿರುವ ಎ ಬಿ ಮಾಲಕರೆಡ್ಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಾರಿದ್ದರು. ಈ ಬಾರಿಯ ಚುನಾವಣಾ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್‌ ಟಿಕೆಟ್‌ಗಾಗಿ ಪ್ರಯತ್ನಿಸಿದ್ದ ಎ ಬಿ ಮಾಲಕರೆಡ್ಡಿ ಕಮಲ, ಕೈ ಬಿಟ್ಟು ಜೆಡಿಎಸ್‌ ಸೇರ್ಪಡೆಯಾದರು.

ಎ ಬಿ ಮಾಲಕರೆಡ್ಡಿ ಅವರ ಜೆಡಿಎಸ್‌ ಎಂಟ್ರಿಯಿಂದ ಸ್ಥಳೀಯ ನಾಯಕ ಹಣಮೇಗೌಡ ಬಿರನಕಲ್ ಅವರಿಗೆ ಟಿಕೆಟ್ ಕೈತಪ್ಪಿದೆ. ಅವರು ದಳ ತಮಗೆ ಮೋಸ ಮಾಡಿದೆ ಎಂದು ಬಂಡಾಯ ಸಾರಿ, ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದು ಮೂರು ಪಕ್ಷಗಳ ವಿರುದ್ಧ ತೊಡೆ ತಟ್ಟಿದ್ದಾರೆ. ನಾಮಪತ್ರ ಸಲ್ಲಿಕೆಯ ವೇಳೆ ಬಿರನಕಲ್‌ ಪರ ಜನಸಾಗರವೇ ಹರಿದು ಬಂದಿತ್ತು. ಜೆಡಿಎಸ್‌ನ ವರಿಷ್ಠರಿಂದ ಹಿಡಿದು ಸ್ಥಳೀಯ ನಾಯಕರವರೆಗೆ ಅವರ ಮನವೊಲಿಸಲು ಯತ್ನಿಸಿದರಾದರೂ ಚುನಾವಣಾ ಅಖಾಡದಿಂದ ಹಣಮೇಗೌಡ ಹಿಂದೆ ಸರಿಯಲಿಲ್ಲ.

ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಜೊತೆಗೆ ಶಾಸಕ ವೆಂಕಟರೆಡ್ಡಿ ಅವರು ಜಿಲ್ಲಾ ಬಿಜೆಪಿ ಮುಖಂಡರೊಂದಿಗಿನ ಸಂಬಂಧವನ್ನು ಹದಗೆಡಿಸಿಕೊಂಡಿದ್ದಾರೆ ಎಂದು ಸ್ವಪಕ್ಷದವರೇ ರಾಜ್ಯ ನಾಯಕರಿಗೆ ದೂರಿದ್ದರು. ಆದರೂ, ಬಿ ಎಸ್ ಯಡಿಯೂರಪ್ಪ ಅವರ ಆಪ್ತ ಎನ್ನುವ ಕಾರಣಕ್ಕೆ ಟಿಕೆಟ್ ಲಭಿಸಿದೆ. ಕಾಂಗ್ರೆಸ್‌ನಿಂದ ಚನ್ನಾರೆಡ್ಡಿ ಅವರಿಗೆ ಟಿಕೆಟ್ ದೊರೆತಿದೆ. ಕಾಂಗ್ರೆಸ್‌ನೊಳಗೆ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಕ್ಷೇತ್ರದಲ್ಲಿ ಲಿಂಗಾಯತ ಮತದಾರರೇ ಅಧಿಕವಾಗಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಮೂವರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಲಿಂಗಾಯತ ಮತಗಳು ಸ್ಪಷ್ಟವಾಗಿ ಎದುರಾಳಿಗೆ ಲಾಭ ತಂದು ಕೊಡಲಿವೆ. ಮೂವರ ವರ್ಚಸ್ಸಿಗೆ ಹೋಲಿಸಿದರೆ ಜೆಡಿಎಸ್ ಬಂಡಾಯ ಅಭ್ಯರ್ಥಿ ಹಣಮೇಗೌಡ ಬಿರನಕಲ್‌ ಸ್ಥಳೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದು, ಗೆಲ್ಲುವ ಮುನ್ಸೂಚನೆಗಳು ಕಾಣಿಸುತ್ತಿವೆ.

ಗುರುಮಠಕಲ್‌

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಲಿಲ್ಲದ ಸರದಾರ ಎನ್ನುವ ಬಿರುದು ತಂದುಕೊಟ್ಟ ಕ್ಷೇತ್ರವಿದು. ಮಲ್ಲಿಕಾರ್ಜುನ ಖರ್ಗೆ ಎಂಟು ಬಾರಿ ಇಲ್ಲಿಂದ ಶಾಸಕರಾಗಿ ಆಯ್ಕೆಯಾಗಿ ಹೋಗಿದ್ದಾರೆ. ಖರ್ಗೆ ಅವರ ರಾಜಕೀಯ ಜೀವನಕ್ಕೆ ಭದ್ರಬುನಾದಿ ಹಾಕಿಕೊಟ್ಟಿರುವ ಗುರುಮಠಕಲ್ ಕಾಂಗ್ರೆಸ್‌ನ ಭದ್ರಕೋಟೆ.

ಗುರುಮಠಕಲ್ ವಿಧಾನಸಭಾ ಕ್ಷೇತ್ರ ಈವರೆಗೆ 13 ವಿಧಾನಸಭಾ ಚುನಾವಣೆಗಳಿಗೆ ಸಾಕ್ಷಿಯಾಗಿದೆ. ಮೊದಲ ಮತ್ತು ಕೊನೆಯ ಚುನಾವಣೆಯನ್ನು ಹೊರತುಪಡಿಸಿ ಉಳಿದೆಲ್ಲ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಗೆಲುವಿನ ಖಾತೆ ತೆರೆದಿದ್ದಾರೆ. ಬಿಜೆಪಿ ಒಮ್ಮೆಯೂ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿಲ್ಲ.

ಈ ಬಾರಿಯ ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್‌ನಿಂದ ಬಾಬುರಾವ್ ಚಿಂಚನಸೂರು, ಜೆಡಿಎಸ್‌ನಿಂದ ಹಾಲಿ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಕಂದಕೂರು ಹಾಗೂ ಬಿಜೆಪಿಯಿಂದ ಲಲಿತಾ ಅನಪುರ ಅವರು ಕಣದಲಿದ್ದಾರೆ. ಲಲಿತಾ ಅನಪುರ ಅವರು ಯಾದಗಿರಿ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಮಹಿಳಾ ಅಭ್ಯರ್ಥಿಯಾಗಿದ್ದಾರೆ.

ಸಪ್ತಖಾತೆಗಳ ಸಚಿವ ಎಂದೇ ಖ್ಯಾತರಾಗಿರುವ ಬಾಬುರಾವ್ ಚಿಂಚನಸೂರು ಮಲ್ಲಿಕಾರ್ಜುನ ಖರ್ಗೆ ನಂತರ ಈ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೂರನೇ ಬಾರಿ ಜಯಿಸಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ತಮ್ಮಿದಾಗಿಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಾದರೂ ಸಹ ಪಕ್ಷದ ಒಳೇಟು ಮತ್ತು ಜೆಡಿಎಸ್ ಅಭ್ಯರ್ಥಿ ನಾಗನಗೌಡ ಕಂದಕೂರು ಅವರ ಮೇಲಿನ ಅನುಕಂಪದ ಪರಿಣಾಮ ಸೋಲೊಪ್ಪಬೇಕಾಯಿತು.

ಸೋಲಿನ ಬಳಿಕ ಬಿಜೆಪಿ ಸೇರಿದ್ದ ಬಾಬುರಾವ್ ಚಿಂಚನಸೂರು ಈ ಬಾರಿಯ ಚುನಾವಣೆಗೆ ಮತ್ತೆ ಕಾಂಗ್ರೆಸ್‌ನಿಂದ ಅಖಾಡಕ್ಕಿಳಿದಿದ್ದಾರೆ. ಅವರಿಗೆ ಎದುರಾಳಿಯಾಗಿ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಜೀವತುಂಬಿದ ಮತ್ತು ಯುವಜನರನ್ನು ತಮ್ಮತ್ತ ಸೆಳೆದಿರುವ ಶರಣಗೌಡ ಕಂದಕೂರು ಅವರು ಕಣದಲ್ಲಿದ್ದಾರೆ.

ಕ್ಷೇತ್ರದಲ್ಲಿ ಕಬ್ಬಲಿಗ ಸಮುದಾಯದ ಕಬ್ಬಲಿಗ ಸಮುದಾಯದ 70 ಸಾವಿರ ಮತಗಳಿದ್ದು, ಇವರೇ ನಿರ್ಣಾಯಕರಾಗಿದ್ದಾರೆ. ಬಾಬುರಾವ್ ಚಿಂಚನಸೂರು ಮತ್ತು ಲಲಿತಾ ಅನಪುರ್ ಅವರು ಸಮುದಾಯದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಸಮುದಾಯ ಚಿಂಚನಸೂರು ಪರ ಒಲವು ತೋರುವ ಲಕ್ಷಣಗಳಿವೆ. ಕಾಂಗ್ರೆಸ್‌ನ ಚಿಂಚನಸೂರು ಅವರು ಅಪಘಾತಕ್ಕೀಡಾಗಿದ್ದು, ಕ್ಷೇತ್ರದ ಸ್ಥಳೀಯ ಮುಖಂಡರು ತಾವೇ ಅಭ್ಯರ್ಥಿಗಳಂತೆ ಪ್ರಚಾರಕ್ಕೆ ಧುಮುಕಿದ್ದಾರೆ.

ಲಲಿತಾ ಅನಪುರ ಅವರಿಗೆ ಪಕ್ಷದೊಳಗಿನ ಆಂತರಿಕ ಮೈಮನಸ್ಸು ಪರಿಣಾಮ ಬೀರಲಿದೆ. ಬಿಜೆಪಿಯ ಕಾರ್ಯಕರ್ತರು ಮತ್ತು ಮುಖಂಡರೇ ಕಾಂಗ್ರೆಸ್‌ನ ಅಭ್ಯರ್ಥಿಯತ್ತ ಮುಖ ಮಾಡಿದ್ದಾರೆ.

ನಾಗನಗೌಡ ಕಂದಕೂರು ಅವರು ಕೊನೇ ಚುನಾವಣೆಯಲ್ಲಿ ಗೆಲುವು ಸಾಧಿಸುವಲ್ಲಿ ಪುತ್ರ ಶರಣಗೌಡ ಅವರ ಪಾತ್ರ ಮಹತ್ವದ್ದು, ಕ್ಷೇತ್ರಾದ್ಯಂತ ಪಾದಯಾತ್ರೆ ಸೇರಿದಂತೆ ಪಕ್ಷವನ್ನು ಬಲವಾಗಿ ಸಂಘಟಿಸಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲಿಯೂ ತಮ್ಮದೇ ಅಭ್ಯರ್ಥಿಗಳ ಪ್ರಾಬಲ್ಯ ಸಾಧಿಸುವಂತೆ ನೋಡಿಕೊಳ್ಳಲು ಯತ್ನಿಸಿದ್ದಾರೆ. ಆದರೆ, ಗುತ್ತಿಗೆದಾರರು ಶರಣುಗೌಡ ಅವರ ಮೇಲೆ ಮುನಿಸು ಹೊತ್ತಿದ್ದಾರೆ ಎನ್ನಲಾಗಿದ್ದು, ಶರಣಗೌಡ ಅವರ ದರ್ಪದ ನಡೆ ಅವರಿಗೆ ಮುಳುವಾಗುವ ಸಾಧ್ಯಗಳಿವೆ ಎನ್ನುವುದು ಕ್ಷೇತ್ರದ ಮತದಾರರ ಮಾತು.

ಯಾದಗಿರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಣಮೇಗೌಡ ಬಿರನಕಲ್ ಅವರಿಗೆ ಜೆಡಿಎಸ್ ಟಿಕೆಟ್ ಕೈತಪ್ಪಿದೆ. ಟಿಕೆಟ್ ಕೈತಪ್ಪಲು ಶರಣಗೌಡ ಅವರ ಕೈವಾಡ ಇದೆ ಎಂದು ಸ್ವತಃ ಬಿರನಕಲ್‌ ಹೇಳಿದ್ದು, ದಲಿತ ಮತ್ತು ಪರಿಶಿಷ್ಟ ಪಂಗಡದ ಮತಗಳು ಶರಣಗೌಡ ಅವರಿಗೆ ಬೀಳಬಾರದು ಎಂದು ಅಭಿಯಾನ ನಡೆದಿವೆ.

ಈ ಬಾರಿ ಬಾಬುರಾವ್ ಚಿಂಚನಸೂರು ಮತ್ತು ಶರಣಗೌಡ ಅವರ ವಿರುದ್ಧ ನೇರಾ ಹಣಾಹಣಿ ನಡೆಯಲಿದ್ದು, ಕಾಂಗ್ರೆಸ್ ಕ್ಷೇತ್ರವನ್ನು ಮತ್ತೆ ವಶಪಡಿಸಿಕೊಳ್ಳಬಹುದೇ ಅಥವಾ ಶರಣಗೌಡ ತಮ್ಮ ಪ್ರಾಬಲ್ಯ ಮುಂದುವರೆಸುವರೆ ನೋಡಬೇಕಿದೆ.

ಸುರುಪುರ

ಬ್ರಿಟಿಷರ ವಿರುದ್ಧ ಬಂಡೆದಿದ್ದ ಪಾಳೇಗಾರ ವೆಂಕಟಪ್ಪ ನಾಯಕನ ಊರು ಸುರಪುರ. ಈ ಕ್ಷೇತ್ರ ಯಾವ ಪಕ್ಷಕ್ಕೂ ಭದ್ರ ನೆಲೆಯಾಗಿಲ್ಲ. ಪ್ರತಿ ಚುನಾವಣೆಯಲ್ಲೂ ಮತದಾರರು ಶಾಸಕರನ್ನು ಬದಲಾಯಿಸುತ್ತಲೇ ಇರುತ್ತಾರೆ.

1983, 1985, 1989ರಲ್ಲಿ ಸತತವಾಗಿ ಮೂರು ಬಾರಿ ಕಾಂಗ್ರೆಸ್‌ನ ಮದನ ಗೋಪಾಲ ನಾಯಕ್‌ ಪ್ರತಿನಿಧಿಸಿದ್ದರು. ಪ್ರಸ್ತುತದಲ್ಲಿ 2008ರಿಂದ ಇಲ್ಲಿಯವರೆಗೆ ನರಸಿಂಹ ನಾಯಕ್ ಅವರು ಎರಡು ಬಾರಿ ಬಿಜೆಪಿಯಿಂದಲೂ, ಒಮ್ಮೆ ಜೆಡಿಎಸ್‌ನಿಂದಲೂ ಪ್ರತಿನಿಧಿಸಿದ್ದಾರೆ. ಮದನ ಗೋಪಾಲ ನಾಯಕರ ನಂತರ ಕಾಂಗ್ರೆಸ್‌ನಿಂದ ರಾಜ ವೆಂಕಟಪ್ಪ ನಾಯಕ ಚುನಾವಣಾ ಅಖಾಡಕ್ಕೆ ಧುಮುಕುತ್ತಿದ್ದು, ಮೂರು ಬಾರಿ ಶಾಸಕರಾಗಿದ್ದಾರೆ.

ಈ ಬಾರಿ ಚುನಾವಣಾ ಕಣದಲ್ಲಿ ಕಾಂಗ್ರೆಸ್‌ನಿಂದ ರಾಜ ವೆಂಕಟಪ್ಪ ನಾಯಕ, ಬಿಜೆಪಿಯಿಂದ ಹಾಲಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಕಣದಲ್ಲಿದ್ದಾರೆ. ಕಳೆದ ಐದಾರು ದಶಕಗಳಿಂದ ಇಲ್ಲಿನ ಮತದಾರರು ತಮ್ಮ ಶಾಸಕರನ್ನು ಬದಲಿಸುತ್ತಲೇ ಬಂದಿದ್ದಾರೆ.

ಮೀಸಲು ಕ್ಷೇತ್ರವಾಗಿರುವ ಸುರಪುರದಲ್ಲಿ ರಾಜ ವೆಂಕಟಪ್ಪ ನಾಯಕ ಮತ್ತು ರಾಜುಗೌಡ ಇಬ್ಬರ ಪ್ರಾಬಲ್ಯವೂ ಒಂದೇ ತರಹವಿದೆ. ಈ ಎರಡು ಪಕ್ಷಗಳಲ್ಲಿ ಒಬ್ಬರು ಪಕ್ಷಾಂತರ ಕಾರ್ಯಕ್ರಮ ಮಾಡಿದರೆ, ಮರುದಿನವೇ ಮತ್ತೊಂದು ಪಕ್ಷ ಪಕ್ಷಾಂತರ ಕಾರ್ಯಕ್ರಮ ಆಯೋಜಿಸಿರುತ್ತದೆ.

ಈ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡದ ಜೊತೆಗೆ ಕುರುಬ ಸಮುದಾಯ ಕೈ ಹಿಡಿಯುವ ಅಭ್ಯರ್ಥಿಯೇ ಗೆಲುವು ಸಾಧಿಸುತ್ತಾರೆ. ರಾಜುಗೌಡ ಅವರು ಕಳೆದ ಬಾರಿ ಗೆಲುವು ಸಾಧಿಸಿದ್ದರಿಂದ ಈ ಬಾರಿ ಮತದಾರರು ತಮ್ಮ ಹಳೇ ಸಂಪ್ರದಾಯದಂತೆ ರಾಜ ವೆಂಕಟಪ್ಪ ನಾಯಕ ಅವರ ಕೈ ಹಿಡಿಯಬಹುದು.

ರಾಜುಗೌಡ ಅವರು ಪರಿಶಿಷ್ಟ ಪಂಗಡ ಸಮುದಾಯದ ಮೇಲಷ್ಟೇ ಕೇಂದ್ರಿಕೃತರಾಗಿದ್ದು, ರಾಜ ವೆಂಕಟಪ್ಪ ನಾಯಕ ಇತರೆ ಸಮುದಾಯಗಳನ್ನೂ ಜೊತೆಗೆ ಕೊಂಡೊಯ್ಯುತ್ತಾರೆ. ರಾಜುಗೌಡ ಅವರ ತಮ್ಮ ಬಬ್ಲೂಗೌಡ ಅವರ ಆಡಳಿತದಲ್ಲಿನ ಮಧ್ಯೆ ಪ್ರವೇಶಿಸಿವುದು ಹಾಲಿ ಶಾಸಕರಿಗೆ ಮೈನಸ್ ಆಗಬಹುದು. ರಾಜುಗೌಡ ಕ್ಷೇತ್ರದ ಜನರ ಕೈಗೆ ಸಿಗುವುದಿಲ್ಲ ಎನ್ನುವ ಆರೋಪ ಸಹ ದಟ್ಟವಾಗಿದೆ.

ರಾಜ ವೆಂಕಟಪ್ಪ ನಾಯಕ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿದ್ದಾರೆ. ಈ ಕಾರಣಕ್ಕೆ ಕ್ಷೇತ್ರದಲ್ಲಿನ 37 ಸಾವಿರ ದಲಿತ ಮತದಾರರು ಕಾಂಗ್ರೆಸ್ ಕಡೆ ಒಲವು ತೋರಬಹುದು.

ಸುರುಪುರ ರಾಜ್ಯ ರಣಕಣ ಮೊದಲಿನಂತೆಯೇ ಬಿಸಿಯಾಗಿದ್ದು, ಕ್ಷೇತ್ರದ ಜನತೆ ಹಳೇ ಸಂಪ್ರದಾಯದಂತೆ ಶಾಸಕರನ್ನು ಬದಲಿಸುತ್ತಾರೋ ಅಥವಾ ರಾಜುಗೌಡ ಅವರಿಗೆ ಮತ ನೀಡುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.

ಶಹಾಪುರ

ಒಂದೆಡೆ ಕೃಷ್ಣಾ ನದಿ, ಮತ್ತೊಂದೆಡೆ ಭೀಮಾ ನದಿ ಆವರಿಸಿಕೊಂಡಿರುವ ಶಹಾಪುರ ಕ್ಷೇತ್ರ ರಾಜ್ಯದಲ್ಲಿ ಪ್ರಭಾವ ಬೀರಿದ ಎಲ್ಲ ಪಕ್ಷಗಳಿಗೂ ಜಾಗ ಕೊಟ್ಟಿದೆ. ಕಾಂಗ್ರೆಸ್ ದೇಶದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗಲೂ ಕ್ಷೇತ್ರದ ಜನತೆ ‘ಕೈ’ ಹಿಡಿದಿರಲಿಲ್ಲ. ಇಲ್ಲಿ ಬಿಜೆಪಿಯ ಕಮಲ ಈವರೆಗೆ ಅರಳಿಲ್ಲ.

ಶಹಾಪುರ ಕ್ಷೇತ್ರದಲ್ಲಿ ಕಳೆದ ಎರಡು ಮೂರು ದಶಕಗಳಿಂದ ದರ್ಶನಾಪುರ ಮತ್ತು ಶಿರವಾಳ ಮನೆತನದವರೇ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾ ಬಂದಿದ್ದಾರೆ. ಇಲ್ಲಿ ಲಿಂಗಾಯತ ಮತದಾರರೇ ನಿರ್ಣಾಯಕರಾಗಿದ್ದು, ಮೂರು ಪಕ್ಷಗಳಿಂದ ಲಿಂಗಾಯತ ಸಮುದಾಯದವರೇ ಚುನಾವಣಾ ಕಣಕ್ಕಿಳಿದಿದ್ದಾರೆ.

ಬಿಜೆಪಿಯಿಂದ ಅಮೀನ್ ರೆಡ್ಡಿ ಯಾಳಗಿ, ಕಾಂಗ್ರೆಸ್‌ನಿಂದ ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ, ಜೆಡಿಎಸ್‌ನಿಂದ ಗುರುಪಾಟೀಲ ಶಿರವಾಳ ಅವರು ಚುನಾವಣಾ ಅಖಾಡದಲ್ಲಿದ್ದಾರೆ.

ಕಾಂಗ್ರೆಸ್‌ನ ದರ್ಶನಾಪುರ ಅವರನ್ನು ಬಿಟ್ಟರೆ ಇನ್ನುಳಿದ ಇಬ್ಬರು ಅಭ್ಯರ್ಥಿಗಳು ಪಕ್ಷಾಂತರಿಗಳು. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಮೀನ್‌ ರೆಡ್ಡಿ ಯಾಳಗಿ ಬಿಜೆಪಿಯಿಂದ ಸ್ಪರ್ಧಿಸಿದರೆ, ಬಿಜೆಪಿಯಿಂದ ಅಖಾಡಕ್ಕಿಳಿದಿದ್ದ ಗುರುಪಾಟೀಲ್ ಶಿರವಾಳ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ.

ಗುರುಪಾಟೀಲ್ ಶಿರವಾಳ 2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಶರಣಬಸಪ್ಪಗೌಡ ಅವರು ಜೆಡಿಎಸ್‌, ಜನತಾ ದಳ ಹಾಗೂ ಕಾಂಗ್ರೆಸ್ ಈ ಮೂರು ಪಕ್ಷಗಳಿಂದಲೂ ಜಯಿಸಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಶಿರವಾಳ ಮತ್ತು ದರ್ಶನಪುರ ಮನೆತನಗಳನ್ನು ಕೈಬಿಟ್ಟು ಅಮೀನ್ ರೆಡ್ಡಿ ಯಾಳಗಿ ಅವರ ಕೈಹಿಡಿಯಬಹುದು. ಈ ಎರಡು ಮನೆತನಗಳಿಗೆ ಐದು ದಶಕಗಳಿಂದ ಅವಕಾಶ ನೀಡಲಾಗುತ್ತಿದ್ದು, ಯಾಳಗಿ ಅವರಿಗೆ ಅನುಕಂಪ ಕೈಹಿಡಿಯಬಹುದು.

ಈ ಬಾರಿಯ ಪಕ್ಷಾಂತರ ಪರ್ವ ಮತ್ತು ಅಭ್ಯರ್ಥಿಗಳ ವರ್ಚಸ್ಸು ಜೋರಾಗಿದ್ದು, ಯಾವ ಪಕ್ಷಕ್ಕೆ ಮತ್ತು ಯಾವ ಅಭ್ಯರ್ಥಿಗೆ ಮತದಾರ ಒಲವು ತೋರುತ್ತಾನೋ ಗೊತ್ತಿಲ್ಲ. ಈ ಬಾರಿ ಶಹಾಪುರ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೇಹಾ ಕೊಲೆಗೂ ರಾಜಕೀಯಕ್ಕೂ ಸಂಬಂಧವಿಲ್ಲ: ಸಚಿವ ಡಾ. ಜಿ ಪರಮೇಶ್ವರ್‌ ಸ್ಪಷ್ಟನೆ

ಹುಬ್ಬಳ್ಳಿಯ ಬಿವಿಬಿ ಇಂಜಿನಿಯರ್​​ ಕಾಲೇಜು ಆವರಣದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ...

ಮತದಾರರಿಗೆ ಬೆದರಿಕೆ ಆರೋಪ; ಡಿಕೆಶಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಹೋದರ ಡಿಕೆ ಸುರೇಶ್​ಗೆ ಮತ ನೀಡುವಂತೆ ಬೆಂಗಳೂರು...

ಹಾಸನ ಲೋಕಸಭಾ ಕ್ಷೇತ್ರ | ಪ್ರಜ್ವಲ್ ಆರ್ಭಟದೆದುರು ಶ್ರೇಯಸ್ ಅನುಕಂಪ ಗೆಲ್ಲಬಹುದೇ?

ಹಾಸನ ರಾಜಕಾರಣದ ಶಕ್ತಿಕೇಂದ್ರ. ದೇವೇಗೌಡ, ರೇವಣ್ಣ, ಭವಾನಿ, ಬಾಲಕೃಷ್ಣ, ಪ್ರಜ್ವಲ್ ಹಾಗೂ...