ಬೈಂದೂರು ವಿಧಾನಸಭಾ ಕ್ಷೇತ್ರ

ಘಾಟಿಯ ಏರಿಳಿತದಂತೆಯೇ ಇಲ್ಲಿನ ಫಲಿತಾಂಶವೂ ಅಸ್ಥಿರ
ಬಿಲ್ಲವ ಪ್ರಾಬಲ್ಯದ ಬೈಂದೂರು ಕ್ಷೇತ್ರದ ಶಾಸಕರಾದವರಲ್ಲಿ ಬಿಲ್ಲವ, ಇಲ್ಲವೇ ಬಂಟ ಸಮುದಾಯದವರ ಪಾಲೇ ಹೆಚ್ಚು. ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ (ಎ ಜಿ ಕೊಡ್ಗಿ)ಯವರಂಥ ಮುತ್ಸದ್ಧಿ ನಾಯಕರನ್ನು ಕೊಟ್ಟ ಈ ಕ್ಷೇತ್ರದ ಯಾವೊಬ್ಬ ಶಾಸಕರೂ ಸಚಿವ ಸ್ಥಾನ ಪಡೆದಿಲ್ಲ ಎಂಬುದು ಗಮನಿಸಬೇಕಾದ ಅಂಶ. ಗೋಪಾಲ ಪೂಜಾರಿ ನಾಲ್ಕು ಬಾರಿ, ಎ ಜಿ ಕೊಡ್ಗಿ, ಜಿ ಎಸ್ ಆಚಾರ್, ಯಡ್ತರೆ ಮಂಜಯ್ಯ ಶೆಟ್ಟಿ ಅವರುಗಳು ತಲಾ ಎರಡು ಬಾರಿ ಶಾಸಕರಾಗಿ ಆಯ್ಕೆಯಾದರೂ ಅವರಿಗೆ ಮಂತ್ರಿ ಪದವಿ ಸಿಕ್ಕಲೇ ಇಲ್ಲ.
ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿರುವ ಬೈಂದೂರು ವಿಧಾನಸಭಾ ಕ್ಷೇತ್ರ, ಭೌಗೋಳಿಕವಾಗಿ ಉಡುಪಿ ಜಿಲ್ಲೆಗೆ ಸೇರಿದೆ. ಒಂದು ಕಡೆ ಅರಬ್ಬಿ ಸಮುದ್ರ, ಮತ್ತೊಂದು ಕಡೆ ಸಹ್ಯಾದ್ರಿ ಶ್ರೇಣಿಯ ನಡುವೆ ತಪ್ಪಲಿನಲ್ಲಿ ತೆಂಗು, ಅಡಿಕೆ, ಗೇರು, ಭತ್ತದ ಬೆಳೆಗಳ ನಡುವೆ ಈ ಕ್ಷೇತ್ರ ಹರಡಿಕೊಂಡಿದೆ. ಗದ್ದೆ ಬಯಲು ಮತ್ತು ಘಾಟಿಯ ಏರಿಳಿತದ ನಡುವಿನ ಇಲ್ಲಿನ ಪರಿಸರದಂತೆಯೇ ಬದುಕು ಕೂಡ ಬಡತನ ಮತ್ತು ಸಿರಿತನಗಳ ನಡುವಿನ ತೂಗುಯ್ಯಾಲೆ.
1957ಕ್ಕೆ ಮುನ್ನ ಕುಂದಾಪುರ- ಬೈಂದೂರು ಜಂಟಿ ಕ್ಷೇತ್ರವಾಗಿದ್ದ ಇದು, ಆ ಬಳಿಕ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿ ಅಸ್ತಿತ್ವ ಕಂಡುಕೊಂಡಿತು. 2018ರಲ್ಲಿ ಪ್ರತ್ಯೇಕ ತಾಲೂಕಾಗಿ ಘೋಷಿತವಾದ ಬೈಂದೂರು, ಆವರೆಗೆ ಕುಂದಾಪುರ ತಾಲೂಕಿನ ಒಂದು ಹೋಬಳಿಯಾಗಿತ್ತು. ರಾಜಕೀಯವಾಗಿ ಮತ್ತು ಭೌಗೋಳಿಕವಾಗಿ ಹಂತಹಂತವಾಗಿ ತನ್ನದೇ ಆದ ಅಸ್ತಿತ್ವ ಕಂಡುಕೊಂಡಿರುವ ಬೈಂದೂರು, ತನ್ನ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ವೈವಿಧ್ಯತೆಯ ಕಾರಣಕ್ಕೆ ಸದಾ ವಿಶಿಷ್ಟ.

ಬಿಲ್ಲವ ಪ್ರಾಬಲ್ಯದ ಕ್ಷೇತ್ರದಲ್ಲಿ ಬಂಟರು, ಮೊಗವೀರ, ದೇವಾಡಿಗ, ರಾಮಕ್ಷತ್ರಿಯ, ಬ್ರಾಹ್ಮಣ, ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಮುಸ್ಲಿಮರು, ಕೃಸ್ತರು ಗಣನೀಯ ಪ್ರಮಾಣದಲ್ಲಿದ್ದಾರೆ. ಹಾಗಾಗಿ ಇಲ್ಲಿ ಈವರೆಗೆ ಶಾಸಕರಾದವರಲ್ಲಿ ಹೆಚ್ಚಿನ ಪಾಲು ಬಿಲ್ಲವ, ಇಲ್ಲವೇ ಬಂಟ ಸಮುದಾಯದವರೇ ಹೆಚ್ಚು. ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ (ಎ ಜಿ ಕೊಡ್ಗಿ)ಯವರಂಥ ಮುತ್ಸದ್ಧಿ ನಾಯಕರನ್ನು ಕೊಟ್ಟ ಈ ಕ್ಷೇತ್ರದ ಯಾವೊಬ್ಬ ಶಾಸಕರೂ ಸಚಿವ ಸ್ಥಾನ ಪಡೆದಿಲ್ಲ ಎಂಬುದು ಗಮನಿಸಬೇಕಾದ ಅಂಶ. ಗೋಪಾಲ ಪೂಜಾರಿ ನಾಲ್ಕು ಬಾರಿ, ಎ ಜಿ ಕೊಡ್ಗಿ, ಜಿ ಎಸ್ ಆಚಾರ್, ಯಡ್ತರೆ ಮಂಜಯ್ಯ ಶೆಟ್ಟಿ ಅವರುಗಳು ತಲಾ ಎರಡು ಬಾರಿ ಶಾಸಕರಾಗಿ ಆಯ್ಕೆಯಾದರೂ ಅವರಿಗೆ ಮಂತ್ರಿ ಪದವಿ ಸಿಕ್ಕಲೇ ಇಲ್ಲ!
ಬೈಂದೂರು ಕ್ಷೇತ್ರದ ರಾಜಕೀಯ ಇತಿಹಾಸ
1957ರಲ್ಲಿ ಪ್ರತ್ಯೇಕ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಬೈಂದೂರು ಎದುರಿಸಿದ ಮೊದಲ ಚುನಾವಣೆಯಲ್ಲಿ ಯಡ್ತರೆ ಮಂಜಯ್ಯ ಶೆಟ್ಟಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಅವಿರೋಧ ಆಯ್ಕೆಯಾದರು. ಬಳಿಕ 1962ರಲ್ಲಿ ಅವರು ಮತ್ತೊಮ್ಮೆ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದರು. 1967ರಲ್ಲಿ ಕಾಂಗ್ರೆಸ್ಸಿನ ಹಲ್ಸನಾಡು ಸುಬ್ಬರಾವ್, 1972ರಲ್ಲಿ ಕಾಂಗ್ರೆಸ್ನ ಎ ಜಿ ಕೊಡ್ಗಿ, ಬಳಿಕ 1978ರಲ್ಲಿ ಕೂಡ ಕೊಡ್ಗಿ ಅವರೇ ಕಾಂಗ್ರೆಸ್ ಶಾಸಕರಾಗಿ ಪುನರಾಯ್ಕೆಯಾದರು.
1983ರಲ್ಲಿ ಎರಡೂವರೆ ದಶಕದ ಬಳಿಕ ಕಾಂಗ್ರೆಸ್ ಏಕಸ್ವಾಮ್ಯವನ್ನು ಮುರಿದು ಜನತಾ ಪಾರ್ಟಿ ಮೊಟ್ಟಮೊದಲ ಜಯ ದಾಖಲಿಸಿತು. ಆ ಬಾರಿ ಅಪ್ಪಣ್ಣ ಹೆಗ್ಡೆ ಜಯಗಳಿಸಿದರು. 1985ರಲ್ಲಿ ಕಾಂಗ್ರೆಸ್ ಮತ್ತೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಜಿ ಎಸ್ ಆಚಾರ್ ಕ್ಷೇತ್ರವನ್ನು ಮರಳಿ ಕಾಂಗ್ರೆಸ್ಸಿಗೆ ಗೆದ್ದುಕೊಟ್ಟರು. 1989ರಲ್ಲಿ ಕೂಡ ಆಚಾರ್ತಮ್ಮ ಜಯಭೇರಿ ಮುಂದುವರಿಸಿದರು. ಆದರೆ, 1994ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆಯಿತು. ಐ ಎಂ ಜಯರಾಂ ಶೆಟ್ಟಿ ಬಿಜೆಪಿಯ ಅಭ್ಯರ್ಥಿಯಾಗಿ ಜಯಗಳಿಸಿದರು. 1998ರಲ್ಲಿ ಜಯರಾಂ ಶೆಟ್ಟರು ಲೋಕಸಭೆಗೆ ಆಯ್ಕೆಯಾದ ಹಿನ್ನಲೆಯಲ್ಲಿ ಎದುರಾದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಗೋಪಾಲ ಪೂಜಾರಿ ಜಯಗಳಿಸಿದರು. ಆ ಬಳಿಕ 1999 ಮತ್ತು 2004ರಲ್ಲಿ ಕೂಡ ಗೋಪಾಲ ಪೂಜಾರಿ ತಮ್ಮ ಗೆಲುವಿನ ಓಟ ಮುಂದುವರಿಸಿದರು.

ಕಳೆದ ಮೂರು ಚುನಾವಣೆಗಳ ಹಣಾಹಣಿ
2008ರವರೆಗೆ ಬೈಂದೂರು ವಿಧಾನಸಭಾ ಕ್ಷೇತ್ರ ಉಡುಪಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿತ್ತು. ಪುನರ್ ವಿಂಗಡಣೆಯ ಬಳಿಕ ಪಕ್ಕದ ಘಟ್ಟದ ಮೇಲಿನ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿತು. ಆ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಲಕ್ಷ್ಮಿನಾರಾಯಣ ಅವರು ಕಾಂಗ್ರೆಸ್ಸಿನ ಗೋಪಾಲ ಪೂಜಾರಿ ಅವರನ್ನು 7,970 ಮತಗಳ ಅಂತರದಿಂದ ಸೋಲಿಸಿದರು.
2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೋಪಾಲ ಪೂಜಾರಿ ಅವರು ಮತ್ತೆ ಗೆಲುವಿನ ನಗೆ ಬೀರಿದರು. ಆ ಬಾರಿ ಅವರು ಬಿಜೆಪಿಯ ಬಿ ಎಂ ಸುಕುಮಾರ ಶೆಟ್ಟಿ ಅವರನ್ನು 31,149 ಮತಗಳ ಅಂತರದಿಂದ ಸೋಲಿಸಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಐದನೇ ಗೆಲುವಿನ ನಿರೀಕ್ಷೆಯಲ್ಲಿ ಕಣಕ್ಕಿಳಿದಿದ್ದ ಕಾಂಗ್ರೆಸ್ಸಿನ ಗೋಪಾಲ ಪೂಜಾರಿ ಅವರಿಗೆ ಬಿಜೆಪಿಯ ಸುಕುಮಾರ ಶೆಟ್ಟಿ ಸುಮಾರು 25 ಸಾವಿರ ಮತಗಳ ಅಂತರ ಸೋಲುಣಿಸಿದರು. ಬಿಜೆಪಿಯ ಆ ಗೆಲುವಿಗೆ ಕಾರಣವಾಗಿದ್ದು ಶೆಟ್ಟರ ವರ್ಚಸ್ಸಿಗಿಂತ ಬಿಜೆಪಿಯ ಕೋಮುವಾದಿ ಅಭಿಯಾನ. ಅದರಲ್ಲೂ ಮುಖ್ಯವಾಗಿ ಪರೇಶ್ ಮೇಸ್ತಾ ಮತ್ತು ಸುರತ್ಕಲ್ನ ದೀಪಕ್ ರಾವ್ ಸಾವಿನ ಪ್ರಕರಣಗಳನ್ನು ಧರ್ಮದ್ವೇಷದ ರಾಜಕಾರಣಕ್ಕೆ ಬಳಸಿಕೊಂಡ ಬಿಜೆಪಿ ತಂತ್ರ ಫಲ ಕೊಟ್ಟಿತ್ತು.