ಬಾದಾಮಿ ವಿಧಾನಸಭಾ ಕ್ಷೇತ್ರ

ಎರಡು ಅವಧಿಗೊಮ್ಮೆ ಒಂದು ಪಕ್ಷಕ್ಕೆ ಅಧಿಕಾರ; ಸಿದ್ದರಾಮಯ್ಯಗೆ ಮರುಜನ್ಮ ನೀಡಿದ ಕ್ಷೇತ್ರ
ಕುರುಬ ಸಮುದಾಯ, ನಂತರದಲ್ಲಿ ಲಿಂಗಾಯತರ ಪ್ರಾಬಲ್ಯ ಇರುವ ಬಾದಾಮಿ ಕ್ಷೇತ್ರದಲ್ಲಿ ಹಾಲುಮತದ ಮತದಾರರೇ ನಿರ್ಣಾಯಕ. ನಂತರದ ಸ್ಥಾನದಲ್ಲಿ ಎಸ್ಸಿ , ಎಸ್ಟಿ ಹಾಗೂ ಮುಸ್ಲಿಂ ಮತಗಳು ಇವೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡಿದ್ದ ಕ್ಷೇತ್ರಗಳ ಪೈಕಿ ಬಾದಾಮಿ ಕೂಡ ಒಂದು. ಸಿದ್ದರಾಮಯ್ಯ ಮತ್ತು ಬಿ ಶ್ರೀರಾಮುಲು ಅವರ ಸ್ಪರ್ಧೆಯಿಂದ ರಾಜಕೀಯವಾಗಿ ಈ ಕ್ಷೇತ್ರ ಭಾರೀ ಕುತೂಹಲ ಮೂಡಿಸಿತ್ತು. ವಿಶೇಷವೆಂದರೆ, ಈ ಚುನಾವಣೆಯಲ್ಲಿ ಇಬ್ಬರೂ ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು.
ಗುಹಾಂತರ ದೇವಾಲಯಗಳಿಗೆ ಹೆಸರಾದ ಬಾದಾಮಿ ವಿಧಾನಸಭಾ ಕ್ಷೇತ್ರವು ಆರು ದಶಕದ ರಾಜಕೀಯ ಚರಿತ್ರೆಯಲ್ಲಿ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ನಿರಂತರವಾಗಿ ಒಲಿದಿಲ್ಲ ಎನ್ನುವುದೇ ವಿಶೇಷ.
6ನೇ ಶತಮಾನದಿಂದ 8ನೇ ಶತಮಾನದವರೆಗೆ ಚಾಲುಕ್ಯ ದೊರೆಗಳ ರಾಜಧಾನಿಯಾಗಿದ್ದ ಬಾದಾಮಿ (ಮೂಲ ಹೆಸರು ವಾತಾಪಿ) ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರ.
2018ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡಿದ ಕ್ಷೇತ್ರಗಳ ಪೈಕಿ ಬಾದಾಮಿ ಕೂಡ ಒಂದು. ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಮತ್ತು ಅವರ ಎದುರಾಳಿಯಾಗಿ ಬಿಜೆಪಿಯ ಬಿ ಶ್ರೀರಾಮುಲು ಕಣಕ್ಕಿಳಿಯುತ್ತಿದ್ದಂತೆ ರಾಜ್ಯ ರಾಜಕಾರಣದ ಕೇಂದ್ರಬಿಂದುವಾಗಿ ಕ್ಷೇತ್ರ ಮುನ್ನೆಲೆಗೆ ಬಂದಿತ್ತು. ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಮರುಜನ್ಮ ನೀಡಿದ್ದು ಈ ಕ್ಷೇತ್ರ.
ಕುರುಬ ಸಮುದಾಯ ಮತ್ತು ನಂತರದಲ್ಲಿ ಲಿಂಗಾಯತರ ಪ್ರಾಬಲ್ಯ ಇರುವ ಬಾದಾಮಿ ಕ್ಷೇತ್ರದಲ್ಲಿ ಹಾಲುಮತದ ಮತದಾರರೇ ನಿರ್ಣಾಯಕ. ನಂತರದ ಸ್ಥಾನದಲ್ಲಿ ಎಸ್ಸಿ, ಎಸ್ಟಿ (ವಿಶೇಷವಾಗಿ ವಾಲ್ಮೀಕಿ ಸಮುದಾಯ) ಹಾಗೂ ಮುಸ್ಲಿಂ ಸಮುದಾಯದ ಮತಗಳು ಇವೆ. ಇಂತಹ ಜಾತಿ ಸಮೀಕರಣದಲ್ಲಿ ಸಿದ್ದರಾಮಯ್ಯ ಅವರು ಕೇವಲ 1,696 ಮತಗಳ ಅಂತರದಲ್ಲಿ ಶ್ರೀರಾಮುಲು ವಿರುದ್ಧ ಕಳೆದ ಚುನಾವಣೆಯಲ್ಲಿ ಜಯ ಸಾಧಿಸಿದ್ದರು.

ಬಾಂಬೆ ಕರ್ನಾಟಕ: ವಿ ಎಚ್ ಪಾಟೀಲ ಮೊದಲ ಶಾಸಕರಾಗಿ ಆಯ್ಕೆ
ಬಾಂಬೆ ಕರ್ನಾಟಕ ಭಾಗವಾಗಿ 1951ರಲ್ಲಿ ನಡೆದ ಮೊದಲ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ವೆಂಕನಗೌಡ ಹನಮಂತ ಗೌಡ ಪಾಟೀಲ (ವಿ ಎಚ್ ಪಾಟೀಲ) ಬಾದಾಮಿಯ ಮೊದಲ ಶಾಸಕರಾಗಿ ಕಾಂಗ್ರೆಸ್‌ನಿಂದ ಜಯ ಸಾಧಿಸಿದರು.
ಮೈಸೂರು ಕರ್ನಾಟಕ: ಮೂರು ಬಾರಿ ಕಾಂಗ್ರೆಸ್, ಒಂದು ಬಾರಿ ಪಕ್ಷೇತರ
ಮೈಸೂರು ಕರ್ನಾಟಕ ಭಾಗವಾಗಿ ನಡೆದ ನಾಲ್ಕು ಸಾರ್ವತ್ರಿಕ ಚುನಾವಣೆಗಳಲ್ಲಿ ಮೂರು ಬಾರಿ ಕಾಂಗ್ರೆಸ್ ಇಲ್ಲಿ ಜಯ ಕಂಡಿದೆ. ಆದರೆ, 1967ರ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ ಪಾಲಿಗೆ ವ್ಯತಿರಿಕ್ತ ಫಲಿತಾಂಶ ಹೊರಬಿದ್ದು, ಪಕ್ಷೇತರ ಅಭ್ಯರ್ಥಿ ಪಿ ಕೆ ಮಹಾಗುಂಡಪ್ಪ ಗೆದ್ದಿದ್ದರು.
ಎರಡೆರಡು ಅವಧಿಗೆ ಒಂದೊಂದು ಪಕ್ಷಕ್ಕೆ ಅಧಿಕಾರ
ದೇವರಾಜ ಅರಸು ಅವರು ತಾವು ಮುಖ್ಯಮಂತ್ರಿಯಾಗಿದ್ದಾಗ 1973 ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಮೇಲೆ ನಡೆದ 1978ರಿಂದ 2018ರವರೆಗಿನ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಆರು ಭಾರಿ ಜಯ ಕಂಡಿದೆ.
1978ರಿಂದ 2018ರ ಅವಧಿಯಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ಸತತವಾಗಿ ಎರಡೆರಡು ಅವಧಿಗೆ ಒಂದೊಂದು ಪಕ್ಷಕ್ಕೆ ಈ ಕ್ಷೇತ್ರದ ಮತದಾರರು ಅಧಿಕಾರ ನೀಡಿದ್ದಾರೆ. 1978, 1983 ರಲ್ಲಿ ಕಾಂಗ್ರೆಸ್, 1985, 1989ರಲ್ಲಿ ಜನತಾ ದಳ, 1994, 1999ರಲ್ಲಿ ಕಾಂಗ್ರೆಸ್, 2004, 2008ರಲ್ಲಿ ಮೊದಲ ಬಾರಿಗೆ ಬಿಜೆಪಿ ಹಾಗೂ 2013, 2018ರಲ್ಲಿ ಮತ್ತೆ ಕಾಂಗ್ರೆಸ್ ಜಯ ಗಳಿಸಿವೆ.
ಕ್ಷೇತ್ರದ ಮೇಲೆ ಬಿ ಬಿ ಚಿಮ್ಮನಕಟ್ಟಿ ವಿಶೇಷ ಹಿಡಿತ
ಕುರುಬ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ಸಿನ ಮಾಜಿ ಶಾಸಕ ಬಿ ಬಿ ಚಿಮ್ಮನಕಟ್ಟಿ ಮತ್ತು ಲಿಂಗಾಯತ ಸಮುದಾಯಕ್ಕೆ ಸೇರಿದ ಬಿಜೆಪಿ ಮಾಜಿ ಶಾಸಕ ಎಂ ಕೆ ಪಟ್ಟಣಶೆಟ್ಟಿ ಮಧ್ಯೆಯೇ ದಶಕಗಳ ಕಾಲ ಪೈಪೋಟಿ ನಡೆದಿದೆ. ಚಿಮ್ಮನಕಟ್ಟಿ ಅವರು ಬಾದಾಮಿ ಕ್ಷೇತ್ರದಿಂದ ಐದು ಬಾರಿ ಶಾಸಕರಾಗುವ ಮೂಲಕ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ.

1978ರ ಚುನಾವಣೆ ವೇಳೆಗೆ ಬಾದಾಮಿ ಕ್ಷೇತ್ರದಲ್ಲೂ ಚುನಾವಣೆ ಕಾವು ಜೋರಾಗಿತ್ತು. ಅಷ್ಟೊತ್ತಿಗಾಗಲೇ ಜನತಾ ಪಕ್ಷ ಕೂಡ ಇಲ್ಲಿ ಚೇತರಿಕೆ ಕಂಡಿತ್ತು. ಆಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಬಿ ಚಿಮ್ಮನಕಟ್ಟಿ ಸ್ಪರ್ಧಿಸಿ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಆ ವೇಳೆ ಕಿರಿಯ ವಯಸ್ಸಿನ ಶಾಸಕರೆಂಬ ಹೆಗ್ಗಳಿಕೆಯೂ ಅವರದಾಗಿತ್ತು. 1983ರ ಚುನಾವಣೆಯಲ್ಲಿ ಚಿಮ್ಮನಕಟ್ಟಿ ಎರಡನೇ ಅವಧಿಗೆ ಗೆಲ್ಲುವ ಮೂಲಕ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಸಚಿವರಾದರು.
1985ರ ಚುನಾವಣೆಯಲ್ಲಿ ಬಿಜೆಪಿ ಅಂಬೆಗಾಲು
1985ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದ ಪಾಲಿಗೆ ಈ ಕ್ಷೇತ್ರ ವರವಾಗಿ ಪರಿಣಮಿಸಿತು. ಜನತಾ ಪಕ್ಷದ ಅಭ್ಯರ್ಥಿ ಆರ್ ಟಿ ದೇಸಾಯಿ ಚಿಮ್ಮನಕಟ್ಟಿಗೆ ಮೊದಲ ಸೋಲಿನ ರುಚಿ ತೋರಿಸಿ ಶಾಸಕರಾಗಿ ಆಯ್ಕೆಯಾದರು. ಇದೇ ವೇಳೆಗೆ ಬಿಜೆಪಿ ಇಲ್ಲಿ ಅಂಬೆಗಾಲಿಟ್ಟು, 560 ಮತಗಳನ್ನು ಪಡೆದಿತ್ತು. 1989ರ ಚುನಾವಣೆ ವೇಳೆಗೆ ಜನತಾ ದಳ ಇಲ್ಲಿ ಅಧಿಕಾರಕ್ಕೆ ಏರಿ, ಕೆ ಎಂ ಪಟ್ಟಣಶೆಟ್ಟಿ ಶಾಸಕರಾಗಿ ಆಯ್ಕೆಯಾದರು.
ಎರಡು ಸೋಲು ಕಂಡಿದ್ದ ಬಿ ಬಿ ಚಿಮ್ಮನಕಟ್ಟಿ 1994ರ ಚುನಾವಣೆಯಲ್ಲಿ ಜನತಾ ದಳದ ಕೆ ಎಂ ಪಟ್ಟಣಶೆಟ್ಟಿ ಅವರ ಮಗ ಎಂ ಕೆ ಪಟ್ಟಣಶೆಟ್ಟಿ ಅವರನ್ನು ಸೋಲಿಸುವ ಮೂಲಕ ಬಾದಾಮಿ ಕ್ಷೇತ್ರವನ್ನು ಮತ್ತೆ ತಮ್ಮ ತೆಕ್ಕೆಗೆ ತಗೆದುಕೊಂಡರು. ಇದೇ ವೇಳೆಗೆ ಬಿಜೆಪಿ ಮೂರು ಸಾವಿರಕ್ಕೆ ತನ್ನ ಮತಗಳನ್ನು ಹೆಚ್ಚಿಸಿಕೊಂಡಿತ್ತು.
2004ರಲ್ಲಿ ಬಿಜೆಪಿ ಬಾವುಟ ಹಾರಿಸಿದ್ದ ಎಂ ಕೆ ಪಟ್ಟಣಶೆಟ್ಟಿ
1999ರ ಚುನಾವಣೆಯಲ್ಲಿ ಮತ್ತೆ ಬಿ ಬಿ ಚಿಮ್ಮನಕಟ್ಟಿ ಕಾಂಗ್ರೆಸ್ ಅನ್ನು ಗೆಲ್ಲಿಸಿಕೊಂಡು ಬರುವಲ್ಲಿ ಸಫಲರಾದರು. ಆಗ ಜೆಡಿ(ಯು) ಅಭ್ಯರ್ಥಿಯಾಗಿದ್ದ ಎಂ ಕೆ ಪಟ್ಟಣಶೆಟ್ಟಿ ಚಿಮ್ಮನಕಟ್ಟಿ ಎದುರು ಕೇವಲ 397 ಮತಗಳಲ್ಲಿ ಸೋತರು. 2004ರ ಚುನಾವಣೆ ಹೊತ್ತಿಗೆ ಎಂ ಕೆ ಪಟ್ಟಣಶೆಟ್ಟಿ ಅವರು ಬಿಜೆಪಿ ಸೇರಿ, ಮೊದಲ ಬಾರಿಗೆ ಬಾದಾಮಿಯಲ್ಲಿ ಬಿಜೆಪಿ ಬಾವುಟ ಹಾರಿಸಿದರು.
2008ರ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಮತ್ತೊಂದು ಅವಧಿಗೆ ಅಧಿಕಾರ ಪಡೆಯಿತು. ಆಗ ಎಂ ಕೆ ಪಟ್ಟಣಶೆಟ್ಟಿ 53,409 ಮತಗಳನ್ನು ಪಡೆದು ಗೆಲವು ಕಂಡರೆ, ಚಿಮ್ಮನಕಟ್ಟಿ 48,302 ಮತ ಪಡೆದು ಸೋಲು ಕಂಡರು.
ಹತ್ತು ವರ್ಷಗಳ ಕಾಲ ಅಧಿಕಾರದಿಂದ ದೂರವಿದ್ದ ಬಿ ಬಿ ಚಿಮ್ಮನಕಟ್ಟಿಗೆ 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಕೈ ತಪ್ಪುವ ಸನ್ನಿವೇಶ ಎದುರಾಗಿತ್ತು. ಈ ವೇಳೆಗಾಗಲೇ ಕುರುಬ ಸಮುದಾಯದ ನಾಯಕನಾಗಿ ಹೊರಹೊಮ್ಮಿದ್ದರಿಂದ ಬಾದಾಮಿ ಕ್ಷೇತ್ರದ ಕುರುಬ ಸಮುದಾಯ ಚಿಮ್ಮನಕಟ್ಟಿ ಬೆಂಬಲಕ್ಕೆ ನಿಂತ ಪರಿಣಾಮ ಕೊನೆ ಕ್ಷಣದಲ್ಲಿ ಚಿಮ್ಮನಕಟ್ಟಿ ಟಿಕೆಟ್ ಸಿಕ್ಕು, ಗೆಲುವಿನ ನಗೆ ಬೀರಿದರು. ಚಿಮ್ಮನಕಟ್ಟಿ 57,446 ಮತ ಪಡೆದು ಜಯ ಸಾಧಿಸಿದ್ದರು. ಅವರಿಗೆ ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್ ಅಭ್ಯರ್ಥಿ ಮಹಾಂತೇಶ ಮಮದಾಪುರ 42,333 ಮತ ಪಡೆದರು. ಬಿಜೆಪಿಯ ಅಭ್ಯರ್ಥಿ ಎಂ ಕೆ ಪಟ್ಟಣಶೆಟ್ಟಿ 30,310 ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸಿದ್ದರಾಮಯ್ಯ ಮತ್ತು ಬಿಜೆಪಿಯಿಂದ ಬಿ ಶ್ರೀರಾಮುಲು ಸ್ಪರ್ಧೆಯಿಂದಾಗಿ ಬಾದಾಮಿ ರಾಜ್ಯದ ಗಮನ ಸೆಳೆಯಿತು. ಜಾತಿ ರಾಜಕಾರಣದ ತುರುಸಿನ ಪೈಪೋಟಿಯಲ್ಲಿ ಸಿದ್ದರಾಮಯ್ಯ ಅವರು 67,599 ಮತ ಪಡೆದು ಕೇವಲ 1,696 ಮತಗಳ ಅಂತರದಲ್ಲಿ ಗೆಲ್ಲುವ ಮೂಲಕ ರಾಜಕೀಯವಾಗಿ ಮರುಜನ್ಮಪಡೆದರು. ಅವರಿಗೆ ತೀವ್ರ ಪೈಪೋಟಿ ನೀಡಿದ ಶ್ರೀರಾಮುಲು 65,903 ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.