ಶಹಾಪುರ ವಿಧಾನಸಭಾ ಕ್ಷೇತ್ರ

ಹಿಂದುಳಿದ ನಾಡಿನಲ್ಲಿ ಉಳ್ಳವರ ವೋಟ್‌ಬ್ಯಾಂಕ್ ರಾಜಕಾರಣ
ಯಾವೊಂದು ಪಕ್ಷಕ್ಕೂ ಮಣೆ ಹಾಕದ ಕ್ಷೇತ್ರ ಶಹಾಪುರ. ಇಡೀ ದೇಶದಲ್ಲಿಯೇ ಕಾಂಗ್ರೆಸ್ ಸದ್ದು ಮಾಡುತ್ತಿದ್ದ ಸಮಯದಲ್ಲೂ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾಲ ಬಿಚ್ಚಲಾಗಿರಲಿಲ್ಲ. ರಾಜ್ಯದಲ್ಲಿ ಪ್ರಭಾವ ಬೀರಿದ್ದ ಎಲ್ಲ ಪಕ್ಷಗಳೂ ಕ್ಷೇತ್ರದಲ್ಲಿ ಖಾತೆ ತೆರೆದು, ಮರೆಯಾಗಿವೆ. ಆಶ್ಚರ್ಯವೆಂದರೆ, ಈಗಲೂ ದೇಶದಲ್ಲಿ ತಾನೇ ರಾಜನೆಂಬಂತೆ ಮರೆಯುತ್ತಿರುವ ಬಿಜೆಪಿ, ಇನ್ನೂ ಈ ಕ್ಷೇತ್ರದಲ್ಲಿ ಖಾತೆ ತೆರೆಯಲಾಗಿಲ್ಲ.
ಎರಡು ನದಿಗಳಿಂದ ಸುತ್ತುವರಿದಿರುವ ವಿಧಾನಸಭಾ ಕ್ಷೇತ್ರ ಯಾದಗಿರಿ ಜಿಲ್ಲೆಯ ಶಹಾಪುರ. ಈ ಕ್ಷೇತ್ರವನ್ನು ಒಂದೆಡೆ ಕೃಷ್ಣಾ ನದಿ, ಮತ್ತೊಂದೆಡೆ ಭೀಮಾ ನದಿ ಆವರಿಸಿಕೊಂಡಿದೆ. ಕೃಷ್ಣಾದಂತಹ ದೊಡ್ಡ ನದಿಯೊಂದು ತಾಲೂಕಿನ ಗಡಿಯಲ್ಲಿ ಹರಿಯುತ್ತಿದ್ದರೂ ಈ ಕ್ಷೇತ್ರ ನಾನಾ ಕಾರಣಗಳಿಂದ ಹಿಂದುಳಿದಿದೆ. ಇದರಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯೂ ಒಂದು ಕಾರಣ. ಉಳ್ಳವರು ವೋಟ್ ಬ್ಯಾಂಕ್ ರಾಜಕಾರಣ ಮಾಡದೇ ಶಹಾಪುರ ವಿಧಾನಸಭಾ ಕ್ಷೇತ್ರ ವನ್ನು ನಾನಾ ರೀತಿಯಲ್ಲಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಪ್ರತಿನಿಧಿಗಾಗಿ ಕ್ಷೇತ್ರದ ಜನರು ಪರಿತಪಿಸುತ್ತಿದ್ದಾರೆ.
2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಇದುವರೆಗೂ 14 ಶಾಸಕರನ್ನು ಆರಿಸಿ, ವಿಧಾನಸಭೆಗೆ ಕಳಿಸಿರುವ ಕ್ಷೇತ್ರ ಶಹಾಪುರ. ಅತಿ ಹಳೆಯ ಪಕ್ಷವಾದ ಕಾಂಗ್ರೆಸ್ ಕೂಡ ಹಿಂದಿನಿಂದಲೂ ತಾನೇ ರಾಜನೆಂದು ಈ ಕ್ಷೇತ್ರದಲ್ಲಿ ಮೆರೆಯಲಾಗಿಲ್ಲ.
ರಾಜ್ಯದಲ್ಲಿ ನಡೆದ ಮೊದಲ ಚುನಾವಣೆಯಿಂದಲೂ ಈ ಕ್ಷೇತ್ರ ಸಾಮಾನ್ಯ ವರ್ಗಗಳಿಗೆ ಅವಕಾಶ ನೀಡುವ ಕ್ಷೇತ್ರವಾಗಿ ಬಂದಿದೆ. ಇದುವರೆಗೂ 14 ಶಾಸಕರು ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಈ ಪೈಕಿ, ಕಾಂಗ್ರೆಸ್ ಏಳು ಬಾರಿ, ಸ್ವತಂತ್ರ ಪಕ್ಷ ಎರಡು ಬಾರಿ ಹಾಗೂ ಹಳೇ ಕಾಂಗ್ರೆಸ್, ಜನತಾ ಪಕ್ಷ, ಜನತಾ ದಳ, ಜೆಡಿಎಸ್ ಮತ್ತು ಕೆಜೆಪಿ ಅಭ್ಯರ್ಥಿಗಳು ತಲಾ ಒಮ್ಮೆ ಕ್ಷೇತ್ರದಲ್ಲಿ ಗೆದ್ದು, ವಿಧಾನಸಭೆ ಪ್ರವೇಶಿಸಿದ್ದಾರೆ.

ಕ್ಷೇತ್ರದಲ್ಲಿ 1957ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿರುಪಾಕ್ಷಪ್ಪ ಗೆದ್ದಿದ್ದರು. 1962 ಮತ್ತು 1967ರಲ್ಲಿ ಸ್ವತಂತ್ರ ಪಕ್ಷದ ರಾಜಾ ಕೃಷ್ಣಪ್ಪ ನಾಯಕ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1972ರಲ್ಲಿ ಹಳೇ ಕಾಂಗ್ರೆಸ್‌ನ ಬಾಪುಗೌಡ ರಾಯಪ್ಪ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
1978ರಲ್ಲಿ ಇಂದಿರಾ ಕಾಂಗ್ರೆಸ್‌ನ ಶಿವಣ್ಣ ಸವೂರ್, 1983ರಲ್ಲಿ ಜನತಾ ಪಕ್ಷ ಸೇರಿದ್ದ ಬಾಪುಗೌಡ ರಾಯಪ್ಪ, 1985 ಮತ್ತು 1989ರಲ್ಲಿ ಕಾಂಗ್ರೆಸ್‌ನ ಶಿವಶೇಖರಗೌಡ ಶಿರ್ವಾರ, 1994ರಲ್ಲಿ ಜನತಾ ದಳದ ಶರಣಬಸಪ್ಪ ದರ್ಶನಾಪುರ್ ಹಾಗೂ 1999ರಲ್ಲಿ ಮೂರನೇ ಬಾರಿಗೆ ಕಾಂಗ್ರೆಸ್‌ನ ಶಿವಶೇಖರಗೌಡ ಶಿರ್ವಾರ ಆಯ್ಕೆಯಾಗಿ ವಿಧಾನಸಭೆಯಲ್ಲಿ ಶಹಾಪುರವನ್ನು ಪ್ರತಿನಿಧಿಸಿದ್ದರು.
2004ರಲ್ಲಿ ಜನತಾ ದಳ ವಿಭಜನೆಗೊಂಡು ಜೆಡಿಎಸ್ ಜೊತೆಗಿದ್ದ ಶರಣಬಸಪ್ಪ ದರ್ಶನಾಪುರ ಎರಡನೇ ಬಾರಿಗೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
2008ರಲ್ಲಿ ರಾಜ್ಯದಲ್ಲಿ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯೂ ನಡೆಯಿತು. ಅದರೆ, ಶಹಾಪುರ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿಯೇ ಉಳಿಯಿತು. ಅದೇ ವರ್ಷ ನಡೆದ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಶರಣಬಸಪ್ಪ ದರ್ಶನಾಪುರ 47,343 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಅವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಶಿವಶೇಖರಗೌಡ ಶಿರ್ವಾರ 36,206 ಮತಗಳನ್ನು ಪಡೆದು, 11,136 ಮತಗಳ ಅಂತರದಲ್ಲಿ ಸೋಲುಂಡರು. ಬಿಜೆಪಿಯ ಮಲ್ಲನಗೌಡ ಪಾಟೀಲ್ ಉಕ್ಕಿನಾಳ್ 11,264 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು.
2013ರಲ್ಲಿ ಬಿಜೆಪಿ ವಿರುದ್ಧ ಸಮರ ಸಾರಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಜೆಪಿ ಕಟ್ಟಿದ್ದರು. ಕೆಜೆಪಿ ಪರವಾಗಿ ಭಾರೀ ಪ್ರಚಾರ ನಡೆದಿತ್ತು. ಆಗತಾನೇ ಹುಟ್ಟಿದ್ದ ಕೆಜೆಪಿ ಶಹಾಪುರದಲ್ಲಿ ತನ್ನ ಖಾತೆ ತೆರೆದಿತ್ತು. ಅಂದಿನ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿದ್ದ ಗುರುಪಾಟೀಲ್ ಶಿರವಾಳ್ 54,954 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಅವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಶರಣಬಸಪ್ಪ ದರ್ಶನಾಪುರ್ 49,128 ಮತಗಳನ್ನು ಪಡೆದು, 5,796 ಮತಗಳ ಅಂತರದಿಂದ ಸೋಲುಂಡರು. ಜೆಡಿಎಸ್‌ನ ಶರಣಪ್ಪ ಸಾಲದಪುರ್ 12,159 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರೆ, ವೀರಣ್ಣಗೌಡರನ್ನು ಕಣಕ್ಕಿಳಿಸಿದ್ದ ಬಿಜೆಪಿ 1,484 ಮತಗಳನ್ನು ಪಡೆದು ಏಳನೇ ಸ್ಥಾನಕ್ಕೆ ಕುಸಿಯಿತು.

ಏನೇ ಆದರೂ ಶಹಾಪುರ ಕ್ಷೇತ್ರವನ್ನು ಬಿಡದೆ ಅಲ್ಲೇ ನೆಲೆಯೂರಿದ್ದ ಶರಣಬಸಪ್ಪಗೌಡ ದರ್ಶನಾಪುರ್ ಕಳೆದ ಚುನಾವಣೆ (2018)ರಲ್ಲಿ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಅವರು 78,642 ಮತಗಳನ್ನು ಪಡೆದಿದ್ದರು. ಅವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಗುರು ಪಾಟೀಲ್ ಶಿರವಾಳ್ 47,668 ಮತಗಳನ್ನು ಪಡೆದು, 30,974 ಮತಗಳ ಅಂತರದಿಂದ ಹೀನಾಯ ಸೋಲು ಕಂಡರು. ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಅಮೀನ್‌ರಡ್ಡಿ ಯಾಳಗಿ 23,329 ಮತಗಳನ್ನು ಪಡೆದಿದ್ದರು.
ಶಹಾಪುರ ಕ್ಷೇತ್ರವು ಮೀಸಲಾತಿಯಲ್ಲಿ ಸಾಮಾನ್ಯ ವರ್ಗದ ಕ್ಷೇತ್ರವಾಗಿದ್ದರೂ, ಇಲ್ಲಿ ದಲಿತರ ಬಲ ಹೆಚ್ಚಾಗಿದೆ. ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕ್ಷೇತ್ರದಲ್ಲಿದೆಯಾದರೂ, ಅವರಾರೇ ಗೆಲ್ಲಬೇಕಾದರೂ ದಲಿತರ ಕೃಪೆ ಇರಲೇಬೇಕು. ದಲಿತರನ್ನು ದೂರವಿಟ್ಟು ಗೆಲ್ಲುವುದು ಅಷ್ಟು ಸುಲಭವಲ್ಲ.
ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ 2,29,117 ಮತದಾರರು ಇದ್ದಾರೆ. ಅವರಲ್ಲಿ ಸುಮಾರು 92 ಸಾವಿರ ದಲಿತರು, 56 ಸಾವಿರ ಮುಸ್ಲಿಮರು, 42 ಸಾವಿರ ಪರಿಶಿಷ್ಟ ಪಂಗಡದ ಮತದಾರರಿದ್ದಾರೆ. ಅಲ್ಲದೆ, 29 ಸಾವಿರ ಇತರ ಸಮುದಾಯಗಳ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.