ಯಾದಗಿರಿ ವಿಧಾನಸಭಾ ಕ್ಷೇತ್ರ

ಪಕ್ಷೇತರರು, ಕಾಂಗ್ರೆಸ್ ಕಟ್ಟಿದ ಕೋಟೆಯೊಳಗೆ ಬಿಜೆಪಿ ಠಿಕಾಣಿ
ಜಿಲ್ಲಾ ಕೇಂದ್ರವಾಗಿ ರೂಪುಗೊಂಡ ನಂತರ ಯಾದಗಿರಿ ಎರಡು ವಿಧಾನಸಭಾ ಚುನಾವಣೆಗಳನ್ನು ಕಂಡಿದೆ. 80ರ ದಶಕದವರೆಗೆ ಕಾಂಗ್ರೆಸ್ಗೂ ಕೂಡ ಅವಕಾಶ ನೀಡಿದ ಕ್ಷೇತ್ರ, ಸದ್ಯ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಕಳೆದ ಚುನಾವಣೆಯಲ್ಲಷ್ಟೇ ಬಿಜೆಪಿ ತನ್ನ ಖಾತೆ ತೆರೆದಿದೆ. ಜೆಡಿಎಸ್ಗೆ ಕ್ಷೇತ್ರದಲ್ಲಿ ಇನ್ನೂ ನೆಲೆ ಸಿಕ್ಕಿಲ್ಲ. 1987ರಿಂದ 2004ರವರೆಗೆ ಸತತ ಮೂರು ಬಾರಿ ಕ್ಷೇತ್ರವನ್ನು ಮಾಲಕ ರೆಡ್ಡಿ ಲಕ್ಷಣರೆಡ್ಡಿ ಪ್ರತಿನಿಧಿಸಿದ್ದರು.
ಕಲಬುರಗಿ ಜಿಲ್ಲೆಯಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಗಿ ರಚನೆಯಾಗಿರುವುದು ಯಾದಗಿರಿ. ಭೀಮಾ ನದಿಯ ತೀರದಲ್ಲಿರುವ ಯಾದಗಿರಿ ತಾಲೂಕು, ವಿಧಾನಸಭಾ ಕ್ಷೇತ್ರವೂ ಹೌದು. ಹೊಸ ಜಿಲ್ಲೆಯಾಗಿ ರೂಪುಗೊಂಡ ನಂತರ ಯಾದಗಿರಿ ಎರಡು ವಿಧಾನಸಭಾ ಚುನಾವಣೆಗಳನ್ನು ಎದುರಿಸಿದೆ. ಕ್ಷೇತ್ರದ ಅಂಚಿನಲ್ಲಿ ಭೀಮಾ ನದಿ ಹರಿಯುತ್ತಿದ್ದರೂ, ಆಳುವವರ ನಿರ್ಲಕ್ಷ್ಯದಿಂದ ಯಾದಗಿರಿ ಹಿಂದುಳಿದಿದೆ.
ಇದುವರೆಗೂ 14 ಶಾಸಕರನ್ನು ಆರಿಸಿ ವಿಧಾನಸಭೆಗೆ ಕಳಿಸಿರುವ ಯಾದಗಿರಿ, ತನ್ನ 15ನೇ ಪ್ರತಿನಿಧಿಯ ಆಯ್ಕೆಗೆ ಸಿದ್ದವಾಗುತ್ತಿದೆ. ಪ್ರಸ್ತುತ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಅತಿ ಹಳೆಯ ಪಕ್ಷವಾದ ಕಾಂಗ್ರೆಸ್ ಕೂಡ ಈ ಕ್ಷೇತ್ರದಲ್ಲಿ 80ರ ದಶಕದವರೆಗೂ ನೆಲೆ ಕಾಣಲು ಸಾಧ್ಯವಾಗಿರಲಿಲ್ಲ. 70ರ ದಶಕದವರೆಗೂ ಸ್ವತಂತ್ರ ಅಭ್ಯರ್ಥಿಗಳೇ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಆನಂತರ ಜನತಾ ಪಕ್ಷ ಕ್ಷೇತ್ರದಲ್ಲಿ ಅಸ್ತಿತ್ವ ಕಂಡುಕೊಂಡರೆ, 80ರ ದಶಕದ ನಂತರ ಯಾದಗಿರಿಯನ್ನು ಕಾಂಗ್ರೆಸ್ ತನ್ನ ಭದ್ರಕೋಟೆಯಾಗಿ ಮಾಡಿಕೊಂಡಿತ್ತು. 2018ರಲ್ಲಿ ಆ ಕೋಟೆಯನ್ನು ಭೇದಿಸಿ ಮೊದಲ ಬಾರಿಗೆ ಬಿಜೆಪಿ ಕಮಲ ಅರಳಿಸಿತು.

ರಾಜ್ಯದಲ್ಲಿ ನಡೆದ ಮೊದಲ ಚುನಾವಣೆಯಿಂದಲೂ ಈ ಕ್ಷೇತ್ರ ಸಾಮಾನ್ಯ ಮೀಸಲು ಕ್ಷೇತ್ರವಾಗಿದೆ. ಇದುವರೆಗೂ 14 ಶಾಸಕರು ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಈ ಪೈಕಿ, ಕಾಂಗ್ರೆಸ್ 6 ಬಾರಿ, ಪಕ್ಷೇತರರು 4 ಬಾರಿ, ಜನತಾ ಪಕ್ಷ 2 ಬಾರಿ ಹಾಗೂ ಲೋಕಸೇವಾ ಸಂಘ (ಎಲ್ಎಸ್ಎಸ್) ಮತ್ತು ಬಿಜೆಪಿ ಅಭ್ಯರ್ಥಿಗಳು ತಲಾ ಒಮ್ಮೆ ಕ್ಷೇತ್ರದಲ್ಲಿ ಗೆದ್ದು, ವಿಧಾನಸಭೆ ಪ್ರವೇಶಿಸಿದ್ದಾರೆ.
ಕ್ಷೇತ್ರದಲ್ಲಿ 1957ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಸವನಾಥರಾಯ ಗೆದ್ದಿದ್ದರು. 1962ರಲ್ಲಿ ಎಲ್ಎಸ್ಎಸ್ನ ಮಹಂತಸ್ವಾಮಿ ವಿರುಪಾಕ್ಷಯ್ಯ, 1967ರಲ್ಲಿ ಸ್ವತಂತ್ರ ಅಭ್ಯರ್ಥಿ ವಿ ಆರ್ ರಾಚೇಗೌಡ, 1972ರಲ್ಲಿ ಸ್ವತಂತ್ರ ಅಭ್ಯರ್ಥಿ ವಿಶ್ವನಾಥ ರೆಡ್ಡಿ ಗೆದ್ದು, ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
1978ರಲ್ಲಿ ಕಾಂಗ್ರೆಸ್ ವಿಭಜನೆಗೊಂಡು ಹುಟ್ಟಿಕೊಂಡಿದ್ದ ಇಂದಿರಾ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಶರಣಪ್ಪ ನಾಗಪ್ಪ ಕಲ್ಬುರ್ಗಿ ಗೆದ್ದಿದ್ದರು. ಈ ಹಿಂದೆ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದ ವಿಶ್ವನಾಥ ರೆಡ್ಡಿ 1978ರ ಸಮಯದಲ್ಲಿ ಜನತಾ ಪಕ್ಷ ಸೇರಿದ್ದರು. ಅವರು 1983 ಮತ್ತು 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
1989ರಲ್ಲಿ ಒಗ್ಗೂಡಿದ ಕಾಂಗ್ರೆಸ್ ಮೊದಲ ಬಾರಿಗೆ ಯಾದಗಿರಿಯಲ್ಲಿ ತನ್ನ ಖಾತೆ ತೆರೆಯಿತು. ಅಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಮಾಲಕ ರೆಡ್ಡಿ ಲಕ್ಷಣರೆಡ್ಡಿ ಗೆದ್ದರು. 1993 ಮತ್ತು 1999ರ ಚುನಾವಣೆಯಲ್ಲಿಯೂ ಅವರೇ ಕಾಂಗ್ರೆಸ್ನಿಂದ ಗೆದ್ದು, ಸತತ ಮೂರು ಗೆಲುವುಗಳೊಂದಿಗೆ ಹ್ಯಾಟ್ರಿಕ್ ಬಾರಿಸಿದರು.
2004ರಲ್ಲಿ ಅವರ ವಿರುದ್ಧ ಸ್ಪರ್ಧಿಸಿದ್ದ ಸ್ವತಂತ್ರ ಅಭ್ಯರ್ಥಿ ವೀರ್ ಬಸವಂತರೆಡ್ಡಿ ಮುದ್ನಾಳ್ ಗೆದ್ದು ವಿಧಾನಸಭೆಯ ಮೆಟ್ಟಿಲೇರಿದ್ದರು.
2008ರಲ್ಲಿ ರಾಜ್ಯದಲ್ಲಿ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯೂ ನಡೆಯಿತು. ಆದರೆ, ಯಾದಗಿರಿ ಕ್ಷೇತ್ರ ಸಾಮಾನ್ಯ ರಂಗವಾಗಿಯೇ ಉಳಿಯಿತು. ಆ ವರ್ಷ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಲಕರೆಡ್ಡಿ ಲಕ್ಷಣರೆಡ್ಡಿ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದರು. ಅವರು 36,248 ಮತಗಳನ್ನು ಪಡೆದಿದ್ದರು. ಅವರ ವಿರುದ್ಧ ಸ್ಪರ್ಧಿಸಿದ್ದ, ಬಿಜೆಪಿ ಸೇರಿದ್ದ ಮಾಜಿ ಪಕ್ಷೇತರ ಶಾಸಕ ವೀರ್ ಬಸವಂತ ರೆಡ್ಡಿ 31,812 ಮತಗಳನ್ನು ಪಡೆದು, 4,536 ಮತಗಳ ಅಂತರದಲ್ಲಿ ಸೋಲುಂಡರು. ಜೆಡಿಎಸ್ನಿಂದ ಸ್ಪರ್ಧಿಸಿದ್ದ ಶ್ರೀನಿವಾಸ ರೆಡ್ಡಿ ಚೆನ್ನೂರು 16,687 ಮತಗಳನ್ನು ಪಡೆದಿದ್ದರು.

2013ರಲ್ಲಿ ಮತ್ತೆ ಕಾಂಗ್ರೆಸ್ನಿಂದಲೇ ಕಣಕ್ಕಿಳಿದಿದ್ದ ಮಾಲಕರೆಡ್ಡಿ ಲಕ್ಷಣರೆಡ್ಡಿ ತಮ್ಮ ಐದನೇ ಗೆಲುವನ್ನು ದಾಖಲಿಸಿದರು. ಅವರು 40,434 ಮತಗಳನ್ನು ಪಡೆದು ಗೆದಿದ್ದರು. ಅವರ ವಿರುದ್ಧ ಮತ್ತೆ ಕೆಜೆಪಿಯಿಂದ ಸ್ಪರ್ಧಿಸಿದ್ದ ವೀರ್ ಬಸವಂತ ರೆಡ್ಡಿ ಹಿಂದಿನ ಚುನಾವಣೆಗಿಂತಲೂ ಕಡಿಮೆ ಮತ ಪಡೆದರು. ಅವರು 31,330 ಮತಗಳನ್ನು ಪಡೆದು 9,104 ಮತಗಳ ಅಂತರದಲ್ಲಿ ಸೋಲು ಕಂಡರು. ಜೆಡಿಎಸ್ನಿಂದ ಸ್ಪರ್ಧಿಸಿದ್ದ ಅಬ್ಲುಲ್ ನಬೀ ಕದ್ಲೂರ್ 23,977 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರೆ, ಚಂದ್ರಶೇಖರ್ ಗೌಡ ಅವರನ್ನು ಕಣಕ್ಕಿಳಿಸಿದ್ದ ಬಿಜೆಪಿ ಕೇವಲ 3,556 ಮತಗಳನ್ನು ಪಡೆದು ಐದನೇ ಸ್ಥಾನ ಪಡೆದುಕೊಂಡಿತ್ತು.
ಕಳೆದ ಚುನಾವಣೆ (2018) ವೇಳೆಗೆ ವಿಭಜನೆಗೊಂಡಿದ್ದ ಬಿಜೆಪಿ-ಕೆಜೆಪಿ ಮತ್ತೆ ಒಗ್ಗೂಡಿದ್ದವು. ಅದರ ಫಲವಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವೆಂಕಟರೆಡ್ಡಿ ಮುದ್ನಾಳ 62,227 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಅವರ ವಿರುದ್ಧ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಮಾಲಕರೆಡ್ಡಿ 49,346 ಮತಗಳನ್ನು ಪಡೆದು 12,881 ಮತಗಳ ಅಂತರದಲ್ಲಿ ಸೋಲು ಕಂಡರು. ಜೆಡಿಎಸ್ ಅಭ್ಯರ್ಥಿ ಅಬ್ಲುಲ್ ನಬೀ ಕದ್ಲೂರ್ 25,774 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಖುಷಿಪಟ್ಟುಕೊಂಡಿದ್ದರು.
ಯಾದಗಿರಿ ವಿಧಾನಸಭಾ ಕ್ಷೇತ್ರವು ಮೀಸಲಾತಿಯಲ್ಲಿ ಸಾಮಾನ್ಯ ಕ್ಷೇತ್ರವಾಗಿದ್ದರೂ, ಇಲ್ಲಿ ದಲಿತರ ಬಲ ಹೆಚ್ಚಾಗಿದೆ. ಯಾವ ಜಾತಿ, ಧರ್ಮದವರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕ್ಷೇತ್ರದಲ್ಲಿದೆ. ಆದರೆ ಯಾರೇ ಗೆಲ್ಲಬೇಕಾದರೂ ದಲಿತರ ಕೃಪೆ ಇರಬೇಕು.
ಕ್ಷೇತ್ರದಲ್ಲಿ 2,41,533 ಮತದಾರರು ಇದ್ದಾರೆ. ಅವರಲ್ಲಿ ಸುಮಾರು 1.5 ಲಕ್ಷ ದಲಿತರು, 61 ಸಾವಿರ ಮುಸ್ಲಿಮರು, 46 ಸಾವಿರ ಪರಿಶಿಷ್ಟ ಪಂಗಡದ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.