ಗುರುಮಠಕಲ್ ವಿಧಾನಸಭಾ ಕ್ಷೇತ್ರ

ಖರ್ಗೆಯವರನ್ನು ‘ಸೋಲಿಲ್ಲದ ಸರದಾರ’ನನ್ನಾಗಿ ಮಾಡಿದ ಕ್ಷೇತ್ರ
ಮಲ್ಲಿಕಾರ್ಜುನ ಖರ್ಗೆ ಅವರ ತಂದೆ ಜವಳಿ ಮಿಲ್ ಕಾರ್ಮಿಕ. ಅವರಿಗೆ ಖರ್ಗೆ ಸೇರಿದಂತೆ ಆರು ಮಕ್ಕಳು. ಊರ ಹೊರಗಿನ ಪುಟ್ಟ ಗುಡಿಸಲಿನಲ್ಲಿ ಅವರ ವಾಸ. ಒಮ್ಮೆ ಆ ಊರಿನಲ್ಲಿ ಯಾವುದೋ ವಿಚಾರಕ್ಕೆ ಗಲಾಟೆ ನಡೆಯಿತು. ದುಷ್ಕರ್ಮಿಗಳು ಖರ್ಗೆಯವರ ಗುಡಿಸಲಿಗೆ ಬೆಂಕಿ ಇಟ್ಟರು. ಆ ಸಂದರ್ಭದಲ್ಲಿ ಖರ್ಗೆ ಅವರ ತಾಯಿ ಮತ್ತು ಅವರ ಐವರು ಅಣ್ಣಂದಿರು ಗುಡಿಸಲಿನ ಒಳಗಿದ್ದರು. ಅವರೆಲ್ಲ ಬೆಂಕಿಯಲ್ಲಿ ಸುಟ್ಟು ಬೂದಿಯಾಗಿ ಹೋದರು. ಈ ಘಟನೆ ನಡೆದಾಗ ಖರ್ಗೆ ಅವರಿಗೆ ಕೇವಲ ಮೂರು ವರ್ಷ ವಯಸ್ಸು. ಈ ದುರ್ಘಟನೆ ಅವರನ್ನು ತೀವ್ರವಾಗಿ ಕಲಕಿತ್ತು. ಅವರ ಜೀವನದಲ್ಲಿ ಎಂದೆಂದೂ ಮರೆಯಲಾಗದ ಘಟನೆಯಾಗಿ ಉಳಿಯಿತು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕರ್ಮಭೂಮಿ ಆಗಿದ್ದ ಕ್ಷೇತ್ರ ಗುರುಮಠಕಲ್. ಯಾದಗಿರಿ ಜಿಲ್ಲೆಯ ಮತ್ತು ಗುಲ್ಬರ್ಗಾ ಲೋಕಸಭಾ ವ್ಯಾಪ್ತಿಗೆ ಒಳಪಡುವ ಕ್ಷೇತ್ರ ಗುರುಮಠಕಲ್. ಮಲ್ಲಿಕಾರ್ಜುನ ಖರ್ಗೆ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಎಂಟು ಬಾರಿಯೂ ಈ ಕ್ಷೇತ್ರದ ಮತದಾರರು ಅವರ ಕೈಬಿಟ್ಟಿರಲಿಲ್ಲ. ಸತತ ಎಂಟು ಬಾರಿ ಶಾಸಕರಾಗಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಸೋಲಿಲ್ಲದ ಸರದಾರ ಎಂಬ ಬಿರುದು ಪಡೆದಿದ್ದರು. ಈವರೆಗೆ ನಡೆದ 13 ವಿಧಾನಸಭಾ ಚುನಾವಣೆಗಳ ಪೈಕಿ ಕಾಂಗ್ರೆಸ್ ಬರೋಬ್ಬರಿ 11 ಬಾರಿ ಜಯಶಾಲಿಯಾಗಿದೆ. 1962ರ ಮತ್ತು 2018ರ ವಿಧಾನಸಭಾ ಚುನಾವಣೆಗಳನ್ನು ಹೊರತುಪಡಿಸಿ ನಡುವೆ ಗೆದ್ದ ಎಲ್ಲ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದವರೇ ಎನ್ನುವುದು ಮತ್ತೊಂದು ಗಮನಾರ್ಹ ಸಂಗತಿ.
ಗುರುಮಠಕಲ್ ಕ್ಷೇತ್ರವನ್ನು 1967ರಲ್ಲಿ ಎಸ್‌ಸಿ ಮೀಸಲು ಕ್ಷೇತ್ರವನ್ನಾಗಿ ಮಾಡಲಾಯಿತು. ಬಳಿಕ 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಸಾಮಾನ್ಯ ಕ್ಷೇತ್ರವಾಗಿ ರಚಿಸಲಾಯಿತು.
ಕ್ಷೇತ್ರ ರಚನೆಯಾದ ಮೊದಲ ಚುನಾವಣೆಯಲ್ಲಿ (1962) ಭಾರತದ ಕೊನೆಯ ಗವರ್ನರ್ ಸಿ ರಾಜಗೋಪಾಲಚಾರಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯ ಸಾರಿ ಕಟ್ಟಿದ್ದ ಸ್ವತಂತ್ರ ಪಕ್ಷದ ಅಭ್ಯರ್ಥಿ ವಿದ್ಯಾಧರ್ ಗುರೂಜಿ ಸಾಯಣ್ಣ ಅವರು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮಲ್ಲಪ್ಪ ಲಿಂಗಪ್ಪ ಕೊಲ್ಲೂರು ಅವರು 9909 ಮತಗಳಿಂದ ಸೋಲನುಭವಿಸಿದ್ದರು. ಈ ಮೂಲಕ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಮೊದಲ ಶಾಸಕ ಎನ್ನುವ ಹೆಗ್ಗಳಿಕೆಗೆ ವಿದ್ಯಾಧರ್ ಗುರೂಜಿ ಸಾಯಣ್ಣ ಪಾತ್ರರಾಗಿದ್ದಾರೆ.

1967ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್ ಯೆಂಕಪ್ಪ ಅವರು ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ಗೆಲುವಿಗೆ ಅಡಿಪಾಯ ಹಾಕಿದರು. ಇಲ್ಲಿಂದ ಗೆಲ್ಲುತ್ತಾ ಸಾಗಿದ ಪಕ್ಷ 2018ರ ವಿಧಾನಸಭಾ ಚುನಾವಣೆಯವರೆಗೆ ಸೋಲುವ ಇತಿಹಾಸವೇ ಇಲ್ಲ. ಈ ಚುನಾವಣೆಯಲ್ಲಿ ಸ್ವತಂತ್ರ ಪಕ್ಷದ ಅಭ್ಯರ್ಥಿ ಎಸ್.ಭೀಮಪ್ಪ ಅವರು ಕೇವಲ 927 ಮತಗಳ ಅಂತರದಿಂದ ಪರಾಭವಗೊಂಡರು.
ಸತತ ಎಂಟು ಬಾರಿ ಗೆದ್ದ ಮಲ್ಲಿಕಾರ್ಜುನ ಖರ್ಗೆ
ರಾಷ್ಟ್ರ ರಾಜಕಾರಣದಲ್ಲಿ ಛಾಪು ಮೂಡಿಸಿರುವ ಮತ್ತು ತಮ್ಮ 80ರ ವಯಸ್ಸಿನಲ್ಲಿಯೂ ಸಂಸತ್ ನಿಬ್ಬೆರಗಾಗುವಂತೆ ಮಾತನಾಡುವ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲ ಬಾರಿಗೆ 1972ರಲ್ಲಿ ಗುರುಮಠಕಲ್ ವಿಧಾನಸಭಾ ಚುನಾವಣೆಯ ಮೂಲಕ ರಾಜ್ಯ ರಾಜಕಾರಣ ಪ್ರಾರಂಭಿಸಿದರು. ತಮ್ಮ ಮೊದಲ ಚುನಾವಣೆಯಲ್ಲಿಯೇ ಖರ್ಗೆ ಅವರು ಸ್ವತಂತ್ರ ಅಭ್ಯರ್ಥಿ ಮೂರ್ತೆಪ್ಪ ಅವರ ವಿರುದ್ಧ 9,440 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು 16,796 ಮತ ಪಡೆದಿದ್ದರೆ, ಮೂರ್ತೆಪ್ಪ ಅವರು 7,356 ಮತ ಗಳಿಸಿದ್ದರು.
1972ರಿಂದ ಆರಂಭವಾದ ಮಲ್ಲಿಕಾರ್ಜುನ ಖರ್ಗೆ ಅವರ ಗೆಲುವಿನ ಓಟ 2004ರವರೆಗೂ ನಿಲ್ಲಲ್ಲೇ ಇಲ್ಲ. 1972, 1978, 1983, 1985, 1989, 1994, 1999, 2004ರ ವಿಧಾನಸಭಾ ಚುನಾವಣೆಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಗೆಲುವು ದಾಖಲಿಸಿದ್ದಾರೆ. ಆ ಮೂಲಕ ದೀರ್ಘವಾಗಿ 32 ವರ್ಷಗಳ ಕಾಲ ಗುರುಮಠಕಲ್ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಹಲವರ ಸಂಪುಟಗಳಲ್ಲಿ ಗೃಹ, ಕಂದಾಯ, ಶಿಕ್ಷಣ ಇಲಾಖೆ ಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ, ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಖರ್ಗೆ ತಮ್ಮ ಕ್ಷೇತ್ರವಷ್ಟೇ ಅಲ್ಲದೇ ಇಡೀ ರಾಜ್ಯದ ಜನರ ಪ್ರೀತಿ ವಿಶ್ವಾಸ ಸಂಪಾದಿಸಿದ್ದಾರೆ. ಖರ್ಗೆ ಪ್ರಸ್ತುತ ಎಐಸಿಸಿ ಅಧ್ಯಕ್ಷರಾಗಿದ್ದಾರೆ.
2008ರಲ್ಲಿ ಗುರುಮಠಕಲ್ ಸಾಮಾನ್ಯ ಮೀಸಲು ಕ್ಷೇತ್ರವಾಗಿ ಬದಲಾಯಿತು. ಗುರುಮಠಕಲ್‌ನಿಂದ ಚಿತ್ತಾಪುರಕ್ಕೆ ವಲಸೆ ಹೋದ ಖರ್ಗೆ ಅವರು, ಗುರುಮಠಕಲ್‌ನಲ್ಲಿ ತಮ್ಮ ಆಪ್ತರಾಗಿದ್ದ ಬಾಬುರಾವ್ ಚಿಂಚನಸೂರ್ ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಸ್ತುತ ಬಿಜೆಪಿ ಎಂಎಲ್‌ಸಿ ಆಗಿರುವ ಬಾಬುರಾವ್ ಚಿಂಚನಸೂರ ಅವರು 2008ರ ಮತ್ತು 2013ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತತ ಎರಡು ಬಾರಿ ಗೆಲುವು ದಾಖಲಿಸಿದ್ದಾರೆ.

ಮೂರು ಬಾರಿ ಎರಡನೇ ಸ್ಥಾನದಲ್ಲಿದ್ದ ಜೆಡಿಎಸ್
2004ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆಕಾಶಿ ಬಸವರಾಜ ಅವರು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಕೇವಲ 18,547 ಮತಗಳ ಅಂತರದಿಂದ ಸೋತಿದ್ದರು. ಅದಾದ ನಂತರ 2008ರ ವಿಧಾನಸಭಾ ಚುನಾವಣೆಯಲ್ಲಿ ನಾಗನಗೌಡ ಕಂದಕೂರ ಅವರು ಬಾಬುರಾವ್ ಚಿಂಚನಸೂರ್ ವಿರುದ್ಧ ಕೇವಲ 9,208 ಮತಗಳಿಂದ ಪರಾಭವಗೊಂಡಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಹಳೆ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದವು. ಇಲ್ಲಿಯೂ ಬಾಬುರಾವ್ ಚಿಂಚನಸೂರ್ ಅವರ ಗೆದ್ದಿದ್ದರು. ನಾಗನಗೌಡ ಅವರ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಎರಡು ಬಾರಿ ಸೋತಿದ್ದ ನಾಗನಗೌಡ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಬಾಬುರಾವ್ ಚಿಂಚನಸೂರ್ ವಿರುದ್ಧ ಬರೋಬ್ಬರಿ 24,480 ಮತಗಳಿಂದ ಗೆಲುವು ದಾಖಲಿಸಿದ್ದರು. ಈ ಮೂಲಕ ಮೊದಲ ಬಾರಿಗೆ ಜೆಡಿಎಸ್ ಅಧಿಕಾರದ ಗದ್ದುಗೆ ಏರಿತು. ಪ್ರಸ್ತುತ ಜೆಡಿಎಸ್ ನಾಯಕ ನಾಗನಗೌಡ ಕಂದಕೂರು ಅವರು ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಒಮ್ಮೆಯೂ ಅರಳದ ಕಮಲ
ಗುರುಮಠಕಲ್‌ನ 13 ವಿಧಾನಸಭಾ ಚುನಾವಣೆಗಳಲ್ಲಿ ಒಮ್ಮೆಯೂ ಬಿಜೆಪಿ ಗೆಲುವು ದಾಖಲಿಸದೇ ಇರುವುದು ಗಮನಾರ್ಹ ಸಂಗತಿ. ಗೆಲುವಿರಲಿ ಹೇಳಿಕೊಳ್ಳುವ ಮತಗಳನ್ನೂ ಸಹ ಬಿಜೆಪಿ ಪಡೆದುಕೊಂಡಿಲ್ಲ. ಗುರುಮಠಕಲ್ ಕ್ಷೇತ್ರದ ಮತದಾರರು ಬಿಜೆಪಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.
ಕ್ಷೇತ್ರದ ಹೊರಗಿನವರ ಪ್ರಾಬಲ್ಯ
1962ರಿಂದ ಈವರೆಗೆ ಗುರುಮಠಕಲ್ ರಾಜಕಾರಣದಲ್ಲಿ ಹೊರಗಿನವರೆ ಆಡಳಿತ ನಡೆಸಿದ್ದಾರೆ. ನಾಗನಗೌಡ ಕಂದಕೂರು ಅವರನ್ನು ಹೊರತುಪಡಿಸಿ, ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು 2013ರ ವಿಧಾನಸಭಾ ಚುನಾವಣೆಯ ಬಾಬುರಾವ ಚಿಂಚನಸೂರವರೆಗೆ ಗೆದ್ದವರು ಇತರೆ ಕ್ಷೇತ್ರದವರೇ ಆಗಿದ್ದಾರೆ. 2,35,314 ಮತಕ್ಷೇತ್ರದ ಒಟ್ಟು ಮತದಾರರಿದ್ದಾರೆ. ಈ ಪೈಕಿ 75ಕ್ಕೂ ಹೆಚ್ಚು ಕಬ್ಬಲಿಗ ಮತದಾರರಿದ್ದು, ನಿರ್ಣಾಯಕರಾಗಿದ್ದಾರೆ.
ಕಳೆದ ಮೂರು ಚುನಾವಣೆಗಳ ಬಲಾಬಲ
2008ರಲ್ಲಿ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಚಿತ್ತಾಪುರ ಮತಕ್ಷೇತ್ರಕ್ಕೆ ತೆರಳಿದರು. ಅಲ್ಲಿದ್ದ ಪ್ರಭಾವಿ ನಾಯಕ ಬಾಬುರಾವ್ ಚಿಂಚನಸೂರು ಅವರು ಗುರುಮಠಕಲ್ ಕ್ಷೇತ್ರಕ್ಕೆ ಬಂದು ನಾಗನಗೌಡ ಕಂದಕೂರು ಅವರ ವಿರುದ್ಧ ಸುಮಾರು 9,208 ಮತಗಳಿಂದ ಗೆಲುವು ದಾಖಲಿಸಿದ್ದರು. 2013ರ ಚುನಾವಣೆಯಲ್ಲೂ ಬಾಬುರಾವ್ ಚಿಂಚನಸೂರು ಅವರು ಅತ್ಯಂತ ಕಡಿಮೆ, ಎಂದರೆ, 1,650 ಮತಗಳಿಂದ ಗೆಲುವು ಸಾಧಿಸಿದ್ದರು. ಎರಡು ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಅನುಭವಿಸಿದ್ದ ನಾಗನಗೌಡ ಕಂದಕೂರ್ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಬಾಬುರಾವ್ ಚಿಂಚನಸೂರ ವಿರುದ್ಧ 24,480 ಮತಗಳಿಂದ ಗೆದ್ದು ಬೀಗಿದ್ದರು.