ಯಶವಂತಪುರ ವಿಧಾನಸಭಾ ಕ್ಷೇತ್ರ

ಯಶವಂತಪುರದಲ್ಲಿ ಮಾರಾಟದ ಸರಕಾಗಿ ಬದಲಾಯಿತೇ ಅಧಿಕಾರ?
ಮಾರುಕಟ್ಟೆಯಿಂದ ಬೆಂಗಳೂರಿನಲ್ಲಿ ಪ್ರಖ್ಯಾತವಾಗಿರುವ ಕ್ಷೇತ್ರ ಯಶವಂತಪುರ. ಬಹುತೇಕ ಬಡವರು, ಕೆಳಮಧ್ಯಮವರ್ಗದವರೇ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್ ಟಿ ಸೋಮಶೇಖರ್ ಬಿಜೆಪಿಯ ಶೋಭಾ ಕರೆಂದ್ಲಾಜೆ ವಿರುದ್ಧ ಸೋತಿದ್ದರು. 2018ರಲ್ಲಿ ಎಸ್ ಟಿ ಸೋಮಶೇಖರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದರು. ನಂತರ ನಡೆದ ಆಪರೇಷನ್ ಕಮಲದಲ್ಲಿ ಎಸ್ ಟಿ ಸೋಮಶೇಖರ್ ಇತರ ಕೆಲವು ಶಾಸಕರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು; ಉಪಚುನಾವಣೆಯಲ್ಲಿ ಗೆದ್ದು ಬಂದು ಮಂತ್ರಿಯೂ ಆದರು.
ಯಶವಂತಪುರ, ಹಲವು ಕಾರಣಗಳಿಂದ ಬೆಂಗಳೂರಿನ ಜನಪ್ರಿಯ ಪ್ರದೇಶ. ಯಶವಂತಪುರ ವಿಧಾನಸಭಾ ಕ್ಷೇತ್ರವೂ ಕೂಡ ನಗರದ ಜನಪ್ರಿಯ ಕ್ಷೇತ್ರಗಳಲ್ಲೊಂದು. 2008ರಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಾಗುವುದಕ್ಕೆ ಮುಂಚೆ ಇದು ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರ ಎಂದು ಹೆಸರು ಪಡೆದಿತ್ತು.
1952ರ ಮೊದಲ ವಿಧಾನಸಭಾ ಚುನಾವಣೆಯಲ್ಲಿ ದ್ವಿಸದಸ್ಯತ್ವ ಹೊಂದಿದ್ದ ಈ ಕ್ಷೇತ್ರದಿಂದ ಕಾಂಗ್ರೆಸ್‌ನ ಆರ್ ಮರಿಸ್ವಾಮಿ ಮತ್ತು ಕೆ ವಿ ಭೈರೇಗೌಡ ಗೆದ್ದಿದ್ದರು. 1957ರಲ್ಲಿ ಕಾಂಗ್ರೆಸ್‌ನ ಕೆ ವಿ ಭೈರೇಗೌಡ ಮತ್ತು ವೈ ರಾಮಕೃಷ್ಣ ಚುನಾಯಿತರಾಗಿದ್ದರು. ಅಲ್ಲಿಯವರೆಗೆ ಇದಕ್ಕೆ ಬೆಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಎಂದು ಹೆಸರಿತ್ತು. 1962ರಿಂದ ಇದು ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರವಾಯಿತು.
ಹಿಂದೆ ಇದು ಕರ್ನಾಟಕದ ಅತಿ ದೊಡ್ಡ ವಿಧಾನಸಭಾ ಕ್ಷೇತ್ರವಾಗಿತ್ತು. ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರವು ರಾಜ್ಯ ರಾಜಕಾರಣದ ದಿಗ್ಗಜರಾದ ಎಂ ವಿ ರಾಜಶೇಖರನ್, ಬಿ ಬಸವಲಿಂಗಪ್ಪನವರಂಥ ಮುಖಂಡರು ಪ್ರತಿನಿಧಿಸಿ ಗೆದ್ದ ಕ್ಷೇತ್ರವಾಗಿತ್ತು.

ಉತ್ತರಹಳ್ಳಿ ಕ್ಷೇತ್ರವಾದ ಮೇಲೆ 1962ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎ ವಿ ನರಸಿಂಹ ರೆಡ್ಡಿ ಅವರನ್ನು ಸೋಲಿಸುವ ಮೂಲಕ ಪಕ್ಷೇತರ ಅಭ್ಯರ್ಥಿ ಜೆ ಶ್ರೀನಿವಾಸ ರೆಡ್ಡಿ ಶಾಸಕರಾಗಿದ್ದರು. 1967ರಲ್ಲಿ ಪಕ್ಷೇತರ ಅಭ್ಯರ್ಥಿ ಶ್ಯಾಮಭೋಮಿ ಅವರನ್ನು ಸೋಲಿಸಿ ಕಾಂಗ್ರೆಸ್ ಪಕ್ಷದ ವೈ ರಾಮಕೃಷ್ಣ ಚುನಾಯಿತರಾದರು. ಸಾಮಾನ್ಯ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ವೈ ರಾಮಕೃಷ್ಣ ಗೆಲುವು ಸಾಧಿಸಿದ್ದರು.
1972ರಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದ ಧೀಮಂತ ನಾಯಕ ಬಿ ಬಸವಲಿಂಗಪ್ಪ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೈ ರಾಮಕೃಷ್ಣ ಅವರನ್ನು ಮಣಿಸಿದ್ದರು. 1978ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಎಸ್ ನಿಜಲಿಂಗಪ್ಪ ಅವರ ಅಳಿಯ ಎಂ ವಿ ರಾಜಶೇಖರನ್, ಇಂದಿರಾ ಕಾಂಗ್ರೆಸ್‌ನ ಎಸ್ ಸಿ ವೆಂಕಟೇಶ್ ಅವರನ್ನು ಸೋಲಿಸಿ ಶಾಸಕರಾಗಿದ್ದರು.
1983ರಲ್ಲಿ ಜನತಾ ಪಕ್ಷದ ಎಂ ಶ್ರೀನಿವಾಸ್, ಕಾಂಗ್ರೆಸ್‌ನ ಸಿ ನಾರಾಯಣ ರೆಡ್ಡಿ ಅವರನ್ನು ಸೋಲಿಸಿದ್ದರು. 1985ರಲ್ಲಿಯೂ ಎಂ ಶ್ರೀನಿವಾಸ್ ಅವರೇ ಶಾಸಕರಾಗಿ ಆಯ್ಕೆಯಾಗಿದ್ದರು. 1985ರಲ್ಲಿ ಸೋತಿದ್ದ ಕಾಂಗ್ರೆಸ್‌ನ ಎಸ್ ರಮೇಶ್, 1989ರಲ್ಲಿ ಎಂ ಶ್ರೀನಿವಾಸ್ ಅವರನ್ನು ಮಣಿಸುವ ಮೂಲಕ ಸೇಡು ತೀರಿಸಿಕೊಂಡರು.
1994ರಲ್ಲಿ ಉತ್ತರಹಳ್ಳಿ ಕ್ಷೇತ್ರದ ಚುನಾವಣೆಯಲ್ಲಿ ಮೊದಲು ಬಿಜೆಪಿಯಿಂದ ಎಂ ಶ್ರೀನಿವಾಸ್ ಆಯ್ಕೆಯಾಗಿದ್ದರು. ಆದರೆ, ನಂತರ 1997ರಲ್ಲಿ ಚುನಾವಣಾ ಕಣದಲ್ಲಿ ಹೊಸ ಮುಖ ಕಾಣಿಸಿಕೊಂಡಿತು. ಅವರೇ ಆರ್ ಅಶೋಕ್. ಆರ್‌ಎಸ್‌ಎಸ್ ಮೂಲಕ ರಾಜಕೀಯ ಪ್ರವೇಶಿಸಿದ್ದ ಅಶೋಕ್, 1997ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.
1999ರಲ್ಲಿಯೂ ಎಸ್ ರಮೇಶ್ ಅವರನ್ನು ಸೋಲಿಸುವ ಮೂಲಕ ಆರ್ ಅಶೋಕ್ ಎರಡನೇ ಬಾರಿಗೆ ಶಾಸಕರಾದರು. 2004ರಲ್ಲಿ 84001 ಮತಗಳ ಭಾರಿ ಅಂತರದಿಂದ ಗೆಲ್ಲುವ ಮೂಲಕ ಆರ್ ಅಶೋಕ್ ಹ್ಯಾಟ್ರಿಕ್ ಸಾಧಿಸಿದರು.

2008ರ ಕ್ಷೇತ್ರ ಪುನರ್ ವಿಂಗಡಣೆಯ ವೇಳೆ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಪದ್ಮನಾಭನಗರ ಮತ್ತು ಯಶವಂತಪುರ ಕ್ಷೇತ್ರಗಳನ್ನಾಗಿ ವಿಂಗಡಿಸಲಾಯಿತು. ಐದು ವಾರ್ಡ್‌ಗಳಿರುವ ನಾಲ್ಕೂವರೆ ಲಕ್ಷಕ್ಕೂ ಅಧಿಕ ಮತದಾರರಿರುವ ಯಶವಂತಪುರವು ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಮತದಾರರಿರುವ ಕ್ಷೇತ್ರಗಳಲ್ಲಿ ಒಂದಾಗಿದೆ.
ಹೊಸದಾಗಿ ರಚನೆಯಾಗಿದ್ದ ಯಶವಂತಪುರ ಕ್ಷೇತ್ರಕ್ಕೆ 2008ರಲ್ಲಿ ಬಿಜೆಪಿಯಿಂದ ಅಭ್ಯರ್ಥಿಯಾದವರು ಶೋಭಾ ಕರೆಂದ್ಲಾಜೆ. ಆಗ ಕಾಂಗ್ರೆಸ್‌ನಿಂದ ಅವರಿಗೆ ಪ್ರತಿಸ್ಪರ್ಧಿಯಾಗಿದ್ದವರು ಎಸ್ ಟಿ ಸೋಮಶೇಖರ್. ಸೋಮಶೇಖರ್ ಅವರಿಗಿಂತ ಕೇವಲ 1082 ಮತ ಹೆಚ್ಚು ಪಡೆದು ಶೋಭಾ ಕರೆಂದ್ಲಾಜೆ ಶಾಸಕಿಯಾಗಿ ಆಯ್ಕೆಯಾಗಿದ್ದರು. 2013ರಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್ ಟಿ ಸೋಮಶೇಖರ್, ತಮ್ಮ ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್‌ನ ಟಿ ಎನ್ ಜವರಾಯಿಗೌಡ ಅವರಿಗಿಂತ 29,100 ಹೆಚ್ಚು ಮತ ಪಡೆದು ಜಯ ಸಾಧಿಸಿದ್ದರು.
2018ರಲ್ಲಿಯೂ ಕಾಂಗ್ರೆಸ್‌ನ ಇದೇ ಸೋಮಶೇಖರ್, ಜೆಡಿಎಸ್‌ನ ಜವರಾಯಿಗೌಡರ ವಿರುದ್ಧ 10,711 ಮತಗಳ ಅಂತರದಿಂದ ಜಯ ದಾಖಲಿಸಿದ್ದರು. ನಂತರ ನಡೆದ ಆಪರೇಷನ್ ಕಮಲದಲ್ಲಿ ಎಸ್ ಟಿ ಸೋಮಶೇಖರ್ ಇತರ ಕೆಲವು ಶಾಸಕರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.
2019ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಎಸ್ ಟಿ ಸೋಮಶೇಖರ್, 144,722 ಮತಗಳನ್ನು ಪಡೆದು ಜಯಶಾಲಿಯಾದರೆ, ಜೆಡಿಎಸ್‌ನ ಜವರಾಯಿಗೌಡ 1,17,023 ಮತಗಳನ್ನು ಪಡೆದು ಪರಾಜಯ ಹೊಂದಿದರು. ಕಾಂಗ್ರೆಸ್‌ನ ಪಿ ನಾಗರಾಜ್ ಕೇವಲ 15,714 ಮತಗಳನ್ನು ಪಡೆಯುವ ಮೂಲಕ ಅತ್ಯಂತ ಕಳಪೆ ಸಾಧನೆ ಮಾಡಿದ್ದರು.