ಜಯನಗರ ವಿಧಾನಸಭಾ ಕ್ಷೇತ್ರ

ಏಷ್ಯಾದ ಅತಿ ದೊಡ್ಡ ಬಡಾವಣೆ ಹೊಂದಿರುವ ವಿಧಾನಸಭಾ ಕ್ಷೇತ್ರದ ಬಗ್ಗೆ ನಿಮಗೆಷ್ಟು ಗೊತ್ತು?
ಜಯನಗರ ಕ್ಷೇತ್ರ ರಾಜ್ಯದ ಮೂರೂ ಪ್ರಮುಖ ಪಕ್ಷಗಳಿಗೆ ಮನ್ನಣೆ ನೀಡುತ್ತಾ ಬಂದಿದೆ. 1978ರಲ್ಲಿ ಅಸ್ತಿತ್ವಕ್ಕೆ ಬಂದ ಜಯನಗರ ಕ್ಷೇತ್ರ ಮೊದಲ ಹತ್ತು ವರ್ಷಗಳ ಕಾಲ ಜನತಾ ಪಕ್ಷದ ವಶದಲ್ಲಿತ್ತು (1978-1989), ಆ ನಂತರದ 20 ವರ್ಷಗಳಲ್ಲಿ (1989-2008)) ಕಾಂಗ್ರೆಸ್ಸಿನ ತೆಕ್ಕೆಯಲ್ಲಿತ್ತು, ಮುಂದಿನ ಹತ್ತು ವರ್ಷಗಳ ಕಾಲ (2008-2018) ಬಿಜೆಪಿ ಇಲ್ಲಿ ಮೇಲುಗೈ ಸಾಧಿಸಿತು. ಹೀಗೆ ಮೂರು ಪಕ್ಷಗಳ ಪಾರಮ್ಯದ ಒಂದು ಆವರ್ತ ಮುಗಿದು 2018ರಲ್ಲಿ ಮತ್ತೆ ಇಲ್ಲಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ.
ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿದ್ದ ಈ ಕ್ಷೇತ್ರ ಬಳಿಕ ಬಿಜೆಪಿ ತೆಕ್ಕೆಗೆ ಹೋಗಿ ಮರಳಿ ಕಾಂಗ್ರೆಸ್ನ ವಶವಾಗಿದ್ದು ಈಗ ಇತಿಹಾಸ. ಜಯನಗರ ಕ್ಷೇತ್ರಕ್ಕೆ ಈ ಹೆಸರು ಬಂದಿದ್ದು ಮೈಸೂರು ಅರಸರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಎನ್ನುವುದು ದಾಖಲೆಗಳ ಉಲ್ಲೇಖ. ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿರುವ ಜಯನಗರ, ಏಷಿಯಾದಲ್ಲೇ ಅತಿ ದೊಡ್ಡ ಬಡಾವಣೆಗಳಲ್ಲಿ ಒಂದಾಗಿದೆ. ಹಾಗೂ ಶ್ರೀಮಂತರ ಬಡಾವಣೆ ಎನ್ನುವ ಹೆಗ್ಗಳಿಕೆ ಪಡೆದಿದೆ. ಈ ಕ್ಷೇತ್ರವು ಬಸವನಗುಡಿ, ಜೆಪಿ ನಗರ, ಬನಶಂಕರಿ ಹಾಗೂ ಬಿಟಿಎಂ ಬಡಾವಣೆಗಳಿಂದ ಸುತ್ತುವರೆದಿದೆ. ಸಾಂಸ್ಕೃತಿಕ ಕ್ಷೇತ್ರವಾಗಿಯೂ ಗುರುತಿಸಿಕೊಂಡಿರುವ ಜಯನಗರ, ಬಹುಸಂಖ್ಯಾತ ಕನ್ನಡಿಗರನ್ನು ಹೊಂದಿರುವ ಸ್ಥಳ.

ರಾಜಕೀಯ ಇತಿಹಾಸ
ಪಟ್ಟಾಭಿರಾಮನಗರ, ಭೈರಸಂದ್ರ, ಜಯನಗರ ಪೂರ್ವ, ಗುರಪ್ಪನಪಾಳ್ಯ, ಜೆ ಪಿ ನಗರ, ಸಾರಕ್ಕಿ ಹಾಗೂ ಶಾಕಾಂಬರಿನಗರ ಎಂಬ 6 ಬಿಬಿಎಂಪಿ ವಾರ್ಡ್ಗಳನ್ನು ಒಳಗೊಂಡಿರುವ ಕ್ಷೇತ್ರವೇ ಜಯನಗರ ವಿಧಾನಸಭಾ ಕ್ಷೇತ್ರ.
1978ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಜನತಾ ಪಕ್ಷದ ಎಂ ಚಂದ್ರಶೇಖರ್ ಕಾಂಗ್ರೆಸ್ ಪಕ್ಷದ ಸತ್ಯನಾರಾಯಣ ಅವರ ವಿರುದ್ಧ ಗೆಲುವು ದಾಖಲಿಸಿದ್ದರು. ಅಂದಿನ ಹಣಾಹಣಿಯಲ್ಲಿ ಚಂದ್ರಶೇಖರ್ 35,209 ಮತಗಳನ್ನು ಪಡೆದುಕೊಂಡರೆ, ಸತ್ಯನಾರಾಯಣ, 17,941 ವೋಟುಗಳನ್ನು ಗಳಿಸಿದ್ದರು.
1983 ಹಾಗೂ 1985ರಲ್ಲೂ ತಮ್ಮ ಗೆಲುವಿನ ಓಟ ಮುಂದುವರೆಸಿದ ಚಂದ್ರಶೇಖರ್, ಕ್ರಮವಾಗಿ ತಮ್ಮ ಎದುರಾಳಿಗಳಾಗಿದ್ದ ಕಾಂಗ್ರೆಸ್ನ ಮಲ್ಲೂರು ಆನಂದರಾವ್ ಹಾಗೂ ರಾಮಲಿಂಗಾರೆಡ್ಡಿ ವಿರುದ್ದ ಜಯ ಸಾಧಿಸಿದ್ದರು. ಮುಂದಿನ ಚುನಾವಣೆಯಲ್ಲಿ (1989) ರಾಮಲಿಂಗಾರೆಡ್ಡಿ ಕ್ಷೇತ್ರದ ಮೇಲೆ ಅಧಿಪತ್ಯ ಸ್ಥಾಪಿಸಿದರು.
1989ರಿಂದ 2008ರವರೆಗೆ ಅಂದರೆ ಸತತ 20 ವರ್ಷ ಕಾಲ ರಾಮಲಿಂಗಾರೆಡ್ಡಿ ಜಯನಗರದಲ್ಲಿ ಪಾರುಪತ್ಯ ಸ್ಥಾಪಿಸಿದ್ದರು. ಬಳಿಕ 2008ರಲ್ಲಿ ಅವರು ಬಿಟಿಎಂ ಕ್ಷೇತ್ರಕ್ಕೆ ವಲಸೆ ಹೋದ ಕಾರಣ ಈ ಕ್ಷೇತ್ರ ಬಿಜೆಪಿ ವಶವಾಯಿತು.
ಜಾತಿ ಲೆಕ್ಕಾಚಾರ
ಜಯನಗರ ಕ್ಷೇತ್ರ ಒಟ್ಟು 2,07,298 ಮತದಾರನ್ನು ಒಳಗೊಂಡಿದೆ. ಜಾತಿ ಲೆಕ್ಕಾಚಾರದಲ್ಲಿ ಈ ಮತ ಸಂಖ್ಯೆ ವರ್ಗೀಕರಣ ಮಾಡುವುದಾದರೆ, ಮುಸಲ್ಮಾನ ಸಮುದಾಯ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದೆ. ಈ ಸಮುದಾಯದಿಂದ ಸುಮಾರು 59,799 ಮತದಾರರಿದ್ದಾರೆ. ಇದರ ನಂತರ 46,500 ಒಕ್ಕಲಿಗರು, 37,000 ಬ್ರಾಹ್ಮಣರು, 34,500 ಎಸ್ಸಿ, ಎಸ್ಟಿ ಸಮುದಾಯ, 12,000 ಒಬಿಸಿ, 2,000, ಲಿಂಗಾಯತರು, ಹಾಗೂ 15,500 ಇತರೆ ಸಮುದಾಯದ ಮತದಾರರರು ಈ ಕ್ಷೇತ್ರದ ಗೆಲುವನ್ನು ನಿರ್ಧರಿಸುತ್ತಾರೆ.
ಕಳೆದ ಮೂರು ಚುನಾವಣೆಗಳ ಹಣಾಹಣಿ
2008ರಿಂದ ಸತತ ಎರಡು ಬಾರಿ ಬಿಜೆಪಿಯ ಬಿ ಎನ್ ವಿಜಯಕುಮಾರ್ ಗೆಲುವು ಸಾಧಿಸಿದ್ದರು. ಮೂರನೇ ಗೆಲುವಿನ ಸಿದ್ಧತೆಯಲ್ಲಿದ್ದ ವಿಜಯಕುಮಾರ್, ಅಕಾಲಿಕ ನಿಧನ ಹೊಂದಿದ ಕಾರಣ, ಕ್ಷೇತ್ರಕ್ಕೆ ಉಪಚುನಾವಣೆ ಎದುರಾಯಿತು.
2008ರ ಚುನಾವಣೆಯಲ್ಲಿ ಬಿಜೆಪಿಯ ವಿಜಯ ಕುಮಾರ್ 43,164 ಮತಗಳನ್ನು ಪಡೆದರೆ ಕಾಂಗ್ರೆಸ್ನ ಸುರೇಶ್ 20,570 ವೊಟುಗಳನ್ನು ಪಡೆದಿದ್ದರು. ಈ ಚುನಾವಣೆಯಲ್ಲಿ ವಿಜಯ್ಕುಮಾರ್ 22,594 ಮತಗಳ ಗೆಲುವು ಪಡೆದಿದ್ದರು. ಉಳಿದಂತೆ ಕಣದಲ್ಲಿದ್ದ ಪಕ್ಷೇತರ ಅಭ್ಯರ್ಥಿ ಕೆ ಎಸ್ ಸಮೀವುಲ್ಲಾ 11,882 ಮತಗಳನ್ನು, ಜೆಡಿಎಸ್ ನ ನಾರಾಯಣರಾಜು 10,444, ವೋಟುಗಳನ್ನು ಹಾಗೂ ಬಿಎಸ್ಪಿಯ ಡಾ ಕೆ ವೆಂಕಟೇಶ್ 788 ಮತಗಳನ್ನು ಪಡೆದುಕೊಂಡಿದ್ದರು.

2013ರ ಚುನಾವಣೆಯಲ್ಲಿ ಎರಡನೇ ಗೆಲುವು ದಾಖಲಿಸಿದ ವಿಜಯಕುಮಾರ್, 43,990 ಮತಗಳನ್ನು ಪಡೆದು ಕಾಂಗ್ರೆಸ್ನ ಎಂ ಸಿ ವೇಣುಗೋಪಾಲ್ ವಿರುದ್ಧ ಜಯ ಸಾಧಿಸಿದ್ದರು. ಆ ಚುನಾವಣೆಯಲ್ಲಿ ವೇಣುಗೋಪಾಲ್ ಗಳಿಸಿದ್ದು 31,678 ಮತಗಳನ್ನು. ಆ ಬಾರಿ ವಿಜಯಕುಮಾರ್ ಗೆಲುವಿನ ಅಂತರ 12,312 ವೋಟುಗಳು. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವಿನ ಗೆಲುವಿನ ಅಂತರದ ಆಸುಪಾಸಿನ ಮತವನ್ನೇ ಜೆಡಿಎಸ್ ಅಭ್ಯರ್ಥಿ ಕೆ ಎಸ್ ಸಮೀವುಲ್ಲಾ (12,097) ಗಳಿಸಿದ್ದು ಗಮನಾರ್ಹ.
ಇನ್ನು 2018ರ ಚುನಾವಣೆಯಲ್ಲೂ ವಿಜಯಕುಮಾರ್ ಕಣಕ್ಕಿಳಿದು ಹ್ಯಾಟ್ರಿಕ್ ಗೆಲುವಿಗೆ ಸಿದ್ದರಾಗುತ್ತಿದ್ದರು. ಚುನಾವಣಾ ಪ್ರಚಾರದಲ್ಲಿದ್ದ ಅವರಿಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಚುನಾವಣೆಯನ್ನು ಜೂನ್ 2018ಕ್ಕೆ ಮುಂದೂಡಲಾಯಿತು.
2019ಲ್ಲಿ ನಡೆದ ಉಪಚುನಾವಣೆಯಲ್ಲಿ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿದ್ದರು. ಅಂದಿನ ಉಪ ಚುನಾವಣೆಯಲ್ಲಿ ಬಿ ಎನ್ ವಿಜಯಕುಮಾರ್ ಅವರ ಸಹೋದರ ಬಿ ಎನ್ ಪ್ರಹ್ಲಾದ್ ಅವರು ಸೌಮ್ಯರೆಡ್ಡಿ ವಿರುದ್ದ ಅದೃಷ್ಟ ಪರೀಕ್ಷೆಗೆ ಮುಂದಾಗಿ, ಕೇವಲ 2,800 ಮತಗಳ ಅಂತರದ ಸೋಲನ್ನೊಪ್ಪಿಕೊಂಡಿದ್ದರು. ಅಂದಿನ ಹಣಾಹಣಿಯಲ್ಲಿ ಸೌಮ್ಯ ರೆಡ್ಡಿ, 53,411ಮತಗಳನ್ನು ಪಡೆದಿದ್ದರೆ, ಎರುದಾಳಿ ಪ್ರಹ್ಲಾದ್ 51,568 ವೋಟುಗಳನ್ನುಗಳಿಸಿದ್ದರು.