ಮಡಿಕೇರಿ ವಿಧಾನಸಭಾ ಕ್ಷೇತ್ರ

ಹಿಂದುತ್ವದ ಅಲೆಯ ಮೇಲೆ ತೇಲುತ್ತಿರುವ ಮಡಿಕೇರಿ
ರಾಜ್ಯಕ್ಕೆ 9ನೇ ಮುಖ್ಯಮಂತ್ರಿ ಕೊಟ್ಟ (ಆರ್ ಗುಂಡೂರಾವ್) ಹೆಗ್ಗಳಿಕೆ ಸೋಮವಾರಪೇಟೆ ಕ್ಷೇತ್ರದ್ದು. 2008ರ ಕ್ಷೇತ್ರ ಪುನರ್ ವಿಂಗಡಣೆಯ ವೇಳೆ ಇದು ಮಡಿಕೇರಿ ಕ್ಷೇತ್ರವಾಯಿತು. ಒಕ್ಕಲಿಗ ಮತ್ತು ಲಿಂಗಾಯತ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ಕೊಡವ ಸಮುದಾಯದ ಶಾಸಕ ಅಪ್ಪಚ್ಚು ರಂಜನ್ ನಾಲ್ಕು ಬಾರಿ ಶಾಸಕರಾಗಿದ್ದಾರೆ.
ಭಾರತ ಒಕ್ಕೂಟಕ್ಕೆ ಸೇರುವ ಮುನ್ನ ಸ್ವತಂತ್ರ ರಾಜ್ಯವಾಗಿ “ಸೀ ಸ್ಟೇಟ್” ಎಂತಲೇ ಕರೆಯಿಸಿಕೊಂಡಿದ್ದ ಪ್ರದೇಶ ಕೊಡಗು. ಬಳಿಕ 1956ರಲ್ಲಿ ರಚನೆಯಾದ ಕರ್ನಾಟಕ ರಾಜ್ಯದ ದಕ್ಷಿಣ ಕಾಶ್ಮೀರ ಎಂದು ಕರೆಯಿಸಿಕೊಂಡ ಸುಂದರ ಜಿಲ್ಲೆ.
ಕೊಡಗನ್ನು ಆಳಿದ ಲಿಂಗರಾಜ ಮಹಾರಾಜ ಆಳ್ವಿಕೆಯಲ್ಲಿ ಮಡಿಕೇರಿ ಜಿಲ್ಲೆಯ ರಾಜಧಾನಿಯಾಗಿತ್ತು. 4,102 ಚದರ ಕಿಲೋಮೀಟರ್ ಹರಡಿಕೊಂಡು ಭೌಗೋಳಿಕವಾಗಿ ಪುಟ್ಟ ಜಿಲ್ಲೆ ಎಂದೆನಿಸಿಕೊಂಡಿದ್ದ ಈ ಜಿಲ್ಲೆಯನ್ನು ಆಡಳಿತಾತ್ಮಕ ಲೆಕ್ಕಾಚಾರದಲ್ಲಿ ಮೂರು ತಾಲೂಕುಗಳನ್ನಾಗಿ ವಿಭಾಗಿಸಲಾಗಿದೆ. ಅದರಂತೆ ಈ ಜಿಲ್ಲೆ ಸೋಮವಾರ ಪೇಟೆ, ಮಡಿಕೇರಿ ಹಾಗೂ ವಿರಾಜಪೇಟೆ ಎಂಬ ಮೂರು ತಾಲೂಕುಗಳನ್ನು ಹೊಂದಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರ
1956ರಲ್ಲಿ ಮೊದಲ ಚುನಾವಣೆ ಸಂದರ್ಭದಲ್ಲಿ ಎರಡು ಮತ ಕ್ಷೇತ್ರಗಳನ್ನು ಹೊಂದಿದ್ದ ಕೊಡಗು ಜಿಲ್ಲೆ ಬಳಿಕ ಮೂರು ವಿಧಾನಸಭಾ ಕ್ಷೇತ್ರ ಹೊಂದಿತ್ತು. ಮತ್ತೆ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸೀಮಿತಗೊಂಡಿದೆ. 2008ರವರೆಗೂ ಜಿಲ್ಲೆಯ ಮೂರು ತಾಲೂಕುಗಳ ಮೂರು ವಿಧಾನಸಭಾ ಕ್ಷೇತ್ರ ಇದ್ದವು. 2008ರಲ್ಲಾದ ಕ್ಷೇತ್ರ ಮರು ವಿಂಗಡನೆ ಬಳಿಕ ಸೋಮವಾರ ಪೇಟೆ ವಿಧಾನಸಭಾ ಕ್ಷೇತ್ರ, ನಂತರ ಮಡಿಕೇರಿ ವಿಧಾನಸಭಾ ಕ್ಷೇತ್ರವಾಗಿ ಬದಲಾಯಿತು. ಹೀಗಾಗಿ ಸದ್ಯಕ್ಕೆ ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಿವೆ.

ಒಕ್ಕಲಿಗ ಮತ್ತು ಲಿಂಗಾಯತ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ಕೊಡವ ಸಮುದಾಯದ ಶಾಸಕ ಅಪ್ಪಚ್ಚು ರಂಜನ್, ನಾಲ್ಕು ಬಾರಿ ಶಾಸಕರಾಗಿರುವುದೇ ಇಲ್ಲಿನ ವಿಶೇಷ.
ರಾಜ್ಯಕ್ಕೆ 9ನೇ ಮುಖ್ಯಮಂತ್ರಿ ಕೊಟ್ಟ ಹೆಗ್ಗಳಿಕೆ ಮಡಿಕೇರಿ ಕ್ಷೇತ್ರದ್ದು. ಅದುವೇ ಅಂದಿನ ಸೋಮವಾರ ಪೇಟೆ ಕ್ಷೇತ್ರ. ಅತಿ ಚಿಕ್ಕ ವಯಸ್ಸಿನ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದಿದ್ದ ದಿವಂಗತ ಆರ್ ಗುಂಡೂರಾವ್ 1983ರಲ್ಲಿ ಈ ಕ್ಷೇತ್ರ ಪ್ರತಿನಿಧಿಸಿ ಮುಖ್ಯಮಂತ್ರಿಗಳಾಗಿದ್ದರು. ಮಾಜಿ ಅರಣ್ಯ ಸಚಿವ ಬಿ ಎ ಜೀವಿಜಯ ಕೂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸದಸ್ಯರಾಗಿ ಇಲ್ಲಿಂದಲೇ ಆಯ್ಕೆಯಾಗಿದ್ದರು ಎಂಬುದು ವಿಶೇಷ.
ಗುಂಡೂರಾಯರಿಗೆ ಸೋಲಿನ ರುಚಿ ತೋರಿಸಿದ್ದ ಬಿ ಎ ಜೀವಿಜಯ
ಬಿ ಎ ಜೀವಿಜಯ ಹೊರತಾಗಿ ಅಂದಿನ ಸೋಮವಾರಪೇಟೆ ಹಾಗೂ ಇಂದಿನ ಮಡಿಕೇರಿ ವಿಧಾನಸಭಾ ಕ್ಷೇತ್ರವನ್ನು ಊಹಿಸಿಕೊಳ್ಳುವುದೇ ಅಸಾಧ್ಯ.
1972 ಹಾಗೂ 78ರ ಚುನಾವಣೆವರೆಗೂ ಈ ಕ್ಷೇತ್ರದ ಹಿಡಿತ ಹೊಂದಿದ್ದವರು ದಿವಂಗತ ಮುಖ್ಯಮಂತ್ರಿ ಆರ್ ಗುಂಡೂರಾವ್. ಮೂರನೇ ಬಾರಿಗೆ ಇಲ್ಲಿಂದಲೇ ಆಯ್ಕೆ ಬಯಸಿ 1983ರಲ್ಲೂ ಕಣಕ್ಕಿಳಿದಿದ್ದರು. ಈ ಚುನಾವಣೆಯಲ್ಲಿ ಅವರಿಗೆ ಎದುರಾಳಿಯಾಗಿದ್ದವರು ಜೀವಿಜಯ.
ಜನತಾ ಪಕ್ಷದ ಸದಸ್ಯರಾಗಿ ಸ್ಪರ್ಧಿಸಿ, ಮೊದಲ ಚುನಾವಣೆಯಲ್ಲೇ ಅಂದಿನ ಹಾಲಿ ಸಿಎಂಗೆ ಸೋಲಿನ ರುಚಿ ತೋರಿಸಿದ್ದೇ ಜೀವಿಜಯ ಸಾಧನೆ.
ಆ ಸಾಧನೆ ಹಿನ್ನೆಲೆಯಲ್ಲಿ ಅಂದಿನ ಸರ್ಕಾರದಲ್ಲಿ ಜೀವಿಜಯ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನಂತರ 1985ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಜಯಗಳಿಸಿದ ಜೀವಿಜಯ, ಬದಲಾದ ರಾಜಕೀಯ ವಿದ್ಯಮಾನಗಳ ಕಾರಣದಿಂದ ಕಾಂಗ್ರೆಸ್‌ನ ಕೈ ಹಿಡಿದರು. 2004ರಲ್ಲಿ ಶಾಸಕರಾಗುವರೆಗೆ ರಾಜಕೀಯವಾಗಿ ಜೀವಿಜಯ ತೆರೆಮರೆಯಲ್ಲಿದ್ದರು. ಈ ನಡುವಲ್ಲೊಮ್ಮೆ ಸಂಸದ ಸ್ಥಾನಕ್ಕೂ ಉಮೇದುವಾರಿಕೆ ಸಲ್ಲಿಸಿ ಕೈ ಸುಟ್ಟುಕೊಂಡಿದ್ದರು.

ರಾಜಕೀಯ ಹಣಾಹಣಿ ಇತಿಹಾಸ
ಇಲ್ಲಿನ ರಾಜಕೀಯ ಇತಿಹಾಸದ ಗಮನಿಸಿದರೆ ಜೆಡಿಎಸ್‌ನ ನಾಯಕ ಹಾಗೂ ಮಾಜಿ ಸಚಿವ ಎಂ ಸಿ ನಾಣಯ್ಯ 1978ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಜನತಾ ಪಕ್ಷದಿಂದ ಕಣಕ್ಕಿಳಿದಿದ್ದ ಎ ಕೆ ಸುಬ್ಬಯ್ಯರನ್ನು ಸೋಲಿಸಿದ್ದರು. 1980ರಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಹಿಡಿತ ಆರಂಭವಾಯಿತು. 1983ರಲ್ಲಿ ಚುನಾವಣೆಯಲ್ಲಿ ಎಂ.ಸಿ ನಾಣಯ್ಯಗೆ ಕಾಂಗ್ರೆಸ್ ಟಿಕೆಟ್ ಸಿಗದೆ, ಮುಂದೆ ಅವರು ವಿಧಾನ ಪರಿಷತ್ ಸದಸ್ಯರಾದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಎಂ.ಎಂ ನಾಣಯ್ಯ ಗೆಲುವು ಕಂಡ ಈ ವರ್ಷದಲ್ಲಿ ಬಿಜೆಪಿ ಎರಡನೇ ಸ್ಥಾನ ಪಡೆದುಕೊಂಡಿತ್ತು. ಅಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಎಂ.ಎಂ ಚೆಂಗಪ್ಪರನ್ನು ನಾಣಯ್ಯ 5 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.
1985ರಲ್ಲಿ ಕಾಂಗ್ರೆಸ್‌ನ ಡಿ.ಎ. ಚಿನ್ನಪ್ಪ ಗೆಲುವು ದಾಖಲಿಸಿ ಇದೇ ಫಲಿತಾಂಶವನ್ನು 1989ರಲ್ಲಿಯೂ ಪುನರಾವರ್ತಿಸಿದ್ದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುಂಡಿತ್ತು. ಬಹು ನಿರೀಕ್ಷೆಯಂತೆ 1994ರಲ್ಲಿ ಕೊಡಗಿನಲ್ಲಿ ಬಿಜೆಪಿ ತನ್ನ ಖಾತೆ ತೆರೆಯಿತು. ಆ ಚುನಾವಣೆಯಲ್ಲಿ ಇಲ್ಲಿನ ಮೂರೂ ಕ್ಷೇತ್ರಗಳೂ ಕಮಲ ತೆಕ್ಕೆಗೆ ಜಾರಿದ್ದವು. ಮಡಿಕೇರಿಯಲ್ಲಿ ದಂಬೆಕೋಡಿ ಸುಬ್ಬಯ್ಯ 11 ಸಾವಿರ ಮತಗಳಿಂದ ಜನತಾದಳದ ಟಿ ಪಿ ರಮೇಶ್ ಅವರನ್ನು ಸೋಲಿಸಿದರು.
1999ರಲ್ಲಿ ಬಿಜೆಪಿ ಟಿಕೆಟ್ ವಂಚಿತ ದಂಬೆಕೋಡಿ ಸುಬ್ಬಯ್ಯ, ಕಾಂಗ್ರೆಸ್ ನ ಎಂ.ಎಂ ನಾಣಯ್ಯ ಎದುರು 5 ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದರು. 2004ರಲ್ಲಿ ಇಲ್ಲಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ ಜಿ ಬೋಪಯ್ಯ ಕ್ಷೇತ್ರವನ್ನು ಮತ್ತೆ ಕೇಸರಿ ಪಕ್ಷದ ತೆಕ್ಕೆಗೆ ತಂದರು. ಈ ಬಾರಿ ಜೆಡಿಎಸ್ ಟಿಕೆಟ್ ನಿಂದ ಸ್ಪರ್ಧಿಸಿದರೂ ದಂಬೆಕೋಡಿ ಸುಬ್ಬಯ್ಯ ಸೋಲನುಭವಿಸಿದರು.
2008 ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಸೋಮವಾರಪೇಟೆಯಲ್ಲಿ ಸ್ಪರ್ಧಿಸುತ್ತಿದ್ದ ಕಾಂಗ್ರೆಸ್‌ನ ಬಿಎ ಜೀವಿಜಯ ಹಾಗೂ ಅಪ್ಪಚ್ಚು ರಂಜನ್ ಮಡಿಕೇರಿ ಕ್ಷೇತ್ರದ ಸ್ಪರ್ಧಾ ಕಲಿಗಳಾದರು. ಆ ಸಾಲಿನ ಚುನಾವಣೆಯಲ್ಲಿ, ಬಿಜೆಪಿಯ ಅಪ್ಪಚ್ಚು ರಂಜನ್ ಕಾಂಗ್ರೆಸ್‌ನ ಜೀವಿಜಯರನ್ನು ಏಳು ಸಾವಿರ ಮತಗಳ ಅಂತರದಿಂದ ಸೋಲಿಸಿ ಮೂರನೇ ಗೆಲವು ದಾಖಲಿಸಿದರು. 2013ರಲ್ಲೂ ಇದೇ ಫಲಿತಾಂಶ ಪುನರಾವರ್ತನೆಯಾಯಿತು. ಈ ಚುನಾವಣೆಯಲ್ಲಿ 4 ಸಾವಿರ ಮತಗಳಿಂದ ಸೋತ ಜೀವಿಜಯ ಜೆಡಿಎಸ್‌ನಿಂದ ಅಭ್ಯರ್ಥಿಯಾಗಿದ್ದರು.
2018ರ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ವರವಾಗಿದ್ದು ಡಿವೈಎಸ್‌ಪಿ ಎಂ ಕೆ ಗಣಪತಿ ಪ್ರಕರಣ ಮತ್ತು ಟಿಪ್ಪು ಜಯಂತಿ ಆಚರಣೆ ವಿಚಾರಗಳು. ಹಿಂದುತ್ವದ ಅಜೆಂಡಾದ ಮೇಲೆ ಚುನಾವಣೆ ಎದುರಿಸಿದ ಅಪ್ಪಚ್ಚು ರಂಜನ್ ನಾಲ್ಕನೇ ಬಾರಿಗೆ ಶಾಸಕರಾದರು.
ಈ ಚುನಾವಣೆಯಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್ 70,631 ಮತ ಪಡೆದು, ಜೆಡಿಎಸ್‌ನ ಜೀವಿಜಯ ಅವರನ್ನು 16,015 ಮತಗಳಿಂದ ಸೋಲಿಸಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ ಪಿ ಚಂದ್ರಕಲಾ 38,219 ಮತ ಪಡೆದುಕೊಂಡಿದ್ದರು.
19 ವರ್ಷಗಳ ಹಣಾಹಣಿ
ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ಹಾಗೂ ಕಾಂಗ್ರೆಸ್‌ನ ಜೀವಿಜಯ ನಡುವಿನ ಚುನಾವಣಾ ಕದನಕ್ಕೀಗ 19 ವರ್ಷಗಳ ಸುದೀರ್ಘ ಇತಿಹಾಸ. ಈ ಅವಧಿಯಲ್ಲಿ ಜೀವಿಜಯ ಹಲವು ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರೆ, ಅಪ್ಪಚ್ಚು ರಂಜನ್ ಮಾತ್ರ ಬಿಜೆಪಿ ಪಕ್ಷದಿಂದಲೇ ಕಣಕ್ಕಿಳಿದಿದ್ದಾರೆ. ಈ ಬಾರಿ ಇವರೇ ಕಣಕ್ಕಿಳಿದರೆ, ಇದು ಅವರ ಅದೃಷ್ಟ ಪರೀಕ್ಷೆಯ 5ನೇ ಚುನಾವಣೆಯಾಗಲಿದೆ.
1957ರ ಅವಧಿಯಿಂದ 1983ರವರೆಗೂ ಕಾಂಗ್ರೆಸ್ ಪಾರಮ್ಯ ಹೊಂದಿದ್ದ ಕ್ಷೇತ್ರವನ್ನು ಕೈ ತೆಕ್ಕೆಯಿಂದ ಬಿಡಿಸಿದವರು ಜೀವಿಜಯ. ಜನತಾ ಪಕ್ಷದ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದ ಅವರು ನಂತರ ಪಕ್ಷ ಬದಲಾಯಿಸಿ ಕಾಂಗ್ರೆಸ್ ಸೇರಿದ ಪರಿಣಾಮ, ಕ್ಷೇತ್ರದ ಹಿಡಿತ ಬಿಜೆಪಿ ಪಾಲಾಯಿತು. ಅಲ್ಲಿಂದ ಪ್ರಸ್ತುತ ಚುನಾವಣೆಯವರೆಗೂ ಈ ಕ್ಷೇತ್ರದಲ್ಲಿ ಕಮಲ ಪಕ್ಷದ್ದೇ ದರ್ಬಾರು. 8 ಬಾರಿ ಶಾಸಕ ಸ್ಥಾನಕ್ಕೆ ಎರಡು ಬಾರಿ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿದ್ದವರು ಜೀವಿಜಯ.
ಜಾತಿ ಲೆಕ್ಕಾಚಾರ
ಒಕ್ಕಲಿಗ ಸಮುದಾಯದ ಜೀವಿಜಯ ಹಾಗೂ ಕೊಡವ ಸಮುದಾಯದ ರಂಜನ್ ಇಬ್ಬರ ಹಿಂದೆ ಅವರ ಸಮುದಾಯಗಳಿವೆ. ಈ ಕ್ಷೇತ್ರದಲ್ಲಿ ಒಕ್ಕಲಿಗ, ಲಿಂಗಾಯತ ಹಾಗೂ ಅಲ್ಪ ಪ್ರಮಾಣದ ದಲಿತರು ಮತ್ತು ಅಲ್ಪ ಸಂಖ್ಯಾತ ಸಮುದಾಯದ ಮತದಾರರು ಇದ್ದಾರೆ.