ಚಾಮರಾಜ ವಿಧಾನಸಭಾ ಕ್ಷೇತ್ರ

ಸತತ ಗೆಲುವು ಕಂಡ ಅಭ್ಯರ್ಥಿಗಳನ್ನು ಕೊಟ್ಟರೂ ಮಂತ್ರಿ ಭಾಗ್ಯ ಕಾಣದ ಕ್ಷೇತ್ರ

ಮೈಸೂರು ರಾಜಮನೆತನದ ಪ್ರಮುಖರ ಹೆಸರುಗಳಿಂದ ಕರೆಯಲ್ಪಡುವ ಕ್ಷೇತ್ರಗಳಲ್ಲಿ ಇದೂ ಒಂದು. ಈ ಕ್ಷೇತ್ರ ರಾಜ್ಯದ ಮೂರು ಪ್ರಮುಖ ಪಕ್ಷಗಳ ಉಮೇದುವಾರರಿಗೂ ಜಯದ ಮಾಲೆ ತೊಡಿಸಿದೆ. ಸುಶಿಕ್ಷಿತರ ಈ ಕ್ಷೇತ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮೊದಲಿನಿಂದಲೂ ಒಕ್ಕಲಿಗರಿಗೇ ಟಿಕೆಟ್‌ ನೀಡುತ್ತ ಬಂದಿವೆ; ಇಲ್ಲಿ ಗೆದ್ದವರೆಲ್ಲರೂ ಒಕ್ಕಲಿಗರೇ ಆಗಿದ್ದಾರೆ.

 

ಪಾರಂಪರಿಕ ಮೈಸೂರು ನಗರದಲ್ಲಿ ರಾಜಮನೆತನದ ಪ್ರಮುಖರ ಹೆಸರುಗಳಿಂದ ಕರೆಯಲ್ಪಡುವ ಮತ್ತೊಂದು ವಿಧಾನಸಭಾ ಕ್ಷೇತ್ರ ಚಾಮರಾಜ. ನಗರದ ಹಳೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಇದೂ ಒಂದು. ಸುಶಿಕ್ಷಿತರ ಕ್ಷೇತ್ರ ಎಂದೇ ಕರೆಯಿಸಿಕೊಳ್ಳುವ ಚಾಮರಾಜ ಕ್ಷೇತ್ರ, ನಗರದ ಮುಕುಟಪ್ರಾಯವಾಗಿರುವ ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಸಿಎಫ್‌ಟಿಆರ್‌ಐ, ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ, ರೈಲ್ವೆ ನಿಲ್ದಾಣ, ಕೆ ಆರ್ ಆಸ್ಪತ್ರೆ, ಮಹಾರಾಣಿ, ಮಹಾರಾಜ, ಯುವರಾಜ ಕಾಲೇಜುಗಳನ್ನು ತನ್ನ ವ್ಯಾಪ್ತಿಯೊಳಗೆ ಹೊಂದಿದೆ. ಈ ಕ್ಷೇತ್ರ ರಾಜ್ಯದ ಮೂರು ಪ್ರಮುಖ ಪಕ್ಷಗಳ ಉಮೇದುವಾರರಿಗೂ ಜಯದ ಮಾಲೆ ತೊಡಿಸಿದೆ.

ರಾಜಕೀಯ ಇತಿಹಾಸ 

ಕ್ಷೇತ್ರವು ಕಾಂಗ್ರೆಸ್‌, ಜನತಾ ಪಕ್ಷ, ಬಿಜೆಪಿಗೆ ಚುನಾವಣೆಗಳಲ್ಲಿ ಒಲಿದಿದೆ. ಜನತಾ ಪರಿವಾರದಲ್ಲಿ ಒಡಕುಂಟಾದಾಗ ಬೇರೆ ಪಕ್ಷಗಳಿಗೆ ಒಲಿದಿರುವ ಈ ಕ್ಷೇತ್ರದಲ್ಲಿ 1994ರಿಂದ ಸತತ ನಾಲ್ಕು ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿಯ ಎಚ್‌ ಎಸ್‌ ಶಂಕರಲಿಂಗೇಗೌಡರನ್ನು ಗೆಲ್ಲಿಸುವ ಮೂಲಕ ಕಮಲ ಅರಳಿತ್ತು. ಚಾಮರಾಜ ಕ್ಷೇತ್ರದಲ್ಲಿ ಒಕ್ಕಲಿಗರು ಅಧಿಕ ಸಂಖ್ಯೆಯಲ್ಲಿದ್ದಾರೆ.  ಸ್ವಾತಂತ್ರ್ಯದ ನಂತರ ಮೈಸೂರು ನಗರ ಹಾಗೂ ಮೈಸೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಹಂಚಿಹೋಗಿದ್ದ ಪ್ರದೇಶಗಳನ್ನು ಒಳಗೊಂಡಂತೆ 1978ರಲ್ಲಿ ಉದಯವಾದ ಕ್ಷೇತ್ರ ಚಾಮರಾಜ. ಹೊಸ ಕ್ಷೇತ್ರ ರಚನೆಯಾದಾಗಿನಿಂದ ಇಲ್ಲಿಯವರೆಗೆ ಎಂಟು ವಿಧಾನಸಭಾ ಚುನಾವಣೆಗಳು ನಡೆದಿದ್ದು,ಅದರಲ್ಲಿ ಮೂರು ಬಾರಿ ಜನತಾ ಪರಿವಾರದ ಅಭ್ಯರ್ಥಿಗಳು ಜಯಗಳಿಸಿದರೆ, ಐದು ಬಾರಿ ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. 1989 ಹಾಗೂ 2013ರಲ್ಲಿ ಅವಧಿಯಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ತುರ್ತು ಪರಿಸ್ಥಿತಿಯ ನಂತರ 1978ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷ (ಜೆಎನ್‌ಪಿ)ಯಿಂದ ಕೆ ಪುಟ್ಟಸ್ವಾಮಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದರು. ಭಾರತ ರಾಷ್ಟ್ರೀಯ ಕಾಂಗ್ರೆಸ್(ಐ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ ಎನ್ ಕೆಂಗೇಗೌಡ ವಿರುದ್ಧ 6421 ಮತಗಳ ಅಂತರದಿಂದ ಅವರು ಜಯಗಳಿಸಿದ್ದರು. ಅಂದಿನ ಚುನಾವಣೆಯಲ್ಲಿ ಕೆ ಪುಟ್ಟಸ್ವಾಮಿ 24,524 ಮತ ಗಳಿಸಿದರೆ, ಕೆಂಗೇಗೌಡರು 18,103 ಮತಗಳನ್ನು ಪಡೆದಿದ್ದರು.

ರಾಷ್ಟ್ರ ರಾಜಕಾರಣದಲ್ಲಾದ ಭಾರಿ ಬದಲಾವಣೆ ಬಳಿಕ 1,983ರಲ್ಲಿ ನಡೆದ ಚುನಾವಣೆಯಲ್ಲಿ ಎಚ್ ಕೆಂಪೇಗೌಡ ಜನತಾ ಪಕ್ಷದ ಉಮೇದುವಾರರಾಗಿ 23,967 ಮತಗಳನ್ನು ಗಳಿಸಿ, ಬಿಜೆಪಿಯ ಪುಟ್ಟೇಗೌಡ ವಿರುದ್ಧ 12,035 ಮತಗಳ ಅಂತರದಿಂದ ಜಯಗಳಿಸಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿ ಎನ್ ಕೆಂಗೇಗೌಡರು ಈ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. 

1985ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಕೆ ಕೆಂಪೀರೆಗೌಡರು 32,077 ಮತ ಗಳಿಸಿ ಸತತ ಮೂರನೇ ಬಾರಿಗೆ ಕ್ಷೇತ್ರವನ್ನು ಜನತಾ ಪರಿವಾರದ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 

1989ರಲ್ಲಿ ಜನತಾ ಪರಿವಾರದಲ್ಲಿನ ಆಂತರಿಕ ಕದನದಿಂದ ಮೊದಲ ಬಾರಿಗೆ ಈ ಕ್ಷೇತ್ರ ಕಾಂಗ್ರೆಸ್ ಪಾಲಾಯಿತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ಹರ್ಷಕುಮಾರ್‌ ಗೌಡ 31,514 ಮತ ಪಡೆದು ತಮ್ಮ ಸಮೀಪ ಪ್ರತಿಸ್ಪರ್ಧಿ ಜನತಾ ದಳದ ಸಿ.ಬಸವೇಗೌಡ ವಿರುದ್ಧ 11106 ಮತಗಳ ಅಂತರದ ಗೆಲುವು ದಾಖಲಿಸಿ ವಿಧಾನಸೌಧದ ಮೆಟ್ಟಿಲೇರಿದರು.

1994ರಲ್ಲಿ ಕ್ಷೇತ್ರದಲ್ಲಿ ಬೀಸಿದ ಹೊಸಗಾಳಿ ಪರಿಣಾಮ ಮೊದಲ ಬಾರಿಗೆ ಚಾಮರಾಜದಲ್ಲಿ ಕಮಲ ಅರಳಿತು. ಜಾತ್ಯತೀತ ಜನತಾ ದಳ ತೊರೆದು ಬಿಜೆಪಿ ಸೇರಿದ್ದ ಮಾಜಿ ಮಹಾಪೌರರಾಗಿದ್ದ ಎಚ್ ಎಸ್ ಶಂಕರಲಿಂಗೇಗೌಡ ಮೂಲಕ ಬಿಜೆಪಿ ಕ್ಷೇತ್ರದಲ್ಲಿ ಮೊದಲ ಖಾತೆ ತೆರೆಯಿತು. ಇಲ್ಲಿಂದ ಆರಂಭಗೊಂಡು 2013ರ ವರೆಗೆ ಸತತ 4 ಬಾರಿ ಶಂಕರಲಿಂಗೇಗೌಡರೇ ಈ ಕ್ಷೇತ್ರದ ಪ್ರತಿನಿಧಿಯಾಗಿದ್ದರು. ಸತತ ಆಯ್ಕೆ ಕಂಡ ಕ್ಷೇತ್ರದ ಅಭ್ಯರ್ಥಿಯಾದರೂ ಶಂಕರಲಿಂಗೇಗೌಡರಿಗೆ ಒಮ್ಮೆಯೂ ಮಂತ್ರಿಗಿರಿ ಭಾಗ್ಯ ದೊರಕಲಿಲ್ಲ.

ಬಿಜೆಪಿ ಭದ್ರಕೋಟೆಯಾಗಿದ್ದ ಕ್ಷೇತ್ರ

1994 ರ ನಂತರ ಚಾಮರಾಜ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಎಚ್ ಎಸ್ ಶಂಕರಲಿಂಗೇಗೌಡ ಸತತವಾಗಿ ನಾಲ್ಕು ಬಾರಿ ಆಯ್ಕೆಯಾಗಿ ರಾಜ್ಯದ ಗಮನ ಸೆಳೆದಿದ್ದರು. 2013ರ ಚುನಾವಣೆ ವೇಳೆ ರಾಜಕೀಯ ಮೇಲಾಟದಿಂದ ಶಂಕರಲಿಂಗೇಗೌಡ ಬಿಜೆಪಿ ತೊರೆದು ಜೆಡಿಎಸ್‌ ಸೇರಿದರು. ಈ ಬೆಳವಣಿಗೆ ಕ್ಷೇತ್ರದಲ್ಲಿ ಸೊರಗಿ ನಿಂತಿದ್ದ ಕಾಂಗ್ರೆಸ್‌ ಪಾಲಿಗೆ ವರವಾಗಿ ಬದಲಾಯ್ತು. 25 ವರ್ಷಗಳಿಂದ ಕೈ ಜಾರಿದ್ದ ಕ್ಷೇತ್ರವನ್ನು ಮಾಜಿ ಮೇಯರ್ ವಾಸು ಮೂಲಕ ಮರಳಿ ಪಡೆದ ಕಾಂಗ್ರೆಸ್‌ ಮತ್ತೆ ಹೊಸ ಭರವಸೆಯೊಂದಿಗೆ ಕ್ಷೇತ್ರಕ್ಕೆ ಹಿಂದಿರುಗಿತು.  

ಈ ಕ್ಷೇತ್ರದಿಂದ ಗೆದ್ದ ಅಭ್ಯರ್ಥಿಗಳು 

1978ರಲ್ಲಿ ಜನತಾಪಕ್ಷ ಕೆ.ಪುಟ್ಟಸ್ವಾಮಿ (24,524 ಮತಗಳು), 1983ರಲ್ಲಿ ಜನತಾ ಪಕ್ಷದ ಎಚ್ ಕೆಂಪೇಗೌಡ (23,967 ಮತಗಳು), 1985ರಲ್ಲಿ ಜನತಾಪಕ್ಷದ ಕೆ ಕೆಂಪೀರೇಗೌಡ (32,077ಮತಗಳು), 1989ರಲ್ಲಿ ಕಾಂಗ್ರೆಸ್‌ನ ಹರ್ಷಕುಮಾರ್‌ಗೌಡ (31,514 ಮತಗಳು), 1994ರಲ್ಲಿ ಬಿಜೆಪಿಯ ಶಂಕರಲಿಂಗೇಗೌಡ (32,620 ಮತಗಳು), 1999ರಲ್ಲಿ ಬಿಜೆಪಿಯ ಶಂಕರಲಿಂಗೇಗೌಡ (48,733ಮತಗಳು), 2004ರಲ್ಲಿ ಬಿಜೆಪಿಯ ಶಂಕರಲಿಂಗೇಗೌಡ (37,906ಮತಗಳು), 2008ರಲ್ಲಿ ಬಿಜೆಪಿಯ ಶಂಕರಲಿಂಗೇಗೌಡ (44,243ಮತಗಳು), 2013ರಲ್ಲಿ ಕಾಂಗ್ರೆಸ್‌ನ ವಾಸು (41,930ಮತಗಳು) ಹಾಗೂ 2018ರಲ್ಲಿ ಬಿಜೆಪಿಯ ಎಲ್ ನಾಗೇಂದ್ರ (51,683ಮತಗಳು)ಗಳನ್ನು ಪಡೆದು ಜಯಶಾಲಿಗಳಾಗಿದ್ದರು.

ಮತದಾರರ ಲೆಕ್ಕಾಚಾರ

 ಚಾಮರಾಜ ಕ್ಷೇತ್ರದಲ್ಲಿ ಒಟ್ಟು 2,28,508 ಮತದಾರರಿದ್ದು, ಈ ಪೈಕಿ 1,14,639 ಪುರುಷರು ಹಾಗೂ 1,13,820 ಮಹಿಳೆಯರು ಇದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಇವರನ್ನು ವರ್ಗೀಕರಿಸುವುದಾದರೆ, ಬ್ರಾಹ್ಮಣರು, ವೀರಶೈವ-ಲಿಂಗಾಯತರು, ಕುರುಬರು, ಮುಸ್ಲಿಮರು, ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಶಿಕ್ಷಿತರ ಈ ಕ್ಷೇತ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮೊದಲಿನಿಂದಲೂ ಒಕ್ಕಲಿಗರಿಗೇ ಟಿಕೆಟ್‌ ನೀಡುತ್ತ ಬಂದಿವೆ. ಹಾಗೆಯೇ ಇಲ್ಲಿ ಗೆದ್ದವರೆಲ್ಲರೂ ಒಕ್ಕಲಿಗರೇ ಆಗಿದ್ದಾರೆ. 

ಕಳೆದ ಮೂರು ಚುನಾವಣೆಗಳ ಹಣಾಹಣಿ 

2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರ ಬಿಜೆಪಿಯ ಪಾಲಾಯಿತು. ಈ ಚುನಾವಣೆಯಲ್ಲಿ ಕಮಲ ಪಕ್ಷದ ಎಲ್ ನಾಗೇಂದ್ರ ಅವರು 51,683 ಮತಗಳನ್ನು ಗಳಿಸಿದ್ದರು. ಈ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದ ಕಾಂಗ್ರೆಸ್‌ನ ವಾಸು 36,747ಮತಗಳನ್ನು ಪಡೆದು 14,936ಮತಗಳ ಅಂತರದಲ್ಲಿ ಸೋತಿದ್ದರು. ಮೂರನೇ ಸ್ಥಾನ ಪಡೆದಿದ್ದ ಮಾಜಿ ಪ್ರಧಾನಿ ದೇವೆಗೌಡರ ದೂರದ ಸಂಬಂಧಿ ಜೆಡಿಎಸ್‌ನ ಕೆ ಎಸ್ ರಂಗಪ್ಪ 27,284 ವೋಟುಗಳನ್ನು ಪಡೆದರೆ, ಪಕ್ಷೇತರ ಅಭ್ಯರ್ಥಿ ಕೆ ಹರೀಶ್ ಗೌಡ 21,282 ಮತಗಳನ್ನು ಗಳಿಸಿ ನಾಲ್ಕನೇ ಸ್ಥಾನಕ್ಕೆ ದೂಡಲ್ಪಟ್ಟರು. ಇದೇ ಚುನಾವಣೆಯಲ್ಲಿ 1,561 ನೋಟಾ ಮತಗಳು ಚಲಾವಣೆಗೊಂಡಿದ್ದವು.

2013ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರ ಕಾಂಗ್ರೆಸ್‌ ತೆಕ್ಕೆ ಸೇರಿಕೊಂಡಿತು. ಕಾಂಗ್ರೆಸ್ ಪಕ್ಷದ ವಾಸು 41,930 ಮತಗಳನ್ನು ಪಡೆದು ಜಯಗಳಿಸಿದ್ದರು.ವಾಸು ‌ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್‌ನ ಎಚ್ ಎಸ್ ಶಂಕರಲಿಂಗೇಗೌಡ 29,015 ಮತಗಳನ್ನಷ್ಟೇ ಪಡೆದುಕೊಂಡಿದ್ದರು. ಈ ಚುನಾವಣೆಯಲ್ಲಿನ ಗೆಲುವಿನ ಅಂತರ 12,915 ಮತಗಳದ್ದಾಗಿತ್ತು. ಉಳಿದಂತೆ ಕಣದಲ್ಲಿದ್ದ ಬಿಜೆಪಿಯ ನಾಗೇಂದ್ರ 26,168 ಮತಗಳನ್ನು ಪಡೆದುಕೊಂಡಿದ್ದರೆ, ಎಸ್‌ಡಿಪಿಐನ ಶಬ್ಬೀರ್ ಮೊಹಮ್ಮದ್ ಮುಸ್ತಫಾ 4,601 ಹಾಗೂ ಕೆಜೆಪಿಯ ಅರುಣ ಗೌಡ ಎಂ 4,399 ವೋಟುಗಳನ್ನು ಗಳಿಸಿದ್ದರು.

ಇನ್ನು 2008ರ ಚುನಾವಣೆಯ ಜಯದ ಮಾಲೆ ಬಿಜೆಪಿ ಪಕ್ಷದ ಶಂಕರಲಿಂಗೇಗೌಡರ ಪಾಲಾಯಿತು. ಅಂದಿನ ಹಣಾಹಣಿಯಲ್ಲಿ ಎಚ್ ಎಸ್ ಶಂಕರಲಿಂಗೇಗೌಡ 44,243 ಮತಗಳನ್ನು ಪಡೆದು ತಮ್ಮ ಎದುರಾಳಿಯಾಗಿ 34,844ಮತಗಳನ್ನು ಪಡೆದ ಕಾಂಗ್ರೆಸ್‌ನ ವಾಸು ಅವರನ್ನು9,399 ಮತಳಿಂದ ಹಿಂದಿಕ್ಕಿದ್ದರು. ಮೂರನೇ ಸ್ಥಾನಪಡೆದ ಜೆಡಿಎಸ್‌ನ ಎಂ ಪ್ರತಾಪ್ 20,806 ವೋಟುಗಳನ್ನೂ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಎಂ ಲಕ್ಷ್ಮಣ 1,855 ಮತಗಳನ್ನು ಗಳಿಸಿ ಕ್ರಮವಾಗಿ ಮೂರು ಮತ್ತು 

Facebook
Twitter
LinkedIn
WhatsApp
Telegram