ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ

ಮತದಾರರ ಮಂತ್ರದಂಡದ ಮುಂದೆ ನಡೆಯದ ಮಾಟ ಮಂತ್ರ!

ಬಹುಜನ ಸಮಾಜವಾದಿ ಪಕ್ಷ  (ಬಿಎಸ್ಪಿ) ವನ್ನು ಗೆಲ್ಲಿಸಿದ ದಕ್ಷಿಣ ಕರ್ನಾಟಕದ  ಏಕೈಕ ಕ್ಷೇತ್ರ ಮತ್ತು ಕರ್ನಾಟಕದ ಎರಡನೆಯ ಕ್ಷೇತ್ರ ಕೊಳ್ಳೇಗಾಲ. ೨೦೧೮ ರ ಚುನಾವಣೆಯಲ್ಲಿ ಗೆದ್ದು ಬಿಎಸ್ಪಿ ಇಲ್ಲಿ ಖಾತೆ ತೆರೆಯುವಂತೆ ಮಾಡಿದ ಶಾಸಕ ಎನ್. ಮಹೇಶ್ ಈಗ ಬಿಜೆಪಿಯ ಅಭ್ಯರ್ಥಿಯಾಗಿ ಮರು ಆಯ್ಕೆ ಬಯಸುವ ಸನ್ನಾಹದಲ್ಲಿದ್ದಾರೆ. ಆದರೆ, ಈ ಕ್ಷೇತ್ರ 1985 ರಿಂದೀಚೆಗೆ ಒಮ್ಮೆ ಗೆದ್ದವರನ್ನು ಮರು ಆಯ್ಕೆ ಮಾಡಿಲ್ಲ.

 

ಕಾವೇರಿ ಕಣಿವೆಯ ಪ್ರೇಕ್ಷಣೀಯ ಸ್ಥಳಗಳಿರುವ ಪಶ್ಚಿಮ ಘಟ್ಟಗಳ ಸಾಲಿನ ತಾಲೂಕುಗಳಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲವೂ ಒಂದು. ಹಸಿರು ಬನ ಮತ್ತು ಕಾವೇರಿ ನದಿ ಕಣಿವೆಯ ಕೊಳ್ಳೇಗಾಲ, ಮಾಟ-ಮಂತ್ರ, ವಾಮಾಚಾರಗಳಂತಹ ಮೌಢ್ಯದಿಂದ ಕುಖ್ಯಾತಿ ಪಡೆದಿದೆ. ಆದರೆ, ಮತದಾರರ ಮತ ಎನ್ನುವ ಮಂತ್ರದಂಡದ ಮುಂದೆ ಮಾಟ-ಮಂತ್ರಗಳು ಎಂದೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ದಲ್ಲಿ ಕೆಲಸ ಮಾಡಿದ ಇತಿಹಾಸವೆ ಇಲ್ಲ. 

ಚಾಮರಾಜನಗರ ಜಿಲ್ಲೆಗೆ ಕಾಲಿಟ್ಟ ಮುಖ್ಯಮಂತ್ರಿ ಆ ಹುದ್ದೆಯಲ್ಲಿ ಹೆಚ್ಚು ದಿನ ಉಳಿಯುವುದಿಲ್ಲ ಎಂಬ ಮೌಢ್ಯ ರಾಜ್ಯ ರಾಜಕೀಯದಲ್ಲಿ ಮನೆ ಮಾಡಿತ್ತು. ಆ ಮೌಢ್ಯ ಕೊಳ್ಳೇಗಾಲ ಕ್ಷೇತ್ರಕ್ಕೂ ಒಂದು ರೀತಿಯ ಶಾಪವಾಗಿ ಪರಿಣಮಿಸಿತ್ತು. 1957ರಿಂದ 15 ಚುನಾವಣೆಗಳ ಇತಿಹಾಸ ಹೊಂದಿರುವ ಕೊಳ್ಳೇಗಾಲದಲ್ಲಿ 2018ರವರೆಗೆ ಗೆದ್ದವರಿಗೆ ಮುಖ್ಯಮಂತ್ರಿ ಇರಲಿ, ಸಚಿವ ಸ್ಥಾನವೂ ದಕ್ಕಿರಲಿಲ್ಲ. ಆ ಕೊರತೆಯನ್ನು ಎನ್ ಮಹೇಶ್ ನೀಗಿಸಿದರು. 

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ

ಎಸ್ಸಿ ಮೀಸಲಾತಿ ಹೊಂದಿರುವ ಕೊಳ್ಳೇಗಾಲ ಕ್ಷೇತ್ರದಲ್ಲಿ ಒಂಬತ್ತು ಬಾರಿ ಕಾಂಗ್ರೆಸ್, ತಲಾ ಎರಡು ಬಾರಿ ಜನತಾ ಪಾರ್ಟಿ, ಜೆಡಿಎಸ್, ಬಿಜೆಪಿ ಹಾಗೂ ಸ್ವತಂತ್ರ ಅಭ್ಯರ್ಥಿ ಒಮ್ಮೆ ಗೆಲುವು ಸಾಧಿಸಿದ್ದಾರೆ. 

1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ನ ಟಿ.ಪಿ ಬೋರಯ್ಯ ಗೆಲುವು ಸಾಧಿಸಿ, ವಿಧಾನಸಭೆಯಲ್ಲಿ ಮೊದಲ ಬಾರಿಗೆ ಕೊಳ್ಳೇಗಾಲವನ್ನು ಪ್ರತಿನಿಧಿಸಿದ್ದರು. ಬಳಿಕ, 1962 ಮತ್ತು 1967ರಲ್ಲಿ ಅದೇ ಪಕ್ಷದ ಬಿ ಬಸವಯ್ಯ ಗೆಲುವು ಸಾಧಿಸಿದ್ದರು. 1972ರ ಚುನಾವಣೆಯಲ್ಲೂ ಕಾಂಗ್ರೆಸ್ನ ಎಂ ಸಿದ್ದರಾಮಯ್ಯ ಗೆದ್ದು ಬೀಗಿದ್ದರು.

ಆದರೆ, 1978ರ ಚುನಾವಣೆ ವೇಳಗೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ (ತುರ್ತು ಪರಿಸ್ಥಿತಿ) ಜೆಪಿ ಚಳುವಳಿಯ ಮೂಲಕ ಜನತಾ ಪಕ್ಷ (ಜೆಎನ್ಪಿ) ರೂಪು ತಾಳಿತ್ತು. ಒಡೆದ ಕಾಂಗ್ರೆಸ್ ಮತ್ತು ಜೆಎನ್ಪಿ ಪ್ರಭಾವದಿಂದ ಕೊಳ್ಳೇಗಾಲದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷವನ್ನು ಹಣಿದು ಜೆಎನ್ಪಿಯ ಅರಕೇರಿ ಸಿದ್ಧಾರ್ಥ್ ಸಂಗಪ್ಪ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ನ ಬಿ ಬಸವಯ್ಯ 1983ರ ಚುನಾವಣೆ ವೇಳಗೆ ಜನತಾ ಪಕ್ಷ ಸೇರಿದ್ದರು. 1983ಮತ್ತು 85ರಲ್ಲಿ ನಡೆದ ಚುನಾವಣೆಯಲ್ಲಿ ಬಿ ಬಸವಯ್ಯ ಜನತಾ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.

1989ರ ಚುನಾವಣೆಯಲ್ಲಿ ಬಸವಯ್ಯ ಅವರನ್ನು ಮಣಿಸಿ ಎಂ ಸಿದ್ದರಾಮಯ್ಯ ಗೆದ್ದರು. ಕ್ಷೇತ್ರವನ್ನು ಕಾಂಗ್ರೆಸ್ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಬಳಿಕ, 1994ರಲ್ಲಿ ಜನತಾ ದಳದಿಂದ ಎಸ್. ̤ಜಯಣ್ಣ, 1999ರಲ್ಲಿ ಕಾಂಗ್ರೆಸ್ನಿಂದ ಜಿ ಎನ್ ನಂಜುಂಡಸ್ವಾಮಿ, 2004ರಲ್ಲಿ ಪಕ್ಷೇತರ ಅಭ್ಯರ್ಥಿ ಬಾಲರಾಜ್,  2008ರಲ್ಲಿ ಕಾಂಗ್ರೆಸ್ನ ಆರ್ ಧ್ರುವನಾರಾಯಣ್ ಗೆದ್ದಿದ್ದರು. ಅವರು 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ತನ್ನ ಖಾತೆ ತೆರೆಯಿತು. ಜೆ.ಎನ್.ಎನ್ ಸ್ವಾಮಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. 2013ರಲ್ಲಿ ಕಾಂಗ್ರೆಸ್ನ ಎಸ್ ಜಯಣ್ಣ ವಿಜೇತರಾಗಿದ್ದರು. 2018ರ ಚುನಾವಣೆಯಲ್ಲಿ ಗೆದ್ದಿರುವ ಎನ್ ಮಹೇಶ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಬಹುಜನ ಸಮಾಜವಾದಿ ಪಕ್ಷದ ಖಾತೆ ತೆರೆದಿದ್ದ ಮಹೇಶ್, ನಂತರ ಬಿಜೆಪಿ ಸೇರಿದರು.    

ಕೊಳ್ಳೇಗಾಲ ಕ್ಷೇತ್ರದಲ್ಲಿ ಒಟ್ಟು 2,14,626 ಮತದಾರರಿದ್ದಾರೆ. ಈ ಪೈಕಿ, 1,06,236 ಪುರುಷ ಮತದಾರರು, 1,08,371 ಮಹಿಳಾ ಮತದಾರರು ಹಾಗೂ 19 ಮಂದಿ ಇತರ ಮತದಾರರಿದ್ದಾರೆ. ದಲಿತ ಮತಗಳೇ ಹೆಚ್ಚಿರುವ ಕ್ಷೇತ್ರದಲ್ಲಿ ಮಹಿಳಾ ಮತದಾರರ ಪಾಲು ದೊಡ್ಡದಿದೆ. 

Facebook
Twitter
LinkedIn
WhatsApp
Telegram